ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Friday, January 31, 2020

Mahabharata Tatparya Nirnaya Kannada 1556_1560


ಇತ್ಯುಕ್ತಮಾತ್ರವಚನೇ ಸ ತು ಕೀಟಕೋsಸ್ಯ ರಾಮಸ್ಯ ದೃಷ್ಟಿವಿಷಯತ್ವತ ಏವ ರೂಪಮ್
ಸಮ್ಪ್ರಾಪ್ಯ ನೈಜಮತಿಪೂರ್ಣ್ಣಗುಣಸ್ಯ ತಸ್ಯವಿಷ್ಣೋರನುಗ್ರಹತ ಆಪ ವಿಮಾನಗಃ ಸ್ವಃ ೧೫.೫೬

ಈರೀತಿಯಾಗಿ ಕರ್ಣನು ಹೇಳುತ್ತಿರುವಂತೆಯೇ, ಪರಶುರಾಮನ ದೃಷ್ಟಿಗೆ ವಿಷಯವಾದ್ದರಿಂದಲೇ, ಕೀಟದ ರೂಪದಲ್ಲಿದ್ದ ‘ಹೇತಿ ತನ್ನ ಮೂಲರೂಪವನ್ನು ಹೊಂದಿ, ಪೂರ್ಣಗುಣನಾದ ಪರಶುರಾಮರೂಪಿ ವಿಷ್ಣುವಿನ ಅನುಗ್ರಹದಿಂದ, ವಿಮಾನದಲ್ಲಿ ಕುಳಿತು ಸ್ವರ್ಗಲೋಕಕ್ಕೆ ತೆರಳಿತು.

ಅಥಾsಹ ರಾಮಸ್ತಮಸತ್ಯವಾಚೋ ನ ತೇ ಸಕಾಶೇ ಮಮ ವಾಸಯೋಗ್ಯತಾ
ತಥಾsಪಿ ತೇ ನೈವ ವೃಥಾ ಮದೀಯಾ ಭಕ್ತಿರ್ಭವೇಜ್ಜೇಷ್ಯಸಿ ಸರ್ವಶತ್ರೂನ್ ೧೫.೫೭

ತದನಂತರ ಪರಶುರಾಮನು ಕರ್ಣನನ್ನು ಕುರಿತು ಹೇಳುತ್ತಾನೆ: ‘ಸುಳ್ಳು ಮಾತನ್ನಾಡುವ ನಿನಗೆ ನನ್ನ ಬಳಿಯಲ್ಲಿ ವಾಸಮಾಡಲು ಯೋಗ್ಯತೆ ಇಲ್ಲ. ಆದರೂ ಕೂಡಾ, ನಿನಗೆ ನನ್ನಲ್ಲಿರುವ ಭಕ್ತಿಯು ವ್ಯರ್ಥವಾಗಲಾರದು. ನೀನು ಎಲ್ಲಾ ಶತ್ರುಗಳನ್ನೂ ಗೆಲ್ಲುತ್ತೀಯಾ.

ಅಸ್ಪರ್ದ್ಧಮಾನಂ ನ ಕಥಞ್ಚನ ತ್ವಾಂ ಜೇತಾ ಕಶ್ಚಿತ್ ಸ್ಪರ್ದ್ಧಮಾನಸ್ತು ಯಾಸಿ
ಪರಾಭೂತಿಂ ನಾತ್ರ ವಿಚಾರ್ಯಮಸ್ತಿ ಪ್ರಮಾದೀ ತ್ವಂ ಭವಿತಾ ಚಾಸ್ತ್ರಸಙ್ಘೇ ೧೫.೫೮

ನೀನು ಸ್ಪರ್ಧಾಭಾವದಿಂದ ಯುದ್ಧಮಾಡದೇ ಹೋದರೆ ಯಾರೂ ನಿನ್ನನ್ನು ಗೆಲ್ಲಲಾಗುವುದಿಲ್ಲಾ. ಆದರೆ ಸ್ಪರ್ಧೆ ಮಾಡಿದರೆ ಸೋಲುತ್ತೀಯಾ. ಸ್ಪರ್ಧೆ ಮಾಡಿದಲ್ಲಿ ನೀನು ಅಸ್ತ್ರದ ಸಂಗದಲ್ಲಿ ವಿಸ್ಮರಣನಾಗುತ್ತೀಯ ಕೂಡಾ. ಆಗ ಅಸ್ತ್ರಗಳೆಲ್ಲವೂ ನಿನಗೆ  ಮರೆತುಹೋಗುತ್ತದೆ. ಇಲ್ಲಿ ಹೇಳಿದ ವಿಚಾರದಲ್ಲಿ ನಾನು ಮತ್ತೆ ಪರಿಶೀಲನೆ ಮಾಡುವುದಿಲ್ಲಾ’.

