ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Thursday, June 29, 2023

Mahabharata Tatparya Nirnaya Kannada 28-09-18

 

ತಯೋರಾಸೀನ್ಮಹದ್ ಯುದ್ಧಮದ್ಭುತಂ ರೋಮಹರ್ಷಣಮ್ ।

ರಥಮನ್ಯಂ ಸಮಾಸ್ಥಾಯ ದ್ರೌಣಿರ್ಭೀಮಂ ಸಮಭ್ಯಯಾತ್ ॥೨೮.೦೯॥

 

ಶಲ್ಯ ಹಾಗೂ ಅರ್ಜುನರಿಬ್ಬರ ನಡುವೆ ವಿಸ್ಮಯಕರವಾಗಿರುವ, ರೋಮಾಂಚನಕಾರಿ, ಭಯಂಕರವಾದ ಯುದ್ಧವು ನಡೆಯಿತು. ಇತ್ತ ಅಶ್ವತ್ಥಾಮ ಇನ್ನೊಂದು ರಥವನ್ನೇರಿ ಮತ್ತೆ ಭೀಮಸೇನನನ್ನು ಎದುರುಗೊಂಡ.

 

ದುರ್ಯ್ಯೋಧನಶ್ಚ ಭೀಮಸ್ಯ ಶರೈರಾವಾರಯದ್ ದಿಶಃ ।

ತಾವುಭೌ ಶರವರ್ಷೇಣ ವಾರಯಾಮಾಸ ಮಾರುತಿಃ ॥೨೮.೧೦॥

 

ದುರ್ಯೋಧನನೂ ಕೂಡಾ ಭೀಮನ ಸುತ್ತಲೂ ಬಾಣಗಳಿಂದ ಮುಚ್ಚಿದ. ಆಗ ಅಶ್ವತ್ಥಾಮ ಮತ್ತು ದುರ್ಯೋಧನನನ್ನು  ಭೀಮಸೇನ ತನ್ನ ಬಾಣಗಳಿಂದ ತಡೆದ.

 

 

ತಾಭ್ಯಾಂ ತಸ್ಯಾಭವದ್ ಯುದ್ಧಂ ಸುಘೋರಮತಿಮಾನುಷಮ್ ।

ದುರ್ಯ್ಯೋಧನಸ್ಯಾವರಜಾನ್ ದ್ರೌಪದೇಯಾ ಯುಯುತ್ಸುನಾ ॥೨೮.೧೧॥

 

ಶಿಖಣ್ಡ್ಯಾದ್ಯೈರ್ಮ್ಮಾತುಲೈಶ್ಚ ಸಹ ಸರ್ವಾನ್ ನ್ಯವಾರಯನ್ ।

ಸಹದೇವಸ್ತು ಶಕುನಿಮುಲೂಕಂ ನಕುಲಸ್ತದಾ  ॥೨೮.೧೨॥

 

ಧೃಷ್ಟದ್ಯುಮ್ನಶ್ಚ ಹಾರ್ದ್ದಿಕ್ಯಂ ಸಾತ್ಯಕಿಃ ಕೃಪಮೇವ ಚ ।

ತೇಷಾಂ ತದಭವದ್ ಯುದ್ಧಂ ಚಿತ್ರಂ ಲಘು ಚ ಸುಷ್ಠು ಚ ॥೨೮.೧೩॥

 

ಭೀಮಸೇನ ಮತ್ತು ಅವರಿಬ್ಬರ ನಡುವೆ ಅತ್ಯಂತ ಘೋರವಾಗಿರುವ, ಅತಿಮಾನುಷವಾದ ಯುದ್ಧವು ನಡೆಯಿತು. ದುರ್ಯೋಧನನ ತಮ್ಮಂದಿರರನ್ನು ದ್ರೌಪದಿಯ ಮಕ್ಕಳು, ಯುಯುತ್ಸುವಿನೊಂದಿಗೆ ಕೂಡಿಕೊಂಡು, ಹಾಗೇ ಶಿಖಂಡಿ ಮೊದಲಾಗಿರುವ ಸೋದರಮಾವಂದಿರೊಂದಿಗೆ ಸೇರಿ  ತಡೆದರು.  ಸಹದೇವನು ಶಕುನಿಯನ್ನೂ, ನಕುಲನು ಉಲೂಕ ಎನ್ನುವ ಶಕುನಿಯ ಮಗನನ್ನೂ, ಧೃಷ್ಟದ್ಯುಮ್ನ ಕೃತವರ್ಮನನ್ನೂ, ಸಾತ್ಯಕಿಯು ಕೃಪಾಚಾರ್ಯರನ್ನೂ ಎದುರಿಸಿದರು. ಅವರ ನಡುವೆ ನಡೆದ ಆ ಯುದ್ಧ ಆಶ್ಚರ್ಯಕರವೂ, ವೇಗಭರಿತವೂ ಆಗಿತ್ತು. ಪ್ರಾಣವನ್ನು ತೆಗೆಯುವ ಗಟ್ಟಿ ನಿರ್ಧಾರವನ್ನು ಹೊಂದಿತ್ತು.  

 

ಶಲ್ಯಸ್ತು ಶರಸಙ್ಘಾತೈಃ ಪಾರ್ತ್ಥಸ್ಯಾSವಾರಯದ್ ದಿಶಃ ।

ಸೋSಪಿ ವಿವ್ಯಾಧ ವಿಶಿಖೈಃ ಶಲ್ಯಮಾಹವಶೋಭಿನಮ್ ॥೨೮.೧೪॥

 

ಶಲ್ಯನಾದರೋ ಬಾಣಗಳಿಂದ ಅರ್ಜುನನ ದಿಕ್ಕುಗಳನ್ನು ತಡೆದನು. ಆಗ ಅರ್ಜುನ ಯುದ್ಧದಲ್ಲಿ ಶೋಭಿಸುತ್ತಿರುವ ಶಲ್ಯನನ್ನು ಬಾಣಗಳಿಂದ ಹೊಡೆದನು.

