‘ಸೃಷ್ಟಾ
ಬ್ರಹ್ಮಾದಯೋ ದೇವಾ ನಿಹತಾ ಯೇನ ದಾನವಾಃ ।
‘ತಸ್ಮೈ ದೇವಾದಿದೇವಾಯ
ನಮಸ್ತೇ ಶಾರ್ಙ್ಗಧಾರಿಣೇ’ ॥೨.೬೩॥
ಇದು ಸಭಾಪರ್ವದ ೪೫ ನೇ ಅಧ್ಯಾಯದ ಹದಿನಾರನೇ ಶ್ಲೋಕ. ಈ ಶ್ಲೋಕದ ಮೇಲ್ನೋಟದ ಅರ್ಥ ಹೀಗೆ
ಕಾಣುತ್ತದೆ: ‘ಯಾರಿಂದ ಬ್ರಹ್ಮನೇ ಮೊದಲಾದ ದೇವತೆಗಳು ಸೃಷ್ಟಿಸಲ್ಪಟ್ಟರೋ, ಯಾರಿಂದ ದಾನವರು
ಕೊಲ್ಲಲ್ಪಟ್ಟರೋ , ಅಂತಹ ದೇವತೆಗಳಿಗೂ ದೇವನಾದ,
ಶಾರ್ಙ್ಗವೆಂಬ ಬಿಲ್ಲನ್ನು ಧರಿಸಿದ ನಿನಗೆ ನಮಸ್ಕಾರ’.
[ಈ ಶ್ಲೋಕವನ್ನು ಮೇಲಿನ ಅರ್ಥದಿಂದ ನೋಡಿದಾಗ ಅಲ್ಲಿ ನಾರಾಯಣನ
ಸರ್ವೋತ್ತಮತ್ವವೇನೋ ಸ್ಪಷ್ಟವಾಗುತ್ತದೆ. ಆದರೆ ಜೊತೆಗೆ ಇಲ್ಲೊಂದು ಪ್ರಶ್ನೆ
ಮೂಡುತ್ತದೆ. ಮೇಲ್ನೋಟದಲ್ಲಿ ನೋಡಿದರೆ: ಭಗವಂತ ದೇವತೆಗಳನ್ನು ಸೃಷ್ಟಿ ಮಾಡುತ್ತಾನೆ(ಸೃಷ್ಟಾ
ಬ್ರಹ್ಮಾದಯೋ ದೇವಾಃ), ದಾನವರನ್ನು ಸಂಹಾರ ಮಾಡುತ್ತಾನೆ(ನಿಹತಾ ಯೇನ ದಾನವಾಃ) ಎಂದು ಇಲ್ಲಿ
ಹೇಳಲಾಗಿದೆ. ಮಹಾಭಾರತದಲ್ಲೇ
ಇನ್ನೊಂದು ಕಡೆ ಬ್ರಹ್ಮನ ಮಗನಾದ ಕಾಶ್ಯಪ ಮತ್ತು ಆತನ ಪತ್ನಿ ದಿತಿಯಲ್ಲಿ ದೈತ್ಯರು ಹುಟ್ಟಿದರು,
ಅವರನ್ನೆಲ್ಲರನ್ನು ಸೃಷ್ಟಿ ಮಾಡಿದ್ದು ಆ ಭಗವಂತ ಎಂದಿದೆ. ವೇದೋಪನಿಷತ್ತಿನಲ್ಲಿ ಎಲ್ಲರನ್ನೂ
ಸೃಷ್ಟಿ ಮಾಡುವವನು ಹಾಗೂ ಸಂಹಾರ ಮಾಡುವವನು ಭಗವಂತ ಎಂದಿದೆ. ಹೀಗಿರುವಾಗ ಯಾವುದು ಸರಿ? ಈ ಶ್ಲೋಕದ ತಳಸ್ಪರ್ಶಿ ಅಭಿಪ್ರಾಯ ಏನು? ಈ ಎಲ್ಲಾ ಪ್ರಶ್ನೆಗೆ ಆಚಾರ್ಯರು ಮುಂದಿನ ಶ್ಲೋಕಗಳಲ್ಲಿ
ಉತ್ತರ ನೀಡಿದ್ದಾರೆ].
ಸ್ರಷ್ಟೃತ್ವಂ ದೇವಾನಾಂ ಮುಕ್ತಿಸ್ರಷ್ಟೃತ್ವಮುಚ್ಯತೇ ನಾನ್ಯತ್ ।
ಉತ್ಪತ್ತಿರ್ದ್ದೈತ್ಯಾನಾಮಪಿ
ಯಸ್ಮಾತ್ ಸಮ್ಮಿತಾ ವಿಶೇಷೋsಯಮ್ ॥೨.೬೪॥
ಅಥ ಚ ದೈತ್ಯಹತಿಸ್ತಮಸಿ ಸ್ಥಿರಾ ನಿಯತಸಂಸ್ಥಿತಿರೇವ ನಚಾನ್ಯಥಾ ।
ತನುವಿಭಾಗಕೃತಿಃ ಸಕಲೇಷ್ವಿಯಂ ನಹಿ ವಿಶೇಷಕೃತಾ ಸುರದೈತ್ಯಗಾ ॥೨.೬೫॥
ತಮಿಮಮೇವ ಸುರಾಸುರಸಞ್ಚಯೇ ಹರಿಕೃತಂ ಪ್ರವಿಶೇಷಮುದೀಕ್ಷಿತುಮ್ ।
ಪ್ರತಿವಿಭಜ್ಯ ಚ ಭೀಮಸುಯೋಧನೌ ಸ್ವಪರಪಕ್ಷಭಿದಾ ಕಥಿತಾ ಕಥಾ ॥೨.೬೬॥
ದೇವತೆಗಳನ್ನು ಸೃಷ್ಟಿ ಮಾಡಿದ್ದೂ(ದೇಹ ಕೊಟ್ಟದ್ದೂ) ದೇವರೇ,
ದೈತ್ಯರನ್ನು ಸೃಷ್ಟಿ ಮಾಡಿದ್ದೂ ದೇವರೇ. ದೇವತೆಗಳನ್ನು ಸಂಹಾರ ಮಾಡುವುದೂ ದೇವರೇ, ದೈತ್ಯರನ್ನು
ನಾಶಮಾಡುವುದೂ ದೇವರೇ. ಈ ವಿಷಯದಲ್ಲಿ ಯಾವುದೇ ಗೊಂದಲವಿಲ್ಲ. ಮೇಲಿನ ಶ್ಲೋಕದಲ್ಲಿ ‘ಸೃಷ್ಟಾ ಬ್ರಹ್ಮಾದಯೋ ದೇವಾಃ’ ಎಂದರೆ: ಬ್ರಹ್ಮಾದಿ
ದೇವತೆಗಳಿಗೆ ಮುಕ್ತಿಯನ್ನು ಕೊಡುವುದು ಎಂದರ್ಥವೇ
ಹೊರತು, ದೇಹವನ್ನು ಕೊಡುವುದು ಎಂದರ್ಥವಲ್ಲ. ಅದೇ ರೀತಿ ‘ನಿಹತಾ ಯೇನ ದಾನವಾಃ’ ಎಂದರೆ ದೈತ್ಯರನ್ನು ತಮಸ್ಸಿನಲ್ಲಿ ಹಾಕುವುದು ಎಂದರ್ಥ.
ಹೀಗಾಗಿ “ಯಾರು ಬ್ರಹ್ಮಾದಿ ದೇವತೆಗಳಿಗೆ ಮುಕ್ತಿಯನ್ನು
ನೀಡುತ್ತಾರೋ, ಯಾರು ದಾನವರನ್ನು ಅಂಧಂತಮಸ್ಸಿಗೆ ಹಾಕುತ್ತಾರೋ, ಅಂತಹ ದೇವಾದಿ ದೇವನಾದ
ಶಾರ್ಙ್ಗಧಾರಿ ಭಗವಂತನಿಗೆ ನಮಸ್ಕಾರ” ಎನ್ನುವುದು ಮೇಲಿನ ಶ್ಲೋಕದ ನಿಜವಾದ ಅಭಿಪ್ರಾಯ. ಇದು ಇಡೀ
ಮಹಾಭಾರತದ ಕಥೆಯ ಸಾರ. ಇಲ್ಲಿ ಬಂದಿರುವ
‘ಸುರ’ ಮತ್ತು ‘ದೈತ್ಯ’ ಎನ್ನುವ ಪದದ ಅರ್ಥವನ್ನು
ಕೇವಲ ದೇವತೆಗಳು ಮತ್ತು ದಾನವರು ಎಂದು ತೆಗೆದುಕೊಳ್ಳದೇ, ಸಾತ್ತ್ವಿಕರು ಮತ್ತು ತಾಮಸರು ಎಂಬ ಅರ್ಥದಿಂದಲೂ
ತಿಳಿಯಬೇಕು.
