ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Thursday, December 21, 2017

Mahabharata Tatparya Nirnaya Kannada 2.42- 2.62

 

ಭೂಭಾರಕ್ಷಪಣೇ ಸಾಕ್ಷಾದಙ್ಗಂ ಭೀಮವದೀಶಿತುಃ ।

ಹನ್ತಾ ಚ ವೈರಹೇತುಶ್ಚ ಭೀಮಃ ಪಾಪಜನಸ್ಯ ತು         ॥೨.೪೨

 

ದ್ರೌಪದೀ ವೈರಹೇತುಃ ಸಾ ತಸ್ಮಾದ್ ಭೀಮಾದನನ್ತರಾ ।

ಬಲದೇವಸ್ತತಃ ಪಶ್ಚಾತ್ ತತಃ ಪಶ್ಚಾಚ್ಚ ಫಲ್ಗುನಃ         ॥೨.೪೩

 

ನರಾವೇಶಾದನ್ಯಥಾ ತು ದ್ರೌಣಿಃ ಪಶ್ಚಾತ್ ತತೋsಪರೇ ।

ರಾಮವಜ್ಜಾಮ್ಬವತ್ಯಾದ್ಯಾಃ ಷಟ್ ತತೋ ರೇವತೀ ತಥಾ ॥೨.೪೪

 

ಲಕ್ಷ್ಮಣೋ ಹನುಮತ್ಪಶ್ಚಾತ್ ತತೋ ಭರತವಾಲಿನೌ

ಶತ್ರುಘ್ನಸ್ತು ತತಃ ಪಶ್ಚಾತ್ ಸುಗ್ರೀವಾದ್ಯಾಸ್ತತೋsವರಾಃ  ॥೨.೪೫

 

ದ್ರೌಪದಿ ಭೂಭಾರವನ್ನ ನಾಶ ಮಾಡುವುದರಲ್ಲಿ ಭೀಮನಂತೆಯೇ ಮಂಚೂಣಿಯಲ್ಲಿ ಪರಮಾತ್ಮನಿಗೆ ಸಹಾಯಕಳಾಗಿದ್ದಳು. ಭೀಮ ವೈರಕ್ಕೆ ಕಾರಣನೂ ಆದ ಮತ್ತು ದುಷ್ಟರನ್ನು ಕೊಂದ.  ದ್ರೌಪದಿ  ಕೊಲ್ಲಲಿಲ್ಲ ಆದರೆ ದುಷ್ಟರೆಲ್ಲರಿಗೂ ಕೂಡಾ ವೈರಕ್ಕೆ ಕಾರಣಳಾಗಿ ನಿಂತಳು.  ಅಂದರೆ ಶತ್ರುತ್ವ ಬರುವಂತೆ ನೋಡಿಕೊಂಡಳು.

[ದುಷ್ಟರಾದ  ದುರ್ಯೋಧನಾದಿಗಳು, ಜಯದ್ರತಾದಿಗಳು ದ್ರೌಪದಿಯನ್ನು ಬಯಸಿ ತಮ್ಮ ನಾಶಕ್ಕೆ ತಾವೇ ಕಾರಣರಾದರು.  ಸಾಧಕರು ದ್ರೌಪದಿಯನ್ನು ಗುಣವಂತೆ ಎಂದು ಭಕ್ತಿ ಮಾಡಿದರೆ, ದುಷ್ಟರು ಅವಳು ನಮಗೆ ಬೇಕು ಎಂದು ಮುಂದುವರಿದರು. ಹೀಗಾಗಿ ದ್ರೌಪದಿ  ವೈರಕ್ಕೆ ಹೇತುವಾದಳು. ಭಾರತೀ ದೇವಿಯ ರೂಪಿಣಿಯಾದ  ದ್ರೌಪದಿಯಲ್ಲಿ ಎಲ್ಲಾ  ಶಕ್ತಿ ಇದ್ದಿದ್ದರೂ ಕೂಡಾ,   ಪರಮಾತ್ಮನ ಇಚ್ಛೆಗನುಗುಣವಾಗಿ ಆಕೆ ನೇರವಾಗಿ ಸಂಹಾರ ಮಾಡಲಿಲ್ಲ].

ಭೀಮನ ನಂತರ ಭೂಭಾರ  ಹರಣ ಕಾರ್ಯದಲ್ಲಿ ಭಗವಂತನಿಗೆ ಸಹಾಯಕರಾಗಿ ನಿಂತವರು ಕ್ರಮವಾಗಿ ಬಲರಾಮ, ಶೇಷನ ಆವೇಶ ಇದ್ದ ಅರ್ಜುನ ನಂತರ ದ್ರೋಣಪುತ್ರ ಅಶ್ವತ್ಥಾಮ.  ಆಮೇಲೆ ಉಳಿದವರೆಲ್ಲರೂ ಬರುತ್ತಾರೆ.

[ಇಲ್ಲಿ ತಾರತಮ್ಯದಲ್ಲಿ ಇಂದ್ರನಿಗಿಂತ ಎತ್ತರದಲ್ಲಿರುವ  ಶಿವನ ಅವತಾರವಾದ ಅಶ್ವತ್ಥಾಮನನ್ನು ಇಂದ್ರನ ಅವತಾರವಾದ ಅರ್ಜುನನ ನಂತರ ಹೇಳಿರುವುದನ್ನು ಕಾಣುತ್ತೇವೆ.  ಅರ್ಜುನನನಲ್ಲಿ ಶೇಷನ ಆವೇಶ ಇದ್ದುದರಿಂದ ಆತ   ಅಶ್ವತ್ಥಾಮನಿಗಿಂತ ಮಿಗಿಲಾಗಿ ನಿಂತ].

ಬಲರಾಮನಿಗೆ ಸಮಾನವಾಗಿದ್ದು  ಸ್ತ್ರೀ ಪ್ರಪಂಚದಲ್ಲಿ ನಿಂತವರು ಜಾಂಬವತಿ ಮೊದಲಾದ ಷಣ್ಮಹಿಷಿಯರು.  ಅವರಾದ ಮೇಲೆ ರೇವತಿ.  ಇದು ಮಹಾಭಾರತದಲ್ಲಿರುವ ಸ್ತ್ರೀಪಾತ್ರ ಮತ್ತು ಪುರುಷ ಪಾತ್ರಗಳನ್ನು ನಾವು ಹೇಗೆ ನೋಡಬೇಕು,  ಯಾವ ರೀತಿ ಮತ್ತು ಹೇಗೆ ತಾರತಮ್ಯವನ್ನು ಚಿಂತನೆ ಮಾಡಬೇಕು ಎನ್ನುವುದರ  ಒಂದು ಸಂಕ್ಷಿಪ್ತ ನೋಟ.

