ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Wednesday, September 26, 2018

Mahabharata Tatparya Nirnaya Kannada 10.83-10.88


ದೇವಮೀಮಾಂಸಿಕಾದ್ಯನ್ತಂ ಕೃತ್ವಾ ಪೈಲಮಥಾsದಿಶತ್
ಶೇಷಂ ಚ ಮದ್ಧ್ಯಕರಣೇ ಪುರಾಣಾನ್ಯಥ ಚಾಕರೋತ್        ೧೦.೮೩

ಆನಂತರ ವೇದವ್ಯಾಸರು ದೈವೀ ಮೀಮಾಂಸದ ಆದಿಭಾಗವನ್ನೂ , ಅಂತ್ಯಭಾಗವನ್ನೂ ತಾನೇ ರಚಿಸಿ,  ಪೈಲರಿಗೆ^ ಉಳಿದ ಮಧ್ಯಭಾಗವನ್ನು ರಚಿಸಲು  ಆಜ್ಞೆ ಮಾಡಿದರು. ನಂತರ ಪುರಾಣಗಳನ್ನು ತಾನೇ ರಚಿಸಿದರು.
[^ಇಲ್ಲಿ ಪೈಲರಿಗೆ ವ್ಯಾಸರು ಆಜ್ಞೆ ಮಾಡಿದರು ಎಂದರೆ: ಪೈಲ ಮತ್ತು ಅವರೊಳಗಿರುವ ಶೇಷ ಇಬ್ಬರಿಗೂ  ದೈವೀ ಮೀಮಾಂಸವನ್ನು ಪೂರ್ಣಗೊಳಿಸಲು ವ್ಯಾಸರು ಆಜ್ಞೆ ಮಾಡಿದರು ಎಂದರ್ಥ.
ಇಂದು ನಮಗೆ ದೈವೀ ಮೀಮಾಂಸ ಲಭ್ಯವಿಲ್ಲ.  ದೈವೀ ಮೀಮಾಂಸದ ಕೊನೆಯಲ್ಲಿ ‘ವಿಷ್ಣುರಾಹಹೀ’ ಎನ್ನುವ ಸೂತ್ರವಿರುವುದರ ಕುರಿತು ಮಧ್ವಾಚಾರ್ಯರು ತಿಳಿಸುತ್ತಾರೆ.  ಈ ಸೂತ್ರವನ್ನು ಪ್ರಮಾಣವಾಗಿ ಬಳಸಿ  ಬ್ರಹ್ಮಜಿಜ್ಞಾಸ ಎಂದರೆ ನಾರಾಯಣ ಜಿಜ್ಞಾಸ ಎಂದು ಆಚಾರ್ಯರು ಹೇಳಿರುವುದು ನಮಗೆ ತಿಳಿಯುತ್ತದೆ]

ಶೈವಾನ್ ಪಾಶುಪತಾಚ್ಚಕ್ರೇ ಸಂಶಯಾರ್ತ್ಥಂ ಸುರದ್ವಿಷಾಮ್
ವೈಷ್ಣವಾನ್ ಪಞ್ಚರಾತ್ರಾಚ್ಚ ಯಥಾರ್ತ್ಥಜ್ಞಾನಸಿದ್ಧಯೇ          ೧೦.೮೪

ದೈತ್ಯರ ಸಂಶಯಕ್ಕಾಗಿಯೇ(ಮೋಹಕ್ಕಾಗಿಯೇ) ವ್ಯಾಸರು ಪಾಶುಪತಾಗಮನವನ್ನು ಆಶ್ರಯಿಸಿ, ಶೈವಾಂಶಗಳನ್ನೊಳಗೊಂಡ ಪುರಾಣಗಳನ್ನೂ ಕೂಡಾ ರಚಿಸಿದರು.
ಯಥಾರ್ತ್ಥಜ್ಞಾನವನ್ನು ತಿಳಿಸುವುದಕ್ಕಾಗಿ ಪಂಚರಾತ್ರಾಗಮನವನ್ನು ಸಂಗ್ರಹ ಮಾಡಿ, ವೈಷ್ಣವ ಪುರಾಣಗಳನ್ನೂ ವ್ಯಾಸರು ರಚಿಸಿದರು.

ಬ್ರಾಹ್ಮಾಂಶ್ಚ ವೇದತಶ್ಚಕ್ರೇ ಪುರಾಣಗ್ರನ್ಥಸಙ್ಗ್ರಹಾನ್
ಏವಂ ಜ್ಞಾನಂ ಪುನಃ ಪ್ರಾಪುರ್ದ್ದೇವಾಶ್ಚ ಋಷಯಸ್ತಥಾ              ೧೦.೮೫

ಸನತ್ಕುಮಾರಪ್ರಮುಖಾ ಯೋಗಿನೋ ಮಾನುಷಾಸ್ತಥಾ
ಕೃಷ್ಣ ದ್ವೈಪಾಯನಾತ್ ಪ್ರಾಪ್ಯ ಜ್ಞಾನಂ ತೇ ಮುಮುದುಃ ಸುರಾಃ ೧೦.೮೬

(ದುರ್ಜನರ ಮೋಹಕ್ಕಾಗಿಯೇ) ಬ್ರಹ್ಮನನ್ನೇ ಪ್ರತಿಪಾದನೆ ಮಾಡುವ ಪುರಾಣಗಳನ್ನು, ವೇದದ ಅಪಾತವಾದ ಅರ್ಥವನ್ನು  (verbal meaning) ಆದರಿಸಿ  ಪುರಾಣ ಗ್ರಂಥ ಸಂಗ್ರಹಗಳನ್ನೂ  ವ್ಯಾಸರು ರಚಿಸಿದರು.
ಒಟ್ಟಿನಲ್ಲಿ, ವ್ಯಾಸಾವತಾರದಿಂದ  ದೇವತೆಗಳು, ಋಷಿಗಳು, ಮೊದಲಾದವರೆಲ್ಲರೂ  ಜ್ಞಾನವನ್ನು ಹೊಂದುವಂತಾಯಿತು. ಸನತ್ಕುಮಾರ ಮೊದಲಾದ ಯೋಗಿಗಳೂ, ಮನುಷ್ಯರೂ, ಕೃಷ್ಣದ್ವೈಪಾಯನರಿಂದ ಜ್ಞಾನವನ್ನು ಪಡೆದು ಸಂತೋಷಪಟ್ಟರು.

ಸಮಸ್ತವಿಜ್ಞಾನಗಭಸ್ತಿಚಕ್ರಂ ವಿತಾಯವಿಜ್ಞಾನಮಹಾದಿವಾಕರಃ
ನಿಪೀಯ ಚಾಜ್ಞಾನತಮೋ ಜಗತ್ತತಂ ಪ್ರಭಾಸತೇ ಭಾನುರಿವಾವಭಾಸಯನ್   ೧೦.೮೭

ಜ್ಞಾನದಲ್ಲಿ ಸೂರ್ಯನಂತಿರುವ ವ್ಯಾಸರು, ಜ್ಞಾನವೆಂಬ ಕಿರಣಗಳ ಸಮೂಹವನ್ನ ಎಲ್ಲೆಡೆ ಹರಡಿ, ಅಜ್ಞಾನವೆಂಬ ಕತ್ತಲನ್ನು ಕುಡಿದು, ಈ ಜಗತ್ತನ್ನು  ಬೆಳಗಿದರು.

ಚತುರ್ಮ್ಮುಖೇಶಾನಸುರೇನ್ದ್ರಪೂರ್ವಕೈಃ ಸದಾ ಸುರೈಃ ಸೇವಿತಪಾದಪಲ್ಲವಃ
ಪ್ರಕಾಶಯಂಸ್ತೇಷು ಸದಾತ್ಮಗುಹ್ಯಂ ಮುಮೋದ ಮೇರೌ ಚ ತಥಾ ಬದರ್ಯ್ಯಾಮ್ ೧೦.೮೮

ಚತುರ್ಮುಖ, ರುದ್ರ ಮೊದಲಾದ ಎಲ್ಲಾ ದೇವತೆಗಳಿಂದ ಸೇವಿತವಾಗಿರುವ ಪಾದ ಪಲ್ಲವವುಳ್ಳವರಾದ  (ಸೇವಿಸಲ್ಪಟ್ಟ ಚಿಗುರೆಲೆಯಂತೆ ಇರುವ ಪಾದ ಕಮಲವುಳ್ಳವರಾದ ) ವೇದವ್ಯಾಸರು ಸಮೀಚೀನವಾದ ಗುಣಾದಿ ರಹಸ್ಯವನ್ನು ಪ್ರಕಟಿಸುತ್ತಾ, ಮೇರುವಿನಲ್ಲಿಯೂ ಬದರಿಯಲ್ಲಿಯೂ ಕ್ರೀಡಿಸಿದರು.

