ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Sunday, July 28, 2019

Mahabharata Tatparya Nirnaya Kannada 1373_1377


ಕಾರ್ತ್ತ್ಯಾಯನೀವ್ರತಪರಾಃ ಸ್ವಪತಿತ್ವಹೇತೋಃ ಕನ್ಯಾ ಉವಾಹ ಭಗವಾನಪರಾಶ್ಚ ಗೋಪೀಃ ।
ಅನ್ಯೈ ರ್ದ್ಧೃತಾ ಅಯುಗಬಾಣಶರಾಭಿನುನ್ನಾಃ ಪ್ರಾಪ್ತಾ ನಿಶಾಸ್ವರಮಯಚ್ಛಶಿರಾಜಿತಾಸು೧೩.೭೩

ಭಗವಂತನು ಮದುವೆಯಾದ, ಕಾರ್ತ್ಯಾಯನೀ ವ್ರತತೊಟ್ಟ, ಕಾಮಬಾಣನೆಟ್ಟ, ಇವನೇ ನಮ್ಮ ಪತಿಯಾಗಬೇಕು ಎಂದು ಪಣತೊಟ್ಟ, ಕನ್ನಿಕೆಯರನ್ನೂ, ಬೇರೆ ಗೋಪರ ಮಡದಿಯರಾದ ಗೋಪಿಕೆಯರನ್ನೂ. ನಟ್ಟಿರುಳಿನಲ್ಲಿ ರಮಿಸಿದನು ತುಂಬಿದ ಚಂದ್ರನ ಕಾಂತಿಯಲ್ಲಿ.

ತಾಸ್ವತ್ರ ತೇನ ಜನಿತಾ ದಶಲಕ್ಷಪುತ್ರಾ ನಾರಾಯಣಾಹ್ವಯಯುತಾ ಬಲಿನಶ್ಚ ಗೋಪಾಃ ।
ಸರ್ವೇsಪಿ ದೈವತಗಣಾ ಭಗವತ್ಸುತತ್ವಮಾಪ್ತುಂ ಧರಾತಳಗತಾ ಹರಿಭಕ್ತಿಹೇತೋಃ೧೩.೭೪

ಇಲ್ಲಿಯೇ ಆ ಎಲ್ಲಾ ಗೋಪಿಕೆಯರಲ್ಲಿ ಶ್ರೀಕೃಷ್ಣನಿಂದ ‘ನಾರಾಯಣ’ ಎಂಬ ಹೆಸರುಳ್ಳ, ಬಲಿಷ್ಠರಾದ  ಹತ್ತು ಲಕ್ಷಜನ ಪುತ್ರರು ಹುಟ್ಟಿಸಲ್ಪಟ್ಟರು. ಅವರೆಲ್ಲರೂ ಕೂಡಾ ದೇವತಾಗಣಕ್ಕೆ ಸೇರಿದವರು. ಹರಿಭಕ್ತಿಯ ಕಾರಣದಿಂದ ಪರಮಾತ್ಮನ ಮಕ್ಕಳಾಗಬಯಸಿ ಈರೀತಿ  ಭೂಮಿಯಲ್ಲಿ ಹುಟ್ಟಿದರು.
[ಈ ಕುರಿತಾದ ವಿವರವನ್ನು ಮಹಾಭಾರತದ ಉದ್ಯೋಗಪರ್ವದಲ್ಲಿ(೭.೧೯)  ಕಾಣುತ್ತೇವೆ: ಮತ್ಸಂಹನನತುಲ್ಯಾನಾಂ  ಗೋಪಾನಾಮರ್ಬುದಂ ಮಹತ್ (‘ಅರ್ಬುದ’ ಎಂದರೆ ನೂರು-ಹತ್ತುಸಾವಿರ. ಅಂದರೆ ಹತ್ತು ಲಕ್ಷ). ನಾರಾಯಣಾ ಇತಿ ಖ್ಯಾತಾಃ ಸರ್ವೇ ಸಙ್ಗಾಮಯೋಧಿನಃ’ (ನನ್ನ ತರಹದ ಶರೀರ ಉಳ್ಳವರಿವರು ಎಂದು ಕೃಷ್ಣ ಹೇಳಿರುವುದನ್ನು ನಾವಿಲ್ಲಿ ಗಮನಿಸಬೇಕು) ]

ಶ್ರೀಕೃಷ್ಣ ಈರೀತಿ ಅವರೆಲ್ಲರನ್ನು ಮದುವೆಯಾಗಲು ಕಾರಣವೇನು ಎನ್ನುವುದನ್ನು ಮುಂದಿನಶ್ಲೋಕದಲ್ಲಿ ವಿವರಿಸಿದ್ದಾರೆ:

ತಾಸ್ತತ್ರ ಪೂರ್ವವರದಾನಕೃತೇ ರಮೇಶೋ ರಾಮಾ ದ್ವಿಜತ್ವಗಮನಾದಪಿ ಪೂರ್ವಮೇವ ।
ಸರ್ವಾ ನಿಶಾಸ್ವರಮಯತ್ ಸಮಭೀಷ್ಟಸಿದ್ಧಿಚಿನ್ತಾಮಣಿರ್ಹಿ ಭಗವಾನಶುಭೈರಲಿಪ್ತಃ ॥೧೩.೭೫

ಹಿಂದೆ ಕೊಟ್ಟ ವರಕ್ಕಾಗಿ ಆ ಎಲ್ಲಾ ಹೆಣ್ಣುಮಕ್ಕಳನ್ನು ರಮೇಶನು ತನ್ನ ಮುಂಜಿಯಾಗುವುದಕ್ಕೂ ಮೊದಲೇ, ಆ ರಾತ್ರಿಗಳಲ್ಲಿ ಸಂತಸಗೊಳಿಸಿದ. ಅಭೀಷ್ಟಸಿದ್ಧಿಯಲ್ಲಿ ಚಿಂತಾಮಣಿಯಂತಿರುವ ನಾರಾಯಣನು ಪಾಪ ಮೊದಲಾದವುಗಳಿಂದ ಲಿಪ್ತನಲ್ಲವಷ್ಟೇ. 

ಸಮ್ಪೂರ್ಣ್ಣಚನ್ದ್ರಕರರಾಜಿತಸದ್ರಜನ್ಯಾಂ ವೃನ್ದಾವನೇ ಕುಮುದಕುನ್ದಸುಗನ್ಧವಾತೇ ।
ಶುತ್ವಾಮುಕುನ್ದಮುಖನಿಸ್ಸೃತಗೀತಸಾರಂ ಗೋಪಾಙ್ಗನಾ ಮುಮುಹುರತ್ರ ಸಸಾರ ಯಕ್ಷಃ॥೧೩.೭೬

ಪೂರ್ಣವಾಗಿರುವ ಚಂದ್ರನ ಕಿರಣದಿಂದ ಶೋಭಿತವಾದ ಒಳ್ಳೆಯ ರಾತ್ರಿಯಲ್ಲಿ ನೈದಿಲೆ, ಮಲ್ಲಿಗೆ, ಮೊದಲಾದ ಪರಿಮಳಭರಿತವಾದ ಗಾಳಿಯುಳ್ಳ ವೃನ್ದಾವನದಲ್ಲಿ ಕೃಷ್ಣನ ಮುಖದಿಂದ ಹೊರಟ ಸಾರಭೂತವಾದ ಗೀತೆಯನ್ನು ಕೇಳಿ ಗೋಪಿಕೆಯರು ಮೂರ್ಛೆಹೊಂದಿದರು. ಆಗ  ಅಲ್ಲಿಗೆ  ಯಕ್ಷನೊಬ್ಬ ಬಂದನು.

ರುದ್ರಪ್ರಸಾದಕೃತರಕ್ಷ ಉತಾಸ್ಯ ಸಖ್ಯುರ್ಭೃತ್ಯೋ ಬಲೀ ಖಲತರೋsಪಿಚ ಶಙ್ಖಚೂಡಃ ।
ತಾಃ ಕಾಲಯನ್ ಭಗವತಸ್ತಳತಾಡನೇನ ಮೃತ್ಯುಂ ಜಗಾಮ ಮಣಿಮಸ್ಯ ಜಹಾರ ಕೃಷ್ಣಃ೧೩.೭೭

ಆ ಯಕ್ಷ ರುದ್ರನ ಅನುಗ್ರಹವನ್ನೇ ರಕ್ಷಣೆಯಾಗಿ ಹೊಂದಿರುವ, ರುದ್ರನ ಗೆಳೆಯನಾದ ಕುಬೇರನ ಸೇವಕನಾದ, ಬಲಿಷ್ಠನಾದ, ಅತ್ಯಂತ ದುಷ್ಟನಾದ ಶಂಖಚೂಡನಾಗಿದ್ದ. ಆತ ಗೋಪಿಕೆಯರನ್ನು ಅಪಹಾರ ಮಾಡುತ್ತಿರುವಾಗಲೇ,  ಕೃಷ್ಣನ ಮುಂಗೈ ಹೊಡೆತದಿಂದ ಸತ್ತುಬಿದ್ದ. ಕೃಷ್ಣನು ಅವನ ಮಣಿಯನ್ನು ಅಪಹರಿಸಿದ.

