ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Sunday, January 28, 2018

Mahabharata Tatparya Nirnaya Kannada 2.164-2.183

 

ಸಾಮ್ಪ್ರತಂ ಮಾನುಷೇ ಲೋಕೇ ಸದೈತ್ಯನರರಾಕ್ಷಸೇ ।

ಚತ್ವಾರಃ ಪ್ರಾಣಿನಾಂ ಶ್ರೇಷ್ಠಾಃ ಸಮ್ಪೂರ್ಣ್ಣಬಲಪೌರುಷಾಃ ॥೨.೧೬೪

 

ಭೀಮಶ್ಚ ಬಲಭದ್ರಶ್ಚ ಮದ್ರರಾಜಶ್ಚ ವೀರ್ಯ್ಯವಾನ್ ।

ಚತುರ್ತ್ಥಃ ಕೀಚಕಸ್ತೇಷಾಂ ಪಞ್ಚಮಂ ನಾನುಶುಶ್ರುಮಃ ॥೨.೧೬೫

 

ಅನ್ಯೋನ್ಯಾನನ್ತರಬಲಾಃ ಕ್ರಮಾದೇವ ಪ್ರಕೀರ್ತ್ತಿತಾಃ

ವಚನಂ ವಾಸುದೇವಸ್ಯ ತಥೋದ್ಯೋಗಗತಂ ಪರಮ್ ॥೨.೧೬೬

 

ಯತ್ ಕಿಞ್ಚಾsತ್ಮನಿ ಕಲ್ಯಾಣಂ ಸಮ್ಭಾವಯಸಿ ಪಾಣ್ಡವ ।

ಸಹಸ್ರಗುಣಮಪ್ಯೇತತ್ ತ್ವಯಿ ಸಮ್ಭಾವಯಾಮ್ಯಹಮ್ ॥೨.೧೬೭

 

ಯಾದೃಶೇ ಚ ಕುಲೇ ಜಾತಃ ಸರ್ವರಾಜಾಭಿಪೂಜಿತೇ ।

ಯಾದೃಶಾನಿ ಚ ಕರ್ಮ್ಮಾಣಿ ಭೀಮ ತ್ವಮಸಿ ತಾದೃಶಃ ॥೨.೧೬೮

 

ಅಸ್ಮಿನ್ ಯುದ್ಧೇ ಭೀಮಸೇನ ತ್ವಯಿ ಭಾರಃ ಸಮಾಹಿತಃ ।

ಧೂರರ್ಜ್ಜುನೇನ ವೋಢವ್ಯಾ ವೋಢವ್ಯ  ಇತರೋ ಜನಃ

ಉಕ್ತಂ ಪುರಾಣೇ ಬ್ರಹ್ಮಾಣ್ಡೇ ಬ್ರಹ್ಮಣಾ ನಾರದಾಯ ಚ ॥೨.೧೬೯

 

ವಿರಾಟಪರ್ವದಲ್ಲಿ(೩೨.೧೬-೨೦) ದುರ್ಯೋಧನ ಭೀಮಸೇನನನ್ನು ಕುರಿತು ಹೇಳುವ ಮಾತು ಹೀಗಿದೆ: 

“ಹಿಡಿದ ಕೆಲಸವನ್ನು ಮುಗಿಸುವವರಲ್ಲಿ, ಯುದ್ಧಶಾಸ್ತ್ರವನ್ನು ಬಲ್ಲವರಲ್ಲಿ, ಯುದ್ಧದ ಸಂದಿಗ್ಧ ಪರಿಸ್ಥಿತಿಗಳಲ್ಲಿ ನಿರ್ಣಯ ಮಾಡುವ ಜಾಣರಲ್ಲಿ, ಮಾನಸಿಕವಾದ ಸ್ಥೈರ್ಯದಲ್ಲಿ, ತೋಳ್ಬಲದಲ್ಲಿ,  ಪ್ರಜ್ಞಾವಂತಿಕೆಯಲ್ಲಿ, ಶರೀರದ ಕ್ರಿಯೆಯಲ್ಲಿ, ದೈತ್ಯ-ಮನುಷ್ಯ-ರಾಕ್ಷಸ  ಈ ಮೂವರನ್ನೂ ಒಳಗೊಂಡ ಮನುಷ್ಯಲೋಕದಲ್ಲಿ ಕೇವಲ ನಾಲ್ಕೇ ಜನ ಶ್ರೇಷ್ಠರಿರುವುದು.  ಅವರಲ್ಲಿ ಮೊದಲನೆಯವನು  ಭೀಮಸೇನ, ಎರಡನೆಯವನು  ಬಲರಾಮ, ಮೂರನೆಯವನು ಶಲ್ಯ ಮತ್ತು  ನಾಲ್ಕನೆಯವನು  ಕೀಚಕ.  ಇವರಲ್ಲದೇ ಐದನೆಯವನನ್ನು ನಾವು ಕೇಳಲಾರೆವು”.

