ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Thursday, February 22, 2018

Mahabharata Tatparya Nirnaya Kannada 3.65-3.84

ಸ ಕಶ್ಯಪಸ್ಯಾದಿತಿಗರ್ಭಜನ್ಮನೋ ವಿವಸ್ವತಸ್ತನ್ತುಭವಸ್ಯ ಭೂಭೃತಃ ।

ಗೃಹೇ ದಶಸ್ಯನ್ದನನಾಮಿನೋsಭೂತ್ ಕೌಸಲ್ಯಕಾನಾಮ್ನಿ ತದರ್ತ್ಥಿನೇಷ್ಟಃ ॥೩.೬೫

 

ಪುತ್ರ ಬೇಕೆಂದು ಭಗವಂತನನ್ನು ಯಾಗದಿಂದ ಆರಾಧಿಸಿದ, ಅದಿತಿ-ಕಾಶ್ಯಪರಲ್ಲಿ ಹುಟ್ಟಿದ, ಸೂರ್ಯ ವಂಶದಲ್ಲಿ ಬಂದ ದಶರಥ ಎಂಬ ಹೆಸರಿನ ರಾಜನ ಹೆಂಡತಿಯಾದ ಕೌಸಲ್ಯಾದೇವಿಯಲ್ಲಿ  ಭಗವಂತನು ಶ್ರೀರಾಮನಾಗಿ ಅವತರಿಸಿದನು.

 

ತದಾಜ್ಞಯಾ ದೇವಗಣಾ ಬಭೂವಿರೇ ಪುರೈವ ಪಶ್ಚಾದಪಿ ತಸ್ಯ ಭೂಮ್ನಃ ।

ನಿಷೇವಣಾಯೋರುಗುಣಸ್ಯ ವಾನರೇಷ್ವಥೋ ನರೇಷ್ವೇವ ಚ ಪಶ್ಚಿಮೋದ್ಭವಾಃ॥೩.೬೬

 

ದೇವರ ಆಜ್ಞೆಯಿಂದ, ನಾರಾಯಣನ ಸೇವೆಗಾಗಿ ದೇವತೆಗಳಲ್ಲಿ ಕೆಲವರು ಪರಮಾತ್ಮನ ಅವತಾರಕ್ಕಿಂತ ಮೊದಲೇ, ಇನ್ನು ಕೆಲವರು ಅವತಾರದ  ನಂತರ  ಹುಟ್ಟಿದರು.  ಕಪಿರೂಪದಲ್ಲಿ ಹುಟ್ಟಿದವರು ರಾಮನಿಗಿಂತ ಮೊದಲು ಹುಟ್ಟಿದರೆ, ಮನುಷ್ಯರೂಪದಲ್ಲಿ ಹುಟ್ಟಿದವರು ಭಗವಂತನ ಅವತಾರದ  ನಂತರ ಹುಟ್ಟಿದರು.

 

ಸ ದೇವತಾನಾಂ ಪ್ರಥಮೋ ಗುಣಾಧಿಕೋ ಬಭೂವ ನಾಮ್ನಾ ಹನುಮಾನ್ ಪ್ರಭಞ್ಜನಃ ।

ಸ್ವಸಮ್ಭವಃ ಕೇಸರಿಣೋ ಗೃಹೇ ಪ್ರಭುರ್ಬಭೂವ ವಾಲೀ ಸ್ವತ ಏವ ವಾಸವಃ ॥೩.೬೭

 

ಮೊದಲು ಹುಟ್ಟಿದ ಕಪಿಗಳಲ್ಲಿ ಪ್ರಮುಖರ ಕುರಿತು ಇಲ್ಲಿ ಹೇಳಿದ್ದಾರೆ:  ದೇವತೆಗಳಲ್ಲಿ ಮೊದಲಿಗನಾದ, ಗುಣದಿಂದ ಮಿಗಿಲಾದ ಮುಖ್ಯಪ್ರಾಣನು  ಕೇಸರಿಯ ಹೆಂಡತಿಯಾದ ಅಂಜನಾದೇವಿಯಲ್ಲಿ  ತಾನೇ ತಾನು ಹನುಮಂತ ಎನ್ನುವ ಹೆಸರಿನವನಾಗಿ ಹುಟ್ಟಿದನು.  ಇಂದ್ರನು ತಾನೇ ವಾಲಿಯಾಗಿ ಹುಟ್ಟಿದನು.