 

ತಯೋಃ ಸುಸಮಮೇವಾSಸೀಚ್ಚಿರಂ ದೇವಾಸುರೋಪಮಮ್ ।

ತತಃ ಶರಂ ವಜ್ರನಿಭಂ ಮದ್ರರಾಜಃ ಸಮಾದದೇ ॥೨೮.೧೫॥

 

ಅವರಿಬ್ಬರಿಗೂ ಧೀರ್ಘಕಾಲ, ದೇವತೆಗಳಿಗೆ ಮತ್ತು ಅಸುರರಿಗೆ ಆದ ಯುದ್ಧಕ್ಕೆ ಸದೃಶವಾದ ಯುದ್ಧವು ಸಮವಾಗಿ ನಡೆಯಿತು. ತದನಂತರ ವಜ್ರಾಯುಧಕ್ಕೆ ಸಮನಾದ ಬಾಣವನ್ನು ಶಲ್ಯನು ತೆಗೆದುಕೊಂಡ.

 

ತೇನ ವಿವ್ಯಾಧ ಬೀಭತ್ಸುಂ ಹೃದಯೇ ಸ ಮುಮೋಹ ಚ ।

ಉಪಲಭ್ಯ ಪುನಃ ಸಂಜ್ಞಾಂ ವಾಸವಿಃ ಶತ್ರುತಾಪನಃ  ॥೨೮.೧೬॥

 

ಚಿಚ್ಛೇದ ಕಾರ್ಮ್ಮುಕಂ ಸಙ್ಖೇ ಮದ್ರರಾಜಸ್ಯ ಧೀಮತಃ ।

ಸೋSನ್ಯತ್ ಕಾರ್ಮ್ಮುಕಮಾದಾಯ ಮುಮೋಚಾಸ್ತ್ರಾಣಿ ಫಲ್ಗುನೇ ॥೨೮.೧೭॥

 

ಆ ಬಾಣದಿಂದ ಶಲ್ಯ ಅರ್ಜುನನ ಎದೆಗೆ ಹೊಡೆದ. ಆಗ ಅರ್ಜುನ ಮೂರ್ಛೆಹೊಂದಿದ. ಶತ್ರುಗಳನ್ನು ಕಂಗೆಡಿಸುವ ಆ  ಅರ್ಜುನ ಮತ್ತೆ ಅರಿವನ್ನು ಪಡೆದು, ಬುದ್ಧಿವಂತನಾದ ಶಲ್ಯನ ಬಿಲ್ಲನ್ನು ಯುದ್ಧದಲ್ಲಿ ಕತ್ತರಿಸಿದ. ಶಲ್ಯನಾದರೋ, ಇನ್ನೊಂದು ಬಿಲ್ಲನ್ನು ತೆಗೆದುಕೊಂಡು ಅರ್ಜುನನಲ್ಲಿ ಅಸ್ತ್ರಗಳನ್ನು ಬಿಟ್ಟ.

 

ಸೌರಂ ಯಾಮ್ಯಂ ಚ ಪಾರ್ಜ್ಜನ್ಯಂ ತಾನ್ಯೈನ್ದ್ರೇಣ ಜಘಾನ ಸಃ ।

ಪುನರ್ನ್ನ್ಯಕೃನ್ತತ್ ತಚ್ಚಾಪಮಿನ್ದ್ರಸೂನುರಮರ್ಷಿತಃ ॥೨೮.೧೮॥

 

ಶಲ್ಯನ ಸೂರ್ಯದೇವತಾಕವಾದ, ಯಮದೇವತಾಕವಾದ, ಪರ್ಜನ್ಯದೇವತಾಕವಾದ ಅಸ್ತ್ರಗಳನ್ನು ಅರ್ಜುನನು ಐನ್ದ್ರಾಸ್ತ್ರದಿಂದ ನಾಶಮಾಡಿದ ಮತ್ತು ಮುನಿದ ಆ ಇಂದ್ರನ ಮಗನಾದ ಅರ್ಜುನನು ಶಲ್ಯನ ಬಿಲ್ಲನ್ನು ಮತ್ತೆ ಕತ್ತರಿಸಿದ.

Tuesday, June 27, 2023

Mahabharata Tatparya Nirnaya Kannada 28-01-08

 

೨೮. ಪಾಣ್ಡವರಾಜ್ಯಲಾಭಃ

 

̐

ಪ್ರಭಾತಾಯಾಂ ತು ಶರ್ವರ್ಯ್ಯಾಂ ಗುರುಪುತ್ರಾನುಮೋದಿತಃ ।

ಶಲ್ಯಂ ಸೇನಾಪತಿಂ ಕೃತ್ವಾ ಯೋದ್ಧುಂ ದುರ್ಯ್ಯೋಧನೋSಭ್ಯಯಾತ್ ॥೨೮.೦೧॥

 

ರಾತ್ರಿ ಕಳೆದು ಬೆಳಗಾಗುತ್ತಿರಲು(ಯುದ್ಧದ ಹದಿನೆಂಟನೇ ದಿನದಂದು), ದುರ್ಯೋಧನ ಅಶ್ವತ್ಥಾಮಾಚಾರ್ಯರ ಅನುಮತಿಯನ್ನು ಪಡೆದು, ಶಲ್ಯನನ್ನು ಸೇನಾಪತಿಯನ್ನಾಗಿ ಮಾಡಿ, ಯುದ್ಧಮಾಡಲು ತೆರಳಿದನು.

 

ತಮಭ್ಯಯುಃ ಪಾಣ್ಡವಾಶ್ಚ ಹೃಷ್ಟಾ ಯುದ್ಧಾಯ ದಂಸಿತಾಃ ।

ತತ್ರಾSಸೀತ್ ಸುಮಹದ್ ಯುದ್ಧಂ ಪಾಣ್ಡವಾನಾಂ ಪರೈಃ ಸಹ ॥೨೮.೦೨॥

 

ಪಾಂಡವರಾದರೋ, ಅತ್ಯಂತ ಸಂತಸದಿಂದ, ತಮ್ಮ ಕವಚಗಳನ್ನು ತೊಟ್ಟು ಯುದ್ಧಕ್ಕೆಂದು ತೆರಳಿದರು. ಆ ಹದಿನೆಂಟನೆಯ ದಿನ ಪಾಂಡವರಿಗೆ ಇತರರಾದ ಕೌರವರ ಜೊತೆಗೆ ಘೋರವಾದ ಯುದ್ಧ ನಡೆಯಿತು.

