ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Saturday, November 30, 2019

Mahabharata Tatparya Nirnaya Kannada 1455_1460


ಪಾಣ್ಡೋಃ ಸುತಾಶ್ಚ ಪೃಥಯಾ ಸಹಿತಾ ಮುನೀನ್ದ್ರೈರ್ನ್ನಾರಾಯಣಾಶ್ರಮತ ಆಶು ಪುರಂ ಸ್ವಕೀಯಮ್
ಜಗ್ಮುಸ್ತಥೈವ ಧೃತರಾಷ್ಟ್ರಪುರೋ ಮುನೀನ್ದ್ರಾ ವೃತ್ತಂ ಸಮಸ್ತಮವದನ್ನನುಜಂ ಮೃತಂ ಚ ೧೪.೫೫

ಪಾಂಡುರಾಜನ ಮಕ್ಕಳು ಕುಂತಿ ಹಾಗೂ ಮುನಿಗಳಿಂದಲೂ ಕೂಡಿಕೊಂಡವರಾಗಿ, ಬದರೀನಾರಾಯಣ ಆಶ್ರಮದಿಂದ ತಮ್ಮ ಪಟ್ಟಣವಾದ ಹಸ್ತಿನವತಿಗೆ ಬಂದರು. ದೃತರಾಷ್ಟ್ರನ ಮುಂದೆ ನಡೆದ ಎಲ್ಲಾ ಘಟನೆಗಳನ್ನು ವಿವರಿಸಿದ  ಮುನಿಗಳು, ನಿನ್ನ ತಮ್ಮ ಸತ್ತಿದ್ದಾನೆ ಎಂದೂ ಹೇಳಿದರು.

ತೂಷ್ಣೀಂ ಸ್ಥಿತೇ ತು ನೃಪತೌ ತನುಜೇ ಚ ನದ್ಯಾಃ ಕ್ಷತ್ತರ್ಯ್ಯುತಾsಪ್ತ ಉರುಮೋದಮತೀವ ಪಾಪಾಃ
ಊಚುಃ ಸುಯೋಧನಮುಖಾಃ ಸಹ ಸೌಬಲೇನ ಪಾಣ್ಡೋರ್ಮ್ಮೃತಿಃ ಕಿಲ ಪುರಾ ತನಯಾಃ ಕ್ವ ತಸ್ಯ ೧೪.೫೬

ನ ಕ್ಷೇತ್ರಜಾ ಅಪಿ ಮೃತೇ ಪಿತರಿ ಸ್ವಕೀಯೈಃ ಸಮ್ಯಙ್ ನಿಯೋಗಮನವಾಪ್ಯ ಭವಾಯ ಯೋಗ್ಯಾಃ
ತೇಷಾಮಿತೀರಿತವಚೋsನು ಜಗಾದ ವಾಯುರಾಭಾಷ್ಯ ಕೌರವಗಣಾನ್ ಗಗನಸ್ಥ ಏವ ೧೪.೫೭

ಇದೆಲ್ಲವನ್ನೂ ಕೇಳಿಯೂ ದೃತರಾಷ್ಟ್ರನು ಸುಮ್ಮನೆ ನಿಂತಿರಲು, ನದಿಯ ಮಗನಾದ(ಗಂಗಾಪುತ್ರ) ಭೀಷ್ಮನೂ ಸುಮ್ಮನಿರಲು, ವಿದುರನು ಅತ್ಯಂತ  ಉತ್ಕೃಷ್ಟವಾದ ಸಂತೋಷವನ್ನು ಹೊಂದುತ್ತಿರಲು,  ಪಾಪಿಷ್ಠರಾಗಿರುವ ದುರ್ಯೋಧನಾದಿಗಳು ಶಕುನಿಯಿಂದ ಕೂಡಿಕೊಂಡು ಮುನಿಗಳನ್ನು ಪ್ರಶ್ನಿಸಲಾರಂಭಿಸಿದರು:
‘ಮೊದಲೇ ಅಲ್ಲವೇ ಪಾಂಡುವಿನ ಮರಣವಾಗಿದ್ದು? ಅವನಿಗೆ ಮಕ್ಕಳು ಎಲ್ಲಿಂದ?  ತಂದೆ ಸತ್ತಾದ ಮೇಲೆ ಕುಂತಿಯಲ್ಲಿ ಹುಟ್ಟಿದ್ದರೆ ಅವರನ್ನು ನಾವು ಅವನ ವಾರಸುದಾರರು ಎಂದು ಒಪ್ಪುವುದಿಲ್ಲ. ಅಷ್ಟೇ ಅಲ್ಲಾ, ನಿಯೋಗಪದ್ಧತಿಗೆ ಸ್ವಕೀಯರೊಬ್ಬರು ಸಾಕ್ಷಿಯಾಗಿರಬೇಕು.(ನಮ್ಮ ಅಪ್ಪ ಸತ್ತಾಗ ನಮ್ಮ ದೊಡ್ಡತಾತ ನಮ್ಮ ಅಜ್ಜಿಯಲ್ಲಿ ನಮ್ಮ ಅಪ್ಪನನ್ನು ಹುಟ್ಟಿಸಿದ. ಅಲ್ಲಿ ಸಾಕ್ಷಿಯಾಗಿ ನಮ್ಮವರೇ ನಮ್ಮ ಜನನಕ್ಕೆ ಕಾರಣರಾಗಿದ್ದರು.  ಆದರೆ ಇಲ್ಲಿ ಮುಖ್ಯಪ್ರಾಣ, ಯಮ, ಅರ್ಜುನ, ಇವರೆಲ್ಲಾ ಸ್ವಕೀಯರೇ? ಅವರು ನಮ್ಮ ಕುಲಕ್ಕೆ ಸೇರಿದವರಲ್ಲ.  ಆದರೆ ವೇದವ್ಯಾಸರು ನಮ್ಮ ಮುತ್ತಜ್ಜಿಯ ಮಗ (ಸತ್ಯವತಿ ಸೂನು). ಈ ಪರಿಸ್ಥಿತಿ ಇಲ್ಲಿಲ್ಲ). ತಮ್ಮವರಿಂದ ನಿಯೋಗವನ್ನು ಚನ್ನಾಗಿ  ಹೊಂದದೇ ಇರುವುದರಿಂದ ಇವರು ಇಲ್ಲಿ ಇರಲು ಯೋಗ್ಯರಲ್ಲಾ’ ಎಂದು ದುರ್ಯೋಧನಾದಿಗಳು ಹೇಳುತ್ತಿರುವಾಗಲೇ,  ಗಗನದಲ್ಲಿರುವ ಮುಖ್ಯಪ್ರಾಣನು ಕೌರವರನ್ನು ಕುರಿತು ಹೀಗೆ ಹೇಳಿದ: (ಅಶರೀರವಾಣಿಯಾಯಿತು).