ಮಹಾಭಾರತದ ಉದ್ಯೋಗಪರ್ವದಲ್ಲಿ(೭೬.೩-೪; ೧೮ ) ಶ್ರೀಕೃಷ್ಣ ಭೀಮಸೇನನನ್ನು ಕುರಿತು ಈ ರೀತಿ ಹೇಳುತ್ತಾನೆ: ಓ  ಭೀಮಸೇನನೇ, ನಿನ್ನಲ್ಲಿ ಯಾವ ಮಂಗಳಕರವಾದ ಸಂಗತಿಯನ್ನು ಇದೆ ಎಂದು ನೀನು ಭಾವಿಸುತ್ತೀಯೋ, ಆ ಗುಣದ  ಸಾವಿರಪಟ್ಟು  ಮಿಗಿಲಾದದ್ದು ನಿನ್ನಲ್ಲಿದೆ ಎಂದು ನಾನು ತಿಳಿಯುತ್ತೇನೆ.

ಯಾರ ಮಗನಾಗಿದ್ದೀಯ, ಯಾರ ಕುಲದಲ್ಲಿ ಹುಟ್ಟಿದ್ದೀಯ, ಈತನಕದ ನಿನ್ನ ಕೆಲಸಗಳು ಏನಿದೆ, ನೀನು ಎಂತವನು ಎಂದು ನಿರ್ಣಯಮಾಡಲು ಇಷ್ಟು ಸಾಕು. 

[ಶ್ರೀಕೃಷ್ಣನ ಈ ಮಾತು ಇಡೀ ಮಹಾಭಾರತದ ಮುಖ್ಯಾಂಶದಂತಿದೆ]. “ಓ ಭೀಮಸೇನನೇ, ಈ ಯುದ್ಧದ ಸಕಲ ಜವಾಬ್ಧಾರಿಯು ನಿನ್ನಲ್ಲಿದೆ.  ಇದರ ನೊಗವನ್ನು ಅರ್ಜುನ ಹೊರಬೇಕು.  ಬೇರೆ ಜನರನ್ನು ನೀವೇ ರಕ್ಷಣೆ ಮಾಡಬೇಕು” ಎಂದು.  [ಅದರಂತೆ ದೃಷ್ಟದ್ಯುಮ್ನನನ್ನು, ನಕುಲ-ಸಹದೇವರನ್ನು, ಧರ್ಮರಾಜ ಇತರರನ್ನು  ಭೀಮಾರ್ಜುನರೇ  ಕಾಲ ಕಾಲಕ್ಕೆ ರಕ್ಷಣೆ ಮಾಡುತ್ತಿದ್ದುದನ್ನು ನಾವು ಮಹಾಭಾರತದಲ್ಲಿ ಕಾಣುತ್ತೇವೆ].

ಮುಖ್ಯಪ್ರಾಣನ ಜೀವೋತ್ತಮತ್ವವನ್ನು ನೋಡಿದ ಮೇಲೆ, ಇನ್ನು ದ್ರೌಪದಿ ಎಂತಹ ಮಾಹಾತ್ಮ್ಯ ಉಳ್ಳವಳು ಎನ್ನುವುದನ್ನು  ಬ್ರಹ್ಮಾಂಡ ಪುರಾಣದಲ್ಲಿ ಬ್ರಹ್ಮನಿಂದ ನಾರದರಿಗೆ ಹೇಳಲ್ಪಟ್ಟ ಮಾತುಗಳ  ಉಲ್ಲೇಖದೊಂದಿಗೆ ಆಚಾರ್ಯರು ಇಲ್ಲಿ ವಿವರಿಸುವುದನ್ನು ನಾವು ಕಾಣುತ್ತೇವೆ:  [ಇಂದು ಲಭ್ಯವಿರುವ ಬ್ರಹ್ಮಾಂಡ ಪುರಾಣದ ಪಾಠದಲ್ಲಿ ಈ ಶ್ಲೋಕ ಕಣ್ಮರೆಯಾಗಿದೆ!]