Sunday, July 21, 2019

Mahabharata Tatparya Nirnaya Kannada 1367_1372


ತುಷ್ಟಾವ ಚೈನಮುರುವೇದಶಿರೋಗತಾಭಿರ್ಗ್ಗೀರ್ಭಿಃ ಸದಾsಗಣಿತಪೂರ್ಣ್ಣಗುಣಾರ್ಣ್ಣವಂ ತಮ್
ಗೋಭೃದ್ ಗುರುಂ ಹರಗುರೋರಪಿ ಗೋಗಣೇನ ಯುಕ್ತಃ ಸಹಸ್ರಗುರಗಾಧಗುಮಗ್ರ್ಯಮಗ್ರ್ಯಾತ್ ॥೧೩.೬೭

ಸಾವಿರಕಣ್ಣುಳ್ಳ ವಜ್ರಧಾರಿ ಇಂದ್ರನು, ಉತ್ಕೃಷ್ಟವಾದ ಉಪನಿಷತ್ತಿನಲ್ಲಿ ಗತವಾಗಿರುವ ಮಾತುಗಳಿಂದ, ಅಗಣಿತಪೂರ್ಣಗುಣಾರ್ಣವನಾದ, ರುದ್ರನ ತಂದೆಯಾದ, ಬ್ರಹ್ಮನಿಗೂ ಕೂಡಾ ಉಪದೇಶಕನಾಗಿರುವ, ಎಣೆಯಿರದ ಕಣ್ಗಳುಳ್ಳ(ಸಹಸ್ರಾಕ್ಷನಾದ), ಎಲ್ಲರಿಗಿಂತಲೂ ಮಿಗಿಲಾದವರಿಗೂ ಶ್ರೇಷ್ಠನಾದ ನಾರಾಯಣನನ್ನು ಸ್ತೋತ್ರಮಾಡಿದನು.  

ತ್ವತ್ತೋ ಜಗತ್ ಸಕಲಮಾವಿರಭೂದಗಣ್ಯಧಾಮ್ನಸ್ತ್ವಮೇವ ಪರಿಪಾಸಿ ಸಮಸ್ತಮನ್ತೇ
ಅತ್ಸಿ ತ್ವಯೈವ ಜಗತೋsಸ್ಯ ಹಿ ಬನ್ಧಮೋಕ್ಷೌ ನ ತ್ವತ್ಸಮೋsಸ್ತಿ ಕುಹಚಿತ್ ಪರಿಪೂರ್ಣ್ಣಶಕ್ತೇ ॥೧೩.೬೮

‘ಎಣೆಯಿರದ ಶಕ್ತಿಯುಳ್ಳ ನಿನ್ನಿಂದಲೇ ಈ ಎಲ್ಲಾ ಪ್ರಪಂಚವೂ ಹುಟ್ಟಿದೆ. ನೀನೇ ಜಗತ್ತನ್ನು ಪಾಲಿಸುತ್ತೀಯೇ. ಕೊನೆಯಲ್ಲಿ ನೀನೇ ಇವೆಲ್ಲವನ್ನೂ ತಿನ್ನುತ್ತೀಯೇ(ಸಂಹಾರ ಮಾಡುವೆ). ನಿನ್ನಿಂದಲೇ ಈ ಜಗತ್ತಿಗೆ ಬಂಧನ ಮತ್ತು ಬಿಡುಗಡೆ. ನಿನಗೆ ಸಮನಾದವನು ಎಲ್ಲಿಯೂ  ಇಲ್ಲಾ’ ಎಂದು ಇಂದ್ರ ಶ್ರೀಕೃಷ್ಣನನ್ನು ಸ್ತೋತ್ರ ಮಾಡುತ್ತಾನೆ. ಇಲ್ಲಿ ಇಂದ್ರ ಶ್ರೀಕೃಷ್ಣನನ್ನು  ‘ಪರಿಪೂರ್ಣಶಕ್ತೇ’ ಎಂದು ಸಂಬೋಧನೆ ಮಾಡಿರುವುದನ್ನು ಕಾಣುತ್ತೇವೆ.

ಕ್ಷನ್ತವ್ಯಮೇವ ಭವತಾ ಮಮ ಬಾಲ್ಯಮೀಶ ತ್ವತ್ಸಂಶ್ರಯೋsಸ್ಮಿ ಹಿ ಸದೇತ್ಯಭಿವನ್ದಿತೋsಜಃ ।
ಕ್ಷಾನ್ತಂ ಸದೈವ ಭವತಸ್ತವ ಶಿಕ್ಷಣಾಯ ಪೂಜಾಪಹಾರವಿಧಿರಿತ್ಯವದದ್ ರಮೇಶಃ ॥೧೩.೬೯

‘ಓ ಕೃಷ್ಣನೇ, ನಿನ್ನಿಂದ  ನನ್ನ ಬಾಲಿಶ್ಯವು  ಕ್ಷಮಿಸಲ್ಪಡಬೇಕಾಗಿದೆ. ಯಾವಾಗಲೂ ನಿನ್ನಲ್ಲಿಯೇ ನಾನು ಆಶ್ರಯವನ್ನು ಹೊಂದಿದ್ದೇನೆ’ ಎಂದು ಹೇಳಿದ ಇಂದ್ರನಿಂದ ನಮಸ್ಕರಿಸಲ್ಪಟ್ಟ, ಎಂದೂ ಹುಟ್ಟದ ರಮೇಶನು ಹೇಳುತ್ತಾನೆ: ‘ನಿನ್ನನ್ನು ಸದೈವ  ಕ್ಷಮಿಸಿದ್ದೇನೆ. ನಿನ್ನ ಶಿಕ್ಷಣಕ್ಕಾಗಿಯೇ ನಾನು ನಿನ್ನ ಪೂಜೆಯನ್ನು  ಅಪಹರಿಸಿದೆ’ ಎಂದು.

ಗೋವಿನ್ದಮೇನಮಭಿಷಿಚ್ಯ ಸ ಗೋಗಣೇತೋ ಗೋಭಿರ್ಜ್ಜಗಾಮ ಗುಣಪೂರ್ಣ್ಣಮಮುಂ ಪ್ರಣಮ್ಯ
ಗೋಪೈರ್ಗ್ಗಿರಾಮ್ಪತಿರಪಿ ಪ್ರಣತೋsಭಿಗಮ್ಯ ಗೋವರ್ದ್ಧನೋದ್ಧರಣಸಙ್ಗತಸಂಶಯೈಃ ಸಃ ॥೧೩.೭೦॥

ಶ್ರೀಕೃಷ್ಣನಿಂದ ಕ್ಷಮಿಸಲ್ಪಟ್ಟ ಇಂದ್ರನು ಗುಣಪೂರ್ಣನಾಗಿರುವ ಕೃಷ್ಣನನ್ನು ಗೋವುಗಳಿಂದ ಕೂಡಿಕೊಂಡು, ಹಾಲಿನಿಂದ ಅಭಿಷೇಕಮಾಡಿ, ನಮಸ್ಕರಿಸಿ ಅಲ್ಲಿಂದ ತೆರಳಿದನು. (ಅಂದರೆ: ಗೋಮಾತೆ ಸುರಭಿಯೂ ಕೂಡಾ  ಅಲ್ಲಿಗೆ ಬಂದಿದ್ದಳು. ತನ್ನ ಸಂತತಿಯನ್ನು ರಕ್ಷಿಸಿದ ಕೃಷ್ಣನಿಗಾಗಿ ಆಕೆ ತನ್ನ ಹಾಲನ್ನು ಸುರಿಸಿದಳು. ಇಂದ್ರನೂ ಕೂಡಾ ಅಭಿಷೇಕ ಮಾಡಿದನು. ಈ ಎಲ್ಲಾ ಕಾರಣಗಳಿಂದ  ಶ್ರೀಕೃಷ್ಣ ‘ಗೋವಿಂದ’ ಎನ್ನುವ ಹೆಸರಿನಿಂದ ಕರೆಯಲ್ಪಟ್ಟನು ಕೂಡಾ). ಗೋವರ್ಧನ ಪರ್ವತವನ್ನು ಎತ್ತಿದ್ದುದರಿಂದ ತಮ್ಮೆಲ್ಲಾ ಸಂಶಯವನ್ನೂ ಕಳೆದುಕೊಂಡ   ಗೋಪಾಲಕರಿಂದ ಕೃಷ್ಣ ನಮಸ್ಕರಿಸಲ್ಪಟ್ಟನು. [ಇವನೂ ನಮ್ಮಂತೆ ಒಬ್ಬ ಗೋಪಾಲಕ ಎಂದು ತಿಳಿದಿದ್ದ ಗೋಪಾಲಕರು, ಇವನು ನಮ್ಮಂತೆ ಅಲ್ಲಾ. ನಾವು ಇಂದ್ರನಿಗೆ ನಮಸ್ಕರಿಸಿದರೆ, ಇಂದ್ರನೇ ಇವನಿಗೆ ನಮಸ್ಕಾರ ಮಾಡಿದ. ಇವನಾರೋ ಅತಿಮಾನುಷ ವ್ಯಕ್ತಿ ಎಂದೂ, ಇವನು ದೇವರ ದೇವ ಎಂದೂ ತಿಳಿದು ತಮ್ಮೆಲ್ಲಾ ಸಂಶಯಗಳಿಂದ ರಹಿತರಾದರು.  (ಸಂ + ಗತ = ಚೆನ್ನಾಗಿ ದೂರವಾದ ಸಂಶಯ)].

ಕೃಷ್ಣಂ ತತಃ ಪ್ರಭೃತಿ ಗೋಪಗಣಾ ವ್ಯಜಾನನ್  ನಾರಾಯಣೋsಯಮಿತಿ ಗರ್ಗ್ಗವಚಶ್ಚ ನನ್ದಾತ್ ।
ನಾರಯಣಸ್ಯ ಸಮ ಇತ್ಯುದಿತಂ ನಿಶಮ್ಯ ಪೂಜಾಂ ಚ ಚಕ್ರುರಧಿಕಾಮರವಿನ್ದನೇತ್ರೇ ॥೧೩.೭೧ ॥

ಈ ಘಟನೆಯ ನಂತರ ಗೋಪಾಲಕರು ‘ಇವನು ನಾರಾಯಣ’ ಎನ್ನುವ ಸತ್ಯವನ್ನು ತಿಳಿದರು. ‘ಇವನು ನಾರಾಯಣನಿಗೆ ಸಮನು’ ಎನ್ನುವ  ಗರ್ಗಾಚಾರ್ಯರ ಮಾತನ್ನು ನಂದಗೋಪನಿಂದ ಕೇಳಿದ ಅವರು, ಅದನ್ನು ನಿಶ್ಚಯ ಮಾಡಿ, ಅರವಿಂದನೇತ್ರ  ಶ್ರೀಕೃಷ್ಣನಲ್ಲಿ ಅಧಿಕ ಸಮ್ಮಾನವನ್ನು ಮಾಡಿದರು.

