ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Friday, November 23, 2018

Mahabharata Tatparya Nirnaya Kannada 11.93-11.96


ಭೀಷ್ಮಾಯ ತು ಯಶೋ ದಾತುಂ ಯುಯುಧೇ ತೇನ ಭಾರ್ಗ್ಗವಃ
ಅನನ್ತಶಕ್ತಿತರಪಿ ಸ ನ ಭೀಷ್ಮಂ ನಿಜಘಾನ ಹ ।
ನಚಾಮ್ಬಾಂ ಗ್ರಾಹಯಾಮಾಸ ಭೀಷ್ಮಕಾರುಣ್ಯಯನ್ತ್ರಿತಃ ೧೧.೯೩

ಭೀಷ್ಮನಿಗೆ ಯಶಸ್ಸನ್ನು ಕೊಡುವುದಕ್ಕಾಗಿಯೇ  ಪರಶುರಾಮ ಅವನೊಂದಿಗೆ ಯುದ್ಧ ಮಾಡುತ್ತಾನೆ. ಎಣೆಯಿರದ  ಶಕ್ತಿಯುಳ್ಳವನಾದರೂ ಕೊಡಾ,  ಪರಶುರಾಮನು ಭೀಷ್ಮನನ್ನು ಕೊಲ್ಲುವುದಿಲ್ಲ.
ಭೀಷ್ಮನ ಮೇಲಿರುವ ಕಾರುಣ್ಯದಿಂದ, ನಿಯಂತ್ರಣ ಮಾಡಲ್ಪಟ್ಟವನಾಗಿ, ಅಂಬೆಯನ್ನು ಆತನಿಗೆ ಮದುವೆ ಮಾಡಿಸಿ ಕೊಡುವುದಿಲ್ಲಾ.

‘ಅನನ್ತಶಕ್ತಿಃ ಸಕಲಾನ್ತರಾತ್ಮಾ ಯಃ ಸರ್ವವಿತ್ ಸರ್ವವಶೀ ಚ ಸರ್ವಜಿತ್ ।
‘ನ ಯತ್ಸಮೋsನ್ಯೋsಸ್ತಿ ಕಥಞ್ಚ ಕುತ್ರಚಿತ್ ಕಥಂ ಹ್ಯಶಕ್ತಿಃ ಪರಮಸ್ಯ ತಸ್ಯ’ ೧೧.೯೪

‘ಭೀಷ್ಮಂ ಸ್ವಭಕ್ತಂ ಯಶಸಾsಭಿಪೂರಯನ್ ವಿಮೋಹಯನ್ನಾಸುರಾಂಶ್ಚೈವ ರಾಮಃ ।
‘ಜಿತ್ವೈವ ಭೀಷ್ಮಂ ನ ಜಘಾನ ದೇವೋ ವಾಚಂ ಚ ಸತ್ಯಾಮಕರೋತ್ ಸ ತಸ್ಯ’೧೧.೯೫

ವಿದ್ಧವನ್ಮುಗ್ಧವಚ್ಛೈವ ಕೇಶವೋ ವೇದನಾರ್ತ್ತವತ್ ।
ದರ್ಶಯನ್ನಪಿ ಮೋಹಾಯ ನೈವ ವಿಷ್ಣುಸ್ತಥಾ ಭವೇತ್
ಏವಮಾದಿಪುರಾಣೋತ್ಥವಾಕ್ಯಾದ್ ರಾಮಃ ಸದಾ ಜಯೀ ॥೧೧.೯೬


‘ಯಾವಾತನು ಎಣೆಯಿರದ ಶಕ್ತಿ ಇರುವವನೋ, ಎಲ್ಲರ ಒಳಗೂ ಇರುವವನೋ, ಎಲ್ಲವನ್ನೂ ಬಲ್ಲವನೋ, ಎಲ್ಲವನ್ನೂ ವಶದಲ್ಲಿಟ್ಟುಕೊಂಡವನೋ, ಎಲ್ಲವನ್ನೂ ಗೆದ್ದವನೋ, ಯಾರಿಗೆ ಎಣೆಯಾದವರು ಬೇರೊಬ್ಬರು ಎಲ್ಲಿಯೂ ಇಲ್ಲವೋ,  ಅಂತಹ ಉತ್ಕೃಷ್ಟನಾದ ಪರಶುರಾಮನಿಗೆ ಶಕ್ತ್ಯಾಭಾವ ಎಲ್ಲಿಂದ’

‘ಪರಶುರಾಮನು ತನ್ನ ಭಕ್ತನಾದ ಭೀಷ್ಮನನ್ನು ಕೀರ್ತಿಯಿಂದ ತುಂಬಿಸಿರುವವನಾಗಿಯೂ, ಅಸುರರನ್ನು, ಅಸುರರಿಗೆ ಸಂಬಂಧಿಸಿದವರನ್ನು ಮೊಹಿಸುವವನಾಗಿಯೂ, ಭೀಷ್ಮನನ್ನು ಗೆದ್ದಿದ್ದರೂ  ಕೂಡಾ ಅವನನ್ನು ಕೊಲ್ಲಲಿಲ್ಲಾ. ಭಗವಂತ ಭೀಷ್ಮಾಚಾರ್ಯರ  ‘ಮದುವೆಯಾಗಲಾರೆ’ ಎನ್ನುವ ಪ್ರತಿಜ್ಞೆಯನ್ನು ಸತ್ಯವನ್ನಾಗಿ ಮಾಡಿದನು’.  
‘ಕೇಶವನು ಗಾಯಗೊಂಡವನಂತೆ, ಮೂರ್ಛೆಗೊಂಡವನಂತೆ, ನೊಂದವನಂತೆ ತೋರಿಸಿಕೊಂಡರೂ, ಮೂಲತಃ  ಹಾಗಾಗಲಾರ’.
ಇವೇ ಮೊದಲಾದ ಪುರಾಣ ವಾಕ್ಯದಂತೆ  ‘ಪರಶುರಾಮನು ಸದಾ ಜಯವುಳ್ಳವನೇ ಆಗಿರುತ್ತಾನೆ'.

Mahabharata Tatparya Nirnaya Kannada 11.87-11.92


ವಿಚಿತ್ರವೀರ್ಯ್ಯಂ ರಾಜಾನಂ ಕೃತ್ವಾ ಭೀಷ್ಮೋsನ್ವಪಾಲಯತ್
ಅಥ ಕಾಶಿಸುತಾಸ್ತಿಸ್ರಸ್ತದರ್ತ್ಥಂ ಭೀಷ್ಮ ಆಹರತ್           ೧೧.೮೭

ಚಿತ್ರಾಙ್ಗದನಿಗೆ ಮದುವೆಯಾಗಿರಲಿಲ್ಲ. ಹೀಗಾಗಿ, ಚಿತ್ರಾಙ್ಗದನ ಸಾವಿನ ನಂತರ ಭೀಷ್ಮಾಚಾರ್ಯರು  ಯುವರಾಜ ಪದವಿಯಲ್ಲಿದ್ದ ಚಿತ್ರಾಙ್ಗದನ ತಮ್ಮನಾದ ವಿಚಿತ್ರವೀರ್ಯನನ್ನು ರಾಜನನ್ನಾಗಿ ಅಭಿಷೇಕ ಮಾಡಿ, ಅವನ ಪರವಾಗಿ ತಾನೇ ದೇಶವನ್ನಾಳಿದರು. ವಿಚಿತ್ರವೀರ್ಯನಿಗಾಗಿ ಭೀಷ್ಮಾಚಾರ್ಯರು ಮೂರು ಜನ ಕಾಶೀರಾಜನ ಮಕ್ಕಳನ್ನು ತಂದರು.

ಅಮ್ಬಾಮಪ್ಯಮ್ಭಿಕಾನಾಮ್ನೀಂ ತಥೈವಾಮ್ಬಾಲಿಕಾಂ ಪರಾಮ್
ಪಾಣಿಗ್ರಹಣಕಾಲೇ ತು ಬ್ರಹ್ಮದತ್ತಸ್ಯ ವೀರ್ಯ್ಯವಾನ್ ೧೧.೮೮

ಬ್ರಹ್ಮದತ್ತ ಮದುವೆಯಾಗಬೇಕಿದ್ದ ಕಾಲದಲ್ಲಿ ಬಲಿಷ್ಠರಾದ ಭೀಷ್ಮಾಚಾರ್ಯರು ಅಂಬೆಯನ್ನು, ಅಂಬಿಕೆಯನ್ನು ಮತ್ತು ಅಂಬಾಲಿಕೆಯನ್ನು ವಿಚಿತ್ರವೀರ್ಯನಿಗಾಗಿ ತಂದರು.