ಏತೇ ಹಿ ಧರ್ಮ್ಮಮರುದಿನ್ದ್ರಭಿಷಗ್ವರೇಭ್ಯೋ ಜಾತಾಃ ಪ್ರಜೀವತಿ ಪಿತರ್ಯ್ಯುರುಧಾಮಸಾರಾಃ
ಶಕ್ಯಾಶ್ಚ ನೈವ ಭವತಾಂ ಕ್ವಚಿದಗ್ರಹಾಯ ನಾರಾಯಣೇನ ಸತತಂ ಪರಿರಕ್ಷಿತಾ ಯತ್ ೧೪.೫೮

‘ಧರ್ಮರಾಜ, ಮುಖ್ಯಪ್ರಾಣ, ಇಂದ್ರ, ಅಶ್ವೀದೇವತೆಗಳು, ಇವರಿಂದ ತಂದೆ(ಪಾಂಡು) ಬದುಕಿರುವಾಗಲೇ ಹುಟ್ಟಿರುವ, ಪರಮಾತ್ಮನನ್ನೇ ತಮ್ಮ ಎದೆಯೊಳಗೆ ಇಟ್ಟ (ಪರಮಾತ್ಮನನ್ನೇ ಸಾರಭೂತವಾದ ಶಕ್ತಿಯಾಗಿ ಉಳ್ಳ), ನಾರಾಯಣನಿಂದ ನಿರಂತರವಾಗಿ ರಕ್ಷಿಸಲ್ಪಟ್ಟ ಇವರು ನಿಮ್ಮ ತೆಗೆದುಕೊಳ್ಳದಿರುವಿಕೆಗೆ ಶಕ್ಯರಲ್ಲಾ’.

ವಾಯೋರದೃಶ್ಯವಚನಂ ಪರಿಶಙ್ಕಮಾನೇಷ್ವಾವಿರ್ಬಭೂವ ಭಗವಾನ್ ಸ್ವಯಮಬ್ಜನಾಭಃ
ವ್ಯಾಸಸ್ವರೂಪ ಉರುಸರ್ವಗುಣೈಕದೇಹ ಆದಾಯ ತಾನಗಮದಾಶು ಚ ಪಾಣ್ಡುಗೇಹಮ್ ೧೪.೫೯

ಮುಖ್ಯಪ್ರಾಣನ ಯಾರಿಗೂ ಕಾಣದ ಮಾತನ್ನು ದುರ್ಯೋಧನಾದಿಗಳು ಶಂಕಿಸುತ್ತಿರಲು, ಷಡ್ಗುಣೈಶ್ವರ್ಯಸಂಪನ್ನನಾದ, ಪದ್ಮನಾಭನಾದ ಭಗವಂತನು ವೇದವ್ಯಾಸಸ್ವರೂಪನಾಗಿ ಕೂಡಲೇ ಅಲ್ಲಿಗೆ ಬಂದ. ಉತ್ಕೃಷ್ಟವಾದ  ಎಲ್ಲಾ ಗುಣಗಳೇ ಮೂರ್ತಿವತ್ತಾಗಿ ಬಂದ ಅವನು,  ಪಾಂಡವರನ್ನು ಕರೆದುಕೊಂಡು ಪಾಂಡುವಿನ ಮನೆಗೆ ತೆರಳಿದ. 

ತತ್ಸ್ವೀಕೃತೇಷು ಸಕಲಾ ಅಪಿ ಭೀಷ್ಮಮುಖ್ಯಾ ವೈಚಿತ್ರವೀರ್ಯ್ಯಸಹಿತಾಃ ಪರಿಪೂಜ್ಯ ಸರ್ವಾನ್
ಕುನ್ತ್ಯಾ ಸಹೈವ ಜಗೃಹುಃ ಸುಭೃಶಂ ತದಾsರ್ತ್ತಾ ವೈಚಿತ್ರವೀರ್ಯ್ಯತನಯಾಃ ಸಹ ಸೌಬಲೇನ೧೪.೬೦

ವೇದವ್ಯಾಸರೇ ಬಂದು ಪಾಂಡವರನ್ನು ಸ್ವೀಕರಿಸಿದಮೇಲೆ,  ದೃತರಾಷ್ಟ್ರನಿಂದ ಕೂಡಿರುವ ಭೀಷ್ಮಾದಿಗಳು ಎಲ್ಲರನ್ನೂ ಕೂಡಾ ಗೌರವಿಸಿ, ಕುಂತಿಯ ಜೊತೆಗೇ ಮಕ್ಕಳನ್ನೂ ಸ್ವೀಕರಿಸಿದರು. ಆಗ ದೃತರಾಷ್ಟ್ರನ ಮಕ್ಕಳು ಶಕುನಿಯಿಂದ ಕೂಡಿಕೊಂಡು ಬಹಳವಾಗಿ ದುಃಖಕ್ಕೊಳಗಾದರು.