ರಾಮಾಯಣದಲ್ಲಿ ನೋಡಿದರೆ ಹನುಮಂತನ ನಂತರ ಲಕ್ಷ್ಮಣ ರಾಮ ಕಾರ್ಯದಲ್ಲಿ ಸಹಾಯಕನಾಗಿದ್ದ ಪ್ರಮುಖ. ಅದಾದಮೇಲೆ ಭರತ ಮತ್ತು ವಾಲೀ, ನಂತರ  ಶತ್ರುಘ್ನ, ತದನಂತರ ಸುಗ್ರೀವ ಮೊದಲಾದವರು ಬರುತ್ತಾರೆ.

[ಕೆಲವರು ರಾಮಾಯಣ ಮತ್ತು ಮಹಾಭಾರತವನ್ನು ನೋಡಿದಾಗ  ರಾಮನ  ಕಾಲದಲ್ಲಿ ಏನೊಂದು ಔನ್ನತ್ಯ ಇತ್ತೋ  ಅದು ಮಹಾಭಾರತದಲ್ಲಿ ಕುಸಿಯಿತು ಎಂದು ಹೇಳುವುದಿದೆ. ಆದರೆ ಹಾಗೇನೂ ಇಲ್ಲ. ಇಲ್ಲಿ ನಾವು ಸ್ಪಷ್ಟವಾಗಿ  ರಾಮಾವತಾರ ಮತ್ತು ಕೃಷ್ಣಾವತಾರ ಇವುಗಳ ನಡುವಣ ವ್ಯತ್ಯಾಸವೇನು ಎನ್ನುವುದನ್ನು ತಿಳಿದಿರಬೇಕು.  ಅಲ್ಲಿ ಏಕೆ ಹಾಗಿದೆ,  ಇಲ್ಲಿ ಏಕೆ ಹೀಗಿದೆ ಎನ್ನುವುದನ್ನು ಆಚಾರ್ಯರು ಮುಂದಿನ ಶ್ಲೋಕಗಳಲ್ಲಿ ಸ್ಪಷ್ಟಪಡಿಸಿದ್ದಾರೆ].

 

ರಾಮಕಾರ್ಯ್ಯಂ ತು ಯೈಃ ಸಮ್ಯಕ್ ಸ್ವಯೋಗ್ಯಂ ನ ಕೃತಂ ಪುರಾ ।

ತೈಃ ಪೂರಿತಂ ತತ್ ಕೃಷ್ಣಾಯ ಬೀಭತ್ಸ್ವಾದ್ಯೈಃ ಸಮನ್ತತಃ ॥೨.೪೬

 

ನರಸಿಂಹ, ವಾಮನ, ಕಪಿಲ,ಇತ್ಯಾದಿ ಯಾವುದೇ ಅವತಾರದಲ್ಲಿ ದೇವತೆಗಳ ಸಾಧನಾ ನಿರ್ಣಯ ಇಲ್ಲ. ದೇವತೆಗಳ ಸಾಧನಾ ನಿರ್ಣಯ ಇರುವುದು ರಾಮಾವತಾರ ಮತ್ತು ಕೃಷ್ಣಾವತಾರಗಳಲ್ಲಿ. [ವೇದವ್ಯಾಸ ಅವತಾರ ಇವೆರಡರ ನಡುವೆಯೇ ಬರುತ್ತದೆ]. ಅದರಿಂದಾಗಿ ದೇವತೆಗಳ ಸಾಧನಾ ನಿರ್ಣಯ ಎನ್ನುವುದೇ ರಾಮಾವತಾರ ಮತ್ತು ಕೃಷ್ಣಾವತಾರದ ವಿಶೇಷತೆ. ಯಾರು ತಮಗೆ ಯೋಗ್ಯವಾದ ರಾಮನ ಕೆಲಸದಿಂದ ವಂಚಿತರಾದರೋ, ಅಂತವರು ಕೃಷ್ಣಾವತಾರದ ಕಾಲದಲ್ಲಿ ತಮ್ಮ ಸಾಧನೆಗೆ ಅನುಗುಣವಾದ ಪುಣ್ಯವನ್ನು ಸಂಪಾದಿಸಿದರು [ಉದಾಹರಣೆಗೆ: ಯಾವುದೋ ಕಾರಣದಿಂದ ವಾಲಿ ರಾಮನ ಕಾರ್ಯವನ್ನು ಮಾಡಲಿಲ್ಲ. ಆದರೆ ಕೃಷ್ಣಾವತಾರ ಕಾಲದಲ್ಲಿ ಅರ್ಜುನರೂಪಿಯಾಗಿ ನಾರಾಯಣನ ಸಮೀಪದಲ್ಲಿಯೇ ಇದ್ದು, ತನಗೆ ಯೋಗ್ಯವಾದ ಸಾಧನೆಯನ್ನು ಮಾಡುವಂತಹ  ಭಾಗ್ಯವನ್ನು ಆತ ಪಡೆದ].

 

ಅಧಿಕಂ ಯೈಃ ಕೃತಂ ತತ್ರ ತೈರೂನಂ ಕೃತಮತ್ರ ತತ್ ।

ಕರ್ಣ್ಣಾದ್ಯೈರಧಿಕಂ ಯೈಸ್ತು ಪ್ರಾದುರ್ಭಾವದ್ವಯೇ ಕೃತಮ್ ॥೨.೪೭

 

ವಿವಿದಾದ್ಯೈರ್ಹಿ ತೈಃ ಪಶ್ಚಾದ್ ವಿಪ್ರತೀಪಂ ಕೃತಂ ಹರೇಃ ।

ಪ್ರಾದುರ್ಭಾವದ್ವಯೇ ಹ್ಯಸ್ಮಿನ್ ಸರ್ವೇಷಾಂ ನಿರ್ಣ್ಣಯಃ ಕೃತಃ  ॥೨.೪೮

 

ನೈತಯೋರಕೃತಂ ಕಿಞ್ಚಿಚ್ಛುಭಂ ವಾ ಯದಿವಾsಶುಭಮ್ ।

ಅನ್ಯತ್ರ ಪೂರ್ಯ್ಯತೇ ಕ್ವಾಪಿ ತಸ್ಮಾದತ್ರೈವ ನಿರ್ಣ್ಣಯಃ ॥೨.೪೯

 

