ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Tuesday, April 17, 2018

Mahabharata Tatparya Nirnaya Kannada 6.01-6.11

೬. ಶ್ರೀರಾಮಚರಿತೇ ಸಮುದ್ರತರಣನಿಶ್ಚಯಃ

 

̐  ॥   

ಉತ್ಥಾಪ್ಯ ಚೈನಮರವಿನ್ದದಲಾಯತಾಕ್ಷಶ್ಚಕ್ರಾಙ್ಕಿತೇನ ವರದೇನ ಕರಾಮ್ಬುಜೇನ ।

ಕೃತ್ವಾ ಚ ಸಂವಿದಮನೇನ ನುತೋsಸ್ಯ ಚಾಂಸಂ ಪ್ರೀತ್ಯಾssರುರೋಹ ಸ ಹಸನ್ ಸಹ ಲಕ್ಷ್ಮಣೇನ ೬.೦೧

 

ಹೀಗೆ ಕಾಲಿಗೆ ಬಿದ್ದ ಹನುಮಂತನನ್ನು, ಕಮಲದ ಎಸಳಿನಂತಹ ಕಣ್ಗಳ ಶ್ರೀರಾಮಚಂದ್ರನು, ಚಕ್ರದ ಚಿಹ್ನೆಯುಳ್ಳ, ಭಕ್ತರಿಗೆ ವರವನ್ನು ಕೊಡುವ ಕೈಯೆಂಬ ಕಮಲದಿಂದ ಎಬ್ಬಿಸಿಅವನೊಂದಿಗೆ ಸಂವಾದವನ್ನು ಮಾಡಿ, ಅವನಿಂದ ಸ್ತೋತ್ರಮಾಡಲ್ಪಟ್ಟವನಾಗಿಲಕ್ಷ್ಮಣ ಸಹಿತನಾಗಿ ಹನುಮಂತನ ಹೆಗಲನ್ನು ಪ್ರೀತಿಯಿಂದ ಏರಿದನು.

 

  ಆರೋಪ್ಯ ಚಾಂಸಯುಗಳಂ ಭಗವನ್ತಮೇನಂ ತಸ್ಯಾನುಜಂ ಚ ಹನುಮಾನ್ ಪ್ರಯಯೌ ಕಪೀನ್ದ್ರಮ್ ।

  ಸಖ್ಯಂ ಚಕಾರ ಹುತಭುಕ್ಪ್ರಮುಖೇ ಚ ತಸ್ಯ ರಾಮೇಣ ಶಾಶ್ವತನಿಜಾರ್ತ್ತಿಹರೇಣ ಶೀಘ್ರಮ್ ॥೬.೦೨॥

 

ಹನುಮಂತನು ರಾಮಚಂದ್ರನನ್ನು ಮತ್ತು ಅವನ ತಮ್ಮನಾದ ಲಕ್ಷ್ಮಣನನ್ನು ತನ್ನ ಎರಡು ಭುಜಗಳಲ್ಲಿ ಏರಿಸಿಕೊಂಡು, ಸುಗ್ರೀವನ ಬಳಿ ಕೊಂಡೊಯ್ಯುತ್ತಾನೆ.  ಹನುಮಂತ ಸಂಸಾರ ದುಃಖವನ್ನು ನಾಶಮಾಡುವ ಶ್ರೀರಾಮಚಂದ್ರನ ಜೊತೆಗೆ ಸುಗ್ರೀವನಿಗೆ ಅಗ್ನಿಸಾಕ್ಷಿಯಾಗಿ ಗೆಳೆತನವನ್ನು ಮಾಡಿಸುತ್ತಾನೆ.

 

ಶ್ರುತ್ವಾsಸ್ಯ ದುಃಖಮಥ ದೇವವರಃ ಪ್ರತಿಜ್ಞಾಂ ಚಕ್ರೇ ಸ ವಾಲಿನಿಧನಾಯ ಹರೀಶ್ವರೋsಪಿ ।

ಸೀತಾನುಮಾರ್ಗ್ಗಣಕೃತೇsಥ ಸ ವಾಲಿನೈವ ಕ್ಷಿಪ್ತಾಂ ಹಿ ದುನ್ದುಭಿತನುಂ ಸಮದರ್ಶಯಚ್ಚ೬.೦೩॥

 