[ಇಲ್ಲೊಂದು ವಿಶೇಷತೆ ಇದೆ. ಋಷಿಕೇಶತೀರ್ಥರ ಮೂಲಪಾಠದಲ್ಲಿ ‘ವೈಚಿತ್ರವೀರ್ಯ್ಯಸಹಿತಾಃ’ ಎಂದಿದೆ. ಏಕೆ ಹೀಗೆ ಪ್ರಯೋಗ ಮಾಡಿದರು ? ಇದು ತಪ್ಪಿರಬಹುದೇ?  ಅಥವಾ ಇಲ್ಲಿ  ವೈಚಿತ್ರವೀರ್ಯ್ಯ ಎಂದರೆ   ಚಂಚಲ ಮನಸ್ಸಿನವ ಎಂದು ಪರಿಹಾಸ ಮಾಡುವುದಕ್ಕಾಗಿ ಈ ರೀತಿ ಪ್ರಯೋಗ ಇರಬಹುದೇ? ಚಿತ್ತ ವೈಚಿತ್ರ್ಯದಿಂದ ಪರೀಗ್ರಹೀತವಾದ ಸ್ವಭಾವವುಳ್ಳವ (ಯಾವಾಗಲೂ ಅದೋ, ಇದೋ ಎನ್ನುವ ಚಂಚಲ ಚಿತ್ತತೆಯಲ್ಲೇ ಇರುವವ) ಎನ್ನುವ ಪ್ರಯೋಗ ಇದಾಗಿರಲೂಬಹುದು].   

Mahabharata Tatparya Nirnaya Kannada 1448_1454


ಮಾದ್ರೀ ಪತಿಂ ಮೃತಮವೇಕ್ಷ್ಯ ರುರಾವ ದೂರಾತ್
ತಚ್ಛುಶ್ರುವುಶ್ಚ ಪೃಥಯಾ ಸಹ ಪಾಣ್ಡುಪುತ್ರಾಃ
ತೇಷ್ವಾಗತೇಷು ವಚನಾದಪಿ ಮಾದ್ರವತ್ಯಾಃ
ಪುತ್ರಾನ್ ನಿವಾರ್ಯ ತು ಪೃಥಾ ಸ್ವಯಮತ್ರ ಚಾsಗಾತ್ ೧೪.೪೮

ಮಾದ್ರಿಯು ಸತ್ತ ತನ್ನ ಗಂಡನನ್ನು ಕಂಡು ಅಳುತ್ತಿರಲು, ಕುಂತಿಯಿಂದ ಕೂಡಿಕೊಂಡ ಪಾಂಡವರಿಗೂ  ಅವಳ ರೋದನ ಕೇಳಿಸಿತು. ಅವರೆಲ್ಲರೂ ಆಕೆಯತ್ತ ಬರುತ್ತಿರಲು, ಮಾದ್ರಿಯ ಮಾತಿನಂತೆ(ಪುತ್ರರೊಂದಿಗೆ ಬರಬೇಡ, ನೀನು ಮಾತ್ರ ಬಾ ಎನ್ನುವ ಮಾದ್ರಿಯ ಮಾತಿನಂತೆ)  ಮಕ್ಕಳನ್ನು ದೂರದಲ್ಲೇ ಬಿಟ್ಟು, ಕುಂತಿಯು ತಾನೇ ಮಾದ್ರಿಯ ಸಮೀಪಕ್ಕೆ ಬಂದಳು.

ಪತ್ಯುಃ ಕಳೇಬರಮವೇಕ್ಷ್ಯ ನಿಶಮ್ಯ ಮಾದ್ರ್ಯಾ
ಕುನ್ತೀ ಭೃಶಂ ವ್ಯಥಿತಹೃತ್ಕಮಳೈವ ಮಾದ್ರೀಮ್
ಧಿಕ್ಕೃತ್ಯ ಚಾನುಮರಣಾಯ ಮತಿಂ ಚಕಾರ
ತಸ್ಯಾಃ ಸ್ವನೋ ರುದಿತಜಃ ಶ್ರುತ ಆಶು ಪಾರ್ಥೈಃ ೧೪.೪೯

ಗಂಡನ ಶವವನ್ನು ನೋಡಿದ ಕುಂತಿಯು, ಮಾದ್ರಿಯಿಂದ ಎಲ್ಲಾ ವೃತ್ತಾಂತವನ್ನು ಕೇಳಿ ತಿಳಿದು, ಅತ್ಯಂತ ನೋವಿನಿಂದ ಮಾದ್ರಿಯನ್ನು ಬೈದು, ಸಹಗಮನಕ್ಕೆಂದು ಬುದ್ಧಿಯನ್ನು ಮಾಡಿದಳು. ಅವಳ ಅಳುವಿನಿಂದ ಉಂಟಾದ ಧ್ವನಿಯು ಪಾಂಡವರಿಂದ ಕೇಳಲ್ಪಟ್ಟಿತು. 

ತೇಷ್ವಾಗತೇಷ್ವಧಿಕ ಆಸ ವಿರಾವ ಏತಂ ಸರ್ವೇsಪಿ ಶುಶ್ರುವು ಋಷಿಪ್ರವರಾ ಅಥಾತ್ರ
ಆಜಗ್ಮುರುತ್ತಮಕೃಪಾ ಋಷಿಲೋಕಮದ್ಧ್ಯೇ ಪತ್ನೀ ನೃಪಾನುಗಮನಾಯ ಚ ಪಸ್ಪೃಧಾತೇ ೧೪.೫೦

ಕುಂತಿಯ ಅಳುವನ್ನು ಕೇಳಿದ ಪಾಂಡವರೆಲ್ಲರೂ ಅಲ್ಲಿಗೆ ಬರುತ್ತಿರಲು, ಅಳುವಿನ ಶಬ್ದವು  ಅಧಿಕವಾಯಿತು. ಈ ಅಳುವಿನ ಧ್ವನಿಯನ್ನು ಕೇಳಿ ಅಲ್ಲಿದ್ದ ಉತ್ಕೃಷ್ಟವಾದ ಕೃಪೆಯುಳ್ಳ ಋಷಿಗಳೂ ಕೂಡಾ  ಅಲ್ಲಿಗೆ ಬಂದು ಸೇರಿದರು. ಋಷಿಗಳೆಲ್ಲರು ಸೇರುತ್ತಿದ್ದಂತೆ, ಆ ಇಬ್ಬರು ಪತ್ನಿಯರು ಸಹಗಮನಕ್ಕಾಗಿ ಸ್ಪರ್ಧೆಮಾಡತೊಡಗಿದರು. 