 

ಅಗ್ರೇ ಭೀಮಃ ಪಾಣ್ಡವಾನಾಂ ಮದ್ಧ್ಯೇ ರಾಜಾ ಯುಧಿಷ್ಠಿರಃ ।

ಪೃಷ್ಠೇ ಗಾಣ್ಡೀವಧನ್ವಾSSಸೀದ್ ವಾಸುದೇವಾಭಿರಕ್ಷಿತಃ ॥೨೮.೦೩॥

 

ಚಕ್ರರಕ್ಷೌ ಯಮೌ ರಾಜ್ಞೋ ಧೃಷ್ಟದ್ಯುಮ್ನಶ್ಚ ಸಾತ್ಯಕಿಃ ।

ನೃಪಸ್ಯ ಪಾರ್ಶ್ವಯೋರಾಸ್ತಾಮಗ್ರೇSನ್ಯೇಷಾಂ ಗುರೋಃ ಸುತಃ ॥೨೮.೦೪॥

 

ಮದ್ಧ್ಯೇ ಶಲ್ಯಃ ಪೃಷ್ಠತೋSಭೂದ್ ಭ್ರಾತೃಭಿಶ್ಚ ಸುಯೋಧನಃ ।

ಚಕ್ರರಕ್ಷೌ ತು ಶಲ್ಯಸ್ಯ ಶಕುನಿಸ್ತತ್ಸುತಸ್ತಥಾ ॥೨೮.೦೫॥

 

ಕೃಪಶ್ಚ ಕೃತವರ್ಮ್ಮಾ ಚ ಪಾರ್ಶ್ವಯೋಃ ಸಮವಸ್ಥಿತೌ ।

ತತ್ರಾಭವನ್ಮಹದ್ ಯುದ್ಧಂ ಭೀಮಸ್ಯ ದ್ರೌಣಿನಾ ಸಹ  ॥೨೮.೦೬॥

 

ಪಾಂಡವರ ಮುಂಭಾಗದಲ್ಲಿ ಭೀಮಸೇನನೂ, ಮಧ್ಯಭಾಗದಲ್ಲಿ ರಾಜನಾದ ಯುಧಿಷ್ಠಿರನೂ ಇದ್ದನು. ಹಿಂಭಾಗದಲ್ಲಿ ಗಾಣ್ಡೀವ ಹಿಡಿದಿರುವ ಧನುರ್ಧಾರಿ ಅರ್ಜುನನು ಶ್ರೀಕೃಷ್ಣನಿಂದ ರಕ್ಷಿಸಲ್ಪಟ್ಟವನಾಗಿ ಇದ್ದನು. ಯುಧಿಷ್ಠಿರನ ಚಕ್ರರಕ್ಷಕರಾಗಿ ನಕುಲ-ಸಹದೇವರಿದ್ದರು. ಧೃಷ್ಟದ್ಯುಮ್ನ ಮತ್ತು ಸಾತ್ಯಕಿಯೂ ಕೂಡಾ ರಕ್ಷಣೆಗಾಗಿ ಯುಧಿಷ್ಠಿರನ ಪಾರ್ಶ್ವಭಾಗದಲ್ಲಿದ್ದರು. ಹಾಗೆಯೇ ಇತರರಾದ ಕೌರವರ ಮುಂಭಾಗದಲ್ಲಿ ಗುರುಸುತ ಅಶ್ವತ್ಥಾಮನೂ, ಮಧ್ಯದಲ್ಲಿ ಶಲ್ಯನೂ, ಬಹಳ ಹಿಂಭಾಗದಲ್ಲಿ ತನ್ನ ತಮ್ಮಂದಿರರಿಂದ ಕೂಡಿದ ಸುಯೋಧನನೂ ಇದ್ದನು. ಶಲ್ಯನ ಚಕ್ರ ರಕ್ಷಣೆಗೆ ಶಕುನಿ ಮತ್ತವನ ಮಗ ನಿಂತಿದ್ದರು. ಕೃಪ ಮತ್ತು ಕೃತವರ್ಮ ಇಬ್ಬರೂ ಪಾರ್ಶ್ವಭಾಗದಲ್ಲಿದ್ದರು. ಅಲ್ಲಿ ಭೀಮಸೇನ ಹಾಗೂ ಅಶ್ವತ್ಥಾಮನಿಗೆ ಬಹಳ ಮಹತ್ತಾದ ಯುದ್ಧವಾಯಿತು.  

 

ರಾಜ್ಞಃ ಶಲ್ಯೇನ ಚ ತಥಾ ಘೋರರೂಪಂ ಭಯಾನಕಮ್ ।

ತತ್ರ ನಾತಿಪ್ರಯತ್ನೇನ ದ್ರೌಣಿರ್ಭೀಮೇನ ಸಾಯಕೈಃ  ॥೨೮.೦೭॥

 

ವಿರಥೀಕೃತಸ್ತಥಾ ಧರ್ಮ್ಮಸೂನುಃ ಶಲ್ಯೇನ ತತ್ಕ್ಷಣಾತ್ ।

ಆಸಸಾದ ತದಾ ಶಲ್ಯಂ ಕಪಿಪ್ರವರಕೇತನಃ ॥೨೮.೦೮॥

 

ಧರ್ಮರಾಜನಿಗೆ ಶಲ್ಯನೊಂದಿಗೆ ಘೋರವಾದ, ಭಯಾನಕ ಯುದ್ಧ ನಡೆಯಿತು. ಅಲ್ಲಿ ಯಾವುದೇ ಪ್ರಯಾಸವಿಲ್ಲದೇ ಭೀಮಸೇನನ ಬಾಣಗಳಿಂದ ಅಶ್ವತ್ಥಾಮ ರಥಹೀನನಾದ. ಹಾಗೆಯೇ ಶಲ್ಯನಿಂದ ತತ್ಕ್ಷಣದಲ್ಲಿ ಧರ್ಮರಾಜನು ರಥಹೀನನಾದ. ಆಗ ಕಪಿಶ್ರೇಷ್ಠ ಹನುಮಂತನನ್ನು ಧ್ವಜದಲ್ಲಿ ಹೊಂದಿರುವ  ಅರ್ಜುನನು ಶಲ್ಯನನ್ನು ಹೊಂದಿದ.