ರಾಮಾವತಾರದಲ್ಲಿ ಯಾರು  ತಮ್ಮ ಯೋಗ್ಯತೆಗೆ ಮೀರಿ ಕೆಲಸವನ್ನು ಮಾಡಿದರೋ ಅವರು ಕೃಷ್ಣಾವತಾರದಲ್ಲಿ ಕಡಿಮೆ ಪುಣ್ಯವನ್ನು ಮಾಡಿದರು. [ಉದಾಹರಣೆಗೆ:  ಸುಗ್ರೀವ (ಮಹಾಭಾರತದಲ್ಲಿ ಕರ್ಣ) ಮೊದಲಾದವರು ರಾಮಾವತಾರದಲ್ಲಿ ತಮ್ಮ ಯೋಗ್ಯತೆಗಿಂತ ಮಿಗಿಲಾದ ಸೇವೆಯನ್ನು ದೇವರಿಗೆ ಸಲ್ಲಿಸಿದ್ದರಿಂದ ಕೃಷ್ಣಾವತಾರ ಕಾಲದಲ್ಲಿ ವಿರುದ್ದವಾದ ಕಾರ್ಯ ಮಾಡುವಂತಾಯಿತು]

ಕೃಷ್ಣಾವತಾರ ಕಾಲದಲ್ಲಿ ಮತ್ತು ರಾಮಾವತಾರ ಕಾಲದಲ್ಲಿ ಎಲ್ಲಾ ದೇವತೆಗಳ ಸ್ವರೂಪ ನಿರ್ಣಯವು ಮಾಡಲ್ಪಟ್ಟಿದೆ. ಈ ಎರಡು ಅವತಾರ ಕಾಲದಲ್ಲಿ ದೇವತೆಗಳು ಮಾಡಿದ ಪುಣ್ಯಪಾಪಗಳ ಲೆಕ್ಕ ಬೇರೆ ಕಡೆ ಸರಿ ಹೋಗುವುದಿಲ್ಲ. ಬೇರೆ ಅವತಾರಗಳಲ್ಲಿ ದೇವತೆಗಳ ಸಾಧನಾ ನಿರ್ಣಯ ಎನ್ನುವುದೇ ಇಲ್ಲ. ಈ ಕಾರಣದಿಂದ ಯಾವುದೇ  ದೇವತೆಯ ಯೋಗ್ಯತೆ ಮತ್ತು ಸ್ವರೂಪ  ಒಂದೋ ರಾಮಾವತಾರದಲ್ಲಿ ಆಗಬೇಕು, ಇಲ್ಲಾ ಕೃಷ್ಣಾವತಾರದಲ್ಲಿ ಆಗಬೇಕು. ಹೀಗಾಗಿ ದೇವತಾ ಸ್ವರೂಪ ಮೀಮಾಂಸೆ ಎನ್ನುವುದು ರಾಮಾವತಾರ ಹಾಗೂ ಕೃಷ್ಣಾವತಾರದಲ್ಲಿ ಸ್ಪಷ್ಟವಾಗಿ ಕಾಣುತ್ತದೆ.

 

ಪಶ್ಚಾತ್ತನತ್ವಾತ್ ಕೃಷ್ಣಸ್ಯ ವೈಶೇಷ್ಯಾತ್ ತತ್ರ ನಿರ್ಣ್ಣಯಃ ।

ಪ್ರಾದುರ್ಭಾವಮಿಮಂ ತಸ್ಮಾದ್ ಗೃಹೀತ್ವಾ ಭಾರತಂ ಕೃತಮ್ ॥೨.೫೦

 

ಕೃಷ್ಣಾವತಾರ ರಾಮಾವತಾರದ ನಂತರ ಆಗಿರುವುದರಿಂದ ಮಹಾಭಾರತದಲ್ಲಿಯೇ  ದೇವತಾ ಸ್ವರೂಪ ಮೀಮಾಂಸೆಯ ನಿರ್ಣಯ ಕಾಣಸಿಗುವುದು . ರಾಮಾವತಾರದಲ್ಲಿ ದೇವತೆಗಳ ಸ್ವರೂಪ ಮೀಮಾಂಸೆ ಎನ್ನುವುದು ಸಂಪೂರ್ಣವಾಗಿ ಆಗಲಿಲ್ಲ. ಆದರೆ ಅದು ಕೃಷ್ಣಾವತಾರದಲ್ಲಿ ವಿಶೇಷವಾಗಿ ಸಂಪೂರ್ಣವಾಗುತ್ತದೆ. ಅದರಿಂದ ಕೃಷ್ಣಾವತಾರವನ್ನು ಇಟ್ಟುಕೊಂಡೇ ವೇದವ್ಯಾಸರು ಮಹಾಭಾರತವನ್ನು ರಚಿಸಿದರು.

[ವೇದವ್ಯಾಸರು  ಬೇರೆ ಅವತಾರ ರೂಪಗಳನ್ನು ಅವಲಂಭಿಸಿ ಮಹಾಭಾರತವನ್ನು ಬರೆಯಬಹುದಿತ್ತು. ಆದರೆ ಅದು ದೇವತಾ ಸ್ವರೂಪ ಮೀಮಾಂಸೆ ಆಗುತ್ತಿರಲಿಲ್ಲ.  ದೇವತೆಗಳ ತಾರತಮ್ಯ ತಿಳಿಯದೇ ಮುಕ್ತಿ ಸಿಗುವ ಹಾಗಿಲ್ಲ.  ದೇವರು ಎಷ್ಟು ದೊಡ್ಡವ ಎನ್ನುವುದು ಗೊತ್ತಾಗಬೇಕಾದರೆ ಅವನಿಗಿಂತ ಎಷ್ಟು ಜನ ಚಿಕ್ಕವರಿದ್ದಾರೆ ಎನ್ನುವುದೂ ಗೊತ್ತಾಗಬೇಕು. ಅದರಿಂದಾಗಿ ದೇವತಾ ಸ್ವರೂಪ ಮೀಮಾಂಸೆ ತಿಳಿಯುವುದು ಸಾಧಕರಿಗೆ ಅತ್ಯಾವಶ್ಯಕ. ಇಂತಹ  ದೇವತೆಗಳ ಸ್ವರೂಪ ಮೀಮಾಂಸೆ ಬೇರೆ ಅವತಾರಗಳಲ್ಲಿ ಆಗಿಲ್ಲ. ಅದರಿಂದ ಕೃಷ್ಣಾವತಾರ ಎನ್ನುವುದು ವಿಶೇಷ. ಹೀಗಾಗಿ  ವಿಶೇಷವಾದ ಕೃಷ್ಣಾವತಾರವನ್ನು ಇಟ್ಟುಕೊಂಡೇ  ಮಹಾಭಾರತ ವೇದವ್ಯಾಸರಿಂದ ರಚಿಸಲ್ಪಟ್ಟಿತು].