ತೇ ಸನ್ನಿವಾರ್ಯ್ಯ ತು ಪೃಥಾಮಥ ಮಾದ್ರವತ್ಯಾ ಭರ್ತ್ತುಃ ಸಹಾನುಗಮನಂ ಬಹು ಚಾರ್ತ್ಥಯನ್ತ್ಯಾಃ
ಸಂವಾದಮೇವ ನಿಜದೋಷಮವೇಕ್ಷ್ಯ ತಸ್ಯಾಶ್ಚಕ್ರುಃ ಸದಾsವಗತಭಾಗವತೋಚ್ಚಧರ್ಮ್ಮಾಃ ೧೪.೫೧

ಆಗ ಅಲ್ಲಿ ಸೇರಿದ್ದ ಋಷಿಶ್ರೇಷ್ಠರು, ಗಂಡನ ಜೊತೆಗೆ ಬೇರೆಲೋಕಕ್ಕೆ ಹೋಗಬೇಕು ಎಂದು ಬಯಸುತ್ತಿರುವ ಕುಂತಿಯನ್ನು ತಡೆದರು. ತನ್ನ ದೋಷ ಏನು ಎಂದು ತಿಳಿದೇ ಭರ್ತೃಗಳ ಜೊತೆಗೆ ಸಹಯೋಗವನ್ನು ಬಹಳವಾಗಿ ಬೇಡಿಕೊಳ್ಳುತ್ತಿರುವ ಮಾದ್ರಿಗೆ ಭಾಗವತ ಧರ್ಮವನ್ನು ಚೆನ್ನಾಗಿ ಬಲ್ಲ ಆ ಋಷಿಗಳು ತಮ್ಮ ಒಪ್ಪಿಗೆಯನ್ನು ನೀಡಿದರು.

ಭರ್ತ್ತುರ್ಗ್ಗುಣೈರನಧಿಕೌ ತನಯಾರ್ತ್ಥಮೇವ ಮಾದ್ರ್ಯಾssಕೃತೌ ಸುರವರಾವಧಿಕೌ ಸ್ವತೋsಪಿ
ತೇನೈವ ಭರ್ತ್ತೃಮೃತಿಹೇತುರಭೂತ್ ಸಮಸ್ತ ಲೋಕೈಶ್ಚ ನಾತಿಮಹಿತಾ ಸುಗುಣಾsಪಿ ಮಾದ್ರೀ೧೪.೫೨

ಹಿಂದೆ ಮಾದ್ರಿಯಿಂದ, ತನಗಿಂತ ಅಧಿಕರಾದರೂ ಕೂಡಾ, ಗಂಡನ ಯೋಗ್ಯತೆಗಿಂತ ಅಧಿಕರಲ್ಲದ ಅಶ್ವೀದೇವತೆಗಳು ಸಂತತಿಗಾಗಿ ಕರೆಯಲ್ಪಟ್ಟರು. (ತನಗಿಂತ ಉತ್ತಮರಾಗಿದ್ದರೂ ಕೂಡಾ ಪಾಂಡುವಿಗಿಂತ ಯೋಗ್ಯತೆಯಲ್ಲಿ ಹೆಚ್ಚಿನವರಲ್ಲದ ಅಶ್ವೀದೇವತೆಗಳನ್ನು ಆಕೆ ತನಗೆ ಇಬ್ಬರು ಪುತ್ರರು ಬೇಕು ಎನ್ನುವ ವ್ಯಾಮೋಹದಿಂದ ಕರೆದಿದ್ದಳು). ಆ ಕಾರಣದಿಂದಲೇ ಆಕೆ ಇಂದು ತನ್ನ ಗಂಡನ ಸಾವಿಗೆ ತಾನೇ ಕಾರಣಳಾದಳು.  ಅಷ್ಟೇ ಅಲ್ಲಾ, ಒಳ್ಳೆಯ ಗುಣವುಳ್ಳವಳಾದರೂ ಕೂಡಾ ಆಕೆ ಸಮಸ್ತ ಜನರಿಂದ ಪೂಜಿತಳಾಗಲಿಲ್ಲ.

ಪಾಣ್ಡೋಃ ಸುತಾ ಮುನಿಗಣೈಃ ಪಿತೃಮೇಧಮತ್ರ ಚಕ್ರುರ್ಯ್ಯಾಥಾವದಥ ತೇನ ಸಹೈವ ಮಾದ್ರೀ
ಹುತ್ವಾSSತ್ಮದೇಹಮುರು ಪಾಪಮದಃ ಕೃತಂ ಚ  ಸಮ್ಮಾರ್ಜ್ಯ ಲೋಕಮಗಮನ್ನಿಜಭರ್ತ್ತುರೇವ೧೪.೫೩

ತದನಂತರ ಪಾಂಡುರಾಜನ ಮಕ್ಕಳು ತಾಯಿ ಕುಂತಿಯೊಂದಿಗೆ ಕೂಡಿಕೊಂಡು, ಮುನಿಗಣದ ಸಹಕಾರದೊಂದಿಗೆ, ಶಾಸ್ತ್ರದಲ್ಲಿ ಹೇಳಿದಂತೆ, ಪಾಂಡುವಿನ ಮೃತಶರೀರಕ್ಕೆ ಸಂಸ್ಕಾರಗಳನ್ನು ಮಾಡಿದರು. ಪಾಂಡುವಿನ ಜೊತೆಗೇ ಮಾದ್ರಿಯೂ ಕೂಡಾ ತನ್ನ ದೇಹವನ್ನು ಅರ್ಪಿಸಿ, ಇಲ್ಲಿ ಮಾಡಿದ ತನ್ನೆಲ್ಲಾ  ಪಾಪಗಳನ್ನು ತೊಳೆದುಕೊಂಡು ತನ್ನ ಗಂಡನ ಲೋಕವನ್ನೇ ಸೇರಿದಳು.