ಗೆಳೆತನವಾದ ನಂತರ, ದೇವಶ್ರೇಷ್ಠನಾದ ಶ್ರೀರಾಮನು ಸುಗ್ರೀವನ ನೋವುಗಳನ್ನು ಕೇಳಿ, ‘ವಾಲಿಯನ್ನು ಕೊಲ್ಲುತ್ತೇನೆಎಂದು ಪ್ರತಿಜ್ಞೆಯನ್ನು ಮಾಡುತ್ತಾನೆ.  ಶ್ರೀರಾಮನ ಪ್ರತಿಜ್ಞೆಯನ್ನು ಕೇಳಿದ ಕಪೀಶ್ವರನಾದ ಸುಗ್ರೀವನು ಸೀತೆಯನ್ನು ಹುಡುಕುವುದಾಗಿಪ್ರತಿಜ್ಞೆಯನ್ನು ಮಾಡುತ್ತಾನೆ. ತದನಂತರ ಸುಗ್ರೀವನು ವಾಲಿಯಿಂದ ಎಸೆಯಲ್ಪಟ್ಟ ದುಂದುಭಿ ಎನ್ನುವ ರಾಕ್ಷಸನ ದೇಹವನ್ನು ಶ್ರೀರಾಮನಿಗೆ  ತೋರಿಸುತ್ತಾನೆ.

 

[ರಾಮಾಯಣದ ಕಿಷ್ಕಿಂಧಾಕಾಂಡದಲ್ಲಿ(೧೧.೭, ೪೭) ಈ ಮಾತು ಬರುತ್ತದೆ: ‘ಮಹಿಷೋ ದುನ್ದುಭಿರ್ನಾಮ ಕೈಲಾಸಶಿಖರಪ್ರಭಃ ।  ಬಲಂ ನಾಗಸಹಸ್ರಸ್ಯ ಧಾರಯಾಮಾಸ ವೀರ್ಯವಾನ್’   ಸಾವಿರ ಆನೆಗಳ ಬಲವುಳ್ಳ ದುಂದುಭಿ ಎನ್ನುವ ಎಮ್ಮೆಯ ರೂಪವನ್ನು ಧರಿಸಿದ್ದ ದೈತ್ಯನೊಬ್ಬನಿದ್ದ. ‘ಚಿಕ್ಷೇಪ ಬಲವಾನ್ ವಾಲೀ ವೇಗೇನೈಕಂ ತು ಯೋಜನಮ್’   ಬಲಿಷ್ಠನಾದ ವಾಲಿಯು ಆ ರಾಕ್ಷಸನನ್ನು ಕೊಂದು ಆತನ  ದೇಹವನ್ನು ಒಂದು ಯೋಜನದ ಆಚೆ ಎಸೆದಿದ್ದ.  ವಾಲ್ಮೀಕಿ ರಾಮಾಯಣದಲ್ಲೇ(ಕಿಷ್ಕಿಂಧಾಕಾಂಡ ೯.೪) ಹೇಳುವಂತೆ ಈ ದುಂದುಭಿ ಮಂಡೋದರಿಯ ಅಣ್ಣ.  ‘ಮಾಯಾವೀ ನಾಮ ತೇಜಸ್ವೀ ಪೂರ್ವಜೋ ದುನ್ದುಭೇಃ ಸುತಃ’

 

 ವೀಕ್ಷ್ಯೈವ ತಾಂ ನಿಪತಿತಾಮಥ ರಾಮದೇವಃ ಸೋsಙ್ಗುಷ್ಠಮಾತ್ರ ಚಲನಾದತಿಲೀಲಯೈವ ।

 ಸಮ್ಪ್ರಾಸ್ಯ ಯೋಜನಶತೇsಥ ತಯೈವ ಚೋರ್ವೀಂ ಸರ್ವಾಂ ವಿದಾರ್ಯ್ಯ ದಿತಿಜಾನಹನದ್ ರಸಾಸ್ಥಾನ್ ॥೬.೦೪॥

 

ರಾಮಚಂದ್ರನು ಅಲ್ಲಿ ಬಿದ್ದಿರುವ ದುಂದುಭಿಯ ದೇಹವನ್ನು ನೋಡಿ, ತನ್ನ ಹೆಬ್ಬರಳಿನ ಚಲನೆಯಿಂದಲೇ, ಅತ್ಯದ್ಭುತ   ಲೀಲೆಯಿಂದ, ಆ ದೇಹವನ್ನು ನೂರು ಯೋಜನದಷ್ಟು ದೂರ ಎಸೆದ. ನಂತರ ಆ ದುಂದುಭಿಯ ದೇಹದಿಂದಲೇ ಭೂಮಿಯನ್ನು ಸೀಳಿ, ರಸಾತಳದಲ್ಲಿರುವ  ದೈತ್ಯರನ್ನು ಕೊಂದ.

