ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Monday, August 27, 2018

Mahabharata Tatparya Nirnaya Kannada 9.138-9.143


ಉಕ್ತಂ ಲಕ್ಷಣಶಾಸ್ತ್ರೇ ಚ ಕೃಷ್ಣದ್ವೈಪಾಯನೋದಿತೇ
ತ್ರಿಭಾಷಾ ಯೋ ನ ಜಾನಾತಿ ರೀತೀನಾಂ ಶತಮೇವ ಚ  ೯.೧೩೮

ವ್ಯತ್ಯಾಸಾದೀನ್ ಸಪ್ತ ಭೇದಾನ್ ವೇದಾದ್ಯರ್ತ್ಥಂ ತಥಾ ವದೇತ್
ಸ ಯಾತಿ ನಿರಯಂ ಘೋರಮನ್ಯಥಾಜ್ಞಾನಸಮ್ಭವಮ್೯.೧೩೯

(‘ಲಕ್ಷಣ ಗ್ರಂಥ’ವನ್ನೂ ವೇದವ್ಯಾಸರೇ ರಚಿಸಿದ್ದಾರೆ. ಮಹಾಭಾರತವನ್ನು ಯಾವ ರೀತಿ ಅರ್ಥೈಸಬೇಕು ಎನ್ನುವ ವಿವರ ಅಲ್ಲಿದೆ. ಯಾವ-ಯಾವ ವಾಕ್ಯಗಳು ಎನೇನಾಗಿವೆ, ಯಾವಯಾವ ಘಟನೆಗಳು ಯಾವಯಾವ ಶೈಲಿಯಲ್ಲಿದೆ ಎಂದು ವೇದವ್ಯಾಸರೇ ವಿವರ ನೀಡಿದ್ದಾರೆ. ಅದನ್ನೇ ‘ಲಕ್ಷಣಶಾಸ್ತ್ರ’ ಎಂದು ಕರೆಯುತ್ತಾರೆ). 
ಲಕ್ಷಣಗ್ರಂಥದಲ್ಲೇ ಹೇಳಿರುವಂತೆ:  ಮೂರು ಭಾಷೆಗಳನ್ನು(ಸಮಾಧಿ, ದರ್ಶನ ಮತ್ತು ಗುಹ್ಯ ಭಾಷೆಗಳನ್ನು), ನೂರು ರೀತಿಗಳನ್ನು ಹಾಗು  ವ್ಯತ್ಯಾಸ ಮೊದಲಾದ ಏಳು ಭೇಧಗಳನ್ನು ತಿಳಿಯದೇ ಯಾರು ವೇದ-ಪುರಾಣ ಇತ್ಯಾದಿಗಳನ್ನು ವ್ಯಾಖ್ಯಾನ ಮಾಡುತ್ತಾರೋ, ಅವರು ವಿಪರೀತಜ್ಞಾನದಿಂದ  ಉಂಟಾಗತಕ್ಕ ಘೋರವಾದ ನರಕವನ್ನು ಹೊಂದುತ್ತಾರೆ.

ಇತ್ಯನ್ಯೇಷು ಚ ಶಾಸ್ತ್ರೇಷು ತತ್ರತತ್ರೋದಿತಂ ಬಹು
‘ವ್ಯತ್ಯಾಸಃ ಪ್ರಾತಿಲೋಮ್ಯಂ ಚ ಗೋಮೂತ್ರೀ ಪ್ರಘಸಸ್ತಥಾ ೯.೧೪೦

‘ಉಕ್ಷಣಃ ಸುಧುರಃ ಸಾಧು ಸಪ್ತ ಭೇದಾಃ ಪ್ರಕೀರ್ತ್ತಿತಾಃ’ 
ಇತ್ಯಾದಿ ಲಕ್ಷಣಾನ್ಯತ್ರ ನೋಚ್ಯನ್ತೇsನ್ಯಪ್ರಸಙ್ಗತಃ  ೯.೧೪೧

ಈರೀತಿಯಾಗಿ ಬೇರೆಬೇರೆ ಶಾಸ್ತ್ರಗಳಲ್ಲಿ (ಲಕ್ಷಣ ಗ್ರಂಥ, ನಿರ್ಣಯ ಗ್ರಂಥ, ಮೊದಲಾದವುಗಳಲ್ಲಿ) ಅಲ್ಲಲ್ಲಿ ಬಹಳವಾಗಿ ಹೇಳಿದ್ದಾರೆ. ವ್ಯತ್ಯಾಸಃ,  ಪ್ರಾತಿಲೋಮ್ಯ, ಗೋಮೂತ್ರೀ, ಪ್ರಘಸ, ಉಕ್ಷಣಃ,  ಸುಧುರಃ ಮತ್ತು  ಸಾಧು ಎನ್ನುವ ಏಳು ತರದ ಕಥಾ ಭೇದಗಳಿವೆ.  ಈ ಎಲ್ಲಾ ಲಕ್ಷಣಗಳ ವಿವರಣೆಯನ್ನು ಇಲ್ಲಿ ನಾನು ವಿವರಿಸುತ್ತಿಲ್ಲ. ಏಕೆಂದರೆ ಅದು ಬೇರೆಯೇ ಪ್ರಸಂಗ.
[ವ್ಯತ್ಯಾಸಃ: ಕಾಲವ್ಯತ್ಯಾಸ, ದೇಶವ್ಯತಾಸ, ಪುರುಷವ್ಯತ್ಯಾಸ ಶೈಲಿ ನಿರೂಪಣೆ. ಮುಖ್ಯವಾಗಿ ಅಸುರರನ್ನು ದಾರಿ ತಪ್ಪಿಸಲು ಬಳಸುವ ನಿರೂಪಣೆ. ಇಲ್ಲಿ ಕಾಲ, ದೇಶ, ವ್ಯಕ್ತಿಗಳನ್ನೇ  ಬದಲಿಸಿ ಹೇಳಲಾಗುತ್ತದೆ.
ಪ್ರಾತಿಲೋಮ್ಯ: ಅನುಕ್ರಮವಿಲ್ಲದ ನಿರೂಪಣಾ ಶೈಲಿ.
ಗೋಮೂತ್ರೀ: ಎತ್ತು ಮೂತ್ರ ಮಾಡಿದಂತೆ ವಕ್ರಗತಿಯಲ್ಲಿ ನಿರೂಪಣೆ.
ಪ್ರಘಸಃ : ಹಸು ಹುಲ್ಲು ತಿಂದಂತೆ, (ಇಲ್ಲಿ ಸ್ವಲ್ಪ- ಅಲ್ಲಿ ಸ್ವಲ್ಪ) ಮಧ್ಯಮಧ್ಯದಲ್ಲಿ ಹೇಳುತ್ತಿರುವ ಕಥಾಭಾಗವನ್ನು ಬಿಟ್ಟು, ಬೇರೆಬೇರೆ ಕಥೆಗಳನ್ನು ನಿರೂಪಣೆ ಮಾಡುವುದು. ಇಲ್ಲಿ ಕ್ರಮವಾಗಿ ಒಂದೇ ಕಥೆಯನ್ನು ಹೇಳುವುದಿಲ್ಲ.
ಉಕ್ಷಣಃ  : ಪ್ರೋಕ್ಷಣ ರೂಪದಲ್ಲಿ ಕಥೆಯನ್ನು ಸ್ವಲ್ಪ  ನಿರೂಪಣೆ ಮಾಡಿ ಮುಂದೆ ಹೋಗುವುದು.
ಸುಧುರಃ : ಸಮಗ್ರವಾಗಿ(meticulous) ನಿರೂಪಣೆ ಮಾಡುವುದು
ಸಾಧು : ಸಮಾಧಿಭಾಷೆಯಿಂದ ಪರಮಾತ್ಮನ ಸರ್ವೋತ್ತಮತ್ತ್ವ ಮೊದಲಾದ ತತ್ತ್ವಗಳನ್ನು ಸರಿಯಾಗಿ ತೋರುವಂತೆ ನಿರೂಪಿಸುವುದು]