ಒಟ್ಟಿನಲ್ಲಿ ಹೇಳಬೇಕೆಂದರೆ: ‘ಸೃಷ್ಟಾ ಬ್ರಹ್ಮಾದಯೋ ದೇವಾ
ನಿಹತಾ ಯೇನ ದಾನವಾಃ’ ಎನ್ನುವುದು ಮಹಾಭಾರತದ ಸಂಗ್ರಹ ಸಾರಾಂಶ(synopsis).
‘ಸೃಷ್ಟಾ ಬ್ರಹ್ಮಾದಯೋ ದೇವಾಃ’ ಎನ್ನುವುದು ಭೀಮಸೇನನನ್ನು ಸೂಚಿಸಿದರೆ, ‘ನಿಹತಾ
ಯೇನ ದಾನವಾಃ’ ಎನ್ನುವುದು ದುರ್ಯೋಧನನ್ನು ಸೂಚಿಸುತ್ತದೆ. ಎರಡಾಗಿ ವಿಭಾಗಗೊಂಡಿರುವ
ಇಡೀ ಜಗತ್ತಿನಲ್ಲಿ ಒಂದು ಕಡೆ ಭೀಮಸೇನನ
ಪಕ್ಷದವರಿದ್ದಾರೆ ಹಾಗೂ ಇನ್ನೊಂದು ಕಡೆ ದುರ್ಯೋಧನನ ಪಕ್ಷದವರಿದ್ದಾರೆ. ಭೀಮನ ಪಕ್ಷ ಭಗವಂತನಿಗೆ
ಸಮ್ಮತವಾದ ಪಕ್ಷವಾದರೆ , ದುರ್ಯೋಧನನ ಪಕ್ಷ ಭಗವಂತನಿಗೆ ಸಮ್ಮತವಲ್ಲದ ಪಕ್ಷ. ಈ ರೀತಿ ಇಡೀ ಜಗತ್ತನ್ನು
ಎರಡಾಗಿ ವಿಭಾಗ ಮಾಡಿ, ಅದರ ಗತಿ
ಅಂತಿಮವಾಗಿ ಏನಾಗುತ್ತದೆ ಎನ್ನುವುದನ್ನು ಮಹಾಭಾರತವೆಂಬ ಕಥೆಯ ಆಧಾರದ ಮೇಲೆ ವೇದವ್ಯಾಸರು
ವಿವರಿಸಿದ್ದಾರೆ. ಹೀಗಾಗಿ ಈ ಶ್ಲೋಕದಿಂದ ಎರಡು
ಸಂಗತಿ ಸಿದ್ಧವಾಗುತ್ತದೆ: ಒಂದು ಪರಮಾತ್ಮನ ಸರ್ವೋತ್ತಮತ್ವ ಹಾಗೂ
ಇನ್ನೊಂದು ಸಾತ್ತ್ವಿಕ ಹಾಗೂ ತಾಮಸರ ಗತಿ
ವೈವಿಧ್ಯ. ಮಹಾಭಾರತದ ಪೂರ್ವಭಾಗದಲ್ಲೇ ಬಂದಿರುವ ಈ ಶ್ಲೋಕ
ಜಗತ್ತಿನ ನಡೆ ಮತ್ತು ಭಗವಂತನ ಸರ್ವೋತ್ತಮತ್ವವನ್ನು ಸ್ಪಷ್ಟಪಡಿಸುವ ಶ್ಲೋಕವಾಗಿದೆ.
‘ನಮೋ ಭಗವತೇ ತಸ್ಮೈ
ವ್ಯಾಸಾಯಾಮಿತತೇಜಸೇ ।
‘ಯಸ್ಯ ಪ್ರಸಾದಾದ್
ವಕ್ಷ್ಯಾಮಿ ನಾರಾಯಣಕಥಾಮಿಮಾಮ್’ ॥೨.೬೭॥
ಇದು ಆದಿಪರ್ವದ ಒಂದನೇ ಅಧ್ಯಾಯದ ೩೨ನೆಯ ಶ್ಲೋಕ. [ಈ ಶ್ಲೋಕ ಇಂದಿನ ಪಾಠದಲ್ಲೂ
ಲಭ್ಯವಿದೆ]. ಇಲ್ಲಿ ಸೂತ ಪುರಾಣಿಕರು ಹೇಳುತ್ತಾರೆ: “ಅಮಿತವಾದ ಗುಣಗಳುಳ್ಳ ಷಡ್ಗುಣೈಶ್ವರ್ಯ
ಸಂಪನ್ನನಾದ ವೇದವ್ಯಾಸರಿಗೆ ನಮಸ್ಕಾರ. ವೇದವ್ಯಾಸರ ಅನುಗ್ರಹದಿಂದ ಈ ನಾರಾಯಣನ ಕಥೆಯನ್ನು
ಹೇಳುತ್ತೇನೆ” ಎಂದು. ಈ ಮಾತಿನಿಂದ ಸ್ಪಷ್ಟವಾಗಿ ಇದು ಶ್ರೀಮನ್ನಾರಾಯಣನನ್ನು ಕೇಂದ್ರೀಕರಿಸಿರುವ
ಗ್ರಂಥ ಎನ್ನುವುದು ತಿಳಿಯುತ್ತದೆ.
‘ವಾಸುದೇವಸ್ತು
ಭಗವಾನ್ ಕೀರ್ತ್ತಿತೋsತ್ರ ಸನಾತನಃ’ ।
‘ಪ್ರತಿಬಿಮ್ಬಮಿವಾsದರ್ಶೇ ಯಂ ಪಶ್ಯನ್ತ್ಯಾತ್ಮನಿ ಸ್ಥಿತಮ್’ ॥೨.೬೮॥
ಈ ಮಹಾಭಾರತದಲ್ಲಿ ಷಡ್ಗುಣೈಶ್ವರ್ಯ ಸಂಪನ್ನನಾದ, ಅತ್ಯಂತ
ಪ್ರಾಚೀನನಾದ ಶ್ರೀಕೃಷ್ಣನು ಕೀರ್ತಿತನಾಗಿದ್ದಾನೆ. ಯಾವ
ಶ್ರೀಕೃಷ್ಣನನ್ನು ಜ್ಞಾನಿಗಳು ತಮ್ಮ ಅಂತರ್ಯಾಮಿ ಎಂದು ಕಾಣುತ್ತಾರೋ, ಅಂತಹ ಪರಮಾತ್ಮನು ಮಹಾಭಾರತದಿಂದ
ಪ್ರತಿಪಾಧ್ಯನಾಗಿದ್ದಾನೆ.
[ಮಹಾಭಾರತ ಎನ್ನುವುದು ಒಂದು ಕನ್ನಡಿ. ಅದರಲ್ಲಿ ನಮ್ಮ ಪರಿಸರ,
ನಾವು ಮತ್ತು ನಮ್ಮ ಅಂತರ್ಯಾಮಿಯಾದ ಭಗವಂತ
ಗೋಚರಿಸುತ್ತಾನೆ. ಮಹಾಭಾರತವನ್ನು ಯಾವ ಕಾಲದ
ಹಿನ್ನೆಲೆ ಇಟ್ಟುಕೊಂಡು ನೋಡಿದರೂ ಕೂಡಾ ಆ ಕಾಲದ ಪ್ರತಿಬಿಂಬ ಗೋಚರಿಸುತ್ತದೆ. ಇದು ಮಹಾಭಾರತದ ಸ್ವಾರಸ್ಯ].