Thursday, June 15, 2023

Mahabharata Tatparya Nirnaya Kannada 27-187-192

 ಪುನಶ್ಚ ಪಾರ್ತ್ಥೇನ ಮಹಾಸ್ತ್ರಯುದ್ಧಂ ಪ್ರಕುರ್ವತಃ ಸೂರ್ಯ್ಯಸುತಸ್ಯ ಚಕ್ರಮ್ ।

ರಥಸ್ಯ ಭೂಮಿರ್ಗ್ಗ್ರಸತಿ ಸ್ಮ ಶಾಪಾದಸ್ತ್ರಾಣಿ ದಿವ್ಯಾನಿ ಚ ವಿಸ್ಮೃತಿಂ ಯಯುಃ ॥೨೭.೧೮೭ ॥

 

ಪುನಃ ಅರ್ಜುನನೊಂದಿಗೆ ಮಹತ್ತಾದ ಅಸ್ತ್ರಯುದ್ಧ ಮಾಡುತ್ತಿದ್ದ ಕರ್ಣನ ರಥಚಕ್ರವನ್ನು ಭೂಮಿ (ವಿಪ್ರಶಾಪದಿಂದಾಗಿ) ನುಂಗಿತು. ಪರಶುರಾಮದೇವರ ಶಾಪದಿಂದಾಗಿ ಕರ್ಣನಿಗೆ ದಿವ್ಯಾಸ್ತ್ರಗಳು ಮರೆತುಹೋದವು.

 

ಉದ್ಧರ್ತ್ತುಕಾಮೋ ರಥಚಕ್ರಮೇವ ಪಾರ್ತ್ಥಂ ಯಯಾಚೇSವಸರಂ ಪ್ರದಾತುಮ್ ।

ನೇತ್ಯಾಹ ಕೃಷ್ಣೋSಞ್ಜಲಿಕಂ ಸುಘೋರಂ ತ್ರಿನೇತ್ರದತ್ತಂ ಜಗೃಹೇ ಚ ಪಾರ್ತ್ಥಃ ॥೨೭.೧೮೮ ॥

 

ಹೂತುಹೋದ ತನ್ನ ರಥದ ಚಕ್ರವನ್ನು ಮೇಲೆತ್ತಲು ಕರ್ಣ ಅರ್ಜುನನಲ್ಲಿ ಅವಕಾಶವನ್ನು ಬೇಡಿದ. ಕೃಷ್ಣನಿಂದ ‘ಅವಕಾಶ ಕೊಡಬೇಡ ಎಂದು ಹೇಳಲ್ಪಟ್ಟ ಅರ್ಜುನ, ತ್ರಿನೇತ್ರದತ್ತವಾದ, ಭಯಂಕರವಾದ ಅಂಜಲಿಕಾಸ್ತ್ರವನ್ನು ತೆಗೆದುಕೊಂಡ.

 

ಸತ್ಯೇನ ಧರ್ಮ್ಮೇಣ ಚ ಸನ್ನಿಯೋಜ್ಯ ಮುಮೋಚ ಕರ್ಣ್ಣಸ್ಯ ವಧಾಯ ಬಾಣಮ್ ।

ಚಿಚ್ಛೇದ ತೇನೈವ ಚ ತಸ್ಯ ಶೀರ್ಷಂ ಸನ್ಧಿತ್ಸತೋ ಬಾಣವರಂ ಸುಘೋರಮ್ ॥೨೭.೧೮೯ ॥

 

ಅರ್ಜುನನು ತನ್ನಲ್ಲಿರುವ ಸತ್ಯಧರ್ಮವನ್ನು ಆ ಅಂಜಲಿಕಾಸ್ತ್ರದೊಂದಿಗೆ ಕೂಡಿಸಿ ಕರ್ಣನ ಸಂಹಾರಕ್ಕಾಗಿ ಬಾಣವನ್ನು ಬಿಟ್ಟನು. ಕರ್ಣ ಅರ್ಜುನನ ಬಾಣವನ್ನು ಎದುರಿಸಲು ಬಾಣಪ್ರಯೋಗ ಮಾಡುವ ಮೊದಲೇ ಆ ಅಂಜಲಿಕಾಸ್ತ್ರ ಅವನ ತಲೆಯನ್ನು ಕತ್ತರಿಸಿತು.

 

ಅಪರಾಹ್ಣೇSಪರಾಹ್ಣಸ್ಯ ಸೂತಜಸ್ಯೇನ್ದ್ರಸೂನುನಾ ।

ಛಿನ್ನಮಞ್ಜಲಿಕೇನಾSಜೌ ಸೋತ್ಸೇಧಮಪತಚ್ಛಿರಃ ॥೨೭.೧೯೦ ॥

 

ಕರ್ಣನ ಸೇನಾಧಿಪತ್ಯದ ಎರಡನೇ ದಿನದ(ಯುದ್ಧದ ಹದಿನೇಳನೇ ದಿನದ) ಅಪರಾಹ್ಣ ಇಂದ್ರಪುತ್ರ ಅರ್ಜುನ ಸೂರ್ಯಪುತ್ರ ಕರ್ಣನ ತಲೆಯನ್ನು ಕತ್ತರಿಸಿದ. ಕರ್ಣನ ರುಂಡ ವೇಗವಾಗಿ ಆಕಾಶದಲ್ಲಿ ಮೇಲೆ ಹೋಗಿ ಕಳಗೆ ಬಿದ್ದಿತು.

 

ತಸ್ಮಿನ್ ಹತೇ ದೀನಮುಖಃ ಸುಯೋಧನೋ ಯಯೌ ಸಮಾಹೃತ್ಯ ಬಲಂ ಸಶಲ್ಯಃ ।

ಯುಧಿಷ್ಠಿರಃ ಕರ್ಣ್ಣವಧಂ ನಿಶಮ್ಯ ತದಾ ಸಮಾಗತ್ಯ ದದರ್ಶ ತತ್ತನುಮ್ ॥೨೭.೧೯೧ ॥

 

ಕರ್ಣ ಹತನಾಗುತ್ತಿದ್ದಂತೇ ದುಃಖಿತನಾದ ದುರ್ಯೋಧನನು ಶಲ್ಯನಿಂದ ಸಹಿತನಾಗಿ ಸೇನೆಯನ್ನು ಹಿಂದಕ್ಕೆ ತಿರುಗಿಸಿಕೊಂಡು ಹೊರಟುಹೋದನು. ಕರ್ಣಸಂಹಾರವನ್ನು ಕೇಳಿದ ಯುಧಿಷ್ಠಿರ ಅಲ್ಲಿಗೆ ಬಂದು ಕರ್ಣನ ಶರೀರವನ್ನು ಕಂಡನು.

