ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ವಿದ್ಯಾವಾಚಸ್ಪತಿ ಶ್ರೀಯುತ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Monday, May 20, 2019

Mahabharata Tatparya Nirnaya Kannada 1307_1313


ಕದಾಚಿದೀಶ್ವರಃ ಸ್ತನಂ ಪಿಬನ್ ಯಶೋದಯಾ ಪಯಃ ।
ಶೃತಂ ನಿಧಾತುಮುಜ್ಝಿತೋ ಬಭಞ್ಜ ದಧ್ಯಮತ್ರಕಮ್ ॥೧೩.೦೭॥

ಒಮ್ಮೆ ಶ್ರೀಕೃಷ್ಣ ತಾಯಿಯ ಮೊಲೆಯನ್ನುಣ್ಣುತ್ತಿರುವಾಗ, ಒಲೆಯಮೇಲೆ ಇಟ್ಟ ಹಾಲು ಉಕ್ಕಿತೆಂದು  ಯಶೋದೆ ಆತನನ್ನು ನೆಲದಮೇಲಿಟ್ಟು,  ಹಾಲಿನ ಪಾತ್ರೆಯನ್ನು ಒಲೆಯಿಂದ ಇಳಿಸಲು ಹೋಗುತ್ತಾಳೆ. ಆಗ ನೆಲದಲ್ಲಿ ಇಡಲ್ಪಟ್ಟವನಾದ ಕೃಷ್ಣ ಅಲ್ಲಿದ್ದ  ಮೊಸರಿನ ಪಾತ್ರೆಯನ್ನು ಒಡೆಯುತ್ತಾನೆ.

ಸ ಮಥ್ಯಮಾನದಧ್ಯುರುಪ್ರಜಾತಮಿನ್ದುಸನ್ನಿಭಮ್ ।
ನವಂ ಹಿ ನೀತಮಾದದೇ ರಹೋ ಜಘಾಸ ಚೇಶಿತಾ ॥೧೩.೦೮॥

ಮಥಿಸಲ್ಪಟ್ಟ ಮೊಸರಿನಿಂದ ಉಕ್ಕಿಬಂದಿರುವ, ಚಂದ್ರನಿಗೆ ಸದೃಶವಾದ, ಆಗಷ್ಟೇ ಕಡೆದಿಟ್ಟಿರುವ  ಬೆಣ್ಣೆಯನ್ನು ತೆಗೆದುಕೊಂಡ ಶ್ರೀಕೃಷ್ಣ,  ಏಕಾಂತದಲ್ಲಿ ಅದನ್ನು ತಿನ್ನುತ್ತಾನೆ ಕೂಡ.

ಪ್ರಜಾಯತೇ ಹಿ ಯತ್ಕುಲೇ ಯಥಾಯುಗಂ ಯಥಾವಯಃ ।
ತಥಾ ಪ್ರವರ್ತ್ತನಂ ಭವೇದ್ ದಿವೌಕಸಾಂ ಸಮುದ್ಭವೇ ॥೧೩.೦೯॥


ಇತಿ ಸ್ವಧರ್ಮ್ಮಮುತ್ತಮಂ ದಿವೌಕಾಸಾಂ ಪ್ರದರ್ಶಯನ್ ।
ಅಧರ್ಮ್ಮಪಾವಕೋsಪಿ ಸನ್ ವಿಡಮ್ಬತೇ ಜನಾರ್ದ್ದನಃ ॥೧೩.೧೦॥

ನೃತಿರ್ಯ್ಯಗಾದಿರೂಪಕಃ ಸ ಬಾಲ್ಯಯೌವನಾದಿ ಯತ್ ।
ಕ್ರಿಯಾಶ್ಚ ತತ್ತದುದ್ಭವಾಃ ಕರೋತಿ ಶಾಶ್ವತೋsಪಿ ಸನ್ ॥೧೩.೧೧॥

