ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Tuesday, July 31, 2018

Mahabharata Tatparya Nirnaya Kannada 9.01-9.05


೯. ಶ್ರೀರಾಮಚರಿತೇ ರಾಮಸ್ವಧಾಮಪ್ರವೇಶಃ


ಓಂ
ಅಥಾsಪ್ತರಾಜ್ಯೋ ಭಗವಾನ್ ಸ ಲಕ್ಷ್ಮಣಂ ಜಗಾದ ರಾಜಾ ತರುಣೋ ಭವಾsಶು
ಇತೀರಿತಸ್ತ್ವಾಹ ಸ ಲಕ್ಷ್ಮಣೋ ಗುರುಂ ಭವತ್ಪದಾಬ್ಜಾನ್ನ ಪರಂ ವೃಣೋಮ್ಯಹಮ್ ೯.೦೧

ರಾಜ್ಯಪ್ರಾಪ್ತಿಯಾದ ಮೇಲೆ, ಅಭಿಷಿಕ್ತರಾದ  ರಾಮಚಂದ್ರ ದೇವರು ಲಕ್ಷ್ಮಣನನ್ನು ‘ಕೂಡಲೇ ಯುವರಾಜನಾಗು’* ಎಂದು ಹೇಳುತ್ತಾರೆ. ಹೀಗೆ ಶ್ರೀರಾಮನಿಂದ  ಹೇಳಲ್ಪಟ್ಟ ಲಕ್ಷ್ಮಣನು, ತನ್ನ ಗುರು ರಾಮಚಂದ್ರನನ್ನು ಕುರಿತು :
‘ನಿನ್ನ ಪಾದ ಕಮಲದ ಸೇವೆಗಿಂತ ಇತರ ಯಾವುದನ್ನೂ  ನಾನು ಬಯಸುವುದಿಲ್ಲ’ ಎಂದು  ಹೇಳುತ್ತಾನೆ.
[*ಲಕ್ಷ್ಮಣ ಭರತನಿಗಿಂತ ಹಿರಿಯವನಾದ್ದರಿಂದ ಶ್ರೀರಾಮ ಲಕ್ಷ್ಮಣನಲ್ಲಿ ಯುವರಾಜನಾಗು ಎಂದು  ಹೇಳಲು ಸಾಧ್ಯ ಎನ್ನುವುದನ್ನು ಓದುಗರು ಗಮನಿಸಬೇಕು. ಕೆಲವರು ಭರತ ಲಕ್ಷ್ಮಣನಿಗಿಂತ ಹಿರಿಯ ಎಂದು ತಪ್ಪಾಗಿ ತಿಳಿಯುತ್ತಾರೆ. ಆದರೆ ಲಕ್ಷ್ಮಣ ಭರತನಿಗಿಂತ ಹಿರಿಯ ಎನ್ನುವುದು ಇಲ್ಲಿ ತಿಳಿಯುತ್ತದೆ ]

ನ ಮಾಂ ಭವತ್ಪಾದನಿಷೇವಣೈಕಸ್ಪೃಹಂ ತದನ್ಯತ್ರ ನಿಯೋಕ್ತುಮರ್ಹತಿ
ನಹೀದೃಶಃ ಕಶ್ಚಿದನುಗ್ರಹಃ ಕ್ವಚಿತ್ ತದೇವ ಮೇ ದೇಹಿ ತತಃ ಸದೈವ ೯.೦೨

ನಿನ್ನ ಪಾದವನ್ನು ಚಿಂತನೆ ಮಾಡುವುದೊಂದನ್ನು ಬಿಟ್ಟು,  ನಿನ್ನ ಪಾದ ಸೇವೆಯೊಂದನ್ನು ಬಿಟ್ಟು, ಬೇರೆಯದರಲ್ಲಿ ಆಸಕ್ತನಲ್ಲದ ನನ್ನನ್ನು ಬೇರೆಡೆಗೆ ತೊಡಗಿಸಬೇಡ.  ನಿನ್ನ ಪಾದಸೇವೆಯಲ್ಲಿ ತೊಡಗುವುದರಲ್ಲಿನ ಅನುಗ್ರಹಕ್ಕಿಂತ ಅತಿರಿಕ್ತವಾದುದು ಬೇರೊಂದಿಲ್ಲ.  ಆ ಕಾರಣದಿಂದ ಅದನ್ನೇ ಯಾವಾಗಲೂ ನೀಡು.

ಇತೀರಿತಸ್ತಸ್ಯ ತದೇವ ದತ್ತ್ವಾ ದೃಢಂ ಸಮಾಶ್ಲಿಷ್ಯ ಚ ರಾಘವಃ ಪ್ರಭುಃ
ಸ ಯೌವರಾಜ್ಯಂ ಭರತೇ ನಿಧಾಯ ಜುಗೋಪ ಲೋಕಾನಖಿಲಾನ್ ಸಧರ್ಮ್ಮಕಾನ್   ೯.೦೩

ಈ ರೀತಿಯಾಗಿ ಲಕ್ಷ್ಮಣ ಪ್ರಾರ್ಥಿಸಿದಾಗ  ಸರ್ವಸಮರ್ಥನಾದ ಶ್ರೀರಾಮಚಂದ್ರನು ಲಕ್ಷ್ಮಣನನ್ನು  ಗಟ್ಟಿಯಾಗಿ ತಬ್ಬಿ, ಅವನಿಗೆ ಆ ಸೇವೆಯನ್ನೇ ನೀಡಿ, ಭರತನನ್ನು ಯುವರಾಜನನ್ನಾಗಿ ಮಾಡಿ, ಎಲ್ಲಾ ಲೋಕಗಳನ್ನು ಧರ್ಮದಿಂದ ರಕ್ಷಿಸಿದನು. (ಧರ್ಮಪೂರ್ವಕವಾಗಿ ರಾಜ್ಯವನ್ನಾಳಿದನು)

ಪ್ರಶಾಸತೀಶೇ ಪೃಥಿವೀ ಬಭೂವ ವಿರಿಞ್ಚಲೋಕಸ್ಯ ಸಮಾ ಗುಣೋನ್ನತೌ
ಜನೋsಖಿಲೋ ವಿಷ್ಣುಪರೋ ಬಭೂವ ನ ಧರ್ಮ್ಮಹಾನಿಶ್ಚ ಬಭೂವ ಕಸ್ಯಚಿತ್    ೯.೦೪

ಶ್ರೀರಾಮಚಂದ್ರನ ಆಳ್ವಿಕೆಯಲ್ಲಿ ಪೃಥ್ವಿಯು ಗುಣದ ಉನ್ನತಿಯಲ್ಲಿ  ಸತ್ಯಲೋಕಕ್ಕೆ ಸದೃಶವಾಯಿತು. ಎಲ್ಲಾ ಜನರೂ ಕೂಡಾ ವಿಷ್ಣು ಭಕ್ತರೇ ಆಗಿದ್ದರು. ಯಾರಿಗೂ ಕೂಡಾ ಧರ್ಮ ಹಾನಿಯಾಗಲಿಲ್ಲಾ.

ಗುಣೈಶ್ಚ ಸರ್ವೈರುದಿತಾಶ್ಚ ಸರ್ವೇ ಯಥಾಯಥಾ ಯೋಗ್ಯತಯೋಚ್ಛನೀಚಾಃ
ಸಮಸ್ತರೋಗಾದಿಭಿರುಜ್ಝಿತಾಶ್ಚ ಸರ್ವೇ ಸಹಸ್ರಾಯುಷ ಊರ್ಜ್ಜಿತಾ ಧನೈಃ ೯.೦೫

ಎಲ್ಲರೂ ಯೋಗ್ಯತೆಗನುಗುಣವಾದ  ಗುಣಗಳಿಂದ ಕೂಡಿದ್ದರು. ಎಲ್ಲಾ ರೋಗಗಳನ್ನು ಕಳಚಿಕೊಂಡಿದ್ದರು. ಎಲ್ಲರೂ ಕೂಡಾ ಪೂರ್ಣವಾದ ಆಯುಷ್ಯವನ್ನು ಹೊಂದಿದವರಾಗಿದ್ದರು. (ತ್ರೇತಾಯುಗದ  ಕಾಲದಲ್ಲಿ ಮಾನವರ ಆಯುಸ್ಸು ಎಷ್ಟಿತ್ತೋ, ಎಲ್ಲರೂ  ಅಷ್ಟು ಆಯುಸ್ಸನ್ನು  ಹೊಂದಿದವರಾಗಿದ್ದರು).  ಯಾರೂ ದರಿದ್ರರು ಎಂದಿರಲಿಲ್ಲ. ಎಲ್ಲರಲ್ಲೂ ಅವಶ್ಯಕವಾದ  ಧನವಿತ್ತು.

ಕನ್ನಡ ಪದ್ಯರೂಪ: https://go-kula.blogspot.com/2018/08/9-01-05.html

Monday, July 30, 2018

Mahabharata Tatparya Nirnaya Kannada 8.244-8.248

ತ್ವಮೇವ ಸಾಕ್ಷಾತ್ ಪರಮಸ್ವತನ್ತ್ರಸ್ತ್ವಮೇವ ಸಾಕ್ಷಾದಖಿಲೋರುಶಕ್ತಿಃ ।
ತ್ವಮೇವ ಚಾಗಣ್ಯಗುಣಾರ್ಣ್ಣವಃ ಸದಾ ರಮಾವಿರಿಞ್ಚಾದಿಭಿರಪ್ಯಶೇಷೈಃ           ॥೮.೨೪೪॥

ಸಮೇತ್ಯ ಸರ್ವೇsಪಿ ಸದಾ ವದನ್ತೋsಪ್ಯನನ್ತಕಾಲಾಚ್ಚ ನವೈ ಸಮಾಪ್ನುಯುಃ ।
ಗುಣಾಂಸ್ತ್ವದೀಯಾನ್ ಪರಿಪೂರ್ಣ್ಣಸೌಖ್ಯಜ್ಞಾನಾತ್ಮಕಸ್ತ್ವಂ ಹಿ ಸದಾsತಿಶುದ್ಧಃ    ॥೮.೨೪೫॥


ನೀನೇ ಸರ್ವೋತ್ತಮನು ಸರ್ವ ಸ್ವತಂತ್ರನು. ನೀನೇ ಸಾಕ್ಷಾತ್ ಸರ್ವಶಕ್ತಿಯಾಗಿದ್ದೀಯ. (ನಿನಗೆ ಇನ್ನೊಬ್ಬರಿಂದ ಶಕ್ತಿ ಬರುವುದಿಲ್ಲ ಎನ್ನುವುದು ‘ಸಾಕ್ಷಾತ್’ ಶಬ್ದ ನೀಡುವ ಅಭಿಪ್ರಾಯ). ಎಣಿಸಾಲಾಗದ ಗುಣಸಾಗರ ನೀನು.  ರಮೆ ಮತ್ತು ಎಲ್ಲಾ (ಆಗಿ ಹೋದ ಎಲ್ಲಾ) ಬ್ರಹ್ಮ-ರುದ್ರರು ಸೇರಿಕೊಂಡರೂ ಕೂಡಾ, ನಿನ್ನ ಗುಣವನ್ನು ಸಂಪೂರ್ಣವಾಗಿ ತಿಳಿಯಲು ಸಾಧ್ಯವಿಲ್ಲ.
ಆ ಎಲ್ಲರೂ ಸೇರಿ, ನಿರಂತರವಾಗಿ, ಅನಂತ ಕಾಲದಿಂದ ವರ್ಣಿಸಿದರೂ, ನಿನ್ನ ಗುಣಗಳನ್ನು ಸಂಪೂರ್ಣವಾಗಿ ಎಣಿಸಲು(ಹೇಳಿ ಮುಗಿಸಲು) ಸಾಧ್ಯವಿಲ್ಲ.  ನೀನು ಪೂರ್ಣವಾಗಿರುವ ಸುಖ, ಜ್ಞಾನ, ಮೊದಲಾದವುಗಳೇ ಮೈದುಂಬಿ ಬಂದವನು.

