ಅಥಾsಸಸಾದ ಸೌಭರಾಡ್ ಹರಿಂ ಶರಾಮ್ಬುವರ್ಷಣಃ ।
ಹರಿಃ ಶರಂ
ಯಮೋಪಮಂ ಮುಮೋಚ ತಸ್ಯ ವಕ್ಷಸಿ ॥೧೭.೧೬೪॥
ರುಗ್ಮಿ ಸೋತನಂತರ ಸೌಭಸಾಲ್ವನು ಬಾಣಗಳ
ಮಳೆಗರೆಯುವವನಾಗಿ ಪರಮಾತ್ಮನನ್ನು ಕುರಿತು ತೆರಳಿದನು. ಪರಮಾತ್ಮನು ಯಮದಂಡದಂತೆ ಇರುವ ಬಾಣವನ್ನು
ಆ ಸಾಲ್ವನ ವಕ್ಷಸ್ಥಳಕ್ಕೆ ಬಿಟ್ಟನು.
ಶರೇಣ ತೇನ
ಪೀಡಿತಃ ಪಪಾತ ಮನ್ದಚೇಷ್ಟಿತಃ ।
ಚಿರಾತ್ತಸಙ್ಜ್ಞಕೋsಗಮತ್ ತ್ರಿನೇತ್ರತೋಷಣೇಚ್ಛಯಾ ॥೧೭.೧೬೫॥
ಆ ಬಾಣದಿಂದ ಪೀಡಿತನಾಗಿ ಒದ್ದಾಡುತ್ತಾ ಬಿದ್ದ
ಸಾಲ್ವನು, ಬಹಳ ಹೊತ್ತಿನ
ನಂತರ ಮೂರ್ಛೆ ಬಂದವನಾಗಿ ಮೇಲೆದ್ದು, ರುದ್ರನನ್ನು ಪ್ರೀತಿಗೊಳಿಸಲೋಸುಗ ತೆರಳಿದನು(ರುದ್ರನನ್ನು
ಕುರಿತು ತಪಸ್ಸನ್ನಾಚರಿಸಲು ಕಾಡಿಗೆ ತೆರಳಿದನು)
ಸಮಸ್ತರಾಜಸನ್ನಿಧಾವಯಾದವಾಂ
ಮಹೀಮಹಮ್ ।
ಕರಿಷ್ಯ ಇತ್ಯುದೀರ್ಯ
ಸ ವ್ಯಧಾತ್ ತಪೋsತಿದುಶ್ಚರಮ್ ॥೧೭.೧೬೬॥
ಎಲ್ಲಾ ರಾಜರ ಸಮಕ್ಷಮದಲ್ಲಿ ಸೌಭಸಾಲ್ವನು “ನಾನು ಭೂಮಿಯನ್ನು ಯಾದವಹೀನರನ್ನಾಗಿ ಮಾಡುತ್ತೇನೆ” ಎಂದು ಪ್ರತಿಜ್ಞೆ ಮಾಡಿ, ಅತ್ಯಂತ ದುಶ್ಚರವಾದ
ತಪಸ್ಸನ್ನು ಮಾಡಿದನು.
ಅಥೋ ವಿವೇಶ
ಕೇಶವಃ ಪುರೀಂ ಕುಶಸ್ಥಲೀಂ ವಿಭುಃ ।
ಪ್ರಿಯಾಯುತೋsಬ್ಜಜಾದಿಭಿಃ ಸಮೀಡಿತಃ ಸುರೇಶ್ವರೈಃ ॥ ೧೭.೧೬೭॥
ತದನಂತರ, ಸರ್ವಸಮರ್ಥನಾದ ಕೇಶವನು ರುಗ್ಮಿಣಿಯಿಂದ ಕೂಡಿಕೊಂಡು, ಚತುರ್ಮುಖನೇ ಮೊದಲಾಗಿರುವ ದೇವತೆಗಳಿಂದ ಸ್ತುತನಾಗಿ, ದ್ವಾರಕಾ
ಪಟ್ಟಣವನ್ನು ಪ್ರವೇಶಮಾಡಿದನು.