ಯಾವ ಕುಲದಲ್ಲಿ ಹುಟ್ಟುತ್ತಾನೋ, ಯಾವ ಯುಗದಲ್ಲಿ ಹುಟ್ಟುತ್ತಾನೋ, ಯಾವ ವಯಸ್ಸಿನಲ್ಲಿ ತೋರಿಸಿಕೊಳ್ಳುತ್ತಾನೋ, ಹಾಗೇ ದೇವತೆಗಳ ಹುಟ್ಟಿನಲ್ಲಿ ಆರೀತಿಯ ಪ್ರವೃತ್ತಿಗಳು ಇರಬೇಕು ಎಂಬ  ಉತ್ಕೃಷ್ಟವಾದ ಧರ್ಮವನ್ನು ದೇವತೆಗಳಿಗೆ ತೋರಿಸುತ್ತಾ, ಅಧರ್ಮಕ್ಕೆ ಬೆಂಕಿಯಂತಿದ್ದರೂ ಜನಾರ್ದನನು ಎಲ್ಲವನ್ನೂ ಅನುಕರಿಸಿ ತೋರಿದನು.
ಅಂದರೆ: ದೇವರು ಮನುಷ್ಯ, ಪ್ರಾಣಿ ಮೊದಲಾದ ರೂಪಗಳನ್ನು ತಳೆದಾಗ,  ಆ ಕಾಲದ, ಆ ಯುಗದ, ಆ ಯೋನಿಗೆ ಅನುಗುಣವಾದ ಬಾಲ್ಯ-ಯೌವನ ಮೊದಲಾದವುಗಳನ್ನು ತೋರಿಸುತ್ತಾ, ಆಯಾ ಯೋನಿಯಲ್ಲಿ ಉಂಟಾದ ಕ್ರಿಯೆಗಳನ್ನು ಮಾಡಿ ತೋರುತ್ತಾನೆ. ವಸ್ತುತಃ ಭಗವಂತ  ನಿತ್ಯನಾದವನು(ಒಂದೇರೀತಿ ಇರುವವನು). ಆದರೆ ಅವತಾರದಲ್ಲಿ  ಬಾಲ್ಯಬಂದಾಗ ಬಾಲ್ಯದ ಚೇಷ್ಟೆಗಳು, ಯೌವನ ಬಂದಾಗ ಯೌವನದ ಚೇಷ್ಟೆಗಳು ಈರೀತಿ ಕ್ರಿಯೆಯ ಬದಲಾವಣೆಯನ್ನು ಅವನು ಮಾಡಿ ತೋರುತ್ತಾನೆ.

ಸ ವಿಪ್ರರಾಜಗೋಪಕಸ್ವರೂಪಕಸ್ತದುದ್ಭವಾಃ ।
ತದಾತದಾ ವಿಚೇಷ್ಟತೇ ಕ್ರಿಯಾಃ ಸುರಾನ್ ವಿಶಿಕ್ಷಯನ್ ॥೧೩.೧೨॥

ಅವನು ಬ್ರಾಹ್ಮಣನಾಗಿ, ರಾಜನಾಗಿ, ಗೋಪಸ್ವರೂಪವುಳ್ಳವನಾಗಿ, ಆಯಾಯೋನಿಗಳಲ್ಲಿ ಉಂಟಾದ ಕ್ರಿಯೆಗಳನ್ನು ದೇವತಾ ಶಿಕ್ಷಣಕ್ಕಾಗಿ ಭಗವಂತ ಮಾಡುತ್ತಾನೆ(ದೇವರ ಕ್ರಿಯೆಗಳು ದೇವತೆಗಳಿಗೆ ಶಿಕ್ಷಣ ರೂಪದಲ್ಲಿರುತ್ತವೆ).