ಯಸ್ತೇ ಕಥಾಸೇವಕ ಏವ ಸರ್ವದಾ ಸದಾರತಿಸ್ತ್ವಯ್ಯಚಲೈಕಭಕ್ತಿಃ ।
ಸ ಜೀವಮಾನೋ ನ ಪರಃ ಕಥಞ್ಚಿತ್ ತಜ್ಜೀವನಂ ಮೇsಸ್ತ್ವಧಿಕಂ ಸಮಸ್ತಾತ್      ॥೮.೨೪೬॥

ಯಾವ  ಸಾಧಕನು ನಿನ್ನ ಕಥೆಯನ್ನು ನಿರಂತರವಾಗಿ ಕೇಳುತ್ತಿರುತ್ತಾನೋ, ಯಾವಾಗಲೂ  ನಿನ್ನಲ್ಲೇ ರತಿಯನ್ನು ಹೊಂದಿರುತ್ತಾನೋ, ನಿನ್ನಲ್ಲಿ ಅಚಲವಾದ ಭಕ್ತಿಯನ್ನು ಹೊಂದಿರುತ್ತಾನೋ, ಅವನ ಜೀವನ  ಸಾರ್ಥಕ. (ಇದಿಲ್ಲದೇ ಜೀವಿಸುವವನ ಜೀವನ ವ್ಯರ್ಥ).  ಅಂತಹ ಸದಾ ನಿನ್ನಲ್ಲಿ ಭಕ್ತಿಯಿಂದಿರುವ ಜೀವನ ನನಗಿರಲಿ.              

ಪ್ರವರ್ದ್ಧತಾಂ ಭಕ್ತಿರಲಂ ಕ್ಷಣೇಕ್ಷಣೇ ತ್ವಯೀಶ ಮೇ ಹ್ರಾಸವಿವರ್ಜ್ಜಿತಾ ಸದಾ ।
ಅನುಗ್ರಹಸ್ತೇ ಮಯಿ ಚೈವಮೇವ ನಿರೌಪಧೌ ತೌ ಮಮ ಸರ್ವಕಾಮಃ                  ॥೮.೨೪೭॥

ಒಡೆಯನಾದ ಓ ರಾಮಚಂದ್ರನೇ, ನಿನ್ನಲ್ಲಿ ನನ್ನ ಭಕ್ತಿಯು ಕ್ಷಣಕ್ಷಣದಲ್ಲಿಯೂ ಕೂಡಾ ಬೆಳೆಯುತ್ತಿರಲಿ(ಎಂದೂ ಹ್ರಾಸವಾಗದೇ ಸದಾ ವೃದ್ಧಿಯನ್ನು ಹೊಂದುತ್ತಿರಲಿ). ಇದೇ ರೀತಿಯಾದ ನಿನ್ನ ಅನುಗ್ರಹವು ಸದಾ ನನ್ನಮೇಲಿರಲಿ  ಎನ್ನುವುದು ನನ್ನ ಸಮಸ್ತ ಕಾಮನೆಯು’.

ಇತೀರಿತಸ್ತಸ್ಯ ದದೌ ಸ ತದ್ ದ್ವಯಂ ಪದಂ ವಿಧಾತುಃ ಸಕಲೈಶ್ಚ ಶೋಭನಮ್ ।
ಸಮಾಶ್ಲಿಷಚ್ಚೈನಮಥಾsರ್ದ್ರಯಾ ಧಿಯಾ ಯಥೋಚಿತಂ ಸರ್ವಜನಾನಪೂಜಯತ್           ॥೮.೨೪೮॥

ಈ ರೀತಿಯಾಗಿ ಹನುಮಂತನು ಹೇಳುತ್ತಿರಲು,  ರಾಮಚಂದ್ರನು ಅವೆರಡನ್ನೂ(ಭಕ್ತಿ ಹಾಗು ಅನುಗ್ರಹವನ್ನು), ಎಲ್ಲಕ್ಕೂ ಮಿಗಿಲಾದ ಬ್ರಹ್ಮ ಪದವಿಯನ್ನು ಹನುಮಂತನಿಗೆ ಕೊಟ್ಟನು. ನಂತರ ಪ್ರೀತಿಯಿಂದ ತುಂಬಿದ ಮನಸ್ಸಿನಿಂದ ಹನುಮಂತನನ್ನು ಗಟ್ಟಿಯಾಗಿ ತಬ್ಬಿಕೊಂಡನು.  ತದನಂತರ ಯೋಗ್ಯತೆಗನುಗುಣವಾಗಿ ಸಮಸ್ತ  ಜನರನ್ನೂ ಕೂಡಾ  ಶ್ರೀರಾಮ  ಸತ್ಕರಿಸಿದನು.

ಇತಿ ಶ್ರೀಮದಾನನ್ದತೀರ್ತ್ಥಭಗವತ್ಪಾದವಿರಚಿತೇ ಶ್ರೀಮಹಾಭಾರತತಾತ್ಪರ್ಯ್ಯನಿರ್ಣ್ಣಯೇ
ಶ್ರೀರಾಮಚರಿತೇ ಅಷ್ಟಮೋsಧ್ಯಾಯಃ ॥

ಕನ್ನಡ ಪದ್ಯರೂಪ: https://go-kula.blogspot.com/2018/07/8-244-248.html

Sunday, July 29, 2018

Mahabharata Tatparya Nirnaya Kannada 8.239-8.243


ಅತಃ ಸ್ವಭಾವಾಜ್ಜಯಿನಾವಹಂ ಚ ವಾಯುಶ್ಚ ವಾಯುರ್ಹನುಮಾನ್ ಸ ಏಷಃ ।
ಅಮುಷ್ಯ ಹೇತೋಸ್ತು ಪುರಾ ಹಿ ವಾಯುನಾ ಶಿವೇನ್ದ್ರಪೂರ್ವಾ ಅಪಿ ಕಾಷ್ಠವತ್ ಕೃತಾಃ     ॥೮.೨೩೯॥

ಸ್ವಾಭಾವಿಕವಾದ ಶಕ್ತಿಯಿಂದ ನಾನು ಮತ್ತು ಮುಖ್ಯಪ್ರಾಣನು ರಾವಣನನ್ನು ಗೆದ್ದಿದ್ದೇವೆ.    ಹನುಮಂತನಿಗಾಗಿ ಇವನ ಅಪ್ಪನಾದ ಮುಖ್ಯಪ್ರಾಣ  ಇಂದ್ರಾದಿ ದೇವತೆಗಳನ್ನೂ ಲೆಕ್ಕಿಸದೇ  ಉಸಿರನ್ನು ನಿಲ್ಲಿಸಿ, ಅವರನ್ನು  ಕಾಷ್ಠರನ್ನಾಗಿ ಮಾಡಿದ್ದ.
[ಈ ಮೇಲಿನ ಮಾತಿನ ಹಿಂದಿನ ಕಥೆಯನ್ನು ವಾಲ್ಮೀಕಿ ರಾಮಾಯಣದಲ್ಲಿ (ಉತ್ತರಕಾಂಡ ಅ. ೩೫, ೩೬) ಕಾಣಬಹುದು.  ಹನುಮಂತ ಚಿಕ್ಕವನಾಗಿದ್ದಾಗ,  ಸೂರ್ಯನನ್ನು ಹಣ್ಣು ಎಂದು  ತಿಳಿದು, ಅದನ್ನು ತಿನ್ನುವುದಕ್ಕಾಗಿ ವೇಗದಿಂದ ಸಾಗುತ್ತಿದ್ದ. ಇದನ್ನು ಕಂಡ ರಾಹು ಇಂದ್ರನಿಗೆ ವಿಷಯ ತಿಳಿಸುತ್ತಾನೆ.  ಇಂದ್ರ ತನ್ನ ವಜ್ರದಿಂದ ಹನುಮಂತನನ್ನು ಹೊಡೆಯುತ್ತಾನೆ.  ಅದರಿಂದ ಕೋಪಗೊಂಡ ಮುಖ್ಯಪ್ರಾಣ ಸಮಸ್ತ ಪ್ರಾಣಿಗಳ ಉಸಿರಾಟವನ್ನು ನಿಲ್ಲಿಸುತ್ತಾನೆ. ಆಗ ಬ್ರಹ್ಮದೇವರು , ಹಿರಿಯವರ ಮೇಲೆ ಆಕ್ರಮಣ ಮಾಡಿರುವುದು ತಪ್ಪು ಎಂದು  ತಿಳಿಹೇಳಿ, ಇಂದ್ರನಿಗೆ ಆತನ ತಪ್ಪಿನ ಅರಿವನ್ನು ಮಾಡಿಕೊಡುತ್ತಾರೆ]

ಅತೋ ಹನೂಮಾನ್ ಪದಮೇತು ಧಾತುರ್ಮ್ಮದಾಜ್ಞಯಾ ಸೃಷ್ಟ್ಯವನಾದಿ ಕರ್ಮ್ಮ ।
ಮೋಕ್ಷಂ ಚ ಲೋಕಸ್ಯ ಸದೈವ ಕುರ್ವನ್ ಮುಕ್ತಶ್ಚ ಮುಕ್ತಾನ್ ಸುಖಯನ್ ಪ್ರವರ್ತ್ತತಾಮ್ ॥೮.೨೪೦॥

ಇಂತಹ ಈ  ಹನುಮಂತನು ನನ್ನ ಆಜ್ಞೆಯಿಂದ ಬ್ರಹ್ಮಪದವಿಯನ್ನು ಹೊಂದಲಿ. ಈ ಲೋಕಕ್ಕೆ ಸೃಷ್ಟಿ, ರಕ್ಷಣೆ ಮೊದಲಾದ ಕರ್ಮಗಳನ್ನು, ಜೀವರಿಗೆ ಮೋಕ್ಷದ ಸವಿಯನ್ನು ಯಾವಾಗಲೂ ಕೊಡುತ್ತಿರಲಿ. ಮುಕ್ತನಾಗಿ, ಮುಕ್ತರನ್ನು ಆನಂದಗೊಳಿಸುತ್ತಾ  ಮುಂದುವರಿಯಲಿ.

ಭೋಗಾಶ್ಚ ಯೇ ಯಾನಿ ಚ ಕರ್ಮ್ಮಜಾತಾನ್ಯನಾದ್ಯನನ್ತಾನಿ ಮಮೇಹ ಸನ್ತಿ ।
ಮದಾಜ್ಞಯಾ ತಾನ್ಯಖಿಲಾನಿ ಸನ್ತಿ ಧಾತುಃ ಪದೇ ತತ್ ಸಹಭೋಗನಾಮ ॥೮.೨೪೧॥

ಈ ಲೋಕದಲ್ಲಿ ನನಗೆ ಯಾವ ಯಾವ ಭೋಗಗಳಿವೆಯೋ, ಅನಾದಿ-ಅನಂತವಾಗಿರುವ ಕರ್ಮಗಳಿವೆಯೋ, ನನ್ನ ಆಜ್ಞೆಯಿಂದ ಆ ಎಲ್ಲಾ ಭೋಗಗಳು  ಬ್ರಹ್ಮ ಪದವಿಗಿದೆ. ಅದನ್ನೇ ಸಹಭೋಗ ಎಂದು ಕರೆಯುತ್ತಾರೆ. 