ಇತಿ ಶ್ರೀಮದಾನನ್ದತೀರ್ತ್ಥಭಗವತ್ಪಾದವಿರಚಿತೇ ಶ್ರೀಮಹಾಭಾರತತಾತ್ಪರ್ಯ್ಯನಿರ್ಣ್ಣಯೇ ವ್ಯಾಸಾವತಾರಾನುವರ್ಣ್ಣನಂ ನಾಮ ದಶಮೋsಧ್ಯಾಯಃ



ಶ್ರೀಕೃಷ್ಣಾರ್ಪಣಮಸ್ತು

Tuesday, September 25, 2018

Mahabharata Tatparya Nirnaya Kannada 10.74-10.82


ಶೇಷೋsಥ ಪೈಲಂ ಮುನಿಮಾವಿಶತ್ ತದಾ ವೀಶಃ ಸುಮನ್ತುಮಪಿ ವಾರುಣಿಂ ಮುನಿಮ್
ಬ್ರಹ್ಮಾsವಿಶತ್ ತಮುತ ವೈಶಮ್ಪಾಯನಂ ಶಕ್ರಶ್ಚ ಜೈಮಿನಿಮಥಾsವಿಶದ್ ವಿಭುಃ ೧೦.೭೪

ಕೃಷ್ಣಸ್ಯ ಪಾದಪರಿಸೇವನೋತ್ಸುಕಾಃ ಸುರೇಶ್ವರಾ ವಿವಿಶುರಾಶು ತಾನ್ ಮುನೀನ್
ಸಮಸ್ತವಿದ್ಯಾಃ ಪ್ರತಿಪಾದ್ಯ ತೇಷ್ವಸೌ ಪ್ರವರ್ತ್ತಕಾಂಸ್ತಾನ್ ವಿದಧೇ ಹರಿಃ ಪುನಃ      ೧೦.೭೫

ತದನಂತರ, ವೇದವ್ಯಾಸರಿಂದ ಉಪದೇಶ ಪಡೆಯಲೆಂದು ಶೇಷನು ಪೈಲ ಮುನಿಯನ್ನು ಪ್ರವೇಶ ಮಾಡಿದನು. ಹಾಗೇ, ಗರುಡನು ವರುಣನ ಮಗನಾಗಿರುವ ಸುಮಂತು ಎನ್ನುವ ಮುನಿಯನ್ನು ಪ್ರವೇಶಿಸಿದನು. ಬ್ರಹ್ಮದೇವರೂ ಕೂಡಾ ಇನ್ನೊಂದು ರೂಪದಿಂದ ವೈಶಂಪಾಯರನ್ನು ಪ್ರವೇಶ ಮಾಡಿದರು. ಇಂದ್ರನು ಜೈಮಿನಿಯನ್ನು ಪ್ರವೇಶಿಸಿದನು.
ಈ ರೀತಿ ವೇದವ್ಯಾಸರ ಪಾದಪರಿಸೇವನೆಯಲ್ಲಿ ಉತ್ಸುಕರಾಗಿರುವ ದೇವತಾ ಪ್ರಮುಖರು ಶೀಘ್ರದಲ್ಲಿ   ಆ ಎಲ್ಲಾ ಮುನಿಗಳನ್ನು ಪ್ರವೇಶಿಸಿ ನಿಂತರು. ವೇದವ್ಯಾಸರು ಅವರಲ್ಲಿ (ಮುನಿಗಳು ಮತ್ತು ಅವರೊಳಗೆ ಪ್ರವೇಶಿಸಿರುವ ದೇವತೆಗಳಲ್ಲಿ) ಎಲ್ಲಾ ವಿದ್ಯೆಗಳನ್ನಿಟ್ಟು, ಲೋಕದಲ್ಲಿ ಅವರನ್ನು  ಜ್ಞಾನಪ್ರವರ್ತಕರನ್ನಾಗಿ ನಿಯಮಿಸಿದರು.

ಋಚಾಂ ಪ್ರವರ್ತ್ತಕಂ ಪೈಲಂ ಯಜುಷಾಂ ಚ ಪ್ರವರ್ತ್ತಕಮ್
ವೈಶಮ್ಪಾಯನಮೇವೈಕಂ ದ್ವಿತೀಯಂ ಸೂರ್ಯ್ಯಮೇವ ಚ         ೧೦.೭೬

ವೇದವ್ಯಾಸರು ಪೈಲ ಮುನಿಯನ್ನು ಋಗ್ವೇದ ಪ್ರವರ್ತಕರನ್ನಾಗಿ ನಿಯಮಿಸಿದರು. ವೈಶಮ್ಪಾಯನರು  ಕೃಷ್ಣ ಯಜುರ್ವೇದದ ಪ್ರವರ್ತಕರಾದರು. ಶುಕ್ಲ ಯಜುರ್ವೇದ ಸೂರ್ಯನ ಮೂಲಕ (ಯಾಜ್ಞವಲ್ಕ್ಯರಿಂದ) ಜಗತ್ತಿನಲ್ಲಿ ಪ್ರಚಲಿತಕ್ಕೆ ಬಂತು. [ಹೀಗಾಗಿ ಯಜುರ್ವೇದಕ್ಕೆ ಇಬ್ಬರು ಪ್ರವರ್ತಕರು. ಒಬ್ಬ ಸೂರ್ಯ , ಇನ್ನೊಬ್ಬ ವೈಶಂಪಾಯನ].

ಚಕ್ರೇsಥ ಜೈಮಿನಿಂ ಸಾಮ್ನಾಮಥರ್ವಾಙ್ಗಿರಸಾಮಪಿ
ಸುಮನ್ತುಂ ಭಾರತಸ್ಯಾಪಿ ವೈಶಮ್ಪಾಯನಮಾದಿಶತ್      ೧೦.೭೭

ಪ್ರವರ್ತ್ತನೇ ಮಾನುಷೇಷು ಗನ್ಧರ್ವಾದಿಷು ಚಾsತ್ಮಜಮ್
ನಾರದಂ ಪಾಠಯಿತ್ವಾ ಚ ದೇವಲೋಕಪ್ರವೃತ್ತಯೇ         ೧೦.೭೮

ತದನಂತರ, ವೇದವ್ಯಾಸರು ಜೈಮಿನಿ ಋಷಿಗಳನ್ನು ಸಾಮವೇದಕ್ಕೆ ಪ್ರವರ್ತಕರನ್ನಾಗಿ ನಿಯಮಿಸಿದರು. ಅಥರ್ವ ವೇದಕ್ಕೆ ಸುಮಂತುವನ್ನು ನಿಯಮಿಸಿದ ವ್ಯಾಸರು, ಮನುಷ್ಯಲೋಕದಲ್ಲಿ ಮಹಾಭಾರತದ ಜ್ಞಾನಪ್ರಸಾರಕ್ಕಾಗಿ  ವೈಶಮ್ಪಾಯನರಿಗೆ ಆದೇಶವನ್ನು ನೀಡಿದರು.  ಗಂಧರ್ವರಲ್ಲಿ ಭಾರತ ಜ್ಞಾನವನ್ನು ಹರಡಲು ಶುಕಾಚಾರ್ಯರಿಗೆ ಆದೇಶ ನೀಡಿ,  ನಾರದರನ್ನು  ದೇವಲೋಕದಲ್ಲಿ ಮಹಾಭಾರತದ ಜ್ಞಾನ ಪ್ರಸಾರಕ್ಕಾಗಿ  ವ್ಯಾಸರು  ನಿಯಮಿಸಿದರು.