ಸ್ಕನ್ದಾದುಪಾತ್ತವರತೋ ಮರಣಾದಪೇತಂ ದೃಷ್ಟ್ವಾ ಚ ರಾಮನಿಹತಂ ಬಲಿನಂ ಪ್ರಲಮ್ಬಮ್ ।
ಚಕ್ರುರ್ವಿನಿಶ್ಚಯಮಮುಷ್ಯ ಸುರಾಧಿಕತ್ವೇ ಗೋಪಾ ಅಥಾಸ್ಯ ವಿದಧುಃ ಪರಮಾಂ ಚ ಪೂಜಾಮ್ ॥೧೩.೭೨॥

ಸ್ಕಂದನಿಂದ ಪಡೆದ ವರದಿಂದಾಗಿ ಮರಣದಿಂದ ರಹಿತನಾಗಿದ್ದ ಹಾಗೂ ಬಲಿಷ್ಠನಾಗಿದ್ದ ಪ್ರಲಂಭನನ್ನು ರಾಮ ಕೊಂದದ್ದನ್ನು ಕಂಡು, ಇವನು(ಬಲರಾಮ) ದೇವತಾಶ್ರೇಷ್ಠ ಎಂದು ಅವರೆಲ್ಲರೂ  ನಿಶ್ಚಯಿಸಿದರು. ಕೃಷ್ಣನ ನಂತರ ಬಲರಾಮನಿಗೆ ಅವರೆಲ್ಲರೂ ಉತ್ಕೃಷ್ಟವಾದ ಪೂಜೆಯನ್ನು ಮಾಡಿದರು ಕೂಡಾ.

Thursday, July 18, 2019

Mahabharata Tatparya Nirnaya Kannada 1362_1366


ಕೃಷ್ಣೋsಥ ವೀಕ್ಷ್ಯ ಪುರುಹೂತಮಹಪ್ರಯತ್ನಂ ಗೋಪಾನ್ ನ್ಯವಾರಯದವಿಸ್ಮರಣಾಯ ತಸ್ಯ ।
ಮಾ ಮಾನುಷೋsಯಮಿತಿ ಮಾಮವಗಚ್ಛತಾಂ ಸ ಇತ್ಯವ್ಯಯೋsಸ್ಯ ವಿದಧೇ ಮಹಭಙ್ಗಮೀಶಃ ೧೩.೬೨

ತದನಂತರ ಕೃಷ್ಣನು ಇಂದ್ರನ ಪೂಜೆಗಾಗಿ ಗೊಲ್ಲರ ಸಿದ್ಧತೆಯನ್ನು (ಜಾತ್ರೆಯ ಪ್ರಯತ್ನವನ್ನು) ಕಂಡು, ‘ಆ ಇಂದ್ರನಿಗೆ ನನ್ನ ಮರೆವು ಇರಬಾರದು’ ಎನ್ನುವುದಕ್ಕಾಗಿ ಅವರನ್ನು ತಡೆದನು. ಹೀಗೆ ಇಂದ್ರನ ಪೂಜೆಯನ್ನು ತಡೆಯಲು ಕಾರಣವೇನು ಎಂದು ವಿವರಿಸುತ್ತಾ ಹೇಳುತ್ತಾರೆ: ‘ಆ ಇಂದ್ರನು ನನ್ನನ್ನು ಮನುಷ್ಯ ಎಂದು ತಿಳಿಯದಿರಲಿ ಎಂದು ಅವ್ಯಯನೂ, ಸರ್ವಸಮರ್ಥನೂ ಆದ ಶ್ರೀಕೃಷ್ಣನು ಜಾತ್ರೆಯ ಭಂಗವನ್ನು ಮಾಡಿದನು’ ಎಂದು. 

ಗೋಪಾಂಶ್ಚ ತಾನ್ ಗಿರಿಮಹೋsಸ್ಮದುರುಸ್ವಧರ್ಮ್ಮ ಇತ್ಯುಕ್ತಿಸಚ್ಛಲತ ಆತ್ಮಮಹೇsವತಾರ್ಯ್ಯ ।
ಭೂತ್ವಾsತಿವಿಸ್ತೃತತನುರ್ಬುಭುಜೇ ಬಲಿಂ ಸ ನಾನಾವಿಧಾನ್ನರಸಪಾನಗುಣೈಃ ಸಹೈವ ॥೧೩.೬೩॥

ಆ ಗೋಪಾಲಕರನ್ನು ‘ಪರ್ವತವನ್ನು ಕುರಿತು ಮಾಡಬೇಕಾದ ಪೂಜೆಯೇ ನಮ್ಮ ಧರ್ಮವಾಗಿದೆ’ ಎಂದು ತನ್ನ ಮಾತಿನ ಮೋಡಿಯಿಂದ ಒಪ್ಪಿಸಿ, ಅವರನ್ನು ಆ ಕುರಿತಾದ ಜಾತ್ರೆಯಲ್ಲಿ ಇರಿಸಿ, ತಾನೇ ಗೋವರ್ಧನ ಪರ್ವತದಲ್ಲಿ  ವಿಸ್ತಾರವಾದ ದೇಹವುಳ್ಳವನಾಗಿ, ತರತರನಾಗಿರುವ ಅನ್ನ, ರಸ, ಪಾನೀಯ, ಮೊದಲಾದವುಗಳಿಂದ ಕೂಡಿಕೊಂಡ ಆಹಾರವನ್ನು ಶ್ರೀಕೃಷ್ಣ  ಸ್ವೀಕರಿಸಿದನು.
[ಶೈಲೋsಸ್ಮೀತಿ ಬ್ರುವನ್ ಭೂರಿಬಲಿಮಾದದ್ ಬೃಹದ್ವಪುಃ’ (ಭಾಗವತ: ೧೦.೨೨.೩೫)  ‘ನಾನೇ ಶೈಲನಾಗಿದ್ದೇನೆ’ ಎಂದು ಹೇಳುತ್ತಾ, ಪೂಜೆಯನ್ನು ಮತ್ತು ಅರ್ಪಿಸಿದ ಭಕ್ಷ್ಯ-ಭೋಜ್ಯಗಳನ್ನು ಸಾಕ್ಷಾತ್ ಸ್ವೀಕರಿಸಿದನು. ‘ಗಿರಿಮೂರ್ಧನಿ ಕೃಷ್ಣೋsಪಿ ಶೈಲೋsಹಮಿತಿ ಮೂರ್ತಿಮಾನ್ ಬುಭುಜೇsನ್ನಂ ಬಹುತರಂ  ಗೋಪವರ್ಯಾಹೃತಂ ದ್ವಿಜ’ (ವಿಷ್ಣುಪುರಾಣ-೫.೧೦.೪೭).  ಗೊಪವರ್ಯರಿಂದ ಆಹೃತವಾದ(ತರಲ್ಪಟ್ಟ) ಅನ್ನವನ್ನು ತಿಂದನು.  ಭುಕ್ತ್ವಾ ಚಾವಭೃಥೇ ಕೃಷ್ಣಃ ಪಯಃ ಪೀತ್ವಾ ಚ ಕಾಮತಃ ಸಂತೃಪ್ತೋsಸ್ಮೀತಿ ದಿವ್ಯೇನ ರೂಪೇಣ ಪ್ರಜಹಾಸ ವೈ ತಂ ಗೋಪಾಃ ಪರ್ವತಾಕಾರಂ ದಿವ್ಯಸ್ರಗನುಲೇಪನಮ್ ಗಿರಿಮೂರ್ಧ್ನಿ  ಸ್ಥಿತಂ ದೃಷ್ಟ್ವಾ ಕೃಷ್ಣಂ ಜಗ್ಮುಃ ಪ್ರಧಾನತಃ ಭಗವಾನಪಿ  ತೇನೈವ ರೂಪೇಣಾsಚ್ಛಾದಿತಃ ಪ್ರಭುಃ ಸಹಿತಃ ಪ್ರಣತೋ ಗೋಪೈರ್ನನಂದಾsತ್ಮಾನಮಾತ್ಮನಾ’ (ವಿಷ್ಣುಪರ್ವ ಹರಿವಂಶ ೧೭.೨೩-೨೪).  ಎಲ್ಲವನ್ನೂ ತಿಂದ ಕೃಷ್ಣನು, ಸಾಕಷ್ಟು ಹಾಲನ್ನು ಕುಡಿದು, ಸಂತೃಪ್ತನಾಗಿದ್ದೇನೆ ಎಂದು, ತನ್ನ ದಿವ್ಯವಾದ ರೂಪವನ್ನು ತಳೆದು ನಕ್ಕನು. ಪರ್ವತದ ಆಕಾರದಲ್ಲಿರುವ, ಅಲೌಕಿಕವಾದ ಹಾರ, ಗಂಧ ಮೊದಲಾದವುಗಳನ್ನು ಧರಿಸಿರುವ, ಬೆಟ್ಟದ ಮೇಲೆ ನಿಂತವನನ್ನು ಗೋಪಕರು ಕೃಷ್ಣಾ ಎಂದು ತಿಳಿದರು. ಪರಮಾತ್ಮನೂ ಕೂಡಾ ಆ ಬೆಟ್ಟದ ರೂಪದಲ್ಲಿಯೇ ಇದ್ದು, ತನ್ನನ್ನು ಮುಚ್ಚಿಕೊಂಡು ಎಲ್ಲಾ ಗೋಪರಿಂದ ನಮಸ್ಕೃತನಾದನು.