ತಥಾsಪ್ಯನನ್ಯದೇವತಾಸಮಂ ನಿಜಂ ಬಲಂ ಪ್ರಭುಃ ।
ಪ್ರಕಾಶಯನ್ ಪುನಃಪುನಃ ಪ್ರದರ್ಶಯತ್ಯಜೋ ಗುಣಾನ್ ॥೧೩.೧೩॥

ಹೀಗೆ ಮಾಡುತ್ತಿದ್ದಾಗಲೂ, ಎಲ್ಲ ದೇವತೆಗಳಿಗಿಂತಲೂ ಮಿಗಿಲಾದ, ತನ್ನ ಬಲವನ್ನು ಮತ್ತೆ ಮತ್ತೆ ತೋರಿಸುತ್ತಾ, ತನ್ನ ಅಸಾದಾರಣವಾದ ಗುಣಗಳನ್ನು ತೋರಿಸುತ್ತಾನೆ.
[ದೇವರು ತೀರ ಸಾಮಾನ್ಯನಾಗಿ ಕಂಡರೂ ನಮಗೆ ಅದರಿಂದ ಪ್ರಯೋಜನವಿಲ್ಲ. ಯಾವಾಗಲೂ ಅಸಾಮಾನ್ಯನಾಗಿ ಕಂಡರೂ ಕೂಡಾ ನಮಗೆ ಪ್ರಯೋಜನವಿಲ್ಲ. ಹಾಗಿದ್ದಲ್ಲಿ ನಾವು ಅವನನ್ನು ಅನುಸರಿಸುವುದಿಲ್ಲ. ಆದ್ದರಿಂದ ಭಗವಂತ ಸಾಮಾನ್ಯನಾಗಿಯೂ, ಅಲ್ಲಲ್ಲಿ ಶ್ರೇಷ್ಠ ಬಲವನ್ನು ತೋರಿಸುತ್ತಾ ಅಸಾಮಾನ್ಯನಾಗಿಯೂ  ಕಾಣುತ್ತಾನೆ.  ಈರೀತಿಯಾದ ಮಿಶ್ರಣ ಇರುವುದರಿಂದಲೇ ನಮಗೆ ದೇವರ ಮೆಲಿನ ಭಕ್ತಿ ಹೆಚ್ಚುತ್ತದೆ.  ದೇವರಿಂದ ಶಿಕ್ಷಣವೂ ದೊರೆಯುತ್ತದೆ.]  

Sunday, May 19, 2019

Mahabharata Tatparya Nirnaya Kannada 13_04-13_06


ಸ ಕದಾಚಿಚ್ಛಶುಭಾವಂ ಕುರ್ವನ್ತ್ಯಾ ಮಾತುರಾತ್ಮನೋ ಭೂಯಃ
ಅಪನೇತುಂ ಪರಮೇಶೋ ಮೃದಂ ಜಘಾಸೇಕ್ಷತಾಂ ವಯಸ್ಯನಾಮ್ ॥೧೩.೦೪॥

ಎಲ್ಲರಿಗೂ ಒಡೆಯನಾದ ಶ್ರೀಕೃಷ್ಣನು ಒಮ್ಮೆ ‘ಇದು ನನ್ನಮಗು’ ಎನ್ನುವ ಭಾವನೆಯನ್ನು ತೋರುತ್ತಿರುವ ತಾಯಿಗೆ, ಆರೀತಿಯ ಭಾವನೆಯನ್ನು ನಾಶಮಾಡಲು, ಗೆಳೆಯರೆಲ್ಲರೂ ನೋಡುತ್ತಿರಲು, ಮಣ್ಣನ್ನು ತಿಂದ.  