ಆದಿಶತ್ ಸಸೃಜೋ ಸೋsಥ ರೋಮಾಞ್ಚಾದ್ ರೋಮಹರ್ಷಣಮ್
ತಂ ಭಾರತಪುರಾಣಾನಾಂ ಮಾಹಾರಾಮಾಯಣಸ್ಯ ಚ       ೧೦.೭೯

ಪಞ್ಚರಾತ್ರಸ್ಯ ಕೃತ್ಸ್ನಸ್ಯ ಪ್ರವೃತ್ತ್ಯರ್ತ್ಥಮಥಾsದಿಶತ್
ತಮಾವಿಶತ್ ಕಾಮದೇವಃ ಕೃಷ್ಣಸೇವಾಸಮುತ್ಸುಕಃ        ೧೦.೮೦

ಸ ತಸ್ಮೈ ಜ್ಞಾನಮಖಿಲಂ ದದೌ ದ್ವೈಪಾಯನಃ ಪ್ರಭುಃ
ಸನತ್ಕುಮಾರಪ್ರಮುಖಾಂಶ್ಚಕ್ರೇ ಯೋಗಪ್ರವರ್ತ್ತಕಾನ್    ೧೦.೮೧

ವೇದವ್ಯಾಸರು ತಮ್ಮ ರೋಮಾಂಚನದ ಅಭಿವ್ಯಕ್ತ ಎಂಬಂತೆ ತಮ್ಮ ರೋಮಕೂಪದಲ್ಲಿ ರೋಮಹರ್ಷಣ ಎನ್ನುವ ಮುನಿಗಳನ್ನು  ಸೃಷ್ಟಿ ಮಾಡಿದರು. ಭಾರತ, ಪುರಾಣ, ಮಹಾರಾಮಾಯಣ, ಸಮಗ್ರ ಪಂಚರಾತ್ರ , ಇವುಗಳ ಪ್ರವೃತ್ತ್ಯರ್ತ್ಥವಾಗಿ  ರೋಮಹರ್ಷಣರಿಗೆ  ವ್ಯಾಸರು ಆಜ್ಞೆ ಮಾಡಿದರು. ವೇದವ್ಯಾಸರ ಸೇವೆಯಲ್ಲಿ ಉತ್ಸಹವುಳ್ಳ ಮನ್ಮಥ, ರೋಮಹರ್ಷಣನನ್ನು  ಪ್ರವೇಶ ಮಾಡಿದನು.
ದ್ವೈಪಾಯನರು ಆ ಕಾಮದೇವನಿಂದ ಕೂಡಿರುವ ರೋಮಹರ್ಷಣನಿಗೆ ಎಲ್ಲಾ ಜ್ಞಾನವನ್ನು ನೀಡಿದರು. ಸನತ್ಕುಮಾರ ಮೊದಲಾದವರನ್ನು ವ್ಯಾಸರು ಯೋಗಪ್ರವರ್ತಕರನ್ನಾಗಿ  ನಿಯಮಿಸಿದರು.

ಭೃಗ್ವಾದೀನ್ ಕರ್ಮ್ಮಯೋಗಸ್ಯ ಜ್ಞಾನಂ ದತ್ವಾsಮಲಂ ಶುಭಮ್
ಜೈಮಿನಿಂ ಕರ್ಮ್ಮಮೀಮಾಂಸಾಕರ್ತ್ತಾರಮಕರೋತ್ ಪ್ರಭುಃ         ೧೦.೮೨

ಭೃಗು ಮೊದಲಾದವರಿಗೆ ಕರ್ಮಯೋಗದ ಜ್ಞಾನವನ್ನು ಕೊಟ್ಟ ವ್ಯಾಸರು, ಆ ಕರ್ಮಯೋಗವನ್ನು ಪ್ರವರ್ತನೆ ಮಾಡುವಂತೆ ಅವರಿಗೆ ಆದೇಶ ನೀಡಿದರು. ಜೈಮಿನಿಗಳು ವೇದವ್ಯಾಸರ ಆಜ್ಞೆಯಿಂದ ಕರ್ಮಮೀಮಾಂಸವನ್ನು ರಚಿಸಿದರು. [ಅಥಾತೋ ಧರ್ಮ ಜಿಜ್ಞಾಸಾ.. ಎಂದು ಇಂದು ನಾವೇನು ಓದುತ್ತಿದ್ದೇವೆ, ಈ ಸೂತ್ರಗಳನ್ನು ರಚಿಸಿದ್ದು ಜೈಮಿನಿಗಳು.]

Saturday, September 22, 2018

Mahabharata Tatparya Nirnaya Kannada 10.69-10.73


ಅಥಾಸ್ಯ ಪುತ್ರತ್ವಮವಾಪ್ತುಮಿಚ್ಛಂಶ್ಚಚಾರ ರುದ್ರಃ ಸುತಪಸ್ತದೀಯಮ್
ದದೌ ಚ ತಸ್ಮೈ ಭಗವಾನ್ ವರಂ ತಂ ಸ್ವಯಂ ಚ ತಪ್ತ್ವೇವ ತಪೋ ವಿಮೋಹಯನ್           ೧೦.೬೯

ತದನಂತರ, ವೇದವ್ಯಾಸರ ಮಗನಾಗಿ ಹುಟ್ಟಬೇಕು ಎನ್ನುವ ಇಚ್ಛೆಯಿಂದ, ರುದ್ರದೇವರು ವೇದವ್ಯಾಸರ ಕುರಿತಾಗಿ ಉತ್ಕೃಷ್ಟವಾದ  ತಪಸ್ಸನ್ನು ಮಾಡಿದರು. ಈ ರೀತಿ ತಪಸ್ಸನ್ನು ಮಾಡಿದ ರುದ್ರದೇವರಿಗೆ ತನ್ನ ಮಗನಾಗಿ ಅವತರಿಸುವಂತೆ ವೇದವ್ಯಾಸರು ವರವನ್ನು ಅನುಗ್ರಹಿಸಿದರು.  ಆದರೆ,  ದುಷ್ಟ ಜನರ ಮೋಹನಾರ್ಥನವಾಗಿ ತಾನೇ ತಪಸ್ಸು ಮಾಡಿ ರುದ್ರನನ್ನು ಮಗನಾಗಿ ಪಡೆದಂತೆ ತೋರಿದರು.
[ಮೊದಲು ರುದ್ರ ದೇವರು ತಪಸ್ಸನ್ನು ಮಾಡಿ ಭಗವಂತನ ಮಗನಾಗಿ ಹುಟ್ಟುವ ವರವನ್ನು ಪಡೆದರು. ಆದರೆ, ಆ ನಂತರ, ದುರ್ಜನರ ಕಣ್ಣಿಗೆ ಕಾಣುವಂತೆ, ರುದ್ರ ಮಗನಾಗಿ ಬರಲಿ ಎಂದು ವೇದವ್ಯಾಸರು ತಪಸ್ಸು ಮಾಡಿದರು! ವೇದವ್ಯಾಸರು ರುದ್ರನನ್ನು ಮಗನಾಗಿ ಪಡೆಯಲು ತಪಸ್ಸು ಮಾಡಿರುವ ಪ್ರಸಂಗವನ್ನು ಪುರಾಣಗಳು ಉಲ್ಲೇಖಿಸಿಸುತ್ತವೆ].

ವಿಮೋಹನಾಯಾಸುರಸರ್ಗ್ಗಿಣಾಂ ಪ್ರಭುಃ ಸ್ವಯಂ ಕರೋತೀವ ತಪಃ ಪ್ರದರ್ಶಯೇತ್
ಕಾಮಾದಿದೋಷಾಂಶ್ಚ ಮೃಷೈವ ದರ್ಶಯೇನ್ನ ತಾವತಾ ತೇsಸ್ಯ ಹಿ ಸನ್ತಿ ಕುತ್ರಚಿತ್         ೧೦.೭೦

ಸರ್ವಸಮರ್ಥರಾದ ವೇದವ್ಯಾಸರೂಪಿ ಭಗವಂತ, ಅಸುರ ಸ್ವಭಾವದವರ ಮೋಹಕ್ಕಾಗಿ, ತಾನೇ ತಪಸ್ಸನ್ನು ಮಾಡುತ್ತಾನೋ ಎಂಬಂತೆ ತೋರಿಸುತ್ತಾನಷ್ಟೇ. ಹಾಗೆಯೇ, ಅವನು ಕಾಮಾದಿ ದೋಷಗಳನ್ನು ತೋರಿಸುತ್ತಾನೆ. ಆದರೆ ಕಾಮಾದಿಗಳು ನಾರಾಯಣನಿಗೆ ಯಾವುದೇ ರೂಪದಲ್ಲೂ ಇರುವುದಿಲ್ಲಾ.