ಇನ್ದ್ರೋsಥ ವಿಸ್ಮೃತರಥಾಙ್ಗಧರಾವತಾರೋ ಮೇಘಾನ್ ಸಮಾದಿಶದುರೂದಕಪೂಗವೃಷ್ಟ್ಯೈ।
ತೇ ಪ್ರೇರಿತಾಃ ಸಕಲಗೋಕುಲನಾಶನಾಯ ಧಾರಾ ವಿತೇರುರುರುನಾಗಕರಪ್ರಕಾರಾಃ              ॥೧೩.೬೪

ತದನಂತರ, ಚಕ್ರಧರನಾದ ಕೃಷ್ಣ, ವಿಷ್ಣುವಿನ ಅವತಾರ ಎಂಬುವುದನ್ನು ಮರೆತ ಇಂದ್ರನು, ಧಾರಾಕಾರವಾದ ಮಳೆ ಬರಿಸುವಂತೆ ಮೋಡಗಳಿಗೆ ಆಜ್ಞಾಪಿಸಿದನು. ಸಮಸ್ತ ಗೋಕುಲ ಗ್ರಾಮದ ನಾಶಕ್ಕಾಗಿ ಪ್ರೇರೇಪಿಸಲ್ಪಟ್ಟ ಆ ಮೇಘಗಳು ದೊಡ್ಡ ಆನೆಯ ಸೊಂಡಿಲಿನಂತೆ ದಪ್ಪವಾಗಿರುವ ಹನಿಗಳುಳ್ಳ ಮಳೆ ಬೀಳಿಸಿದವು.

ತಾಭಿರ್ನ್ನಿಪೀಡಿತಮುದೀಕ್ಷ್ಯ ಸ ಕಞ್ಜನಾಭಃ ಸರ್ವಂ ವ್ರಜಂ ಗಿರಿವರಂ ಪ್ರಸಭಂ ದಧಾರ ।
ವಾಮೇನ ಕಞ್ಜದಲಕೋಮಳಪಾಣಿನೈವ ತತ್ರಾಖಿಲಾಃ ಪ್ರವಿವಿಶುಃ ಪಶುಪಾಃ ಸ್ವಗೋಭಿಃ       ॥೧೩.೬೫

ಆ ಉದಕಧಾರೆಗಳಿಂದ ಪೀಡಿತರಾದ ಎಲ್ಲಾ ಗೋಕುಲವಾಸಿಗಳನ್ನು ನೋಡಿದ ಪದ್ಮನಾಭನು, ತಾವರೆಯ ಎಲೆಯಂತೆ ಮೃದುವಾಗಿರುವ ತನ್ನ ಎಡಗೈಯಿಂದ, ಶ್ರೇಷ್ಠವಾದ ಆ ಗೋವರ್ಧನವನ್ನು ರಭಸದಿಂದ ಎತ್ತಿ ಹಿಡಿದನು. ಹೀಗೆ ಎತ್ತಿ ಹಿಡಿದ ಗೋವರ್ಧನ ಪರ್ವತದ ಕೆಳಗೆ ಎಲ್ಲಾ ಗೋಪಾಲಕರು ತಮ್ಮ ಗೋವುಗಳಿಂದ ಕೂಡಿಕೊಂಡು ಪ್ರವೇಶಿಸಿದರು.

ವೃಷ್ಟ್ವೋರುವಾರ್ಯ್ಯಥ ನಿರನ್ತರಸಪ್ತರಾತ್ರಂ ತ್ರಾತಂ ಸಮೀಕ್ಷ್ಯ ಹರಿಣಾ ವ್ರಜಮಶ್ರಮೇಣ ।
ಶಕ್ರೋsನುಸಂಸ್ಮೃತಸುರಪ್ರವರಾವತಾರಃ ಪಾದಾಮ್ಬುಜಂ ಯದುಪತೇಃ ಶರಣಂ ಜಗಾಮ ॥೧೩.೬೬॥

ಹೀಗೆ ನಿರಂತರ ಏಳುದಿನಗಳ ಕಾಲ ಎಡಬಿಡದೇ, ಉತ್ಕೃಷ್ಟವಾದ ಮಳೆಯನ್ನು ಸುರಿಸಿಯೂ, ಯಾವುದೇ ಶ್ರಮವಿಲ್ಲದೇ, ಶ್ರೀಕೃಷ್ಣನಿಂದ ರಕ್ಷಿಸಲ್ಪಟ್ಟ ನಂದಗೋಕುಲವನ್ನು ಕಂಡು, ಇದು ನಾರಾಯಣನೇ ಎಂದು ತಿಳಿದ ಇಂದ್ರನು ಕೃಷ್ಣನ ಪಾದಕಮಲದಲ್ಲಿ ಶರಣುಹೊಂದಿದನು.

Monday, July 15, 2019

Mahabharata Tatparya Nirnaya Kannada 1358_1361


ಕೃಷ್ಣಂ ಕದಾಚಿದತಿದೂರಗತಂ ವಯಸ್ಯಾ ಊಚುಃ ಕ್ಷುಧಾsರ್ದ್ದಿತತರಾ ವಯಮಿತ್ಯುದಾರಮ್ ।
ಸೋsಪ್ಯಾಹ ಸತ್ರಮಿಹ ವಿಪ್ರಗಣಾಶ್ಚರನ್ತಿ ತಾನ್ ಯಾಚತೇತಿ ಪರಿಪೂರ್ಣ್ಣಸಮಸ್ತಕಾಮಃ ೧೩.೫೮॥

ಒಮ್ಮೆ ಬಹಳ ದೂರ ಪ್ರಯಾಣಮಾಡಿದ ಗೋಪಾಲಕರು  ಕೃಷ್ಣನನ್ನು ಕುರಿತು ‘ನಾವು ಹಸಿವಿನಿಂದ ಬಹಳ ಸಂಕಟಪಟ್ಟಿದ್ದೇವೆ’ ಎಂದು ಹೇಳುತ್ತಾರೆ. ಆಗ ‘ಇದೇ ಪರಿಸರದಲ್ಲಿ ಬ್ರಾಹ್ಮಣ ಸಮೂಹವು ಯಾಗವನ್ನು ಮಾಡುತ್ತಿದ್ದಾರೆ. ಅವರನ್ನು ಕುರಿತು ಬೇಡಿರಿ’ ಎಂದು ಪರಿಪೂರ್ಣಸಮಸ್ತಕಾಮನಾದ  ಶ್ರೀಕೃಷ್ಣನು ಉತ್ತರಿಸುತ್ತಾನೆ.

ತಾನ್ ಪ್ರಾಪ್ಯ ಕಾಮಮನವಾಪ್ಯ ಪುನಶ್ಚ ಗೋಪಾಃ ಕೃಷ್ಣಂ ಸಮಾಪುರಥ ತಾನವದತ್ ಸ ದೇವಃ ।
ಪತ್ನೀಃ ಸಮರ್ತ್ಥಯತ ಮದ್ವಚನಾದಿತಿ ಸ್ಮ ಚಕ್ರುಶ್ಚ ತೇ ತದಪಿ ತಾ ಭಗವನ್ತಮಾಪುಃ ೧೩.೫೯

ಶ್ರೀಕೃಷ್ಣನು ಹೇಳಿದ ಬ್ರಾಹ್ಮಣ ಸಮೂಹವನ್ನು ಹೊಂದಿ, ತಮ್ಮ  ಬಯಕೆಯನ್ನು ಈಡೇರಿಸಿಕೊಳ್ಳಲಾಗದೇ, ಮತ್ತೆ ಗೋಪಾಲಕರು ಕೃಷ್ಣನಿದ್ದಲ್ಲಿಗೆ ಬರುತ್ತಾರೆ. ಆಗ ಕ್ರೀಡಾದಿಗುಣವಿಶಿಷ್ಟನಾದ ಶ್ರೀಕೃಷ್ಣನು ಅವರನ್ನು ಕುರಿತು ‘ನನ್ನ ಮಾತಿನ ಮೂಲಕ ಅವರ ಹೆಂಡಿರನ್ನು ಬೇಡಿರಿ’ ಎಂದು ಹೇಳುತ್ತಾನೆ. ಆ ಗೋಪಾಲಕರು ಹಾಗೆಯೇ ಮಾಡುತ್ತಾರೆ.  ಆಗ ಆ  ಬ್ರಾಹ್ಮಣ ಸ್ತ್ರೀಯರೆಲ್ಲರೂ ಪರಮಾತ್ಮನ ಬಳಿ ಬರುತ್ತಾರೆ.

ತಾಃ ಷಡ್ವಿಧಾನ್ನಪರಿಪೂರ್ಣ್ಣಕರಾಃ ಸಮೇತಾಃ ಪ್ರಾಪ್ತಾ ವಿಸೃಜ್ಯ ಪತಿಪುತ್ರಸಮಸ್ತಬನ್ಧೂನ್ ।
ಆತ್ಮಾರ್ಚ್ಚನೈಕಪರಮಾ ವಿಸಸರ್ಜ್ಜ ಕೃಷ್ಣ ಏಕಾ ಪತಿಪ್ರವಿಧುತಾ ಪದಮಾಪ ವಿಷ್ಣೋಃ ॥೧೩.೬೦

ಆ ಸ್ತ್ರೀಯರೆಲ್ಲರೂ ಕೂಡಾ, ಆರು ತರಹದ ರಸವುಳ್ಳ ಅನ್ನದಿಂದ ಪರಿಪೂರ್ಣವಾದ  ಕೈಗಳುಳ್ಳವರಾಗಿ, ಎಲ್ಲಾ ಬಂಧುಗಳನ್ನೂ ಬಿಟ್ಟು, ಕೇವಲ ಶ್ರೀಕೃಷ್ಣನ ಅರ್ಚನೆ ಮಾಡುವುದನ್ನೇ ಶ್ರೇಷ್ಠ ಎಂದು ಭಾವಿಸಿದವರಾಗಿದ್ದರು. ಬಂದಿರುವ ಅವರನ್ನು ಶ್ರೀಕೃಷ್ಣ ಬೀಳ್ಕೊಡುತ್ತಾನೆ. ಅವರಲ್ಲಿ ಒಬ್ಬಾಕೆ ಗಂಡನಿಂದ ತಡೆಯಲ್ಪಟ್ಟವಳಾಗಿ ನಾರಾಯಣಪದವನ್ನು ಹೊಂದಿದಳು. (ಆಕೆ ದೇವರನ್ನೇ ಉತ್ಕಟವಾಗಿ ನೆನೆಯುತ್ತಾ ಪ್ರಾಣ ಬಿಟ್ಟು ಭಗವಂತನನ್ನು ಸೇರಿದಳು)
[ ಈ ಕುರಿತಾದ ವಿವರ ಭಾಗವತದಲ್ಲಿ ಕಾಣಸಿಗುತ್ತದೆ(೧೦.೨೧.೩೪): ತತ್ರೈಕಾ ವಿಧುತಾ ಭರ್ತ್ರಾ ಭಗವಂತಂ ಯಥಾಶ್ರುತಮ್  ಹೃದೋಪಗುಹ್ಯ ವಿಜಹೌ ದೇಹಂ ಕರ್ಮಾನುಬಂಧನಮ್’  ಆ ಸ್ತ್ರೀಯರಲ್ಲಿ ಒಬ್ಬಾಕೆಯನ್ನು ಆಕೆಯ ಪತಿ ಬಲವಂತವಾಗಿ ತಡೆದನು. ಆಗ ಆಕೆ ಮನಸ್ಸಿನಿಂದಲೇ ಭಗವಂತನನ್ನು ಆಲಂಗಿಸಿ ತನ್ನ ದೇಹವನ್ನು ತ್ಯಾಗಮಾಡಿದಳು].