ಪಾಣ್ಡುಶ್ಚ ಪುತ್ರಕಗುಣೈಃ ಸ್ವಗುಣೈಶ್ಚ ಸಾಕ್ಷಾತ್ ಕೃಷ್ಣಾತ್ಮಜಃ ಸತತಮಸ್ಯ ಪದೈಕಭಕ್ತಃ
ಲೋಕಾನವಾಪ ವಿಮಲಾನ್ ಮಹಿತಾನ್ ಮಹದ್ಭಿಃ ಕಿಂ ಚಿತ್ರಮತ್ರ ಹರಿಪಾದವಿನಮ್ರ ಚಿತ್ತೇ ೧೪.೫೪

ನೇರವಾಗಿ ವೇದವ್ಯಾಸರ ಮಗನಾದವನಾಗಿ, ನಿರಂತರ ವೇದವ್ಯಾಸರ ಪದೈಕ ಭಕ್ತನಾಗಿರುವ ಪಾಂಡುವು, ತನ್ನ ಮಕ್ಕಳ ಗುಣದಿಂದಲೂ, ತನ್ನ ಗುಣದಿಂದಲೂ, ಸಜ್ಜನರಿಂದ ಪೂಜಿತವಾದ ನೀರ್ಮಲವಾದ ಲೋಕಗಳನ್ನು ಹೊಂದಿದನು. ಪರಮಾತ್ಮನ ಪಾದದಲ್ಲಿ ನಮ್ರವಾದ ಮನಸ್ಸುಳ್ಳ ಪಾಂಡುವು ಈರೀತಿ ಮೇಲಿನ ಲೋಕಗಳನ್ನು ಪಡೆದ ಎನ್ನುವುದರಲ್ಲೇನಾಶ್ಚರ್ಯ? (ಯಾವ ಆಶ್ಚರ್ಯವೂ ಇಲ್ಲಾ).

Tuesday, November 26, 2019

Mahabharata Tatparya Nirnaya Kannada 1443_1447


ಜಿತ್ವಾ ತಮೂರ್ಜ್ಜಿತಬಲಂ ಭಗವಾನಜೇಶಶಕ್ರಾದಿಭಿಃ ಕುಸುಮವರ್ಷಿಭಿರೀಡ್ಯಮಾನಃ
ರಾಮಾದಿಭಿಃ ಸಹಿತ ಆಶು ಪುರೀಂ ಪ್ರವಿಶ್ಯ ರೇಮೇsಭಿವನ್ದಿತಪದೋ ಮಹತಾಂ ಸಮೂಹೈಃ ೧೪.೪೩

ಪುಷ್ಪವೃಷ್ಟಿ ಮಾಡತಕ್ಕಂತಹ ಬ್ರಹ್ಮ-ರುದ್ರ-ಇಂದ್ರ ಮೊದಲಾದವರಿಂದ ಸ್ತುತ್ಯನಾದ ಭಗವಂತನು, ಉತ್ಕೃಷ್ಟವಾದ ಬಲವುಳ್ಳ ಜರಾಸಂಧನನ್ನು ಸೋಲಿಸಿ, ಬಲರಾಮ, ಸಾತ್ಯಕಿ, ಮೊದಲಾದವರಿಂದ ಕೂಡಿಕೊಂಡು ಶೀಘ್ರದಲ್ಲಿಯೇ ಮಧುರಾ ಪಟ್ಟಣವನ್ನು ಪ್ರವೇಶಮಾಡಿ, ಅಲ್ಲಿರುವ ಶ್ರೇಷ್ಠರೆಲ್ಲರಿಂದ ನಮಸ್ಕೃತನಾಗಿ ಕ್ರೀಡಿಸಿದನು.
[ಯಾದವರು ಹಾಗು ಜರಾಸಂಧನ ನಡುವೆ ನಡೆದ ಈ ಮೊತ್ತಮೊದಲ ಯುದ್ಧಕಾಲದಲ್ಲಿ ಪಾಂಡವರು ಎಲ್ಲಿ ಏನು ಮಾಡುತ್ತಿದ್ದರು ಎನ್ನುವ ವಿವರವನ್ನು ಮುಂದೆ ಕಾಣುತ್ತೇವೆ:]

ರ್ದ್ಧತ್ಸು ಪಾಣ್ಡುತನಯೇಷು ಚತುರ್ದ್ದಶಂ ತು  ಜನ್ಮರ್ಕ್ಷಮಾಸ ತನಯಸ್ಯ ಸಹಸ್ರದೃಷ್ಟೇಃ
ಪ್ರತ್ಯಾಬ್ದಿಕಂ ಮುನಿಗಣಾನ್ ಪರಿವೇಷಯನ್ತೀ ಕುನ್ತೀ ತದಾssಸ ಬಹುಕಾರ್ಯ್ಯಪರಾ ನಯಜ್ಞಾ೧೪.೪೪

ಪಾಂಡುಪುತ್ರರು ಬೆಳೆಯುತ್ತಿರಲು, ಸಾವಿರ ಕಣ್ಗಳವನ(ಇಂದ್ರನ) ಪುತ್ರನಿಗೆ ಅರ್ಜುನನಿಗೆ ಹದಿನಾಲ್ಕನೆಯ ಜನ್ಮನಕ್ಷತ್ರವಾಯಿತು. ಪ್ರತೀ ವರ್ಷವೂ ಕೂಡಾ ಮುನಿ ಸಮೂಹಕ್ಕೆ ಪರಿವೇಷಣ ಮಾಡುತ್ತಾ ಬಂದಿರುವ  ಕುಂತಿಯು, ಈ ಸಂದರ್ಭದಲ್ಲೂ ಕೂಡಾ ಬಹಳ ಕೆಲಸದಲ್ಲಿ ನಿರತಳಾಗಿದ್ದಳು.   