‘ನಾಸ್ತಿ
ನಾರಾಯಣಸಮಂ ನ ಭೂತಂ ನ ಭವಿಷ್ಯತಿ ।
‘ಏತೇನ
ಸತ್ಯವಾಕ್ಯೇನ ಸರ್ವರ್ತ್ಥಾನ್ ಸಾಧಯಾಮ್ಯಹಮ್’ ॥೨.೬೯॥
ಆದ್ಯನ್ತಯೋರಿತ್ಯವದತ್ ಸ ಯಸ್ಮಾದ್ ವ್ಯಾಸಾತ್ಮಕೋ
ವಿಷ್ಣುರುದಾರಶಕ್ತಿಃ ।
ತಸ್ಮಾತ್ ಸಮಸ್ತಾ ಹರಿಸದ್ಗುಣಾನಾಂ ನಿರ್ಣ್ಣೀತಯೇ ಭಾರತಗಾ ಕಥೈಷಾ॥೨.೭೦॥
ನಾಸ್ತಿ ನಾರಾಯಣಸಮಂ.. ಎನ್ನುವ ಮಾತನ್ನು ಆದಿಪರ್ವದ ಮೊದಲನೇ
ಅಧ್ಯಾಯದ ೩೪ನೆಯ ಶ್ಲೋಕದಲ್ಲಿ ಕಾಣುತ್ತೇವೆ. ‘ನಾರಾಯಣಗೆ ಸಮ ಈಗಿಲ್ಲ, ಹಿಂದಿಲ್ಲ, ಮುಂದೆ ಬರುವುದಿಲ್ಲ. ಭಗವಂತನಿಗೆ ಸಮ ಎನಿಸಿರುವ ಇನ್ನೊಬ್ಬ ವ್ಯಕ್ತಿಯನ್ನು ನಾವು ಎಂದೂ ಕಾಣಲು
ಸಾಧ್ಯವಿಲ್ಲ’. “ಈ ರೀತಿಯಾದ ವೇದಕ್ಕೆ ಸಮ್ಮತವಾದ ಸತ್ಯವಾಕ್ಯದಿಂದ ಎಲ್ಲಾ ಅರ್ಥ ಪ್ರಯೋಜನವನ್ನು
ಪಡೆಯುತ್ತೇನೆ” ಎಂದು ಸೂತಪುರಾಣಿಕರು ಹೇಳುವುದನ್ನು ನಾವಿಲ್ಲಿ ಕಾಣುತ್ತೇವೆ..
ಆದಿ ಮತ್ತು ಅಂತ್ಯ
ಎರಡರಲ್ಲಿಯೂ ಕೂಡಾ ವೇದವ್ಯಾಸರು ಇದನ್ನು ಸ್ಫುಟವಾಗಿ ಹೇಳಿದ್ದಾರೆ. ಅದರಿಂದಾಗಿ
ಪರಮಾತ್ಮನ ಸದ್ಗುಣಗಳ ನಿರ್ಣಯಕ್ಕಾಗಿಯೇ ಈ ಮಹಾಭಾರತ ಎನ್ನುವುದು ಹೊರಟಿದೆ ಎಂದಿದ್ದಾರೆ
ಆಚಾರ್ಯರು.
[ಮಹಾಭಾರತದ ಆದಿಯಲ್ಲಿ ಮತ್ತು ಅಂತ್ಯದಲ್ಲಿ
ಹೇಳಿರುವ ಮಾತುಗಳನ್ನು ನೋಡಿದೆವು. ಈಗ ಇಲ್ಲಿ ಆಚಾರ್ಯರು ಮಹಾಭಾರತದ
ಮಧ್ಯ ಭಾಗದಲ್ಲಿರುವ ಕೆಲವು ವಾಕ್ಯಗಳ ಉಲ್ಲೇಖ ಮಾಡುವುದನ್ನು ಕಾಣುತ್ತೇವೆ:]
‘ಸತ್ಯಂಸತ್ಯಂ ಪುನಃ
ಸತ್ಯಮುದ್ಧೃತ್ಯ ಭುಜಮುಚ್ಯತೇ ।
‘ವೇದಶಾಸ್ತ್ರಾತ್
ಪರಂ ನಾಸ್ತಿ ನ ದೈವಂ ಕೇಶವಾತ್ ಪರಮ್’ ॥೨.೭೧॥
ಇದು ಮಹಾಭಾರತದ ಪರಿಶಿಷ್ಟದಲ್ಲಿ ಎರಡನೇ ಅಧ್ಯಾಯದ ಹದಿನೈದನೇ ಶ್ಲೋಕ. ಇಲ್ಲಿ ವೇದವ್ಯಾಸರು ಹೇಳುತ್ತಾರೆ:
“ಇದು ಸತ್ಯ, ಇದು ಸತ್ಯ, ಇದು ಸತ್ಯ. ಭುಜಗಳನ್ನು ಮೇಲೆತ್ತಿ ಹೇಳುತ್ತೇನೆ.
ವೇದಶಾಸ್ತ್ರಕ್ಕಿಂತ ಮಿಗಿಲಾದ
ಶಾಸ್ತ್ರವಿಲ್ಲ, ಕೇಶವನಿಗಿಂತ ಮಿಗಿಲಾದ
ದೈವವಿಲ್ಲ” ಎಂದು. ಇದೇ ರೀತಿಯಾದ ಮಾತು ಪಾದ್ಮಪುರಾಣದ ಉತ್ತರಖಂಡದಲ್ಲೂ
ಬರುತ್ತದೆ. [೨೨೩.೭೯]
‘ಆಲೋಡ್ಯ ಸರ್ವಶಾಸ್ತ್ರಾಣಿ ವಿಚಾರ್ಯ್ಯ ಚ ಪುನಃಪುನಃ ।
‘ಇದಮೇಕಂ
ಸುನಿಷ್ಪನ್ನಂ ದ್ಧ್ಯೇಯೋ ನಾರಾಯಣಃ ಸದಾ’ ॥೨.೭೨॥
ಈ ಶ್ಲೋಕವನ್ನು ನಾವು
ಮಹಾಭಾರತದ ಅನುಶಾಸನ ಪರ್ವದ ೧೮೬ನೆಯ
ಅಧ್ಯಾಯದ ಹನ್ನೊಂದನೇ ಶ್ಲೋಕದಲ್ಲಿ ಕಾಣಬಹುದು. ಎಲ್ಲಾ ಶಾಸ್ತ್ರಗಳನ್ನು ಪುನಃಪುನಃ ಬಿಡಿಸಿ
ನೋಡಿದಾಗ ನಮಗೆ ಗೋಚರವಾಗುವುದು:
ನಾರಾಯಣನು ಗಮ್ಯನಾಗಿದ್ದಾನೆ, ಅವನು ವಿಚಿಂತ್ಯನಾಗಿದ್ದಾನೆ ಎನ್ನುವ ಸತ್ಯ. ಹೀಗೆ ಶಾಸ್ತ್ರಗಳಲ್ಲಿ ಮತ್ತೆ ಮತ್ತೆ ಈ ವಿಷಯವನ್ನು
ನೋಡುತ್ತಲೇ ಇರುತ್ತೇವೆ. ಇಂತಹ ನಾರಾಯಣನನ್ನು
ತಿಳಿಸಿಕೊಡುವುದಕ್ಕೆ ಹೊರಟಿರುವ ಗ್ರಂಥ ಮಹಾಭಾರತ.
[“ನಾರಾಯಣನು
ಎಲ್ಲರಿಗಿಂತಲೂ ಮಿಗಿಲು, ಇದು ಎಲ್ಲಾ ಶಾಸ್ತ್ರಗಳ ನಿರ್ಣಯ” ಎಂದು ಶಂಕರಾಚಾರ್ಯರೂ ಕೂಡಾ ತಮ್ಮ ಗ್ರಂಥದಲ್ಲಿ ಪ್ರತಿಪಾದನೆ ಮಾಡಿರುವುದನ್ನು ನಾವು
ಕಾಣಬಹುದು].
‘ಸ್ಮರ್ತ್ತವ್ಯಃ
ಸತತಂ ವಿಷ್ಣುರ್ವಿಸ್ಮರ್ತ್ತವ್ಯೋ ನ ಜಾತುಚಿತ್ ।
‘ಸರ್ವೇ
ವಿಧಿನಿಷೇಧಾಃ ಸ್ಯುರೇತಯೋರೇವ ಕಿಙ್ಕರಾಃ’ ॥೨.೭೩॥
ಈ ಶ್ಲೋಕ ನಾರದ ಪಂಚರಾತ್ರದಲ್ಲಿದೆ[೪.೨.೨೩] ಮತ್ತು ಪದ್ಮಪುರಾಣದ ಉತ್ತರಖಂಡದಲ್ಲಿಯೂ ಇದೆ[೭೧.೧೦೦].
ನಾರಾಯಣನನ್ನು ಯಾವಾಗಲೂ ಸ್ಮರಣೆ ಮಾಡಬೇಕು. ಯಾವ ಕಾರಣಕ್ಕಾಗಿಯೂ
ಭಗವಂತನನ್ನು ಮರೆಯಬಾರದು. ಎಲ್ಲಾ ಶಾಸ್ತ್ರದ ವಿಧಿ ಹಾಗೂ ನಿಷೇಧಗಳು ಇದಕ್ಕಾಗಿಯೇ ಇದೆ.