ಭುಕ್ತ್ವಾsಥ ಗೋಪಸಹಿತೋ ಭಗವಾಂಸ್ತದನ್ನಂ ರೇಮೇ ಚ ಗೋಕುಲಮವಾಪ್ಯ ಸಮಸ್ತನಾಥಃ
ಆಜ್ಞಾತಿಲಙ್ಘನಕೃತೇಃ ಸ್ವಕೃತಾಪರಾಧಾತ್ ಪಶ್ಚಾತ್ ಸುತಪ್ತಮನಸೋsಪ್ಯಭವನ್ ಸ್ಮ ವಿಪ್ರಾಃ ॥೧೩.೬೧॥

ತದನಂತರ, ಗೋಪರಿಂದ ಕೂಡಿಕೊಂಡ ಶ್ರೀಕೃಷ್ಣನು, ಅವರು ತಂದಿರುವ ಭಕ್ಷ್ಯವೆಲ್ಲವನ್ನೂ ಸ್ವೀಕರಿಸಿದನು.  ಸಮಸ್ತಲೋಕಗಳ ಒಡೆಯನಾದ  ಶ್ರೀಕೃಷ್ಣನು ಗೋಕುಲವನ್ನು ಹೊಂದಿ ಕ್ರೀಡಿಸುತ್ತಿದ್ದನು.
ಇತ್ತ ಗೋಪಾಲಕರಿಗೆ ಆಹಾರ ನಿರಾಕರಿಸಿದ್ದ  ಬ್ರಾಹ್ಮಣರು  ‘ ಭಗವಂತನ  ಆಜ್ಞೆಯನ್ನು ನಾವು ಮೀರಿದೆವು, ಇದು ನಾವು ಮಾಡಿದ ಅಪರಾದ’ ಎಂದು ಪಶ್ಚಾತ್ತಾಪದಿಂದ ಬೆಂದ ಮನಸ್ಸುಳ್ಳವರಾದರು.

Wednesday, July 10, 2019

Mahabharata Tatparya Nirnaya Kannada 1355_1357


ಪಕ್ಷದ್ವಯೇನ ವಿಹರತ್ಸ್ವಥ ಗೋಪಕೇಷು ದೈತ್ಯಃ ಪ್ರಲಮ್ಬ ಇತಿ ಕಂಸವಿಸೃಷ್ಟ ಆಗಾತ್ ।
ಕೃಷ್ಣಸ್ಯ ಪಕ್ಷಿಷು ಜಯತ್ಸು ಸ ರಾಮಮೇತ್ಯ ಪಾಪಃ ಪರಾಜಿತ ಉವಾಹ ತಮುಗ್ರರೂಪಃ೧೩.೫೫

ತದನಂತರ, ಗೋಪಾಲಕರೆಲ್ಲರೂ ಎರಡು ಪಂಗಡ ಮಾಡಿಕೊಂಡು ಕ್ರೀಡಿಸುತ್ತಿರಲು, ಕಂಸನಿಂದ ಕಳುಹಿಸಲ್ಪಟ್ಟ ಪ್ರಲಂಬನೆಂಬ ದೈತ್ಯನು(ಬಾಲಕನ ರೂಪದಲ್ಲಿ) ಬಂದು ಅವರಲ್ಲಿನ ಒಂದು ಪಂಗಡವನ್ನು ಸೇರಿಕೊಂಡನು. ಕೃಷ್ಣನ ಪಕ್ಷದವರು ಜಯವನ್ನು ಹೊಂದುತ್ತಿರಲು, ಆಟದ ನಿಯಮದಂತೆ ಸೋತ ಗುಂಪಿನವನಾದ ಪ್ರಲಂಬ ಬಲರಾಮನನ್ನು ಹೊತ್ತ.(ಆಟದ ನಿಯಮದಂತೆ  ಯಾರು ಸೋಲುತ್ತಾರೋ ಅವರು ಗೆದ್ದವರನ್ನು ಹೊರಬೇಕು. ಪ್ರಲಂಬನಿದ್ದ ಪಂಗಡ ಸೋತು, ಕೃಷ್ಣ ಹಾಗು ಬಲರಾಮರಿದ್ದ ಪಂಗಡ ಗೆದ್ದುದ್ದರಿಂದ ಪ್ರಲಂಬ ಬಲರಾಮನನ್ನು ಹೊರಬೇಕಾಯಿತು. ಹಾಗೇ ಶ್ರಿಧಾಮ ಕೃಷ್ಣನನ್ನು ಹೊತ್ತ). ಆಗ ಪ್ರಲಂಬ  ತನ್ನ ದೈತ್ಯ ರೂಪವನ್ನು ತೋರಿಸುತ್ತಾನೆ.

ಭೀತೇನ ರೋಹಿಣಿಸುತೇನ ಹರಿಃ ಸ್ತುತೋsಸೌ ಸ್ವಾವಿಷ್ಟತಾಮುಪದಿದೇಶ ಬಲಾಭಿಪೂರ್ತ್ತ್ಯೈ  
ತೇನೈವ ಪೂರಿತಬಲೋsಮ್ಬರಚಾರಿಣಂ ತಂ ಪಾಪಂ ಪ್ರಲಮ್ಬಮುರುಮುಷ್ಟಿಹತಂ ಚಕಾರ೧೩.೫೬

ಈ ಘಟನೆಯಲ್ಲಿ ಭಯಗೊಂಡ ರೋಹಿಣಿಪುತ್ರನಿಂದ ಸ್ತೋತ್ರಮಾಡಲ್ಪಟ್ಟ ಪರಮಾತ್ಮನು,  ಅವನ ಬಲದ ಪೂರ್ತಿಗಾಗಿ ‘ನಾನು ನಿನ್ನಲ್ಲಿ ಆವಿಷ್ಟನಾಗಿದ್ದೇನೆ’ ಎಂದು ಉಪದೇಶ ಮಾಡಿದನು. ಆ ಉಪದೇಶದಿಂದ ತನ್ನೊಳಗೇ ಇರತಕ್ಕ ಪರಮಾತ್ಮನಿಂದಲೇ ಪೂರ್ತಿಯಾದ ಬಲವುಳ್ಳ ಆ ಬಲರಾಮನು, ಆಕಾಶ ಸಂಚಾರಿಯಾದ ಪ್ರಲಂಬನನ್ನು ಗುದ್ದಿ ಸಾಯುವಂತೆ ಮಾಡಿದನು.
[ಹರಿವಂಶದಲ್ಲಿ(ವಿರಾಟಪರ್ವ. ೧೪.೪೮-೪೯) ಈ ಕುರಿತಾದ ವಿವರ ಕಾಣಸಿಗುತ್ತದೆ: ಪ್ರಲಂಬನನ್ನು ಕಂಡು ಭಯಗೊಂಡ ಬಲರಾಮನನ್ನು ಕುರಿತು ಶ್ರೀಕೃಷ್ಣ ಹೇಳುವ ಮಾತು ಇದಾಗಿದೆ:  ಅಹಂ ಯಃ ಸ ಭವಾನೇವ ಯಸ್ತ್ವಂ ಸೊsಹಂ ಸನಾತನಃ .... ನಾನು ಅಂದರೆ ನೀನೇ. ನಿನ್ನೊಳಗಡೆ ಇರತಕ್ಕ ಪರಮಾತ್ಮ ನಾನೇ. .. ತದಾಸ್ಸೇ ಮೂಢವತ್ ತ್ವಂ ಕಿಂ ಪ್ರಾಣೇನ ಜಹಿ ದಾನವಂ .. ಯಾಕಾಗಿ ಸುಮ್ಮನಿದ್ದೀಯ, ನಿನ್ನ ಶಕ್ತಿಯಿಂದ ಈ ದಾನವನನ್ನು ಕೊಲ್ಲು. ಮೂರ್ಧ್ನಿ ದೇವರಿಪುಂ ದೇವ ವಜ್ರಕಲ್ಪೇನ ಮುಷ್ಟಿನಾ  ನಿನ್ನ ವಜ್ರದಂತೆ ಗಟ್ಟಿಯಾಗಿರುವ ಮುಷ್ಟಿಯಿಂದ ಅವನನ್ನು ಗುದ್ದಿ ಕೊಲ್ಲು’].