ತತ್ಕಾಲ ಏವ ನೃಪತಿಃ ಸಹ ಮಾದ್ರವತ್ಯಾ ಪುಂಸ್ಕೋಕಿಲಾಕುಲಿತಪುಲ್ಲವನಂ ದದರ್ಶ
ತಸ್ಮಿನ್ ವಸನ್ತಪವನಸ್ಪರ್ಶೇಧಿತಃ ಸ ಕನ್ದರ್ಪ್ಪಮಾರ್ಗ್ಗಣವಶಂ ಸಹಸಾ ಜಗಾಮ ೧೪.೪೫

ಇದೇ ಕಾಲದಲ್ಲಿ ಅತ್ತ ಪಾಂಡುರಾಜನು ಮಾದ್ರವತಿಯಿಂದ ಕೂಡಿಕೊಂಡು, ಗಂಡು ಕೋಗಿಲೆಗಳ ನಾದದಿಂದ ಕೂಡಿರುವ, ಚನ್ನಾಗಿ ವಿಕಸಿತವಾದ ಕಾಡನ್ನು ಕಂಡ. ಆ ಕಾಡಿನಲ್ಲಿ ವಸಂತಕಾಲದ ತಂಗಾಳಿಯ ಮುಟ್ಟುವಿಕೆಯಿಂದ ಕಾಮೋದ್ರಿಕ್ತನಾದ ಆತ, ಶೀಘ್ರದಲ್ಲೇ  ಕಾಮನ ಬಾಣದ ವಶನಾಗಿ ಹೋದ.

ಜಗ್ರಾಹ ತಾಮಥ ತಯಾ ರಮಮಾಣ ಏವ ಯಾತೋ ಯಮಸ್ಯ ಸದನಂ ಹರಿಪಾದಸಙ್ಗೀ
ಪೂರ್ವಂ ಶಚೀರಮಣಮಿಚ್ಛತ ಏ ವಿಘ್ನಂ ಶಕ್ರಸ್ಯ ತದ್ದರ್ಶನೋಪಗತೋ ಹಿ ಚಕ್ರೇ ೧೪.೪೬

ತೇನೈವ ಮಾನುಷಮವಾಪ್ಯ ರತಿಸ್ಥ ಏವ ಪಞ್ಚತ್ವಮಾಪ ರತಿವಿಘ್ನಮಪುತ್ರತಾಂ ಚ
ಸ್ವಾತ್ಮೋತ್ತಮೇಷ್ವಥ ಸುರೇಷು ವಿಶೇಷತಶ್ಚ ಸ್ವಲ್ಪೋsಪಿ ದೋಷ ಉರುತಾಮಭಿಯಾತಿ ಯಸ್ಮಾತ್ ೧೪.೪೭

ಪರಮಾತ್ಮನ ಪಾದದಲ್ಲೇ ಆಸಕ್ತಿಯುಳ್ಳ ಪಾಂಡುವು, ಕ್ರೀಡಿಸುವುದಕ್ಕೋಸ್ಕರ ಮಾದ್ರಿಯನ್ನು ಸ್ವೀಕರಿಸಿ, ಅವಳೊಂದಿಗೆ ಆನಂದಪಡುತ್ತಲೇ ಯಮನ ವಶನಾದ(ಸತ್ತ). ಪಾಂಡುವಿಗೆ ಏಕೆ ಹೀಗಾಯಿತು ಎಂದರೆ: (ಋಷಿ ಶಾಪಕ್ಕಿಂತಲೂ ಪ್ರಬಲವಾದ ಇನ್ನೊಂದು ಕಾರಣವನ್ನು ಇಲ್ಲಿ ವಿವರಿಸಿದ್ದಾರೆ: ) ಹಿಂದೆ(ಮೂಲ ರೂಪದಲ್ಲಿ ) ಇಂದ್ರನನ್ನು ಕಾಣಲೆಂದು ತೆರಳಿದ್ದಾಗ,  ಶಚಿದೇವಿಯೊಂದಿಗೆ ಕ್ರೀಡಿಸಲೆಂದು ಬಯಸಿಕೊಂಡಿದ್ದ ಇಂದ್ರನಿಗೆ, ಅವನ ಕಣ್ಣಿಗೆ ಕಾಣುವ ಮೂಲಕ ರತಿಬಂಧನವನ್ನುಂಟುಮಾಡಿದ್ದ. 
ಆರೀತಿ ವಿಘ್ನಮಾಡಿದ್ದರಿಂದಲೇ ಆತ ಮನುಷ್ಯಜನ್ಮವನ್ನು ಹೊಂದಿ, ತಾನು ಮೆಚ್ಚಿದ ಹೆಣ್ಣಿನೊಡನೆ ರತಿಯಲ್ಲಿರುವಾಗಲೇ ಪಞ್ಚತ್ವವನ್ನು(ಸಾವನ್ನು) ಹೊಂದಿದ. ಹೀಗೆ ಪಾಂಡು ತನ್ನ ರತಿಗೆ ವಿಘ್ನವನ್ನೂ, ಮಕ್ಕಳಿಲ್ಲದಿರುವಿಕೆಯನ್ನೂ ಹೊಂದುವಂತಾಯಿತು.
ವಿಶೇಷವಾಗಿ  ದೇವತೆಗಳಲ್ಲಿ ಸ್ವಲ್ಪದೋಷವೂ ಕೂಡಾ ಬಹಳದೊಡ್ಡ ಫಲವನ್ನು ಕೊಡುತ್ತದೆ. ಅದರಲ್ಲೂ ತನಗಿಂತ ಉತ್ತಮರಾಗಿರುವ ದೇವತೆಗಳ ವಿಷಯದಲ್ಲಿ ಅಲ್ಪದೋಷವೂ ಕೂಡಾ ಮಹತ್ವವನ್ನು ಹೊಂದುತ್ತದೆ. 