[‘ಪರಮಾತ್ಮನನ್ನು ಸ್ಮರಣೆ ಮಾಡಿ, ಪರಮಾತ್ಮನನ್ನು ಮರೆಯದಿರಿ’ ಅನ್ನಲಿಕ್ಕಾಗಿಯೇ ಶಾಸ್ತ್ರದ ಬೇರೆಬೇರೆ
ವಿಧಾನಗಳಿವೆ. ಶಾಸ್ತ್ರದಲ್ಲಿ ‘ಈ ರೀತಿ ಆಚರಣೆ
ಮಾಡಬೇಕು’ ಎಂದು ಹೇಳುವುದರ ಹಿಂದೆ ಇರುವ ಸಂದೇಶವೇ ಇದು. ಮಧ್ವಾಚಾರ್ಯರು ತಮ್ಮ ತಂತ್ರಸಾರ ಸಂಗ್ರಹದ ನಾಕನೆಯ ಅಧ್ಯಾಯದಲ್ಲಿ ಹೇಳುವಂತೆ:
ಶೌಚ ಅಂದರೆ ಮಡಿ, ಆಸನ ಅಂದರೆ: ಕುಳಿತುಕೊಳ್ಳುವ ಬಗೆ. ಇವೆಲ್ಲವೂ ಕೇವಲ ಉಪಕರಣ[instrument]. ಪರಮಾತ್ಮನನ್ನು ಮರೆತು ಕೇವಲ ಮಡಿ
ಮಾಡಿದರೆ ಪುಣ್ಯ ಬರುವುದಿಲ್ಲ.
ಪರಮಾತ್ಮನನ್ನು ನೆನೆಯುವುದಕ್ಕಾಗಿ ಹಾಗೂ
ಅವನನ್ನು ಮರೆಯದಿರಲು ಉಪಕರಣವಾಗಿ ಈ ಎಲ್ಲವನ್ನೂ ಹೇಳಲಾಗಿದೆ].
ಮಹಾಭಾರತದಲ್ಲಿ ಸಾಕ್ಷಾತ್ ನಾರಾಯಣನೇ ವೇದವ್ಯಾಸರಾಗಿ ಅವತಾರ
ಮಾಡಿರುವುದು ಎಂದು ಹೇಳುವ ಹಲವಾರು
ಪ್ರಮಾಣಗಳಿವೆ. ಅದರಲ್ಲಿ ಕೆಲವೊಂದನ್ನು ಇಲ್ಲಿ
ಆಚಾರ್ಯರು ಉಲ್ಲೇಖಿಸಿದ್ದಾರೆ.
‘ಕೋ ಹಿ ತಂ
ವೇದಿತುಂ ಶಕ್ತೋ ಯೋ ನ ಸ್ಯಾತ್ ತದ್ವಿಧೋsಪರಃ ।
‘ತದ್ವಿಧಶ್ಚಾಪರೋ
ನಾಸ್ತಿ ತಸ್ಮಾತ್ ತಂ ವೇದ ಸಃ ಸ್ಸ್ವಯಮ್’ ॥೨.೭೪॥
‘ಕೋ ಹಿ ತಂ
ವೇದಿತುಂ ಶಕ್ತೋ ನಾರಾಯಣಮನಾಮಯಮ್ ।
‘ಋತೇ
ಸತ್ಯವತೀಸೂನೋಃ ಕೃಷ್ಣಾದ್ ವಾ ದೇವಕೀಸುತಾತ್’ ॥೨.೭೫॥
ಸ್ವಾರಸ್ಯವಾಗಿರುವ ಈ ಶ್ಲೋಕ ಇಂದು ಸಿಗುವ ಮಹಾಭಾರತದ
ಪಾಠದಲ್ಲಿ ಕಾಣಸಿಗುವುದಿಲ್ಲ. ದೇವರನ್ನು ತಿಳಿಯಲು ಯಾರಿಗೆ ಸಾಧ್ಯ? ದೇವರಂತವನು ಇನ್ನೊಬ್ಬ ಇದ್ದಿದ್ದರೆ ದೇವರನ್ನು ಸಂಪೂರ್ಣವಾಗಿ
ತಿಳಿದಿರುತ್ತಿದ್ದ. ದೇವರಂತವನು ಇನ್ನೊಬ್ಬ ಇಲ್ಲ, ಅದರಿಂದಾಗಿ ಬೇರೆ ಯಾರೂ ತಿಳಿದಿಲ್ಲ.
ದೋಷವಿಲ್ಲದ ನಾರಾಯಣನನ್ನು ಯಾರು ತಾನೇ ತಿಳಿಯಲು ಸಮರ್ಥನು? ವೇದವ್ಯಾಸರನ್ನು ಬಿಟ್ಟು, ದೇವಕಿಯ ಮಗನಾದ ಕೃಷ್ಣನನ್ನು
ಬಿಟ್ಟು.
ಈ ರೀತಿ
ಸಾಕ್ಷಾತ್ ನಾರಾಯಣನೇ ವೇದವ್ಯಾಸರು ಎಂದು ಅನೇಕ ಕಡೆ ಹೇಳಲಾಗಿದೆ.
[ವೇದವ್ಯಾಸರು ಸಾಕ್ಷಾತ್ ನಾರಾಯಣ ಎಂದು ಪುರಾಣಗಳು
ಹೇಳುತ್ತವೆ. ಆದರೆ ವೇದವ್ಯಾಸರು ಸಾಕ್ಷಾತ್ ನಾರಾಯಣ ಅಲ್ಲ ಎಂದು
ಪ್ರತಿಪಾದನೆ ಮಾಡುವವರಿದ್ದಾರೆ. ಹಾಗೆ ಪ್ರತಿಪಾದನೆ ಮಾಡಿದಾಗ ಒಂದು ಸಮಸ್ಯೆಯಾಗುತ್ತದೆ.
ವೇದವ್ಯಾಸರು ಗೀತೆಯನ್ನು ಹೇಳಿದ್ದಾರೆ. ಕೃಷ್ಣ ಹೇಳಿದ್ದನ್ನೇ ಹೇಳಿದ್ದಾರೋ ಅಥವಾ ವೇದವ್ಯಾಸರೂ
ಹೇಳಿದ್ದಾರೋ ಎಂಬಿತ್ಯಾದಿ ಪ್ರಶ್ನೆಗಳು ಎದುರಾಗುತ್ತವೆ. ಇದಕ್ಕೆ ಪುರಾಣದ ಉತ್ತರ: ವೇದವ್ಯಾಸರೇ ನಾರಾಯಣ ಎಂಬುದಾಗಿದೆ. ಅದಕ್ಕಾಗಿ ಇಲ್ಲಿ ವೇದವ್ಯಾಸರೇ ನಾರಾಯಣ ಎನ್ನುವ ಮಹಾಭಾರತದ ಮಾತನ್ನು
ಆಚಾರ್ಯರು ಉಲ್ಲೇಖ ಮಾಡಿದ್ದಾರೆ]
‘ಅಪ್ರಮೇಯೋsನಿಯೋಜ್ಯಶ್ಚ ಸ್ವಯಂ ಕಾಮಗಮೋ ವಶೀ ।
‘ಮೋದತ್ಯೇಷ ಸದಾ
ಭೂತೈರ್ಬಾಲಃ ಕ್ರೀಡನಕೈರಿವ’ ॥೨.೭೬॥
ಸಭಾಪರ್ವದ ೬೧ನೆಯ ಅಧ್ಯಾಯದಲ್ಲಿ ಈ ಮಾತು ಬರುತ್ತದೆ.
ದೇವರನ್ನು ಪೂರ್ತಿ ತಿಳಿಯಲು ಯಾರಿಂದಲೂ ಸಾಧ್ಯವಿಲ್ಲ. ದೇವರನ್ನು ‘ಈ ಕೆಲಸವನ್ನು ಮಾಡು’ ಎಂದು
ನಿಯಂತ್ರಣ ಮಾಡಲು ಯಾರಿಂದಲೂ ಸಾಧ್ಯವಿಲ್ಲ. ತನ್ನ ಇಚ್ಚೆಗನುಗುಣವಾಗಿ
ಆತನಿರುತ್ತಾನೆ(ಸ್ವೇಚ್ಛಗಾಮಿ). ಉಳಿದ ಎಲ್ಲರೂ
ಆತನ ವಶದಲ್ಲಿರುತ್ತಾರೆ. ಇಂತಹ ನಾರಾಯಣನು ಮಗುವಿನೊಂದಿಗೆ ಆಟವಾಡುವಂತೆ ಸದಾ ನಮ್ಮ ಜೊತೆ ಆಟವಾಡುತ್ತಿರುತ್ತಾನೆ(ಈ
ಪ್ರಪಂಚ ನಿರ್ವಹಣೆ, ಸೃಷ್ಟಿ-ಸ್ಥಿತಿ-ಪ್ರಳಯ, ಎಲ್ಲವೂ ಆತನಿಗೊಂದು ಕ್ರೀಡೆ). ಅದರಿಂದ ನಾರಾಯಣನೇ ಈ ಜಗದ ಎಲ್ಲಾ ಲೀಲೆಯನ್ನು
ಮಾಡುತ್ತಿದ್ದಾನೆ ಎನ್ನುವುದು ಅರ್ಥವಾಗುತ್ತದೆ.