ಏತಾದೃಶಂ ಮೇ ಸಹಭೋಜನಂ ತೇ ಮಯಾ ಪ್ರದತ್ತಂ ಹನುಮನ್ ಸದೈವ ।
ಇತೀರಿತಸ್ತಂ ಹನುಮಾನ್ ಪ್ರಣಮ್ಯ ಜಗಾದ ವಾಕ್ಯಂ ಸ್ಥಿರಭಕ್ತಿನಮ್ರಃ ॥೮.೨೪೨॥

ಈರೀತಿಯಾಗಿರುವ ಸಹಭೋಗವು ನನ್ನಿಂದ ನಿನಗೆ ಕೊಡಲ್ಪಟ್ಟಿದೆ’ ಎನ್ನುತ್ತಾನೆ ಶ್ರೀರಾಮ.
ಶ್ರೀರಾಮನ ಮೆಚ್ಚುಗೆಯ ಮಾತನ್ನು ಕೇಳಿದ ಹನುಮಂತನು ಪರಮಾತ್ಮನಿಗೆ ನಮಸ್ಕರಿಸಿ, ಭಕ್ತಿಯಿಂದ ಭಾಗಿ  ಹೀಗೆ ಹೇಳುತ್ತಾನೆ:

ಕೋ ನ್ವೀಶ ತೇ ಪಾದಸರೋಜಭಾಜಾಂ ಸುದುರ್ಲ್ಲಭೋsರ್ತ್ಥೇಷು ಚತುರ್ಷ್ವಪೀಹ ।
ತಥಾsಪಿ ನಾಹಂ ಪ್ರವೃಣೋಮಿ ಭೂಮನ್ ಭವತ್ಪದಾಮ್ಭೋಜನಿಷೇವಣಾದೃತೇ ॥೮.೨೪೩॥

‘ಒಡೆಯನೇ,  ನಿನ್ನ ಪಾದ ಕಮಲವನ್ನು ಹೊಂದಿರುವವರಿಗೆ  ಧರ್ಮ-ಅರ್ಥ-ಕಾಮ-ಮೋಕ್ಷಗಳಲ್ಲಿ ಯಾವುದು ಸಿಗುವುದಿಲ್ಲ?  ಎಲ್ಲವೂ ಸಿಗುತ್ತದೆ. ಆದರೂ, ನಾನು ನಿನ್ನ ಪಾದ ಸೇವೆಯನ್ನು ಹೊರತುಪಡಿಸಿ, ಬೇರೇನನ್ನೂ  ಬೇಡುವುದಿಲ್ಲ.

ಕನ್ನಡ ಪದ್ಯರೂಪ: https://go-kula.blogspot.com/2018/07/8-239-243.html

Saturday, July 28, 2018

Mahabharata Tatparya Nirnaya Kannada 8.235-8.238


   ದತ್ತೋ ವರೋ ನ ಮನುಜಾನ್ ಪ್ರತಿ ವಾನರಾಂಶ್ಚ ಧಾತ್ರಾsಸ್ಯ ತೇನ ವಿಜಿತೋ ಯುಧಿ ವಾಲಿನೈಷಃ ।
    ಅಬ್ಜೋದ್ಭವಸ್ಯ ವರಮಾಶ್ವಭಿಭೂಯ ರಕ್ಷೋಜಿಗ್ಯೇ ತ್ವಹಂ ರಣಮುಖೇ ಬಲಿಮಾಹ್ವಯನ್ತಮ್         ॥೮.೨೩೫॥

ಬ್ರಹ್ಮದೇವರಿಂದ ರಾವಣನಿಗೆ ಮನುಷ್ಯರು ಹಾಗು  ಕಪಿಗಳನ್ನು ಕುರಿತು ವರ ಕೊಡಲ್ಪಟ್ಟಿರಲಿಲ್ಲ. ಅದರಿಂದಾಗಿ ವಾಲಿಯಿಂದ ಆತ ಸೋಲಿಸಲ್ಪಟ್ಟಿದ್ದನು. ದತ್ತಾತ್ರಯ ನಾಮಕ ಭಗವಂತನ ವರಪ್ರಸಾದದಿಂದ ಕಾರ್ತವೀರ್ಯಾರ್ಜುನನು ರಾವಣನನ್ನು ಗೆದ್ದಿದ್ದ’.
ಮುಂದುವರಿದು ಶ್ರೀರಾಮ ಹೇಳುತ್ತಾನೆ: ‘ನಾನಾದರೋ, ಯುದ್ಧಕ್ಕೆ  ಆಹ್ವಾನ ಮಾಡುಲ ನನ್ನ ಭಕ್ತನಾದ ಬಲಿ ಚಕ್ರವರ್ತಿಯ ಬಳಿ ಬಂದ ಈ ರಾವಣನನ್ನು  ಬ್ರಹ್ಮನ ವರವನ್ನು ಉಲ್ಲಂಘಿಸಿ ಗೆದ್ದೆ. 

ಬಲೇ  ರ್ದ್ದ್ವಾರಸ್ಥೋsಹಂ ವರಮಸ್ಮೈ ಸಮ್ಪ್ರದಾಯ ಪೂರ್ವಂ ತು ।
ತೇನ ಮಯಾ ರಕ್ಷೋsಸ್ತಂ ಯೋಜನಮಯುತಂ ಪದಾಙ್ಗುಲ್ಯಾ              ॥೮.೨೩೬॥

(ವಾಮನ ಅವತಾರದಲ್ಲಿ ಬಲಿಯ  ಭಕ್ತಿಗೆ ಮೆಚ್ಚಿ )ನಾನು ಸದಾ ನಿನ್ನ ಬಾಗಿಲನ್ನು ಕಾಯುತ್ತಿರುತ್ತೇನೆ ಎಂದು ಬಲಿ ಚಕ್ರವರ್ತಿಗೆ ವರವನ್ನು ಕೊಟ್ಟಿರುವುದರಿಂದ, (ಪಾತಾಳ ಲೋಕದಲ್ಲಿದ್ದ) ಬಲಿಯ ಬಾಗಿಲಲ್ಲಿ ನಿಂತು ನಾನು ಕಾಯುತ್ತಿದ್ದೆ. ಅಲ್ಲಿಗೆ ಬಂದಿದ್ದ ಈ ರಾಕ್ಷಸನು(ರಾವಣನು) ನನ್ನ ಪಾದದ ಬೆರಳಿನ ಹೊಡೆತದಿಂದ  ಹತ್ತು ಸಾವಿರ ಯೋಜನ ದೂರ ಎಸೆಯಲ್ಪಟ್ಟ.
[ರಾಮಾಯಣದಲ್ಲಿ ರಾವಣನು ಬಲಿಯನ್ನು ಭೇಟಿಯಾದ ಕಥೆ ಇದೆ. ಬಲಿಯನ್ನು ಯುದ್ಧಕ್ಕೆ ಆಹ್ವಾನಿಸಲು ಹೋದ ಅವನು ಬಾಗಿಲಲ್ಲಿ ಪಾಲಕನಾಗಿ ನಿಂತಿರುವ ಗದಾಪಾಣಿಯಾದ ವಾಮನ ದೇವನನ್ನು ಕಂಡು ಬೆರಗಾಗಿ ಬಲಿಯನ್ನು ಅದೇ ವಿಚಾರವಾಗಿ ಕೇಳುತ್ತಾನೆ:  ' ಯಾರು ಅವನು? ನಿನ್ನ ದ್ವಾರಪಾಲಕನೇ?  ಜಗತ್ತಿನ ಓಡೆಯನಂತೆ ಕಾಣುತ್ತಾನೆ...' ಎಂದು.
ಆಗ ಬಲಿ ರಾವಣನಿಗೆ ಹೇಳುತ್ತಾನೆ: 'ಅವನು ಯಾವನೋ ಬಾಗಿಲನ್ನು ಕಾಯುವವನಲ್ಲ. ವಿಷ್ಣು, ನಾರಾಯಣ, ಕಪಿಲಾದಿ ನಾಮದಿಂದ ಕರೆಯಲ್ಪಡುವ ಜಗದೀಶ್ವರನು', ಎಂದು.
ಈ ಕಥೆಯನ್ನು ಕೆಲವರು ರಾಮಾಯಣದಲ್ಲಿ ಪ್ರಕ್ಷಿಪ್ತ ಎಂದು ಬಗೆಯುತ್ತಾರೆ. ಆದರೆ ಅದು ಹಾಗಲ್ಲ ಎಂದು ಜಗತ್ತಿಗೆ ಸಾರುವುದಕ್ಕಾಗಿ ಮಧ್ವಾಚಾರ್ಯರು ಇಲ್ಲಿ  ಆ ಕಥೆಯನ್ನು ‘ಬಲಿಮಾಹ್ವಯಂತಮ್’ ಎಂದು ಒಂದೇ ಪದದಲ್ಲಿ ಸಂಗ್ರಹಿಸಿ ನೀಡಿದ್ದಾರೆ ]

ಪುನಶ್ಚ ಯುದ್ಧಾಯ ಸಮಾಹ್ವಯನ್ತಂ ನ್ಯಪಾತಯಂ ರಾವಣಮೇಕಮುಷ್ಟಿನಾ ।
ಮಹಾಬಲೋsಹಂ ಕಪಿಲಾಖ್ಯರೂಪಸ್ತ್ರಿಕೋಟಿರೂಪಃ ಪವನಶ್ಚ ಮೇ ಸುತಃ ॥೮.೨೩೭॥

ಮತ್ತೆ ಯುದ್ಧಕ್ಕಾಗಿ ಆಹ್ವಾನ ಮಾಡಿದ ರಾವಣನನ್ನು ಒಂದೇ ಗುದ್ದಿನಿಂದ ಕೆಳಗೆ ಬೀಳಿಸಿದೆ. ‘ಕಪಿಲವಾಸುದೇವ’ ಎಂದು ನನ್ನ ಹೆಸರು. ಮಹಾಬಲಿಷ್ಟನಾಗಿದ್ದೇನೆ. ನನ್ನ ಮಗ ‘ಪವನ’ ಮೂರು ಕೋಟಿ ರೂಪವುಳ್ಳವನಾಗಿದ್ದಾನೆ’ ಎನ್ನುತ್ತಾನೆ ಶ್ರೀರಾಮಚಂದ್ರ.
[ಇದನ್ನು ವಾಲ್ಮೀಕಿ ರಾಮಾಯಣದಲ್ಲಿ ಹೇಳಲಾಗಿದೆ. ಆದರೆ ಕೆಲವರು ಇದನ್ನು ಪ್ರಕ್ಷಿಪ್ತ ಎಂದು ಬಗೆದು ತಿರಸ್ಕರಿಸುತ್ತಾರೆ  (ಉತ್ತರಕಾಂಡ , ಅಧ್ಯಾಯ ೨೮.೬೫) ‘ದ್ವೀಪಸ್ಥಃ ಪುರುಷಃ ಕೋsಸೌ ತಿಸ್ರಃ ಕೋಟ್ಯಶ್ಚ ತಾಶ್ಚ ಕಾಃ’. ದ್ವೀಪದಲ್ಲಿ ಒಬ್ಬ ಪುರುಷನಿದ್ದಾನೆ. ಅವನು ಯಾರು? ಅವನ ಸುತ್ತ, ಮೂರು ಕೋಟಿ ರೂಪದಿಂದ ಇರುವವನು  ಯಾರು ಎಂದು   ಶ್ರೀರಾಮನೇ  ಅಗಸ್ತ್ಯರನ್ನು ಪ್ರಶ್ನಿಸುವ ಪ್ರಸಂಗ ಇದಾಗಿದೆ(ಲೋಕಶಿಕ್ಷಣಕ್ಕಾಗಿ ಶ್ರೀರಾಮ ಹಾಕಿದ ಪ್ರಶ್ನೆ). ಆಗ ಅಗಸ್ತ್ಯರು ಉತ್ತರಿಸುತ್ತಾ ಹೇಳುತ್ತಾರೆ: ಭಗವಾನ್ ಕಪಿಲೋ ರಾಮ ದ್ವೀಪಸ್ಥೋ ನರ ಉಚ್ಯತೇ । (ದ್ವೀಪದಲ್ಲಿರುವವನನ್ನು ಕಪಿಲ ಎಂದು ಕರೆಯುತ್ತಾರೆ)  ಸ ವೈ ನಾರಾಯಣೋ ದೇವಃ ಶಂಖಚಕ್ರಗದಾಧರಃ । ವಿಧಾತಾ ಚೈವ ಭೂತಾನಾಂ ಸಂಹರ್ತ ಸ ತತೈವ ಚ । ಆನಾದಿರಚ್ಯುತೋ ವಿಷ್ಣುಃ ಪ್ರಭವಃ ಶಾಶ್ವತೋsವ್ಯಯಃ । ಯೇ ತು ನೃತ್ಯಂತಿ ವೈ ತತ್ರ ಸುತಾಸ್ತೇ  ತಸ್ಯ  ಧೀಮತಃ  ತುಲ್ಯತೇಜಃಪ್ರತಾಪಾಸ್ತೇ ಕಪಿಲಸ್ಯ ನರಸ್ಯ ವೈ’ (೨೮. ೬೭-೭೦) . ಇಲ್ಲಿ ಹೇಳುತ್ತಾರೆ: ‘ಆ ಪುರುಷನ  ಸುತ್ತ ನರ್ತನ ಮಾಡಿಕೊಂಡಿರುತ್ತಾರೆ. ಕಪಿಲನಿಗೆ ಸಮನಾದ ತೇಜಸ್ಸು, ಪರಾಕ್ರಮ ಅವರಿಗಿದೆ’  ಎಂದು. ಆದರೆ ಅವರು ಯಾರು ಎನ್ನುವುದನ್ನು ಮಾತ್ರ ಇಲ್ಲಿ ಸ್ಪಷ್ಟಪಡಿಸಿಲ್ಲ.  ಆದರೆ ಆಚಾರ್ಯರು ಮೇಲಿನ ಶ್ಲೋಕದಲ್ಲಿ  ತ್ರಿಕೋಟಿರೂಪಃ ಪವನಶ್ಚ ಮೇ ಸುತಃ’  ಎಂದು ನಿರ್ಣಯ ನೀಡಿ ಎಲ್ಲವನ್ನೂ ಸ್ಪಷ್ಟಪಡಿಸಿದ್ದಾರೆ. ಇದರಿಂದ ವಾಲ್ಮೀಕಿ ರಾಮಾಯಣದ ಈ ಮೇಲಿನ ಮಾತು ಪ್ರಕ್ಷಿಪ್ತ ಅಲ್ಲಾ ಎನ್ನುವುದೂ ಸ್ಪಷ್ಟವಾಗುತ್ತದೆ.]