 

ಶಶಂಸ ಕೃಷ್ಣಂ ಚ ಧನಞ್ಜಯಂ ಚ ಭೀಮಂ ಚ ಯೇSನ್ಯೇSಪಿ ಯುಧಿ ಪ್ರವೀರಾಃ ।

ಗತ್ವಾ ಚ ತೇ ಶಿಬಿರಂ ಮೋದಮಾನಾ ಊಷುಃ ಸಕೃಷ್ಣಾಸ್ತದನುಬ್ರತಾಃ ಸದಾ ॥೨೭.೧೯೨ ॥

 

ಯುಧಿಷ್ಠಿರನು ಶ್ರೀಕೃಷ್ಣನನ್ನು, ಅರ್ಜುನನನ್ನು ಹಾಗೂ ಭೀಮಸೇನನನ್ನು ಹೊಗಳಿದನು. ಇತರ ವೀರರನ್ನೂ  ಕೂಡಾ ಯುಧಿಷ್ಠಿರ ಹೊಗಳಿದನು. ಶ್ರೀಕೃಷ್ಣನಿಂದ ಸಹಿತರಾದ, ಸದಾ ಕೃಷ್ಣನನ್ನೇ ಅನುಸರಿಸಿಕೊಂಡಿರುವ ಆ ಪಾಂಡವರು ಶಿಬಿರಕ್ಕೆ ತೆರಳಿ ಸಂತೋಷಹೊಂದಿದವರಾಗಿ ಆವಾಸ ಮಾಡಿದರು.  

 

ಇತಿ ಶ್ರೀಮದಾನನ್ದತೀರ್ತ್ಥಭಗವತ್ಪಾದವಿರಚಿತೇ ಶ್ರಿಮನ್ಮಹಾಭಾರತತಾತ್ಪರ್ಯ್ಯನಿರ್ಣ್ಣಯೇ ಕರ್ಣ್ಣವಧೋನಾಮ     ಸಪ್ತವಿಂಶೋsಧ್ಯಾಯಃ ॥

[ ಆದಿತಃ ಶ್ಲೋಕಾಃ೪೨೪೯+೧೯೨=೪೪೪೧ ]

 

*********


Wednesday, June 14, 2023

Mahabharata Tatparya Nirnaya Kannada 27-181-186

 

ಆಗ್ನೇಯವಾರುಣೈನ್ದ್ರಾದೀನ್ಯೇತಾನ್ಯನ್ಯೋನ್ಯಮೃತ್ಯವೇ ।

ಬ್ರಹ್ಮಾಸ್ತ್ರಮಪ್ಯುಭೌ ತತ್ರ ಪ್ರಯುಜ್ಯಾSನದತಾಂ ರಣೇ ।

ಅನ್ಯೋನ್ಯಾಸ್ತ್ರಪ್ರತೀಘಾತಂ ಕೃತ್ವೋಭೌ ಚ ವಿರೇಜತುಃ           ॥೨೭.೧೮೧ ॥

 

ಒಬ್ಬರನ್ನೊಬ್ಬರು ಕೊಲ್ಲುವುದಕ್ಕಾಗಿ ಆಗ್ನೇಯಾಸ್ತ್ರ, ವಾರುಣಾಸ್ತ್ರ, ಐನ್ದ್ರಾಸ್ತ್ರ ಮೊದಲಾದ ಅಸ್ತ್ರಗಳ ಜೊತೆಗೆ ಬ್ರಹ್ಮಾಸ್ತ್ರವನ್ನೂ ಕೂಡಾ ಕರ್ಣ-ಅರ್ಜುನರು ಪರಸ್ಪರ ಪ್ರಯೋಗಿಸಿಕೊಂಡು ಗರ್ಜಿಸಿದರು ಮತ್ತು ಅಸ್ತ್ರಗಳ ಉಪಶಮನಮಾಡಿಕೊಂಡು ಎಲ್ಲರ ನಡುವೆ ಸಂಚರಿಸಿದರು ಕೂಡಾ.

 

ಕ್ರಮೇಣ ವೃದ್ಧೋರುಬಲೇನ ತತ್ರ ಸುರೇನ್ದ್ರಪುತ್ರೇಣ ವಿರೋಚನಾತ್ಮಜಃ ।

ನಿರಾಕೃತೋ ನಾಗಮಯಂ ಶರೋತ್ತಮಂ ಬ್ರಹ್ಮಾಸ್ತ್ರಯುಕ್ತಂ ವಿಸಸರ್ಜ್ಜ ವಾಸವೌ ॥೨೭.೧೮೨ ॥

 

ಆ ಯುದ್ಧದಲ್ಲಿ ಕ್ರಮೇಣವಾಗಿ ವೃದ್ಧಿಸಲ್ಪಟ್ಟ ಉತ್ಕೃಷ್ಟ ಬಲವುಳ್ಳ ಇಂದ್ರಪುತ್ರ ಅರ್ಜುನನನ್ನು ಎದುರಿಸುವುದು ಕಷ್ಟವಾದಾಗ ಕರ್ಣ ಬ್ರಹ್ಮಾಸ್ತ್ರದಿಂದ ಕೂಡಿದ ನಾಗಾತ್ಮಕವಾದ(ಖಾಂಡವವನ ದಹನದ ಸಮಯದಲ್ಲಿ ಅವಶಿಷ್ಟನಾದ ತಕ್ಷಕನ ಮಗ ಅಶ್ವಸೇನನಿಂದ ಕೂಡಿದ) ಶ್ರೇಷ್ಠ ಬಾಣವನ್ನು ಅರ್ಜುನನ ಮೇಲೆ ಪ್ರಯೋಗಿಸಿದನು.