 

ಯಸ್ಯಾಃ ಪ್ರಸಾದಾತ್ ಪರಮಂ ವಿದನ್ತಿ  ಶೇಷಃ ಸುಪರ್ಣ್ಣೋ ಗಿರಿಶಃ ಸುರೇನ್ದ್ರಃ ।

ಮಾತಾ ಚ ಯೈಷಾಂ ಪ್ರಥಮೈವ ಭಾರತೀ ಸಾ ದ್ರೌಪದೀ ನಾಮ ಬಭೂವ ಭೂಮೌ ॥೨.೧೭೦

 

ಯಾ ಮಾರುತಾದ್ ಗರ್ಭಮಧತ್ತ ಪೂರ್ವಂ ಶೇಷಂ ಸುಪರ್ಣ್ಣಂ ಗಿರಿಶಂ ಸುರೇನ್ದ್ರಮ್ ।

ಚತುರ್ಮ್ಮುಖಾಭಾಂಶ್ಚತುರಃ ಕುಮಾರಾನ್ ಸಾ ದ್ರೌಪದೀ ನಾಮ ಬಭೂವ ಭೂಮೌ೨.೧೭೧

 

ಬ್ರಹ್ಮಾಂಡಪುರಾಣದಲ್ಲಿ ಈ ರೀತಿ ಹೇಳಿದ್ದಾರೆ:  ಯಾರ ಅನುಗ್ರಹದಿಂದ ಶೇಷನು, ಗರುಡನು, ಸದಾಶಿವನು ಮತ್ತು ಇಂದ್ರನು ಉತ್ಕೃಷ್ಟವಾದ ಗತಿಯನ್ನು ಹೊಂದಿ ನಾರಾಯಣನನ್ನು ತಿಳಿಯುತ್ತಾರೋ, ಇವರೆಲ್ಲರ  ತಾಯಿಯಾದ  ಭಾರತಿಯು ದ್ರೌಪದಿಯಾಗಿ ಹುಟ್ಟಿದಳುಎಂದು.

 

ಯಾರು ಮೊದಲು ಮುಖ್ಯಪ್ರಾಣನಿಂದ ಗರ್ಭವನ್ನು ಧರಿಸಿದಳೋ,  ಯಾರು ಚತುರ್ಮುಖನಂತಿರುವ ಶೇಷ, ಗರುಡ, ಸದಾಶಿವ  ಮತ್ತು ಇಂದ್ರ ಎನ್ನುವ  ನಾಲ್ಕು ಜನ ಕುಮಾರರನ್ನು ಪಡೆದಳೋ, ಅವಳೇ ಭೂಮಿಯಲ್ಲಿ ದ್ರೌಪದಿಯಾಗಿ ಹುಟ್ಟಿದಳು. 

[ಇದರಿಂದ ದ್ರೌಪದಿ ಎಲ್ಲರಿಗಿಂತ ಮಿಗಿಲಾಗಿರುವ ಭಾರತೀದೇವಿ ಎನ್ನುವುದು ಸ್ಫುಟವಾಗಿ ತಿಳಿಯುತ್ತದೆ]

[ಮೊದಲು ಮುಖ್ಯಪ್ರಾಣ, ಎರಡನೇ ಸ್ಥಾನದಲ್ಲಿ ಭಾರತೀ ದೇವಿ.  ಮೂರನೇ ಸ್ಥಾನದಲ್ಲಿ ಬಲರಾಮ ಎಂದು ಈ ಹಿಂದೆ ನೋಡಿದ್ದೇವೆ.  ಇಲ್ಲಿ ಆಚಾರ್ಯರು ಬಲರಾಮನ ಕುರಿತು ಉಲ್ಲೇಖಿಸುತ್ತಾರೆ:]

 

ಯಸ್ಯಾಧಿಕೋ ಬಲೇ ನಾಸ್ತಿ ಭೀಮಸೇನಮೃತೇ ಕ್ವಚಿತ್ ।

ನ ವಿಜ್ಞಾನೇ ನಚ ಜ್ಞಾನ ಏಷ ರಾಮಃ ಸ ಲಾಙ್ಗಲೀ        ೨.೧೭೨

 