ಆವಾಂ ಸ್ವಶಕ್ತ್ಯಾ ಜಯಿನಾವಿತಿ ಸ್ಮ ಶಿವೋ ವರಾನ್ಮೇsಜಯದೇನಮೇವಮ್ ।
ಜ್ಞಾತ್ವಾ ಸುರಾಜೇಯಮಿಮಂ ಹಿ ವವ್ರೇ ಹರೋ ಜಯೇಯಾಹಮಮುಂ ದಶಾನನಮ್         ॥೮.೨೩೮॥

ನಾವಿಬ್ಬರೂ ಕೂಡಾ(ಶ್ರೀರಾಮ ಮತ್ತು ಹನುಮಂತ) ನಮ್ಮ ಸ್ವಾಭಾವಿಕವಾದ ಶಕ್ತಿಯಿಂದಲೇ ರಾವಣನನ್ನು ಗೆದ್ದವರಾಗಿದ್ದೇವೆ. ಸದಾಶಿವನು ನನ್ನ ವರದಿಂದ ಈ ರಾವಣನನ್ನು ಗೆದ್ದಿದ್ದ.  ರಾವಣನನ್ನು ದೇವತೆಗಳು ಜಯಿಸಲು  ಸಾಧ್ಯವಿಲ್ಲ ಎಂದು ತಿಳಿದು, ‘ರಾವಣನನ್ನು ಗೆಲ್ಲುವ’  ವರವನ್ನು ಶಿವ ನನ್ನಿಂದ ಪಡೆದ. ಅದರಿಂದಾಗಿ ಅವನನ್ನು ಗೆದ್ದ.
[ತಾತ್ಪರ್ಯ : ರಾವಣನಿಗೆ ಬ್ರಹ್ಮನ ವರಬಲವಿತ್ತು. ಅದನ್ನು ಮೀರುವ ಶಕ್ತಿ ಕೇವಲ ಬ್ರಹ್ಮನಿಗಿಂತ ಎತ್ತರದಲ್ಲಿರುವವರಿಗೆ ಮತ್ತು ಬ್ರಹ್ಮನಿಗೆ ಸಮನಾಗಿರುವವನಿಗೆ ಮಾತ್ರ ಸಾಧ್ಯ. ಮುಖ್ಯಪ್ರಾಣ ತಾರತಮ್ಯದಲ್ಲಿ ಬ್ರಹ್ಮನಿಗೆ ಸಮನಾದರೆ,  ಭಗವಂತ ಬ್ರಹ್ಮನಿಗೆ ಸ್ವಾಮಿ. ಹೀಗಾಗಿ, ಶ್ರೀರಾಮ ಮತ್ತು ಮುಖ್ಯಪ್ರಾಣ ಮಾತ್ರ ರಾವಣನನ್ನು ಸ್ವಾಭಾವಿಕ ಬಲದಿಂದ ಗೆಲ್ಲಲು ಸಾಧ್ಯ. ಉಳಿದವರು ಅಂದರೆ: ವಾಲಿ, ಕಾರ್ತವೀರ್ಯಾರ್ಜುನ, ಶಿವ,  ಇವರ್ಯಾರೂ ಕೂಡಾ ಸ್ವಾಭಾವಿಕವಾಗಿ ರಾವಣನನ್ನು ಗೆದ್ದಿರುವುದಲ್ಲ. ಗೆದ್ದಿದ್ದರೆ ಅದು ಕೇವಲ ವರಬಲದಿಂದ. ಈ ಹಿಂದೆ ಹೇಳಿದಂತೆ  ಶತ್ರುವನ್ನ ಗೆಲ್ಲಲು ಬೇಕು ಅವನಿಗಿಂತ ನಾಕು ಪಟ್ಟು ಬಲ, ಶತ್ರುವನ್ನ ಕೊಲ್ಲಲು ಬೇಕು ಅವನಿಗಿಂತ ನೂರು ಪಟ್ಟು ಬಲ(೬.೦೭). ಅವಧ್ಯನೆನಿಸಿದ್ದ ರಾವಣನನ್ನು ಕೊಲ್ಲುವ ಸಾಮರ್ಥ್ಯವಿದ್ದಿದ್ದು  ಕೇವಲ ಪ್ರಾಣ(ಹನುಮಂತ) ಮತ್ತು ನಾರಾಯಣ(ಶ್ರೀರಾಮ)ರಿಗೆ ಮಾತ್ರ]

ಕನ್ನಡ ಪದ್ಯರೂಪ: https://go-kula.blogspot.com/2018/07/8-235-238.html

Friday, July 27, 2018

Mahabharata Tatparya Nirnaya Kannada 8.230-8.234


ಪುರೀಂ ಪ್ರವಿಶ್ಯ ಮುನಿಭಿಃ  ಸಾಮ್ರಾಜ್ಯೇ ಚಾಭಿಷೇಚಿತಃ ।
ಯಥೋಚಿತಂ ಚ ಸಮ್ಮಾನ್ಯ ಸರ್ವಾನಾಹೇದಮೀಶ್ವರಃ ॥೮.೨೩೦॥

ಪಟ್ಟಣವನ್ನು ಪ್ರವೇಶಮಾಡಿ, ಅಗಸ್ತ್ಯಾದಿ ಮುನಿಗಳಿಂದ ರಾಜ್ಯಾಭಿಷೇಕ ಮಾಡಿಸಿಕೊಳ್ಳಲ್ಪಟ್ಟ ಶ್ರೀರಾಮಚಂದ್ರ, ಎಲ್ಲರನ್ನೂ ಅವರವರ  ಯೋಗ್ಯತೆಗನುಗುಣವಾಗಿ ಸನ್ಮಾನ ಮಾಡಿ, ಎಲ್ಲರನ್ನು ಕುರಿತು ಈ ರೀತಿ  ಹೇಳುತ್ತಾನೆ:

ಸರ್ವೈರ್ಭವದ್ಭಿಃ ಸುಕೃತಂ ವಿಧಾಯ ದೇಹಂ ಮನೋವಾಕ್ಸಹಿತಂ ಮದೀಯಮ್ ।
ಏತಾವದೇವಾಖಿಲಸದ್ವಿಧೇಯಂ ಯತ್ ಕಾಯವಾಕ್ಚಿತ್ತಭವಂ ಮದರ್ಚ್ಚನಮ್ ॥೮.೨೩೧॥

‘ನೀವೆಲ್ಲರೂ ನಿಮ್ಮ ಮನಸ್ಸು ಹಾಗು ಮಾತುಗಳಿಂದ ಕೂಡಿರುವ ನಿಮ್ಮ ದೇಹದಿಂದ ನನಗೆ ಸಂಬಂಧಪಟ್ಟ ಕೆಲಸವನ್ನು ಮಾಡಿ ಪುಣ್ಯವನ್ನೇ ಮಾಡಿದ್ದೀರಿ. ಇದು ಎಲ್ಲಾ ಸಜ್ಜನರೂ  ಮಾಡಬೇಕಾದ ಕಾರ್ಯ. ದೇಹ-ಮಾತು-ಮನಸ್ಸಿನಿಂದ ನಡೆಯುವ ನನ್ನ ಅರ್ಚನೆ  ಎಲ್ಲರೂ ಮಾಡಬೇಕಾದದ್ದು.

ಮುಕ್ತಿಪ್ರದಾನಾತ್ ಪ್ರತಿಕರ್ತ್ತೃತಾ ಮೇ ಸರ್ವಸ್ಯ ಚಾಥೋ ಭವತಾಂ ಭವೇತ ।
ಹನೂಮತೋ ನ ಪ್ರತಿಕರ್ತ್ತೃತಾ ಸ್ಯಾತ್ ಸ್ವಭಾವಭಕ್ತಸ್ಯ ನಿರೌಪಧಂ ಮೇ ॥೮.೨೩೨॥

ನಿಮಗೆಲ್ಲರಿಗೂ ಮುಕ್ತಿಯನ್ನು ಕೊಡುವುದರಿಂದ ನಿಮ್ಮೆಲ್ಲರ ಸೇವೆಗೆ ತಕ್ಕಫಲವನ್ನು ಕೊಟ್ಟಂತಾಗುತ್ತದೆ. ಆದರೆ ಸ್ವಾಭಾವಿಕವಾಗಿಯೇ ಭಕ್ತನಾಗಿರುವ, ಯಾವುದೇ ಫಲಾಪೇಕ್ಷೆ, ನೆಪವಿರದ ಹನುಮಂತನಿಗೆ ಏನನ್ನು ಕೊಟ್ಟರೂ ಅದು ಕಡಿಮೆಯೇ’ ಎಂದು ಹೇಳಿದ ರಾಮಚಂದ್ರ ಹನುಮಂತನ ಗುಣ ಎಂತಹದ್ದು ಎನ್ನುವುದನ್ನು ವಿವರಿಸುತ್ತಾನೆ:

ಮದ್ಭಕ್ತೌ ಜ್ಞಾನಪೂರ್ತ್ತಾವನುಪಧಿಕಬಲಪ್ರೋನ್ನತೌ ಸ್ಥೈರ್ಯ್ಯಧೈರ್ಯ್ಯ
ಸ್ವಾಭಾವ್ಯಾದಿಕ್ಯತೇಜಃ ಸುಮತಿದಮಶಮೇಷ್ವಸ್ಯ ತುಲ್ಯೋ ನ ಕಶ್ಚಿತ್ ।
ಶೇಷೋ ರುದ್ರಃ ಸುಪರ್ಣ್ಣೋsಪ್ಯುರುಗುಣಸಮಿತೌ ನೋಸಹರ್ಸ್ರಾಂಶತುಲ್ಯಾ
ಅಸ್ಯೇತ್ಯಸ್ಮಾನ್ಮದೈಶಂ ಪದಮಹಮಮುನಾ ಸಾರ್ದ್ಧಮೇವೋಪಭೋಕ್ಷ್ಯೇ ॥೮.೨೩೩॥

ನನ್ನ ಭಕ್ತಿಯಲ್ಲಿ,  ಜ್ಞಾನ ಪೂರ್ಣತೆಯಲ್ಲಿ, ಸ್ವಾಭಾವಿಕವಾದ ಬಲದ ಉತ್ಕೃಷ್ಟತೆಯಲ್ಲಿ, ಇಂದ್ರಿಯ ನಿಗ್ರಹದಲ್ಲಿ,  ಬುದ್ಧಿವಂತಿಕೆಯಲ್ಲಿ, ಸ್ವಾಭಾವಿಕವಾಗಿಯೇ ಅಧಿಕವಾಗಿರುವ ತೇಜಸ್ಸಿನಲ್ಲಿ, ಪ್ರಜ್ಞಾವಂತಿಕೆಯಲ್ಲಿ, ಇಂದ್ರಿಯನಿಗ್ರಹದಲ್ಲಿ, ನನ್ನ ಭಕ್ತಿಯಲ್ಲಿ ಇವನಿಗೆ ಸಮನಾಗಿರುವವನು ಯಾರೂ ಇಲ್ಲ. ( ಆದರೆ ‘ಕಶ್ಚಿತ್ ಸಮಃ’ ಬ್ರಹ್ಮ ಮಾತ್ರ ಇವನಿಗೆ ಸಮ). ಶೇಷ, ರುದ್ರ, ಗರುಡ ಇವರ ಗುಣಗಳು ಹನುಮಂತನ ಗುಣದ ಸಾವಿರದ ಒಂದು ಭಾಗಕ್ಕೂ ಸಮನಲ್ಲ. ಅದರಿಂದ ನನ್ನ ಈಶಪದವಿಯನ್ನು ಇವನ ಜೊತೆಗೆ ಭೋಗಿಸುತ್ತೇನೆ(ಇವನಿಗೆ ಸಾಯುಜ್ಯವನ್ನು ನೀಡುತ್ತೇವೆ).