ಯಾಹೀತಿ ತೇನೋಕ್ತ ಉದಾರಕರ್ಮ್ಮಣಾ ಕರ್ಣ್ಣೋ  ಯಯೌ ತಂ ಪ್ರಣಮ್ಯೇಶಿತಾರಮ್
ತಥೈಕಲವ್ಯೋsಪಿ ನಿರಾಕೃತೋsಮುನಾ ದ್ರೋಣೇನ ತಸ್ಯ ಪ್ರತಿಮಾಂ ವನೇsರ್ಚ್ಚಯತ್ ೧೫.೫೯

‘ಹೋಗು’ ಎಂದು ಪರಶುರಾಮ ದೇವರಿಂದ ಹೇಳಲ್ಪಟ್ಟ ಕರ್ಣನು, ಪರಮಾತ್ಮನಿಗೆ ನಮಸ್ಕರಿಸಿ ಅಲ್ಲಿಂದ ಹೊರಟನು.
ಹಾಗೆಯೇ, ಇತ್ತ ದ್ರೋಣಾಚಾರ್ಯರಿಂದ ನಿರಾಕರಿಸಲ್ಪಟ್ಟ ಏಕಲವ್ಯನಾದರೋ, ದ್ರೋಣಾಚಾರ್ಯರ  ಪ್ರತಿಮೆಯನ್ನು ಕಾಡಿನಲ್ಲಿ ಪೂಜಿಸುತ್ತಿದ್ದನು.

ತತಃ ಕದಾಚಿದ್ ಧೃತರಾಷ್ಟ್ರಪುತ್ರೈಃ ಪಾಣ್ಡೋಃ ಸುತಾ ಮೃಗಯಾಂ ಸಮ್ಪ್ರಯಾತಾಃ
ಅಗ್ರೇ ಗಚ್ಛನ್ ಸಾರಮೇಯೋ ರುರಾವ ಧರ್ಮ್ಮಾತ್ಮಜಸ್ಯಾತ್ರ ವನೇ ಮೃಗಾರ್ತ್ಥೀ ೧೫.೬೦

ತದನಂತರ ಒಮ್ಮೆ ದೃತರಾಷ್ಟ್ರನ ಮಕ್ಕಳೊಂದಿಗೆ ಪಾಂಡುವಿನ ಮಕ್ಕಳು ಬೇಟೆಗೆಂದು ತೆರಳಿದರು. ಹೀಗೆ ಹೋಗುತ್ತಿರುವಾಗ, ವನದಲ್ಲಿ ಮೃಗವನ್ನು ಬಯಸುವ ಧರ್ಮರಾಜನ ಬೇಟೆನಾಯಿಯು ಮುಂದೆ ಹೋಗುತ್ತಾ ಚೆನ್ನಾಗಿ ಬೊಗಳಿತು.  

Wednesday, January 29, 2020

Mahabharata Tatparya Nirnaya Kannada 1551_1555


ಅಙ್ಕೇ ನಿಧಾಯ ಸ ಕದಾಚಿದಮುಷ್ಯ ರಾಮಃ ಶಿಶ್ಯೇ ಶಿರೋ ವಿಗತನಿದ್ರ ಉದಾರಬೋಧಃ
ಸಂಸುಪ್ತವತ್ ಸುರವರಃ ಸುರಕಾರ್ಯ್ಯಹೇತೋರ್ದ್ದಾತುಂ ಚ ವಾಲಿನಿಧನಸ್ಯ ಫಲಂ ತದಸ್ಯ೧೫.೫೧

ಜ್ಞಾನವೇ ಮೈವೆತ್ತುಬಂದ, ನಿದ್ರೆಯಿಲ್ಲದ ಪರಶುರಾಮನು ಒಮ್ಮೆ ಕರ್ಣನ ತೊಡೆಯಲ್ಲಿ ತಲೆಯಿಟ್ಟು, ನಿದ್ರೆಮಾಡಿದವನಂತೆ ಮಲಗಿದ. ದೇವತೆಗಳ ಕಾರ್ಯವಾಗಿಸಲು ಹಾಗೂ ವಾಲಿಯನ್ನು ಕೊಂದ ಫಲವನ್ನು ಕರ್ಣನಿಗೆ ನೀಡಲೋಸುಗವೇ ಪರಶುರಾಮ ಈರೀತಿ ನಿದ್ರಿಸಿದವನಂತೆ ಮಲಗಿದ.