ಯಸ್ಯ ನ ಪ್ರತಿಯೋದ್ಧಾsಸ್ತಿ ಭೀಮಮೇಕಮೃತೇ ಕ್ವಚಿತ್ ।

ಅನ್ವಿಷ್ಯಾಪಿ ತ್ರಿಲೋಕೇಷು ಸ ಏಷ ಮುಸಲಾಯುಧಃ    ೨.೧೭೩

 

ಭೀಮಸೇನನನ್ನು ಬಿಟ್ಟರೆ, ಬಲದಲ್ಲಿ ಆಗಲೀ, ಪರಮಾತ್ಮನ ವಿಜ್ಞಾನದಲ್ಲಿ ಆಗಲೀ,  ಜ್ಞಾನದಲ್ಲಿ ಆಗಲೀ,  ಯಾರಿಗೆ ಸಮನಾದವನು ಇನ್ನೊಬ್ಬನಿಲ್ಲವೋ,  ಅವನೇ ಬಲರಾಮ.

ಭೀಮಸೇನನನ್ನು ಬಿಟ್ಟು ಯಾರಿಗೆ ಕಾದಾಡಲು ಎದುರಾಳಿ ಇಲ್ಲವೋ, ಅಂತಹವನೇ ಬಲರಾಮ.

[ಈ ಎರಡು ಮಾತುಗಳು ಇದೇ ಸಾಹಿತ್ಯದಲ್ಲಿ, ಇದೇ ಕ್ರಮದಲ್ಲಿ  ಇಂದು ಲಭ್ಯವಿರುವ ಪಾಠದಲ್ಲಿ ಕಾಣಸಿಗುವುದಿಲ್ಲ. ಆದರೆ ಬೇರೆ ಕ್ರಮದಲ್ಲಿ ಇದು ಕಾಣಸಿಗುತ್ತದೆ]

 

ತಥಾ ಯುದಿಷ್ಠಿರೇಣೈವ ಭೀಮಾಯ ಸಮುದೀರಿತಮ್ ।

ಅನು ಜ್ಞಾತೋ ರೌಹಿಣೇಯಾತ್ ತ್ವಯಾ ಚೈವಾಪರಾಜಿತ  ೨.೧೭೪

 

ಸರ್ವವಿದ್ಯಾಸು ಬೀಭತ್ಸುಃ ಕೃಷ್ಣೇನ ಚ ಮಹಾತ್ಮನಾ             

ಅನ್ವೇಷ ರೌಹಿಣೇಯಂ ಚ ತ್ವಾಂ ಚ ಭೀಮಾಪರಾಜಿತಮ್ ೨.೧೭೫

 

ವೀರ್ಯ್ಯೇ ಶೌರ್ಯ್ಯೇsಪಿ ವಾ ನಾನ್ಯಸ್ತೃತೀಯಃ ಫಲ್ಗುನಾದೃತೇ

ತಥೈವ ದ್ರೌಪದೀವಾಕ್ಯಂ ವಾಸುದೇವಂ ಪ್ರತೀರಿತಮ್ ೨.೧೭೬

 

ಅಧಿಜ್ಯಮಪಿ ಯತ್ ಕರ್ತ್ತುಂ ಶಕ್ಯತೇ ನೈವ ಗಾಣ್ಡಿವಮ್ ।

ಅನ್ಯತ್ರ ಭೀಮಪಾರ್ತ್ಥಾಭ್ಯಾಂ ಭವತಶ್ಚ ಜನಾರ್ದ್ದನ ॥೨.೧೭೭

 

ಮಹಾಭಾರತದ ವನಪರ್ವದಲ್ಲಿ[೧೪೩.೨೧] ಬರುವ ಮಾತು ಇದಾಗಿದೆ.  ಅಲ್ಲಿ ಯುಧಿಷ್ಠಿರ ಭೀಮನಲ್ಲಿ ಈ ರೀತಿ ಹೇಳುತ್ತಾನೆ: “ನಿನ್ನಿಂದ ಮತ್ತು  ಬಲರಾಮನಿಂದ ಸ್ವಲ್ಪ ಕೆಳಗಡೆ ಇರುವ ಅರ್ಜುನನು ಎಲ್ಲಾ ವಿದ್ಯೆಗಳಲ್ಲಿ ಪರಿಣತನಾಗಿದ್ದಾನೆ”  ಎಂದು.