    ಪೂರ್ವಂ ಜಿಗಾಯ ಭುವನಂ ದಶಕನ್ಧರೋsಸಾವಬ್ಜೋದ್ಭವಸ್ಯ ವರತೋ ನತು ತಂ ಕದಾಚಿತ್ ।
     ಕಶ್ಚಿಜ್ಜಿಗಾಯ ಪುರುಹೂತಸುತಃ ಕಪಿತ್ವಾದ್ ವಿಷ್ಣೋರ್ವರಾದಜಯದರ್ಜ್ಜುನ ಏವ ಚೈನಮ್ ॥೮.೨೩೪॥

ಮೊದಲು ರಾವಣನು ಬ್ರಹ್ಮವರದ ಬಲದಿಂದ ಭೂಮಿಯನ್ನು ಗೆದ್ದ. ಅವನನ್ನು ಯಾರೂ ಗೆಲ್ಲಲಿಲ್ಲ. ವಾಲಿಗೆ ಕಪಿತ್ವವಿದ್ದುದರಿಂದ ಅವನನ್ನು ಗಿದ್ದಿದ್ದ. (ರಾವಣ ಬ್ರಹ್ಮನಲ್ಲಿ ವರವನ್ನು ಬೇಡುವಾಗ ಮನುಷ್ಯ ಮತ್ತು ಕಪಿಗಳನ್ನು ಉಪೇಕ್ಷೆ ಮಾಡಿದ್ದ).  ಕಾರ್ತವೀರ್ಯಾರ್ಜುನನು ವಿಷ್ಣುವಿನ ವರಬಲದಿಂದ ರಾವಣನನ್ನು ಗೆದ್ದಿದ್ದ.

ಕನ್ನಡ ಪದ್ಯರೂಪ: https://go-kula.blogspot.com/2018/07/8-230-234.html

Thursday, July 26, 2018

Mahabharata Tatparya Nirnaya Kannada 8.224-8.229


ಅಥೋ ಗಿರೇರಾನಯನಾತ್ ಪರಸ್ತಾದ್ ಯೇ ವಾನರಾ ರಾವಣಬಾಣಪೀಡಿತಾಃ ।
ತಾರಾಪಿತಾ ತಾನ್ ನಿರುಜಶ್ಚಕಾರ ಸುಷೇಣನಾಮಾ ಭಿಷಜಾಂ ವರಿಷ್ಠಃ                 ॥೮.೨೨೪॥

ಈ ಹಿಂದೆ,  ಹನುಮಂತನು ಗಂಧಮಾದನ ಪರ್ವತವನ್ನು ತಂದು, ಅದನ್ನು ಹಿಂದಕ್ಕೆ ಯಥಾಸ್ಥಾನದಲ್ಲಿಟ್ಟ ಮೇಲೆ ನಡೆದ ಯುದ್ಧದಲ್ಲಿ,  ರಾವಣನ ಬಾಣದಿಂದ ಪೀಡಿಸಲ್ಪಟ್ಟ(ಬಾಣದ ಪೆಟ್ಟಿನಿಂದ  ಅಸ್ವಸ್ಥರಾಗಿದ್ದ) ಕಪಿಗಳನ್ನು,  ವಾಲಿಯ ಹೆಂಡತಿ ತಾರಾಳ ತಂದೆಯಾದ,  ವೈದ್ಯರಲ್ಲೇ ಅಗ್ರಗಣ್ಯನಾದ, ಸುಷೇಣ ಎನ್ನುವ ವೈದ್ಯನು, ರಾಮಚಂದ್ರನ ಆಜ್ಞೆಯಂತೆ ಆರೋಗ್ಯವಂತರನ್ನಾಗಿ ಮಾಡಿದನು.  

ತದಾ ಮೃತಾನ್ ರಾಘವ ಆನಿನಾಯ ಯಮಕ್ಷಯಾದ್ ದೇವಗಣಾಂಶ್ಚ ಸರ್ವಶಃ ।
ಸಮನ್ವಜಾನಾತ್ ಪಿತರಂ ಚ ತತ್ರ ಸಮಾಗತಂ ಗನ್ತುಮಿಯೇಷ ಚಾಥ                   ॥೮.೨೨೫॥

ಗಾಯಗೊಂಡಿದ್ದ ಕಪಿಗಳಲ್ಲದೇ, ರಾವಣನ  ಬಾಣದಿಂದ ಸತ್ತಿದ್ದ ಎಲ್ಲಾ ಕಪಿಗಳನ್ನು ರಾಮಚಂದ್ರನು ಯಮನ ಮನೆಯಿಂದ ಬದುಕಿಸಿ ತಂದ.  ತದನಂತರ, ಬಂದಿದ್ದ ಸಮಸ್ತ ಬ್ರಹ್ಮಾದಿದೇವತೆಗಳನ್ನೂ,  ದೇವತೆಗಳೊಂದಿಗೆ ಕೂಡಿಕೊಂಡು ಮೃತರಾದ ಜೀವರೊಂದಿಗೆ ಬಂದಿದ್ದ ದಶರಥರಾಜನನ್ನೂ, ಅವರವರ ಸ್ಥಾನಕ್ಕೆ ತೆರಳಲು ಹೇಳಿ, ತಾನೂ ಕೂಡಾ ಅಯೋಧ್ಯಾ ಪಟ್ಟಣಕ್ಕೆ ಹಿಂತಿರುಗಲು ರಾಮಚಂದ್ರ ಬಯಸಿದ
[ದೇವತೆಗಳೊಂದಿಗೆ ಬಂದಿದ್ದ ದಶರಥ ಎಲ್ಲವನ್ನೂ ನೋಡಿ ಸಂತಸಗೊಂಡಿರುವ ವಿವರ ವಾಲ್ಮೀಕಿ ರಾಮಾಯಣದಲ್ಲಿ (ಯುದ್ಧಕಾಂಡ-೧೧೯) ವಿವರಿಸಿರುವುದನ್ನು ಕಾಣಬಹುದು]

ವಿಭೀಷಣೇನಾರ್ಪ್ಪಿತಮಾರುರೋಹ ಸ ಪುಷ್ಪಕಂ ತತ್ಸಹಿತಃ ಸವಾನರಃ ।
ಪುರೀಂ ಜಗಾಮಾsಶು ನಿಜಾಮಯೋಧ್ಯಾಂ ಪುರೋ ಹನೂಮನ್ತಮಥ ನ್ನ್ಯಯೋಜಯತ್     ॥೮.೨೨೬॥

ರಾಮಚಂದ್ರನು ವಿಭೀಷಣನಿಂದ ಸಮರ್ಪಿಸಲ್ಪಟ್ಟ  ಪುಷ್ಪಕವನ್ನು ಏರಿ,  ವಿಭೀಷಣ  ಮತ್ತು ಕಪಿಗಳೊಂದಿಗೆ ಸಹಿತನಾಗಿ, ಅಯೋಧ್ಯಾ  ಪಟ್ಟಣವನ್ನು ಕುರಿತು ತೆರಳಿದನು. ತನ್ನ ಆಗಮನವನ್ನು ಮುಂಚಿತವಾಗಿ ತಿಳಿಸಲು ಹನುಮಂತನನ್ನು ಮೊದಲೇ ಅಯೋಧ್ಯಾ ಪಟ್ಟಣಕ್ಕೆ  ಶ್ರೀರಾಮ ಕಳುಹಿಸಿಕೊಟ್ಟನು.

ದದರ್ಶ ಚಾಸೌ ಭರತಂ ಹುತಾಶನಂ ಪ್ರವೇಷ್ಟು ಕಾಮಂ ಜಗದೀಶ್ವರಸ್ಯ ।
ಅದರ್ಶನಾತ್ ತಂ ವಿನಿವಾರ್ಯ್ಯ ರಾಮಂ ಸಮಾಗತಂ ಚಾಸ್ಯ ಶಶಂಸ ಮಾರುತಿಃ ॥೮.೨೨೭॥

ಇತ್ತ ಅಯೋಧ್ಯಯಲ್ಲಿ ಶ್ರೀರಾಮಚಂದ್ರ ಕಾಣದಿರುವುದರಿಂದ(ಹಿಂತಿರುಗದೇ ಇದ್ದುದರಿಂದ) ಬೆಂಕಿಯನ್ನು ಪ್ರವೇಶಿಸಲು ಬಯಸುತ್ತಿರುವ ಭರತನನ್ನು ಕಂಡ ಹನುಮಂತ, ಅವನನ್ನು ತಡೆದು, ಶ್ರೀರಾಮನ ಆಗಮನದ ವಾರ್ತೆಯನ್ನು ತಿಳಿಸಿದನು.

ಶ್ರುತ್ವಾ ಪ್ರಮೋದೋರುಭರಃ ಸ ತೇನ ಸಹೈವ ಪೌರೈಃ ಸಹಿತಃ ಸಮಾತೃಕಃ ।
ಶತ್ರುಘ್ನಯುಕ್ತೋsಭಿಸಮೇತ್ಯ ರಾಘವಂ ನನಾಮ ಬಾಷ್ಪಾಕುಲಲೋಚನಾನನಃ ॥೮.೨೨೮ ॥

ಭರತನು ರಾಮಚಂದ್ರನ ಆಗಮನದ ವಿಷಯವನ್ನು ಹನುಮಂತನಿಂದ ಕೇಳಿ, ಉತ್ಕೃಷ್ಟ ಆನಂದವುಳ್ಳವನಾಗಿ, ಪ್ರಜೆಗಳಿಂದ, ತಾಯಿಯನ್ದಿರಿಂದ, ಶತ್ರುಘ್ನ ಮೊದಲಾದವರೊಂದಿಗೆ ಕೂಡಿಕೊಂಡು, ಶ್ರೀರಾಮನನ್ನು ಎದುರುಗೊಂಡು, ಆನಂದಬಾಷ್ಪಾದೊಂದಿಗೆ  ನಮಸ್ಕರಿಸಿದನು.