ಮಾತ್ರೋಪಾಲಾಬ್ದ ಈಶೋ ಮುಖವಿವೃತಿಮಕರ್ನ್ನಾಮ್ಬ ಮೃದ್ಭಕ್ಷಿತಾsಹಂ
ಪಶ್ಯೇತ್ಯಾಸ್ಯಾನ್ತರೇ ತು ಪ್ರಕೃತಿವಿಕೃತಿಯುಕ್ ಸಾ ಜಗತ್ ಪರ್ಯ್ಯಪಶ್ಯತ್ ।
ಇತ್ಥಂ ದೇವೋsತ್ಯಚಿನ್ತ್ಯಾಮಪರದುರಧಿಗಾಂ ಶಕ್ತಿಮುಚ್ಚಾಂ ಪ್ರದರ್ಶ್ಯ
ಪ್ರಾಯೋ ಜ್ಞಾತಾತ್ಮತತ್ತ್ವಾಂ ಪುನರಪಿ ಭಗವಾನಾವೃಣೋದಾತ್ಮಶಕ್ತ್ಯಾ ॥೧೩.೦೫॥

ತಾಯಿಯಿಂದ ‘ಬಾಯಿತೆರೆ’ ಎಂದು ಗದರಿಸಲ್ಪಟ್ಟವನಾದ ಸರ್ವಸಮರ್ಥನಾದ ಕೃಷ್ಣನು 'ಅಮ್ಮಾ, ನಾನು ಮಣ್ಣನ್ನು ತಿನ್ನಲಿಲ್ಲಾ ನೋಡು’ ಎಂದು ಹೇಳಿ ತನ್ನ ಬಾಯನ್ನು ತೆರೆದನು. ಆಗ ಯಶೋದೆಯು ಅವನ ಬಾಯಲ್ಲಿ ಪ್ರಕೃತಿ ಹಾಗು ವಿಕೃತಿಯಿಂದ ಕೂಡಿರುವ ಜಗತ್ತನ್ನು ಕಂಡಳು. ಈರೀತಿಯಾಗಿ ನಾರಾಯಣನು ಯಾರಿಗೂ ಚಿಂತಿಸಲಾಗದ, ಬೇರೊಬ್ಬರಿಗೆ ತಿಳಿಯಲಾಗದ ಉತ್ಕೃಷ್ಟವಾದ ಸ್ವರೂಪ ಶಕ್ತಿಯನ್ನು ತಾಯಿಗೆ ತೋರಿಸಿ,  ಹೆಚ್ಚಾಗಿ ತನ್ನನ್ನು ತಿಳಿದ ಆ ಯಶೋದೆಯನ್ನು ಮತ್ತೆ ತನ್ನ ಸಾಮರ್ಥ್ಯದಿಂದ (ಮೊದಲಿನಂತೆ)ಆವರಿಸಿದ.

ಇತಿ ಪ್ರಭುಃ ಲೀಲಯಾ ಹರಿರ್ಜ್ಜಗದ್ ವಿಡಮ್ಬಯನ್ ।
ಚಚಾರ ಗೋಷ್ಠಮಣ್ಡಲೇsಪ್ಯನನ್ತಸೌಖ್ಯಚಿದ್ಘನಃ ॥೧೩.೦೬॥

ಈರೀತಿಯಾಗಿ, ಸರ್ವಸಮರ್ಥನಾದ  ಶ್ರೀಕೃಷ್ಣನು ತನ್ನ ಲೀಲೆಯಿಂದ ಜಗತ್ತನ್ನು ಅನುಕರಿಸುವವನಾಗಿ, ಆ ಗೋವುಗಳ ಗ್ರಾಮದಲ್ಲಿ, ಎಣೆಯಿರದ ಸುಖದಿಂದಲೂ, ಜ್ಞಾನದಿಂದಲೂ ತುಂಬಿರುವವನಾಗಿ ಸಂಚರಿಸಿದನು.