[ಈ ಮಾತು ರಾಮಾಯಣದ ಕಿಷ್ಕಿಂಧಾ ಕಾಂಡದಲ್ಲಿ(೧೧.೮೪) ಬರುತ್ತದೆ: ‘ರಾಘವೋ ದುನ್ದುಭೇ  ಕಾಯಂ ಪಾದಾನ್ಗುಷ್ಠೇನ ಲೀಲಯಾ । ತೊಲಯಿತ್ವಾ  ಮಹಾಬಾಹುಶ್ಚಿಕ್ಷೇಪ ದಶಯೋಜನಮ್’  ಇಲ್ಲಿ ದಶಯೋಜನಮ್ ಎನ್ನುವುದು ಅಪಪಾಠ.  ಆಚಾರ್ಯರ ಪ್ರಕಾರ ಇದನ್ನು ಶತಯೋಜನಮ್ ಎಂದು ಬದಲಾಯಿಸಿಕೊಂಡು ಓದಬೇಕು. ದುಂದುಭಿಯ ದೇಹವನ್ನು ಶ್ರೀರಾಮ ತನ್ನ ಪಾದಾನ್ಗುಷ್ಠದಿಂದ ನೂರು ಯೋಜನಗಳಷ್ಟು ದೂರ ಎಸೆದ].

 

    ಶರ್ವಪ್ರಸಾದಜಬಲಾದ್ ದಿತಿಜಾನವದ್ಧ್ಯಾನ್ ಸರ್ವಾನ್ ನಿಹತ್ಯ ಕುಣಪೇನ ಪುನಶ್ಚ ಸಖ್ಯಾ ।

    ಭೀತೇನ ವಾಲಿಬಲತಃ ಕಥಿತಃ ಸ್ಮ ಸಪ್ತ ಸಾಲಾನ್ ಪ್ರದರ್ಶ್ಯ ದಿತಿಜಾನ್ ಸುದೃಢಾಂಶ್ಚ ವಜ್ರಾತ್ ೬.೦೫ ॥

 

 ಏಕೈಕಮೇಷು ಸ ವಿಕಮ್ಪಯಿತುಂ ಸಮರ್ತ್ಥಃ ಪತ್ರಾಣಿ ಲೋಪ್ತುಮಪಿ ತೂತ್ಸಹತೇ ನ ಶಕ್ತಃ ।

 ವಿಷ್ವಕ್ ಸ್ಥಿತಾನ್ ಯದಿ ಭವಾನ್ ಪ್ರತಿಭೇತ್ಸ್ಯತೀಮಾನೇಕೇಷುಣಾ ತರ್ ಹಿ ವಾಲಿ ವಧೇ ಸಮರ್ತ್ಥಃ ॥೬.೦೬ ॥

 

ರುದ್ರದೇವರ ವರಬಲದಿಂದ ಅವಧ್ಯರಾಗಿದ್ದ ಎಲ್ಲಾ ದೈತ್ಯರನ್ನು ದುಂದುಭಿಯ ದೇಹವನ್ನೇ ಉಪಯೋಗಿಸಿ  ಕೊಂದ ಶ್ರೀರಾಮಚಂದ್ರನನ್ನು ಕುರಿತು ವಾಲಿಯ ಬಲದಿಂದ ಭಯಗೊಂಡಿದ್ದ ಸುಗ್ರೀವ, ಅಲ್ಲೇ ಸಮೀಪದಲ್ಲಿದ್ದ, ವಜ್ರಕ್ಕಿಂತಲೂ ಅತಿ ಕಠಿಣ ಮತ್ತು ಭಯಂಕರವಾಗಿರುವ , ದೈತ್ಯಸ್ವರೂಪರಾದ  ಏಳು ತಾಳೆಯ ಮರಗಳನ್ನು ತೋರಿಸಿ ಹೀಗೆ  ಹೇಳುತ್ತಾನೆ:

ಈ ಮರಗಳನ್ನು ವಾಲಿಯು ಕಷ್ಟಪಟ್ಟು ಆಲುಗಾಡಿಸಬಲ್ಲವನಾಗಿದ್ದಾನೆ.  ಅವನಿಗೆ ಈ ಮರಗಳ ಎಲೆಗಳನ್ನು ಕೀಳಲೂ ಕೂಡಾ ಆಗುವುದಿಲ್ಲ.  ಸುತ್ತಲೂ ಇರುವ(ಒಂದೇ ಸಾಲಿನಲ್ಲಿರದ) ಈ ಮರಗಳನ್ನು ನೀನು ಒಂದೇ ಬಾಣದಿಂದ ಭೇದಿಸುವುದಾದರೆ, ಆಗ ವಾಲಿ ಸಂಹಾರಕ್ಕೆ  ನೀನು ಸಮರ್ಥನೆನಿಸುವೆ”  ಎಂದು.