ಉತ್ಥಾಪ್ಯ ತಂ ರಘುಪತಿಃ ಸಸ್ವಜೇ ಪ್ರಣಯಾನ್ವಿತಃ ।
ಶತ್ರುಘ್ನಂ ಚ ತದನ್ಯೇಷು ಪ್ರತಿಪೇದೇ ಯಥಾವಯಃ ॥೮.೨೨೯॥

ರಾಮಚಂದ್ರನು ಕಾಲಿಗೆ ಬಿದ್ದ ಭರತನನ್ನು ಎತ್ತಿ, ಪ್ರೀತಿಯಿಂದ ಆಲಂಗಿಸಿದನು.. ಶತ್ರುಘ್ನನನ್ನೂ ಕೂಡಾ ಮೇಲೆತ್ತಿ ಆಲಂಗಿಸಿದನು. ಉಳಿದವರನ್ನೂ ಕೂಡಾ ಅವರ ವಯಸ್ಸಿಗನುಗುಣವಾಗಿ ರಾಮಚಂದ್ರ ಎದುರುಗೊಂಡನು( ಅಂದರೆ: ದೊಡ್ಡವರಿಗೆ ನಮಸ್ಕರಿಸಿದನು, ಚಿಕ್ಕವರಿಗೆ ಆಶೀರ್ವದಿಸಿದನು ಮತ್ತು ಸಮಾನರನ್ನು ಆಲಂಗಿಸಿದನು)

ಕನ್ನಡ ಪದ್ಯರೂಪ:  https://go-kula.blogspot.com/2018/07/8-224-229.html

Wednesday, July 25, 2018

Mahabharata Tatparya Nirnaya Kannada 8.218-8.223


ಇತೀರಿತೇ ತ್ವಬ್ಜಭವೇನ ಶೂಲೀ ಸಮಾಹ್ವಯದ್ ರಾಘವಮಾಹವಾಯ ।
ವರಂ ಮದೀಯಂ ತ್ವಗಣಯ್ಯ ರಕ್ಷೋ ಹತಂ ತ್ವಯಾ ತೇನ ರಣಾಯ ಮೇಹಿ ॥೮.೨೧೮ ॥

ಈ ರೀತಿಯಾಗಿ ಬ್ರಹ್ಮನಿಂದ ಹೇಳಲ್ಪಡುತ್ತಿರಲು,   ಸದಾಶಿವನು ರಾಮಚಂದ್ರನನ್ನು ಯುದ್ಧಕ್ಕೆ ಕರೆಯುತ್ತಾನೆ.  “ನನ್ನ ವರವನ್ನು ಲೆಕ್ಕಿಸದೇ ನೀನು ರಾವಣನನ್ನು ಕೊಂದೆ. ಅದರಿಂದ ಯುದ್ಧಕ್ಕಾಗಿ ಆಹ್ವಾನಿಸುತ್ತಿದ್ದೇನೆ. ನಾವಿಬ್ಬರು ಯುದ್ಧ ಮಾಡೋಣ” ಎನ್ನುತ್ತಾನೆ ಶಿವ!

ಇತೀರಿತೇsಸ್ತ್ವಿತ್ಯಭಿಧಾಯ ರಾಘವೋ ಧನುಃ ಪ್ರಗೃಹ್ಯಾsಶು ಶರಂ ಚ ಸನ್ದಧೇ ।
ವಿಕೃಷ್ಯಮಾಣೇ ಚಲಿತಾ ವಸುನ್ಧರಾ ಪಪಾತ ರುದ್ರೋsಪಿ ಧರಾಪ್ರಕಮ್ಪತಃ ॥೮.೨೧೯॥

ಈರೀತಿಯಾಗಿ ರುದ್ರನು ಹೇಳುತ್ತಿರಲು, ‘ಹಾಗೇ ಆಗಲಿ’ ಎಂದು ಹೇಳಿದ ಶ್ರೀರಾಮಚಂದ್ರನು, ಬಿಲ್ಲನ್ನು ಹಿಡಿದು ಬಾಣವನ್ನು ಹೂಡಿದನು. ಶ್ರೀರಾಮನು ತನ್ನ ಬಿಲ್ಲಿನ ನೇಣನ್ನು ಎಳೆಯುತ್ತಿರಲು  ಭೂಮಿಯೇ ಕಂಪಿಸಿತು. ಆ ಭೂಕಂಪನದಿಂದ  ರುದ್ರನೂ ಕೂಡಾ ಕೆಳಗೆ ಬಿದ್ದನು.

ಅಥೋತ್ಥಿತಶ್ಚಾsಸುರಭಾವವರ್ಜ್ಜಿತಃ ಕ್ಷಮಸ್ವ ದೇವೇತಿ ನನಾಮ ಪಾದಯೋಃ ।
ಉವಾಚ ಚ ತ್ವದ್ವಶಗೋsಸ್ಮಿ ಸರ್ವದಾ ಪ್ರಸೀದ ಮೇ ತ್ವದ್ವಿಷಯಂ ಮನಃ ಕುರು ॥೮.೨೨೦ ॥

ಬಿದ್ದ ರುದ್ರನು ಮೇಲೆದ್ದು, ತನ್ನ  ಅಸುರ ಭಾವವನ್ನು  ಕಳೆದುಕೊಂಡು,  ‘ದೇವಾ, ನನ್ನನ್ನು ರಕ್ಷಿಸು’  ಎಂದು ಶ್ರೀರಾಮನ ಪಾದಗಳಿಗೆರಗಿ ಹೀಗೆ ಹೇಳಿದನು: “ನಾನು ಸದಾ ನಿನ್ನ ವಶದಲ್ಲಿದ್ದೇನೆ. ನನಗೆ ಪ್ರಸನ್ನನಾಗು. ನನ್ನ ಮನಸ್ಸನ್ನು ನಿನ್ನಲ್ಲೇ ನೆಡುವಂತೆ ಮಾಡು” ಎಂದು.

ಅಥೇನ್ದ್ರಮುಖ್ಯಾಶ್ಚ ತಮೂಚಿರೇ ಸುರಾಸ್ತ್ವಯಾsವಿತಾಃ ಸ್ಮೋsದ್ಯ ನಿಶಾಚರಾದ್ ವಯಮ್ ।
ತಥೈವ ಸರ್ವಾಪದ ಏವ  ನಸ್ತ್ವಂ ಪ್ರಪಾಹಿ ಸರ್ವೇ ಭವದೀಯಕಾಃ ಸ್ಮ ॥೮.೨೨೧॥

ಶಿವನ ಪ್ರಾರ್ಥನೆಯ ನಂತರ ಇಂದ್ರನೇ ಪ್ರಧಾನವಾಗಿರುವ ದೇವತೆಗಳು ರಾಮನನ್ನು  ಕುರಿತು  ಹೀಗೆ ಹೇಳುತ್ತಾರೆ: “ನಿನ್ನಿಂದಾಗಿ ಇಂದು ನಾವು ಹೇಗೆ ರಾವಣನ ಹಿಂಸೆಯಿಂದ  ರಕ್ಷಿಸಲ್ಪಟ್ಟಿದ್ದೇವೆಯೋ ಹಾಗೇ, ಮುಂದೆಯೂ ಕೂಡಾ  ಎಲ್ಲಾ ಆಪತ್ತಿನಿಂದ ನೀನು ನಮ್ಮನ್ನು ರಕ್ಷಿಸು. ನಾವೆಲ್ಲರೂ ನಿನ್ನವರಾಗಿದ್ದೇವೆ (ನಿನ್ನ ಭಕ್ತರಾಗಿದ್ದೇವೆ).”

ಸೀತಾಕೃತಿಂ ತಾಮಥ ತತ್ರ ಚಾsಗತಾಂ ದಿವ್ಯಚ್ಛಲೇನ ಪ್ರಣಿಧಾಯ ಪಾವಕೇ ।
ಕೈಲಾಸತಸ್ತಾಂ ಪುನರೇವ ಚಾsಗತಾಂ ಸೀತಾಮಗೃಹ್ಣಾದ್ಧುತಭುಕ್ಸಮರ್ಪ್ಪಿತಾಮ್ ॥೮.೨೨೨॥

ತದನಂತರ, ಅಲ್ಲಿ ಬಂದಿರುವ, ರಾವಣ ಅಪಹರಿಸಿ ತಂದಿದ್ದ ಸೀತಾಕೃತಿಯನ್ನು, ಅಗ್ನಿದಿವ್ಯ ಎಂಬ ನೆಪದಿಂದ ಅಗ್ನಿಯಲ್ಲಿ ಪ್ರವೇಶ ಮಾಡಿಸಿ, ಕೈಲಾಸದಿಂದ ಅಗ್ನಿ ಕರೆತಂದಿರುವ ತಾಯಿ ಸೀತಾದೇವಿಯನ್ನು ಶ್ರೀರಾಮ ಸ್ವೀಕರಿಸುತ್ತಾನೆ.

ಜಾನನ್ ಗಿರೀಶಾಲಯಗಾಂ ಸ ಸೀತಾಂ ಸಮಗ್ರಹೀತ್ ಪಾವಕಸಂಪ್ರದತ್ತಾಮ್ ।
ಮುಮೋದ ಸಮ್ಪ್ರಾಪ್ಯ ಚ ತಾಂ ಸ ರಾಮಃ ಸಾ ಚೈವ ದೇವೀ ಭಗವನ್ತಮಾಪ್ಯ ॥೮.೨೨೩॥

ಕೈಲಾಸದಲ್ಲಿದ್ದ ಸೀತೆಯನ್ನು ತಿಳಿದಿದ್ದ ಶ್ರೀರಾಮಚಂದ್ರನು, ಅಗ್ನಿಯಿಂದ ಕೊಡಲ್ಪಟ್ಟ  ಸೀತಾದೇವಿಯನ್ನು ಸ್ವೀಕರಿಸುತ್ತಾನೆ. ಈರೀತಿ, ಸೀತೆಯನ್ನು ಲೋಕದ ದೃಷ್ಟಿಯಿಂದ ಹೊಂದಿದ ಶ್ರೀರಾಮನು ಸಂತಸಪಟ್ಟನು. ಸೀತಾದೇವಿಯೂ ಕೂಡಾ  ಭಗವಂತನನ್ನು ಹೊಂದಿ ಸಂತಸಪಟ್ಟಳು.
[ಬಾಹ್ಯವಾಗಿ ನೋಡಿದರೆ ಅದು ಅಗ್ನಿದಿವ್ಯ. ಸೀತೆಯ ಅಗ್ನಿಪರೀಕ್ಷೆ.  ಆದರೆ ಅಲ್ಲಿ ನಡೆದಿರುವುದು ಸೀತಾಕೃತಿಯಾ ಅಗ್ನಿ ಪ್ರವೇಶ ಮತ್ತು ಅಗ್ನಿ ಕೈಲಾಸದಿಂದ ಕರೆ ತಂದಿರುವ  ಮಾತೆ ಸೀತಾದೇವಿ ಶ್ರೀರಾಮನನ್ನು ಹೊಂದುವ ಲೀಲೆ. (ಲೋಕದ ದೃಷ್ಟಿಗಾಗಿ, ಎಂದೂ ವೀಯೋಗವಿಲ್ಲದ ಜಗದ್ಮಾತಾಪಿತರ ಸಮಾಗಮದ ನಟನಾ ನಿಯಮ)] 

ಕನ್ನಡ ಪದ್ಯರೂಪ: https://go-kula.blogspot.com/2018/07/8-218-223.html

Tuesday, July 24, 2018

Mahabharata Tatparya Nirnaya Kannada 8.212-8.217


ಅಥೈನಮಸ್ತೌತ್ ಪಿತರಂ ಕೃತಾಞ್ಜಲಿರ್ಗ್ಗುಣಾಭಿರಾಮಂ ಜಗತಃ ಪಿತಾಮಹಃ ।
ಜಿತಞ್ಜಿತಂ ತೇsಜಿತ ಲೋಕಭಾವನ ಪ್ರಪನ್ನಪಾಲಾಯ ನತಾಃ ಸ್ಮ ತೇ ವಯಮ್ ॥೮.೨೧೨॥

ತದನಂತರ ಜಗತ್ತಿನ ಮೂಲ ಸೆಲೆಯಾದ ಬ್ರಹ್ಮನು ತನ್ನ ತಂದೆಯಾದ, ಜ್ಞಾನಾನಂದ ಗುಣಪೂರ್ಣನಾದ ರಾಮಚಂದ್ರನನ್ನು ಕೈಮುಗಿದು ಸ್ತೋತ್ರ ಮಾಡುತ್ತಾನೆ.  'ನೀನು ಉತ್ಕೃಷ್ಟನಾಗಿದ್ದೀಯ. ಎಂದೂ ಸೋಲದವನು ನೀನು.  ಲೋಕದ ಅಸ್ತಿತ್ವಕ್ಕೆ ಕಾರಣನಾಗಿರುವ, ಶರಣಾಗತರನ್ನು ಪಾಲನೆ ಮಾಡುವ ನಿನಗೆ ನಾವೆಲ್ಲರೂ  ನಮಸ್ಕರಿಸಿದ್ದೇವೆ.