ತಸ್ಮಿನ್ ಹತೇ ಸುರಗಣಾ ಬಲದೇವನಾಮ ರಾಮಸ್ಯ ಚಕ್ರುರತಿತೃಪ್ತಿಯುತಾ ಹರಿಶ್ಚ।
ವಹ್ನಿಂ ಪಪೌ ಪುನರಪಿ ಪ್ರದಹನ್ತಮುಚ್ಚೈರ್ಗ್ಗೋಪಾಂಶ್ಚ ಗೋಗಣಮಗಣ್ಯಗುಣಾರ್ಣ್ಣವೋsಪಾತ್ ॥೧೩.೫೭॥

ಆ ಪ್ರಲಂಬಾಸುರನು ಕೊಲ್ಲಲ್ಪಡುತ್ತಿರಲು, ಅತ್ಯಂತ ತೃಪ್ತಿಯುತರಾದ ದೇವತಾಸಮೂಹ ರಾಮನಿಗೆ ‘ಬಲದೇವ’ ಎಂದು ಹೆಸರಿಟ್ಟರು.
ಮತ್ತೆ, ಎಣಿಸಲಾಗದ ಗುಣಗಳಿಗೆ ಕಡಲಿನಂತಿರುವ ಶ್ರೀಕೃಷ್ಣನು, ಚೆನ್ನಾಗಿ ಸುಡುವ ಕಾಳ್ಗಿಚ್ಚನ್ನು ಗೋವುಗಳ ಗಣ ಮತ್ತು  ಗೋವಳರಿಗಾಗಿ ಕುಡಿದನು ಹಾಗೂ ಎಲ್ಲರನ್ನೂ ರಕ್ಷಿಸಿದನು ಕೂಡಾ.

Sunday, July 7, 2019

Mahabharata Tatparya Nirnaya Kannada 1351_1354


    ತತ್ರಾಥ ಕೃಷ್ಣಮವದನ್ ಸಬಲಂ ವಯಸ್ಯಾಃ ಪಕ್ವಾನಿ ತಾಲಸುಫಲಾನ್ಯನುಭೋಜಯೇತಿ ।
     ಇತ್ಯರ್ತ್ಥಿತಃ ಸಬಲ ಆಪ ಸ ತಾಲವೃನ್ದಂ ಗೋಪೈರ್ದ್ದುರಾಸದಮತೀವ ಹಿ ಧೇನುಕೇನ೧೩.೫೧

‘ಹಣ್ಣಾಗಿರುವ ತಾಳೆಮರದ ಒಳ್ಳೆಯ ಫಲಗಳನ್ನು ನಮಗೆ ಉಣ್ಣಿಸು’ ಎಂದು ಗೆಳೆಯರಿಂದ  ಬೇಡಲ್ಪಟ್ಟ ಶ್ರೀಕೃಷ್ಣನು, ಬಲರಾಮನಿಂದ ಕೂಡಿಕೊಂಡು, ಧೇನುಕನ ಕಾರಣದಿಂದಾಗಿ ಗೋಪಾಲಕರಿಂದ ಹೊಂದಲು ಅಸಾಧ್ಯವಾದ  ತಾಳೆಮರಗಳ ಸಮೂಹವನ್ನು ಹೊಂದಿದನು.

 ವಿಘ್ನೇಶತೋ ವರಮವಾಪ್ಯ ಸ ದೃಷ್ಟದೈತ್ಯೋ ದೀರ್ಘಾಯುರುತ್ತಮಬಲಃ ಕದನಪ್ರಿಯೋsಭೂತ್ ।
 ನಿತ್ಯೋದ್ಧತಃ ಸ ಉತ ರಾಮಮವೇಕ್ಷ್ಯ ತಾಲವೃನ್ತಾತ್ ಫಲಾನಿ ಗಳಯನ್ತಮಥಾಭ್ಯಧಾವತ್ ।
 ತಸ್ಯ ಪ್ರಹಾರಮಭಿಕಾಙ್ಕ್ಷತ ಆಶು ಪೃಷ್ಠಪಾದೌ ಪ್ರಗೃಹ್ಯ ತೃಣರಾಜಶಿರೋsಹರತ್ ಸಃ ॥೧೩.೫೨

ಆ ಧೇನುಕನೆಂಬ ದೈತ್ಯನು ಗಣಪತಿಯಿಂದ ವರವನ್ನು ಹೊಂದಿ, ಧೀರ್ಘವಾದ ಆಯುಷ್ಯವುಳ್ಳವನಾಗಿಯೂ, ಉತ್ಕೃಷ್ಟವಾದ ಬಲವುಳ್ಳವನಾಗಿಯೂ, ಯುದ್ಧಪ್ರಿಯನೂ ಆಗಿದ್ದನು. ಯಾವಾಗಲೂ ಉದ್ಧತನಾಗಿದ್ದ ಅವನು ತಾಳೆಮರದಿಂದ ಹಣ್ಣುಗಳನ್ನು ಕೆಳಗೆ ಬೀಳಿಸುತ್ತಿರುವ ಬಲರಾಮನನ್ನು ಕಂಡು  ಅಲ್ಲಿಗೆ ಓಡಿಬಂದನು.  ಬಲರಾಮನಿಗೆ ಒದೆಯಬೇಕು ಎಂದು ಇಚ್ಛಿಸುತ್ತಿರುವ  ಆ ಧೇನುಕನ ಹಿಂಗಾಲನ್ನು ಹಿಡಿದ ಶ್ರೀಕೃಷ್ಣನು, ಅವನನ್ನು ಎತ್ತಿ ಮೇಲಕ್ಕೆಸೆದನು. ಅದರಿಂದ ಧೇನುಕನ ಕತ್ತೆಯರೂಪದ ತಲೆ ಕತ್ತರಿಸಲ್ಪಟ್ಟಿತು.

   ತಸ್ಮಿನ್ ಹತೇ ಖರತರೇ ಖರರೂಪದೈತ್ಯೇ ಸರ್ವೇ ಖರಾಶ್ಚ ಖರತಾಲವನಾನ್ತರಸ್ಥಾಃ ।
   ಪ್ರಾಪುಃ ಖರಸ್ವರತರಾ ಖರರಾಕ್ಷಸಾರಿಂ ಕೃಷ್ಣಂ ಬಲೇನ ಸಹಿತಂ ನಿಹತಾಶ್ಚ ತೇನ ॥೧೩.೫೩॥

ಅತ್ಯಂತ ಭಯಂಕರವಾದ  ಕತ್ತೆಯ ರೂಪದಲ್ಲಿದ್ದ ದೈತ್ಯನು ಕೊಲ್ಲಲ್ಪಡುತ್ತಿರಲು, ಆ ತೋಪಿನಲ್ಲಿರುವ ಎಲ್ಲಾ ಕತ್ತೆಗಳೂ ಕೂಡಾ (ಕತ್ತೆಯ ರೂಪದ ದೈತ್ಯರು) ಕೆಟ್ಟದ್ದಾಗಿ ಕಿರುಚುತ್ತಾ, ರಾಕ್ಷಸರ ಶತ್ರುವಾಗಿರುವ ಬಲರಾಮನಿಂದ ಕೂಡಿಕೊಂಡ ಕೃಷ್ಣನನ್ನು ಹೊಂದಿದರು ಮತ್ತು ಶ್ರೀಕೃಷ್ಣನಿಂದ ಸಂಹರಿಸಲ್ಪಟ್ಟರೂ ಕೂಡಾ.

ಸರ್ವಾನ್ ನಿಹತ್ಯ ಖರರೂಪಧರಾನ್ ಸ ದೈತ್ಯಾನ್ ವಿಘ್ನೇಶ್ವರಸ್ಯ ವರತೋsನ್ಯಜನೈರವದ್ಧ್ಯಾನ್ ।
ಪಕ್ವಾನಿ ತಾಲಸುಫಲಾನಿ ನಿಜೇಷು ಚಾದಾದ್ ದುರ್ವಾರಪೌರುಷಗುಣೋದ್ಭರಿತೋ ರಮೇಶಃ॥೧೩.೫೪॥

ಕತ್ತೆಯ ರೂಪ ಧರಿಸಿರುವ, ಗಣಪತಿಯ ವರದಿಂದ ಉಳಿದವರಿಂದ ಕೊಲ್ಲಲಾಗದ ಎಲ್ಲಾ ದೈತ್ಯರನ್ನು ಕೊಂದು, ಯಾರೂ ತಡೆಯಲಾಗದ ಬಲವೆಂಬ ಗುಣದಿಂದ ಕೂಡಿರುವ ಕೃಷ್ಣನು, ಹಣ್ಣಾಗಿರುವ ತಾಳೆಮರದ ಫಲಗಳನ್ನು ತನ್ನವರೆಲ್ಲರಿಗೆ ಕೊಟ್ಟನು.

Friday, July 5, 2019

Mahabharata Tatparya Nirnaya Kannada 1348_1350

ಸಪ್ತೋಕ್ಷಣೋsತಿಬಲವೀರ್ಯ್ಯಯುತಾನದಮ್ಯಾನ್  ಸರ್ವೈರ್ಗ್ಗಿರೀಶವರತೋ ದಿತಿಜಪ್ರಧಾನಾನ್ ।
ಹತ್ವಾ ಸುತಾಮಲಭದಾಶು ವಿಭುರ್ಯ್ಯಶೋದಾಭ್ರಾತುಃ ಸ ಕುಮ್ಭಕಸಮಾಹ್ವಯಿನೋsಪಿ ನೀಲಾಮ್೧೩.೪೮

ಸರ್ವಸಮರ್ಥನಾದ  ಶ್ರೀಕೃಷ್ಣನು ರುದ್ರದೇವರ ವರದಿಂದ ಎಲ್ಲರಿಂದಲೂ ನಿಗ್ರಹಿಸಲು ಆಶಕ್ಯರಾದ, ಅತ್ಯಂತ ಬಲ ಹಾಗು ವೀರ್ಯದಿಂದ ಕೂಡಿರುವ, ಗೂಳಿಗಳ ರೂಪದಲ್ಲಿರುವ ದೈತ್ಯರನ್ನು ಕೊಂದು, ಕುಂಭಕ ಎನ್ನುವ ಹೆಸರಿನಿಂದ ಕೂಡಿರುವ ಯಶೋದೆಯ ಅಣ್ಣನ ಮಗಳಾದ ನೀಲಾಳನ್ನು ಶೀಘ್ರದಲ್ಲಿ ಪಡೆದನು.