Tuesday, November 5, 2019

Mahabharata Tatparya Nirnaya Kannada 1437_1442


ಶ್ರುತ್ವಾsಥ ಶಙ್ಖರವಮಮ್ಬುಜಲೋಚನಸ್ಯ ವಿದ್ರಾವಿತಾನಪಿ ನೃಪಾನಭಿವೀಕ್ಷ್ಯ ರಾಮಃ
ಯುದ್ಧ್ಯನ್ತಮೀಕ್ಷ್ಯ ಚ ರಿಪುಂ ವವೃಧೇ ಬಲೇನ ತ್ಯಕ್ತ್ವಾ ರಿಪುಂ ಮುಸಲಮಾದದ ಆಶ್ವಮೋಘಮ್೧೪.೩೭

ತದನಂತರ, ತಾವರೆ ಕಣ್ಣಿನ ಪರಮಾತ್ಮನ ಶಂಖನಾದವನ್ನು ಕೇಳಿದ ಬಲರಾಮ, ಓಡುತ್ತಿರುವ ಎಲ್ಲಾ ರಾಜರುಗಳನ್ನು ಕಂಡು, ತನ್ನೊಂದಿಗೆ ಯುದ್ಧ ಮಾಡುತ್ತಿರುವ ಶತ್ರುವನ್ನು ಕಂಡು ಉತ್ಸಾಹಿತನಾಗಿ ಬಲದಿಂದ ಬೆಳೆದು ನಿಂತ. ತಕ್ಷಣ ಶತ್ರುವನ್ನು ತಿರಸ್ಕರಿಸಿ, ಎಂದೂ ವ್ಯರ್ಥವಾಗದ ತನ್ನ ಮುಸಲಾಯುಧವನ್ನು ಬಲರಾಮ ಕೈಗೆತ್ತಿಗೊಂಡ.

ತೇನಾsಹತಃ ಶಿರಸಿ ಸಮ್ಮುಮುಹೇsತಿವೇಲಂ ಬಾರ್ಹದ್ರಥೋ ಜಗೃಹ ಏನಮಥೋ ಹಲೀ ಸಃ
ತತ್ರೈಕಲವ್ಯ ಉತ ಕೃಷ್ಣಶರೈಃ ಫಲಾಯನ್ನಸ್ತ್ರಾಣಿ ರಾಮಶಿರಸಿ ಪ್ರಮುಮೋಚ ಶೀಘ್ರಮ್ ೧೪.೩೮

ಆ ಒನಕೆಯಿಂದ ತಲೆಯಲ್ಲಿ ಹೊಡೆಯಲ್ಪಟ್ಟ ಜರಾಸಂಧನು ಬಹಳ ವೇಗವಾಗಿ ಮೂರ್ಛೆಗೊಂಡನು. ಹೀಗೆ ಮೂರ್ಛೆಹೊಂದಿದ ಜರಾಸಂಧನನ್ನು ಬಲರಾಮ ಹಿಡಿದುಕೊಂಡನು. ಆಗ ಕೃಷ್ಣನ ಬಾಣಗಳಿಂದ ನೊಂದು ಓಡುತ್ತಿದ್ದ ಏಕಲವ್ಯನು ಜರಾಸಂಧನನ್ನು ಹಿಡಿದಿರುವ ಬಲರಾಮನನ್ನು ನೋಡಿ, ರಾಮನ ತಲೆಯಮೇಲೆ ವೇಗವಾಗಿ ಅಸ್ತ್ರಗಳನ್ನು ಪ್ರಯೋಗಿಸಿದನು.

ಭೀತೇನ ತೇನ ಸಮರಂ ಭಗವಾನನಿಚ್ಛನ್ ಪ್ರದ್ಯುಮ್ನಮಾಶ್ವಸೃಜದಾತ್ಮಸುತಂ ಮನೋಜಮ್
ಪ್ರದ್ಯುಮ್ನ ಏನಮಭಿಯಾಯ ಮಹಾಸ್ತ್ರಜಾಲೈ ರಾಮಾಸ್ತು ಮಾಗಧಮಥಾsತ್ಮರತಂ ನಿನಾಯ ೧೪.೩೯

ಈಗಾಗಲೇ ಭಯಗೊಂಡಿರುವ ಏಕಲವ್ಯನೊಂದಿಗೆ ಯುದ್ಧವನ್ನು ಬಯಸದ ಶ್ರೀಕೃಷ್ಣನು, ಕೂಡಲೇ ತನ್ನ ಮಗನಾದ ಪ್ರದ್ಯುಮ್ನನನ್ನು ಮನಸ್ಸಿನಿಂದಲೇ ಸೃಷ್ಟಿಮಾಡಿದ. ಹೀಗೆ ಸೃಷ್ಟಿಗೊಂಡ ಪ್ರದ್ಯುಮ್ನನು ಏಕಲವ್ಯನನ್ನು  ಮಹತ್ತರವಾದ ಅಸ್ತ್ರಗಳ ಸಮೂಹಗಳೊಂದಿಗೆ ಎದುರುಗೊಂಡ. ಇತ್ತ ಬಲರಾಮನು ಜರಾಸಂಧನನ್ನು ತನ್ನ ರಥದೆಡೆಗೆ ದರದರನೆ ಎಳೆದುಕೊಂಡು ಹೋದ.

ಯುಧ್ವಾ ಚಿರಂ ರಣಮುಖೇ ಭಗವತ್ಸುತೋsಸೌ ಚಕ್ರೇ ನಿರಾಯುಧಮಮುಂ ಸ್ಥಿರಮೇಕಲವ್ಯಮ್
ಅಂಶೇನ ಯೋ ಭುವಮಗಾನ್ಮಣಿಮಾನಿತಿ ಸ್ಮ ಸ ಕ್ರೋಧತನ್ತ್ರಗಣೇಷ್ವಧಿಪೋ ನಿಷಾದಃ ೧೪.೪೦

ಯುದ್ಧದಲ್ಲಿ ಪರಮಾತ್ಮನ ಮಗನಾದ ಪ್ರದ್ಯುಮ್ನನು ಬಹಳಕಾಲದ ತನಕ ಯುದ್ಧಮಾಡಿ, ಗಟ್ಟಿಯಾಗಿ ನಿಂತು ಯುದ್ಧಮಾಡುತ್ತಿದ್ದ ಏಕಲವ್ಯನನ್ನು  ಆಯುಧಹೀನನನ್ನಾಗಿ ಮಾಡಿದನು.
ಮೂಲತಃ ಏಕಲವ್ಯ ಯಾರು ಎನ್ನುವುದನ್ನು ಇಲ್ಲಿ ವಿವರಿಸಿದ್ದಾರೆ: ಯಾರು ಕ್ರೋಧವಶರೆಂಬ ರಾಕ್ಷಸರ ಒಡೆಯನಾಗಿದ್ದ ಮಣಿಮಂತನೋ, ಅವನೇ ಒಂದು ಅಂಶದಿಂದ ಬೇಡನಾಗಿ ಭೂಮಿಯಲ್ಲಿ ಏಕಲವ್ಯನೆಂಬ ಹೆಸರಿನಿಂದ ಹುಟ್ಟಿದ್ದನು.