ತತಸ್ತ್ವರಣ್ಯ ಸ್ಮ ಬಭೂವ ಪುತ್ರಕಃ ಶಿವೋsಸ್ಯ ಸೋsಭೂಚ್ಛುಕನಾಮಧೇಯಃ
ಶುಕೀ ಹಿ ಭೂತ್ವಾsಭ್ಯಗಮದ್ ಘೃತಾಚೀ ವ್ಯಾಸಂ ವಿಮತ್ಥ್ನನ್ತಮುತಾರಣೀ ತಮ್          ೧೦.೭೧

ಅಕಾಮಯನ್ ಕಾಮುಕವತ್ ಸ ಭೂತ್ವಾ ತಯಾsರ್ತ್ಥಿತಸ್ತಂ ಶುಕನಾಮಧೇಯಮ್
ಚಕ್ರೇ ಹ್ಯರಣ್ಯೋಸ್ತನಯಂ ಚ ಸೃಷ್ಟ್ವಾ ವಿಮೋಹಯಂಸ್ತತ್ವಮಾರ್ಗ್ಗೇಷ್ವಯೋಗ್ಯಾನ್     ೧೦.೭೨

ತದನಂತರ, ಸದಾಶಿವನು ಈ ವೇದವ್ಯಾಸರ ಪುತ್ರನಾಗಿ(ಶುಕನಾಗಿ) ಅರಣಿಯಿಂದ ಹುಟ್ಟಿದನು. (ಅರಣಿಮಥನ ಕಾಷ್ಠದ ಮದ್ಯದಲ್ಲಿ  ಹುಟ್ಟಿದನು).
ಶುಕಮುನಿಯ ಹುಟ್ಟು ಅರಣಿಯಲ್ಲಿ ಹೇಗೆ ಸಾಧ್ಯವಾಯಿತು ಎಂದರೆ:  ಘೃತಾಚೀ ಎನ್ನುವ ಅಪ್ಸರೆಯು ಹೆಣ್ಣುಗಿಣಿ ರೂಪದಲ್ಲಿ(ಶುಕಿಯಾಗಿ) ಅರಣಿಯನ್ನು ಕಡೆಯುತ್ತಿರುವ ವೇದವ್ಯಾಸರನ್ನು ಕುರಿತು ಬಂದಳು.
ವಸ್ತುತಃ ಕಾಮದ ಸ್ಪರ್ಶವೂ ಇಲ್ಲದೇ ಇರುವ ವ್ಯಾಸರು, ಅವಳಿಂದ ಬೇಡಲ್ಪಟ್ಟವನಾಗಿ, ಕಾಮುಕನಂತೆ ತೋರಿಸುತ್ತಾ,  ಶುಕ ಎನ್ನುವ ಹೆಸರಿನ ಆ ಮಗುವನ್ನು ಹುಟ್ಟಿಸಿದರು.
[ಶುಕಿಯನ್ನು  ನೋಡಿ ವೇದವ್ಯಾಸರ ರೇತಸ್ಸು ಅರಣಿಯಲ್ಲಿ ಬಿತ್ತು. ಅದು ಕೂಡಲೇ ಒಂದು ಮಗುವಾಗಿ ಹೊರಬಂತು. ಇಲ್ಲಿಯೂ ಕೂಡಾ, ಘೃತಾಚೀ ಕೇವಲ ನಿಮಿತ್ತಮಾತ್ರ . ಇದೆಲ್ಲವೂ  ಅಯೋಗ್ಯರನ್ನು ತತ್ತ್ವಮಾರ್ಗದಲ್ಲಿ ಮೋಹಗೊಳಿಸಲು ದೇವರು ಆಡುವ ಲೀಲಾನಾಟಕ. ಬಾಹ್ಯವಾಗಿ ದುರ್ಜನರ ದೃಷ್ಟಿಯಲ್ಲಿ: ಶುಕಿಯನ್ನು ಕಂಡ ಅರಣಿಮಥನ  ಮಾಡುತ್ತಿದ್ದ  ವೇದವ್ಯಾಸರು  ಕಾಮವಶರಾದರು, ಅದರ ಫಲದಿಂದ ಶುಕನ ಜನನವಾಯಿತು! )

ಶುಕಂ ತಮಾಶು ಪ್ರವಿವೇಶ ವಾಯುರ್ವ್ಯಾಸಸ್ಯ ಸೇವಾರ್ತ್ಥಮಥಾಸ್ಯ ಸರ್ವಮ್
ಜ್ಞಾನಂ ದದೌ ಭಗವಾನ್ ಸರ್ವವೇದಾನ್ ಸಭಾರತಂ ಭಾಗವತಂ ಪುರಾಣಾಮ್         ೧೦.೭೩

ಶುಕಮುನಿಯ ಜನನ ನಂತರ,  ವೇದವ್ಯಾಸರ ಸೇವೆಗಾಗಿ ಮುಖ್ಯಪ್ರಾಣನು ಶುಕಾಚಾರ್ಯರ ಒಳಗೆ ಪ್ರವೇಶ ಮಾಡಿದರು. ವೇದವ್ಯಾಸರು ಶುಕನಿಗೆ ವೇದ, ಮಹಾಭಾರತ, ಭಾಗವತವೇ ಮೊದಲಾದ  ಪುರಾಣವನ್ನೊಳಗೊಂಡ ಸಮಸ್ತ ಜ್ಞಾನವನ್ನು ಉಪದೇಶ ಮಾಡಿದರು.

Thursday, September 20, 2018

Mahabharata Tatparya Nirnaya Kannada 10.61-10.68


ಅಥೋ ಮನುಷ್ಯೇಷು ತಥಾsಸುರೇಷು ರೂಪಾನ್ತರೈಃ ಕಲಿರೇವಾವಶಿಷ್ಟಃ
ತತೋ ಮನುಷ್ಯೇಷು ಚ ಸತ್ಸು ಸಂಸ್ಥಿತೋ ವಿನಾಶ್ಯ ಇತ್ಯೇಷ ಹರಿರ್ವ್ಯಚಿನ್ತಯತ್ ೧೦.೬೧

ದೇವತೆಗಳ ಮನಸ್ಸಿನಿಂದ ಹೊರಟುಹೋದ ಮೇಲೆ,  ಮನುಷ್ಯರಲ್ಲಿ ಮತ್ತು ಅಸುರರಲ್ಲಿ ಬೇರೆಬೇರೆ ರೀತಿಗಳಿಂದ ಕಲಿಯು ಅವಶಿಷ್ಟನೇ ಆಗಿರುತ್ತಾನೆ.  ಅದರಿಂದಾಗಿ ‘ಸಜ್ಜನರಾಗಿರುವ ಮನುಷ್ಯರಲ್ಲಿ ಇರತಕ್ಕಂತಹ ಕಲಿಯು ವಿನಾಶಕ್ಕೆ ಅರ್ಹನು’ ಎಂದು  ವೇದವ್ಯಾಸರು ಚಿಂತಿಸಿದರು.

ತತೋ ನೃಣಾಂ ಕಾಲಬಲಾತ್ ಸುಮನ್ದಮಾಯುರ್ಮ್ಮತಿಂ ಕರ್ಮ್ಮ ಚ ವೀಕ್ಷ್ಯ ಕೃಷ್ಣಃ
ವಿವ್ಯಾಸ ವೇದಾನ್ ಸ ವಿಭುಶ್ಚತುರ್ದ್ಧಾ  ಚಕ್ರೇ ತಥಾ ಭಾಗವತಂ ಪುರಾಣಮ್ ೧೦.೬೨

ತದನಂತರ ಸರ್ವಸಮರ್ಥರಾದ ವೇದವ್ಯಾಸರು, ಕಾಲದ ಬಲದಿಂದಾಗಿ(ಯುಗಸಾಮರ್ಥ್ಯದಿಂದ)  ಮನುಷ್ಯರ ಅತ್ಯಂತ ಅಲ್ಪವಾದ  ಆಯುಷ್ಯ, ಬುದ್ಧಿಶಕ್ತಿ, ಮತ್ತು  ಕರ್ಮವನ್ನು ವಿಚಾರಮಾಡಿ, ಮೂಲವೇದವನ್ನು ನಾಲ್ಕು ವೇದಗಳನ್ನಾಗಿ ವಿಭಾಗಿಸಿದರು. ಹಾಗೆಯೇ , ನೇರವಾಗಿ ಭಗವಂತನ ಮಹಿಮೆಯನ್ನು ಸಾರುವ, ಪುರಾಣಗಳ ರಾಜ ಎನಿಸಿದ ಶ್ರೀಮದ್ಭಾಗವತನ್ನೊಳಗೊಂಡ   ಭಗವತ್ಸಂಬಂಧಿಯಾದ  ಅಷ್ಟಾದಶ ಪುರಾಣಗಳನ್ನು  ರಚಿಸಿದರು.