 

ಸುಗ್ರೀವ ಆಸೀತ್ ಪರಮೇಷ್ಠಿತೇಜಸಾ ಯುತೋ ರವಿಃ ಸ್ವಾತ್ಮತ ಏವ ಜಾಮ್ಬವಾನ್ ।

ಯ ಏವ ಪೂರ್ವಂ ಪರಮೇಷ್ಠಿವಕ್ಷಸಸ್ತ್ವಗುದ್ಭವೋ ಧರ್ಮ್ಮ ಇಹಾsಸ್ಯತೋSಭವತ್ ॥೩.೬೮

 

ಬ್ರಹ್ಮದೇವರ ಆವೇಶದಿಂದ ಕೂಡಿ ಸೂರ್ಯನು ಸುಗ್ರೀವನಾಗಿ ಹುಟ್ಟಿದನು.  ಯಾರು ಮೊದಲು ಬ್ರಹ್ಮದೇವರ ಎದೆಯ ಚರ್ಮದಿಂದ ಹುಟ್ಟಿದ್ದನೋ, ಯಾರು ಯಮಧರ್ಮರಾಜ ಎಂದು ಕರೆಯಲ್ಪಡುತ್ತಾನೋ, ಅವನು ಬ್ರಹ್ಮದೇವರ ಆವೇಶದೊಂದಿಗೆ  ಬ್ರಹ್ಮದೇವರ ಮುಖದಿಂದ ಜಾಂಬವಂತನಾಗಿ ಹುಟ್ಟಿದನು.

 

ಯ ಏವ ಸೂರ್ಯ್ಯಾತ್ ಪುನರೇವ ಸಞ್ಜ್ಞಯಾ ನಾಮ್ನಾ ಯಮೋ ದಕ್ಷಿಣದಿಕ್ಪ ಆಸೀತ್ ।

ಸ ಜಾಮ್ಬವಾನ್ ದೈವತಕಾರ್ಯ್ಯದರ್ಶಿನಾ ಪುರೈವ ಸೃಷ್ಟೋ ಮುಖತಃ ಸ್ವಯಮ್ಭುವಾ॥೩.೬೯

 

ಯಾವ ಯಮಧರ್ಮನು ಸೂರ್ಯನಿಂದ ಮತ್ತೆ ಸಂಜ್ಞ ಎಂಬ ವಿಶ್ವಕರ್ಮನ ಮಗಳಿಂದ ಹುಟ್ಟಿದನೋ, ಯಾರು ದಕ್ಷಿಣ ದಿಕ್ಪಾಲಕನೋ, ಅವನು ಬ್ರಹ್ಮದೇವರ ಮುಖದಿಂದ ಮೊದಲೇ ಜಾಂಬವಂತ  ಎಂಬ ಹೆಸರಿನಿಂದ ಹುಟ್ಟಿದನು.

 

ಬ್ರಹ್ಮೋದ್ಭವಃ ಸೋಮ ಉತಾಸ್ಯ ಸೂನೋರತ್ರೇರಭೂತ್ ಸೋsಙ್ಗದ ಏವ ಜಾತಃ ।

ಬೃಹಸ್ಪತಿಸ್ತಾರ ಉತೋ ಶಚೀ ಚ ಶಕ್ರಸ್ಯ ಭಾರ್ಯ್ಯೈವ ಬಭೂವ ತಾರಾ ॥೩.೭೦

ಬ್ರಹ್ಮನಿಂದ ಹುಟ್ಟಿದ್ದ ಸೋಮನು  ಪುನಃ ಅತ್ತ್ರಿಯ ಮಗನಾಗಿ ಹುಟ್ಟಿದನು.  ಅವನೇ ಅಂಗದನಾಗಿ ಹುಟ್ಟಿದನು.  ಅದೇ ರೀತಿ ಬೃಹಸ್ಪತಿ  ‘ತಾರ’ನಾಗಿ ಹುಟ್ಟಿದರೆ,  ಇಂದ್ರ ಪತ್ನಿ ಶಚಿಯು ‘ತಾರಾ’ ಎನ್ನುವ ಹೆಸರಿನಿಂದ  ಹುಟ್ಟಿದಳು.