ವಿಜಿತ್ಯ ತಂ ಸಾಲ್ವರಾಜಂ ಸಮೇತಾನ್ ಕ್ಷತ್ರಿಯಾನಪಿ
ಅಮ್ಬಿಕಾಮ್ಬಾಲಿಕೇ ತತ್ರ ಸಂವಾದಂ ಚಕ್ರತುಃ ಶುಭೇ ೧೧.೮೯

ಅಮ್ಬಾ ಸಾ ಭೀಷ್ಮಭಾರ್ಯ್ಯೈವ ಪೂರ್ವದೇಹೇ ತು ನೈಚ್ಛತ
ಶಾಪಾದ್ಧಿರಣ್ಯಗರ್ಭಸ್ಯ ಸಾಲ್ವಕಾಮಾsಹಮಿತ್ಯಪಿ ೧೧.೯೦

ಸಾಲ್ವರಾಜ(ಬ್ರಹ್ಮದತ್ತ)ನನ್ನು ಗೆದ್ದು, ಅಲ್ಲಿ ನೆರೆದಿದ್ದ  ಎಲ್ಲಾ ರಾಜರನ್ನೂ ಕೂಡಾ ಗೆದ್ದು, ಆ ಮೂವರನ್ನು ಭೀಷ್ಮಾಚಾರ್ಯರು ವಿಚಿತ್ರವೀರ್ಯನಿಗಾಗಿ  ತಂದರು. ಆಗ, ಉತ್ತಮರಾದ ಅಂಬಿಕೆ ಹಾಗು ಅಂಬಾಲಿಕೆಯರು ವಿಚಿತ್ರವೀರ್ಯನನ್ನು  ಮದುವೆಯಾಗಲು ಒಪ್ಪಿದರು.
ಆದರೆ ಅಂಬೆ ಮಾತ್ರ, ಹಿಂದಿನ ಜನ್ಮದಲ್ಲಿ ಭೀಷ್ಮನ ಹೆಂಡತಿಯಾಗಿಯೇ, ವಿಚಿತ್ರವೀರ್ಯನನ್ನು ಬಯಸಲಿಲ್ಲಾ. ಬ್ರಹ್ಮ ಶಾಪದ ಫಲದಿಂದ, ‘ನಾನು ಸಾಲ್ವನನ್ನು ಬಯಸುತ್ತೇನೆ’ ಎಂದು ಆಕೆ ಹೇಳಿದಳು.

ಉವಾಚ ತಾಂ ಸ ತತ್ಯಾಜ ಸಾsಗಮತ್ ಸಾಲ್ವಮೇವ ಚ
ತೇನಾಪಿ ಸಮ್ಪರಿತ್ಯಕ್ತಾ ಪರಾಮೃಷ್ಟೇತಿ ಸಾ ಪುನಃ ೧೧.೯೧

ಸಾಲ್ವನನ್ನು ಬಯಸಿದ  ಅಂಬೆಯನ್ನು ಭೀಷ್ಮಾಚಾರ್ಯರು ಬಿಟ್ಟು ಬಿಡುತ್ತಾರೆ. ಆಗ ಆಕೆ  ಸಾಲ್ವನನ್ನು ಕುರಿತು ಬರುತ್ತಾಳೆ. ಆದರೆ ಅವಳನ್ನು  ‘ಬೇರೊಬ್ಬರು ಅಪಹರಿಸಿ ಬಿಟ್ಟಿರುವ’ ಕಾರಣಕ್ಕಾಗಿ ಸಾಲ್ವನೂ ಸ್ವೀಕರಿಸುವುದಿಲ್ಲಾ.

ಭೀಷ್ಮಮಾಪ ಸ ನಾಗೃಹ್ಣಾತ್ ಪ್ರಯಯೌ ಸಾsಪಿ ಭಾರ್ಗ್ಗವಮ್
ಭ್ರಾತುರ್ವಿವಾಹಯಾಮಾಸ ಸೋsಮ್ಬಿಕಾಮ್ಬಾಲಿಕೇ ತತಃ ೧೧.೯೨

ಆಗ ಆಕೆ ಮರಳಿ ಭೀಷ್ಮನ ಬಳಿ ಬರುತ್ತಾಳೆ. ಆದರೆ ಅವರೂ ಆಕೆಯನ್ನು ಸ್ವೀಕರಿಸುವುದಿಲ್ಲಾ. ಕೊನೆಗೆ ಆಕೆ  ಪರಶುರಾಮನ ಬಳಿ ಹೋಗುತ್ತಾಳೆ. ಅಂಬೆ ತೆರಳಿದ ನಂತರ ಭೀಷ್ಮಾಚಾರ್ಯರು ಅಂಬಿಕೆ ಮತ್ತು ಅಂಬಾಲಿಕೆಯನ್ನು ತನ್ನ ತಮ್ಮನಾದ  ವಿಚಿತ್ರವೀರ್ಯನಿಗೆ ಮದುವೆ ಮಾಡಿ ಕೊಟ್ಟರು.

Monday, November 19, 2018

Mahabharata Tatparya Nirnaya Kannada 11.81-11.86


ಸ್ವಚ್ಛನ್ದಮೃತ್ಯುತ್ವವರಂ ಪ್ರದಾಯ ತಥಾsಪ್ಯಜೇಯತ್ವಮಧೃಷ್ಯತಾಂ ಚ
ಯುದ್ಧೇಷು ಭೀಷ್ಮಸ್ಯ ನೃಪೋತ್ತಮಃ ಸ ರೇಮೇ ತಯೈವಾಬ್ದಗಣಾನ್ ಬಹೂಂಶ್ಚ   ॥೧೧.೮೧

ಸಂತುಷ್ಟನಾದ ಶನ್ತನುವು ಭೀಷ್ಮಾಚಾರ್ಯರಿಗೆ ‘ಬಯಸಿದಾಗ ಸಾವು’ ಎನ್ನುವ ವರವನ್ನು ಕೊಟ್ಟು, ಹಾಗೆಯೇ ಯುದ್ಧದಲ್ಲಿ ಇತರರಿಂದ ಗೆಲ್ಲಲ್ಪಡದಿರುವಿಕೆಯನ್ನೂ ಮತ್ತು  ಸೋಲು ಇಲ್ಲದಿರುವಿಕೆಯನ್ನೂ ವರವನ್ನಾಗಿ  ನೀಡಿದನು.  ಮುಂದೆ ಪತ್ನಿ ಸತ್ಯವತಿಯ ಜೊತೆಗೆ ಶನ್ತನು ಬಹಳ ವರ್ಷಗಳ ಕಾಲ ಸುಖಿಸಿದನು.

ಲೇಭೇ ಸ ಚಿತ್ರಾಙ್ಗದಮತ್ರ ಪುತ್ರಂ ತಥಾ ದ್ವಿತೀಯಂ ಚ ವಿಚಿತ್ರವೀರ್ಯ್ಯಮ್ ।
ತಯೋಶ್ಚ ಬಾಲ್ಯೇ ವ್ಯಧುನೋಚ್ಛರೀರಂ ಜೀರ್ಣ್ಣೇನ ದೇಹೇನ ಹಿ ಕಿಂ ಮಮೇತಿ ॥೧೧.೮೨