‘ನ ಪ್ರಮಾತುಂ ಮಹಾಬಾಹುಃ ಶಕ್ಯೋsಯಂ ಮಧುಸೂದನಃ ।
‘ಪರಮಾತ್ ಪರಮೇತಸ್ಮಾದ್ ವಿಶ್ವರೂಪಾನ್ನ ವಿದ್ಯತೇ’ ॥೨.೭೭॥
ನ ಪ್ರಮಾತುಂ ಮಹಾಬಾಹುಃ... ಎನ್ನುವ ಈ ಶ್ಲೋಕ
ಸಭಾಪರ್ವದಲ್ಲಿ[೬೧.೩೪], ಹರಿವಂಶದ ವಿಷ್ಣುಪರ್ವದಲ್ಲಿ[೧೦೨.೩೮], ಬ್ರಹ್ಮಾಂಡ ಪುರಾಣದಲ್ಲಿ [ಉಪೇ.ಪಾ.೭೩.೯೪.-೫],
ವಾಯುಪುರಾಣದಲ್ಲಿ [ಉತ್ತರಾರ್ದೇ.೩೬.೯೪.೫] ಎಲ್ಲಾ ಕಡೆಯೂ
ಕಾಣಸಿಗುತ್ತದೆ.
‘ದೇವರನ್ನು ಸಂಪೂರ್ಣವಾಗಿ ನಮಗೆ ತಿಳಿದುಕೊಳ್ಳಲು
ಆಗುವುದಿಲ್ಲ. ದೇವರನ್ನು ಯಾವುದೇ ಕೆಲಸದಲ್ಲಿ ಆಜ್ಞೆ ಮಾಡಿ ತೊಡಗಿಸಲು ಸಾಧ್ಯವಿಲ್ಲ. ದೇವರನ್ನು ಇಷ್ಟೇ ಎಂದು
ಅಳೆಯಲು ಸಾಧ್ಯವಿಲ್ಲ. ಈ ಪ್ರಪಂಚವನ್ನು ಸೃಷ್ಟಿ ಮಾಡಿದ
ಪರಮಾತ್ಮನಿಗಿಂತ ಮಿಗಿಲಾದ ಇನ್ನೊಂದು ತತ್ತ್ವವಿಲ್ಲ’. ಇದು ಮಹಾಭಾರತದಲ್ಲಿ
ಸ್ಫುಟವಾಗಿ ಹೇಳಿರುವ ಮಾತು. ಅದರಿಂದ ಎಲ್ಲರೂ ಮಹಾಭಾರತದ
ತಾತ್ಪರ್ಯವನ್ನು ನಿರ್ಣಯ ಮಾಡಬೇಕು.
[ಯಾವುದೇ ಒಂದು ಗ್ರಂಥವನ್ನು ಓದುವಾಗ ಪದೇಪದೇ ಯಾವ ವಿಚಾರಕ್ಕೆ
ಅಲ್ಲಿ ಹೆಚ್ಚು ಗಮನ ಕೊಟ್ಟಿದ್ದಾರೆ
ಎನ್ನುವುದನ್ನು ನೋಡಬೇಕಾಗುತ್ತದೆ. ಅದರಂತೆ
ನೋಡಿದಾಗ, ಪರಮಾತ್ಮನ ಸರ್ವೋತ್ತಮತ್ವಕ್ಕೇ
ಮಹಾಭಾರತದಲ್ಲಿ ಹೆಚ್ಚಿನ ಒತ್ತು ಕೊಟ್ಟಿರುವುದು ತಿಳಿಯುತ್ತದೆ. ಅದು ಕೇವಲ ಕಥೆ
ಅಥವಾ ಇತಿಹಾಸವಲ್ಲ ಎನ್ನುವುದನ್ನು ಇಲ್ಲಿ ತೋರಿಸಿಕೊಟ್ಟಿದ್ದಾರೆ].
‘ವಸುದೇವಸುತೋ ನಾಯಂ ನಾಯಂ ಗರ್ಭೇsವಸತ್ ಪ್ರಭುಃ ।
‘ನಾಯಂ ದಶರಥಾಜ್ಜಾತೋ ನಚಾಪಿ ಜಮದಗ್ನಿತಃ ॥೨.೭೮॥
‘ಜಾಯತೇ ನೈವ ಕುತ್ರಾಪಿ ಮ್ರಿಯತೇ ಕುತ ಏವ ತು ।
‘ನ ವೇದ್ಧ್ಯೋ ಮುಹ್ಯತೇ ನಾಯಂ ಬದ್ಧ್ಯತೇ ನೈವ ಕೇನಚಿತ್ ॥೨.೭೯॥
‘ಕುತೋ ದುಃಖಂ
ಸ್ವತಂತ್ರಸ್ಯ ನಿತ್ಯಾನನ್ದೈಕರೂಪಿಣಃ’ ।
‘ಈಶನ್ನಪಿ ಹಿ ದೇವೇಶಃ ಸರ್ವಸ್ಯ ಜಗತೋ ಹರಿಃ ॥೨.೮೦॥
‘ಕರ್ಮ್ಮಾಣಿ
ಕುರುತೇ ನಿತ್ಯಂ ಕೀನಾಶ ಇವ ದುರ್ಬಲಃ’ ।
‘ನಾsತ್ಮಾನಂ ವೇದ ಮುಗ್ಧೋsಯಂ ದುಃಖೀ ಸೀತಾಂ ಚ ಮಾರ್ಗ್ಗತೇ ॥೨.೮೧॥
‘ಬದ್ಧಃ
ಶಕ್ರಜಿತೇತ್ಯಾದಿ ಲೀಲೈಷಾsಸುರಮೋಹಿನೀ’ ।
‘ಮುಹ್ಯತೇ
ಶಸ್ತ್ರಪಾತೇನ ಭಿನ್ನತ್ವಗ್ರುಧಿರಸ್ರವಃ ॥೨.೮೨॥
‘ಅಜಾನನ್ ಪೃಚ್ಛತಿ ಸ್ಮಾನ್ಯಾಂಸ್ತನುಂ ತ್ಯಕ್ತ್ವಾ ದಿವಂ ಗತಃ ।
‘ಇತ್ಯಾದ್ಯಸುರಮೋಹಾಯ
ದರ್ಶಯಾಮಾಸ ನಾಟ್ಯವತ್ ॥೨.೮೩॥
ಇವನು ವಸುದೇವನ ಮಗನಲ್ಲ. ಇವನು ಯಾರ ಬಸುರಿನಲ್ಲೂ
ಇರಲಿಲ್ಲ. ಇವನು ದಶರಥನಿಂದ ಹುಟ್ಟಲಿಲ್ಲ. ಜಮದಗ್ನಿಯಿಂದಲೂ
ಕೂಡಾ ಹುಟ್ಟಲಿಲ್ಲ. ರಾಮನಾಗಿ ಹುಟ್ಟಿದ, ಕೃಷ್ಣನಾಗಿ ಸತ್ತ, ಯುದ್ಧಗಳಲ್ಲಿ ಬಾಣ ಚುಚ್ಚಿಕೊಂಡು
ನೆತ್ತರು ಬರುವಂತೆ ತೋರಿಸಿದ, ಯಶೋದೆ ಇವನನ್ನು ಹಗ್ಗದಿಂದ ಕಟ್ಟಿದಳು, ಇತ್ಯಾದಿಯಾಗಿ ಭಗವಂತ
ತೋರಿಸಿಕೊಳ್ಳುತ್ತಾನೆ. ವಸ್ತುತಃ ದೇವರಿಗೆ ಇದ್ಯಾವುದೂ
ಇಲ್ಲ.
ಇವನು ಹುಟ್ಟುವುದೇ ಇಲ್ಲ. ಹುಟ್ಟುವುದೇ ಇಲ್ಲ ಎಂದಾದ ಮೇಲೆ ಸಾಯುವ ಪ್ರಶ್ನೆ
ಎಲ್ಲಿಂದ? ಇವನನ್ನು ಸೀಳಲಾಗುವುದಿಲ್ಲ. ಇವನು ಜ್ಞಾನವನ್ನು ಕಳೆದುಕೊಳ್ಳುವುದಿಲ್ಲ. ಯಾರೂ
ಇವನನ್ನು ಬಂಧಿಸಲಾಗುವುದಿಲ್ಲ.