 

ಬೃಹಸ್ಪತಿರ್ಬ್ರಹ್ಮಸುತೋsಪಿ ಪೂರ್ವಂ ಸಹೈವ ಶಚ್ಯಾ ಮನಸೋsಭಿಜಾತಃ

ಬ್ರಹ್ಮೋದ್ಭವಸ್ಯಾಙ್ಗಿರಸಃ ಸುತೋsಭೂನ್ಮಾರೀಚಜಸ್ಯೈವ ಶಚೀ ಪುಲೋಮ್ನಃ ೩.೭೧

 

ಬೃಹಸ್ಪತಿಯು ಮೊದಲು ಶಚಿಯ ಜೊತೆಗೆ ಬ್ರಹ್ಮದೇವರ ಮನಸ್ಸಿನಿಂದ ಹುಟ್ಟಿರುವನು. ಬ್ರಹ್ಮನ ಪುತ್ರನಾದರೂ ಅವನು ಬ್ರಹ್ಮನಿಂದ ಹುಟ್ಟಿದ ಅಂಗೀರಸನ ಮಗನೂ ಆದನು. ಮಾರೀಚನಿಗೆ ಹುಟ್ಟಿದ ಪುಲೋಮ ಎಂಬ ಋಷಿಗೆ ಶಚಿಯು ಹುಟ್ಟಿದಳು.  [ಅದಕ್ಕೆ ಅವಳನ್ನು ಪೌಲೋಮಿ ಎಂದು ಕರೆಯುತ್ತಾರೆ]

 

ಸ ಏವ ಶಚ್ಯಾ ಸಹ ವಾನರೋsಭೂತ್ ಸ್ವಸಮ್ಭವೋ ದೇವಗುರುರ್ಬೃಹಸ್ಪತಿಃ ।

ಅಭೂತ್ ಸುಷೇಣೋ ವರುಣೋsಶ್ವಿನೌ ಚ ಬಭೂವತುಸ್ತೌ ವಿವಿದಶ್ಚ ಮೈನ್ದಃ ॥೩.೭೨

 

ದೇವಗುರುವಾದ ಬೃಹಸ್ಪತಿಯು ಸ್ವಯಂ   ಶಚಿಯ ಜೊತೆಗೆ ವಾನರನಾಗಿ ಹುಟ್ಟಿದನು. [ ತಥಾಚ: ತಾರ ಎನ್ನುವವನು ಅಣ್ಣ, ತಾರಾ ಎನ್ನುವವಳು ತಂಗಿ]. ವರುಣನು ಸುಷೇಣ ಎಂಬ ಹೆಸರಿನ ಕಪಿಯಾದನು. ಅಶ್ವೀದೇವತೆಗಳೂ ಕೂಡಾ ವಿವಿದ ಮತ್ತು ಮೈಂದ ಎನ್ನುವ ಹೆಸರುಳ್ಳವರಾಗಿ ಹುಟ್ಟಿದರು.

 

ಬ್ರಹ್ಮೋದ್ಭವೌ ತೌ ಪುನರೇವ ಸೂರ್ಯಾದ್ ಬಭೂವತುಸ್ತತ್ರ ಕನೀಯಸಸ್ತು ।

ಆವೇಶ ಐನ್ದ್ರೋ ವರದಾನತೋsಭೂತ್ ತತೋ ಬಲೀಯಾನ್ ವಿವಿದೋ ಹಿ ಮೈನ್ದಾತ್ ॥೩.೭೩

 

ಬ್ರಹ್ಮ ದೇವರಿಂದ ಹುಟ್ಟಿರುವ ಅಶ್ವಿನೀದೇವತೆಗಳಿಬ್ಬರು ಮತ್ತೆ ಸೂರ್ಯನು ಕುದುರೆಯ ವೇಷವನ್ನು ಧರಿಸಿ ಬಂದಾಗ, ಕುದುರೆಯ ವೇಷವನ್ನು ಧರಿಸಿದ ಸಂಜ್ಞೆಯಲ್ಲಿ  ಹುಟ್ಟಿದರು.  ಅಲ್ಲಿ ಚಿಕ್ಕವನಿಗೆ (ವಿವಿದನಿಗೆ) ಇಂದ್ರನ ಆವೇಶ ಇತ್ತು. ಈ ವರದಾನದಿಂದ ಆತ ಮೈಂದನಿಗಿಂತ ಬಲಿಷ್ಠನಾಗಿದ್ದನು.