ಶನ್ತನುಚಕ್ರವರ್ತಿಯು ಸತ್ಯವತಿಯೊಂದಿಗಿನ ದಾಂಪತ್ಯದಲ್ಲಿ ಚಿತ್ರಾಙ್ಗದ ಮತ್ತು ವಿಚಿತ್ರವೀರ್ಯ ಎಂಬ ಇಬ್ಬರು ಮಕ್ಕಳನ್ನು ಪಡೆಯುತ್ತಾನೆ. ಆತ ಆ ಮಕ್ಕಳಿಬ್ಬರು ಬಾಲಕರಿರುವಾಗಲೇ, ‘ಜೀರ್ಣವಾದ ಈ ದೇಹದಿಂದ ಇನ್ನು ನನಗೇನು ಪ್ರಯೋಜನ’ ಎಂದು ಯೋಚಿಸಿ, ಗಂಗೆಯಲ್ಲಿ ಸ್ವಇಚ್ಛೆಯಿಂದ ತನ್ನ ದೇಹವನ್ನು ತ್ಯಾಗ ಮಾಡುತ್ತಾನೆ. (ಇಚ್ಛೆಯಿಂದಲೇ ಶರೀರವನ್ನು ಬಿಡುತ್ತಾನೆ).
[ಮಹಾಭಾರತದಲ್ಲಿ ಹೇಳುವಂತೆ: ‘ಕಾಲಧರ್ಮಮುಪೇಯಿವಾನ್’ (ಆದಿಪರ್ವ ೧೦೮.೪) ದೇಹಜೀರ್ಣವಾಯಿತು, ಈ ದೇಹದಿಂದ ನನಗಿನ್ನೇನಾಗಬೇಕು ಎಂಬ ಭಾವನೆಯಿಂದ, ಶನ್ತನು ಸ್ವೇಚ್ಛೆಯಿಂದ  ದೇಹತ್ಯಾಗ ಮಾಡುತ್ತಾನೆ. ಇಲ್ಲಿ ನಾವು ಗಮನಿಸಬೇಕಾದ ಅಂಶ ಏನೆಂದರೆ: ಶನ್ತನುವಿಗೆ ಸ್ವೇಚ್ಛೆಯಿಂದ  ದೇಹತ್ಯಾಗ ಮಾಡುವ ಸಿದ್ಧಿಯಿತ್ತು. ಆದ್ದರಿಂದಲೇ ಆತ ತನ್ನ ಮಗನಾದ ಭೀಷ್ಮನಿಗೆ ಇಚ್ಛಾ ಮರಣದ  ವರಪ್ರದಾನ ಮಾಡುವುದಕ್ಕೆ  ಸಾಧ್ಯವಾಯಿತು. ಅಷ್ಟೇ ಅಲ್ಲಾ, ಇಚ್ಛಾಮರಣ  ಎನ್ನುವುದು ತನ್ನ ಕಾಲಕ್ಕೇ  ಕೊನೆಯಾಗಲಿದೆ ಎನ್ನುವುದೂ ಆತನಿಗೆ ತಿಳಿದಿತ್ತು. ಹೀಗಾಗಿ ಆತ ಭೀಷ್ಮಾಚಾರ್ಯರಿಗೆ ಇಚ್ಛಾಮರಣದ  ವರವನ್ನು ನೀಡಿದ. ]

ಸ್ವೇಚ್ಛಯಾ ವರುಣತ್ವಂ ಸ ಪ್ರಾಪ ನಾನಿಚ್ಛಯಾ ತನುಃ ।
ತಸ್ಮಿನ್ ಕಾಲೇ ತ್ಯಜ್ಯತೇ ಹಿ ಬಲವದ್ಭಿರ್ವಧಂ ವಿನಾ ॥೧೧.೮೩

ಅತಿಸಕ್ತಾಸ್ತಪೋಹೀನಾಃ ಕಥಞ್ಚಿನ್ಮೃತಿಮಾಪ್ನುಯುಃ ।
ಅನಿಚ್ಛಯಾsಪಿ ಹಿ ಯಥಾ ಮೃತಶ್ಚಿತ್ರಾಙ್ಗದಾನುಜಃ ॥೧೧.೮೪

ಹೀಗೆ ಶನ್ತನುವು  ಸ್ವೇಚ್ಛೆಯಿಂದ  ದೇಹತ್ಯಾಗಮಾಡಿ  ವರುಣತ್ತ್ವವನ್ನು(ಮೂಲರೂಪವನ್ನು) ಹೊಂದಿದನು.

ಶನ್ತನು ಚಕ್ರವರ್ತಿಯಾಗಿದ್ದ ಕಾಲದ ಮಹಿಮೆಯನ್ನು ಆಚಾರ್ಯರು ಇಲ್ಲಿ ವಿವರಿಸಿದ್ದಾರೆ:  ‘ಶನ್ತನುವಿನ ಕಾಲದಲ್ಲಿ  ಇಚ್ಛೆ ಇಲ್ಲದೇ  ದೇಹವನ್ನು ಬಿಡುವವರೇ ವಿರಳವಾಗಿದ್ದರು. ಆದರೆ  ಕೆಲವೇ ಕೆಲವರಿಗೆ ಮಾತ್ರ ಇಚ್ಛಾಮರಣ ಯೋಗವಿರಲಿಲ್ಲಾ. ಅಂಥವರು ಎರಡು ಕಾರಣದಿಂದ  ಸಾಯುತ್ತಿದ್ದರು. (೧). ತಮಗಿಂತ ತಪೋಬಲದಲ್ಲಿ ಶ್ರೇಷ್ಠನಾದವನಿಂದ ವಧೆಗೊಳಗಾಗಿ ಸಾವು. (ಹೇಗೆ ಚಿತ್ರಾಙ್ಗದ ಗಂಧರ್ವನಿಂದ ಕೊಲ್ಲಲ್ಪಟ್ಟನೋ ಹಾಗೆ) (೨). ಕೇವಲ ವಿಷಯಾಸಕ್ತಿಯುಳ್ಳವರಾಗಿ, ಅದರಿಂದಾಗಿ ತಪೋಹೀನರಾಗಿ ಸಾವು. (ಹೇಗೆ ಚಿತ್ರಾಙ್ಗದನ ತಮ್ಮನಾದ ವಿಚಿತ್ರವೀರ್ಯನು ಸಾವಿನ ಬಯಕೆ ಇಲ್ಲದೇ ಸತ್ತನೋ ಹಾಗೆ). 

ಅಥೌರ್ಧ್ವದೈಹಿಕಂ ಕೃತ್ವಾ ಪಿತುರ್ಭೀಷ್ಮೋsಭ್ಯಷೇಚಯತ್
ರಾಜ್ಯೇ ಚಿತ್ರಾಙ್ಗದಂ ವೀರಂ ಯೌವರಾಜ್ಯೇsಸ್ಯ ಚಾನುಜಮ್ ॥೧೧.೮೫

ಶನ್ತನುರಾಜನ ಮರಣಾನಂತರ ಭೀಷ್ಮಾಚಾರ್ಯರು ತಂದೆಯ ಔರ್ಧ್ವದೈಹಿಕ ಕಾರ್ಯಗಳನ್ನೆಲ್ಲವನ್ನೂ ಮಾಡಿ, ಬಲಿಷ್ಠನಾದ ಚಿತ್ರಾಙ್ಗದನನ್ನು ರಾಜನನ್ನಾಗಿಯೂ  ಮತ್ತು ವಿಚಿತ್ರವೀರ್ಯ್ಯನನ್ನು ಯುವರಾಜನನ್ನಾಗಿಯೂ  ಅಭಿಷೇಕ ಮಾಡುತ್ತಾರೆ.

ಚಿತ್ರಾಙ್ಗದೇನೇ ನಿಹತೋ ನಾಮ ಸ್ವಂ ತ್ವಪರಿತ್ಯಜನ್ ।
ಚಿತ್ರಾಙ್ಗದೋsಕೃತೋದ್ವಾಹೋ ಗನ್ಧರ್ವೇಣ ಮಹಾರಣೇ ೧೧.೮೬

 ‘ತನ್ನ ಹೆಸರನ್ನು ಪರಿತ್ಯಾಗ ಮಾಡದೇ ಇದ್ದುದರಿಂದ, ಚಿತ್ರಾಙ್ಗದ ಎನ್ನುವ ಹೆಸರಿನ ಗಂಧರ್ವನೊಂದಿಗಿನ ಮಹಾಯುದ್ಧದಲ್ಲಿ^  ಶನ್ತನುಪುತ್ರ ಚಿತ್ರಾಙ್ಗದ ಕೊಲ್ಲಲ್ಪಡುತ್ತಾನೆ.
[ ^ ಈ ಕುರಿತಾದ ವಿವರವನ್ನು ಮಹಾಭಾರತದ ಆದಿಪರ್ವದಲ್ಲಿ(೧೦೮-೭-೯) ಕಾಣುತ್ತೇವೆ: ಸ ತು ಚಿತ್ರಾಙ್ಗದಃ ಶೌರ್ಯಾತ್ಸರ್ವಾಂಶ್ಚಿಕ್ಷೇಪ ಪಾರ್ಥಿವಾನ್।.....ತಂ ಕ್ಷಿಪಂತಂ ಸುರಾಂಶ್ಚೈವ ಮನುಷ್ಯಾನಸುರಾಂಸ್ತಥಾ ಗಂಧರ್ವರಾಜೋ ಬಲವಾಂಸ್ತುಲ್ಯನಾಮಾsಭ್ಯಯಾತ್ತದಾ॥  ಗಂಧರ್ವಃ- ತ್ವಂ ವೈ  ಸದೃಶನಾಮಾsಸಿ ಯುದ್ಧಂ   ದೇಹಿ ನೃಪಾತ್ಮಜ । ನಾಮ ವಾsನ್ಯತ್ಪ್ರಗೃಹ್ಣೀಷ್ವ ಯದಿ ಯುದ್ಧಂ ನ ದಾಸ್ಯಸಿ   ಶನ್ತನುಪುತ್ರ ಚಿತ್ರಾಙ್ಗದ ತನ್ನ ಶೌರ್ಯದಿಂದ ಎಲ್ಲರನ್ನೂ ಬಗ್ಗುಬಡಿದಿದ್ದ. ಇದರಿಂದಾಗಿ ಅವನ ಗರ್ವ ಎಲ್ಲಾ ಕಡೆ ಮನೆ ಮಾತಾಯಿತು.  ಒಮ್ಮೆ ಚಿತ್ರಾಙ್ಗದ ಎನ್ನುವ ಹೆಸರಿನವನೇ ಆದ ಗಂಧರ್ವ ಆತನ ಬಳಿ ಬಂದು, “ನೀನು ನನ್ನ ಹೆಸರನ್ನು ಪರಿತ್ಯಾಗ ಮಾಡಬೇಕು, ಇಲ್ಲವೇ ನನ್ನೊಂದಿಗೆ ಯುದ್ಧ ಮಾಡಬೇಕು” ಎನ್ನುತ್ತಾನೆ.   ಆದರೆ ಶನ್ತನುಪುತ್ರನಾದ ಚಿತ್ರಾಙ್ಗದ ಹೆಸರನ್ನು ತ್ಯಾಗ ಮಾಡಲು ಒಪ್ಪುವುದಿಲ್ಲ. ಇದರಿಂದಾಗಿ ಅವರಿಬ್ಬರ ನಡುವೆ ಧೀರ್ಘಕಾಲ  ನಿರಂತರವಾಗಿ ಯುದ್ಧ ನಡೆಯಿತು. ಯುದ್ಧದಲ್ಲಿ ಶನ್ತನುಪುತ್ರ  ಸೋಲಿಸಲ್ಪಡುತ್ತಾನೆ. ಸೋತರೂ ಕೂಡಾ ಹೆಸರು ಬದಲಿಸಲು ಒಪ್ಪದ ಕಾರಣ, ತನಗಿಂತ ಬಲದಿಂದ ಶ್ರೇಷ್ಠನಾದ ಗಂಧರ್ವನಿಂದ  ಆತ  ಕೊಲ್ಲಲ್ಪಡುತ್ತಾನೆ].