Mahabharata Tatparya Nirnaya Kannada 13_01-13_03


೧೩. ಕಂಸವಧಃ


ಓಂ ॥
ಗರ್ಗ್ಗಃ ಶೂರಸುತೋಕ್ತ್ಯಾ ವ್ರಜಮಾಯಾತ್ ಸಾತ್ವತಾಂ ಪುರೋಧಾಃ ಸಃ ।
ಚಕ್ರೇ ಕ್ಷತ್ರಿಯಯೋಗ್ಯಾನ್ ಸಂಸ್ಕಾರಾನ್ ಕೃಷ್ಣರೋಹಿಣೀಸೂನ್ವೋಃ ॥೧೩.೦೧

ಯಾದವರ ಪುರೋಹಿತರಾಗಿರುವ ಗರ್ಗ ಎಂಬ ಋಷಿಯು ವಸುದೇವನ ಮಾತಿನಂತೆ ವ್ರಜಕ್ಕೆ ಬಂದು, ಕೃಷ್ಣ ಹಾಗು ಬಲರಾಮರಿಗೆ ಕ್ಷತ್ರಿಯಯೋಗ್ಯವಾಗಿರುವ ಸಂಸ್ಕಾರಗಳನ್ನು(ಜಾತಕರ್ಮಾದಿ ಸಂಸ್ಕಾರಗಳನ್ನು) ಮಾಡಿದರು.
[ಪಾದ್ಮಪುರಾಣದಲ್ಲಿ ಈ ಮಾತಿನ ಉಲ್ಲೇಖವಿದೆ: ತತೋ ಗರ್ಗಃ ಶುಭದಿನೇ ವಸುದೇವೇನ ನೋದಿತಃ’ (ಉತ್ತರಖಂಡ ೧೪೫.೬೭)   ನಾಮ ಚಾತ್ರಾಕರೋದ್ ದಿವ್ಯಂ ಪುತ್ರಯೋರ್ವಾಸುದೇವಯೋಃ’ (೬೮).  ಭಾಗವತದಲ್ಲಿ(೧೦.೧.೧೧) ಹೇಳುವಂತೆ: ಚಕಾರ ನಾಮಕರಣಂ ಗೂಢೋ ರಹಸಿ ಬಾಲಯೋಃ’.  ಬ್ರಾಹ್ಮಪುರಾಣದಲ್ಲಿ(೭೬.೧-೨)) ಹೀಗಿದೆ: ‘ಗರ್ಗಶ್ಚ ಗೋಕುಲೇ ತತ್ರ ವಸುದೇವಪ್ರಚೋದಿತಃ । ಪ್ರಚ್ಛನ್ನ ಏವ ಗೋಪಾನಾಂ  ಸಂಸ್ಕಾರಮಕರೋತ್ ತಯೋಃ ॥  ಜೇಷ್ಠಂ ಚ ರಾಮಮಿತ್ಯಾಹ ಕೃಷ್ಣಂ ಚೈವ ತಥಾsಪರಮ್’. ಕಂಸನಿಗೆ ಸುದ್ದಿಮುಟ್ಟುವ ಸಾಧ್ಯತೆ ಇರುವುದರಿಂದ, ಶ್ರೀಕೃಷ್ಣನಿಗೆ ಗೋಪ್ಯವಾಗಿ ಕ್ಷತ್ರಿಯಯೋಗ್ಯವಾಗಿರುವ ಸಂಸ್ಕಾರ ನಡೆಯಿತು. ಕೃಷ್ಣ ಬೆಳೆದದ್ದು ವೈಶ್ಯ ಕುಟುಂಬದಲ್ಲಾದರೂ ಕೂಡಾ, ಕ್ಷತ್ರಿಯಯೋಗ್ಯವಾಗಿರುವ ಸಂಸ್ಕಾರಗಳನ್ನು ಹೊಂದಿ ಕ್ಷತ್ರೀಯನೇ ಆಗಿದ್ದ. (ಇದೇ ಪರಿಸ್ಥಿತಿ ಕರ್ಣನಿಗೂ ಇತ್ತು. ಆದರೆ ಅವನಿಗೆ ಈರೀತಿಯ ಸಂಸ್ಕಾರ ಆಗಿರಲಿಲ್ಲ. ಆದ್ದರಿಂದ ಅವನನ್ನು ಸಮಾಜ ‘ಸೂತ’ ಎಂದೇ ಪರಿಗಣಿಸಿತು.  ಗರ್ಗಾಚಾರ್ಯರಿಂದ ಸಂಸ್ಕಾರಗೊಂಡ ಶ್ರೀಕೃಷ್ಣನನ್ನು ಸಮಾಜ ಕ್ಷತ್ರಿಯನನ್ನಾಗಿ ಕಂಡಿತು)].