ಅನುಸಾರೇಣ ತೇಷಾಂ ತು ನಿರ್ಣ್ಣಯಃ ಕ್ರಿಯತೇ ಮಯಾ
ತಸ್ಮಾನ್ನಿರ್ಣ್ಣಯಶಾಸ್ತ್ರತ್ವಾದ್ ಗ್ರಾಹ್ಯಮೇತದ್ ಬುಭೂಷುಭಿಃ ೯.೧೪೨

ಆ ಎಲ್ಲಾ ಪ್ರಮಾಣ ಗ್ರಂಥಗಳ ಅನುಸಾರವಾಗಿ ನಿರ್ಣಯವನ್ನು ನಾನಿಲ್ಲಿ ಮಾಡಿದ್ದೇನೆ. ಆ ಕಾರಣದಿಂದ ನಿರ್ಣಯ ಶಾಸ್ತ್ರವಾಗಿರುವ ಈ ಗ್ರಂಥವು ಗ್ರಾಹ್ಯ. (ನಿರ್ಣಯ ಗ್ರಂಥ ಎನ್ನುವುದು ನನ್ನ ಬುದ್ಧಿ ವೈಭವವಲ್ಲ. ಇದು ವೇದವ್ಯಾಸರ ವಿವಕ್ಷೆ ಕೂಡಾ ಹೌದು ಎನ್ನುವುದನ್ನು ಮಧ್ವಾಚಾರ್ಯರು ಇಲ್ಲಿ ಸ್ಪಷ್ಟಪಡಿಸಿದ್ದಾರೆ) 

ಇತೀರಿತಾ ರಾಮಕಥಾ ಪರಾ ಮಯಾ ಸಮಸ್ತಶಾಸ್ತ್ರಾನುಸೃತೇರ್ಭವಾಪಹಾ
ಪಠೇದಿಮಾಂ ಯಃ ಶೃಣುಯಾದಥಾಪಿ ವಾ ವಿಮುಕ್ತಬನ್ಧಶ್ಚರಣಂ ಹರೇರ್ವ್ರಜೇತ್ ೯.೧೪೩

ಉಪಸಂಹಾರ ಮಾಡುತ್ತಾ ಆಚಾರ್ಯರು ಹೇಳುತ್ತಾರೆ: ‘ಈರೀತಿಯಾಗಿ ಸಂಸಾರಬಂಧವನ್ನು ನಾಶ ಮಾಡುವ, ಉತ್ಕೃಷ್ಟವಾದ ರಾಮನ ಕಥೆಯು ಎಲ್ಲಾ ಶಾಸ್ತ್ರವನ್ನು ಅನುಸರಿಸಿ, ನನ್ನಿಂದ ಹೇಳಲ್ಪಟ್ಟಿದೆ. ಇದನ್ನು ಯಾರು ಓದುತ್ತಾನೋ, ಕೇಳುತ್ತಾನೋ, ಅವನು ಸಮಸ್ತ ಬಂಧದಿಂದ ಮುಕ್ತನಾಗಿ, ಪರಮಾತ್ಮನ ಪಾದವನ್ನು ಹೊಂದುತ್ತಾನೆ’.

ಇತಿ ಶ್ರೀಮದಾನನ್ದತೀರ್ಥಭಗವತ್ಪಾದವಿರಚಿತೇ ಶ್ರೀಮಹಾಭಾರತತಾತ್ಪರ್ಯ್ಯನಿರ್ಣ್ಣಯೇ ಶ್ರೀರಾಮಚರಿತೇ  ಶ್ರೀರಾಮಸ್ವಧಾಮಪ್ರವೇಶೋ ನಾಮ ನವಮೋsಧ್ಯಾಯಃ

*********

Sunday, August 26, 2018

Mahabharata Tatparya Nirnaya Kannada 9.130-9.137


ಪುಂವ್ಯತ್ಯಾಸೇನ ಚೋಕ್ತಿಃ ಸ್ಯಾತ್ ಪುರಾಣಾದಿಷು ಕುತ್ರಚಿತ್
ಕೃಷ್ಣಾಮಾಹ ಯಥಾ ಕೃಷ್ಣೋ ಧನಞ್ಜಯಶರೈರ್ಹತಾನ್   ೧೩೦

ಶತಂ ದುರ್ಯ್ಯೋಧನಾದೀಂಸ್ತೇ ದರ್ಶಯಿಷ್ಯ ಇತಿ ಪ್ರಭುಃ
ಭೀಮಸೇನಹತಾಸ್ತೇ ಹಿ ಜ್ಞಾಯನ್ತೇ ಬಹುವಾಕ್ಯತಃ          ೧೩೧

ಇತಿಹಾಸ ಪುರಾಣಾದಿಗಳಲ್ಲಿ, ಕೆಲವೊಂದು ಪ್ರಸಂಗಗಳಲ್ಲಿ  ಪುರುಷವ್ಯತ್ಯಾಸದಿಂದ ಕೂಡಿರುವ  ಹೇಳಿಕೆಗಳಿರುತ್ತದೆ. ಉದಾಹರಣೆಗೆ: ಶ್ರೀಕೃಷ್ಣನು ಕಾಡಿನಲ್ಲಿ ದ್ರೌಪದಿಯನ್ನು ಕುರಿತು “ನೂರು ಜನ ದುರ್ಯೋಧನಾದಿಗಳು  ಅರ್ಜುನನ ಬಾಣದಿಂದ ಸಾಯುವುದನ್ನು ನಿನಗೆ ತೋರಿಸುತ್ತೇನೆ” ಎಂದು ಹೇಳುವ ‘ಸಂಕ್ಷಿಪ್ತ’ ವಾಕ್ಯವನ್ನು ಭಾರತದಲ್ಲಿ ಕಾಣುತ್ತೇವೆ.  ಆದರೆ ಮುಂದೆ ‘ಬಹುವಾಕ್ಯ'ಗಳ ವಿವರಣೆಯನ್ನು ನೋಡಿದಾಗ,  ಮೇಲಿನ ಮಾತು ಪುರುಷವ್ಯತ್ಯಾಸದ ನಿರೂಪಣೆ ಮತ್ತು  ಬಹಳ ಮಂದಿ ಕೌರವರನ್ನು ಕೊಂದಿದ್ದು ಭೀಮಸೇನ ಎನ್ನುವುದು ತಿಳಿಯುತ್ತದೆ.
[ ಈ ಪ್ರಸಂಗದ ವಿವರ ಮಹಾಭಾರತದ ಉದ್ಯೋಗಪರ್ವದಲ್ಲಿದೆ(೫.೧೦):  ತತೋ ದುರ್ಯೋಧನೋ ಮಂದಃ ಸಹಾಮಾತ್ಯಃ ಸಬಾಂಧವಃ ನಿಷ್ಠಾಮಾಪತ್ಸ್ಯತೇ ಮೂಢಃ  ಕ್ರುದ್ಧೇ  ಗಾಂಡೀವಧನ್ವನೀ] 

ವಿಸ್ತಾರೇ ಭೀಮನಿಹತಾಃ ಸಙ್ಕ್ಷೇಪೇsರ್ಜ್ಜನಪಾತಿತಾಃ 
ಉಚ್ಯನ್ತೇ ಬಹವಶ್ಚಾನ್ಯೇ ಪುಂವ್ಯತ್ಯಾಸಸಮಾಶ್ರಯಾತ್  ೯.೧೩೨

ವಿಸ್ತಾರೇ ಕೃಷ್ಣನಿಹತಾ ಬಲಭದ್ರಹತಾ ಇತಿ
ಉಚ್ಯನ್ತೇ ಚ ಕ್ವಚಿತ್ ಕಾಲವ್ಯತ್ಯಾಸೋsಪಿ ಕ್ವಚಿದ್ ಭವೇತ್ ೯.೧೩೩