 

ಉಕ್ತಾ ರಾಮಕಥಾsಪ್ಯಸ್ಮಿನ್ ಮಾರ್ಕ್ಕಣ್ಡೇಯಸಮಾಸ್ಯಯಾ

ತಸ್ಮಾದ್ ಯದ್ ಭಾರತೇ ನೋಕ್ತಂ ತದ್ಧಿ ನೈವಾಸ್ತಿ ಕುತ್ರಚಿತ್ ೨.೫೧

 

ಅತ್ರೋಕ್ತಂ ಸರ್ವಶಾಸ್ತ್ರೇಷು ನಹಿ ಸಮ್ಯಗುದಾಹೃತಮ್

ಇತ್ಯಾದಿ ಕಥಿತಂ ಸರ್ವಂ ಬ್ರಹ್ಮಾಣ್ಡೇ ಹರಿಣಾ ಸ್ವಯಮ್ ೨.೫೨

 

ಮಾರ್ಕ್ಕಣ್ಡೇಯೇsಪಿ ಕಥಿತಂ ಭಾರತಸ್ಯ ಪ್ರಶಂಸನಮ್ ।

ದೇವತಾನಾಂ ಯಥಾ ವ್ಯಾಸೋ ದ್ವಿಪದಾಂ ಬ್ರಾಹ್ಮಣೋ ವರಃ ॥೨.೫೩

 

ಆಯುಧಾನಾಂ ಯಥಾ ವಜ್ರಮೋಷಧೀನಾಂ ಯಥಾ ಯವಾಃ ।

ತಥೈವ ಸರ್ವಶಾಸ್ತ್ರಾಣಾಂ ಮಹಾಭಾರತಮುತ್ತಮಮ್೨.೫೪

 

ಮಹಾಭಾರತದಲ್ಲಿ ಮಾರ್ಕಂಡೇಯರ ಜೊತೆಗೆ ಕುಳಿತಾಗ ಅಲ್ಲಿ ರಾಮನ ಕಥೆಯೂ ಹೇಳಲ್ಪಟ್ಟಿದೆ. ಅದರಿಂದ, ಮಹಾಭಾರತ ಎನ್ನುವುದು ರಾಮನ ಕಥೆಯನ್ನೂ ಒಳಗೊಂಡಿದೆ.  ಆದರೆ ವಿಶೇಷವಾಗಿ ದೇವತಾ ಸ್ವರೂಪ ನಿರ್ಣಯದ ಸಲುವಾಗಿ ಮಹಾಭಾರತ ಕೃಷ್ಣನನ್ನು ಹೇಳುತ್ತದೆ. ಬೇರೆ ಅವತಾರಗಳನ್ನೂ ಕೂಡಾ ಇಲ್ಲಿ ಹೇಳಿದ್ದಾರೆ. [ಉದಾಹರಣೆಗೆ: ಮತ್ಸ್ಯಾವತಾರವನ್ನು ವನಪರ್ವದಲ್ಲಿ, ನರಸಿಂಹಾವತಾರವನ್ನು ಶಾಂತಿ ಪರ್ವದಲ್ಲಿ ಹೇಳಲಾಗಿದೆ]. ಮಹಾಭಾರತದಲ್ಲಿ ಹೇಳದ  ಯಾವುದೇ ಭಗವಂತನ ಅವತಾರ ರೂಪವನ್ನು ನಾವು ಇನ್ನೆಲ್ಲಿಯೂ ಕಾಣಲು ಸಾಧ್ಯವಿಲ್ಲ.  ಏಕೆಂದರೆ ಎಲ್ಲವನ್ನೂ ಮಹಾಭಾರತದಲ್ಲಿ ಹೇಳಲಾಗಿದೆ.

ಮಹಾಭಾರತದಲ್ಲಿ ಹೇಳಲಾದ  ವಿಷಯಗಳು ಇತರ  ಶಾಸ್ತ್ರಗಳಲ್ಲಿ ಚೆನ್ನಾಗಿ ವರ್ಣಿತವಾಗಿಲ್ಲ. ಆದರೆ ಬೇರೆ ಶಾಸ್ತ್ರಗಳಲ್ಲಿ  ಏನನ್ನು ಹೇಳಿದ್ದಾರೋ ಅದು  ಮಹಾಭಾರತದಲ್ಲಿ ಬರುತ್ತದೆ.  ಸ್ವಯಂ ನಾರಾಯಣನೇ  ಈ ಮಾತನ್ನು ಹೇಳಿರುವುದನ್ನು ಬ್ರಹ್ಮಾಂಡ ಪುರಾಣ ವಿವರಿಸುತ್ತದೆ.

[ಉದಾಹರಣೆಗೆ:  ಬೇರೆ ಶಾಸ್ತ್ರಗಳಲ್ಲಿ ರಾಜನೀತಿ, ರಾಜಕೀಯ, ರಾಷ್ಟ್ರದ ಚರಿತ್ರೆ, ಇತ್ಯಾದಿಗಳೆಲ್ಲವನ್ನು ಚೆನ್ನಾಗಿ ಹೇಳಿಲ್ಲ. ಆದರೆ ಅದನ್ನು ಮಹಾಭಾರತ ಹೇಳುತ್ತದೆ. ಮನುಷ್ಯನ ಸ್ವಭಾವ ಮೀಮಾಂಸೆ, ಮನುಷ್ಯನ ಸಂಬಂಧ, ಇವುಗಳನ್ನೆಲ್ಲ ಬೇರೆ ಗ್ರಂಥಗಳಲ್ಲಿ ಹೇಳಲಿಲ್ಲ. ಮಹಾಭಾರತದಲ್ಲಿ ಅದನ್ನೂ ಹೇಳಿದ್ದಾರೆ. ಅದರಿಂದಾಗಿ ಮಹಾಭಾರತದಲ್ಲಿ ಹೇಳದ್ದನ್ನು ಎಲ್ಲಿಯೂ ಹೇಳಿಲ್ಲ ಎಂದು ಇಲ್ಲಿ ಸ್ಫುಟವಾಗಿ ಹೇಳಿದ್ದಾರೆ]. 

ಮಾರ್ಕಂಡೇಯ ಪುರಾಣವೂ ಕೂಡಾ  ಮಹಾಭಾರತದ ಬಗ್ಗೆ ಇದೇ ಮಾತನ್ನು ಹೇಳುತ್ತದೆ. ಅಲ್ಲಿ ಹೇಳುವಂತೆ: ದೇವತೆಗಳಲ್ಲಿ ನಾರಾಯಣ ಹೇಗೆ ಶ್ರೇಷ್ಠನೋ;  ಎರಡು ಕಾಲಿರುವ ಜೀವಿಗಳಲ್ಲಿ ಬ್ರಹ್ಮಜ್ಞಾನಿ ಯಾವ ರೀತಿ ಶ್ರೇಷ್ಠನೋ;  ಆಯುಧಗಳಲ್ಲಿ ವಜ್ರಾಯುಧ ಯಾವ ರೀತಿ ಶ್ರೇಷ್ಠವೋ;  ಧಾನ್ಯಗಳಲ್ಲಿ ಜವೆಗೋಧಿ^ ಹೇಗೆ ಶ್ರೇಷ್ಠವೋ  ಹಾಗೇ, ಎಲ್ಲಾ  ಶಾಸ್ತ್ರಗಳಲ್ಲಿ ಮಹಾಭಾರತವೇ ಮಿಗಿಲು.