ಪುರಾ ತತೋ
ಹಲಾಯುಧಃ ಪ್ರಿಯಾಂ ನಿಜಾಂ ಪುರಾSಪಿ ಹಿ ।
ಸ
ವಾರುಣೀಸಮಾಹ್ವಯಾಮವಾಪ ರೈವತೀಂ ವಿಭುಃ ॥೧೭.೧೬೮ ॥
ಇದಕ್ಕೂ ಮೊದಲು ಬಲರಾಮನು, ಮೂಲರೂಪದಲ್ಲಿಯೂ ಕೂಡಾ ವಾರುಣೀ ಎಂದು ಹೆಸರುಳ್ಳ, ತನ್ನ ಹೆಂಡತಿಯಾದ, ಭೂಮಿಯಲ್ಲಿ ರೇವತ ರಾಜನ ಮಗಳಾಗಿ ಅವತರಿಸಿರುವ ರೇವತೀದೇವಿಯನ್ನು ಮದುವೆಯಾದನು.
(ಈ ಹಿನ್ನೆಲೆಯಲ್ಲಿರುವ ಕಥೆಯನ್ನು ವಿವರಿಸುತ್ತಾರೆ: )
ಪತಿಂ ಯಥಾsನುರೂಪಿಣಂ ತದೀಯಮೇವ ಪೂರ್ವಕಮ್ ।
ಪಿತಾ ತದೀಯ
ಐಚ್ಛತ ಪ್ರವೇತ್ತುಮಬ್ಜಸಮ್ಭವಾತ್ ॥೧೭.೧೬೯॥
ರೇವತೀದೇವಿಯ
ತಂದೆಯು ಅವಳ ರೂಪಕ್ಕೆ ಅನುರೂಪನಾದ,
ಪೂರ್ವಜನ್ಮದಲ್ಲಿ ಅವಳ ಗಂಡನಾಗಿರತಕ್ಕವನೇ ಅವಳಿಗೆ ಗಂಡನಾಗಿ ಸಿಗಬೇಕು ಎಂದು ಬಯಸಿ, ಅಂಥಹ ಗಂಡು ಯಾರೆಂದು ಬ್ರಹ್ಮದೇವರಿಂದ ತಿಳಿಯಲು ಬಯಸಿದ.
ಸ ತತ್ಸದೋ
ಗತೋ ವರಾತ್ ತದೀಯತಃ ಪ್ರಗೀತಿಕಾಮ್ ।
ನಿಶಮ್ಯ
ನಾವಿದದ್ ಗತಂ ಯುಗೋರುಕಾಲಪರ್ಯ್ಯಯಮ್ ॥೧೭.೧೭೦॥
ಸದೇಹನಾಗಿ ಸತ್ಯಲೋಕಕ್ಕೆ ಹೋಗಿ ಬರಬಲ್ಲ ವರವನ್ನು ಬ್ರಹ್ಮದೇವರಿಂದ ಹೊಂದಿದ್ದ ಆತನು, ಮಗಳೊಂದಿಗೆ
ಸತ್ಯಲೋಕಕ್ಕೆ ತೆರಳಿದನು. ಬ್ರಹ್ಮದೇವರ ಆಸ್ಥಾನದಲ್ಲಿ ನಡೆಯುತ್ತಿರುವ ಗಾನ ವಿಶೇಷವನ್ನು ಕೇಳುತ್ತಾ, ಅವನಿಗೆ ಯುಗ-ಯುಗಗಳೇ
ಸರಿದು ಹೋದದ್ದು ತಿಳಿಯಲಿಲ್ಲ.
ನರಾನಯೋಗ್ಯಗೀತಿಕಾ
ವಿಮೋಹಯೇತ್ ತತೋ ನೃಪಃ ।
ಸುಮೂಢಬುದ್ಧಿರನ್ತತೋsಲ್ಪಕಾಲ ಇತ್ಯಮನ್ಯತ ॥೧೭.೧೭೧॥
ಮನುಷ್ಯರನ್ನು ಅವರ ಯೋಗ್ಯತೆಗಿಂತ ಮೇಲ್ಪಟ್ಟ ವಿಷಯಗಳು (ಗೀತೆ, ಸೌಂದರ್ಯ, ಮೊದಲಾದವುಗಳು) ಮೋಹಗೊಳಿಸುತ್ತವೆ. ಆ ಕಾರಣದಿಂದ ರಾಜನು
ಬ್ರಹ್ಮದೇವರ ಸಭೆಯಲ್ಲಿನ ಗಾನವಿಶೇಷದಿಂದ ಅತ್ಯಂತ ಮೋಹಗೊಂಡ ಬುದ್ಧಿಯುಳ್ಳವನಾಗಿ, ‘ಅಲ್ಪಕಾಲವಷ್ಟೇ
ಕಳೆಯಿತು’ ಎಂದು ತಿಳಿದನು.