ಯೇಯೇ ಚ ಸನ್ತಸ್ತಮಸಾsನುವಿಷ್ಟಾಸ್ತಾಂಸ್ತಾನ್ ಸುವಾಕ್ಯೈಸ್ತಮಸೋ ವಿಮುಞ್ಚನ್
ಚಚಾರ ಲೋಕಾನ್ ಸ ಪಥಿ ಪ್ರಯಾನ್ತಂ ಕೀಟಂ ವ್ಯಪಶ್ಯತ್ ತಮುವಾಚ ಕೃಷ್ಣಃ      ೧೦.೬೩

ಭವಸ್ವ ರಾಜಾ ಕುಶರೀರಮೇತತ್ ತ್ಯಕ್ತ್ವೇತಿ ನೈಚ್ಛತ್ ತದಸೌ ತತಸ್ತಮ್
ಅತ್ಯಕ್ತದೇಹಂ ನೃಪತಿಂ ಚಕಾರ ಪುರಾ ಸ್ವಭಕ್ತಂ ವೃಷಲಂ ಸುಲುಬ್ಧಮ್    ೧೦.೬೪

ಲೋಭಾತ್ ಸ ಕೀಟತ್ವಮುಪೇತ್ಯ ಕೃಷ್ಣಪ್ರಸಾದತಶ್ಚಾsಶು ಬಭೂವ ರಾಜಾ
ತದೈವ ತಂ ಸರ್ವನೃಪಾಃ ಪ್ರಣೇಮುರ್ದ್ಧದುಃ ಕರಂ ಚಾಸ್ಯ ಯಥೈವ ವೈಶ್ಯಾಃ      ೧೦.೬೫

ಯಾವಯಾವ ಸಜ್ಜನರು ಅಜ್ಞಾನದಿಂದ ಕೂಡಿದ್ದಾರೋ(ಪ್ರವಿಷ್ಟರಾಗಿದ್ದಾರೋ) ಅವರೆಲ್ಲರನ್ನೂ ಕೂಡಾ ಜ್ಞಾನಪೂರ್ವಕವಾದ  ಉತ್ತಮ ಮಾತುಗಳಿಂದ ಅಜ್ಞಾನದಿಂದ ಬಿಡುಗಡೆ ಮಾಡಿದ ವೇದವ್ಯಾಸರು, ಲೋಕದಲೆಲ್ಲಾ  ಸಂಚಾರ ಮಾಡಿದರು.(ಇಲ್ಲಿಯ ತನಕ ಆದಿಪರ್ವದ ಭಾಗವನ್ನು ವಿವರಿಸಿದ ಆಚಾರ್ಯರು ಇಲ್ಲಿ ಅನುಶಾಸನಪರ್ವ ಮತ್ತು ಶಾಂತಿಪರ್ವದಲ್ಲಿ ಬರುವ ಕಥೆಯನ್ನು ಜೋಡಿಸಿ ನೀಡಿದ್ದಾರೆ)
ಒಮ್ಮೆ ವೇದವ್ಯಾಸರು  ಸಾಗುತ್ತಿದ್ದ  ಮಾರ್ಗದಲ್ಲಿ ಕಂಡ ಒಂದು ಕೀಟವನ್ನು ನೋಡಿ ಈ ರೀತಿ ಹೇಳುತ್ತಾರೆ:
“ಈ ಕೆಟ್ಟ ಶರೀರವನ್ನು ಬಿಟ್ಟು ರಾಜನಾಗು” ಎಂದು. ಆದರೆ ದೇಹವನ್ನು ಬಿಡಲು ಕೀಟ ಬಯಸಲಿಲ್ಲಾ! (ಯಾರ್ಯಾರು ಯಾವಯಾವ ದೇಹದಲ್ಲಿರುತ್ತಾರೋ, ಆ ದೇಹದ ಮೇಲೆ ಅವರಿಗೆ ಅತ್ಯಂತ  ವ್ಯಾಮೋಹವಿರುತ್ತದೆ. ಅದು ಎಂತಹ ದೇಹವೇ ಇರಲಿ. ಇದೊಂದು ವಿಚಿತ್ರ ಬಂಧ). ಆದರೆ ದೇಹ ಬಿಡದ ಆ ಜೀವವನ್ನು ವ್ಯಾಸರು ರಾಜನನ್ನಾಗಿ ಮಾಡಿದರು. (ಇದನ್ನೇ ವಾದಿರಾಜರು ‘ಮಧ್ವಾಂತರ್ಗತ ವೇದವ್ಯಾಸ ಕಾಯೊ ಶುದ್ಧ ಮೂರುತಿಯೆ ಸರ್ವೇಶ’ ಎನ್ನುವ ತಮ್ಮ ರಚನೆಯಲ್ಲಿ    ಕ್ರಿಮಿಯಿಂದರಾಜ್ಯವಾಳಿಸಿದ ಜಗತ್ಸ್ವಾಮಿ ನೀನೆಂದು ತೋರಿಸಿದೆ’ ಎಂದು ಹಾಡಿ ಹೊಗಳಿದ್ದಾರೆ).  
ಆ ಜೀವ ಹಿಂದಿನ ಜನ್ಮದಲ್ಲಿ ಪರಮಾತ್ಮನ ಅನನ್ಯ ಭಕ್ತಿಯುಳ್ಳ ಒಬ್ಬ ವೃಷಲನಾಗಿದ್ದ(ಶೂದ್ರನಾಗಿದ್ದ).  ಆದರೆ ಹಿಂದಿನ ಜನ್ಮದಲ್ಲಿ ಅವನಲ್ಲೊಂದು ದೋಷವಿತ್ತು.  ಆತ ಅತ್ಯಂತ ಜಿಪುಣನಾಗಿದ್ದ. ಆ ಪಾಪದಿಂದಾಗಿ ಕೀಟವಾಗಿ ಹುಟ್ಟಿದ್ದ. ಆದರೆ ಆ ಕೀಟ ದೇಹದಲ್ಲೂ  ಹಿಂದಿನ ಜನ್ಮದ ಅನನ್ಯ ಭಕ್ತಿಯ ಪ್ರಭಾವದಿಂದ ಆತ ವೇದವ್ಯಾಸರ ಅನುಗ್ರಹಕ್ಕೆ ಪಾತ್ರನಾದ.
ಹೀಗೆ ತನ್ನ ಪೂರ್ವ ಜನ್ಮದ ಕರ್ಮದಿಂದ  ಕ್ರಿಮಿಯಾಗಿದ್ದ ಆತ, ವೇದವ್ಯಾಸರ ಅನುಗ್ರಹದಿಂದ ಕೀಟ ದೇಹದಲ್ಲೇ  ರಾಜನಾದ! ಅವನಿಗೆ ಎಲ್ಲಾ ರಾಜರೂ,  ವೈಶ್ಯರು ರಾಜನಿಗೆ ಕಪ್ಪವನ್ನು ಕೊಡುವಂತೆ ಕಪ್ಪ-ಕಾಣಿಕೆಯನ್ನು ಕೊಟ್ಟು ನಮಸ್ಕರಿಸಿ ಹೋಗುತ್ತಿದ್ದರು.

ಉವಾಚ ತಂ ಭಗವಾನ್ ಮುಕ್ತಿಮಸ್ಮಿಂಸ್ತವ ಕ್ಷಣೇ ದಾತುಮಹಂ ಸಮರ್ತ್ಥಃ
ತಥಾsಪಿ ಸೀಮಾರ್ತ್ಥಮವಾಪ್ಯ ವಿಪ್ರತನುಂ ವಿಮುಕ್ತೋ ಭವ ಮತ್ ಪ್ರಸಾದಾತ್    ೧೦.೬೬

ಈ ರೀತಿ ರಾಜನಾದ ಆತನನ್ನು ಕುರಿತು  ವೇದವ್ಯಾಸರು ಹೇಳುತ್ತಾರೆ: “ನಿನಗೆ ಈ ಕ್ಷಣದಲ್ಲಿಯೇ (ನಿನ್ನ ಪ್ರಾರಬ್ಧಕರ್ಮವನ್ನೂ ಮುರಿದು) ಮೋಕ್ಷವನ್ನು ಕೊಡಲು ನಾನು ದಕ್ಷನಿದ್ದೇನೆ. ಆದರೂ,  ನಿನ್ನ ಕರ್ಮಕ್ಕನುಗುಣವಾಗಿ, ಕೊನೆಯ ಜನ್ಮವಾದ ಮುಂದಿನ ಜನ್ಮದಲ್ಲಿ, ಬ್ರಾಹ್ಮಣ  ಶರೀರವನ್ನು ಹೊಂದಿ, ನನ್ನ ಅನುಗ್ರಹದಿಂದ ಮುಕ್ತನಾಗುವೆ” ಎಂದು.