ಊಚೇ ನನ್ದ ಸುತೋsಯಂ ತವ ವಿಷ್ಣೋರ್ನ್ನಾವಮೋ ಗುಣೈಃ ಸರ್ವೈಃ ।
ಸರ್ವೇ ಚೈತತ್ರಾತಾಃ ಸುಖಮಾಪ್ಸ್ಯನ್ತ್ಯುನ್ನತಂ ಭವತ್ಪೂರ್ವಾಃ ॥೧೩.೦೨

ಸಮಸ್ತ ಸಂಸ್ಕಾರಗಳನ್ನು ಪೂರೈಸಿದ ಗರ್ಗಾಚಾರ್ಯರು ಹೇಳುತ್ತಾರೆ: ‘ಎಲೋ ನಂದಗೋಪನೇ, ಈ ನಿನ್ನ ಸುತನು ನಾರಾಯಣನಿಗೆ ಎಲ್ಲಾ ಗುಣಗಳಿಂದಲೂ ಕಡಿಮೆ ಇಲ್ಲದವನು (ನಾರಾಯಣನಿಗೆ ಸಮನಾದವನು. ಅಂದರೆ ಸ್ವಯಂ ನಾರಾಯಣ ಒಬ್ಬನೇ). ನೀನೇ ಮೊದಲಾಗಿರುವ ಎಲ್ಲರೂ ಕೂಡಾ ಇವನಿಂದ ರಕ್ಷಿಸಲ್ಪಟ್ಟವರಾಗಿ ಉತ್ಕೃಷ್ಟವಾದ ಸುಖವನ್ನು ಹೊಂದುತ್ತೀರಿ’.

ಇತ್ಯುಕ್ತಃ ಸ ಮುಮೋದ ಪ್ರಯಯೌ ಗರ್ಗ್ಗೋsಪಿ ಕೇಶವೋsಥಾsಧ್ಯಃ ।
ಸ್ವಪದೈರಗ್ರಜಯುಕ್ತಶ್ಚಕ್ರೇ ಪುಣ್ಯಂ ವ್ರಜನ್ ವ್ರಜೋದ್ದೇಶಮ್ ॥೧೩.೦೩॥

ಈರೀತಿಯಾಗಿ ಗರ್ಗಾಚಾರ್ಯರಿಂದ ಹೇಳಲ್ಪಟ್ಟಾಗ ನಂದನು ಸಂತಸವನ್ನು ಹೊಂದಿದನು. ಗರ್ಗಾಚಾರ್ಯರೂ  ಕೂಡಾ ಅವನ ಅನುಜ್ಞೆಯನ್ನು ಪಡೆದು ಅಲ್ಲಿಂದ ತೆರಳಿದರು. ತದನಂತರ ಎಲ್ಲರಿಗೂ ಮೊದಲೆನಿಸಿರುವ(ಆದಿಪುರುಷನಾದ) ಕೇಶವನು ಅಣ್ಣನಿಂದ ಕೂಡಿಕೊಂಡು, ಆ ಪ್ರಾಂತ್ಯದಲ್ಲಿ ಸಂಚರಿಸುತ್ತಾ ತನ್ನ ಪಾದಗಳಿಂದ ಆ ಗ್ರಾಮವನ್ನು ಪವಿತ್ರವನ್ನಾಗಿ ಮಾಡಿದನು.