ಸ ಮೂರ್ಚ್ಛಿತಃ
ಪ್ರಬೋಧಿತೋsಬ್ಜಜೇನ ತಂ ತ್ವಪೃಚ್ಛತ ।
ಸುತಾಪತಿಂ
ಬಲಂ ಚ ಸೋsಬ್ರವೀದ್ ಯುಗಾತ್ಯಯೇ ಬಹೌ ॥೧೭.೧೭೨॥
ಹೀಗೆ ಬಹಳ ಯುಗಗಳು ಉರುಳಲು, ಮೂರ್ಛೆಹೊಂದಿದ್ದ ಅವನು ಬ್ರಹ್ಮದೇವರಿಂದ ಎಬ್ಬಿಸಲ್ಪಟ್ಟವನಾಗಿ,
ಬ್ರಹ್ಮನಿಂದ ತನ್ನ ಮಗಳಿಗೆ ಗಂಡನನ್ನು ಕೇಳಿದನು. ಬ್ರಹ್ಮದೇವರಾದರೋ, ಆ ರೇವತಿಗೆ ಬಲರಾಮನನ್ನು ಗಂಡನನ್ನಾಗಿ ಹೇಳಿದರು.
ಸ ರೈವತೋ
ಬಲಾಯ ತಾಂ ಪ್ರದಾಯ ಗನ್ಧಮಾದನಮ್ ।
ಗತೋsತ್ರ ಚೀರ್ಣ್ಣಸತ್ತಪಾ ಅವಾಪ ಕೇಶವಾನ್ತಿಕಮ್ ॥೧೭.೧೭೩॥
ಸತ್ಯಲೋಕದಿಂದ ಹಿಂದಿರುಗಿದ ಆ ರೈವತ ರಾಜನು, ಬಲರಾಮನಿಗೆ ತನ್ನ ಮಗಳನ್ನಿತ್ತು, ಗನ್ಧಮಾದನ
ಪರ್ವತಕ್ಕೆ ತೆರಳಿ, ಆ ಪರ್ವತದಲ್ಲಿ ತಪಸ್ಸನ್ನು ಮಾಡುತ್ತಾ, ಪರಮಾತ್ಮನ
ಬಳಿ ತೆರಳಿದನು.
ಬಲೋsಪಿ ತಾಂ ಪುರಾತನಪ್ರಮಾಣಸಮ್ಮಿತಾಂ ವಿಭುಃ ।
ಹಲೇನ ಚಾSಜ್ಞಯಾ ಸಮಾಂ ಚಕಾರ ಸತ್ಯವಾಞ್ಛಿತಃ ॥೧೭.೧೭೪॥
ಸತ್ಯಕಾಮನೂ, ಸಮರ್ಥನೂ ಆದ ಬಲರಾಮನು, ಪೂರ್ವಯುಗದಲ್ಲಿನ ಮನುಷ್ಯರ ಎತ್ತರವಿರುವ ಅವಳನ್ನು, ತನ್ನ
ನೇಗಿಲಿನಿಂದ ಜಗ್ಗಿ, ತನ್ನ ಎತ್ತರಕ್ಕೆ ಸಮಳನ್ನಾಗಿ ಮಾಡಿದನು.
ತಯಾ ರತಃ
ಸುತಾವುಭೌ ಶಠೋಲ್ಮುಕಾಭಿಧಾವಧಾತ್ ।
ಪುರಾSರ್ಯಮಾಂಶಕೌ ಸುರಾವುದಾರಚೇಷ್ಟಿತೋ ಬಲಃ ॥೧೭.೧೭೫॥
ಆ ಸುವೃತೆಯಿಂದ ಸಂತಸಪಟ್ಟವನಾದ ಬಲರಾಮನು, ಮೊದಲು ‘ಆರ್ಯಮ’ ಹಾಗೂ ‘ಅಂಶಕ’ ಎಂದು ಹೆಸರುಳ್ಳ
ದೇವತೆಗಳಾದವರನ್ನು, ಶಠ ಹಾಗೂ ಉಲ್ಮುಕ ಎಂಬ
ಹೆಸರಿನ ಮಕ್ಕಳಾಗಿ ಪಡೆದನು.