ಜ್ಞಾನಂ ಚ ತಸ್ಮೈ ವಿಮಲಂ ದದೌ ಸ ಮಹೀಂ ಚ ಸರ್ವಾಂ ಬುಭುಜೇ ತದನ್ತೇ
ತ್ಯಕ್ತ್ವಾ ತನುಂ ವಿಪ್ರವರತ್ವಮೇತ್ಯ ಪದಂ ಹರೇರಾಪ ಸುತತ್ತ್ವವೇದೀ       ೧೦.೬೭

ಹೀಗೆ ವೇದವ್ಯಾಸ ರೂಪಿ ಭಗವಂತ ಆ ಕೀಟದಲ್ಲಿರುವ ಸಜ್ಜೀವಿಗೆ ನಿರ್ಮಲವಾದ ವೇದಾಂತ ಜ್ಞಾನವನ್ನು ಕೊಟ್ಟ. ಈ ರೀತಿ ವೇದವ್ಯಾಸರಿಂದ ಅನುಗ್ರಹಿಸಲ್ಪಟ್ಟ ಆತ ಸಮಗ್ರ ಭೂಮಿಯನ್ನು ಆಳಿದ. ಕೊನೆಯಲ್ಲಿ ತನ್ನ  ದೇಹವನ್ನು ಬಿಟ್ಟು, ಬ್ರಾಹ್ಮಣ ಜನ್ಮವನ್ನು ಹೊಂದಿ, ಒಳ್ಳೆಯ ತತ್ತ್ವವನ್ನು ತಿಳಿದು, ನಾರಾಯಣನ ಪದವನ್ನು(ಮೋಕ್ಷವನ್ನು) ಸೇರಿದ.

ಏವಂ ಬಹೂನ್ ಸಂಸೃತಿಬನ್ಧತಃ ಸ ವ್ಯಮೋಚಯದ್ ವ್ಯಾಸತನುರ್ಜ್ಜನಾರ್ದ್ದನಃ
ಬಹೂನ್ಯಚಿನ್ತ್ಯಾನಿ ಚ ತಸ್ಯ ಕರ್ಮ್ಮಾಣ್ಯಶೇಷದೇವೇಶಸದೋದಿತಾನಿ         ೧೦.೬೮

ಹೀಗೆ ವ್ಯಾಸರೂಪದಲ್ಲಿ ಕಾಣಿಸಿಕೊಂಡ ನಾರಾಯಣನು, ಬಹಳ ಜನರನ್ನು ಸಂಸಾರ ಬಂಧನದಿಂದ ಬಿಡುಗಡೆಗೊಳಿಸಿದ. ವ್ಯಾಸರೂಪದಲ್ಲಿ ಭಗವಂತ ಮಾಡಿ ತೋರಿದ ಅನೇಕ ದಿವ್ಯ ಕರ್ಮಗಳನ್ನು ಎಲ್ಲಾ ದೇವತಾ ಶ್ರೇಷ್ಠರೂ ಕೂಡಾ ನಿರಂತರ ಸ್ಮರಿಸುತ್ತಿರುತ್ತಾರೆ.


Tuesday, September 18, 2018

Mahabharata Tatparya Nirnaya Kannada 10.56-10.60



ಸ ಲೋಕಧರ್ಮ್ಮಾಭಿರಿರಕ್ಷಯಾ ಪಿತುರ್ದ್ದ್ವಿಜತ್ವಮಾಪ್ಯಾsಶು ಪಿತುರ್ದ್ದದೌ ನಿಜಮ್
ಜ್ಞಾನಂ ತಯೋಃ ಸಂಸ್ಮೃತಿಮಾತ್ರತಃ ಸದಾ ಪ್ರತ್ಯಕ್ಷಭಾವಂ ಪರಮಾತ್ಮನೋ ದದೌ ೧೦.೫೬

ವೇದವ್ಯಾಸರೂಪಿ ನಾರಾಯಣನು ಲೋಕದ ಧರ್ಮವನ್ನು ರಕ್ಷಿಸಬೇಕು ಎನ್ನುವ ಇಚ್ಛಿಯಿಂದ, ಶೀಘ್ರದಲ್ಲಿ ತಂದೆಯಿಂದ ಬ್ರಾಹ್ಮಣತ್ವವನ್ನು ಹೊಂದಿ(ಅಂದರೆ ಲೋಕದ ನಿಯಮದಂತೆ ತಂದೆಯಿಂದಲೇ ಉಪನಯನವನ್ನು ಮಾಡಿಸಿಕೊಂಡು), ತಂದೆಗೇ ಜ್ಞಾನವನ್ನು ಉಪದೇಶಿಸಿದನು.  ಸತ್ಯವತಿಗೆ ಮತ್ತು ಪರಾಶರರಿಗೆ ಜ್ಞಾನವನ್ನು ನೀಡಿದ್ದಲ್ಲದೇ, ‘ನೀವು ನೆನಪಿಸಿಕೊಂಡಾಗ ತಾನು  ಪ್ರತ್ಯಕ್ಷವಾಗುತ್ತೇನೆ’ ಎನ್ನುವ ವರವನ್ನೂ  ಅವರಿಗೆ ನೀಡಿದನು. 

ದ್ವೈಪಾಯನಃ ಸೋsಥ ಜಗಾಮ ಮೇರುಂ ಚತುರ್ಮ್ಮುಖಾದ್ಯೈರನುಗಮ್ಯಮಾನಃ
ಉದ್ಧೃತ್ಯ ವೇದಾನಖಿಲಾನ್ ಸುರೇಭ್ಯೋ ದದೌ ಮುನಿಭ್ಯಶ್ಚ ಯಥಾssದಿಸೃಷ್ಟೌ ೧೦.೫೭

ಆ ದ್ವೀಪದಲ್ಲಿ ಅವತರಿಸಿ ಬಂದ ವೇದವ್ಯಾಸರು, ಬ್ರಹ್ಮಾದಿ ದೇವತೆಗಳಿಂದ ಅನುಸರಿಸಲ್ಪಟ್ಟವರಾಗಿ, ಮೇರುವನ್ನು ಕುರಿತು ತೆರಳಿದರು. ಯಾವ ರೀತಿ ಆದಿ ಸೃಷ್ಟಿಯಲ್ಲಿ ಪರಮಾತ್ಮ ವೇದಾದಿ ವಿದ್ಯೆಗಳನ್ನು ಉಪದೇಶಿಸಿದ್ದನೋ ಹಾಗೇ, ಮತ್ತೆ ದೇವತೆಗಳಿಗೂ, ಶ್ರೇಷ್ಠ ಮುನಿಗಳಿಗೂ ಉಪದೇಶ ಮಾಡಿ,  ಅವರನ್ನು ಉದ್ಧರಿಸಿದನು.

ಸರ್ವಾಣಿ ಶಾಸ್ತ್ರಾಣಿ ತಥೈವ ಕೃತ್ವಾ ವಿನಿರ್ಣ್ಣಯಂ ಬ್ರಹ್ಮಸೂತ್ರಂ ಚಕಾರ
ತಚ್ಛುಶ್ರುವುರ್ಬ್ರಹ್ಮಗಿರೀಶಮುಖ್ಯಾಃ ಸುರಾ ಮುನೀನಾಂ ಪ್ರವರಾಶ್ಚ ತಸ್ಮಾತ್       ೧೦.೫೮

ಹಾಗೆಯೇ, ಎಲ್ಲಾ ಶಾಸ್ತ್ರಗಳನ್ನೂ ರಚನೆ ಮಾಡಿ, ಎಲ್ಲಾ ಶಾಸ್ತ್ರದ ನಿರ್ಣಯ ಎನಿಸಿಕೊಂಡಿರುವ ಬ್ರಹ್ಮಸೂತ್ರವನ್ನು ರಚಿಸಿದರು. ಬ್ರಹ್ಮ-ರುದ್ರ ಮೊದಲಾದ ದೇವತೆಗಳು, ಮುನಿ ಶ್ರೇಷ್ಠರೂ ಕೂಡಾ,  ವೇದವ್ಯಾಸರಿಂದ ಬ್ರಹ್ಮಸೂತ್ರವನ್ನು ಕೇಳಿದರು. (ಬ್ರಹ್ಮ-ರುದ್ರಾದಿ ದೇವತೆಗಳಿಗೆ  ಬ್ರಹ್ಮಸೂತ್ರವನ್ನು ವೇದವ್ಯಾಸರು ಉಪದೇಶ ಮಾಡಿದರು).