ಸ್ವತಂತ್ರನಾಗಿರುವ, ಆನಂದವೇ ಮೈವೆತ್ತು ಬಂದಿರುವ ನಾರಾಯಣನಿಗೆ
ದುಃಖವಾದರೂ ಎಲ್ಲಿಂದ?
ಯಾವ ರೀತಿ
ನೊಗವನ್ನು ಹೊತ್ತು, ನೇಗಿಲಿಗೆ ಒಳಗಾಗಿ
ಎತ್ತು ಕೆಲಸ ಮಾಡುತ್ತದೋ, ಹಾಗೇ ಮನುಷ್ಯನಿಗೆ ತನ್ನ ಕರ್ಮವನ್ನು ಅನುಭವಿಸಲು ಇಷ್ಟವಿರುತ್ತದೋ
ಇಲ್ಲವೋ, ಆದರೆ ಅದನ್ನು ಅನುಭವಿಸಿಯೇ ಅನುಭವಿಸುತ್ತಾನೆ. ಮನುಷ್ಯರೂಪಿ ಅವತಾರಿಯಾಗಿದ್ದಾಗ
ಮನುಷ್ಯರಂತೆ ತೋರಿಸಿಕೊಳ್ಳುವ ಭಗವಂತ, ತಾನು ಅನಿವಾರ್ಯ ಕರ್ಮಗಳನ್ನು ಅನುಭವಿಸುತ್ತಿರುವ
ಮಾನವನಂತೆ ಕಾಣುತ್ತಾನೆ. [ಉದಾಹರಣೆಗೆ: ಶ್ರೀರಾಮ ಸೀತೆಯನ್ನು ಕಳೆದುಕೊಂಡು ಗೋಳಾಡುವುದು,
ಶ್ರೀಕೃಷ್ಣ ಅನಿವಾರ್ಯ ಕರ್ಮಗಳನ್ನು ಅನುಭವಿಸುವುದು,ಇತ್ಯಾದಿ] ಆದರೆ ಇವೆಲ್ಲವೂ ಕೇವಲ ತೋರಿಕೆ ಅಷ್ಟೇ.
ವಾಲ್ಮೀಕಿ ರಾಮಾಯಣದಲ್ಲೇ ಹೇಳುವಂತೆ : ಬ್ರಹ್ಮ
ರುದ್ರಾದಿಗೆಳೆಲ್ಲರೂ ಬಂದು “ನೀನು ಸಾಕ್ಷಾತ್
ನಾರಾಯಣ” ಎಂದು ಹೇಳಿದಾಗ, ಶ್ರೀರಾಮ: “ನನಗಂತೂ ನಾನು ಕೇವಲ ಮನುಷ್ಯ ಅನ್ನಿಸುತ್ತಿದೆ”
ಎನ್ನುತ್ತಾನೆ (ಆತ್ಮಾನಂ ಮಾನುಷಂ ಮನ್ಯೇ - ಯುದ್ಧಕಾಂಡ ೧೨೦.೧೧).
ಶ್ರೀರಾಮ ಬಹಳ ದುಃಖಪಟ್ಟು ಸೀತೆಯನ್ನು ಹುಡುಕುವುದನ್ನು ನಾವು ರಾಮಾಯಣದಲ್ಲಿ
ಕಾಣುತ್ತೇವೆ. “ಓ ಮರಗಳೇ, ಹೇಳಿ, ನನ್ನ ಸೀತೆ
ಎಲ್ಲಿ” ಎಂದು ಶ್ರೀರಾಮ ಅಳುತ್ತಾನೆ! ಇಂದ್ರಜಿತುವಿನ ಬಾಣದ ಬಂಧನಕ್ಕೆ ರಾಮ ಒಳಗಾಗುತ್ತಾನೆ! ಇವೇ ಮೊದಲಾದ ಲೀಲೆಗಳು ಅಸುರರಿಗೆ ಮೋಹವನ್ನು ಕೊಡುವುದಕ್ಕಾಗಿ ಮಾತ್ರ
ಇದೆ.
ಶಸ್ತ್ರದ ಹೊಡೆಯುವಿಕೆಯಿಂದ ಪ್ರಜ್ಞೆ ಕಳೆದುಕೊಳ್ಳುತ್ತಾನೆ. ಅವನ ಚರ್ಮ ಸೀಳುತ್ತದೆ. ರಕ್ತ ಹರಿಯುತ್ತದೆ. ಅರಿಯದೇ ಏಕೆ ಹೀಗಾಯಿತು? ಏನಾಯಿತು? ನನಗಿದು
ಗೊತ್ತಿಲ್ಲ, ಉಪದೇಶ ಮಾಡಿ, ಇತ್ಯಾದಿಯಾಗಿ ಬೇರೊಬ್ಬರನ್ನು ಕೇಳುತ್ತಾನೆ. ದೇಹವನ್ನು ಬಿಟ್ಟು ಸ್ವರ್ಗಲೋಕಕ್ಕೆ
ಹೋಗುತ್ತಾನೆ(ಕೃಷ್ಣಾವತಾರದಲ್ಲಿ), ಇತ್ಯಾದಿ ಲೀಲೆಗಳು ಕೇವಲ ಅಸುರರ ಮೋಹಕ್ಕಾಗಿ. ಎಲ್ಲವೂ ಒಳ್ಳೆಯ ನಾಟ್ಯದಲ್ಲಿ ತೋರಿಸಿದ ಹಾಗೆ.
ನಾಟ್ಯವನ್ನು ನಾವು ಸರಿಯಾಗಿ ಗಮನವಿಟ್ಟು ನೋಡಿದರೆ, ಆ
ನಟನಲ್ಲಿ ಒಳ್ಳೆಯ ಪ್ರತಿಭೆ ಇದ್ದರೆ, ನಾವು ಎಲ್ಲವನ್ನೂ ಮರೆತು ಬಿಡುತ್ತೇವೆ. ಅಲ್ಲಿ ನಾವು ಅಳುತ್ತೇವೆ, ನೋವನ್ನು ಅನುಭವಿಸುತ್ತೇವೆ.
ಇದು ಹೇಗೋ, ಹಾಗೆಯೇ ಅತ್ಯದ್ಭುತ ನಟನಾದ
ಪರಮಾತ್ಮ ಆ ರೀತಿ ತೋರಿಸುತ್ತಾನೆ.
[ಮೂಲಭೂತವಾಗಿ ಭಗವಂತನ ಈ ಲೀಲೆಯ ಹಿಂದೆ ಎರಡು ಉದ್ದೇಶವಿದೆ.
(೧). ಅಸುರರಿಗೆ ಮೋಹವನ್ನು ಕೊಡುವುದಕ್ಕಾಗಿ.
(೨). ಸಜ್ಜನರಿಗೆ ದುಃಖ ಬಂದಾಗ ಅವರು ತಮ್ಮ ಬಾಳನ್ನು ತಾವು ಹೇಗೆ
ನಿಯಂತ್ರಿಸಿಕೊಳ್ಳಬೇಕು ಎನ್ನುವ ಪಾಠಕ್ಕಾಗಿ. ಎಂತಹ ಪರಿಸ್ಥಿಯಲ್ಲೂ ಕೂಡಾ ಧರ್ಮದಿಂದ ಹಿಂದೆ ಸರಿಯದೇ
ಮುಂದುವರಿಯುವುದು ಹೇಗೆ ಎನ್ನುವುದನ್ನು
ಶ್ರೀರಾಮಚಂದ್ರ ನಮಗೆ ತೋರಿಸಿಕೊಟ್ಟಿದ್ದಾನೆ. ಅಶಕ್ತರಾದ ಸಜ್ಜನರಿಗೆ ಇದು ಮಾರ್ಗದರ್ಶನವಾದರೆ ಅಯೋಗ್ಯರಿಗೆ
ಮೋಹನ. ಈ ರೀತಿ ಎರಡು ಉದ್ದೇಶಕ್ಕಾಗಿ
ಪರಮಾತ್ಮನ ಈ ಎಲ್ಲಾ ಕ್ರಿಯೆಗಳು ಇವೆ ಎನ್ನುವುದು
ದೇವತೆಗಳಿಗೆ ತಿಳಿದಿದೆ. ಆದರೆ
ಅಸುರರಿಗೆ ಅದು ತಿಳಿಯುವುದಿಲ್ಲ.