Friday, November 16, 2018

Mahabharata Tatparya Nirnaya Kannada 11.73-11.80


ತತಃ ಕದಾಚಿನ್ಮೃಗಯಾಂ ಗತಃ ಸ ದದರ್ಶ ಕನ್ಯಾಪ್ರವರಾಂ ತು ಶನ್ತನುಃ ।
ಯಾ ಪೂರ್ವಸರ್ಗ್ಗೇ ಪಿತೃಪುತ್ರಿಕಾ ಸತೀ ಚಚಾರ ವಿಷ್ಣೋಸ್ತಪ ಉತ್ತಮಂ ಚಿರಮ್             ೧೧.೭೩


ತದನಂತರ, ಒಮ್ಮೆ ಭೇಟೆಗೆ ಹೊರಟ ಶಂತನುವು ಶ್ರೇಷ್ಠ ಕನ್ನಿಕೆಯೊಬ್ಬಳನ್ನು ಕಂಡನು. ಯಾರು ತನ್ನ ಹಿಂದಿನ ಜನ್ಮದಲ್ಲಿ ಪಿತೃದೇವತೆಗಳ ಮಗಳಾಗಿ, ನಾರಾಯಣನ ಉತ್ಕೃಷ್ಟವಾದ ತಪಸ್ಸನ್ನು ಬಹಳ ಕಾಲದ ತನಕ ಮಾಡಿದ್ದಳೋ, ಅವಳೇ ಆ  ಸತ್ಯವತಿ ಎನ್ನುವ ಹೆಸರಿನ ಕನ್ಯೆ. [ಈಕೆಯ ಹುಟ್ಟಿನ ಹಿನ್ನೆಲೆ ಮತ್ತು ಈಕೆಯಲ್ಲಿ ಭಗವಂತ ವ್ಯಾಸರೂಪದಲ್ಲಿ ಅವತರಿಸಿದ ಕಥೆಯನ್ನು ಈಗಾಗಲೇ ಹತ್ತನೇ ಅಧ್ಯಾಯದಲ್ಲಿ ನೋಡಿದ್ದೇವೆ]

ಯಸ್ಯೈ ವರಂ ವಿಷ್ಣುರದಾತ್ ಪುರಾsಹಂ ಸುತಸ್ತವ ಸ್ಯಾಮಿತಿ ಯಾ ವಸೋಃ ಸುತಾ
ಜಾತಾ ಪುನರ್ದ್ದಾಶಗೃಹೇ ವಿವರ್ದ್ಧಿತಾ ವ್ಯಾಸಾತ್ಮನಾ ವಿಷ್ಣುರಭೂಚ್ಚ ಯಸ್ಯಾಮ್            ೧೧.೭೪

ಯಾರಿಗೆ ನಾರಾಯಣನು 'ಮುಂದಿನ ಜನ್ಮದಲ್ಲಿ ನಾನು ನಿನ್ನ ಮಗನಾಗಿ ಹುಟ್ಟುತ್ತೇನೆ’ ಎಂದು ವರವನ್ನು ನೀಡಿದ್ದನೋ, ಅವಳೇ ಉಪರಿಚರ ವಸುವಿನ ಮಗಳಾಗಿ ಹುಟ್ಟಿ, ನಂತರ ಅಂಬಿಗನ(ದಾಶರಾಜನ) ಮನೆಯಲ್ಲಿ ಬೆಳೆದಳು. ಯಾರಲ್ಲಿ ನಾರಾಯಣನು ವೇದವ್ಯಾಸನಾಗಿ ಹುಟ್ಟಿದನೋ ಆ ಸತ್ಯವತಿಯನ್ನು ಶನ್ತನು ಕಂಡನು.

ತದ್ದರ್ಶನಾನ್ನೃಪತಿರ್ಜ್ಜಾತಹೃಚ್ಛ್ರಯೋ ವವ್ರೇ ಪ್ರದಾನಾಯ ಚ ದಾಶರಾಜಮ್ ।
ಋತೇ ಸ ತಸ್ಯಾಸ್ತನಯಸ್ಯ ರಾಜ್ಯಂ ನೈಚ್ಛದ್ ದಾತುಂ ತಾಮಥಾsಯಾದ್ ಗೃಹಂ ಸ್ವಮ್೧೧.೭೫

ಅವಳನ್ನು ನೋಡಿದೊಡನೆಯೇ ಶನ್ತನುವಿನ ಹೃದಯದಲ್ಲಿ ಸುಪ್ತವಾಗಿ ಮಲಗಿದ್ದ ಕಾಮ ಮೇಲೆದ್ದಿತು. ಆತ ಸತ್ಯವತಿಯ ಸಾಕುತಂದೆ ದಾಶರಾಜನಲ್ಲಿ ಸತ್ಯವತಿಯನ್ನು ತನಗೆ ಕೊಡುವಂತೆ  ಬೇಡುತ್ತಾನೆ. ಆದರೆ ದಾಶರಾಜ  ಮುಂದೆ ಸತ್ಯವತಿಯ ಮಗನಿಗೆ ಸಾಮ್ರಾಜ್ಯ ಸಿಗದ ಹೊರತು ಅವಳನ್ನು ಶನ್ತನುವಿಗೆ ಕೊಡಲು ಬಯಸುವುದಿಲ್ಲಾ. ದಾಶರಾಜನ ನಿರಾಕರಣೆಯ ನಂತರ ಶನ್ತನು  ತನ್ನ ಮನೆಯನ್ನು ಕುರಿತು ತೆರಳುತ್ತಾನೆ.

ತಚ್ಚಿನ್ತಯಾ ಗ್ಲಾನಮುಖಂ ಜನಿತ್ರಂ ದೃಷ್ಟ್ವೈವ ದೇವವ್ರತ ಆಶ್ವಪೃಚ್ಛತ್ ।
ತತ್ಕಾರಣಂ ಸಾರಥಿಮಸ್ಯ ತಸ್ಮಾಚ್ಛ್ರುತ್ವಾsಖಿಲಂ ದಾಶಗೃಹಂ ಜಗಾಮ          ೧೧.೭೬

ಸತ್ಯವತಿಯನ್ನು ನೋಡಿದಂದಿನಿಂದ, ಅವಳದೇ ಬಗೆಗಿನ ಚಿಂತೆಯಿಂದ ಬಾಡಿದ ಮುಖವುಳ್ಳ ತಂದೆಯನ್ನು ನೋಡಿದ ದೇವವ್ರತನು, ಕೂಡಲೇ ಆ ಕುರಿತು ತಂದೆಯನ್ನು ಕೇಳುತ್ತಾನೆ. ಆದರೆ ಅವನಿಗೆ ಶನ್ತನುವಿನಿಂದ ಸರಿಯಾದ ಉತ್ತರ ಸಿಗುವುದಿಲ್ಲಾ. ಆಗ ಅವನು ಶನ್ತನುವಿನ ಸಾರಥಿಯನ್ನು ಆ ಕುರಿತು ಕೇಳಿ, ಅವನಿಂದ  ಎಲ್ಲವನ್ನೂ ತಿಳಿದುಕೊಂಡು, ಅಂಬಿಗನ(ದಾಶರಾಜನ) ಮನೆಯನ್ನು ಕುರಿತು ತೆರಳುತ್ತಾನೆ.