ಸಮಸ್ತಶಾಸ್ತ್ರಾರ್ತ್ಥನಿದರ್ಶನಾತ್ಮಕಂ ಚಕ್ರೇ ಮಹಾಭಾರತನಾಮಧೇಯಮ್
ವೇದೋತ್ತಮಂ ತಚ್ಚ ವಿಧಾತೃಶಙ್ಕರಪ್ರಧಾನಕೈಸ್ತನ್ಮುಖತಃ ಸುರೈಃ ಶ್ರುತಮ್     ೧೦.೫೯

ವೇದ ಮೊದಲಾದ ಎಲ್ಲಾ ಶಾಸ್ತ್ರಗಳು ಏನನ್ನು ಹೇಳುತ್ತವೋ,  ಅದಕ್ಕೆ ಉದಾಹರಣೆಯಾಗಿರುವ ವೇದಗಳಿಗೂ ಮಿಗಿಲಾದ ಮಹಾಭಾರತ ಎಂಬ ಹೆಸರಿನ ಗ್ರಂಥವನ್ನು ಭಗವಂತ ವೇದವ್ಯಾಸರೂಪದಿಂದ ಸಂಕಲಿಸಿದ. ಬ್ರಹ್ಮ-ರುದ್ರ ಮೊದಲಾದವರನ್ನೇ ಮುಖ್ಯವಾಗಿ ಹೊಂದಿರುವ ದೇವತೆಗಳಿಂದ ವೇದವ್ಯಾಸರ ಮುಖದಿಂದಲೇ ಅದು ಕೇಳಲ್ಪಟ್ಟಿತು. (ಬ್ರಹ್ಮಾದಿ ದೇವತೆಗಳಿಗೆ  ಮಹಾಭಾರತವನ್ನು  ವೇದವ್ಯಾಸರು ಉಪದೇಶ ಮಾಡಿದರು).

ಅಥೋ ಗಿರೀಶಾದಿಮನೋನುಶಾಯೀ ಕಲಿರ್ಮ್ಮಮಾರಾsಶು ಸುವಾಙ್ಮಯೈಃ ಶರೈಃ
ನಿಕೃತ್ತಶೀರ್ಷೋ ಭಗವನ್ಮುಖೇರಿತೈಃ ಸುರಾಶ್ಚ ಸಜ್ಜ್ಞಾನಸುಧಾರಸಂ ಪಪುಃ        ೧೦.೬೦

ತದನಂತರ, ರುದ್ರದೇವರೇ ಮೊದಲಾದ ದೇವತೆಗಳ ಮನಸ್ಸಿನಲ್ಲಿ ನೆಲೆಸಿರುವ ಕಲಿಯು, ಪರಮಾತ್ಮನ ಮುಖದಿಂದ ಹೇಳಲ್ಪಟ್ಟ  ಜ್ಞಾನವೆಂಬ ಬಾಣಗಳಿಂದ ತಲೆಯನ್ನು ಕಳೆದುಕೊಂಡವನಾಗಿ ಸತ್ತನು. ದೇವತೆಗಳಾದರೋ, ನಿರ್ಮಲವಾದ ಜ್ಞಾನವೆಂಬ ಅಮೃತವನ್ನು ಪಡೆದರು.

Monday, September 17, 2018

Mahabharata Tatparya Nirnaya Kannada 10.52-10.55


[ಈ ರೀತಿ ವ್ಯಾಸರೂಪದಿಂದ ಭೂಮಿಯಲ್ಲಿ ಅವತರಿಸಿದ ಶ್ರೀಮನ್ನಾರಾಯಣನ ಸ್ವರೂಪ-ಸಾಮರ್ಥ್ಯದ ಸುಂದರ ಚಿತ್ರಣವನ್ನು ಆಚಾರ್ಯರು ಇಲ್ಲಿ ನೀಡಿದ್ದಾರೆ:]

ಅಗಣ್ಯದಿವ್ಯೋರುಗುಣಾರ್ಣ್ಣವಃ ಪ್ರಭುಃ ಸಮಸ್ತವಿದ್ಯಾಧಿಪತಿರ್ಜ್ಜಗದ್ಗುರುಃ
ಅನನ್ತಶಕ್ತಿರ್ಜ್ಜಗದೀಶ್ವರೇಶ್ವರಃ ಸಮಸ್ತದೋಷಾತಿವಿದೂರವಿಗ್ರಹಃ         ೧೦.೫೨


ಶುಭಮರತಕವರ್ಣ್ಣೋ ರಕ್ತಪಾದಾಭ್ಜನೇತ್ರಾಧರಕರನಖರಸನಾಗ್ರಶ್ಚಕ್ರಶಙ್ಖಾಬ್ಜರೇಖಃ
ರವಿಕರವರಗೌರಂ ಚರ್ಮ್ಮ ಚೈಣಂ ವಸಾನಸ್ತಟಿದಮಲಜಟಾಸನ್ದೀಪ್ತಜೂಟಂ ದಧಾನಃ        ೧೦.೫೩

ಎಣಿಸಲಾಗದ, ಅಲೌಕಿಕವಾದ, ಉತ್ಕೃಷ್ಟವಾದ ಗುಣಗಳಿಗೆ ಕಡಲಿನಂತೆ ಇರುವವನು; ಸರ್ವಸಮರ್ಥನಾಗಿರುವವನು; ಎಲ್ಲಾ ವಿದ್ಯೆಗೆ ಅಧಿಪತಿಯಾಗಿರುವವನು; ಜಗತ್ತಿಗೇ ಉಪದೇಶಕನಾಗಿರುವವನು;  ಎಣೆಯಿಲ್ಲದ ಶಕ್ತಿ ಉಳ್ಳವನು; ಜಗತ್ತಿಗೆ ಒಡೆಯರಾದವರಿಗೇ ಒಡೆಯನಾಗಿರುವವನು; ಎಲ್ಲಾ ದೋಷದಿಂದ ದೂರವಾಗಿರುವ ಸ್ವರೂಪಭೂತವಾದ ಶರೀರವುಳ್ಳವನು; 
ಮರತಕಮಣಿಯಂತೆ ನೀಲಿಯಾದ ಮೈಬಣ್ಣ ಉಳ್ಳವನು; ಕೆಂಪಾಗಿರತಕ್ಕಂತಹ ಪಾದ, ಕಣ್ಣಿನ ತುದಿ, ತುಟಿ, ಕೈ, ನಾಲಿಗೆಯ ತುದಿ ಉಳ್ಳವನು; ಕೈಗಳಲ್ಲಿ ಮತ್ತು ಕಾಲಿನಲ್ಲಿ ಶಂಖ-ಚಕ್ರ-ಕಮಲದ ರೇಖೆಯುಳ್ಳವನು; ಸೂರ್ಯನ ಕಾಂತಿಯಂತೆ ಹಳದಿಯಾಗಿ,  ಜಿಂಕೆಯ ಚರ್ಮವನ್ನು ಹೊದ್ದು, ಮಿಂಚಿನಂತೆ ನಿರ್ಮಲವಾಗಿರುವ ಜಟಾಜೂಟವನ್ನು ಧರಿಸಿದವನಾಗಿ ಭಗವಂತ ಆವಿರ್ಭವಿಸಿದ.

ವಿಸ್ತೀರ್ಣ್ಣವಕ್ಷಾಃ  ಕಮಳಾಯತಾಕ್ಷೋ ಬೃಹದ್ಭುಜಃ ಕಮ್ಬುಸಮಾನಕಣ್ಠಃ
ಸಮಸ್ತವೇದಾನ್ ಮುಖತಃ ಸಮುದ್ಗಿರನ್ನನ್ತಚನ್ದ್ರಾಧಿಕಕಾನ್ತಸನ್ಮುಖಃ      ೧೦.೫೪

ಪ್ರಬೋಧಮುದ್ರಾಭಯದೋರ್ದ್ಧ್ವಯಾನ್ವಿತೋ ಯಜ್ಞೋಪವೀತಾಜಿನಮೇಖಲೋಲ್ಲಸನ್
ದೃಶಾ ಮಹಾಜ್ಞಾನಭುಜಙ್ಗದಷ್ಟಮುಜ್ಜೀವಯಾನೋ ಜಗದತ್ಯರೋಚತ ೧೦.೫೫