ಮನುಷ್ಯರಲ್ಲಿ ಯೋಗ್ಯರಿಗೆ ಹೇಳಿದಾಗ ತಿಳಿಯುತ್ತದೆ. ಅಯೋಗ್ಯರು
ಹೇಳಿದರೂ ನಂಬುವುದಿಲ್ಲ. ತಾರತಮ್ಯಕ್ಕನುಗುಣವಾಗಿ ಎಲ್ಲವೂ ನಡೆಯುತ್ತದೆ].
‘ಅವಿದ್ಯಮಾನಮೇವೇಶಃ
ಕುಹಕಂ ತದ್ ವಿದುಃ ಸರಾಃ’ ।
‘ಪ್ರಾದುರ್ಭಾವಾ
ಹರೇಃ ಸರ್ವೇ ನೈವ ಪ್ರಕೃತಿದೇಹಿನಃ ॥೨.೮೪॥
‘ನಿರ್ದ್ದೋಷಾ
ಗುಣಸಮ್ಪೂರ್ಣ್ಣಾ ದರ್ಶಯತ್ಯನ್ಯಥೈವ ತು ।
‘ದುಷ್ಟಾನಾಂ
ಮೋಹನಾರ್ತ್ಥಾಯ ಸತಾಮಪಿ ತು ಕುತ್ರಚಿತ್ ॥೨.೮೫॥
ಭಗವಂತನ ಈ ಎಲ್ಲಾ ಲೀಲೆಗಳು ದೇವತೆಗಳಿಗೆ ಸ್ಪಷ್ಟವಾಗಿ
ತಿಳಿದಿದೆ. ಇವೆಲ್ಲವೂ ಪರಮಾತ್ಮನ ಪ್ರಾದುರ್ಭಾವಗಳು. ಅಂದರೆ ಇದ್ದದ್ದೇ ಅಭಿವ್ಯಕ್ತ ಆಗಿದ್ದು
ಅಷ್ಟೇ. ಭಗವಂತನ ಯಾವ ಅವತಾರ ರೂಪವೂ ಕೂಡಾ ಪಂಚಭೂತಗಳಿಂದ ಉಂಟಾದ ದೇಹವನ್ನು ಹೊಂದಿಲ್ಲ.
ಜ್ಞಾನಾನಂದಪೂರ್ಣವಾದ ಪರಮಾತ್ಮನ ದೇಹದಲ್ಲಿ
ಯಾವುದೇ ದೋಷವಿಲ್ಲ. ಅಲ್ಲಿ ಎಲ್ಲಾ ಗುಣಗಳೂ ತುಂಬಿವೆ. ಆದರೆ ಸಂದರ್ಭಕ್ಕನುಗುಣವಾಗಿ ಯಾವ ರೀತಿಯಾಗಿ ಇದೆಯೋ ಅದಕ್ಕೆ ವಿರುದ್ಧವಾದ
ರೀತಿಯಲ್ಲಿ ತಮ್ಮನ್ನು ತಾವು ತೋರಿಕೊಳ್ಳುತ್ತವೆ. ಇದೆಲ್ಲವೂ ಕೂಡಾ ದುಷ್ಟರ ಮೋಹನಾರ್ಥಕ್ಕಾಗಿ. ಸಜ್ಜನರಿಗೂ ಕೆಲವೊಮ್ಮೆ ಮೋಹವಾಗಲೀ ಅಂತ ಈ ರೀತಿ ತೋರಿಸುವುದಿದೆ.
[ಏಕೆ ನಾವು ಶ್ರೀಕೃಷ್ಣನನ್ನು , ಶ್ರೀರಾಮನನ್ನು ಕೇವಲ ಒಬ್ಬ
ಆದರ್ಶ ಮಾನವ ಎಂದು ಸ್ವೀಕರಿಸಬಾರದು ಎಂದು ಕೆಲವರು ಪ್ರಶ್ನೆ ಮಾಡುತ್ತಾರೆ. ಏಕೆ ಮೇಲೆ ಹೇಳಿದ ರೀತಿಯಲ್ಲೇ ಸ್ವೀಕರಿಸಬೇಕು ಎನ್ನುವುದು ಇವರ ಪ್ರಶ್ನೆ. ಎಲ್ಲರೂ
ವ್ಯಾಖ್ಯಾನ ಮಾಡಿರುವ, ಎಲ್ಲವುದರ ಸಾರಭೂತವಾಗಿರುವ, ಎಲ್ಲರೂ ಶ್ರೇಷ್ಠ ಗ್ರಂಥ ಎಂದು
ಒಪ್ಪಿಕೊಂಡಿರುವ ಭಗವದ್ಗೀತೆಯಲ್ಲೇ ಈ ಪ್ರಶ್ನೆಗೆ ಉತ್ತರವಿದೆ . ಗೀತೆಯ ಕೆಲವು ಶ್ಲೋಕಗಳನ್ನು ಆಚಾರ್ಯರು ಇಲ್ಲಿ
ಉಲ್ಲೇಖಿಸಿ ಈ ಪ್ರಶ್ನೆಗೆ ಉತ್ತರ ನೀಡುವುದನ್ನು ನಾವಿಲ್ಲಿ ಕಾಣಬಹುದು. ].
‘ಯಥಾಯೋಗ್ಯಫಲಪ್ರಾಪ್ತ್ಯೈ ಲೀಲೈಷಾ ಪರಮಾತ್ಮನಃ’ ।
‘ಜ್ಞಾನಂ ತೇsಹಂ ಸವಿಜ್ಞಾನಮಿದಂ ವಕ್ಷ್ಯಾಮ್ಯಶೇಷತಃ ॥೨.೮೬॥
‘ಯಜ್ಜ್ಞಾತ್ವಾ ನೇಹ
ಭೂಯೋsನ್ಯಜ್ಜ್ಞಾತವ್ಯಮವಶಿಷ್ಯತೇ’ ।
‘ಅಹಂ ಕೃತ್ಸ್ನಸ್ಯ
ಜಗತಃ ಪ್ರಭವಃ ಪ್ರಳಯಸ್ತಥಾ ॥೨.೮೭॥
‘ಮತ್ತಃ ಪರತರಂ
ನಾನ್ಯತ್ ಕಿಞ್ಚಿದಸ್ತಿ ಧನಞ್ಜಯ’ ।
‘ಅವಜಾನನ್ತಿ ಮಾಂ
ಮೂಢಾ ಮಾನುಷೀಂ ತನುಮಾಶ್ರಿತಮ್’ ॥೨.೮೮॥
‘ಮೋಘಾಶಾ
ಮೋಘಕರ್ಮ್ಮಾಣೋ ಮೋಘಜ್ಞಾನ ವಿಚೇತಸಃ ।
‘ರಾಕ್ಷಸೀಮಾಸುರೀಂ
ಚೈವ ಪ್ರಕೃತಿಂ ಮೋಹನೀಂ ಶ್ರಿತಾಃ ॥೨.೮೯॥
ಅವರವರಿಗೆ ಯೋಗ್ಯವಾದ ಫಲ ಆಗಲೀ ಎಂದು ಪರಮಾತ್ಮ ತೋರುವ ಲೀಲೆ
ಇದಾಗಿದೆ. ಭಗವದ್ಗೀತೆಯಲ್ಲಿ
ಶ್ರೀಕೃಷ್ಣ ಅರ್ಜುನನಿಗೆ ಹೇಳುತ್ತಾನೆ: “ತಿಳಿಯಬೇಕಾದ ನನ್ನ
ಹಿರಿಮೆಯನ್ನು, ಅದರ ಬಿತ್ತರದ ಜತೆಗೆ ನಿನಗೆ ನಾನು ಪೂರ್ತಿಯಾಗಿ ಹೇಳುತ್ತೇನೆ. ಇದನ್ನು ತಿಳಿದರೆ ಮತ್ತೆ ಈ ವಿಷಯದಲ್ಲಿ ಬೇರೆ ತಿಳಿಯುವಂತದ್ದೇನೂ
ಉಳಿದಿರುವುದಿಲ್ಲ” ಎಂದು. ಯಾವುದನ್ನು ತಿಳಿದರೆ ಎಲ್ಲವನ್ನೂ ತಿಳಿದಂತಾಗುತ್ತದೋ ಅಂತಹ
ವಿಜ್ಞಾನದಿಂದ ಕೂಡಿದ ಜ್ಞಾನವನ್ನು ಸಂಪೂರ್ಣವಾಗಿ ಹೇಳುತ್ತೇನೆ ಎಂದಿದ್ದಾನೆ
ಶ್ರೀಕೃಷ್ಣ.[ಭಗವದ್ಗೀತೆ: ೭.೨]
ಕೃಷ್ಣ ಹೇಳುತ್ತಾನೆ: “ನಾನೇ ಜಗದ ಎಲ್ಲಾ ಹುಟ್ಟು-ಸಾವುಗಳಿಗೆ
ಕಾರಣನಾಗಿದ್ದೇನೆ. ನಾನು ಜಗತ್ತಿಗೆ
ಜನಕನಾಗಿದ್ದೇನೆ. ಜಗತ್ತಿನ ಸಂಹಾರಕನೂ
ಆಗಿದ್ದೇನೆ.(ಭಗವದ್ಗೀತೆ ೭.೬). ಓ ಧನಂಜಯಾ, ನನಗಿಂತ ಉತ್ಕೃಷ್ಟವಾದ ಇನ್ನೊಂದು ಪರತರ ವಸ್ತು
ಇಲ್ಲವೇ ಇಲ್ಲ”(ಭಗವದ್ಗೀತೆ ೭.೭) “ಮನುಷ್ಯರಂತೆ ದೇಹವನ್ನು ಧರಿಸಿರುವ ನನ್ನನ್ನು ನೋಡಿ ಮೂಢರು
ತಪ್ಪಾಗಿ ತಿಳಿಯುತ್ತಾರೆ” [ಭಗವದ್ಗೀತೆ ೯.೧೧]. (ನಾನು ಮನುಷ್ಯ ಆಕಾರದಲ್ಲಿರುತ್ತೇನೆ. ಆಗ ಮೂಢರು ನನ್ನನ್ನು ತಪ್ಪಾಗಿ ಅಜ್ಞಾನಿ,
ಪ್ರಾಕೃತದೇಹಿ,..ಇತ್ಯಾದಿಯಾಗಿ ತಪ್ಪು ತಿಳಿಯುತ್ತಾರೆ) ಎಂದು ಶ್ರೀಕೃಷ್ಣನೇ ಹೇಳಿಕೊಂಡಿದ್ದಾನೆ.