ಯಾ ಪೂರ್ವಜನ್ಮನಿ ತಪಃ ಪ್ರಥಮೈವ ಭಾರ್ಯ್ಯಾ ಭೂಯಾಸಮಿತ್ಯಚರದಸ್ಯ ಹಿ ಸಙ್ಗಮೋ ಮೇ ।
ಸ್ಯಾತ್ ಕೃಷ್ಣಜನ್ಮನಿ ಸಮಸ್ತವರಾಙ್ಗನಾಭ್ಯಃ ಪೂರ್ವಂ ತ್ವಿತಿ ಸ್ಮ ತದಿಮಾಂ ಪ್ರಥಮಂ ಸ ಆಪ ॥೧೩.೪೯

ಯಾವಾಕೆಯು  ತನ್ನ  ಪೂರ್ವಜನ್ಮದಲ್ಲಿ, ‘ವಿಶೇಷತಃ ಕೃಷ್ಣಾವತಾರದಲ್ಲಿ ಭಗವಂತನ ಜೇಷ್ಠಪತ್ನಿಯಾಗಬೇಕು’  ಎಂದು ತಪಸ್ಸನ್ನು ಮಾಡಿದ್ದಳೋ ಅವಳೇ ಈ ನೀಲಾ. ಆಕೆ ಶ್ರೀಕೃಷ್ಣನ  ಇತರ ಎಲ್ಲಾ ಪತ್ನಿಯರಿಗಿಂತ  ಮೊದಲೇ ನನಗೆ ಕೃಷ್ಣನ ಸೇರುವಿಕೆಯು ಆಗಬೇಕು ಎಂದು ತಪಸ್ಸನ್ನು ಮಾಡಿದ್ದಳು. ಆ ಕಾರಣದಿಂದ ಅವಳನ್ನು  ಕೃಷ್ಣ ಮೊದಲೇ ಹೊಂದಿದ.

ಅಗ್ರೇ ದ್ವಿತ್ವತ ಉಪಾವಹದೇಷ ನೀಲಾಂ ಗೋಪಾಙ್ಗನಾ ಅಪಿ ಪುರಾ ವರಮಾಪಿರೇ ಯತ್ ।
ಸಂಸ್ಕಾರತಃ ಪ್ರಥಮಮೇವ ಸುಸಙ್ಗಮೋ ನೋ ಭೂಯಾತ್ ತವೇತಿ ಪರಮಾಪ್ಸರಸಃ ಪುರಾ ಯಾಃ ॥೧೩.೫೦॥

ಹೀಗೆ ಶ್ರೀಕೃಷ್ಣ ಉಪನಯನ ಸಂಸ್ಕಾರಕ್ಕೂ ಮೊದಲೇ ಮದುವೆಯಾದ. ಇದಕ್ಕೆ ಕಾರಣವೇನೆಂದರೆ: ಗೋಪಿಕೆಯರೂ ಕೂಡಾ ಈ ಕುರಿತು ಮೊದಲೇ ವರವನ್ನು ಹೊಂದಿದ್ದರು. ‘ಉಪನಯನ ಸಂಸ್ಕಾರಕ್ಕಿಂತ ಮೊದಲೇ ನಮಗೆ ನಿನ್ನ ದೇಹ ಸಂಗಮವು ಆಗಬೇಕು’ ಎನ್ನುವ ವರ ಅದಾಗಿತ್ತು.  ಈ ಎಲ್ಲಾ ಗೋಪಿಕಾಂಗನೆಯರು ಮೂಲತಃ ಉತ್ತಮರಾದ ಅಪ್ಸರ ಸ್ತ್ರೀಯರೇ ಆಗಿದ್ದರು

Thursday, July 4, 2019

Mahabharata Tatparya Nirnaya Kannada 1343_1347


ಗೋಪೈರ್ಬಲಾದಿಭಿರುದೀರ್ಣ್ಣತರಪ್ರಮೋದೈಃ ಸಾರ್ದ್ಧಂ ಸಮೇತ್ಯ ಭಗವಾನರವಿನ್ದನೇತ್ರಃ ।
ತಾಂ ರಾತ್ರಿಮತ್ರ ನಿವಸನ್ ಯಮುನಾತಟೇ ಸ ದಾವಾಗ್ನಿಮುದ್ಧತಬಲಂ ಚ ಪಪೌ ವ್ರಜಾರ್ತ್ಥೇ೧೩.೪೩

ಹೀಗೆ ಕಾಳಿಯನಾಗನನ್ನು ಯಮುನೆಯಿಂದಾಚೆ ಕಳುಹಿಸಿದ ಕಮಲದಂತೆ ಕಣ್ಣುಳ್ಳ ಶ್ರೀಕೃಷ್ಣನು, ಉತ್ಕೃಷ್ಟವಾದ ಸಂತಸವುಳ್ಳ ಬಲರಾಮನೇ ಮೊದಲಾದ ಗೋಪಾಲಕರಿಂದ ಕೂಡಿಕೊಂಡು, ಆ ರಾತ್ರಿಯನ್ನು ಆ  ಯಮುನಾತಟದಲ್ಲಿಯೇ ಕಳೆದನು. ಶ್ರೀಕೃಷ್ಣನು ಯಮುನಾತಟದಲ್ಲಿ ವ್ಯಾಪ್ತವಾಗಿರುವ ಭಯಂಕರ ಕಾಳ್ಗಿಚ್ಚನ್ನು ತನ್ನ ಗ್ರಾಮ ನಾಶವಾಗಬಾರದು ಎಂಬ ಉದ್ದೇಶಕ್ಕಾಗಿ ಕುಡಿದುಬಿಟ್ಟನು.

ಇತ್ಥಂ ಸುರಾಸುರಗಣೈರವಿಚಿನ್ತ್ಯದಿವ್ಯಕರ್ಮ್ಮಾಣಿ ಗೋಕುಲಗತೇsಗಣಿತೋರುಶಕ್ತೌ ।
ಕುರ್ವತ್ಯಜೇ ವ್ರಜಭುವಾಮಭವದ್ ವಿನಾಶ ಉಗ್ರಾಭಿಧಾದಸುರತಸ್ತರುರೂಪತೋsಲಮ್ ॥೧೩.೪೪


ತದ್ಗನ್ಧತೋ ನೃಪಶುಮುಖ್ಯಸಮಸ್ತಭೂತಾನ್ಯಾಪುರ್ಮ್ಮೃತಿಂ ಬಹಳರೋಗನಿಪೀಡಿತಾನಿ ।
ಧಾತುರ್ವರಾಜ್ಜಗದಭಾವಕೃತೈಕಬುದ್ಧಿರ್ವದ್ಧ್ಯೋ ನ ಕೇನಚಿದಸೌ ತರುರೂಪದೈತ್ಯಃ ॥೧೩.೪೫

ಈರೀತಿಯಾಗಿ ದೇವತೆಗಳು, ಮನುಷ್ಯರು, ಮೊದಲಾದವರಿಂದ ಚಿಂತಿಸಲು ಅಸಾಧ್ಯವಾದ, ಅಲೌಕಿಕವಾದ ಕರ್ಮಗಳನ್ನು ಎಣೆಯಿರದ ಕಸುವುಳ್ಳ (ಬಲವುಳ್ಳ, ಶಕ್ತಿಯುಳ್ಳ) ಕೃಷ್ಣನು ಮಾಡುತ್ತಿರಲು, ಮರದ ಶರೀರವನ್ನು ಧರಿಸಿದ ‘ಉಗ್ರ’ನೆಂಬ ಅಸುರನಿಂದ ವ್ರಜವಾಸಿಗಳಿಗೆ ವಿನಾಶವುಂಟಾಯಿತು.
ಆ ಅಸುರನು ಬೀರುವ ದುರ್ಗಂಧದಿಂದ ಮನುಷ್ಯರು, ಪಶುಗಳು, ಮೊದಲಾದ ಎಲ್ಲಾ  ಪ್ರಾಣಿಗಳೂ  ಕೂಡಾ ಬಹಳ ರೋಗದಿಂದ ಪೀಡಿತವಾದವು ಮತ್ತು  ಸತ್ತವು ಕೂಡಾ. ಬ್ರಹ್ಮದೇವರ ವರದಿಂದ ಅವಧ್ಯನಾಗಿದ್ದ,  ಜಗತ್ತನ್ನೇ ಇಲ್ಲವಾಗಿಸಬೇಕು ಎನ್ನುವ ಏಕೈಕ ನಿಶ್ಚಯವುಳ್ಳ ಈ ದೈತ್ಯನು ಮರದ ರೂಪದಲ್ಲಿದ್ದನು.  

ಸಙ್ಕರ್ಷಣೇsಪಿ ತದುದಾರವಿಷಾನುವಿಷ್ಟೇ ಕೃಷ್ಣೋ ನಿಜಸ್ಪರ್ಶತಸ್ತಮಪೇತರೋಗಮ್ ।
ಕೃತ್ವಾ ಬಭಞ್ಜ ವಿಷವೃಕ್ಷಮಮುಂ ಬಲೇನ ತಸ್ಯಾನುಗೈಃ ಸಹ ತದಾಕೃತಿಭಿಃ ಸಮಸ್ತೈಃ ॥೧೩.೪೬

ದೈತ್ಯಾಂಶ್ಚ ಗೋವಪುಷ ಆತ್ತವರಾನ್ ವಿರಿಞ್ಚಾನ್ಮೃ ತ್ಯೂಜ್ಝಿತಾನಪಿ ನಿಪಾತ್ಯ ದದಾಹ ವೃಕ್ಷಾನ್ ।
ವಿಕ್ರೀಡ್ಯ ರಾಮಸಹಿತೋ ಯಮುನಾಜಲೇ ಸ ನೀರೋಗಮಾಶು ಕೃತವಾನ್ ವ್ರಜಮಬ್ಜನಾಭಃ ॥೧೩,೪೭