ಪ್ರದ್ಯುಮ್ನಮಾತ್ಮನಿ ನಿಧಾಯ ಪುನಃ ಸ ಕೃಷ್ಣಃ ಸಂಹೃತ್ಯ ಮಾಗಧಬಲಂ ನಿಖಿಲಂ ಶರೌಘೈಃ
ಭೂಯಶ್ಚಮೂಮಭಿವಿನೇತುಮುದಾರಕರ್ಮ್ಮಾ ಬಾರ್ಹದ್ರಥಂ ತ್ವಮುಚದಕ್ಷಯಪೌರುಷೋsಜಃ೧೪.೪೧

ಎಂದೂ ಹುಟ್ಟದ ಉತ್ಕೃಷ್ಟಕ್ರಿಯೆಯುಳ್ಳ ಪರಮಾತ್ಮನು ಪ್ರದ್ಯುಮ್ನನನ್ನು ಮರಳಿ ತನ್ನಲ್ಲಿ ಇಟ್ಟುಕೊಂಡು, ಜರಾಸಂಧನ ಸಮಸ್ತ ಸೈನ್ಯವನ್ನು ತನ್ನ ಬಾಣಗಳ ಸಮೂಹದಿಂದ ನಾಶಮಾಡಿದ. ಬೃಹದೃತನ ಮಗನಾದ ಜರಾಸಂಧ ಮತ್ತೊಮ್ಮೆ ಸೇನೆಯನ್ನು ಕಟ್ಟಿಕೊಂಡು ಬರಲಿ ಎಂದು ಶ್ರೀಕೃಷ್ಣ ಆತನನ್ನು ಬಿಟ್ಟನಷ್ಟೇ.
[ಇದು ಭಗವಂತನ ಭೂಭಾರ ಹರಣದ ಒಂದು ನಡೆ. ಜರಾಸಂಧನನ್ನು ಕೊಲ್ಲದೇ ಬಿಡುವುದರಿಂದ ಆತ ಮತ್ತೆ ಸೈನ್ಯವನ್ನು ಕಟ್ಟಿಕೊಂಡು ಬರಲು ಅವಕಾಶವಾಗುತ್ತದೆ. ಆತ ತರುವ ಸೈನ್ಯ ತಾಮಸ ಸೈನ್ಯವೇ ಆಗಿರುತ್ತದೆ. ಹೀಗೆ, ಜರಾಸಂಧ ಪುನಃ ಸೈನ್ಯದೊಂದಿಗೆ ಯುದ್ಧಕ್ಕೆ ಬರಲಿ ಎಂದೇ ಶ್ರೀಕೃಷ್ಣನು ಅವನನ್ನು ಈ ಯುದ್ಧದಲ್ಲಿ ಕೊಲ್ಲಲಿಲ್ಲ].

ವ್ರೀಳಾನತಾಚ್ಛವಿಮುಖಃ ಸಹಿತೋ ನೃಪೈಸ್ತೈರ್ಬಾರ್ಹದ್ರಥಃ ಪ್ರತಿಯಯೌ ಸ್ವಪುರೀಂ ಸ ಪಾಪಃ
ಆತ್ಮಾಭಿಷಿಕ್ತಮಪಿ ಭೋಜವರಾಧಿಪತ್ಯೇ ದೌಹಿತ್ರಮಗ್ರತ ಉತ ಪ್ರಣಿಧಾಯ ಮನ್ದಃ ೧೪.೪೨

ನಾಚಿಕೆಯಿಂದ ಬಗ್ಗಿ, ಕಳೆಗುಂದಿದ ಮೋರೆಯವನಾಗಿ, ಇತರ ಎಲ್ಲಾ ರಾಜರಿಂದ ಕೂಡಿದ ಪಾಪಿಷ್ಠನಾದ ಜರಾಸಂಧನು ತನ್ನ ಪಟ್ಟಣಕ್ಕೆ ಹಿಂತಿರುಗಿದ. ಹೀಗೆ ಹೋಗುವಾಗ, ಹಿಂದೆ ಮಧುರಾ ರಾಜ್ಯದಲ್ಲಿ ತನ್ನಿಂದ ಅಭಿಷಿಕ್ತನಾದ ಕಂಸನ ಮಗನನ್ನು ಮುಂದೆ ಇಟ್ಟುಕೊಂಡು ಹೋದ.
[ಹೇಗೆ ಶ್ರೀರಾಮ ಯುದ್ಧಕ್ಕೂ ಮೊದಲು ವಿಭೀಷಣನಿಗೆ ಅಭಿಷೇಕ ಮಾಡಿಸಿದ್ದನೋ ಹಾಗೇ  ಜರಾಸಂಧನೂ ಕೂಡಾ  ಯುದ್ಧಕ್ಕೂ ಮೊದಲೇ ಕಂಸನ ಮಗನಿಗೆ ಅಭಿಷೇಕ ಮಾಡಿಸಿ ಯುದ್ಧ ಮಾಡಲು ಬಂದಿದ್ದ. ಆದರೆ ಹೀನಾಯ ಸೋಲಿನೊಂದಿಗೆ ಈ ರೀತಿ ಹಿಂತಿರುಗಿದ].