[ಭೀಮಸೇನ ಮತ್ತು ಬಲರಾಮನಿಗಿಂತ ತಾರತಮ್ಯದಲ್ಲಿ ಅರ್ಜುನ ಒಂದು ಮಟ್ಟದಲ್ಲಿ ಕೆಳಗಿದ್ದಾನೆ ಎನ್ನುವುದು ಯುಧಿಷ್ಠಿರನ ಈ ಮಾತಿನಿಂದ ಸ್ಪಷ್ಟವಾಗುತ್ತದೆ. ಭೀಮ-ಬಲರಾಮನ ನಂತರ  ವೀರ್ಯದಲ್ಲಿ, ಶೌರ್ಯದಲ್ಲಿ  ಅರ್ಜುನನಿಗೆ ಸಮಾನನಾದವನು ಇನ್ನೊಬ್ಬನಿಲ್ಲ ಎನ್ನುವುದನ್ನು ಮಹಾಭಾರತದಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ]. 

ಮಹಾಭಾರತದ ವನಪರ್ವದಲ್ಲಿ[೧೨.೮೦] ಬರುವ ಮಾತು ಇದಾಗಿದೆ.  ಇಲ್ಲಿ  ದ್ರೌಪದಿ ಶ್ರೀಕೃಷ್ಣನಲ್ಲಿ  ಹೇಳುತ್ತಾಳೆ:  “ನೀನು ಮತ್ತು ಭೀಮಾರ್ಜುನರನ್ನು  ಬಿಟ್ಟರೆ ಇನ್ನ್ಯಾರಿಗೂ ಗಾಂಡೀವವನ್ನು  ಹೆಡೆ ಏರಿಸಲು ಸಾಧ್ಯವಿಲ್ಲ”  ಎಂದು.

 

ತಥೈವಾನ್ಯತ್ರ ವಚನಂ ಕೃಷ್ಣದ್ವೈಪಾಯನೇರಿತಮ್ ।

ದ್ವಾವೇವ ಪುರುಷೌ ಲೋಕೇ ವಾಸುದೇವಾದನನ್ತರೌ ।

ಭೀಮಸ್ತು ಪ್ರಥಮಸ್ತತ್ರ ದ್ವಿತೀಯೋ ದ್ರೌಣಿರೇವ ಚ ॥೨.೧೭೮

 

ಆಚಾರ್ಯರು ನೀಡಿರುವ ವೇದವ್ಯಾಸರ ಈ ಮಾತು ಇಂದು ಲಭ್ಯವಿರುವ ಪಾಠಗಳಲ್ಲಿ  ಕಾಣಸಿಗುವುದಿಲ್ಲ.  ವ್ಯಾಸರು ಹೇಳುತ್ತಾರೆ:  ಇಬ್ಬರೇ ಪುರುಷರು. ನಾರಾಯಣನನ್ನು ಬಿಟ್ಟರೆ, ಮೊದಲನೆಯವನು  ಭೀಮ. ಎರಡನೆಯವನು ಅಶ್ವತ್ಥಾಮ” ಎಂದು .

[ಅರ್ಜುನ ಮೂಲರೂಪದಲ್ಲಿ ಇಂದ್ರ.  ಅಶ್ವತ್ಥಾಮ ಮೂಲರೂಪದಲ್ಲಿ ರುದ್ರ.  ಆದರೆ ಎಷ್ಟೋ ಬಾರಿ ರುದ್ರನನ್ನು ಇಂದ್ರ ಸೋಲಿಸಿದ ಹಾಗೆ  ಕಾಣಿಸುತ್ತದೆ. ಇದರಿಂದ ತಾರತಮ್ಯ ಭಂಗವಾಯಿತಲ್ಲ ಎಂದರೆ ಅದಕ್ಕೆ ಭಾರತದಲ್ಲೇ ಉತ್ತರವಿದೆ:]

 

ಅಕ್ಷಯಾವಿಷುಧೀ ದಿವ್ಯೇ ಧ್ವಜೋ ವಾನರಲಕ್ಷಣಃ

ಗಾಣ್ಡೀವಂ ಧನುಷಾಂ ಶ್ರೇಷ್ಠಂ ತೇನ ದ್ರೌಣೇರ್ವರೋsರ್ಜ್ಜುನಃ ॥೨.೧೭೯

 