ಅವನ ಉತ್ಕೃಷ್ಟವಾದ ವಿಷದಿಂದ ಪ್ರವಿಷ್ಟನಾಗಿ ಸಂಕರ್ಷಣನೂ ಕೂಡಾ ಸಂಕಟಗೊಳ್ಳಲು, ಕೃಷ್ಣನು ತನ್ನ ಮುಟ್ಟುವಿಕೆಯಿಂದ ಸಂಕರ್ಷಣನನ್ನು ರೋಗವಿಹೀನನನ್ನಾಗಿ ಮಾಡಿ, ವಿಷವೃಕ್ಷವನ್ನು ಕಿತ್ತನು(ವೃಕ್ಷರೂಪದಲ್ಲಿರುವ ಉಗ್ರಾಸುರನನ್ನು ಕೊಂದನು). ನಂತರ ಆ ಉಗ್ರಾಸುರನ ರೀತಿಯ ಆಕಾರವುಳ್ಳ ಅವನ ಅನುಜರನ್ನು ಕೃಷ್ಣ ತನ್ನ ಬಲದಿಂದ ಕೊಂದ ಕೂಡಾ(ಇಡೀ ತೋಪನ್ನೇ ನಾಶಮಾಡಿದ).
ಬ್ರಹ್ಮದೇವರಿಂದ ವರವನ್ನು ಪಡೆದು, ಸಾವಿಲ್ಲದ, ಗೋವುಗಳ ರೂಪವನ್ನು ಧರಿಸಿದ್ದ ದೈತ್ಯರೆಲ್ಲರನ್ನೂ ಬೀಳಿಸಿದ ಕೃಷ್ಣ, ಅವುಗಳ ಜೊತೆಗೇ ಇಡೀ ತೊಪನ್ನು ಕೃಷ್ಣ ಸುಟ್ಟಹಾಕಿದ. ನಂತರ ಕೃಷ್ಣ ಬಲರಾಮನೊಂದಿಗೆ ಕೂಡಿಕೊಂಡು ಯಮುನೆಯಲ್ಲಿ ಕ್ರೀಡಿಸಿದ. ಹೀಗೆ ತನ್ನ ಗ್ರಾಮವನ್ನು (ವ್ರಜವನ್ನು) ಕೃಷ್ಣ ರೋಗರಹಿತವನ್ನಾಗಿ ಮಾಡಿದ.

Tuesday, July 2, 2019

Mahabharata Tatparya Nirnaya Kannada 1338_1342


ತಂ ಯಾಮುನಹ್ರದವಿಲೋಳಕಮಾಪ್ಯ ನಾಗಃ ಕಾಳ್ಯೋ ನಿಜೈಃ ಸಮದಶತ್ ಸಹ ವಾಸುದೇವಮ್ ।
ಭೋಗೈರ್ಬಬನ್ಧ ಚ ನಿಜೇಶ್ವರಮೇನಮಜ್ಞಃ ಸೇಹೇ ತಮೀಶ ಉತ ಭಕ್ತಿತಮತೋsಪರಾಧಮ್ ॥೧೩.೩೮॥

ಯಮುನೆಯ ಮಡುವನ್ನೇ ಅಲುಗಾಡಿಸಿರುವ ತನ್ನ ಒಡೆಯನಾದ ಕೃಷ್ಣನನ್ನು ತಿಳಿಯದ ಕಾಳಿಯನಾಗನು, ತನ್ನವರೆಲ್ಲರೊಂದಿಗೆ ಕೂಡಿಕೊಂಡು, ತನ್ನ ಉದ್ದುದ್ದವಾಗಿರುವ ಶರೀರದಿಂದ ಕೃಷ್ಣನನ್ನು ಕಟ್ಟಿಹಾಕಿದ. ಸರ್ವಸಮರ್ಥನಾಗಿರುವ ಕೃಷ್ಣನು ತನ್ನ ಭಕ್ತನೇ ಆಗಿರುವ ಕಾಳಿಯನ ಈ ಅಪರಾಧವನ್ನು ಸಹಿಸಿದ.

ಉತ್ಪಾತಮೀಕ್ಷ್ಯ ತು ತದಾsಖಿಲಗೋಪಸಙ್ಘಸ್ತತ್ರಾsಜಗಾಮ ಹಲಿನಾ ಪ್ರತಿಬೋಧಿತೋsಪಿ ।
ದೃಷ್ಟ್ವಾ ನಿಜಾಶ್ರಯಜನಸ್ಯ ಬಹೋಃ ಸುದುಃಖಂ ಕೃಷ್ಣಃ ಸ್ವಭಕ್ತಮಪಿ ನಾಗಮಮುಂ ಮಮರ್ದ್ದ ॥೧೩.೩೯॥

ಬಲರಾಮನಿಂದ ಕೃಷ್ಣನ ಮಹಿಮೆಯನ್ನು ಕೇಳಿ ತಿಳಿದಿದ್ದರೂ ಕೂಡಾ,  ಎಲ್ಲಾ ಗೋಪಾಲಕರ ಸಮೂಹವು, ಆ ಉತ್ಪಾತವನ್ನು ಕಂಡು ಕೃಷ್ಣನಿದ್ದಲ್ಲಿಗೆ ಬಂದರು. ಹಾಗೆ ಬಂದ, ತನ್ನನ್ನು ಆಶ್ರಯಿಸಿರುವ ಅವರೆಲ್ಲರ  ದುಃಖವನ್ನು ಕಂಡ ಕೃಷ್ಣನು, ತನ್ನ ಭಕ್ತನಾದರೂ ಕೂಡಾ ಕಾಳಿಯನನ್ನು ತುಳಿದ.

ತಸ್ಯೋನ್ನತೇಷು ಸ ಫಣೇಷು ನನರ್ತ್ತ ಕೃಷ್ಣೋ ಬ್ರಹ್ಮಾದಿಭಿಃ ಕುಸುಮವರ್ಷಿಭಿರೀಡ್ಯಮಾನಃ ।
ಆರ್ತ್ತೋ ಮುಖೈರುರು ವಮನ್ ರುಧಿರಂ ಸ ನಾಗೋ ‘ನಾರಾಯಣಂ ತಮರಣಂ ಮನಸಾ ಜಗಾಮ’ ॥೧೩.೪೦॥

ಆ ಕಾಳಿಯನಾಗನ ಎತ್ತರವಾಗಿರುವ ಹೆಡೆಗಳ ಮೇಲೆ  ಹೂವಿನ ಮಳೆಗರೆಯುವ ಬ್ರಹ್ಮಾದಿಗಳಿಂದ ಸ್ತೋತ್ರಮಾಡಲ್ಪಡುವವನಾಗಿ ಶ್ರೀಕೃಷ್ಣ ಕುಣಿದ. ಆ ನಾಗನಾದರೋ, ಬಹಳ ಸಂಕಟವುಳ್ಳವನಾಗಿ, ತನ್ನ ಎಲ್ಲಾ ಹೆಡೆಗಳಿಂದ ರಕ್ತವನ್ನು ಕಾರುತ್ತಾ, ಮನಸ್ಸಿನಿಂದ ರಕ್ಷಕನಾದ ನಾರಾಯಣನನ್ನು ಚಿಂತಿಸಿದ.

ತಚ್ಚಿತ್ರತಾಣ್ಡವವಿರುಗ್ಣಫಣಾತಪತ್ರಂ ರಕ್ತಂ ವಮನ್ತಮುರು ಸನ್ನಧಿಯಂ ನಿತಾನ್ತಮ್
ದೃಷ್ಟ್ವಾsಹಿರಾಜಮುಪಸೇದುರಮುಷ್ಯ ಪತ್ನ್ಯೋ ನೇಮುಶ್ಚ ಸರ್ವಜಗದಾದಿಗುರುಂ ಭುವೀಶಮ್ ॥೧೩.೪೧॥

ಅವನ ವಿಚಿತ್ರವಾದ ನರ್ತನದಿಂದ, ಭಗ್ನವಾದ ಪಣವೆಂಬ (ಹೆಡೆಯೆಂಬ) ಛತ್ರವುಳ್ಳ, ಚನ್ನಾಗಿ ವಾಂತಿ ಮಾಡಿಕೊಂಡ, ತನಗೇನಾಗುತ್ತಿದೆ ಎನ್ನುವ ಪ್ರಜ್ಞೆಯನ್ನೇ ಕಳೆದುಕೊಂಡ ಕಾಳಿಯನನ್ನು ಕಂಡು, ಅವನ ಪತ್ನಿಯರು ಕೃಷ್ಣನ ಬಳಿ ಬಂದರು. ಅವರು ಸಮಸ್ತ ಜಗತ್ತಿಗೆ ಆದಿಗುರುವಾಗಿರುವ, ಭೂಮಿಗೆ ಒಡೆಯನಾಗಿರುವ ನಾರಾಯಣನಿಗೆ ನಮಸ್ಕರಿಸಿದರು ಕೂಡಾ.

ತಾಭಿಃ ಸ್ತುತಃ ಸ ಭಗವಾನಮುನಾ ಚ ತಸ್ಮೈ ದತ್ತ್ವಾsಭಯಂ ಯಮಸಹೋದರವಾರಿತೋsಮುಮ್ ।
ಉತ್ಸೃಜ್ಯ ನಿರ್ವಿಷಜಲಾಂ  ಯಮುನಾಂ ಚಕಾರ ಸಂಸ್ತೂಯಮಾನಚರಿತಃ ಸುರಸಿದ್ಧಸಾದ್ಧ್ಯೈಃ ॥೧೩.೪೨॥

ಅವರಿಂದ ಸ್ತೋತ್ರಮಾಡಲ್ಪಟ್ಟ,  ಕಾಳಿಯನಾಗನಿಂದಲೂ ಕೂಡಾ ಸ್ತೋತ್ರಮಾಡಲ್ಪಟ್ಟ  ಶ್ರೀಕೃಷ್ಣನು, ಕಾಳಿಯನಿಗೆ ಅಭಯವನ್ನು ಕೊಟ್ಟು, ಅವನನ್ನು ಯಮುನೆಯ ನೀರಿನಿಂದ ಕಳುಹಿಸಿ, ಯಮುನೆಯನ್ನು ವಿಷರಹಿತವಾಗಿಸಿದ. ಹೀಗೆ ಎಲ್ಲಾ ದೇವತೆಗಳಿಂದ ಸ್ತೋತ್ರಮಾಡಲ್ಪಡುವ ಚರಿತ್ರೆಯುಳ್ಳವನಾಗಿ ಶ್ರೀಕೃಷ್ಣ ಯಮುನೆಯನ್ನು ಶುದ್ಧಗೊಳಿಸಿದ.