 

ನೀಲೋsಗ್ನಿರಾಸೀತ್ ಕಮಲೋದ್ಭವೋತ್ಥಃ ಕಾಮಃ ಪುನಃ ಶ್ರೀರಮಣಾದ್ ರಮಾಯಾಮ್ ।

ಪ್ರದ್ಯುಮ್ನನಾಮಾsಭವದೇವಮೀಶಾತ್ ಸ ಸ್ಕನ್ದತಾಮಾಪ ಸ ಚಕ್ರತಾಂ ಚ ॥೩.೭೪

 

ಅಗ್ನಿಯು ನೀಲ ಎನ್ನುವ ಕಪಿಯಾದನು.  ಬ್ರಹ್ಮದೇವರಿಂದ ಹುಟ್ಟಿದ ಕಾಮನು ಲಕ್ಷ್ಮೀ- ನಾರಾಯಣರಲ್ಲಿ ಪ್ರದ್ಯುಮ್ನ ಎಂಬ ಹೆಸರುಳ್ಳವನಾಗಿ ಹುಟ್ಟಿದನು. ಆತ ಸದಾಶಿವನಿಂದ ಸ್ಕಂದತ್ತ್ವವನ್ನು ಹೊಂದಿದನು. ಚಕ್ರಾಭಿಮಾನಿಯೂ ಆದನು. [ತಥಾಚ: ಆತ ಬ್ರಹ್ಮದೇವರ ಮಗನಾದಾಗ ಸನತ್ಕುಮಾರ ಎಂದು ಕರೆಯುತ್ತಾರೆ.  ಅದೇ ಕಾಮ ಪರಮಾತ್ಮನ ಮಗನಾದಾಗ ಚಕ್ರಾಭಿಮಾನಿ ಸುದರ್ಶನ ಎಂದು ಕರೆಯುತ್ತಾರೆ. ಅದೇ ಕಾಮ ರುದ್ರ ದೇವರ ಮಗನಾದ ಷಣ್ಮುಖ ಎನ್ನುವ ಹೆಸರಿನವನಾಗುತ್ತಾನೆ].

 

 

ಪೂರ್ವಂ ಹರೇಶ್ಚಕ್ರಮಭೂದ್ಧಿ ದುರ್ಗ್ಗಾ ತಮಃಸ್ಥಿತಾ ಶ್ರೀರಿತಿ ಯಾಂ ವದನ್ತಿ ।

ಸತ್ತ್ವಾತ್ಮಿಕಾ ಶಙ್ಖಮಥೋ ರಜಃಸ್ಥಾ ಭೂರ್ನ್ನಾಮಿಕಾ ಪದ್ಮಮಭೂದ್ಧರೇರ್ಹಿ ॥೩.೭೫

 

ಮೊದಲು ತಮೋಗುಣ ಅಭಿಮಾನಿನಿ ದುರ್ಗಾದೇವಿಯು ಪರಮಾತ್ಮನ ಚಕ್ರಾಭಿಮಾನಿಯಾದಳು.  ಯಾರನ್ನು ಸತ್ತ್ವಗುಣ ಅಭಿಮಾನಿನಿಯಾದ ಶ್ರೀಃ ಎಂದು ಹೇಳುತ್ತಾರೋ ಅವಳೇ ಶಂಖಾಭಿಮಾನಿಯಾದಳು.  ರಜೋ ಗುಣ ಅಭಿಮಾನಿನಿಯಾದ ಭೂದೇವಿಯು ಪರಮಾತ್ಮನ ಪದ್ಮವಾದಳು.

 

ಗದಾ ತು ವಾಯುರ್ಬಲಸಂವಿದಾತ್ಮಾ ಶಾರ್ಙ್ಗಶ್ಚ ವಿದ್ಯೇತಿ ರಮೈವ ಖಡ್ಗಃ ।

ದುರ್ಗ್ಗಾತ್ಮಿಕಾ ಸೈವ ಚ ಚರ್ಮ್ಮನಾಮ್ನೀ ಪಞ್ಚಾತ್ಮಕೋ ಮಾರುತ ಏವ ಬಾಣಾಃ ॥೩.೭೬

 

ಮುಖ್ಯಪ್ರಾಣನು ಗದಾಭಿಮಾನಿಯಾಗಿ ಹುಟ್ಟಿದನು. ವಿದ್ಯಾ ಎಂಬ ಹೆಸರಿನಿಂದ ವಿದ್ಯಾಭಿಮಾನಿಯಾದ ರಮೆಯೇ ಶಾರ್ಙ್ಗವಾದರೆ, ದುರ್ಗೆಯು  ಖಡ್ಗಾಭಿಮಾನಿಯಾಗಿ ಪರಮಾತ್ಮನ ಗುರಾಣಿಯಾದಳು. ಪ್ರಾಣ-ಅಪಾನ ಮೊದಲಾಗಿರುವ ಪಂಚಾತ್ಮಕರಾಗಿರುವ ಮುಖ್ಯಪ್ರಾಣರು  ಬಾಣಾಭಿಮಾನಿಯಾದರು.