ತ್ವಮೇಕ ಈಶೋsಸ್ಯ ನಚಾsದಿರನ್ತಸ್ತವೇಡ್ಯ ಕಾಲೇನ ತಥೈವ ದೇಶತಃ ।
ಗುಣಾ ಹ್ಯಗಣ್ಯಾಸ್ತವ ತೇsಪ್ಯನನ್ತಾಃ ಪ್ರತ್ಯೇಕಶಶ್ಚಾsದಿವಿನಾಶವರ್ಜ್ಜಿತಾಃ ॥೮.೨೧೩॥

ನೀನೊಬ್ಬನೇ  ಈ ಜಗತ್ತಿನ ಒಡೆಯ. ನಿನಗೆ ಕಾಲದಿಂದಾಗಲಿ, ದೇಶದಿಂದಾಗಲಿ, ಉತ್ಪತ್ತಿ-ನಾಶವಿಲ್ಲ.  ನಿನ್ನ ಗುಣಗಳು ಎಣಿಸಲು ಅಸಾಧ್ಯವಾದವುಗಳು. ಆ ಒಂದೊಂದು ಗುಣಗಳೂ ಕೂಡಾ ಅನಂತವಾಗಿವೆ ಮತ್ತು  ಕೊನೆಮೊದಲಿಲ್ಲದವುಗಳಾಗಿವೆ.

ನಚೋದ್ಭವೋ ನೈವ ತಿರಸ್ಕೃತಿಸ್ತೇ ಕ್ವಚಿದ್ ಗುಣಾನಾಂ ಪರತಃ ಸ್ವತೋ ವಾ ।
ತ್ವಮೇಕ ಆದ್ಯಃ ಪರಮಃ ಸ್ವತನ್ತ್ರೋ ಭೃತ್ಯಾಸ್ತವಾಹಂ ಶಿವಪೂರ್ವಕಾಶ್ಚ ಯೇ ॥೮.೨೧೪॥

ಯಾವ ಕಾಲದಲ್ಲಿಯೂ ಕೂಡಾ ನಿನ್ನ ಯಾವ ಗುಣಗಳಿಗೆ ಹುಟ್ಟಾಗಲೀ ತಿರಸ್ಕಾರವಾಗಲೀ ಇಲ್ಲ.  ಅದು ಎಂದೂ ಕೂಡಾ  ತಾನಾಗಿ ತಾನೇ ಮುಚ್ಚಿ ಹೋಗುವುದಿಲ್ಲ.  ಆ ಗುಣಗಳನ್ನು ಬೇರೊಬ್ಬರು ಅಭಿವ್ಯಕ್ತವಾಗದಂತೆ ಮಾಡಲು ಸಾಧ್ಯವಿಲ್ಲ.  ಸ್ವತಂತ್ರನಾಗಿರುವ, ಉತ್ಕೃಷ್ಟನಾಗಿರುವ ನಿನ್ನ ಸೇವಕ ನಾನು. ಶಿವನೇ ಮೊದಲಾಗಿರುವ ಇತರ ದೇವತೆಗಳೂ ಕೂಡಾ ನಿನ್ನ ಅಧೀನರು.

ಯಥಾsರ್ಚ್ಚಿಷೋsಗ್ನೇಃ ಪವನಸ್ಯ ವೇಗಾ ಮರೀಚಯೋsರ್ಕ್ಕಸ್ಯ ನದೀಷು ಚಾsಪಃ ।
ಗಚ್ಛನ್ತಿ ಚಾsಯಾನ್ತಿ ಚ ಸನ್ತತಾಸ್ತ್ವತ್ ತದ್ವನ್ಮದಾದ್ಯಾಃ ಶಿವಪೂರ್ವಕಾಶ್ಚ ಯೇ ॥೮.೨೧೫॥

ಹೇಗೆ ಬೆಂಕಿಯ ಜ್ವಾಲೆ, ಗಾಳಿಯ ವೇಗ, ಸೂರ್ಯನ ಕಿರಣಗಳು, ನದಿಯ ನೀರು ಬರುತ್ತದೆ ಮತ್ತು ಹೋಗುತ್ತದೋ ಹಾಗೇ,  ನಾನು, ಶಿವ ಮೊದಲಾದ ಅಸಂಖ್ಯರು,  ಪ್ರಳಯ ಕಾಲದಲ್ಲಿ  ಲಯವನ್ನು ಹೊಂದುತ್ತೇವೆ ಹಾಗು ಸೃಷ್ಟಿಕಾಲದಲ್ಲಿ ಹುಟ್ಟಿ ಬರುತ್ತೇವೆ. 

ಯೇಯೇ ಚ ಮುಕ್ತಾಸ್ತ್ವಥ ಯೇ ಚ ಬದ್ಧಾಃ ಸರ್ವೇ ತವೇಶೇಶ ವಶೇ ಸದೈವ ।
ವಯಂ ಸದಾ ತ್ವದ್ಗುಣಪೂಗಮುಚ್ಚೈಃ ಸರ್ವೇ ವದನ್ತೋsಪಿ ನ ಪಾರಗಾಮಿನಃ ॥೮.೨೧೬॥

ಯಾರು-ಯಾರು ಮುಕ್ತರಾಗಿದ್ದಾರೋ, ಯಾರು-ಯಾರು ಸಂಸಾರ ಬದ್ಧರಾಗಿದ್ದಾರೋ, ಅವರೆಲ್ಲರೂ ಸ್ವಾಮಿಯಾದ  ನಿನ್ನ ಅಧೀನದಲ್ಲಿದ್ದಾರೆ. ನಾವೆಲ್ಲರೂ ನಿನ್ನ ಗುಣಗಳ ಸಮೂಹವನ್ನು ಚನ್ನಾಗಿ ಹೇಳಬಲ್ಲವರಾದರೂ ಕೂಡಾ. ಅವುಗಳ ಕೊನೆಯನ್ನು ನಾವು ತಿಳಿದಿಲ್ಲ.

ಕಿಮೇಶ ಈದೃಗ್ಗುಣಕಸ್ಯ ತೇ ಪ್ರಭೋ ರಕ್ಷೋವಧೋsಶೇಷಸುರಪ್ರಪಾಲನಮ್ ।
ಅನನ್ಯಸಾದ್ಯಂ ಹಿ ತಥಾsಪಿ ತದ್ ದ್ವಯಂ ಕೃತಂ ತ್ವಯಾ ತಸ್ಯ ನಮೋನಮಸ್ತೇ ॥೮.೨೧೭॥

ಈರೀತಿಯಾದ ಗುಣಗಳನ್ನು ಹೊಂದಿರುವ, ಸರ್ವಸಮರ್ಥನಾದ ನಿನಗೆ,  ರಾಕ್ಷಸ ಸಂಹಾರ, ದೇವತೆಗಳ ಪಾಲನೆ  ಆಶ್ಚರ್ಯ ಅಲ್ಲವೇ ಅಲ್ಲ.  ಅತ್ಯಂತ ಅನಾಯಾಸವಾಗಿ ನೀನೆಲ್ಲವನ್ನೂ ಮಾಡುತ್ತೀಯ. ಆದರೆ  ನಿನ್ನನ್ನು ಬಿಟ್ಟು ಇನ್ನಾರಿಗೂ ಈ ಕೆಲಸವನ್ನು ಮಾಡಲು ಸಾಧ್ಯವಿಲ್ಲ.  ಅಂತಹ ನಿನಗೆ ನಮೋನಮಸ್ತೇ'.

ಕನ್ನಡ ಪದ್ಯರೂಪ: https://go-kula.blogspot.com/2018/07/8-212-217.html

Monday, July 23, 2018

Mahabharata Tatparya Nirnaya Kannada 8.207-8.211


ಸಮ್ಮಾನಯನ್ ರಾಘವಮಾದಿಪೂರುಷಂ ನಿರ್ಯ್ಯಾತಯಾಮಾಸ ರಥಂ ಪುರನ್ದರಃ ।
ಸಹಾಯುಧುಂ ಮಾತಲಿಸಙ್ಗೃಹೀತಂ ಸಮಾರುರೋಹಾsಶು ಸ ಲಕ್ಷ್ಮಣಾಗ್ರಜಃ       ॥೮.೨೦೭॥

ಇಂದ್ರನು  ಆದಿಪೂರುಷನಾದ ರಾಮಚಂದ್ರನನ್ನು ಗೌರವಿಸುತ್ತಾ,  ತನ್ನ ಸಾರಥಿಯಾದ ಮಾತಲಿಯಿಂದ ನಡೆಸಲ್ಪಡುವ, ಆಯುಧಗಳಿಂದ ಕೂಡಿದ ರಥವನ್ನು ಲಂಕೆಗೆ ಕಳುಹಿಸಿದ. ಲಕ್ಷ್ಮಣನ ಅಣ್ಣನಾದ ರಾಮಚಂದ್ರನು ಆ ರಥವನ್ನು ಏರಿದ.

ಆರುಹ್ಯತಂ ರಥವರಂ ಜಗದೇಕನಾಥೋ ಲೋಕಾಭಯಾಯ ರಜನೀಚರನಾಥಮಾಶು ।
ಅಭ್ಯುದ್ಯಯೌ ದಶಶತಾಂಶುರಿವಾನ್ಧಕಾರಂ ಲೋಕಾನಶೇಷತ ಇಮಾನ್ ನಿಗಿರನ್ತಮುದ್ಯನ್   ॥೮.೨೦೮॥

ರಥವನ್ನೆರಿದ, ಜಗತ್ತಿಗೆ ಒಡೆಯನಾದ ರಾಮಚಂದ್ರನು, ಲೋಕದ ಭಯವನ್ನು ನೀಗುವುದಕ್ಕಾಗಿ, ಈ ಲೋಕವನ್ನು ಕಬಳಿಸಿ ಬಿಡುವ ಕತ್ತಲನ್ನು ಸೂರ್ಯ ಎದುರಿಸುವಂತೆ, ಸಮಸ್ತ ಲೋಕವನ್ನೆಲ್ಲಾ ನಾಶಮಾಡಲು ಯತ್ನಿಸುವ ರಾವಣನನ್ನು  ಎದುರುಗೊಂಡ.

ಆಯಾನ್ತಮೀಕ್ಷ್ಯ ರಜನೀಚರಲೋಕನಾಥಃ ಶಸ್ರ್ತಾಣ್ಯಥಾಸ್ತ್ರಸಹಿತಾನಿ  ಮುಮೋಚ ರಾಮೇ ।
ರಾಮಸ್ತು ತಾನಿ ವಿನಿಹತ್ಯ ನಿಜೈರ್ಮ್ಮಹಾಸ್ತ್ರೈಸ್ತಸ್ಯೋತ್ತಮಾಙ್ಗದಶಕಂ ಯುಗಪನ್ನ್ಯಕೃನ್ತತ್       ॥೮.೨೦೯॥

ಕತ್ತಲಿನಲ್ಲಿ ಓಡಾಡುವ ರಾಕ್ಷಸರ ಒಡೆಯನಾದ ರಾವಣನು, ತನ್ನೆದುರಿಗೆ ಬರುತ್ತಿರುವರಾಮಚಂದ್ರನನ್ನು ನೋಡಿ, ಅಸ್ತ್ರದಿಂದ ಕೂಡಿರುವ ಶಸ್ತ್ರವನ್ನು  ಅವನ ಮೇಲೆ  ಪ್ರಯೋಗಿಸಿದ. ರಾಮನಾದರೋ, ಆ ಶಸ್ತ್ರವನ್ನು  ತನ್ನ ಮಹಾಸ್ತ್ರಗಳಿಂದ ಕತ್ತರಿಸಿ, ರಾವಣನ ಹತ್ತು ತಲೆಗಳನ್ನು ಒಮ್ಮೆಲೇ ಕತ್ತರಿಸಿ ಬಿಟ್ಟ.