ಇದು ಮಹಾಭಾರತದ ವಿರಾಟಪರ್ವದಲ್ಲಿ[೬೦.೧೬-೧೭] ಹೇಳಿರುವ ಮಾತು. ಇಲ್ಲಿ ಹೇಳುತ್ತಾರೆ:  “ಎಂದೂ ಮುಗಿಯದ ಬಾಣಗಳಿರುವ ಬತ್ತಳಿಕೆ, ಹನುಮಂತನನ್ನು ಒಳಗೊಂಡ ಧ್ವಜ, ಶ್ರೇಷ್ಠವಾದ ಗಾಂಡೀವ ಧನುಸ್ಸು, ಈ ಎಲ್ಲವೂ ಇರುವುದರಿಂದ ಅರ್ಜುನನು ಅಶ್ವತ್ಥಾಮನಿಗಿಂತ ಮಿಗಿಲಾಗಿ ಕಾಣುತ್ತಾನೆ” ಎಂದು. [ಆದ್ದರಿಂದ ಅದು ಆಯುಧ ನಿಮಿತ್ತ ಶ್ರೇಷ್ಠತೆಯೇ ಹೊರತು, ತಾರತಮ್ಯ ಅಥವಾ ಬಲನಿಮಿತ್ತ ಶ್ರೇಷ್ಠತೆ ಅಲ್ಲ]

[ಈ ರೀತಿ ಭಗವಂತನ ಸರ್ವೋತ್ತಮತ್ತ್ವ , ಪ್ರಾಣ-ಭಾರತಿಯರ ಹಿರಿಮೆ, ದೇವತಾ ತಾರತಮ್ಯ, ಇತ್ಯಾದಿ ಎಲ್ಲವನ್ನೂ ಶಾಸ್ತ್ರಗಳ ಉಲ್ಲೇಖದೊಂದಿಗೆ ತೋರಿಸಿಕೊಟ್ಟ ಆಚಾರ್ಯರು, ಈ ಅಧ್ಯಾಯವನ್ನು ಉಪಸಂಹಾರ ಮಾಡುತ್ತಾರೆ:].

 

ಇತ್ಯಾದ್ಯನನ್ತವಾಕ್ಯಾನಿ ಸನ್ತ್ಯೇವಾರ್ತ್ಥೇ ವಿವಕ್ಷಿತೇ ।

ಕಾನಿಚಿದ್ ದರ್ಶಿತಾನ್ಯತ್ರ ದಿಙ್ಮಾತ್ರಪ್ರತಿಪತ್ತಯೇ ॥೨.೧೮೦

 

ಹೀಗೆ ಮಹಾಭಾರತದಲ್ಲಿ  ಸಾಕಷ್ಟು ವಾಕ್ಯಗಳಿವೆ.  ಅದರಲ್ಲಿ ಕೆಲವೊಂದನ್ನು ಮಾತ್ರ ಇಲ್ಲಿ ನಿಮಗೆ ತೋರಿಸಿದ್ದೇನೆ. [ಮಹಾಭಾರತವನ್ನು ಓದುವಾಗ ಯಾವ ವಿಧಾನವನ್ನು ಅನುಸರಿಸಿ ಓದಬೇಕು ಎನ್ನುವುದನ್ನು ತಿಳಿಸುವುದಕ್ಕಾಗಿ  ನಾನು ಇದನ್ನು ತೆರೆದಿಟ್ಟಿದ್ದೇನೆ.  ಸಮಾಧಿ ಭಾಷೆ, ದರ್ಶನಭಾಷೆ , ಗುಹ್ಯಭಾಷೆ ಇವುಗಳನ್ನು ಯಾವ ರೀತಿ ಓದಬೇಕು ಎಂದು  ಮುಂದೆ ನಾನು ನಿರೂಪಣೆ ಮಾಡಿಕೊಂಡು ಹೋಗಿದ್ದೇನೆ.  ಅದನ್ನು ಓದುವುದು].