ಸ ತಸ್ಯ ವಿಶ್ವಾಸಕೃತೇ ಪ್ರತಿಜ್ಞಾಂ ಚಕಾರ ನಾಹಂ ಕರವಾಣಿ ರಾಜ್ಯಮ್ ।
ತಥೈವ ಮೇ ಸನ್ತತಿತೋ ಭಯಂ ತೇ ವ್ಯೈತೂರ್ಧ್ವರೇತಾಃ ಸತತಂ ಭವಾನಿ       ೧೧.೭೭

ದೇವವ್ರತನು ಅಂಬಿಗನಿಗೆ ವಿಶ್ವಾಸ ಹುಟ್ಟಿಸುವುದಕ್ಕಾಗಿ ಪ್ರತಿಜ್ಞೆ ಮಾಡುತ್ತಾನೆ. “ನಾನು ರಾಜ್ಯವನ್ನು ಹೊಂದುವುದಿಲ್ಲ. ಹಾಗೆಯೇ, ನನ್ನ ಸಂತತಿಯಿಂದ ನಿನಗೆ ಭಯವೂ ಇಲ್ಲಾ. ನಿನ್ನ ಆ ಭಯವು ನಾಶವಾಗಲಿ. ಏಕೆಂದರೆ: ನಾನು ನಿರಂತರವಾಗಿ ಊರ್ಧ್ವ ರೇತಸ್ಕನಾಗುತ್ತೇನೆ”.

ಭೀಮವ್ರತತ್ವಾದ್ಧಿ ತದಾsಸ್ಯ ನಾಮ ಕೃತ್ವಾ ದೇವಾ ಭೀಷ್ಮ ಇತಿ ಹ್ಯಚೀಕ್ಲ್ಪನ್
ಪ್ರಸೂನವೃಷ್ಟಿಂ ಸ ಚ ದಾಶದತ್ತಾಂ ಕಾಳೀಂ ಸಮಾದಾಯ ಪಿತುಃ ಸಮರ್ಪ್ಪಯತ್      ೧೧.೭೮

ದೇವವ್ರತನು ಇಂತಹ  ಭಯಂಕರವಾದ ವ್ರತವುಳ್ಳವನಾದ ಪ್ರಯುಕ್ತ ದೇವತೆಗಳು ಅವನಿಗೆ ‘ಭೀಷ್ಮ’ ಎಂಬ ಹೆಸರನ್ನಿಟ್ಟು ಹೂವಿನ ಮಳೆಗರೆದರು. ಅವನಾದರೋ(ದೇವವ್ರತನು), ಅಂಬಿಗ ಕೊಟ್ಟ ಕಾಳೀ ನಾಮಕ ವಸುಕನ್ಯೆಯನ್ನು ಕೊಂಡೊಯ್ದು ತಂದೆಗೆ ಅರ್ಪಿಸಿದನು.

ಜ್ಞಾತ್ವಾ ತು ತಾಂ ರಾಜಪುತ್ರೀಂ ಗುಣಾಢ್ಯಾಂ ಸತ್ಯಸ್ಯ ವಿಷ್ಣೋರ್ಮ್ಮಾತರಂ ನಾಮತಸ್ತತ್ ।
ಲೋಕೇ ಪ್ರಸಿದ್ಧಾಂ ಸತ್ಯವತೀತ್ಯುದಾರಾಂ ವಿವಾಹಯಾಮಾಸ ಪಿತುಃ ಸ ಭೀಷ್ಮಃ                ೧೧.೭೯

ದಾಶರಾಜನಿಂದ ಕೊಡಲ್ಪಟ್ಟ ಕಾಳೀಯನ್ನು ರಾಜಪುತ್ರಿಯೆಂದೂ (ಅಂಬಿಗನ ಮನೆಯಲ್ಲಿ ಬೆಳೆದವಳು ಆದರೆ ಮೂಲತಃ ವಸುರಾಜನ ಮಗಳು ಎಂದು ತಿಳಿದು) ಮತ್ತು ಸತ್ಯನಾಮಕನಾದ ನಾರಾಯಣನ ತಾಯಿಯಾಗಿರುವುದರಿಂದ(ವ್ಯಾಸ ಮುನಿಯ ತಾಯಿಯಾಗಿರುವುದರಿಂದ) ಆಕೆ ಸತ್ಯವತೀ ಎಂದು ಲೋಕದಲ್ಲಿ ಪ್ರಸಿದ್ಧಳಾಗಿದ್ದಾಳೆ ಎಂದು ತಿಳಿದೇ,  ಗುಣದಿಂದ ತುಂಬಿದ ಅವಳನ್ನು ಭೀಷ್ಮಾಚಾರ್ಯರು ತನ್ನ ತಂದೆಗೆ ಮದುವೆ ಮಾಡಿಕೊಟ್ಟರು.

ಪ್ರಾಯಃ ಸತಾಂ ನ ಮನಃ ಪಾಪಮಾರ್ಗ್ಗೇ ಗಚ್ಛೇದಿತಿ ಹ್ಯಾತ್ಮಮನಶ್ಚ ಸಕ್ತಮ್ ।
ಜ್ಞಾತ್ವಾsಪಿ ತಾಂ ದಾಶಗೃಹೇ ವಿವರ್ದ್ಧಿತಾಂ ಜಗ್ರಾಹ ಸದ್ಧರ್ಮರತಶ್ಚ ಶನ್ತನುಃ ೧೧.೮೦

“ಸಾಮಾನ್ಯವಾಗಿ ಸಜ್ಜನರ ಮನಸ್ಸು ಪಾಪದ ದಾರಿಯಲ್ಲಿ ಹೋಗುವುದಿಲ್ಲಾ. ನನ್ನ ಮನಸ್ಸು ಇವಳಲ್ಲಿ ಆಸಕ್ತವಾಗಿದೆ. ಅದರಿಂದಾಗಿ ಇದು ಅಧರ್ಮವಿರಲು ಸಾಧ್ಯವಿಲ್ಲಾ”  ಎಂದು ತಿಳಿದ ಧರ್ಮರಥನಾಗಿರುವ ಶನ್ತನುವು, ಕಾಳೀ ಅಂಬಿಗರ ಮನೆಯಲ್ಲಿ ಬೆಳೆದಿದ್ದಾಳೆ ಎಂದು ತಿಳಿದೂ ಕೂಡಾ  ಅವಳನ್ನು ಸ್ವೀಕರಿಸಿದನು. [ಸತ್ಯವತಿ ಅಂಬಿಗರ ಮನೆಯಲ್ಲಿ ಬೆಳೆದಿದ್ದರೂ ಕೂಡಾ, ಚಕ್ರವರ್ತಿಯಾದ ತನ್ನ  ಪತ್ನಿಯಾಗಲು ಆಕೆ ಯೋಗ್ಯಳು ಎನ್ನುವುದನ್ನು ಶನ್ತನು ತನ್ನ ಹೃದಯದಿಂದ ಅರಿತಿದ್ದ. ಹಾಗಾಗಿ ಆಕೆಯನ್ನು ಬಯಸಿದ ಮತ್ತು ಸ್ವೀಕರಿಸಿದ].

Wednesday, November 14, 2018

Mahabharata Tatparya Nirnaya Kannada 11.67-11.72


ಕಾಲೇ ಚ ತಸ್ಮಿನ್ ಪೃಷತೋsನಪತ್ಯೋ ವನೇ ತು ಪಾಞ್ಚಾಲಪತಿಶ್ಚಚಾರ ।
ತಪೋ ಮಹತ್ ತಸ್ಯ ತಥಾ ವರಾಪ್ಸರಾವಲೋಕನಾತ್ ಸ್ಕನ್ದಿತಮಾಶು ರೇತಃ          ೧೧.೬೭

ದ್ರೋಣಾಚಾರ್ಯರು ಹುಟ್ಟಿದ ಕಾಲದಲ್ಲೇ   ಮಕ್ಕಳಿಲ್ಲದ ‘ಪೃಶತ’ ಎನ್ನುವ ಪಾಂಚಾಲ ದೇಶದ ರಾಜನು  ಮಕ್ಕಳನ್ನು ಪಡೆಯಲು ಕಾಡಿನಲ್ಲಿ ಮಹತ್ತಾದ ತಪಸ್ಸನ್ನು ಮಾಡಿದನು. ಆತ ಒಮ್ಮೆ ಊರ್ವಶಿಯನ್ನು  ನೋಡಿದ್ದರಿಂದ ಆತನ ರೇತಸ್ಸು ಜಾರಿಬಿತ್ತು.  