ಒಟ್ಟಿನಲ್ಲಿ ನೋಡಿದರೆ: ವಿಸ್ತಾರವಾಗಿ ನುಡಿಯಬೇಕಾದರೆ ಭೀಮಸೇನ ದುರ್ಯೋಧನಾಧಿಗಳನ್ನು ಕೊಂದಿದ್ದಾನೆ ಎಂದೂ, ಆದರೆ ಸಂಕ್ಷೇಪದಲ್ಲಿ  ಅರ್ಜುನ ಕೊಂದ ಎಂದಂತೆ  ಕಥೆಯನ್ನು ಹೇಳಿರುವುದು ತಿಳಿಯುತ್ತದೆ. ಈ ರೀತಿ ಸಂಕ್ಷೇಪ ಮತ್ತು ವಿಸ್ತಾರಗಳಲ್ಲಿ ಚಿಕ್ಕ  ವ್ಯತ್ಯಾಸವಿರುತ್ತದೆ. ಇದನ್ನು ತಿಳಿಯಲು  ಸಂಕ್ಷೇಪ ಮತ್ತು ವಿಸ್ತಾರ ಎರಡನ್ನೂ ಅಧ್ಯಯನ ಮಾಡಬೇಕಾಗುತ್ತದೆ. ಇದನ್ನೇ ಪುರುಷ ವ್ಯತ್ಯಾಸ ಎಂದು ಕರೆಯುತ್ತಾರೆ.
(ಇನ್ನೊಂದು ಉದಾಹರಣೆಯನ್ನು ಹೇಳುವುದಾದರೆ) ವಿಸ್ತಾರವಾದ ಕಥೆಯನ್ನು ಹೇಳುವಾಗ ಕೃಷ್ಣ ಕೊಂದಿದ್ದಾನೆ ಎನ್ನುತ್ತಾರೆ. ಆದರೆ ಅದನ್ನೇ ಸಂಕ್ಷೇಪವಾಗಿ ಹೇಳುವಾಗ ಬಲರಾಮ ಕೊಂದಿದ್ದಾನೆ  ಎಂದಿದ್ದಾರೆ. ಅದರಿಂದಾಗಿ, ಬಹಳ ವಾಕ್ಯಗಳನ್ನು ನೋಡಿಯೇ ನಿರ್ಣಯ ಮಾಡಬೇಕು.

ಯಥಾ ಸುಯೋಧನಂ ಭೀಮಃ ಪ್ರಾಹಸತ್ ಕೃಷ್ಣಸನ್ನಿಧೌ
ಇತಿ ವಾಕ್ಯೇಷು ಬಹುಷು ಜ್ಞಾಯತೇ ನಿರ್ಣ್ಣಯಾದಪಿ  ೯.೧೩೪

ಅನಿರ್ಣ್ಣಯೇ ತು ಕೃಷ್ಣಸ್ಯ ಪೂರ್ವಮುಕ್ತಾ ಗತಿಸ್ತತಃ 
ವ್ಯತ್ಯಾಸಾಸ್ತ್ವೇವಮಾದ್ಯಾಶ್ಚ ಪ್ರಾತಿಲೋಮ್ಯಾದಯಸ್ತಥಾ  ೯.೧೩೫

ದೃಶ್ಯನ್ತೇ ಭಾರತಾದ್ಯೇಷು ಲಕ್ಷಣಗ್ರನ್ಥತಶ್ಚ ತೇ
ಜ್ಞಾಯನ್ತೇ ಬಹುಭಿರ್ವಾಕ್ಯೈರ್ನ್ನಿರ್ಣ್ಣಯಗ್ರನ್ಥತಸ್ತಥಾ ೯.೧೩೬

ತಸ್ಮಾದ್ ವಿನಿರ್ಣ್ಣಯಗ್ರನ್ಥಾನಾಶ್ರಿತ್ಯೈವ ಚ ಲಕ್ಷಣಮ್
ಬಹುವಾಕ್ಯಾನುಸಾರೇಣ ನಿರ್ಣ್ಣಯೋsಯಂ ಮಯಾ ಕೃತಃ ೯.೧೩೭


ಕೆಲವೊಮ್ಮೆ ಕಾಲವ್ಯತ್ಯಾಸದ ನಿರೂಪಣೆ ಇರುತ್ತದೆ. ಉದಾಹರಣೆಗೆ: ಇನ್ದ್ರಪ್ರಸ್ಥದಲ್ಲಿ ಜಾರಿಬಿದ್ದ ದುರ್ಯೋಧನನನ್ನು ಕಂಡು  ‘ಕೃಷ್ಣನ ಸನ್ನಿಧಿಯಲ್ಲೇ ಭೀಮಸೇನ ದುರ್ಯೋಧನನನ್ನು ನೋಡಿ ಅಪಹಾಸ ಮಾಡಿದ’ ಎನ್ನುವುದು ಬಹುವಾಕ್ಯಗಳ ನಿರೂಪಣೆ. ಹಾಗಾಗಿ  ನಿರ್ಣಯವನ್ನು ತೆಗೆದುಕೊಂಡಾಗ, ಭೀಮಸೇನ ಕೃಷ್ಣನ ಸನ್ನಿಧಿಯಲ್ಲೇ ದುರ್ಯೋಧನನನ್ನು  ಹಾಸ್ಯ ಮಾಡಿದ್ದು  ಎನ್ನುವುದು ತಿಳಿಯುತ್ತದೆ. ನಿರ್ಣಯ ಮಾಡದೇ ಹೋದರೆ,  ಈ ಘಟನೆ ನಡೆಯುವ ಮೊದಲೇ ಕೃಷ್ಣ ಇಂದ್ರಪ್ರಸ್ಥದಿಂದ  ತೆರಳಿದ್ದ ಎಂದುಕೊಳ್ಳುತ್ತೇವೆ^.  ಆದ್ದರಿಂದ ಬಹಳವಾಕ್ಯಗಳು ಏನನ್ನು ಹೇಳುತ್ತವೆ ಎನ್ನುವುದನ್ನು ನೋಡಿಯೇ  ‘ಕಾಲ ವ್ಯತ್ಯಾಸ ಶೈಲಿಯ ನಿರೂಪಣೆ’ ಯಾವುದು ಎನ್ನುವುದನ್ನು ತಿಳಿಯಬೇಕಾಗುತ್ತದೆ.
ಭಾರತಾದಿಗಳಲ್ಲಿರುವ ವ್ಯತ್ಯಾಸ , ಪ್ರಾತಿಲೋಮ್ಯಾ ಮೊದಲಾದ ಶೈಲಿಯ ನಿರೂಪಣೆ  ‘ಲಕ್ಷಣಗ್ರಂಥ’ದ  ನೆರವಿನಿಂದ ತಿಳಿಯಲ್ಪಡುತ್ತವೆ. ಇದಲ್ಲದೆ ‘ಬಹಳ ವಾಕ್ಯ’ಗಳಿಂದ ಮತ್ತು ‘ನಿರ್ಣಯ ಗ್ರಂಥ’ದಿಂದ ಈ ವಿವರ ತಿಳಿಯುತ್ತದೆ.
“ಆ ಕಾರಣದಿಂದ ನಿರ್ಣಯ ಗ್ರಂಥ, ಲಕ್ಷಣ ಗ್ರಂಥ ಮತ್ತು  ಬಹಳ ವಾಕ್ಯಗಳನ್ನು ಅನುಸರಿಸಿ, ಈ ನಿರ್ಣಯವನ್ನು ನಾನು ಮಾಡಿದ್ದೇನೆ”  ಎಂದಿದ್ದಾರೆ ಆಚಾರ್ಯರು.