 

ತಸ್ಮಾದುಕ್ತಕ್ರಮೇಣೈವ ಪುರುಷೋತ್ತಮತಾ ಹರೇಃ ।

ಅನೌಪಚಾರಿಕೀ ಸಿದ್ಧಾ ಬ್ರಹ್ಮತಾ ಚ ವಿನಿರ್ಣ್ಣಯಾತ್ ॥೨.೧೮೧

 

ಆ ಕಾರಣದಿಂದ ಹಿಂದೆ  ಹೇಳಿದ ರೀತಿಯಲ್ಲಿಯೇ ಪರಮಾತ್ಮನಿಗೆ ಪುರುಷೋತ್ತಮತ್ತ್ವವೂ, ಅವನು ಸಾಕ್ಷಾತ್ ಪರಬ್ರಹ್ಮ ಸ್ವರೂಪವೂ ಎಂದು ನಿರ್ಣಯ ಆಗಿದೆ.  ಇದು ಮಹಾಭಾರತದಿಂದಲೇ ತಿಳಿದಿದೆ.

 

ಪೂರ್ಣ್ಣಪ್ರಜ್ಞಕೃತೇಯಂ ಸಙ್ಕ್ಷೇಪಾದುದ್ಧೃತಿಃ ಸುವಾಕ್ಯಾನಾಮ್ ।

ಶ್ರೀಮದ್ಭಾರತಗಾನಾಂ ವಿಷ್ಣೋಃ ಪೂರ್ಣ್ಣತ್ವನಿರ್ಣ್ಣಯಾಯೈವ ॥೨.೧೮೨

 

 ಭಗವಂತನ ಪರಿಪೂರ್ಣತ್ತ್ವ ನಿರ್ಣಯಕ್ಕಾಗಿ,  ಪೂರ್ಣಪ್ರಜ್ಞನಿಂದ ಮಹಾಭಾರತದಲ್ಲಿರುವ ಸಮಾಧಿ ಭಾಷೆಯೋಕ್ತಿ ಯಾಗಿರುವ ವಾಕ್ಯಗಳ ಉದ್ಧರಣವು ಸಂಕ್ಷೇಪವಾಗಿ ಮಾಡಲ್ಪಟ್ಟಿದೆ.

 

ಸ ಪ್ರೀಯತಾಂ ಪರತಮಃ ಪರಮಾದನನ್ತಃ ಸನ್ತಾರಕಃ ಸತತಸಂಸೃತಿದುಸ್ತರಾರ್ಣ್ಣಾತ್  

ಯತ್ಪಾದಪದ್ಮಮಕರನ್ದಜುಷೋ ಹಿ ಪಾರ್ತ್ಥಾಃ ಸ್ವಾರಾಜ್ಯಮಾಪುರುಭಯತ್ರ ಸದಾ ವಿನೋದಾತ್ ॥೨.೧೮೩

 

ಎಲ್ಲರಿಗೂ ಮಿಗಿಲಾಗಿರುವ, ಅಂತ್ಯವಿಲ್ಲದ, ಸಂಸಾರವೆಂಬ ದಾಟಲಶಕ್ಯವಾದ  ಸಮುದ್ರದಿಂದ ದಾಟಿಸುವ ನಾರಾಯಣನು ನನಗೆ ಪ್ರೀತನಾಗಲಿ.  ನನ್ನ ಬಗೆಗೆ ಪ್ರೀತಿಯನ್ನು ತಳೆಯಲಿ.  ಯಾರ ಅಡಿದಾವರೆಯ ಮಕರಂದವನ್ನು ಸೇವಿಸಿದ ಪಾಂಡವರು ಇಲ್ಲಿಯೂ, ಅಲ್ಲಿಯೂ ವಿನೋದದಿಂದ ತಮ್ಮ ರಾಜ್ಯವನ್ನು ಹೊಂದಿದರೋ, ಅಂತಹ ಪರಮಾತ್ಮನು ನನ್ನಲ್ಲಿ ಪ್ರೀತಿಯನ್ನು ಹೊಂದಲಿ.

ಇತಿ ಶ್ರೀಮದಾನನ್ದತೀರ್ತ್ಥಭಗವತ್ಪಾದವಿರಚಿತೇ ಶ್ರೀಮಹಾಭಾರತತಾತ್ಪರ್ಯ್ಯನಿರ್ಣ್ಣಯೇ

ವಾಕ್ಯೋದ್ಧಾರೋ ನಾಮ ದ್ವಿತೀಯೋsದ್ಧ್ಯಾಯಃ

[ಆದಿತಃ ಶ್ಲೋಕಾಃ ೧೩೮+೧೮೩=೩೨೧]

*********