ಸ ತದ್ ವಿಲಜ್ಜಾವಶತಃ ಪದೇನ ಸಮಾಕ್ರಮತ್ ತಸ್ಯ ಬಭೂವ ಸೂನುಃ
ಹಹೂ ತು ನಾಮ್ನಾ ಸ ವಿರಿಞ್ಚಗಾಯಕೋ ನಾಮ್ನಾssವಹೋ ಯೋ ಮರುತಾಂ ತದಂಶಯುಕ್೧೧.೬೮

ಪೃಶತ್ ರಾಜನು ವಿಶೇಷವಾದ ನಾಚಿಕೆಯಿಂದ  ಜಾರಿ ಬಿದ್ದ ರೇತಸ್ಸನ್ನು ತನ್ನ ಪಾದದಿಂದ ಮುಚ್ಚಿದನು. ಆ ರೇತಸ್ಸಿನಿಂದ  ಅವನಿಗೆ ‘ಹಹೂ’ ಎಂಬ ಹೆಸರಿನ, ಬ್ರಹ್ಮದೇವರ ಗಾಯಕನಾದ ಗಂಧರ್ವನು ಮಗನಾಗಿ ಹುಟ್ಟಿದನು. ಆತನು  ‘ಆವಹ’ನೆನ್ನುವ  ಮರುತ್ ದೇವತೆಯ ಅಂಶವುಳ್ಳವನಾಗಿದ್ದನು. (ಆವಹನೆನ್ನುವ  ಮರುತ್ ದೇವತೆಯ ಅಂಶವುಳ್ಳವನಾಗಿ ಹುಟ್ಟಿದನು)

ಸ ದ್ರೋಣತಾತಾತ್ ಸಮವಾಪ ವೇದಾನಸ್ತ್ರಾಣಿ ವಿದ್ಯಾಶ್ಚ ತಥಾ ಸಮಸ್ತಾಃ ।
ದ್ರೋಣೇನ ಯುಕ್ತಃ ಸ ತದಾ ಗುರೋಃ ಸುತಂ ಸಹೈವ ನೌ ರಾಜ್ಯಮಿತಿ ಹ್ಯವಾದೀತ್           ೧೧.೬೯

ಈ ರೀತಿ ಹುಟ್ಟಿದ ಪೃಶತ್ ರಾಜನ ಮಗನು ದ್ರೋಣಾಚಾರ್ಯರ ಅಪ್ಪನಾದ ಭರದ್ವಾಜನಿಂದ, ದ್ರೋಣರೊಂದಿಗೆ ಕೂಡಿ,  ವೇದಗಳನ್ನೂ , ಅಸ್ತ್ರಗಳನ್ನೂ , ಸಮಸ್ತ ವಿದ್ಯೆಗಳನ್ನೂ ಕೂಡಾ ಹೊಂದಿದನು. ವಿದ್ಯಾಭ್ಯಾಸ  ಕಾಲದಲ್ಲಿ ಅವನು ತನ್ನ ಗುರುಗಳ ಮಗನಾದ ದ್ರೋಣಾಚಾರ್ಯರಿಗೆ  ‘ರಾಜ್ಯದ ಭೋಗವೂ ನಮ್ಮಿಬ್ಬರಿಗೆ ಸಮನಾಗಿರಲಿ(ಒಟ್ಟಿಗೆ)’ ಎಂದು ಹೇಳಿದ್ದನಷ್ಟೇ. (ಅಂದರೆ: ನನ್ನ ರಾಜ್ಯದಲ್ಲಿ ಅರ್ಧ ರಾಜ್ಯವು ನಿನಗೆ ಎನ್ನುವ ಮಾತನ್ನಾಡಿದ್ದನು).

ಪದೇ ದ್ರುತತ್ವಾದ್ ದ್ರುಪದಾಭಿಧೇಯಃ ಸ ರಾಜ್ಯಮಾಪಾಥ ನಿಜಾಂ ಕೃಪೀಂ ಸಃ ।
ದ್ರೋಣೋsಪಿ ಭಾರ್ಯ್ಯಾಂ ಸಮವಾಪ್ಯ ಸರ್ವಪ್ರತಿಗ್ರಹೋಜ್ಝಶ್ಚ ಪುರೇsವಸತ್ ಸುಖೀ              ೧೧.೭೦

ಕಾಲಿನಿಂದ ಮುಚ್ಚಿದ್ದರಿಂದ ಪೃಶತ್ ರಾಜನ ಮಗನು ‘ದ್ರುಪದ’ ಎಂಬ ಹೆಸರುಳ್ಳವನಾದನು. ಆತನು ತಂದೆಯ ಕಾಲದ ನಂತರ ಪಾಂಚಾಲ ದೇಶದ ರಾಜನಾದನು. ಇತ್ತ ದ್ರೋಣಾಚಾರ್ಯರು ತನ್ನವಳೇ ಆದ, ಕೃಪಾಚಾರ್ಯರ ತಂಗಿಯನ್ನು ಹೆಂಡತಿಯನ್ನಾಗಿ ಹೊಂದಿ, ಹಸ್ತಿನಾವತಿಯಲ್ಲಿ, ಎಲ್ಲಾ ಪ್ರತಿಗ್ರಹಗಳಿಂದ ವಿರಹಿತರಾಗಿ  (ಅಂದರೆ ಯಾವುದೇ ದಾನ ಮೊದಲಾದುವುಗಳನ್ನು ತೆಗೆದುಕೊಳ್ಳದೇ), ಸುಖವಾಗಿ ವಾಸ ಮಾಡಿದರು.

ಸಿಲೋಞ್ಚವೃತ್ತ್ಯೈವ ಹಿ ವರ್ತ್ತಯನ್ ಸ ಧರ್ಮ್ಮಂ ಮಹಾನ್ತಂ ವಿರಜಂ ಜುಷಾಣಃ ।
ಉವಾಸ ನಾಗಾಖ್ಯಪುರೇ ಸಖಾ ಸ ದೇವವ್ರತಸ್ಯಾಥ ಕೃಪಸ್ಯ ಚೈವ                        ೧೧.೭೧

ದ್ರೋಣಾಚಾರ್ಯರು ‘ಸಿಲೋಞ್ಚ’ ಎನ್ನುವ ಧರ್ಮವನ್ನು ಆಯ್ಕೆ ಮಾಡಿಕೊಂಡು, ಅದರಿಂದಲೇ ಜೀವನ ಸಾಗಿಸುತ್ತಾ, ರಜೋಗುಣದ ಸಂಪರ್ಕ ಇಲ್ಲದ , ಪರಮಾತ್ಮನಿಗೆ  ಪ್ರೀತಿಕರವಾದ ಧರ್ಮವನ್ನು ಮಾಡುತ್ತಾ, ಹಸ್ತಿನಾವತಿಯಲ್ಲಿ ವಾಸಮಾಡಿದರು. ಅವರು ರಾಜಕುಮಾರನಾದ ದೇವವ್ರತನ ಮತ್ತು ಕೃಪಾಚಾರ್ಯರ ಗೆಳೆಯನಾಗಿಯೂ ಇದ್ದರು.

ತೇಷಾಂ ಸಮಾನೋ ವಯಸಾ ವಿರಾಟಸ್ತ್ವಭೂದ್ಧಹಾ ನಾಮ ವಿಧಾತೃಗಾಯಕಃ ।
ಮರುತ್ಸು ಯೋ ವಿವಹೋ ನಾಮ ತಸ್ಯಾಪ್ಯಂಶೇನ ಯುಕ್ತೋ ನಿಜಧರ್ಮ್ಮವರ್ತ್ತೀ    ೧೧.೭೨

ಅದೇ ರೀತಿ ಇವರೆಲ್ಲರಿಗೆ(ದೇವವ್ರತ, ಕೃಪ, ದ್ರೋಣ ಮತ್ತು ದ್ರುಪದ ಇವರಿಗೆ) ವಯಸ್ಸಿನಿಂದ ಸಮಾನನಾದವನಾಗಿ ವಿರಾಟರಾಜನಿದ್ದನು. ಮೂಲರೂಪದಲ್ಲಿ ಆತ ‘ಹಹಾ’ ಎನ್ನುವ ಹೆಸರಿನ ಬ್ರಹ್ಮದೇವರ ಹಾಡುಗಾರ(ಗಂಧರ್ವ). ವಿರಾಟನಲ್ಲಿ ‘ವಿವಹ’ ಎನ್ನುವ ಮರುತ್ ದೇವತೆಯ ಆವೇಶವಿತ್ತು (ಅಂಶದಿಂದ ಕೂಡಿದವನಾಗಿದ್ದ). ವಿರಾಟ ತನ್ನ ಧರ್ಮದಲ್ಲಿ ತೊಡಗಿದವನಾಗಿದ್ದನು.[ವಿರಾಟನ ಹುಟ್ಟಿನ ಕುರಿತಾದ ವಿವರವನ್ನು ಈಗಾಗಲೇ ಹತ್ತನೇ ಅಧ್ಯಾಯದಲ್ಲಿ ನೋಡಿದ್ದೇವೆ].