ಕೃತ್ತಾನಿ ತಾನಿ ಪುನರೇವ ಸಮುತ್ಥಿತಾನಿ ದೃಷ್ಟ್ವಾ ವರಾಚ್ಛತಧೃತೇರ್ಹೃದಯಂ ಬಿಭೇದ ।
ಬಾಣೇನ ವಜ್ರಸುದೃಶೇನ ಸ ಭಿನ್ನಹೃತ್ಕೋ ರಕ್ತಂ ವಮನ್ ನ್ಯಪತದಾಶು ಮಹಾವಿಮಾನಾತ್         ॥೮.೨೧೦॥

ಕತ್ತರಿಸಲ್ಪಟ್ಟ ತಲೆಗಳು,  ಶತಧೃತನ (ಬ್ರಹ್ಮನ) ವರವಿರುವುದರಿಂದ ಮತ್ತೆ ಮೊಳೆತವು.  ಆಗ ಶ್ರೀರಾಮನು ವಜ್ರಕ್ಕೆ ಸಮನಾದ ಬಾಣದಿಂದ ರಾವಣನ ಹೃದಯಕ್ಕೆ ಹೊಡೆದನು. ಈ ಹೊಡೆತದಿಂದ ರಾವಣನು ಎದೆಯೊಡೆದುಕೊಂಡು, ರಕ್ತವನ್ನು ವಾಂತಿ ಮಾಡುತ್ತಾ, ವಿಮಾನದಿಂದ ಕೆಳಗೆ ಬಿದ್ದನು.

ತಸ್ಮಿನ್ ಹತೇ ತ್ರಿಜಗತಾಂ ಪರಮಪ್ರತೀಪೇ ಬ್ರಹ್ಮಾ ಶಿವೇನ ಸಹಿತಃ ಸಹ ಲೋಕಪಾಲೈಃ ।
ಅಭ್ಯೇತ್ಯ ಪಾದಯುಗಳಂ ಜಗದೇಕಭರ್ತ್ತೂ ರಾಮಸ್ಯ ಭಕ್ತಿಭರಿತಃ ಶಿರಸಾ ನನಾಮ ॥೮.೨೧೧॥

ಮೂರು ಜಗತ್ತಿನ ಹಿಂಸಕನಾದ ಆ ರಾವಣನು  ಸಾಯುತ್ತಿರಲು, ಬ್ರಹ್ಮದೇವರು, ಶಿವ ಮತ್ತು ಇತರ ದೇವತೆಗಳಿಂದ ಕೂಡಿಕೊಂಡು, ಜಗತ್ತಿನ ಒಡೆಯನಾದ ರಾಮಚಂದ್ರನ ಪಾದಗಳನ್ನು ಹೊಂದಿ, ಭಕ್ತಿಯಿಂದ ಕೂಡಿ, ತಲೆಬಾಗಿ ನಮಸ್ಕರಿಸಿದರು.

ಕನ್ನಡ ಪದ್ಯರೂಪ:  https://go-kula.blogspot.com/2018/07/8-207-211.html

Saturday, July 21, 2018

Mahabharata Tatparya Nirnaya Kannada 8.202-8.206


ಪ್ರಾಕ್ಷಿಪತ್ ತಂ ಗಿರಿವರಂ ಲಙ್ಕಾಸ್ಥಃ ಸನ್ ಸ ಮಾರುತಿಃ ।
ಅರ್ದ್ಧಲಕ್ಷೇ ಯೋಜನಾನಾಂ ಯತ್ರಾಸೌ ಪೂರ್ವಸಂಸ್ಥಿತಃ                       ॥೮.೨೦೨॥

ತದ್ಬಾಹುವೇಗಾತ್ ಸಂಶ್ಲೇಷಂ ಪ್ರಾಪ ಪೂರ್ವವದೇವ ಸಃ ।
ಮೃತಾಶ್ಚ ಯೇ ಪ್ಲವಙ್ಗಾಸ್ತು ತದ್ಗನ್ಧಾತ್ ತೇsಪಿ ಜೀವಿತಾಃ               ॥೮.೨೦೩॥

ರಾಮಚಂದ್ರನ ಆಜ್ಞೆಯಂತೆ ಹೊತ್ತು ತಂದಿದ್ದ ಗಿರಿಯನ್ನು ಲಂಕೆಯಲ್ಲಿ ಇದ್ದುಕೊಂಡೇ ಹಿಂದಕ್ಕೆ ಎಸೆದ ಹನುಮಂತ,  ಅದು ಮೊದಲಿನಂತೆ ಯೋಜನಗಳ ಅರ್ದಲಕ್ಷದೂರದಲ್ಲಿರುವ ಸ್ವಸ್ಥಾನದಲ್ಲಿ, ಕಿತ್ತ ಗುರುತೇ ಇಲ್ಲದಂತೆ ಸ್ಥಿತವಾಗುವಂತೆ ಮಾಡಿದ. ಹನುಮಂತನ  ಬಾಹುವೇಗದಿಂದಾಗಿ  ಆ ಪರ್ವತ  ಮೊದಲಿದ್ದ ಸ್ಥಾನದಲ್ಲಿ ಮತ್ತೆ ಆಂಟಿಕೊಂಡಿತು. ಇತ್ತ, ಔಷಧಯುಕ್ತ ಪರ್ವತದ ಗಾಳಿಯಿಂದಾಗಿ ಸತ್ತ ಕಪಿಗಳೆಲ್ಲರೂ ಕೂಡಾ ಮರು ಜೀವ ಪಡೆದರು.

[ಕೇವಲ ಕಪಿಗಳಷ್ಟೇ ಏಕೆ ಮರುಜೀವ ಹೊಂದಿದರು ? ಏಕೆ ರಾಕ್ಷಸರ ಮೇಲೆ ಈ ಗಾಳಿ ಪ್ರಭಾವ ಬೀರಲಿಲ್ಲಾ ಎನ್ನುವುದನ್ನು  ಆಚಾರ್ಯರು  ಮುಂದಿನ ಶ್ಲೋಕದಲ್ಲಿ ತಿಳಿಸುತ್ತಾರೆ:]

ರಾಮಾಜ್ಞಯಾ ಹಿ ರಕ್ಷಾಂಸಿ ಹರಯೋsಬ್ಧಾವವಾಕ್ಷಿಪನ್ ।
ನೋಜ್ಜೀವಿತಾಸ್ತತಸ್ತೇ ತು ವಾನರಾ ನಿರುಜೋsಭವನ್                       ॥೮.೨೦೪॥

ರಾಮಚಂದ್ರನ ಆಜ್ಞೆಯಂತೆ, ಪ್ರತೀ ಯುದ್ಧದ ನಂತರ ಕಪಿಗಳೆಲ್ಲರೂ ಕೂಡಾ, ರಾಕ್ಷಸರ ಶವವನ್ನು ಸಮುದ್ರಕ್ಕೆ ಎಸೆಯುತ್ತಿದ್ದರು. ಹೀಗಾಗಿ ಸತ್ತ ರಾಕ್ಷಸರು ಮರಳಿ ಬದುಕಲಿಲ್ಲಾ. ಆದರೆ ವಾನರರು ಬದುಕನ್ನು ಪಡೆದರು ಮತ್ತು ರೋಗವಿಲ್ಲದವರಾದರು.
[ವಾಲ್ಮೀಕಿರಾಮಾಯಣದಲ್ಲೂ ಕೂಡಾ(ಯುದ್ಧಕಾಂಡ ೭೪.೭೫-೭೬) ಕಪಿಗಳು ರಾಕ್ಷಸರ ದೇಹವನ್ನು ಸಮುದ್ರಕ್ಕೆ ಎಸೆಯುತ್ತಿದ್ದ ಪ್ರಸಂಗದ ವಿವರಣೆಯನ್ನು ಈ ರೀತಿ ವರ್ಣಿಸಿರುವುದನ್ನು ನಾವು  ಕಾಣಬಹುದು : ಯದಾಪ್ರಭೃತ್ತಿ ಲಙ್ಕಾಯಾಂ ಯುದ್ಧ್ಯನ್ತೇ ಕಪಿರಾಕ್ಷಸಾಃ । ತದಾಪ್ರಭೃತಿ ಮಾನಾರ್ಥಮಾಜ್ಞಯಾ ರಾಘವಸ್ಯ ಚ । ಏ  ಹನ್ಯಂತೇ ರಣೇ ತತ್ರ ರಾಕ್ಷಸಾಃ  ಕಪಿಕುಙ್ಜರೈಃ । ಹತಾಹತಾಸ್ತು ಕ್ಷಿಪ್ಯಂತೇ ಸರ್ವ ಏವ ತು ಸಾಗರೇ ॥
ಇಂದು ಮುದ್ರಣವಾಗಿರುವ ವಾಲ್ಮೀಕಿ ರಾಮಾಯಣದಲ್ಲಿ:  ‘ತದಾಪ್ರಭೃತಿ ಮಾನಾರ್ಥಮಾಜ್ಞಯಾ ರಾವಣಸ್ಯ ಚ’  ಎನ್ನುವ ತಪ್ಪು ಪಾಠ  ಕಾಣಸಿಗುತ್ತದೆ. ಆದರೆ ಆಚಾರ್ಯರು ನೀಡಿರುವ ನಿರ್ಣಯದಿಂದ ನಮಗೆ ಸ್ಪಷ್ಟವಾದ ವಿವರ ತಿಳಿಯುತ್ತದೆ]

ಛಿನ್ನಪ್ರರೋಹಿಣಶ್ಚೈವ ವಿಶಲ್ಯಾಃ ಪೂರ್ವವರ್ಣ್ಣಿನಃ ।
ಔಷಧೀನಾಂ ಪ್ರಭಾವೇನ ಸರ್ವೇsಪಿ ಹರಯೋsಭವನ್                        ॥೮.೨೦೫॥

ದಿವ್ಯೌಷಧದ ಪ್ರಭಾವದಿಂದ ಎಲ್ಲರ ಮುರಿದ ಅಂಗಗಳು ಮತ್ತೆ  ಬೆಳೆದವು. ದೇಹದ  ಒಳಗೆ ಅಡಗಿದ  ಬಾಣ ಕೀಳಲ್ಪಟ್ಟು  ಗಾಯದ ಕಲೆಯೂ ಇಲ್ಲದಂತೆ ಹಿಂದಿನ ಬಣ್ಣ ಬಂದಿತು. ಹೀಗೆ,  ಎಲ್ಲಾ ತರಹದ ಆರೋಗ್ಯವನ್ನು ಕಪಿಗಳು ಪಡೆದರು.

ಅಥಾsಸಸಾದೋತ್ತಮಪೂರುಷಂ ಪ್ರಭುಂ ವಿಮಾನಗೋ ರಾವಣ ಆಯುಧೌಘಾನ್ ।
ಪ್ರವರ್ಷಮಾಣೋ ರಘುವಂಶನಾಥಂ ತಮಾತ್ತಧನ್ವಾsಭಿಯಯೌ ಚ ರಾಮಃ         ॥೮.೨೦೬॥

ಹೀಗೆ ಎಲ್ಲರೂ ಚೇತರಿಸಿಕೊಂಡ ನಂತರ, ವಿಮಾನದಲ್ಲಿ ನಿಂತು  ಪುರುಷಶ್ರೇಷ್ಠನಾದ ರಾಮಚಂದ್ರನ ಮೇಲೆ ಬಾಣ ಮೊದಲಾದವುಗಳನ್ನು ಎಸೆಯುತ್ತಾ ಬಂದ ರಾವಣನಿಗೆ, ಬಿಲ್ಲನ್ನು ಹಿಡಿದ ರಾಮಚಂದ್ರ ಎದುರಾದ.

ಕನ್ನಡ ಪದ್ಯರೂಪ: https://go-kula.blogspot.com/2018/07/8-202-206.html