 

ತಂ ವಾಸುದೇವೋ ರಥಮಾನಮಯ್ಯ ಮೋಘಂ ಚಕಾರಾರ್ಜ್ಜುನತಃ ಕಿರೀಟಮ್ ।

ಚೂರ್ಣ್ಣೀಕೃತಂ ತೇನ ಸುರೇನ್ದ್ರಸೂನೋರ್ದ್ದಿವ್ಯಂ ಯಯೌ ಬಾಣಗತಶ್ಚ ನಾಗಃ ॥೨೭.೧೮೩ ॥

 

ಆಗ ವಾಸುದೇವನು ರಥವನ್ನು ಬಗ್ಗಿಸಿ(ಭೂಮಿಯಲ್ಲಿ ಕುಸಿಯುವಂತೆ ಮಾಡಿ), ಅರ್ಜುನನ ವಿಷಯದಲ್ಲಿ ಆ ನಾಗಬಾಣವನ್ನು ವ್ಯರ್ಥವನ್ನಾಗಿ ಮಾಡಿದನು. ಆ ಬಾಣದಿಂದ ಅರ್ಜುನನ ಕಿರೀಟವು ಚೂರ್ಣೀಕೃತವಾಯಿತು ಮತ್ತು ಬಾಣದಲ್ಲಿದ್ದ ತಕ್ಷಕನ ಮಗ ಅಶ್ವಸೇನನು ಆಗಸದಲ್ಲಿ  (ಕರ್ಣನತ್ತ ಹಿಂತಿರುಗಲು) ಹೋದನು.

 

ನಮಿತೇ ವಾಸುದೇವೇನ ರಥೇ ಪಞ್ಚಾಙ್ಗುಲಂ ಭುವಿ ।

ಅಪಾಙ್ಗದೇಶಮುದ್ದಿಶ್ಯ ಮುಕ್ತೇ ನಾಗೇ ಕಿರೀಟಿನಃ ॥೨೭.೧೮೪ ॥

 

ಭಙ್ಕ್ತ್ವಾ ಕಿರೀಟಂ ವಿಯತಿ ಗಚ್ಛತಿ ಪ್ರಭುಣೋದಿತಃ ।

ಬಾಣೈಸ್ತಕ್ಷಕಪುತ್ರಂ ತಂ ವಾಸವಿಃ ಪೂರ್ವವೈರಿಣಮ್ ॥೨೭.೧೮೫ ॥

 

ಹತ್ವಾ ನಿಪಾತಯಾಮಾಸ ಭೂಮೌ ಕರ್ಣ್ಣಸ್ಯ ಪಶ್ಯತಃ ।

ಬ್ರಹ್ಮಾಸ್ತ್ರಸ್ಯಾತಿವೇಗಿತ್ವಂ ಪ್ರಾಪ್ತಂ ಕರ್ಣ್ಣೇನ ಭಾರ್ಗ್ಗವಾತ್ ॥೨೭.೧೮೬ ॥

 

ಅರ್ಜುನನ ಹಣೆಗೆ ಗುರಿಯಾಗಿ ಬಿಟ್ಟ ಆ ನಾಗಬಾಣವು, ಶ್ರೀಕೃಷ್ಣನಿಂದ ರಥವು ಭೂಮಿಯಲ್ಲಿ ಐದು ಅಂಗುಲ ಕುಸಿಯುವಂತೆ ಮಾಡಿದ್ದರಿಂದ ಅರ್ಜುನನ ಕಿರೀಟವನ್ನು ಛೇದಿಸಿ ಆಕಾಶದಲ್ಲಿ ಹೋಗುತ್ತಿರಲು, ಶ್ರೀಕೃಷ್ಣನಿಂದ ಹೇಳಲ್ಪಟ್ಟ ಅರ್ಜುನನು, ತಕ್ಷಕನ ಮಗನಾದ ಅಶ್ವಸೇನನನ್ನು, ಕರ್ಣ ನೋಡುತ್ತಿರುವಾಗಲೇ ಬಾಣದಿಂದ ಹೊಡೆದು ನೆಲಕ್ಕುರುಳಿಸಿದನು. ಪರಶುರಾಮನ ದೆಸೆಯಿಂದ ಕರ್ಣ ಪ್ರಯೋಗಿಸಿದ್ದ  ಆ ಬ್ರಹ್ಮಾಸ್ತ್ರಕ್ಕೆ ಅತಿವೇಗವಿತ್ತು.(ಹಾಗಾಗಿ ಕಿರೀಟವನ್ನು ಭಂಗ ಮಾಡುವ ಮೊದಲೇ ಅರ್ಜುನ ಅಸ್ತ್ರಪರಿಹಾರ ಮಾಡಲಾಗಲಿಲ್ಲ)

Tuesday, June 13, 2023

Mahabharata Tatparya Nirnaya Kannada 27-171-180

ವವರ್ಷತುಸ್ತೌ ಚ ಮಹಾಸ್ತ್ರಶಸ್ತ್ರೈರ್ಭೀಮೋ ರಥಸ್ಥೋSವರಜಂ ಜುಗೋಪ ।

ಶೈನೇಯಪಾಞ್ಚಾಲಮುಖಾಶ್ಚ ಪಾರ್ತ್ಥಮಾವಾರ್ಯ್ಯ ತಸ್ಥುಃ ಪ್ರಸಭಂ ನದನ್ತಃ ॥೨೭.೧೭೧ ॥

 

ಕರ್ಣಾರ್ಜುನರಿಬ್ಬರೂ ಮಹಾ ಶಸ್ತ್ರಾಸ್ತ್ರಗಳಿಂದ ಪರಸ್ಪರ ವರ್ಷಿಸಿಕೊಂಡರು. ಭೀಮಸೇನ ಅರ್ಜುನನನ್ನು ರಕ್ಷಿಸುವನಾಗಿ ರಥದಲ್ಲಿ ಕುಳಿತ.  ಸಾತ್ಯಕಿ, ದ್ರುಪದ, ಮೊದಲಾದವರು ಅರ್ಜುನನ ರಕ್ಷಣೆಗಾಗಿ ಸುತ್ತುವರಿದು ಗಟ್ಟಿಯಾಗಿ ಗರ್ಜಿಸುತ್ತಾ ನಿಂತರು.