 [^ಇಲ್ಲಿ ‘ಯವ’ ಎನ್ನುವುದಕ್ಕೆ  ಬತ್ತ ಎಂದೂ ಅರ್ಥ ಮಾಡುತ್ತಾರೆ.  ಕನಕದಾಸರು ‘ರಾಮಧಾನ್ಯಚರಿತ್ರೆ’ ಎಂದು ಒಂದು ಖಂಡಕಾವ್ಯವನ್ನು ರಚಿಸಿದ್ದಾರೆ.  ಅದರಲ್ಲಿ ಅಕ್ಕಿಗಿಂತಲೂ ಗೋಧಿ ಶ್ರೇಷ್ಠ ಎಂದು ಸಮರ್ಥನೆ ಮಾಡಿರುವುದನ್ನು ಕಾಣುತ್ತೇವೆ. (ಅದು ಆ ಕಾಲದಲ್ಲಿ  ಅಕ್ಕಿಗೆ ತಾತ್ಕಾಲಿಕ ಬರ ಬಂದುದರಿಂದ ಅಕ್ಕಿಯ ಬದಲು ಗೋಧಿಯನ್ನು ಅವಲಂಭಿಸಿ ಎಂದು ಸಂದೇಶ ಕೊಡುವುದಕ್ಕಾಗಿ ಬರೆದಿರಲೂ ಬಹುದು. ಆದರೆ ಅಂತಹ ಯಾವುದೇ ಪುರಾವೆ ನಮಗೆ ತಿಳಿದಿಲ್ಲ). ರಾಮಧಾನ್ಯ ಚರಿತೆಯಲ್ಲಿ  ಅಕ್ಕಿ ಹಾಗೂ ಗೋಧಿಯ ನಡುವೆ  ದೊಡ್ಡ  ವಾದ ನಡೆಯುತ್ತದೆ.  ‘ನಾನು ಶ್ರೇಷ್ಠ-ನಾನು ಶ್ರೇಷ್ಠ’  ಎನ್ನುವ  ವಾದ.  ಕೊನೆಗೆ  ಶ್ರೀರಾಮಚಂದ್ರ ತಿನ್ನುತ್ತಿದ್ದ ಧಾನ್ಯ ನಾನು, ಬಡವರಿಗೆ ಆಧಾರ ನಾನು, ಅದರಿಂದಾಗಿ ನಾನೇ ಶ್ರೇಷ್ಠ ಎಂದು ಹೇಳಿ ಗೋಧಿ ತನ್ನ ಪಾರಮ್ಯವನ್ನ ಸಾಧನೆ ಮಾಡುವುದನ್ನು  ನಾವು ಆ ಕಾವ್ಯದಲ್ಲಿ ಕಾಣುತ್ತೇವೆ.  ಒಟ್ಟಿನಲ್ಲಿ ‘ಯವ’ ಎನ್ನುವ ಪದಕ್ಕೆ  ಗೋಧಿ ಎನ್ನುವ ಅರ್ಥವೂ ಇದೆ, ಅಕ್ಕಿ ಎನ್ನುವ ಅರ್ಥವೂ ಇದೆ.  ಯಾವುದೇ ಧಾನ್ಯ ಇರಬಹುದು.  ಹೇಗೆ ಅದು ಶ್ರೇಷ್ಠವೋ ಆ ರೀತಿ ಎಲ್ಲಾ ಶಾಸ್ತ್ರಗಳಲ್ಲಿ ಮಹಾಭಾರತವೇ ಮಿಗಿಲು ಎಂದು ಮಾರ್ಕಂಡೇಯ ಪುರಾಣ ಹೇಳುತ್ತದೆ. ಮಹಾಭಾರತಕ್ಕಿರುವಷ್ಟು  ಮಹತ್ವ ಬೇರೆ ಯಾವ ಶಾಸ್ತ್ರಗಳಿಗೂ ಇಲ್ಲ].

 

ವಾಯುಪ್ರೋಕ್ತೇsಪಿ ತತ್ ಪ್ರೋಕ್ತಂ ಭಾರತಸ್ಯ ಪ್ರಶಂಸನಮ್ ।

ಕೃಷ್ಣದ್ವೈಪಾಯನಂ ವ್ಯಾಸಂ ವಿದ್ಧಿ ನಾರಾಯಣಂ ಪ್ರಭುಮ್ ।

ಕೋ ಹ್ಯನ್ಯಃ ಪುಣ್ಡರೀಕಾಕ್ಷಾನ್ಮಹಾಭಾರತಕೃದ್ ಭವೇತ್ ॥೨.೫೫

 

ಏವಂ ಹಿ ಸರ್ವಶಾಸ್ತ್ರೇಷು ಪೃಥಕ್ ಪೃಥಗುದೀರಿತಮ್ ।

ಉಕ್ತೋsರ್ತ್ಥಃ ಸರ್ವ ಏವಾಯಂ ಮಾಹಾತ್ಮ್ಯಕ್ರಮಪೂರ್ವಕಃ ॥೨.೫೬

 

ಮಹಾಭಾರತದ ಶಾಂತಿ ಪರ್ವದಲ್ಲಿ, ಪದ್ಮಪುರಾಣದ ಸೃಷ್ಟಿ ಖಂಡದಲ್ಲಿ  ಮತ್ತು ವಿಷ್ಣುಪುರಾಣದಲ್ಲಿ ಈ ರೀತಿ ಹೇಳಿದ್ದಾರೆ:  “ಕೃಷ್ಣದ್ವೈಪಾಯನಂ ವ್ಯಾಸಂ ವಿದ್ಧಿ ನಾರಾಯಣಂ ಪ್ರಭುಮ್”.  ‘ಕೃಷ್ಣ ದ್ವೈಪಾಯನರನ್ನು  (ಅಂದರೆ ವೇದವ್ಯಾಸರನ್ನು) ನಾರಾಯಣ ಎಂದೇ ತಿಳಿ.  ಅವರೊಮ್ಮೆ ನಾರಾಯಣ ಆಗದಿದ್ದರೆ ಮಹಾಭಾರತವೆಂಬ ಗ್ರಂಥದ ರಚನೆ ಆಗಿರುತ್ತಿತ್ತೇ? ಮಹಾಭಾರತದಂತಹ  ಅತ್ಯಂತ ಉತ್ಕೃಷ್ಟವಾದ ಗ್ರಂಥ ರಚನೆ ಆಗಬೇಕು ಅಂತಿದ್ದರೆ, ಅದು ನಾರಾಯಣನಿಂದಲೇ ಆಗಿರಬೇಕು. ಮಹಾಭಾರತದಂತಹ  ಗ್ರಂಥವನ್ನು ರಚನೆ ಮಾಡಲು  ನಾರಾಯಣನನ್ನು ಬಿಟ್ಟು ಬೇರೆ ಯಾರಿಂದಲೂ ಸಾಧ್ಯವಿಲ್ಲ’.  ಇದಕ್ಕಿಂತ ಮಹಾಭಾರತದ ಉತ್ತಮತ್ತ್ವವನ್ನು ಸಾರುವ ಮಾತುಗಳು ಬೇಕೇ? ಹೀಗೆ ಎಲ್ಲಾ ಶಾಸ್ತ್ರಗಳಲ್ಲಿಯೂ ಮಹಾಭಾರತ ಎಷ್ಟು ಮಿಗಿಲು  ಎಂದು ಪ್ರತ್ಯೇಕ ಪ್ರತ್ಯೇಕವಾಗಿಯೇ ಹೇಳಿದ್ದಾರೆ.