 

ಏವಂ ಸ್ಥಿತೇಷ್ವೇವ ಪುರಾತನೇಷು ವರಾದ್ ರಥಾಙ್ಗತ್ವಮವಾಪ ಕಾಮಃ ।

ತತ್ಸೂನುತಾಮಾಪ ಚ ಸೋsನಿರುದ್ಧೋ ಬ್ರಹ್ಮೋದ್ಭವಃ ಶಙ್ಖತನುಃ ಪುಮಾತ್ಮಾ ॥೩.೭೭

 

ಹೀಗೆ  ಪುರಾತನರು ಆಯುಧಾಭಿಮಾನಿಗಳಾಗಿ ಇರಲು, ಕಾಮನು ಕೂಡಾ ಚಕ್ರಾಭಿಮಾನಿಯಾದನು. ಬ್ರಹ್ಮನಿಂದ ಹುಟ್ಟಿದ ಅನಿರುದ್ಧ ಎಂಬ ದೇವತೆಯು ಕಾಮನ ಮಗನಾದನು.  ಅವನೂ ಶಂಖಾಭಿಮಾನಿ.

 

ತಾವೇವ ಜಾತೌ ಭರತಶ್ಚ ನಾಮ್ನಾ ಶತ್ರುಘ್ನ ಇತ್ಯೇವ ಚ ರಾಮತೋsನು ।

ಪೂರ್ವಂ ಸುಮಿತ್ರಾತನಯಶ್ಚ ಶೇಷಃ ಸ ಲಕ್ಷ್ಮಣೋ ನಾಮ ರಘೂತ್ತಮಾದನು ॥೩.೭೮

 

ಆ ಪ್ರದ್ಯುಮ್ನಾ ಅನಿರುದ್ಧರೇ ಭರತ ಮತ್ತು ಶತ್ರುಘ್ನ ಎಂಬ ಹೆಸರಿನಿಂದ ರಾಮನ ತಮ್ಮಂದಿರಾಗಿ ಹುಟ್ಟಿದರು. ಇದಕ್ಕಿಂತ ಮೊದಲು ಶೇಷನು ಸುಮಿತ್ರೆಯ ಮಗನಾಗಿ ಲಕ್ಷ್ಮಣ ಎಂಬ ಹೆಸರಿನಿಂದ ಹುಟ್ಟಿದನು. [ತಥಾಚ: ರಾಮ, ಲಕ್ಷ್ಮಣ , ಭರತ ಮತ್ತು  ಶತ್ರುಘ್ನ  ಈ ಕ್ರಮದಲ್ಲಿ ಹುಟ್ಟಿದರು].

 

ಕೌಸಲ್ಯಕಾಪುತ್ರ ಉರುಕ್ರಮೋsಸಾವೇಕಸ್ತಥೈಕೋ ಭರತಸ್ಯ ಮಾತುಃ ।

ಉಭೌ ಸುಮಿತ್ರಾತನಯೌ ನೃಪಸ್ಯ ಚತ್ವಾರ ಏತೇ ಹ್ಯಮರೋತ್ತಮಾಃ ಸುತಾಃ ॥೩.೭೯

 

ಬಹುಪರಾಕ್ರಮಿ ಶ್ರೀರಾಮ ಕೌಸಲ್ಯೆಯ ಒಬ್ಬನೇ ಮಗ.  ಹಾಗೇ ಕೈಕೇಯಿಗೆ ಭರತ ಒಬ್ಬನೇ ಮಗ.  ಉಳಿದ ಇಬ್ಬರು ಸುಮಿತ್ರೆಯ ಮಕ್ಕಳು.  ಈ ನಾಲ್ಕು ಜನ ಮಕ್ಕಳು ದೇವೋತ್ತಮರು. 