 

ದುರ್ಯ್ಯೋಧನೋ ದ್ರೌಣಿಮುಖಾಶ್ಚ ಕರ್ಣ್ಣಂ ರರಕ್ಷುರಾವಾರ್ಯ್ಯ ತದಾSSಸ ಯುದ್ಧಮ್ ।

ತತ್ರಾರ್ಜ್ಜುನಂ ಬಾಣವರೈಃ ಸ ಕರ್ಣ್ಣಃ ಸಮರ್ದ್ದಯಾಮಾಸ ವಿಶೇಷಯನ್ ರಣೇ ॥೨೭.೧೭೨ ॥

 

ದುರ್ಯೋಧನ, ಅಶ್ವತ್ಥಾಮ, ಮೊದಲಾದ ಎಲ್ಲರೂ ಕರ್ಣನನ್ನು ಸುತ್ತುವರಿದು ಅವನ ರಕ್ಷಕರಾಗಿ ನಿಂತರು. ಆಗ ಪ್ರಾರಂಭವಾದ ಯುದ್ಧದಲ್ಲಿ ಕರ್ಣನು ಬಾಣಗಳ ಸಮೂಹದಿಂದ ಅರ್ಜುನನನ್ನು ಪೀಡಿಸಿದನು.

 

ತದಾ ನದನ್ ಭೀಮಸೇನೋ ಜಗಾದ ಗದಾಂ ಸಮಾದಾಯ ಸಮಾತ್ತರೋಷಃ ।

ಅಹಂ ವೈನಂ ಗದಯಾ ಪೋಥಯಾಮಿ  ತ್ವಂ ವಾ ಜಹೀಮಂ ಸಮುಪಾತ್ತವೀರ್ಯ್ಯಃ ॥೨೭.೧೭೩ ॥

 

ಆಗ ಕೋಪದಿಂದ ತನ್ನ ಗದೆಯನ್ನು ಹಿಡಿದ ಭೀಮಸೇನ ಸಿಂಹನಾದ ಮಾಡುತ್ತಾ, ಅರ್ಜುನನನ್ನು ಕುರಿತು- ‘ನಾನು ಈ ಗದೆಯಿಂದಲೇ ಕರ್ಣನನ್ನು ಕೊಲ್ಲುತ್ತೇನೆ ಅಥವಾ ನೀನು ಹೊಂದಲ್ಪಟ್ಟ ವೀರ್ಯವುಳ್ಳವನಾಗಿ ಅವನನ್ನು ಸಂಹರಿಸು ಎಂದನು.

 

 

 

ಕೃಷ್ಣೋSಪಿ ತಂ ಬೋಧಯಾಮಾಸ ಸಮ್ಯಙ್ ನರಾವೇಶಂ ವ್ಯಞ್ಜಯನ್ ಭೂಯ ಏವ ।

ಸಮೃದ್ಧವೀರ್ಯ್ಯಃ  ಸ ತದಾ ಧನಞ್ಜಯಃ  ಸುಯೋಧನದ್ರೌಣಿಕೃಪಾನ್  ಸಭೋಜಾನ್ ।

ಸಾಕಂ ಚ ಬಾಣೈರ್ವಿರಥಾಂಶ್ಚಕಾರ ವಿವ್ಯಾಧ ತಾನಪ್ಯರಿಹಾ ಸುಪುಙ್ಖೈಃ ॥೨೭.೧೭೪ ॥

 

ಶ್ರೀಕೃಷ್ಣನೂ ಕೂಡಾ ಮತ್ತೆ ಮತ್ತೆ ಅರ್ಜುನನನಿಗೆ ನರಾವೇಶವನ್ನು ನೆನಪಿಸುವವನಾಗಿ ಮಾತನ್ನಾಡಿದನು. ಆಗ ಅರ್ಜುನ ಸಮೃದ್ಧಗೊಂಡ ವೀರ್ಯವುಳ್ಳವನಾಗಿ, ಭೋಜರಾಜನಿಂದ ಕೂಡಿದ ದುರ್ಯೋಧನ, ಅಶ್ವತ್ಥಾಮ, ಕೃಪಾಚಾರ್ಯ ಇವರೆಲ್ಲರನ್ನು ಏಕಕಾಲದಲ್ಲಿ ತನ್ನ ಬಾಣಗಳಿಂದ ರಥಹೀನರನ್ನಾಗಿ ಮಾಡಿದನು. ಶತ್ರು ಸಂಹಾರಕನಾದ ಅರ್ಜುನ ಶೋಭನವಾದ ತೀಕ್ಷ್ಣ  ಬಾಣಗಳಿಂದ ದುರ್ಯೋಧನಾದಿಗಳನ್ನು ಹೊಡೆದನು.

 

ತೇ ಕಿಞ್ಚಿದ್ ದೂರತಸ್ತಸ್ಥುಃ ಪಶ್ಯನ್ತೋ ಯುದ್ಧಮುತ್ತಮಮ್ ।

ಅಮಾನುಷಂ ತತ್ ಪಾರ್ತ್ಥಸ್ಯ ದೃಷ್ಟ್ವಾ ಕರ್ಮ್ಮ ಗುರೋಃ ಸುತಃ ।

ಗೃಹೀತ್ವಾ ಪಾಣಿನಾ ಪಾಣಿಂ ದುರ್ಯ್ಯೋಧನಮಭಾಷತ ॥೨೭.೧೭೫ ॥

 

ಆಗ ದುರ್ಯೋಧನಾದಿಗಳು ಅತ್ಯದ್ಭುತವಾದ ಆ ಯುದ್ಧವನ್ನು ನೋಡುವವರಾಗಿ ಸ್ವಲ್ಪ ದೂರದಲ್ಲಿ ನಿಂತರು. ದ್ರೋಣಪುತ್ರ ಅಶ್ವತ್ಥಾಮ ಅರ್ಜುನನ ಅಲೌಕಿಕವಾದ ಕರ್ಮವನ್ನು ಕಂಡು, ದುರ್ಯೋಧನನ ಕೈಯನ್ನು ಹಿಡಿದು ಮಾತನಾಡಿದನು-  

 