[ಇದನ್ನು ವಾಲ್ಮೀಕಿ ರಾಮಾಯಣದ ಕಿಷ್ಕಿಂಧಾಕಾಂಡದಲ್ಲಿ ಹೀಗೆ ಹೇಳಿದ್ದಾರೆ: ಯತ್ರೈಕಂ ಘಟತೇ ವಾಲೀ ನಿಷ್ಪತ್ರಯಿತು ಮೋಜಸ ].

 

   ಜೇತುಂ ಚತುರ್ಗ್ಗುಣಬಲೋ ಹಿ ಪುಮಾನ್ ಪ್ರಭುಃ ಸ್ಯಾದ್ಧನ್ತುಂ ಶತಾಧಿಕಬಲೋsತಿಬಲಂ ಸುಶಕ್ತಃ ।

   ತಸ್ಮಾದಿಮಾನ್ ಹರಿಹಯಾತ್ಮಜಬಾಹ್ವಲೋಪ್ಯಪತ್ರಾನ್ ವಿಭಿದ್ಯ ಮಮ ಸಂಶಯಮಾಶು ಭಿನ್ಧಿ ॥೬.೦೭॥

 

ಶತ್ರುವನ್ನು ಗೆಲ್ಲಲು ಅವನಿಗಿಂತ ನಾಲ್ಕುಪಟ್ಟು ಬಲವುಳ್ಳವನು ಸಮರ್ಥ.  ಶತ್ರುವನ್ನು ಕೊಲ್ಲಲು ಅವನಿಗಿಂತ ನೂರುಪಟ್ಟು ಬಲವುಳ್ಳವನಾಗಬೇಕು.  ಆ ಕಾರಣದಿಂದ, ಇಂದ್ರನ ಮಗನಾಗಿರುವ ವಾಲಿಯ  ಬಾಹುವಿನಿಂದ ಕೀಳಲಾಗದ ಎಲೆಗಳನ್ನುಳ್ಳ ಈ ಮರವನ್ನು ಕತ್ತರಿಸಿ, ನನ್ನ ಸಂದೇಹವನ್ನು ಕೂಡಲೇ ನಿವಾರಿಸುಎಂದು ಸುಗ್ರೀವನು ಶ್ರೀರಾಮನಲ್ಲಿ  ಪ್ರಾರ್ಥಿಸುತ್ತಾನೆ.

 

    ಶ್ರುತ್ವಾsಸ್ಯ ವಾಕ್ಯಮವಮೃಶ್ಯ ದಿತೇಃ ಸುತಾಂಸ್ತಾನ್ ಧಾತುರ್ವರಾದಖಿಲಪುಮ್ಭಿರಭೇದ್ಯರೂಪಾನ್ ।

     ಬ್ರಹ್ಮತ್ವಮಾಪ್ತುಮಚಲಂ ತಪಸಿ ಪ್ರವೃತ್ತಾನೇಕೇಷುಣಾ ಸಪದಿ ತಾನ್ ಪ್ರವಿಭೇದ ರಾಮಃ ॥೬.೦೮॥

 

ವಾಲಿಯ ಮಾತನ್ನು ಕೇಳಿ, ಮರದ ರೂಪದಲ್ಲಿರುವ, ಬ್ರಹ್ಮದೇವರ ವರದಿಂದಾಗಿ ಯಾರೂ ಭೇದಿಸಲಾಗದ ಶರೀರವನ್ನು ಪಡೆದಿದ್ದ, ಬ್ರಹ್ಮಪದವಿಯನ್ನು ಪಡೆಯಬೇಕು ಎನ್ನುವ ಬಯಕೆಯಿಂದ ತಪಸ್ಸಿನಲ್ಲಿ ಪ್ರವೃತ್ತರಾಗಿರುವ ಆ   ದೈತ್ಯರನ್ನು  ರಾಮಚಂದ್ರನು ಒಂದೇ ಬಾಣದಿಂದ ಸೀಳುತ್ತಾನೆ.   