[^ಭಾಗವತದಲ್ಲಿ(೧೦.೮೪.೪): ‘ಜಹಾಸ ಭೀಮಸ್ತಂ ದೃಷ್ಟ್ವಾ ಸ್ತ್ರೀಯೋ ಭೂಪಾಶ್ಚ ಕೇಚನ ನಿವಾರ್ಯಮಾಣಾ  ಅಪ್ಯನ್ಗ   ರಾಜ್ಞಾ ಕೃಷ್ಣಾನುಮೋದಿತಾಃ’ :  ಧರ್ಮರಾಜನಿಂದ ತಡೆಯಲ್ಪಟ್ಟವರಾದರೂ ಕೂಡಾ, ಕೃಷ್ಣ ಅನುಮೋದಿಸಿದ್ದುದರಿಂದ ಅವರು ಜೋರಾಗಿ ನಕ್ಕರು’ ಎಂದಿದ್ದಾರೆ. ಆದರೆ ಮಹಾಭಾರತದ ಸಭಾಪರ್ವದಲ್ಲಿ (೪೫.೪೮) :  ಗತೇ ದ್ವಾರಾವತೀಂ ಕೃಷ್ಣೇ ಸಾತ್ವತಪ್ರವರೇ ನೃಪ ಏಕೋ ದುರ್ಯೋಧನೋ ರಾಜಾ ಶಕುನಿಶ್ಚಾಪಿ ಸೌಬಲಃ ‘ಕೃಷ್ಣ ಹೋದಮೇಲೆ, ದುರ್ಯೋಧನ-ಶಕುನಿ ಮೊದಲಾದವರೆಲ್ಲಾ ಸಭೆಯಲ್ಲಿ ಅವಮಾನವನ್ನು ಅನುಭವಿಸಿದರು’ ಎನ್ನಲಾಗಿದೆ.  ಆದರೆ ಮುಂದೆ ದುರ್ಯೋಧನ ದೃತರಾಷ್ಟ್ರನಲ್ಲಿ ಈ ಘಟನೆಯ ಕುರಿತು ಹೇಳುವಾಗ: ‘ಕೃಷ್ಣ, ಭೀಮಸೇನ, ಎಲ್ಲರೂ ನನ್ನನ್ನು  ನೋಡಿ ನಕ್ಕರು.  ಅದರಿಂದಾಗಿ ನನಗೆ ಅವಮಾನವಾಯಿತು’  ಎಂದು ಹೇಳುವುದನ್ನು ಕಾಣುತ್ತೇವೆ. ಆದ್ದರಿಂದ, ಬಹಳವಾಕ್ಯಗಳು ಏನನ್ನು ಹೇಳುತ್ತವೆ ಎನ್ನುವುದನ್ನು ನೋಡಿಯೇ,  ‘ಕಾಲ ವ್ಯತ್ಯಾಸ ಶೈಲಿಯ ನಿರೂಪಣೆ’ ಯಾವುದು ಎನ್ನುವುದನ್ನು ತಿಳಿಯಬೇಕು. ಹೀಗೆ ನಾವು ನಮ್ಮ ಬುದ್ಧಿಯನ್ನು ಉಪಯೋಗಿಸಿ ಕಾಲಾನುಕ್ರಮವನ್ನು ಚಿಂತನೆ ಮಾಡಬೇಕು]. 

Saturday, August 25, 2018

Mahabharata Tatparya Nirnaya Kannada 9.125-9.129


ಇತ್ಯಶೇಷಪುರಾಣೇಭ್ಯಃ ಪಞ್ಚರಾತ್ರೇಭ್ಯ ಏವ ಚ
ಭಾರತಾಚ್ಚೈವ ವೇದೇಭ್ಯೋ ಮಹಾರಾಮಾಯಣಾದಪಿ ೯.೧೨೫

ಪರಸ್ಪರವಿರೋಧಸ್ಯ ಹಾನಾನ್ನಿರ್ಣ್ಣೀಯ ತತ್ತ್ವತಃ
ಯುಕ್ತ್ಯಾ ಬುದ್ಧಿಬಲಾಚ್ಚೈವ ವಿಷ್ಣೋರೇವ ಪ್ರಸಾದತಃ ೯.೧೨೬

ಬಹುಕಲ್ಪಾನುಸಾರೇಣ ಮಯೇಯಂ ಸತ್ಕಥೋದಿತಾ
ನೈಕಗ್ರನ್ಥಾಶ್ರಯಾತ್ ತಸ್ಮಾನ್ನಾSಶಙ್ಕ್ಯಾSತ್ರ ವಿರುದ್ಧತಾ ೯.೧೨೭

(ಆಚಾರ್ಯರು ಈವರೆಗೆ ತಾನು ಪ್ರಸ್ತುತಪಡಿಸಿದ  ರಾಮಾಯಣದ ನಿರ್ಣಯಕ್ಕೆ ಪ್ರಮಾಣ ಯಾವುದು ಎನ್ನುವುದನ್ನು ಇಲ್ಲಿ ಹೇಳಿದ್ದಾರೆ) ಈರೀತಿಯಾಗಿ, ಎಲ್ಲಾ ಪುರಾಣಗಳಿಂದಲೂ, ಪಂಚರಾತ್ರಗಳಿಂದಲೂ , ಭಾರತದಿಂದಲೂ , ವೇದದಿಂದಲೂ, ಮೂಲ ರಾಮಾಯಣದಿಂದಲೂ, ಅಲ್ಲಿ ಸೇರಿದ್ದ ಕಸವನ್ನು ತೆಗೆದು,  ಪರಸ್ಪರ ವಿರೋಧವನ್ನು ಕಳೆದು, ನಿರ್ಣಯವನ್ನು ಮಾಡಿ, ಯುಕ್ತಿಯಿಂದ, ಪ್ರಜ್ಞೆಯ ಬಲದಿಂದ,  ಪರಮಾತ್ಮನ ಅನುಗ್ರಹದಿಂದ, ಬಹಳ ಕಲ್ಪಕ್ಕೆ ಅನುಗುಣವಾಗಿ ಈ ರಾಮಾಯಣದ ಕಥೆಯನ್ನು ಹೇಳಿದ್ದೇನೆ. ಯಾವುದೋ ಒಂದು ಗ್ರಂಥವನ್ನು ನಾನು ಆಶ್ರಯಿಸಿಲ್ಲ. ಹಲವಾರು ಗ್ರಂಥಗಳನ್ನು ಆಶ್ರಯಿಸಿದ್ದೇನೆ. ಅದರಿಂದಾಗಿ ಇದರಲ್ಲಿ ವಿರೋಧವನ್ನು ಎಣಿಸಬಾರದು.

ಕ್ವಚಿನ್ಮೋಹಾಯಾಸುರಾಣಾಂ ವ್ಯತ್ಯಾಸಃ ಪ್ರತಿಲೋಮತಾ
ಉಕ್ತಾ ಗ್ರನ್ಥೇಷು ತಸ್ಮಾದ್ಧಿ ನಿರ್ಣ್ಣಯೋSಯಂ ಕೃತೋ ಮಯಾ ೯.೧೨೮

ಕೆಲವೊಮ್ಮೆ ಅಸುರರ ಮೋಹಕ್ಕಾಗಿ ನಾನಾ ರೀತಿಯ ವ್ಯತ್ಯಾಸ ಮತ್ತು ಪ್ರತಿಲೋಮತ್ವವು ಗ್ರಂಥಗಳಲ್ಲಿ ಹೇಳಲ್ಪಟ್ಟಿದೆ. ಆ ಕಾರಣದಿಂದ ಗ್ರಂಥೋಕ್ತವಾದ ಈ ನಿರ್ಣಯವನ್ನು ನಾನು ಮಾಡಿದ್ದೇನೆ.