ದೃಷ್ಟಂ ಹಿ ಭೀಮಸ್ಯ ಬಲಂ ತ್ವಯಾSದ್ಯ ತಥೈವ ಪಾರ್ತ್ಥಸ್ಯ ಯಥಾ ಜಿತಾ ವಯಮ್ ।

ಅಲಂ ವಿರೋಧೇನ ಸಮೇತ್ಯ ಪಾಣ್ಡವೈಃ ಪ್ರಶಾಧಿ ರಾಜ್ಯಂ ಚ ಮಯಾ ಸಮೇತಃ ॥೨೭.೧೭೬ ॥

 

ಭೀಮಸೇನ ಮತ್ತು ಅರ್ಜುನರ ಬಲದಿಂದ ನಾವು ಪರಾಜಿತರಾಗಿರುವುದು ನಿನ್ನಿಂದ ಕಾಣಲ್ಪಟ್ಟಿತಷ್ಟೇ. ವಿರೋಧ ಸಾಕು. ಪಾಂಡವರಿಂದ ಕೂಡಿಕೊಂಡು ರಾಜ್ಯಪಾಲನೆ ಮಾಡು. ನಾನು ನಿನ್ನೊಂದಿಗಿದ್ದೇನೆ.

 

'ಧನಞ್ಜಯಸ್ತಿಷ್ಠತಿ ವಾರಿತೋ ಮಯಾ ಜನಾರ್ದ್ದನೋ ನೈವ ವಿರೋಧಮಿಚ್ಛತಿ ।

ವೃಕೋದರಸ್ತದ್ವಚನೇ ಸ್ಥಿತಃ ಸದಾ ಯುಧಿಷ್ಠಿರಃ ಶಾನ್ತಮನಾಸ್ತಥಾ ಯಮೌ' ॥೨೭.೧೭೭ ॥

 

ಹಿತಾರ್ತ್ಥಮೇತತ್ ತವ ವಾಕ್ಯಮೀರಿತಂ ಗೃಹಾಣ ಮೇ ನೈವ ಭಯಾದುದೀರಿತಮ್ ।

ಅಹಂ ಹ್ಯವದ್ಧ್ಯೋ ಮಮ ಚೈವ ಮಾತುಲೋ ನ ಶಙ್ಕಿತುಂ ಮೇ ವಚನಂ ತ್ವಮರ್ಹಸಿ ॥೨೭.೧೭೮ ॥

 

ಅರ್ಜುನ ನನ್ನಿಂದ ತಡೆಯಲ್ಪಟ್ಟವನಾಗಿ ಯುದ್ಧವನ್ನು ನಿಲ್ಲಿಸುತ್ತಾನೆ. ಶ್ರೀಕೃಷ್ಣ ವಿರೋಧವನ್ನು ಇಚ್ಛಿಸುವುದೇ ಇಲ್ಲ. ಭೀಮಸೇನ ಕೃಷ್ಣನ ಮಾತಿನಂತೆ ನಡೆಯುತ್ತಾನೆ. ಧರ್ಮರಾಜ ಶಾಂತವಾದ ಮನಸುಳ್ಳವನಾಗಿರುತ್ತಾನೆ. ನಕುಲ-ಸಹದೇವರೂ ಕೂಡಾ ಶಾಂತರಾಗುತ್ತಾರೆ. ನಿನ್ನ ಹಿತಕ್ಕಾಗಿ ನನ್ನ ಈ ಮಾತನ್ನು ಸ್ವೀಕರಿಸು. ನಾನು ಈ ಮಾತನ್ನು ಭಯದಿಂದ ಹೇಳುತ್ತಿಲ್ಲ. ನಾನು ಮತ್ತು ಕೃಪಾಚಾರ್ಯರು ಅವಧ್ಯರು. ಹೀಗಾಗಿ ನನ್ನ ಮಾತನ್ನು ಶಂಕಿಸಬೇಡ.

 

ಇತೀರಿತಃ ಪ್ರಾಹ ಸುಯೋಧನಸ್ತಂ ದುಃಶಾಸನಸ್ಯಾದ್ಯ ಪಪೌ ಹಿ ಶೋಣಿತಮ್ ।

ಶಾರ್ದ್ದೂಲಚೇಷ್ಟಾಮಕರೋಚ್ಚ ಭೀಮೋ ನ ಮೇ ಕಥಞ್ಚಿತ್ ತದನೇನ ಸನ್ಧಿಃ ॥೨೭.೧೭೯॥

 

ಈರೀತಿ ಅಶ್ವತ್ಥಾಮನಿಂದ ಹೇಳಲ್ಪಟ್ಟ ಸುಯೋಧನ ಹೇಳುತ್ತಾನೆ- ‘ಭೀಮಸೇನ ಈಗಷ್ಟೇ ದುಃಶ್ಯಾಸನನ ರಕ್ತವನ್ನು ಪಾನ ಮಾಡಿದ್ದಾನೆ. ಹುಲಿ ಚೇಷ್ಟೆಯನ್ನೂ ಕೂಡಾ ಮಾಡಿರುವನು. ಹೀಗಾಗಿ ಯಾವ ಕಾರಣಕ್ಕೂ ಭೀಮಸೇನನೊಂದಿಗೆ ಸಂಧಾನ ಸಾಧ್ಯವಿಲ್ಲ’.

 

ಇತ್ಯುಕ್ತೋ ದ್ರೌಣಿರಾಸೀತ್ ಸ ತೂಷ್ಣೀಂ ಕರ್ಣ್ಣಧನಞ್ಜಯೌ ।

ಮಹಾಸ್ತ್ರಶಸ್ತ್ರವರ್ಷೇಣ ಚಕ್ರತುಃ ಖಮನನ್ತರಮ್ ॥೨೭.೧೮೦ ॥

 

ದುರ್ಯೋಧನನಿಂದ ಈ ರೀತಿ ಹೇಳಲ್ಪಟ್ಟ ಅಶ್ವತ್ಥಾಮಾಚಾರ್ಯರು ಸುಮ್ಮನಾದರು. ಕರ್ಣ-ಅರ್ಜುನರಿಬ್ಬರೂ ಮಹತ್ತಾದ ಅಸ್ತ್ರ-ಶಸ್ತ್ರಗಳ ವೃಷ್ಟಿಯಿಂದ ಆಕಾಶವನ್ನು ತುಂಬಿದರು.