 

ಸನ್ಧಾಯ ಕಾರ್ಮ್ಮುಕವರೇ ನಿಶಿತೇ ತು ಬಾಣೇsಥಾsಕೃಷ್ಯ ದಕ್ಷಿಣಭುಜೇನ ತದಾ ಪ್ರಮುಕ್ತೇ ।

ರಾಮೇಣಸತ್ವರಮನನ್ತಬಲೇನ ಸರ್ವೇ ಚೂರ್ಣ್ಣೀಕೃತಾಃ ಸಪದಿ ತೇ ತರವೋ ರವೇಣ             ೬.೦೯

 

ಭಿತ್ವಾ ಚ ತಾನ್ ಸಗಿರಿಕುಂ ಭಗವತ್ಪ್ರಮುಕ್ತಃ ಪಾತಾಳಸಪ್ತಕಮಥಾತ್ರ ಚ ಯೇ ತ್ವವಧ್ಯಾಃ ।

ನಾಮ್ನಾsಸುರಾಃ ಕುಮುದಿನೋsಬ್ಜಜವಾಕ್ಯರಕ್ಷಾಃ ಸರ್ವಾಂಶ್ಚ ತಾನದಹದಾಶು ಶರಃ ಸ ಏಕಃ     ೬.೧೦

 

ಅನಂತಬಲವುಳ್ಳ ಶ್ರೀರಾಮಚಂದ್ರನ ಬಲಭುಜದಲ್ಲಿರುವ, ಶ್ರೇಷ್ಠವಾದ ಬಿಲ್ಲಿನಿಂದ ಹೂಡಿದ ಚೂಪಾದ ಬಾಣವು ಬಿಡಲ್ಪಡುತ್ತಿರಲು, ಆ ಎಲ್ಲಾ ಮರಗಳೂ ಕೂಡಾ ದೊಡ್ಡ ಶಬ್ದದೊಂದಿಗೆ ಕೂಡಿ, ಸೀಳಲ್ಪಟ್ಟವು. 

ಪರಮಾತ್ಮನಿಂದ ಬಿಡಲ್ಪಟ್ಟ ಆ ಬಾಣವು ಬೆಟ್ಟವನ್ನೂ, ಭೂಮಿಯನ್ನೂ ಸೀಳಿ, ಏಳು ಪಾತಾಳಗಳನ್ನೂ ಸೀಳಿ, ಪಾತಾಳದಲ್ಲಿ ಬ್ರಹ್ಮ ವರದ ರಕ್ಷಣೆಯಿಂದ ಅವಧ್ಯರಾಗಿದ್ದ  ಕುಮುದಿ ಎನ್ನುವ ಹೆಸರುಳ್ಳ ದೈತ್ಯರೆಲ್ಲರನ್ನೂ  ಸುಟ್ಟಿತು. 