ಏವಂ ಚ ವಕ್ಷ್ಯಮಾಣೇಷು ನೈವಾsಶಙ್ಕ್ಯಾ ವಿರುದ್ಧತಾ
ಸರ್ವಕಲ್ಪಸಮಶ್ಚಾಯಂ ಪಾರಾವರ್ಯ್ಯಕ್ರಮಃ ಸದಾ ೯.೧೨೯

ಈರೀತಿಯಾಗಿ  ಕಥೆಗಳು ಹೇಳಲ್ಪಡುತ್ತಿರಲು, ಇಲ್ಲಿ ವಿರೋಧವನ್ನು ಶಂಕಿಸಬಾರದು. ಇದರ ಪೂರ್ವಾಪರಿ ಭಾವ ಎಲ್ಲಾ ಕಲ್ಪದಲ್ಲಿಯೂ ಸಾಧಾರಣ ಅಥವಾ ಸಮವಾಗಿರುತ್ತದೆ. [ಇಲ್ಲಿ ಹೇಳಿದ ಕ್ರವವನ್ನು ಮುಖ್ಯವಾಗಿ ಅನುಸರಿಸಿರತಕ್ಕದ್ದಾಗಿರುತ್ತದೆ. ಅಂದರೆ ಮುಖ್ಯವಾಗಿ ಪ್ರತಿ ಕಲ್ಪದಲ್ಲಿಯೂ ಇದೇ ಕ್ರಮದಲ್ಲಿ ಘಟನೆಗಳು ಸಂಭವಿಸುತ್ತವೆ]

Thursday, August 23, 2018

Mahabharata Tatparya Nirnaya Kannada 9.119-9.124


ಸ್ವಂಸ್ವಂ ಚ ಸರ್ವೇ ಸದನಂ ಸುರಾ ಯಯುಃ ಪುರನ್ದರಾದ್ಯಾಶ್ಚ ವಿರಿಞ್ಚಪೂರ್ವಕಾಃ
ಮರುತ್ಸುತೋsಥೋ ಬದರೀಮವಾಪ್ಯ ನಾರಾಯಣಸ್ಯೈವ ಪದಂ ಸಿಷೇವೇ ೯.೧೧೯

ಸಮಸ್ತಶಾಸ್ತ್ರೋದ್ಭರಿತಂ ಹರೇರ್ವಚೋ ಮುದಾ ತದಾ ಶ್ರೋತ್ರಪುಟೇನ ಸಮ್ಭರನ್
ವದಂಶ್ಚ ತತ್ವಂ ವಿಬುಧರ್ಷಭಾಣಾಂ ಸದಾ ಮುನೀನಾಂ ಚ ಸುಖಂ ಹ್ಯುವಾಸ೯.೧೨೦


ಬ್ರಹ್ಮ, ಇಂದ್ರ, ಮೊದಲಾದ ದೇವತೆಗಳೆಲ್ಲರೂ ತಮ್ಮ-ತಮ್ಮ ಧಾಮವನ್ನು ಸೇರಿದರು. ತದನಂತರ ಹನುಮಂತನು ಬದರೀ ಕ್ಷೇತ್ರವನ್ನು ಹೊಂದಿ, ನಾರಾಯಣನ ಪಾದವನ್ನು ಸೇವಿಸುತ್ತಿದ್ದನು.
ಸಮಗ್ರ ಶಾಸ್ತ್ರದಿಂದ ಕೂಡಿರುವ ಪರಮಾತ್ಮನ ಮಾತನ್ನು ಸಂತಸದಿಂದ ತನ್ನ ಕಿವಿಯಲ್ಲಿ ಧರಿಸುತ್ತಾ, ದೇವತಾ ಶ್ರೇಷ್ಠ ತತ್ವವನ್ನು ಹೇಳುತ್ತಾ, ಮುನಿಗಳಿಗೂ ಕೂಡಾ ಉಪದೇಶಿಸುತ್ತಾ, ಹನುಮಂತ  ಸುಖವಾಗಿ ಆವಾಸ ಮಾಡಿದನು.

ರಾಮಾಜ್ಞಯಾ ಕಿಮ್ಪುರುಷೇಷು ರಾಜ್ಯಂ ಚಕಾರ ರೂಪೇಣ ತಥಾsಪರೇಣ
ರೂಪೈಸ್ತಥಾsನ್ಯೈಶ್ಚ ಸಮಸ್ತಸದ್ಮನ್ಯುವಾಸ ವಿಷ್ಣೋಃ ಸತತಂ ಯಥೇಷ್ಟಮ್ ೯.೧೨೧

ರಾಮದೇವರ ಆಜ್ಞೆಯಂತೆ ಹನುಮಂತನೇ ತನ್ನ ಇನ್ನೊಂದು ರೂಪದಿಂದ  ಕಿಮ್ಪುರುಷಖಂಡದಲ್ಲಿ ರಾಜ್ಯವನ್ನು ಆಳಿದನು. ಬೇರೆ ರೂಪಗಳಿಂದಲೂ ಕೂಡಾ ಶ್ವೇತದ್ವೀಪ, ಮೊದಲಾದ ಪರಮಾತ್ಮನ ಮನೆಯಲ್ಲಿ ನಿರಂತರವಾಗಿ, ಪರಮಾತ್ಮನ ಇಷ್ಟಕ್ಕನುಗುಣವಾಗಿ ವಾಸಮಾಡಿದನು.

ಇತ್ಥಂ ಸ ಗಾಯಞ್ಚತಕೋಟಿವಿಸ್ತರಮ್ ರಾಮಾಯಣಂ ಭಾರತಪಞ್ಚರಾತ್ರಮ್
ವೇದಾಂಶ್ಚ ಸರ್ವಾನ್ ಸಹಿತಬ್ರಹ್ಮಸೂತ್ರಾನ್ ವ್ಯಾಚಕ್ಷಾಣೋ ನಿತ್ಯಸುಖೋದ್ಭರೋsಭೂತ್ ೯.೧೨೨

ಈರೀತಿಯಾಗಿ, ಹನುಮಂತನು ನೂರುಕೋಟಿ ಪದ್ಯಗಳಿಂದ ವಿಸ್ತಾರವಾಗಿರುವ ರಾಮಾಯಣವನ್ನು, ಮಹಾಭಾರತ- ಪಂಚರಾತ್ರಗಳನ್ನೂ , ಎಲ್ಲಾ ವೇದಗಳನ್ನು,  ಬ್ರಹ್ಮಸೂತ್ರದಿಂದಲೂ ಕೂಡಿ ಪಾಠಮಾಡುತ್ತಾ, ಅತ್ಯಂತ ಸುಖದಿಂದ ಕಾಲವನ್ನು ಕಳೆದನು.

ರಾಮೋsಪಿ ಸಾರ್ದ್ಧಂಪವಮಾನಾತ್ಮಜೇನ ಸ ಸೀತಯಾ ಲಕ್ಷ್ಮಣಪೂರ್ವಕೈಶ್ಚ
ತಥಾ ಗರುತ್ಮತ್ ಪ್ರಮುಖೈಶ್ಚ ಪಾರ್ಷದೈಃ ಸಂಸೇವ್ಯಮಾನೋ ನ್ಯವಸತ್ ಪಯೋಬ್ಧೌ ೯.೧೨೩

ರಾಮಚಂದ್ರನೂ ಕೂಡಾ ಹನುಮಂತನಿಂದ, ಸೀತೆಯಿಂದ, ಲಕ್ಷ್ಮಣ ಮೊದಲಾದವರಿಂದಲೂ ಕೂಡಿಕೊಂಡು, ಗರುಡ ಮೊದಲಾದವರಿಂದಲೂ, ಜಯ-ವಿಜಯ ಮೊದಲಾದ ಪರಿಚಾರಕರಿಂದಲೂ ಸೇವಿಸಲ್ಪಡುವವನಾಗಿ ಕ್ಷೀರಸಾಗರದಲ್ಲಿ ವಾಸಮಾಡಿದನು.

ಕದಾಚಿದೀಶಃ ಸಕಲಾವತಾರಾನೇಕಂ ವಿಧಾಯಾಹಿಪತೌ ಚ ಶೇತೇ
ಪೃಥಕ್ ಚ ಸಂವ್ಯೂಹ್ಯ ಕದಾಚಿದಿಚ್ಛಯಾ ರೇಮೇ ರಮೇಶೋsಮಿತಸದ್ಗುಣಾರ್ಣ್ಣವಃ ೯.೧೨೪


ಒಮ್ಮೆ ನಾರಾಯಣನು ಎಲ್ಲಾ ಅವತಾರಗಳನ್ನು ಒಂದನ್ನಾಗಿ ಮಾಡಿಕೊಂಡು ಶೇಷನ ಮೇಲೆ ಮಲಗುತ್ತಾನೆ. ಇನ್ನ್ಯಾವಗಲೋ ತನ್ನ ರೂಪಗಳನ್ನು ಬೇರೆಬೇರೆಯಾಗಿ ವಿಭಾಗಿಸಿಕೊಂಡು ಎಣೆಯಿರದ ಗುಣಗಳಿಗೆ ಕಡಲಿನಂತೆ ಇರುವ ರಮೇಶನು ಕ್ರೀಡಿಸುತ್ತಾನೆ.