 

ಭಾರತೇsಪಿ ಯಥಾ ಪ್ರೋಕ್ತೋ ನಿರ್ಣ್ಣಯೋsಯಂ ಕ್ರಮೇಣ ತು

ತಥಾ ಪ್ರದರ್ಶಯಿಷ್ಯಾಮಸ್ತದ್ವಾಕ್ಯೈರೇವ ಸರ್ವಶಃ ॥೨.೫೭

 

ಅನೇಕ ಒಳ್ಳೆಯ ಸಂಪ್ರದಾಯಗಳು ನಾಶವಾಗಿರುವುದರಿಂದ ಮಹಾಭಾರತವನ್ನು  ಹೇಗೆ ಓದಬೇಕು ಎನ್ನುವ ಮಾರ್ಗದರ್ಶನ ಇಂದು ನಮಗಿಲ್ಲವಾಗಿದೆ. ಹೀಗಾಗಿ ನಾವು ಮಹಾಭಾರತವನ್ನು ಕೇವಲ ಕಾವ್ಯ ರೂಪದಲ್ಲಿ ಕಾಣುವಂತಾಗಿದೆ. ಅಪೂರ್ವವಾದ  ಮಹಾಭಾರತದ ಬೇರೆಬೇರೆ ವಾಕ್ಯಗಳನ್ನು ಸ್ಪಷ್ಟವಾಗಿ ಚಿಂತನೆ ಮಾಡಿದಾಗ  ‘ನಾರಾಯಣನೇ ಮಿಗಿಲು’ ಎನ್ನುವ ಮಾತು ಸ್ಪಷ್ಟವಾಗುತ್ತದೆ.  ಹೀಗಾಗಿ  “ಈ ಮಹಾ ಗ್ರಂಥವನ್ನು ಹೇಗೆ ಓದಬೇಕು ಎನ್ನುವುದನ್ನು ನಾನಿಲ್ಲಿ ಪರಿಚಯ ಮಾಡಿಕೊಡುತ್ತೇನೆ” ಎಂದಿದ್ದಾರೆ ಆಚಾರ್ಯರು.

 

  ನಾರಾಯಣಂ ಸುರಗುರುಂ ಜಗದೇಕನಾಥಂ ಭಕ್ತಪ್ರಿಯಂ ಸಕಲಲೋಕನಮಸ್ಕೃತಂ ಚ            

  ತ್ರೈಗುಣ್ಯವರ್ಜ್ಜಿತಮಜಂ ವಿಭುಮಾದ್ಯಮೀಶಂ ವನ್ದೇ ಭವಘ್ನಮಮರಾಸುರಸಿದ್ಧವನ್ದ್ಯಮ್            ೨.೫೮

 

ಇಡೀ  ಮಹಾಭಾರತದ ಸಾರವನ್ನೊಳಗೊಂಡ ಮಹಾಭಾರತದ ಮೊದಲ ಶ್ಲೋಕ ಇದಾಗಿದೆ. [ಉತ್ತರದ ಪಾಠದಲ್ಲಿ ಈ ಶ್ಲೋಕ ಕಾಣಸಿಗುವುದಿಲ್ಲ. ಆದರೆ ದಾಕ್ಷಿಣಾತ್ಯ  ಪಾಠದಲ್ಲಿ ಇದೇ ಮೊದಲನೇ ಶ್ಲೋಕ]. ಈ ಶ್ಲೋಕ ಸ್ಪಷ್ಟವಾಗಿ ನಾರಾಯಣನ ಸರ್ವೋತ್ತಮತ್ತ್ವವನ್ನು ಪ್ರತಿಪಾದನೆ ಮಾಡುತ್ತದೆ.

ಈ ಶ್ಲೋಕವನ್ನು ಎರಡು ವಿಭಾಗ ಮಾಡಿ  ಆಚಾರ್ಯ ಮಧ್ವರು ಈ ರೀತಿ ವ್ಯಾಖ್ಯಾನ ಮಾಡಿದ್ದಾರೆ:

 

ಪೂರ್ವಾರ್ದದ ತಾತ್ಪರ್ಯ:

ಜ್ಞಾನಪ್ರದಃ ಸ ಭಗವಾನ್ ಕಮಲಾವಿರಿಞ್ಚಶರ್ವಾದಿಪೂರ್ವಜಗತೋ ನಿಖಿಲಾದ್ ವರಿಷ್ಠಃ

ಭಕ್ತ್ಯೈವ ತುಷ್ಯತಿ ಹರಿಪ್ರವಣತ್ವಮೇವ ಸರ್ವಸ್ಯ ಧರ್ಮ್ಮ ಇತಿ ಪೂರ್ವವಿಭಾಗಸಂಸ್ಥಃ ೨.೫೯

 

ದೇವತೆಗಳಿಗೂ ಉಪದೇಶಕನಾಗಿರುವ ಭಗವಂತ  ಇಡೀ ಜಗತ್ತಿಗೆ ಜ್ಞಾನವನ್ನು ಕೊಟ್ಟ ಜ್ಞಾನಪ್ರದಃ.  ಶ್ರೀಲಕ್ಷ್ಮಿಯಿಂದ ಹಿಡಿದು,  ಅತ್ಯಂತ  ನಿಕೃಷ್ಟವಾದ ಜೀವರ ತನಕ, ಎಲ್ಲರಿಗೂ ಒಡೆಯನಾದ ಭಗವಂತ ಜಗದೇಕನಾಥಃ.  ಕೇವಲ ಭಕ್ತಿಯಿಂದಲೇ ಪ್ರಸನ್ನನಾಗುವ  ಆತ ಭಕ್ತಪ್ರಿಯಃ*.  ಎಲ್ಲಾ ಲೋಕಗಳಿಂದ ನಮಸ್ಕೃತನಾಗಿರುವ ಆ ನಾರಾಯಣನಿಗೆ ನಮಸ್ಕರಿಸಿ ಬಾಳುವುದು ಎಲ್ಲರ ಕರ್ತವ್ಯ.