ತತ್ರಾsಸ ರಾಕ್ಷಸವರಃ ಸ ತು ಹೇತಿನಾಮಾ ಕಾಲೇ ಮಹೇನ್ದ್ರಮನುಪಾಸ್ಯ ಹಿ ಶಾಪತೋsಸ್ಯ
ಕೀಟಸ್ತಮಿನ್ದ್ರ ಉತ ತತ್ರ ಸಮಾವಿವೇಶ ಕರ್ಣ್ಣಸ್ಯ ಶಾಪಮುಪಪಾದಯಿತುಂ ಸುತಾರ್ತ್ಥೇ ೧೫.೫೨


ಆಗಲೇ,  ಸೇವಾಕಾಲದಲ್ಲಿ ಮಹೇಂದ್ರನನ್ನು ಸೇವಿಸದೇ ಇಂದ್ರನ ಶಾಪದಿಂದ ಕೀಟವಾಗಿರುವ ‘ಹೇತಿ’ ಎಂಬ ಅಸುರನು ಅವರ ಸಮೀಪದಲ್ಲೇ ಇದ್ದ. ತನ್ನ ಮಗನಿಗಾಗಿ, ಕರ್ಣನಿಗೆ ಶಾಪವನ್ನು ಕೊಡಿಸಲು ಇಂದ್ರ ಆ ಕೀಟದೊಳಗೆ ಪ್ರವೇಶಮಾಡಿದ. [ಹೇತಿ ಒಬ್ಬ ರಾಕ್ಷಸ, ಆದರೂ  ದೈವಿಕ ಸ್ವಭಾವದಿಂದ ಇಂದ್ರನ ಸೇವಕನಾಗಿದ್ದ, ಸೇವೆ ಮಾಡಬೇಕಾದ ಕಾಲದಲ್ಲಿ ಮರೆತಿದ್ದ ಕಾರಣದಿಂದ ಇಂದ್ರನಿಂದ ಶಾಪಕ್ಕೊಳಗಾಗಿ ಕೀಟರೂಪದಲ್ಲಿದ್ದ].

ಕರ್ಣ್ಣಃ ಸಕೀಟತನುಗೇನ ಕಿರೀಟಿನೈವ ಹ್ಯೂರೋರಧಸ್ತನತ ಓಪರಿಗಾತ್ವಚಶ್ಚ
ವಿದ್ಧಃ ಶರೇಣ ಸ ಯಥಾ ರುಧಿರಸ್ಯ ಧಾರಾಂ ಸುಸ್ರಾವ ತಂ ವಿಗತನಿದ್ರ ಇವಾsಹ ರಾಮಃ ೧೫.೫೩

ಕೀಟದ ದೇಹದ ಒಳಗಡೆ ಇರುವ ಇಂದ್ರನಿಂದಲೇ, ಕರ್ಣನ ತೊಡೆಯ ಕೆಳಗಿನಿಂದ ಮೇಲಿನತನಕ ಬಾಣದಿಂದ ಸೀಳಿದಂತೆ  ಕೊರೆಯಲ್ಪಟ್ಟಾಗ, ಕರ್ಣ ರಕ್ತದ ಧಾರೆಯನ್ನು ಹರಿಸಿದ. ಆಗ ಪರಶುರಾಮನು  ನಿದ್ರೆಯಿಂದ ಎಚ್ಚೆತ್ತವನಂತೆ ಎದ್ದು ಕರ್ಣನನ್ನು ಕುರಿತು ಮಾತನಾಡಿದ:

ಕಿಂ ತ್ವಂ ನ ಚಾಲಯಸಿ ಮಾಂ ರುಧಿರಪ್ರಸೇಕೇ ಪ್ರಾಪ್ತೇsಪಿ ಪಾವನವಿರೋಧಿನಿ ಕೋsಸಿ ಚೇತಿ
ತಂ ಪ್ರಾಹ ಕರ್ಣ್ಣ ಇಹ ನೈವ ಮಯಾ ವಿಧೇಯೋ ನಿದ್ರಾವಿರೋಧ ಇತಿ ಕೀಟ ಉಪೇಕ್ಷಿತೋ ಮೇ೧೫.೫೪

‘ಶುದ್ಧಿಗೆ ವಿರುದ್ಧವಾದ(ಪಾವಿತ್ರ್ಯಕ್ಕೆ ಪ್ರತಿಕೂಲವಾದ) ರಕ್ತದ ಹೊಳೆಯಲ್ಲಿಯೂ ಕೂಡಾ ನೀನು ನನ್ನನ್ನು ಎಬ್ಬಿಸುವುದಲ್ಲವೇ ? ನನಗೆ ನಿನ್ನ ಮೇಲೆ ಅನುಮಾನ ಬರುತ್ತಿದೆ. ಯಾರು   ನೀನು’ ಎಂದು ಪ್ರಶ್ನಿಸುತ್ತಾನೆ ಪರಶುರಾಮ. ಆಗ ಕರ್ಣ ಹೇಳುತ್ತಾನೆ: ‘ನನ್ನಿಂದಾಗಿ ನಿಮ್ಮ ನಿದ್ರಾಭಂಗವಾಗಕೂಡದು ಎಂದು ಕೀಟವನ್ನು ಉಪೇಕ್ಷಿಸಿದೆ’ ಎಂದು. 
[ನರರಕ್ತ ಎನ್ನುವುದು ಕ್ಷತ್ರಿಯರಿಗೆ ಪಾವನವಾದರೂ ಕೂಡಾ, ಅದು ಬ್ರಾಹ್ಮಣರಿಗೆ ಅಪವಿತ್ರ. ಕರ್ಣ ಬ್ರಾಹ್ಮಣನಾಗಿದ್ದರೆ ಅದನ್ನು ತಿಳಿದು ಪರಶುರಾಮನನ್ನು ಎಬ್ಬಿಸಬೇಕಿತ್ತು. ಆದರೆ ಆತ ತಾನು ಬ್ರಾಹ್ಮಣ ಎಂದು ಸುಳ್ಳು ಹೇಳಿ ಪರಶುರಾಮನ ಶಿಷ್ಯನಾಗಿದ್ದ]

ಜಾತ್ಯಾsಸ್ಮಿ ಸೂತ ಉತ ತೇ ತನಯೋsಸ್ಮಿ ಸತ್ಯಂ ತೇನಾಸ್ಮಿ ವಿಪ್ರ ಇತಿ ಭಾರ್ಗ್ಗವವಂಶಜೋsಹಮ್
ಅಗ್ರೇsಬ್ರವಂ ಭವತ ಈಶ ನಹಿ ತ್ವದನ್ಯೋ ಮಾತಾ ಪಿತಾ ಗುರುತರೋ ಜಗತೋsಪಿ ಮುಖ್ಯಃ ೧೫.೫೫

ಜಾತಿಯಿಂದ ನಾನು ಸೂತನಾಗಿದ್ದೇನೆ ನಿಜ. ಆದರೆ ನಾನು ನಿನ್ನ ಮಗನೂ ಆಗಿರುವುದು ಸತ್ಯ. ಆ ಕಾರಣದಿಂದ ನಾನು ಭೃಗುಕುಲದಲ್ಲಿ ಹುಟ್ಟಿದ ಬ್ರಾಹ್ಮಣ ಎಂದು ಹೇಳಿದೆ. ಒಡೆಯನೇ, ನಿನಗಿಂತ ಅತಿರಿಕ್ತವಾಗಿ ಮಾತಾ, ಪಿತಾ, ಗುರು ಈ ಜಗತ್ತಿಗೆ ಇನ್ನಾರು? ಈ ಅಭಿಪ್ರಾಯವಿಟ್ಟು ನಾನು ನಿನ್ನ ತನಯ ಎಂದು ಹೇಳಿದೆ’ ಎನ್ನುತ್ತಾನೆ ಕರ್ಣ.