Wednesday, August 22, 2018

Mahabharata Tatparya Nirnaya Kannada 9.113-9.118



ಅಙ್ಗದಃ ಕಾಲತಸ್ತ್ಯಕ್ತ್ವಾ ದೇಹಮಾಪ ನಿಜಾಂ ತನುಮ್
ರಾಮಾಜ್ಞಯೈವ ಕುರ್ವಾಣೋ ರಾಜ್ಯಂ ಕುಶಸಮನ್ವಿತಃ ೯.೧೧೩

ಅಂಗದನು ಕುಶನಿಂದ ಕೂಡಿ, ರಾಮನ ಆಜ್ಞೆಯಂತೆ ಕಪಿರಾಜ್ಯವನ್ನು ಆಳುತ್ತಾ, ಕಾಲತಃ ದೇಹವನ್ನು ಬಿಟ್ಟು, ತನ್ನ ಮೂಲರೂಪವನ್ನು ಸೇರಿಕೊಂಡನು.

ವಿಭೀಷಣಶ್ಚ ಧರ್ಮ್ಮಾತ್ಮಾ ರಾಘವಾಜ್ಞಾಪುರಸ್ಕೃತಃ
ಸೇನಾಪತಿರ್ದ್ಧನೇಶಸ್ಯ ಕಲ್ಪಮಾವೀತ್ ಸ ರಾಕ್ಷಸಾನ್ ೯.೧೧೪

ವಿಭೀಷಣನೂ ಕೂಡಾ ರಾಮಚಂದ್ರನ ಆಜ್ಞೆಯಂತೆ ಕುಬೇರನಿಗೆ ವಿನೀತನಾಗಿ, ಅವನ ಸೇನಾಧಿಪತಿಯಾಗಿ, ಕಲ್ಪಕಾಲಪರ್ಯಂತ ರಾಕ್ಷಸರನ್ನು ರಕ್ಷಿಸುತ್ತಾನೆ.
[ಮೂಲತಃ ಲಂಕೆ ಕುಬೇರನಿಗೆ ಸೇರಿರುವುದು. ಆದರೆ ರಾವಣ ಅದನ್ನು ಅತಿಕ್ರಮಣ ಮಾಡಿ ಕುಬೇರನಿಂದ ಕಸಿದುಕೊಂಡಿದ್ದ. ಆದರೆ ವಿಭೀಷಣ ಕುಬೇರನಿಗೆ ವಿನೀತನಾಗಿ ನಡೆದ]

ರಾಮಾಜ್ಞಯಾ ಜಾಮ್ಬವಾಂಶ್ಚ ನ್ಯವಸತ್ ಪೃಥಿವೀತಳೇ
ಉತ್ಪತ್ತ್ಯರ್ತ್ಥಂ ಜಾಮ್ಬವತ್ಯಾಸ್ತದರ್ತ್ಥಂ ಸುತಪಶ್ಚರನ್ ೯.೧೧೫

ಜಾಂಬವಂತ ರಾಮನ ಆಜ್ಞೆಯಂತೆ ಜಾಮ್ಬವತಿಯ ಉತ್ಪತ್ತಿಗಾಗಿ ತಪಸ್ಸನ್ನು ಮಾಡುತ್ತಾ  ಭೂಮಿಯಲ್ಲೇ ವಾಸಿಸಿದನು.

ಅಥೋ ರಘೂಣಾಂ ಪ್ರವರಃ ಸುರಾರ್ಚ್ಚಿತಃ ಸ್ವಯೈಕತನ್ವಾ ನ್ಯವಸತ್ ಸುರಾಲಯೇ
ದ್ವಿತೀಯಯಾ ಬ್ರಹ್ಮಸದಸ್ಯಧೀಶ್ವರಸ್ತೇನಾರ್ಚ್ಚಿತೋsಥಾಪರಾಯಾ ನಿಜಾಲಯೇ ೯.೧೧೬

ತದನಂತರ ರಘುಗಳಲ್ಲಿ ಶ್ರೇಷ್ಠರಾದ ರಾಮಚಂದ್ರನು, ಒಂದು ರೂಪದಿಂದ ದೇವತೆಗಳಿಂದ ಪೂಜಿತನಾಗಿ, ದೇವತೆಗಳ ಆಲಯದಲ್ಲಿ ನೆಲಸಿದನು. ಇನ್ನೊಂದು ರೂಪದಿಂದ ಬ್ರಹ್ಮದೇವರ ಲೋಕವಾದ ಸತ್ಯಲೋಕದಲ್ಲಿ ಅವನಿಂದ ಪೂಜಿತನಾಗಿ ನೆಲೆಸಿದನು. ಇನ್ನೊಂದು ರೂಪದಿಂದ ವಿಷ್ಣುಲೋಕದತ್ತ  ಸಾಗಿದನು.

ತೃತೀಯರೂಪೇಣ ನಿಜಂ ಪದಂ ಪ್ರಭುಂ ವ್ರಜನ್ತಮುಚ್ಚೈರನುಗಮ್ಯ  ದೇವತಾಃ
ಅಗಮ್ಯಮರ್ಯ್ಯಾದಮುಪೇತ್ಯ ಚ ಕ್ರಮಾದ್ ವಿಲೋಕಯನ್ತೋsತಿವಿದೂರತೋsಸ್ತುವನ್ ೯.೧೧೭

ಮೂರನೆಯ ರೂಪದಿಂದ ವಿಷ್ಣುಲೋಕವನ್ನು ಕುರಿತು ಹೋಗುವ ನಾರಾಯಣನನ್ನು ಅನುಸರಿಸಿದ ದೇವತೆಗಳು, ಸರ್ವಸಮರ್ಥ  ಪರಮಾತ್ಮನನ್ನು ಅವರವರ ಯೋಗ್ಯತಾನುಗುಣವಾಗಿ  ಕಾಣುತ್ತಾ, ದೂರದಿಂದಲೇ ಉತ್ಕೃಷ್ಟವಾದ ಭಕ್ತಿಯಿಂದ  ಸ್ತೋತ್ರ ಮಾಡಿದರು.

ಬ್ರಹ್ಮಾ ಮರುನ್ಮಾರುತಸೂನುರೀಶಃ ಶೇಷೋ ಗರುತ್ಮಾನ್ ಹರಿಜಃ ಶಕ್ರಕಾದ್ಯಾಃ
ಕ್ರಮಾದನುವ್ರಜ್ಯ ತು ರಾಘವಸ್ಯ ಶಿರಸ್ಯಥಾsಜ್ಞಾಂ ಪ್ರಣಿಧಾಯ ನಿರ್ಯ್ಯಯುಃ ೯.೧೧೮

ಬ್ರಹ್ಮ, ಮುಖ್ಯಪ್ರಾಣ, ಹನುಮಂತ, ಸದಾಶಿವ, ಶೇಷ, ಗರುಡ, ಕಾಮ, ಶಕ್ರಕಾ(ಇಂದ್ರ), ಹೀಗೆ ಎಲ್ಲರೂ ಕೂಡಾ ಕ್ರಮೇಣ(ಯೋಗ್ಯತಾನುಸಾರ) ಭಗವಂತನನ್ನು  ಅನುಸರಿಸಿ, ರಾಮಚಂದ್ರನ ಆಜ್ಞೆಯನ್ನು ಶಿರಸಾ ಹೊತ್ತು ಮರಳಿ ಬಂದರು.