ಪದ್ಯ ರೂಪ:  https://go-kula.blogspot.com/



Tuesday, November 13, 2018

Mahabharata Tatparya Nirnaya Kannada 11.64-11.66


ಯದಾ ಹಿ ಜಾತಃ ಸ ಕೃಪಸ್ತದೈವ ಬೃಹಸ್ಪತೇಃ ಸೂನುರಗಾಚ್ಚ ಗಙ್ಗಾಮ್ ।
ಸ್ನಾತುಂ ಘೃತಾಚೀಂ ಸ ದದರ್ಶ ತತ್ರ ಶ್ಲಥದ್ದುಕೂಲಾಂ ಸುರವರ್ಯ್ಯಕಾಮಿನೀಮ್    ॥೧೧.೬೪

ಯಾವಾಗ ಕೃಪಾಚಾರ್ಯರ ಜನನವಾಯಿತೋ ಅದೇ ಕಾಲದಲ್ಲಿ ಬೃಹಸ್ಪತಿಯ ಮಗನಾದ ಭರದ್ವಾಜರು  ಸ್ನಾನ ಮಾಡಲು ಗಂಗಾನದಿಯನ್ನು ಕುರಿತು ತೆರಳಿದರು. ಅಲ್ಲಿ ದೇವತೆಗಳ ಅಪ್ಸರೆಯಾದ, ಬಟ್ಟೆ ಜಾರಿದ ಸ್ಥಿತಿಯಲ್ಲಿದ್ದ   ಘೃತಾಚೀಯನ್ನು ಕಂಡರು.

ತದ್ದರ್ಶನಾತ್ ಸ್ಕನ್ನಮಥೇನ್ದ್ರಿಯಂ ಸ ದ್ರೋಣೇ ದಧಾರಾsಶು ತತೋsಭವತ್ ಸ್ವಯಮ್ ।
ಅಮ್ಭೋಜಜಾವೇಶಯುತೋ ಬೃಹಸ್ಪತಿಃ ಕರ್ತ್ತುಂ ಹರೇಃ ಕರ್ಮ್ಮ ಬುವೋ ಭರೋದ್ಧೃತೌ    ॥೧೧.೬೫

ಘೃತಾಚೀಯನ್ನು ನೋಡಿದ್ದರಿಂದ ಜಾರಿದ ತನ್ನ ರೇತಸ್ಸನ್ನು ಭರಧ್ವಾಜರು ಕೊಳಗದಲ್ಲಿ ಹಿಡಿದರು. ಅದರಿಂದ ಬ್ರಹ್ಮದೇವರ ಆವೇಶದಿಂದ ಕೂಡಿರುವ ಬೃಹಸ್ಪತಿಯು, ಭೂಭಾರ ಹನನ ಕಾರ್ಯದಲ್ಲಿ ಪರಮಾತ್ಮನ ಸೇವೆಯನ್ನು ಮಾಡಲು ತಾನೇ ಹುಟ್ಟಿ ಬಂದರು.

ದ್ರೋಣೇತಿನಾಮಾಸ್ಯ ಚಕಾರ ತಾತೋ ಮುನಿರ್ಭರದ್ವಾಜ ಉತಾಸ್ಯ ವೇದಾನ್ ।
ಅಧ್ಯಾಪಯಾಮಾಸ ಸಶಾಸ್ತ್ರಸಙ್ಘಾನ್ ಸರ್ವಜ್ಞತಾಮಾಪ ಚ ಸೋsಚಿರೇಣ               ॥೧೧.೬೬

ಈರೀತಿ ಅವತರಿಸಿದ ಬೃಹಸ್ಪತಿಗೆ ಮುನಿ ಭರದ್ವಾಜರು  ‘ದ್ರೋಣ’ ಎಂಬ ಹೆಸರನ್ನು ಇಟ್ಟರು. ಭರದ್ವಾಜರು ದ್ರೋಣನಿಗೆ ಶಾಸ್ತ್ರಗಳಿಂದ ಕೂಡಿದ ವೇದಗಳನ್ನು ಬೋಧಿಸಿದರು. ದ್ರೋಣನು  ಅತಿ ಶೀಘ್ರದಲ್ಲಿ ಎಲ್ಲವನ್ನೂ ಕಲಿತು  ಸರ್ವಜ್ಞತ್ವವನ್ನು ಹೊಂದಿದನು.

ಪದ್ಯ ರೂಪ:  https://go-kula.blogspot.com/

Mahabharata Tatparya Nirnaya Kannada 11.56-11.63


ಯದೈವ ಗಙ್ಗಾ ಸುಷುವೇsಷ್ಟಮಂ ಸುತಂ ತದೈವ ಯಾತೋ ಮೃಗಯಾಂ ಸ ಶನ್ತನುಃ ।
ಶರದ್ವತೋ ಜಾತಮಪಶ್ಯದುತ್ತಮಂ ವನೇ ವಿಸೃಷ್ಟಂ ಮಿಥುನಂ ತ್ವಯೋನಿಜಮ್ ॥೧೧.೫೬

ಗಂಗೆಯು ಎಂಟನೆಯ ಮಗನನ್ನು ಹೆತ್ತ ಸಮಯದಲ್ಲೇ  ಶನ್ತನುವು ಭೇಟೆಗೆಂದು  ಕಾಡಿಗೆ ತೆರಳಿದ್ದ. ಆಗ ‘ಶರದ್ವಾನ್ ’  ಎಂಬ ಋಷಿಯಿಂದ ಹುಟ್ಟಿದ, ಕಾಡಿನಲ್ಲಿ ಬಿಡಲ್ಪಟ್ಟ, ಮಾತೃ ಯೋನಿಯಲ್ಲಿ ಜನಿಸದ  ಜೋಡಿಯನ್ನು(ಅವಳಿ ಮಕ್ಕಳನ್ನು) ಆತ ಕಾಣುತ್ತಾನೆ.

ಶರದ್ವಾಂಸ್ತು ತಪಃ ಕುರ್ವನ್ ದದರ್ಶ ಸಹಸೋರ್ವಶೀಮ್ ।
ಚಸ್ಕನ್ದ ರೇತಸ್ತಸ್ಯಾಥ ಶರಸ್ತಮ್ಭೇ ತತೋSಭವತ್               ॥೧೧.೫೭


ವಿಷ್ಕಮ್ಭೋ ನಾಮ ರುದ್ರಾಣಾಂ ಭೂಭಾರಹರಣೇsಙ್ಗತಾಮ್ ।
ಹರೇಃ ಪ್ರಾಪ್ತುಂ ತಥಾ ತಾರಾ ಭಾರ್ಯ್ಯಾ ಯಾ ಹಿ ಬೃಹಸ್ಪತೇಃ         ॥೧೧.೫೮


‘ಶರದ್ವಾನ್’ ಎಂಬುವ ಋಷಿ ತಪಸ್ಸು ಮಾಡುತ್ತಿರುವಾಗ , ಆಕಸ್ಮಿಕವಾಗಿ  ಊರ್ವಶಿಯನ್ನು ಕಾಣುತ್ತಾನೆ. ಆಕೆಯನ್ನು ಕಂಡಾಗ ಅವನ ರೇತಸ್ಸು ಹುಲ್ಲಿನ ಮೆದೆಯಲ್ಲಿ ಜಾರಿ ಬೀಳುತ್ತದೆ. ಈರೀತಿ ಜಾರಿದ ರೇತಸ್ಸಿನ ದೆಸೆಯಿಂದ ರುದ್ರರಲ್ಲಿ ಒಬ್ಬನಾದ  ‘ವಿಷ್ಕಮ್ಭ’ ಎನ್ನುವ ರುದ್ರನು ಪರಮಾತ್ಮನ ಭೂಭಾರ ಹರಣ ಕಾರ್ಯದಲ್ಲಿ  ಸಹಾಯಕತ್ವವನ್ನು ಹೊಂದುವುದಕ್ಕಾಗಿ ಹುಟ್ಟಿ ಬರುತ್ತಾನೆ. ಹಾಗೆಯೇ ಬೃಹಸ್ಪತಿಯ ಪತ್ನಿ ತಾರಾದೇವಿಯೂ ಕೂಡಾ ಅವನೊಂದಿಗೆ ಹುಟ್ಟಿ ಬರುತ್ತಾಳೆ.