 

ಸಙ್ಕರ್ಷಣಾದ್ಯೈಸ್ತ್ರಿಭಿರೇವ ರೂಪೈರಾವಿಷ್ಟ ಆಸೀತ್ ತ್ರಿಷು ತೇಷು ವಿಷ್ಣುಃ ।

ಇನ್ದ್ರೋsಙ್ಗದೇ ಚೈವ ತತೋsಙ್ಗದೋ ಹಿ ಬಲೀ ನಿತಾನ್ತಂ ಸ ಬಭೂವ ಶಶ್ವತ್ ॥೩.೮೦

 

ಸಂಕರ್ಷಣ, ಪ್ರದ್ಯುಮ್ನ ಮತ್ತು ಅನಿರುದ್ಧ ಎಂಬ  ತನ್ನ ಮೂರು ರೂಪಗಳಿಂದ ಲಕ್ಷ್ಮಣ ಭರತ ಶತ್ರುಘ್ನರಲ್ಲಿ  ನಾರಾಯಣನು ಆವಿಷ್ಟನಾಗಿದ್ದನು. ಹಾಗೆಯೇ, ಇಂದ್ರನು ಅಂಗದನಲ್ಲಿ ಆವಿಷ್ಟನಾಗಿದ್ದನು. ಆ ಕಾರಣದಿಂದ ಅಂಗದನು ಬಲಿಷ್ಠನಾಗಿದ್ದನು.

 

ಯೇsನ್ಯೇ ಚ ಭೂಪಾಃ ಕೃತವೀರ್ಯ್ಯಜಾದ್ಯಾ ಬಲಾಧಿಕಾಃ ಸನ್ತಿ ಸಹಸ್ರಶೋsಪಿ ।

ಸರ್ವೇ ಹರೇಃ ಸನ್ನಿಧಿಭಾವಯುಕ್ತಾ ಧರ್ಮ್ಮಪ್ರಧಾನಾಶ್ಚ ಗುಣಪ್ರಧಾನಾಃ ॥೩.೮೧

 

ಉಳಿದ ಕಾರ್ತವೀರ್ಯಾರ್ಜುನ ಮೊದಲಾದ ಸಾವಿರಾರು ಬಲಿಷ್ಠ ರಾಜರೇನಿದ್ದಾರೆ, ಅವರೆಲ್ಲರೂ ಪರಮಾತ್ಮನ ಸನ್ನಿಧಿಯಿಂದ ಕೂಡಿ, ಧಾರ್ಮಿಕರೂ ಗುಣಪ್ರಧಾನರೂ ಆಗಿದ್ದರು.

 

ಸ್ವಯಂ ರಮಾ ಸೀರತ ಏವ ಜಾತಾ ಸೀತೇತಿ ರಾಮಾರ್ತ್ಥಮನೂಪಮಾ ಯಾ ।

ವಿದೇಹರಾಜಸ್ಯ ಹಿ ಯಜ್ಞಭೂಮೌ ಸುತೇತಿ ತಸ್ಯೈವ ತತಸ್ತು ಸಾsಭೂತ್ ॥೩.೮೨

 

ಸ್ವಯಂ ಲಕ್ಷ್ಮೀ ದೇವಿಯು ರಾಮನಿಗಾಗಿ ಸೀತಾ ಎನ್ನುವ ಹೆಸರಿನಿಂದ ತಾನೇ ನೇಗಿಲಿನಿಂದ ಹುಟ್ಟಿದಳು.  ಆಕೆ ವಿದೇಹ ರಾಜನಿಗೆ  ಯಜ್ಞ ಭೂಮಿಯಲ್ಲಿ ಸಿಕ್ಕಿದಳು.  ಅದರಿಂದಾಗಿ ಅವನ ಮಗಳು ಎಂದೇ ಪ್ರಸಿದ್ಧಿಯನ್ನು ಪಡೆದಳು.

[ಈ ರೀತಿ ಸೂಕ್ಷ್ಮವಾಗಿ ಸೃಷ್ಟಿ, ಅನುಸರ್ಗ, ಪ್ರಳಯ, ಪ್ರಾದುರ್ಭಾವ ಈ ನಾಲ್ಕು ಸಂಗತಿಗಳ ನಿರೂಪಣೆ ಮಾಡಿದ ಆಚಾರ್ಯರು ಈ ಅಧ್ಯಾಯವನ್ನು ಇಲ್ಲಿ ಉಪಸಂಹಾರ ಮಾಡುತ್ತಿದ್ದಾರೆ:].