Tuesday, August 21, 2018

Mahabharata Tatparya Nirnaya Kannada 9.108-9.112


ಯೇ ತು ದೇವಾ ಇಹೋದ್ಭೂತಾ ನೃವಾನರಶರೀರಿಣಃ
ತೇ ಸರ್ವೇ ಸ್ವಾಂಶಿತಾಮಾಪುಸ್ತನ್ಮೈನ್ದವಿವಿದಾವೃತೇ                ೯.೧೦೮

ಮೈನ್ದ ಮತ್ತು ವಿವಿದರನ್ನು ಹೊರತು ಪಡಿಸಿ,  ಶ್ರಿರಾಮನೊಂದಿಗೆ ಭೂಮಿಯಲ್ಲಿ  ಅವತರಿಸಿದ್ದ  ಇತರ ದೇವತೆಗಳು ತಮ್ಮ ತಮ್ಮ ಮೂಲರೂಪವನ್ನು ಸೇರಿದರು. 

ಅಸುರಾವೇಶತಸ್ತೌ ತು ನ ರಾಮಮನುಜಗ್ಮತುಃ
ಪೀತಾಮೃತೌ ಪುರಾ ಯಸ್ಮಾನ್ಮಮ್ರತುರ್ನ್ನಚ ತೌ ತದಾ             ೯.೧೦೯

ಮೈನ್ದ ಮತ್ತು ವಿವಿದರು ಅಸುರಾವೇಶದಿಂದ  ರಾಮಚಂದ್ರನನ್ನು ಅನುಸರಿಸಲಿಲ್ಲ. ಅವರು  ಹಿಂದೆ ಅಮೃತಮಥನ ಕಾಲದಲ್ಲಿ ಅಮೃತ ಸೇವನೆ ಮಾಡಿದ್ದರಿಂದ ಸಾಯಲೂ ಇಲ್ಲಾ.

ತಯೋಶ್ಚ ತಪಸಾ ತುಷ್ಟಶ್ಚಕ್ರೇ ತಾವಜರಾಮರೌ
ಪುರಾ ಸ್ವಯಮ್ಭುಸ್ತೇನೋಭೌ ದರ್ಪ್ಪಾದಮೃತಮನ್ಥನೇ          ೯.೧೧೦

ಪ್ರಸ̐ಹ್ಯಾಪಿಬತಾಂ ದೇವೈರ್ದ್ದೇವಾಂಶತ್ವಾದುಪೇಕ್ಷಿತೌ
ಪೀತಾಮೃತೇಷು ದೇವೇಷು ಯುದ್ಧ್ಯಮಾನೇಷು ದಾನವೈಃ         ೯.೧೧೧

ತೈರ್ದ್ದತ್ತಮಾತ್ಮಹಸ್ತೇ ತು ರಕ್ಷಾಯೈ ಪೀತಮಾಶು ತತ್
ತಸ್ಮಾದ್ ದೋಷಾದಾಪತುಸ್ತಾವಾಸುರಂ ಭಾವಮೂರ್ಜ್ಜಿತಮ್    ೯.೧೧೨

ಆಶ್ವೀದೇವತೆಗಳ ಅವತಾರವಾದ ಮೈನ್ದ–ವಿವಿದರು ಅಮೃತಮಥನ ಕಾಲಕ್ಕೂ ಮೊದಲು^  ಬ್ರಹ್ಮದೇವರನ್ನು ಕುರಿತು ತಪಸ್ಸು ಮಾಡಿ  ಅವಧ್ಯರಾಗುವ ವರವನ್ನು ಪಡೆದಿದ್ದರು.
ಅವತಾರ ರೂಪದಲ್ಲಿ ಅವರಿಗೆ ಅಮೃತ ಸಲ್ಲಬೇಕಾಗಿರಲಿಲ್ಲಾ. ಆದರೂ ಕೂಡಾ ಬಲಾತ್ಕಾರವಾಗಿ ಅವರು ಅಮೃತಪಾನ ಮಾಡಿದರು. ದೇವತಾರೂಪವಾಗಿರುವುದರಿಂದ ಇತರ ದೇವತೆಗಳು ಅದನ್ನು ಉಪೇಕ್ಷೆ ಮಾಡಿದರು(ವಿರೋಧಿಸಲಿಲ್ಲಾ).
(ಆದರೆ ಮೈನ್ದ–ವಿವಿದರಿಗೆ ಅಮೃತ ಹೇಗೆ ದೊರೆಯಿತು ಎಂದರೆ) ದೇವತೆಗಳೆಲ್ಲರು ಅಮೃತಪಾನ ಮಾಡಿ, ದೈತ್ಯರೊಂದಿಗೆ ಯುದ್ಧಕ್ಕೆಂದು ಹೊರಡುವಾಗ, ಅಮೃತಪಾತ್ರೆಯನ್ನು  ಮೈನ್ದ–ವಿವಿದರಲ್ಲಿ ಕೊಟ್ಟಿದ್ದರು. ಆಗ ಅವರು ಭಗವಂತನ ಅನುಮತಿ ಇಲ್ಲದೇ ಅಮೃತ ಸೇವನೆ ಮಾಡಿದರು.  ಈ ರೀತಿ, ಅನುಮತಿ ಇಲ್ಲದೇ ಕುಡಿದ ದೋಷದಿಂದಾಗಿ ಅಸುರ ಚಿತ್ತ ಪ್ರವೇಶವನ್ನು ಅವರು ಹೊಂದಿದರು.

[^ಅಶ್ವೀದೇವತೆಗಳ ಅವತಾರವಾದ  ಮೈನ್ದ–ವಿವಿದರು ರಾಮಾವತಾರ ಕಾಲದಲ್ಲಿ ಅವತರಿಸಿರುವುದಲ್ಲ. ಅವರು ಅಮೃತ ಮಥನ ಕಾಲಕ್ಕೂ ಮೊದಲೇ ಆ ರೂಪದಲ್ಲಿದ್ದರು. ಅಮೃತ ಮಥನಕಾಲದಲ್ಲಿ ಮೂಲರೂಪದಲ್ಲಿ ಅಶ್ವೀದೇವತೆಗಳ ಜೊತೆಗೆ ಮೈನ್ದ–ವಿವಿದರೂ ಅಲ್ಲಿ ಹಾಜರಿದ್ದರು. ಅಮೃತ ಪಾನಕ್ಕೆ ಭಗವಂತನ ಅಪ್ಪಣೆ ಇದ್ದದ್ದು ಕೇವಲ ದೇವತೆಗಳಿಗೆ, ಅದೂ ಕೇವಲ ಅವರ ಮೂಲರೂಪದಲ್ಲಿ ಮಾತ್ರ.  ಅವತಾರ ರೂಪದಲ್ಲಿದ್ದ ದೇವತೆಗಳು ಅಮೃತವನ್ನು ಕುಡಿಯಬಾರದು ಎನ್ನುವ ನಿಯಮ ಭಗವಂತನದ್ದಾಗಿತ್ತು. ಆದರೆ ಮೈನ್ದ–ವಿವಿದರು ಈ ನಿಯಮವನ್ನು ಮುರಿದು ಅಮೃತ ಕುಡಿದಿದ್ದರು. ]

Monday, August 20, 2018

Mahabharata Tatparya Nirnaya Kannada 9.101-9.107


ಅಥ ಯೇ ತ್ವತ್ಪದಾಮ್ಭೋಜಮಕರನ್ದೈಕಲಿಪ್ಸವಃ
ತ್ವಯಾ ಸಹಾsಗತಸ್ತೇಷಾಂ ವಿಧೇಹಿ ಸ್ಥಾನಮುತ್ತಮಮ್ ೯.೧೦೧

ಇನ್ನು, ನಿನ್ನ ಪಾದವೆಂಬ ಕಮಲದ ಭೃಂಗಗಳಾಗಿ ಅನೇಕ ಜೀವರು ನಿನ್ನ ಜೊತೆಗೆ ಬಂದಿದ್ದಾರೆ. ಅವರಿಗೆ ಯಾವ ಸ್ಥಾನವನ್ನು ಕೊಡಬೇಕು ಎನ್ನುವುದನ್ನು  ಆಜ್ಞೆಮಾಡು.