ತಾವುಭೌ ಶನ್ತನುರ್ದ್ದೃಷ್ಟ್ವಾ ಕೃಪಾವಿಷ್ಟಃ ಸ್ವಕಂ ಗೃಹಮ್ ।
ನಿನಾಯ ನಾಮ ಚಕ್ರೇ ಚ ಕೃಪಾಯಾ ವಿಷಯೌ ಯತಃ ೧೧.೫೯

ಕೃಪಃ ಕೃಪೀತಿ ಸ ಕೃಪಸ್ತಪೋ ವಿಷ್ಣೋಶ್ಚಕಾರ ಹ
ತಸ್ಯ ಪ್ರೀತಸ್ತದಾ ವಿಷ್ಣುಃ ಸರ್ವಲೋಕೇಶ್ವರೇಶ್ವರಃ ೧೧.೬೦

ಶನ್ತನುವು ಆ ಇಬ್ಬರು ಮಕ್ಕಳನ್ನು ನೋಡಿ ಮರುಕದಿಂದ ಆವಿಷ್ಟನಾಗಿ (ಕೃಪಾವಿಷ್ಟನಾಗಿ) ಅವರನ್ನು  ತನ್ನ ಅರಮನೆಗೆ ಕೊಂಡೊಯ್ಯುತ್ತಾನೆ. ಯಾವ ಕಾರಣದಿಂದ ಆ ಮಕ್ಕಳಿಬ್ಬರು ತನ್ನ ಕೃಪೆಗೆ ವಿಷಯರಾದರೋ, ಆ ಕಾರಣದಿಂದ ಅವರಿಗೆ ಆತ ‘ಕೃಪ’ ಮತ್ತು ‘ಕೃಪಿ’ ಎನ್ನುವ ಹೆಸರನ್ನಿಡುತ್ತಾನೆ . ಆ ಕೃಪನು ಮುಂದೆ  ವಿಷ್ಣುಸಂಬಂಧಿಯಾದ ತಪಸ್ಸನ್ನು ಮಾಡುತ್ತಾನೆ. ಆಗ ಎಲ್ಲಾ  ಲೋಕಕ್ಕೂ ಒಡೆಯನಾದ ವಿಷ್ಣುವು ಅವನಿಗೆ ಪ್ರೀತನಾಗುತ್ತಾನೆ.

ಪ್ರಾದಾದೇಷ್ಯತ್ಸಪ್ತರ್ಷಿತ್ವಮಾಯುಃ ಕಲ್ಪಾನ್ತಮೇವ ಚ ।
ಸ ಶನ್ತನುಗೃಹೇ ತಿಷ್ಠನ್ ದೇವವ್ರತಸಖಾsಭವತ್ ೧೧.೬೧

ಪ್ರಸನ್ನನಾದ ವಿಷ್ಣುವು, ‘ಮುಂದೆ ಬರುವ ಸಪ್ತರ್ಷಿಗಳಲ್ಲಿ ಒಬ್ಬನಾಗುವಿಕೆ’ಯ ವರವನ್ನೂ^,  ಅಲ್ಲದೆ, ಕಲ್ಪ ಮುಗಿಯುವ ತನಕದ ಆಯುಷ್ಯವನ್ನೂ ಕೂಡಾ ಅವನಿಗೆ ಕೊಟ್ಟನು. ಆ ಕೃಪನು ಶನ್ತನು ಮನೆಯಲ್ಲೇ ಇದ್ದು, ದೇವವ್ರತನ ಗೆಳೆಯನಾದನು.
[^ಈ ಅಂಶ ಮಹಾಭಾರತದಲ್ಲಿ ವಿವರಿಸಿಲ್ಲವಾದರೂ ಕೂಡಾ, ಬೇರೆಬೇರೆ ಪುರಾಣಗಳಲ್ಲಿ  ಈ ಕುರಿತು ಹೇಳಲಾಗಿದೆ]

ಪುತ್ರವಚ್ಛನ್ತನೋಶ್ಚಾsಸೀತ್ ಸ ಚ ಪುತ್ರವದೇವ ತತ್ ।
ಮಿಥುನಂ ಪಾಲಯಾಮಾಸ ಸ ಕೃಪೋsಸ್ತ್ರಾಣ್ಯವಾಪ ಚ ॥೧೧.೬೨


ಸರ್ವವೇದಾನಧಿಜಗೌ ಸರ್ವಶಾಸ್ತ್ರಾಣಿ ಕೌಶಿಕಾತ್

ತತ್ವಜ್ಞಾನಂ ತಥಾ ವ್ಯಾಸಾದಾಪ್ಯ ಸರ್ವಜ್ಞತಾಂ ಗತಃ        ॥೧೧.೬೩

ಕೃಪನು  ಶನ್ತನುವಿಗೆ ಮಗನಂತೆಯೇ ಆದನು. ಶನ್ತನುವಾದರೋ, ಈ ಎರಡು ಜೋಡಿ ಜೀವಗಳನ್ನು ತನ್ನ ಮಕ್ಕಳಂತೆಯೇ ಪಾಲನೆ ಮಾಡಿದನು. [ಶಂತನು  ಕ್ಷತ್ರಿಯ, ಇವರು ಬ್ರಾಹ್ಮಣರು. ಆದರೆ ಅವರೆಲ್ಲರೂ ಒಟ್ಟಿಗೆ ಇರಲು ಆಗ ಯಾವ ಸಮಸ್ಯೆಯೂ ಇರಲಿಲ್ಲ. ಅವರ ಆಚರಣೆ ಅವರಿಗೆ. ಇವರ ಆಚರಣೆ ಇವರಿಗೆ. ಇದು ನಮ್ಮ ಪ್ರಾಚೀನ ಸಂಸ್ಕೃತಿ. ಇದು ನಿಜವಾದ ಜಾತ್ಯಾತೀಯತೆ] ಆ ಕೃಪನು ಕೌಶಿಕನಿಂದ ಅಸ್ತ್ರಗಳನ್ನು ಪಡೆದನು.  ಸರ್ವ ವೇದಗಳನ್ನೂ, ಸರ್ವ ಶಾಸ್ತ್ರಗಳನ್ನೂ ಅಧ್ಯಯನ ಮಾಡಿದನು. ಹಾಗೆಯೇ, ವೇದವ್ಯಾಸರಿಂದ ತತ್ತ್ವಜ್ಞಾನವನ್ನು ಹೊಂದಿ,   ಸರ್ವಜ್ಞನೆನಿಸಿದನು.

[ಗೌತಮೋ Sಪಿ ತತೋSಭ್ಯೇತ್ಯ ಧನುರ್ವೇದಪರೋSಭವತ್’ (ಮಹಾಭಾರತ: ಉತ್ತರದ ಪಾಠ ೧೨೯.೧೯ ). ಕೃಪೋSಪಿ ಚ ತದಾ ರಾಜನ್ ಧನುರ್ವೇದಪರೋSಭವತ್(ದಾಕ್ಷಿಣಾತ್ಯಪಾಠ ೧೪೦.೨೯) ಎರಡೂ ಪಾಠದಲ್ಲೂ ಒಂದೊಂದು ದೋಷವಿದ್ದಂತೆ ಕಾಣುತ್ತದೆ. ನಿಜವಾದ ಪಾಠ ಹೀಗಿರಬಹುದು:  ಕೌಶಿಕೋSಪಿ ತದಾ ರಾಜನ್ ಧನುರ್ವೇದಪರೋSಭವತ್ ಚತುರ್ವೇದಂ ಧನುರ್ವೇದಂ ಶಾಸ್ತ್ರಾಣಿ ವಿವಿಧಾನಿ ಚ | ನಿಖಿಲೇನಾಸ್ಯ ತತ್ ಸರ್ವಂ ಗುಹ್ಯಮಾಖ್ಯಾತವಾಂಸ್ತದಾ’ . ಕೌಶಿಕ ಅಂದರೆ ವಿಶ್ವಾಮಿತ್ರ. ಆತ ಆಗಲೇ ಧನುರ್ವೇದಪರನಾಗಿದ್ದನು. ನಾಲ್ಕುತರಹದ ಧನುರ್ವೇದವನ್ನು, ಸಮಗ್ರ ರಹಸ್ಯವನ್ನು ಕೌಶಿಕ ಕೃಪನಿಗೆ ಹೇಳಿದನು. ಈ ರೀತಿ ಸಂಭಾವ್ಯ ಪ್ರಾಚೀನ ಪಾಠವಿರಬಹುದು].

ಪದ್ಯ ರೂಪ:  https://go-kula.blogspot.com/