[ವಾಲ್ಮೀಕಿ ರಾಮಾಯಣದ ಕಿಷ್ಕಿಂಧಾ ಕಾಂಡದಲ್ಲಿ(೧೨.೩-೪, ೯) ಈ ಘಟನೆಯ ವರ್ಣನೆ ಬರುತ್ತದೆ:  ಭಿತ್ತ್ವಾ ಸಾಲಾನ್ ಗಿರಿಪ್ರಸ್ಥಂ ಸಪ್ತ ಭೂಮಿಂ ವಿವೇಶ ಹ ಪ್ರವಿಷ್ಟಶ್ಚ ಮುಹೂರ್ತೇನ ರಸಾಂ ಭಿತ್ತ್ವಾ  ಮಹಾಜವಃ ನಿಷ್ಪತ್ಯ ಚ ಪುನಸ್ತೂರ್ಣಂ ಸ್ವತೂಣೀಂ ಪ್ರವಿವೇಶ ಹ   ರಾಮಚಂದ್ರನಿಂದ ಬಿಡಲ್ಪಟ್ಟ ಆ ಬಾಣವು ಒಂದೇ ಮುಹೂರ್ತಕಾಲದಲ್ಲಿ  ರಸಾತಳವನ್ನೂ ಭೇಧಿಸಿ,  ವೇಗದಿಂದ ಬಂದು ಮತ್ತೆ ಬತ್ತಳಿಕೆಯಲ್ಲಿ ಕುಳಿತುಕೊಂಡಿತು.  ಏನ ಸಪ್ತ ಮಹಾಸಾಲಾ  ಗಿರಿರ್ಭೂಮಿಶ್ಚ ದಾರಿತಾಃ  ಬಾಣೇನೈಕೇನ ಕಾಕುಸ್ಸ್ಥ ಸ್ಥಾತಾ ತೇ ಕೋ ರಣಾಗ್ರತಃ “ಏಳು ಮತ್ತಿ ಮರಗಳನ್ನು ಭೇಧಿಸಿ,  ಭೂಮಿಯನ್ನೂ ಸೀಳಿದ ಆ  ಒಂದೇ ಬಾಣ ಮತ್ತೆ ಹಿಂತಿರುಗಿ ಬಂತು.  ಇಂತಹ  ನಿನ್ನನ್ನು ಯಾರು ತಾನೇ ಯುದ್ಧದಲ್ಲಿ ಎದುರಿಸಬಲ್ಲರು” ಎಂದು ಕೇಳುವ ಸುಗ್ರೀವನ ಮಾತು ಇದಾಗಿದೆ.  ಹೀಗೆ ವಾಲ್ಮೀಕಿ ರಾಮಾಯಣದಲ್ಲಿ ಸೂಚ್ಯವಾಗಿ ಈ ಅಸುರ ಸಂಹಾರದ ಕಥೆಯನ್ನು ಹೇಳಿದರೆ, ಇದನ್ನು ಸ್ಫುಟವಾಗಿ ಪಾದ್ಮಪುರಾಣದಲ್ಲಿ ಹೇಳಿರುವುದನ್ನು ನಾವು ಕಾಣಬಹುದು.  ಸಪ್ತಸಾಲವ್ಯಧಾಕೃಷ್ಟಧ್ವಸ್ತಪಾತಾಳದಾನವಃ (ಉತ್ತರಕಾಂಡ ೭೧.೨೨೨).  ಏಳು ಮತ್ತಿ ಮರಗಳು ಮತ್ತು ಪಾತಾಳವನ್ನು ಭೇಧಿಸಿ ಕೊಂದ ಬಾಣವುಳ್ಳವನು ನೀನು ಎನ್ನುವ ಪ್ರಾರ್ಥನೆ ಅಲ್ಲಿದೆ.  ಇವೆಲ್ಲವುದನ್ನು ಜೋಡಿಸಿ ಆಚಾರ್ಯರು ಇಲ್ಲಿ ನಿರ್ಣಯವನ್ನು ನೀಡಿರುವುದನ್ನು ನಾವು ಕಾಣುತ್ತೇವೆ].

 

   ನೈತದ್ ವಿಚಿತ್ರಮಮಿತೋರುಬಲಸ್ಯ ವಿಷ್ಣೋರ್ಯ್ಯತ್ ಪ್ರೇರಣಾತ್ ಸಪವನಸ್ಯ ಭವೇತ್ ಪ್ರವೃತ್ತಿಃ ।

   ಲೋಕಸ್ಯ ಸಪ್ರಕೃತಿಕಸ್ಯ ಸರುದ್ರಕಾಲಕರ್ಮ್ಮಾದಿಕಸ್ಯ ತದಪೀದಮನನ್ಯಸಾಧ್ಯಮ್ ॥೬.೧೧

 

ಯಾವ ರಾಮಚಂದ್ರನ ಪ್ರೇರಣೆಯಿಂದ, ಪ್ರಕೃತಿಯಿಂದ ಕೂಡಿರುವ,  ಬ್ರಹ್ಮದೇವರಿಂದ ಒಡಗೂಡಿದ  ಜಗತ್ತಿನ ತೊಡಗುವಿಕೆಯು ಆಗುತ್ತದೋ,  ರುದ್ರ-ಯಮ ಮೊದಲಾದವರನ್ನು ಒಳಗೊಂಡ ಲೋಕದ ಪ್ರವೃತ್ತಿ ನಡೆಯುತ್ತದೋ,  ಇದ್ಯಾವುದನ್ನೂ ಇನ್ನ್ಯಾರಿಂದಲೂ ಮಾಡಲು ಸಾಧ್ಯವಿಲ್ಲ. ಆದರೆ ಎಣೆಯಿರದ, ಉತ್ಕೃಷ್ಟವಾದ ಬಲವುಳ್ಳ ನಾರಾಯಣನಿಗೆ ಈ ಎಲ್ಲಾ ಕಾರ್ಯಗಳು ವಿಚಿತ್ರವಲ್ಲ.