ಅಹಂ ಭವಃ ಸುರೇಶಾದ್ಯಾಃ ಕಿಙ್ಕರಾಃ ಸ್ಮ ತವೇಶ್ವರ
ಯಚ್ಚ ಕಾರ್ಯ್ಯಮಿಹಾಸ್ಮಾಭಿಸ್ತದಪ್ಯಾಜ್ಞಾಪಯಾsಶು ನಃ ೯.೧೦೨

ನಾನು, ಸದಾಶಿವ, ಇಂದ್ರ, ಮೊದಲಾದ ಎಲ್ಲರೂ ನಿನ್ನ ದಾಸರು. ನಿನ್ನ ಇಚ್ಛೆಯಂತೆ ನಾವು ನಡೆಯುವವರು. ಈ ಸಮಯದಲ್ಲಿ ನಮ್ಮಿಂದ ಯಾವ ಕಾರ್ಯ ನಡೆಯಬೇಕೋ ಅದನ್ನು ನೀನು ನಮಗೆ ಆಜ್ಞಾಪಿಸು.

ಇತ್ಯುದೀರಿತಮಾಕರ್ಣ್ಣ್ಯ ಶತಾನನ್ದೇನ ರಾಘವಃ
ಜಗಾದ ಭಾವಗಮ್ಭೀರಸುಸ್ಮಿತಾಧರಪಲ್ಲವಃ ೯.೧೦೩

ಈರೀತಿಯಾಗಿ,  ಜೀವರಲ್ಲಿಯೇ  ಎಣೆಯಿರದ ಆನಂದವುಳ್ಳ^  ಬ್ರಹ್ಮದೇವರು ಹೇಳಲು, ಅವರ ಮಾತನ್ನು ಕೇಳಿದ ಗಂಭೀರವಾದ ಮುಗುಳ್ನಗೆಯಿಂದ ಕೂಡಿರುವ ರಾಮಚಂದ್ರ ಮಾತನ್ನಾಡುತ್ತಾನೆ:
[^ಶತಾನನ್ದ: ಇದು ಬ್ರಹ್ಮದೇವರ ಅಸಾಧಾರಣವಾದ ನಾಮ. ಜೀವರಲ್ಲಿಯೇ ಪೂರ್ಣವಾದ ಆನಂದವನ್ನು ಹೊಂದಿರುವ ಚತುರ್ಮುಖ ‘ಶತಾನನ್ದ’]

ಜಗದ್ಗುರುತ್ವಮಾದಿಷ್ಟಂ ಮಯಾ ತೇ ಕಮಲೋದ್ಭವ
ಗುರ್ವಾದೇಶಾನುಸಾರೇಣ ಮಯಾssದಿಷ್ಟಾ ಚ ಸದ್ಗತಿಃ ೯.೧೦೪

ಅತಸ್ತ್ವಯಾ ಪ್ರದೇಯಾ ಹಿ ಲೋಕಾ ಏಷಾಂ ಮದಾಜ್ಞಯಾ
ಹೃದಿ ಸ್ಥಿತಂ ಚ ಜಾನಾಸಿ ತ್ವಮೇವೈಕಃ ಸದಾ ಮಮ ೯.೧೦೫

‘ಎಲೈ ಕಮಲೋದ್ಭವನೇ, ನಿನಗೆ ನಾನು ಜಗದ್ಗುರುತ್ವವನ್ನು ಕೊಟ್ಟಿದ್ದೇನೆ. ನಿನ್ನ ಗುರುವಾದ ನನ್ನಿಂದ ಇವರಿಗೆಲ್ಲರಿಗೂ ಕೂಡಾ ಸದ್ಗತಿಯು ಆಜ್ಞಾಪಿಸಲ್ಪಟ್ಟಿದೆ.
ಆದಕಾರಣ, ನನ್ನೊಂದಿಗೆ ಬಂದಿರುವ ಇವರೆಲ್ಲರೂ,  ನನ್ನ ಆಜ್ಞೆಯಂತೆ, ನಿನ್ನಿಂದ ಸದ್ಗತಿಯನ್ನು ಪಡೆಯಲು  ಅರ್ಹರು.  ನನ್ನ ಹೃದಯದೊಳಗೆ ಇರತಕ್ಕದ್ದನ್ನು ತಿಳಿದಿರುವವನು ನೀನೊಬ್ಬನೇ’.

ಇತೀರಿತೋ ಹರೇರ್ಭಾವವಿಜ್ಞಾನೀ ಕಞ್ಜಸಮ್ಭವಃ
ಪಿಪೀಲಿಕಾತೃಣಾನ್ತಾನಾಂ ದದೌ ಲೋಕಾನನುತ್ತಮಾನ್
ವೈಷ್ಣವಾನ್ ಸನ್ತತತ್ವಾಚ್ಚ ನಾಮ್ನಾ ಸಾನ್ತಾನಿಕಾನ್ ವಿಭುಃ ೯.೧೦೬

ತೇ ಜರಾಮೃತಿಹೀನಾಶ್ಚ ಸರ್ವದುಃಖವಿವರ್ಜ್ಜಿತಾಃ
ಸಂಸಾರಮುಕ್ತಾ ನ್ಯವಸಂಸ್ತತ್ರ ನಿತ್ಯಸುಖಾಧಿಕಾಃ ೯.೧೦೭

ಈರೀತಿಯಾಗಿ ಹೇಳಲ್ಪಟ್ಟ ಪರಮಾತ್ಮನ ಭಾವನ್ನು ತಿಳಿದ ಚತುರ್ಮುಖನು, ಎಲ್ಲಾ ಜೀವರಿಗೂ ಕೂಡಾ (ಹುಲ್ಲು, ಇರುವೆ, ಹೀಗೆ ಇತ್ಯಾದಿಯಲ್ಲಿದ್ದು, ರಾಮನನ್ನು ಹಿಂಬಾಲಿಸಿ ಬಂದಿದ್ದ ಎಲ್ಲಾ ಜೀವರಿಗೂ ಕೂಡಾ) ಉತ್ಕೃಷ್ಟವಾದ ಸಾನ್ತಾನಿಕ^ ಲೋಕವನ್ನು(ಮುಕ್ತ ಲೋಕವನ್ನು) ನೀಡಿದನು.
ಆ ಎಲ್ಲಾ ಜೀವರು ಸಂಸಾರ ಬಂಧದಿಂದ ಮುಕ್ತರಾಗಿ, ಉತ್ಕೃಷ್ಟವಾದ ಲೋಕದಲ್ಲಿ  ಮುಪ್ಪು ಇಲ್ಲದೇ, ಮರಣವಿಲ್ಲದೇ, ಸರ್ವದುಃಖದಿಂದಲೂ ಕೂಡಾ ರಹಿತರಾಗಿ, ಸಂಸಾರದಿಂದ ಮುಕ್ತರಾಗಿ, ನಿತ್ಯಸುಖದಿಂದ ಕೂಡಿದವರಾಗಿ  ಆವಾಸ ಮಾಡಿದರು.

[^ವಾಲ್ಮೀಕಿ ರಾಮಾಯಣದಲ್ಲಿ(ಉತ್ತರಕಾಂಡ ೧೧೦.೧೨) ಈ ಮಾತಿನ ಉಲ್ಲೇಖವಿದೆ: ಲೋಕಾನ್ ಸಾನ್ತಾನಿಕಾನ್ ನಾಮ ಯಾಸ್ಯನ್ತೀಮೇ  ಸಮಾಗತಾಃ  ಎಂದು ಅಲ್ಲಿ ವಾಲ್ಮೀಕಿ  ವರ್ಣಿಸಿದ್ದಾರೆ.  ಹಾಗಾಗಿ  ‘ವೈಷ್ಣವಾನ್ ಸನ್ತತತ್ವಾಚ್ಚ ನಾಮ್ನಾ ಸಾನ್ತಾನಿಕಾನ್ ವಿಭುಃ’ ಎನ್ನುವ ಆಚಾರ್ಯರ ಮಾತು, ವಾಲ್ಮೀಕಿ ರಾಮಾಯಣದಲ್ಲಿ ಹೇಳಿರುವ ‘ಸಾನ್ತಾನಿಕಾನ್’ ಎನ್ನುವ ಪದದ ವ್ಯಾಖ್ಯಾನ ರೂಪದಲ್ಲಿದೆ]