ಅಗಲವಾದ ವಕ್ಷಃಸ್ಥಳ; ತಾವರೆಯಂತಹ ವಿಶಾಲವಾದ ಕಣ್ಣು; ಅಗಲವಾದ ಭುಜ; ಶಂಖದಂತೆ ನುಣುಪಾದ ಕೊರಳು; ಸಮಸ್ತ ವೇದಗಳನ್ನು ಹುಟ್ಟುತ್ತಲೇ ಹೇಳುತ್ತಿದ್ದವನು; ಅಸಂಖ್ಯಾತ ಚಂದ್ರರಂತೆ ಸುಖವನ್ನು ಉಂಟುಮಾಡುವ ಮುಖವುಳ್ಳವನು;
ಜ್ಞಾನಮುದ್ರೆ ಮತ್ತು ಅಭಯಮುದ್ರೆಯಿಂದ ಯುಕ್ತನಾದವನು;  ಯಜ್ಞೋಪವೀತ,  ಕೃಷ್ಣಾಜಿನ, ಹೀಗೆ ಎಲ್ಲವುದರಿಂದ ಕಂಗೊಳಿಸುತ್ತಿರುವವನು;  ಅಜ್ಞಾನವೆಂಬ ಹಾವಿನಿಂದ ಕಚ್ಚಲ್ಪಟ್ಟ ಭಕ್ತ ಸಮೂಹವನ್ನು ತನ್ನ ಪ್ರಸನ್ನದೃಷ್ಟಿಯಿಂದ ಬದುಕಿಸುತ್ತಿರುವ ವೇದವ್ಯಾಸರೂಪಿ ಭಗವಂತ  ಶೋಭಿಸಿದನು.

Sunday, September 16, 2018

Mahabharata Tatparya Nirnaya Kannada 10.47-10.51


ಇತೀರಿತಶ್ಚಕ್ರಧರೇಣ ತಾಂ ಮುನಿರ್ಜ್ಜಗಾಮ ಮಾರ್ತ್ತಾಣ್ಡಸುತಾಂ ಸಮುದ್ರಗಾಮ್
ಉತ್ತಾರಯನ್ತೀಮಥ ತತ್ರ ವಿಷ್ಣುಃ ಪ್ರಾದುರ್ಬಭೂವಾsಶು ವಿಶುದ್ಧಚಿದ್ಧನಃ        ೧೦.೪೭

ಈ ರೀತಿಯಾಗಿ ಭಗವಂತನಿಂದ ಹೇಳಲ್ಪಟ್ಟ ಪರಾಶರ ಮುನಿಯು, ಸೂರ್ಯನ ಮಗಳಾಗಿರುವ, ಸಮುದ್ರಗಾಮಿನಿಯಾದ, ಪುಣ್ಯಪ್ರದಳಾದ ಯಮುನೆಯನ್ನು ದೋಣಿಯ ಮೂಲಕ ದಾಟಿಸುವ ಸತ್ಯವತಿಯ ಬಳಿ ಬಂದು ಅವಳನ್ನು ಸೇರಿದನು. ಅಲ್ಲಿ ಜ್ಞಾನಸ್ವರೂಪಿಯಾಗಿರುವ ನಾರಾಯಣನು ತಕ್ಷಣ ಹುಟ್ಟಿದನು (ಆವಿರ್ಭವಿಸಿದನು).

ವಿದೋಷವಿಜ್ಞಾನಸುಖೈಕರೂಪೋsಪ್ಯಜೋ ಜನಾನ್ ಮೋಹಯಿತುಂ ಮೃಷೈವ
ಯೋಷಿತ್ಸು ಪುಂಸೋ ಹ್ಯಜನೀವ ದೃಷ್ಯತೇ ನ ಜಾಯತೇ ಕ್ವಾಪಿ ಬಲಾದಿವಿಗ್ರಹಃ   ೧೦.೪೮

ಯಥಾ ನೃಸಿಂಹಾಕೃತಿರಾವಿರಾಸೀತ್ ಸ್ತಮ್ಭಾತ್ ತಥಾ ನಿತ್ಯತನುತ್ವತೋ ವಿಭುಃ
ಆವಿರ್ಭವದ್ ಯೋಷಿತಿ ನೋ ಮಲೋತ್ಥಸ್ತಥಾsಪಿ ಮೋಹಾಯ ನಿದರ್ಶಯೇತ್ ತಥಾ        ೧೦.೪೯

ದೋಷವಿಲ್ಲದ,  ವಿಜ್ಞಾನಸುಖಗಳೇ ಮೈದಾಳಿ ಬಂದ, ಎಂದೂ ನಾಶವಿಲ್ಲದ ನಾರಾಯಣನು, ದುಷ್ಟ ಜನರನ್ನು ಮೋಹಗೊಳಿಸಲು, ಪುರುಷರಿಂದ ಸ್ತ್ರೀಯರಲ್ಲಿ ಹುಟ್ಟಿದಂತೆ  ತೋರುತ್ತಾನೆ. ಆದರೆ ಬಲವೇ ಮೈವೆತ್ತು ಬಂದ ನಾರಾಯಣನು ಎಲ್ಲಿಯೂ ಹುಟ್ಟುವುದಿಲ್ಲ.
ಹೇಗೆ ನರಸಿಂಹನ ಆಕೃತಿ ಉಳ್ಳವನಾಗಿ ಕಂಬದಿಂದ ಹುಟ್ಟಿದನೋ ಹಾಗೇ,  ನಿತ್ಯ ಶರೀರವುಳ್ಳ ನಾರಾಯಣನು ಹೆಣ್ಣಿನಲ್ಲಿ ಆವಿರ್ಭವಿಸುತ್ತಾನೆ. (ಅವನಿಗೆ ಹೆಣ್ಣೂ ಒಂದೇ ಕಂಬವೂ ಒಂದೇ)  ದೇವರು ಶುಕ್ಲ-ಶೋಣಿತಾಖ್ಯವಾದ ಮಲದಿಂದ ಹುಟ್ಟಿಲ್ಲ. ಆದರೂ ಕೂಡಾ ಜನರಮೋಹಕ್ಕಾಗಿ ಹಾಗೆ ತೋರಿಸುತ್ತಾನೆ.

ಸ್ತ್ರೀಪುಂಪ್ರಸಙ್ಗಾತ್ ಪರತೋ ಯತೋ ಹರಿಃ ಪ್ರಾದುರ್ಭವತ್ಯೇಷ ವಿಮೋಹಯನ್ ಜನಮ್
ಅತೋ ಮಲೋತ್ಥೋsಯಮಿತಿ ಸ್ಮ ಮನ್ಯತೇ ಜನೋsಶುಭಃ ಪೂರ್ಣ್ಣಗುಣೈಕವಿಗ್ರಹಮ್ ೧೦.೫೦

ಯಾವ ಕಾರಣದಿಂದ ಗಂಡು-ಹೆಣ್ಣುಗಳ ಸಂಸರ್ಗದ ಆಚೆಗೆ ನಾರಾಯಣನು ಜನರನ್ನು ಮೋಹಗೊಳಿಸುತ್ತಾ ಹುಟ್ಟುತ್ತಾನೋ, ಆ ಕಾರಣದಿಂದ ಕೆಟ್ಟ ಜನರು ಭಗವಂತನು ಶುಕ್ಲರಕ್ತರೂಪವಾದ  ಮಲದಿಂದ ಹುಟ್ಟಿದ್ದಾನೆ ಎಂದು ತಿಳಿಯುತ್ತಾರೆ.

ದ್ವೀಪೇ ಭಗಿನ್ಯಾಃ ಸ ಯಮಸ್ಯ ವಿಶ್ವಕೃತ್ ಪ್ರಕಾಶತೇ ಜ್ಞಾನಮರೀಚಿಮಣ್ಡಲಃ
ಪ್ರಭಾಸಯನ್ನಣ್ಡಬಹಿಸ್ತಥಾsನ್ತಃ ಸಹಸ್ರಲಕ್ಷಾಮಿತಸೂರ್ಯ್ಯದೀಧಿತಿಃ        ೧೦.೫೧

ಯಮನ ತಂಗಿಯಾಗಿರುವ ಯಮುನೆಯ ದ್ವೀಪದಲ್ಲಿ, ವಿಶ್ವವನ್ನೇ ಸೃಷ್ಟಿಸಿದ, ಜ್ಞಾನವೆಂಬ ಕಾಂತಿಯುಳ್ಳ ನಾರಾಯಣನು, ಪ್ರಕಾಶಿಸುತ್ತಾ, ಬ್ರಹ್ಮಾಂಡದ ಒಳ-ಹೊರಗೂ ಬೆಳಗುತ್ತಾ, ಸಾವಿರಾರು ಸೂರ್ಯರ ಕಾಂತಿಯುಳ್ಳವನಾಗಿ ಆವಿರ್ಭವಿಸಿದ.