 [*ಮಹಾಭಾರತದ ಮೊದಲ ಶ್ಲೋಕದ ‘ಭಕ್ತಪ್ರಿಯ’ ಎನ್ನುವ ವಿಶೇಷಣವನ್ನು ಗಮನಿಸಿದಾಗ ಇಡೀ ಮಹಾಭಾರತ ಭಕ್ತಿಗಾಗಿ ದೇವರ ಗುಣ-ಮಹಿಮೆಯನ್ನೂ ಹೇಳುತ್ತದೆ ಎನ್ನುವುದು ತಿಳಿಯುತ್ತದೆ.  ಹೀಗಾಗಿ ಭಕ್ತಿಗಾಗಿ ನಾವು ಭಗವಂತನ ಮಹಿಮೆಯನ್ನು ತಿಳಿಯಬೇಕು ಎನ್ನುವುದೂ ಅರ್ಥವಾಗುತ್ತದೆ].

 

ಉತ್ತರಾರ್ಧದ ತಾತ್ಪರ್ಯ :

ನಿರ್ದ್ದೋಷಕಃ ಸೃತಿವಿಹೀನ ಉದಾರಪೂರ್ಣ್ಣಸಂವಿದ್ಗುಣಃ ಪ್ರಥಮಕೃತ್ ಸಕಲಾತ್ಮಶಕ್ತಿಃ

ಮೋಕ್ಷೈಕಹೇತುರಸುರೂಪಸುರೈಶ್ಚ ಮುಕ್ತೈರ್ವನ್ದ್ಯಃ ಸ ಏಕ ಇತಿ ಚೋಕ್ತಮಥೋತ್ತರಾರ್ದ್ಧೇ೨.೬೦

 

ಭಗವಂತ ತ್ರೈಗುಣ್ಯವರ್ಜಿತ.  ಅಂದರೆ ನಿರ್ದೋಷಕಃ.  ಭಗವಂತ ಯಾವ ಗುಣಗಳಿಂದಲೂ ಕೂಡಾ ಸ್ಪ್ರುಷ್ಟನಾಗಿಲ್ಲ. ತ್ರಿಗುಣಗಳಿಂದ  ರಹಿತನಾಗಿರುವ ಆತನಿಗೆ ಯಾವುದೇ ದೋಷವಿಲ್ಲ. [ಉದಾಹರಣೆಗೆ: ತಾನೇ  ಹುಟ್ಟಿಸಿರುವ ಜಗತ್ತನ್ನು ತಾನೇ ಸಂಹಾರ ಮಾಡಿದರೂ ಕೂಡಾ ಆತನಿಗೆ ದೋಷವಿಲ್ಲ].   ಸಂಸಾರದಿಂದ ರಹಿತನಾಗಿರುವ ಭಗವಂತ ಉತ್ಕೃಷ್ಟವಾದ ಜ್ಞಾನಾನಂದಾದಿ ಗುಣಗಳಿಂದ ತುಂಬಿದ್ದಾನೆ. ಎಲ್ಲವನ್ನು ಮೊದಲು ಮಾಡಿದವನಾದ ಆತ  ಪ್ರಥಮಕೃತ್.

ಸರ್ವಸಮರ್ಥನಾಗಿರುವ ಭಗವಂತ ಸಕಲಾತ್ಮಶಕ್ತಿಃ. ಸಂಸಾರವನ್ನು ನಾಶ ಮಾಡಬಲ್ಲ ಭಗವಂತನೊಬ್ಬನೇ ಮೋಕ್ಷಕ್ಕೆ ಕಾರಣನಾಗಿದ್ದಾನೆ. ಇನ್ದ್ರಿಯಾಭಿಮಾನಿ* ಸಮಸ್ತ ದೇವತೆಗಳು ಯಾರನ್ನು ನಮಸ್ಕರಿಸುತ್ತಾರೋ, ಅಂತಹ ನಾರಾಯಣನನ್ನು ನಮಸ್ಕರಿಸುತ್ತೇನೆ.

[ಅಮರಾಸುರಸಿದ್ಧವನ್ದ್ಯಮ್  ಎನ್ನುವಲ್ಲಿ  “ದೈತ್ಯರು ಮತ್ತು ದೇವತೆಗಳು ಯಾರನ್ನು ನಮಸ್ಕರಿಸಿದ್ದಾರೋ ಅಂತಹ ನಾರಾಯಣನಿಗೆ ನಮಸ್ಕಾರ ಮಾಡುತ್ತೇನೆ” ಎಂದು ಹೇಳಿದಂತೆ ಕಾಣುತ್ತದೆ.  ಆದರೆ ಗೀತೆಯಲ್ಲಿ(೯.೧೧) ಅವಜಾನಂತಿ ಮಾಂ ಮೂಢಾ ಮಾನುಷೀಂ ತನುಮಾಶ್ರಿತಮ್ ಎಂದಿದ್ದಾರೆ.  ಅಲ್ಲಿ  “ಮನುಷ್ಯನಂತೆ ದೇಹವುಳ್ಳ ನನ್ನನ್ನು ಇವರೆಲ್ಲರೂ ಕೂಡಾ ತಿರಸ್ಕರಿಸುತ್ತಾರೆ”  ಎಂದಿದ್ದಾನೆ ಶ್ರೀಕೃಷ್ಣ. ಅಂದರೆ  ದೈತ್ಯರು ನಮಸ್ಕಾರ ಮಾಡುವುದಿಲ್ಲ ಎಂದರ್ಥ.  ಆದ್ದರಿಂದ ಇಲ್ಲಿ ಅಸುರ ಎನ್ನುವ ಪದವನ್ನು  ದೈತ್ಯರು ಎನ್ನುವ ಅರ್ಥದಲ್ಲಿ ಬಳಸಿಲ್ಲ.    *ಅಸು+ರ  ಎನ್ನುವಲ್ಲಿ  ಅಸು= ಇಂದ್ರಿಯಗಳು, ರ= ರಮಯಂತಿ.  ಹಾಗಾಗಿ ಇಲ್ಲಿ ಅಸುರ ಎಂದರೆ ದೈತ್ಯರಲ್ಲ , ಇನ್ದ್ರಿಯಾಭಿಮಾನಿ ದೇವತೆಗಳು]

 

 