 

ಇತ್ಯಾದಿಕಲ್ಪೋತ್ಥಿತ ಏಷ ಸರ್ಗ್ಗೋ ಮಯಾ ಸಮಸ್ತಾಗಮನಿರ್ಣ್ಣಯಾತ್ಮಕಃ ।

ಸಹಾನುಸರ್ಗ್ಗಃ ಕಥಿತೋsತ್ರ ಪೂರ್ವೋ ಯೋಯೋ ಗುಣೈರ್ನ್ನಿತ್ಯಮಸೌ ವರೋ ಹಿ ॥೩.೮೩

 

ಇತ್ಯಾದಿಯಾಗಿ ಕಲ್ಪದಲ್ಲಿ ಆದ ಸೃಷ್ಟಿಯು ನನ್ನಿಂದ ಎಲ್ಲಾ ಆಗಮಗಳ ನಿರ್ಣಯಾನುಸಾರ ಹೇಳಲ್ಪಟ್ಟಿದೆ. ಮೂಲಭೂತವಾದ ಸೃಷ್ಟಿ,  ಆ ಸೃಷ್ಟಿಯನ್ನು ಅನುಸರಿಸಿದ ಸೃಷ್ಟಿ,  ಎಲ್ಲವನ್ನೂ ಹೇಳಿದ್ದೇನೆ.  ತಾತ್ಪರ್ಯ ಇಷ್ಟು: ಯಾರು ಸ್ವರೂಪ ಗುಣ ಜ್ಯೇಷ್ಠನೋ  ಅವನೇ ಜ್ಯೇಷ್ಠನು. 

 

ಪಾಶ್ಚಾತ್ತ್ಯಕಲ್ಪೇಷ್ವಪಿ ಸರ್ಗ್ಗಭೇದಾಃ ಶ್ರುತೌ ಪುರಾಣೇಷ್ವಪಿಚಾನ್ಯಥೋಕ್ತಾಃ ।

ನೋತ್ಕರ್ಷಹೇತುಃ ಪ್ರಥಮತ್ವಮೇಷು ವಿಶೇಷವಾಕ್ಯೈರವಗಮ್ಯಮೇತತ್ ॥೩.೮೪

 

ತದನಂತರದ ಮನ್ವಂತರಗಳಲ್ಲಿ ಬೇರೆಬೇರೆ ತರದ ಸೃಷ್ಟಿಯು ವೇದದಲ್ಲಿ ಪುರಾಣಗಳಲ್ಲಿ ಬೇರೆಬೇರೆ ರೀತಿಯಾಗಿ ಹೇಳಲ್ಪಟ್ಟಿದೆ.  ಅವುಗಳಲ್ಲಿ ಮೊದಲು ಹುಟ್ಟಿದರೆ –ಅಂದರೆ ಮೊದಲ ಮನ್ವಂತರದಲ್ಲಿ ಆದ ಸೃಷ್ಟಿ ಏನಿದೆ, ಅದೇ ಹಿರಿತನ ಮತ್ತು ಕಿರಿತನದ ನಿರ್ಣಾಯಕ.  ತದನಂತರದ ಮನ್ವಂತರದಲ್ಲಿ ಆದರೆ ಅದು ನಿರ್ಣಾಯಕ ಅಲ್ಲ.  ಹೀಗಾಗಿ ವಿಶೇಷ ವಾಕ್ಯಗಳಿಂದ ಅದನ್ನು ತಿಳಿಯತಕ್ಕದ್ದು.

 

ಇತಿ ಶ್ರೀಮದಾನನ್ದತೀರ್ತ್ಥಭಗವತ್ಪಾದವಿರಚಿತೇ ಶ್ರೀಮಹಾಭಾರತತಾತ್ಪರ್ಯ್ಯನಿರ್ಣ್ಣಯೇ

ಸರ್ಗ್ಗಾನುಸರ್ಗ್ಗಲಯಪ್ರಾದುರ್ಭಾವನಿರ್ಣ್ಣಯೋ ನಾಮ ತೃತೀಯೋsದ್ಧ್ಯಾಯಃ

[ಆದಿತಃ ಶ್ಲೋಕಾಃ – ೩೨೧+೮೪=೪೦೫]

*********