ನಮ್ಯತ್ವಮುಕ್ತಮುಭಯತ್ರ ಯತಸ್ತತೋsಸ್ಯ ಮುಕ್ತೈರಮುಕ್ತಿಗಗಣೈಶ್ಚ ವಿನಮ್ಯತೋಕ್ತಾ ।

ಇತ್ಥಂ ಹಿ ಸರ್ವಗುಣಪೂರ್ತ್ತಿರಮುಷ್ಯ ವಿಷ್ಣೋಃ ಪ್ರಸ್ತಾವಿತಾ ಪ್ರಥಮತಃ ಪ್ರತಿಜಾನತೈವ ॥೨.೬೧

 

ಮೇಲೆ ನೋಡಿದ ಮಹಾಭಾರತದ  ಮಂಗಳ ಶ್ಲೋಕದ ಎರಡೂ ಭಾಗದಲ್ಲಿ ಪರಮಾತ್ಮನಿಗೆ  ನಮಸ್ಕಾರ ಮಾಡಬೇಕು ಎಂದು ಹೇಳಲಾಗಿದೆ.  ಮುಕ್ತರು, ಮುಕ್ತರಲ್ಲದವರು ಎಲ್ಲರೂ ದೇವರಿಗೆ ನಮಸ್ಕಾರ ಮಾಡಬೇಕು ಎಂದು ಹೇಳುವ  ಮುಖೇನ ಮುಕ್ತರು ಮತ್ತು ಅಮುಕ್ತರಿಬ್ಬರಿಗೂ ದೇವರು ಆರಾಧ್ಯಾ ಎನ್ನುವುದನ್ನು ವ್ಯಾಸರು ಇಲ್ಲಿ ತೋರಿಸಿಕೊಟ್ಟಿದ್ದಾರೆ.   [ಸಿದ್ಧ ಎಂದರೆ  ಸಿದ್ಧಿಯನ್ನು ಪಡೆದವರು ಎಂದರ್ಥ.  ಅಂದರೆ ಮುಕ್ತರು].

[ಹೀಗೆ ಪ್ರತಿಜ್ಞೆ ಮಾಡುವಾಗಲೇ  ವೇದವ್ಯಾಸರು ಪರಮಾತ್ಮನ ಗುಣಪೂರ್ಣತ್ವವನ್ನು, ಪರಮಾತ್ಮನ ವನ್ದ್ಯತ್ವವನ್ನು, ಪರಮಾತ್ಮನ ಆರಾಧ್ಯತ್ವ ವನ್ನು ಸ್ಫುಟವಾಗಿ ಹೇಳಿದ್ದಾರೆ.  ಈ ರೀತಿ ಭಾರತದ ಮೊದಲ ಶ್ಲೋಕವೇ ಪರಮಾತ್ಮನ ಗುಣಗಳನ್ನು ಅನುಸಂಧಾನ ಮಾಡಬೇಕಾದರೆ, ಉಳಿದ ಇಡೀ ಗ್ರಂಥದಲ್ಲಿ ಪರಮಾತ್ಮನ ಗುಣಗಳ ಬಗ್ಗೆ ಹೇಳಿಲ್ಲ ಎನ್ನುವುದಾಗಲೀ, ಭಗವದ್ಗೀತೆಯನ್ನು ಓದಿಯೂ ಭಗವಂತ ನಿರ್ಗುಣ ಎಂದು ವಾದಿಸುವುದಾಗಲೀ,  ಇತ್ಯಾದಿ ಇಡೀ ಮಹಾಭಾರತದ ಅಭಿಪ್ರಾಯಕ್ಕೆ ವಿರುದ್ಧವಾಗುತ್ತದೆ.]

 

[ಕೇವಲ ಮೊದಲ ಶ್ಲೋಕವಷ್ಟೇ ಅಲ್ಲ,  ಭಾರತದ ಇತರ ಕೆಲವು  ಶ್ಲೋಕಗಳ ಉದಾಹರಣೆಯನ್ನು ಆಚಾರ್ಯರು ನೀಡುವುದನ್ನು ನಾವು ಮುಂದೆ ಕಾಣಬಹುದು]

 

ಕೃಷ್ಣೋ ಯಜ್ಞೈರಿಜ್ಯತೇ ಸೋಮಪೂತೈಃ ಕೃಷ್ಣೋ ವೀರೈರಿಜ್ಯತೇ ವಿಕ್ರಮದ್ಭಿಃ ।

ಕೃಷ್ಣೋ ವನ್ಯೈರಿಜ್ಯತೇ ಸಮ್ಮೃಶಾನೈಃ ಕೃಷ್ಣೋ ಮುಕ್ತೈರಿಜ್ಯತೇ ವೀತಮೋಹೈಃ ॥೨.೬೨

 

ಮಹಾಭಾರತದ ಅನುಶಾಸನ ಪರ್ವದ ಹದಿನೆಂಟನೇ  ಅಧ್ಯಾಯದ ಆರನೇ ಶ್ಲೋಕದಲ್ಲಿ ಈ ಮಾತು ಬರುತ್ತದೆ*: ಇಲ್ಲಿ ಹೇಳುವಂತೆ:  “ನಾರಾಯಣನು ಸೋಮರಸವನ್ನೊಳಗೊಂಡ ಯಜ್ಞಗಳಿಂದ ಪೂಜ್ಯನಾಗಿದ್ದಾನೆ. ನಾರಾಯಣನು ಕಾದುವಂಥ ಕ್ಷತ್ರಿಯರಿಂದಲೂ ಪೂಜ್ಯನಾಗಿದ್ದಾನೆ. ವಾನಪ್ರಸ್ಥಾಶ್ರಮದವರೂ ಕೂಡಾ ಇವನನ್ನು ಪೂಜಿಸುತ್ತಾರೆ. ಸಂಸಾರದ ಮೋಹವನ್ನು ಕಳೆದುಕೊಂಡ ಮುಕ್ತರಿಂದಲೂ ದೇವರು ಪೂಜ್ಯನಾಗಿದ್ದಾನೆ”.

[*ಆಚಾರ್ಯರು ಹೇಳುವಂತೆ ಈ ಮಾತು ಆದಿಪರ್ವ ಮತ್ತು ಅನುಶಾಸನಪರ್ವ ಎರಡರಲ್ಲೂ ಬರುತ್ತದೆ.  ಆದರೆ ಇಂದು ಲಭ್ಯವಿರುವ ಪಾಠದಲ್ಲಿ ಇದು ಅನುಶಾಸನಪರ್ವದಲ್ಲಿ ಮಾತ್ರ ಕಾಣಸಿಗುತ್ತದೆ.  ಆದಿಪರ್ವದಲ್ಲಿ ಸಿಗುವುದಿಲ್ಲ]