ಇವರ ಆಸೆ ಈಡೇರದು. ಕರ್ಮಗಳು ಫಲಿಸವು. ತಿಳಿವು ಮಾಯವಾಗುವುದು. ಅವರು ಬಗೆಗೇಡಿಗಳು; ಮರುಳುಗೊಳಿಸುವ, ರಕ್ಕಸರ –ಅಸುರರ ತಾಮಸ ಸ್ವಭಾವಕ್ಕೆ ಒಳಗಾದವರು[ಭಗವದ್ಗೀತೆ ೯.೧೨]
‘ಭಗವಂತ ಜ್ಞಾನಾನಂದ ಸ್ವರೂಪ, ಆತನಿಗೆ ಪಾಂಚಭೌತಿಕ ಶರೀರ ಇಲ್ಲ’ ಎನ್ನುವ ವಿಚಾರವನ್ನು
ಕೃಷ್ಣ ಇಲ್ಲಿ ಒತ್ತು ಕೊಟ್ಟು ಹೇಳಿದ್ದಾನೆ. “ದೇವರಿಗೆ ನಮ್ಮಂತೆ
ಪಾಂಚಭೌತಿಕ ಶರೀರ ಇದೆ-ಅನ್ನುವ ಚಿಂತನೆಯೇ ಪಾತಕದ ದಾರಿ” ಎಂದಿದ್ದಾನೆ ಶ್ರೀಕೃಷ್ಣ. ಏಕೆಂದರೆ ಹಾಗೆ ಚಿಂತನೆ ಮಾಡುವವರು ಸಾತ್ವಿಕರಾಗಿರುವುದಿಲ್ಲ. ಅವರು ಎಂದೂ ಭಗವದ್ ಭಕ್ತರಾಗಿರುವುದಿಲ್ಲ. ಹೀಗೆ ಚಿಂತನೆ ಮಾಡುವವರ
ಅಧ್ಯಾತ್ಮ ಸಾಧನೆಯ ಎಲ್ಲಾ ಆಸೆಗಳೂ ಕಮರಿ ಹೋಗುತ್ತವೆ. ಭಗವಂತನನ್ನು ನಶ್ವರ ಎಂದು ಹೇಳುವವರನ್ನು
ದೇವತೆಗಳು ಎಂದೂ ಪ್ರೀತಿಸುವುದಿಲ್ಲ. ಅವರು ಮಾಡುವ ಯಜ್ಞ-ಯಾಗಾದಿಗಳು ವ್ಯರ್ಥ. ಒಟ್ಟಿನಲ್ಲಿ
ಅಧ್ಯಾತ್ಮ ಸಾಧನೆಯಲ್ಲಿ ಪಾರತ್ರಿಕವಾಗಿ ಅವರ ಯಾವ ಆಸೆಯೂ ನೆರವೇರುವುದಿಲ್ಲ.
ಸಾತ್ವಿಕ ಚಿಂತನೆ ಇಲ್ಲದವರು ಅಥವಾ ತಾಮಸ ಪ್ರಭಾವಕ್ಕೊಳಗಾದವರು
ಭಗವಂತನನ್ನು ಈ ರೀತಿ ದೋಷ ಚಿಂತನೆ ಮಾಡುತ್ತಾರೆ. ಅವರಿಗೆ ಚಿಂತನಾ ಶಕ್ತಿ ಇರುವುದಿಲ್ಲ. ಇವರು
ಯಾವ ಶಾಸ್ತ್ರ ಓದಿಯೂ ಉಪಯೋಗವಿಲ್ಲ. ಅವರ ಮನಸ್ಸು ಅಧ್ಯಾತ್ಮವನ್ನು ಗ್ರಹಿಸುವುದಿಲ್ಲ. “ಇಂತವರು ರಾಕ್ಷಸರು ಅಥವಾ ಅಸುರರಾಗಿರುತ್ತಾರೆ”
ಎಂದಿದ್ದಾನೆ ಶ್ರೀಕೃಷ್ಣ.
[ರಾಕ್ಷಸರು ಎಂದರೆ ಸ್ವಭಾವತಃ ತಾಮಸರು; ಅಸುರರು ಎಂದರೆ
ರಾಜಸರು-ಇಂದ್ರಿಯ ಭೋಗದಲ್ಲೇ ಪುರುಷಾರ್ಥ ಕಾಣುವವರು. ಇವರೊಂದಿಗೆ ಪ್ರಭಾವದಿಂದ ಚಿಂತನಾಶೀಲತೆಯನ್ನು ಕಳೆದುಕೊಂಡವರು ಕೂಡಾ ಈ
ರೀತಿ ಯೋಚಿಸುತ್ತಾರೆ. ಇವರಿಗೆ ಎಂದೂ ಸಹಜ ಚಿಂತನೆ ಬರುವುದಿಲ್ಲ. ಇವರು ಯಾವಾಗಲೂ ಸತ್ಯಕ್ಕೆ
ವಿರುದ್ಧವಾಗಿ ಚಿಂತಿಸುತ್ತಿರುತ್ತಾರೆ].
[ಅಂತರಿಕವಾಗಿರುವ ಸಾಕ್ಷಿಯಿಂದ ವಿರಹಿತರಾಗಿ ಕೆಲಸ
ಮಾಡುವವರನ್ನು ಇಲ್ಲಿ ವಿಚೇತಸಃ ಎಂದು ಕರೆದಿದ್ದಾರೆ. ಇವರಿಗೆ ಆಂತರಿಕ ಸಾಕ್ಷಿಯೇ ಕೆಲಸ ಮಾಡುವುದಿಲ್ಲ!
ಎಲ್ಲವೂ
ಶಬ್ದಪ್ರಾಮಣ್ಯದ ಮೇಲೇ ಅವಲಂಬಿತವಾಗಿರುತ್ತದೆ. ಶಬ್ದ
ಹಾಗೂ ಅರ್ಥ ಇವುಗಳ ನಡುವೆ ಒಂದು ಸಂಬಂಧವಿದೆ. ಆ ಸಂಬಂಧವನ್ನು ನಾವು ಒಪ್ಪಲಿಲ್ಲ ಅಂದರೆ ಜಗತ್ತಿನಲ್ಲಿ ಯಾವ
ವ್ಯವಹಾರವೂ ನಡೆಯುವುದಿಲ್ಲ, ಯಾವ ಜ್ಞಾನವೂ ಕೂಡಾ ಸಿಗುವುದಿಲ್ಲ. ವಿಚೇತಸರು ಧೈರ್ಯವಾಗಿ
ಇದನ್ನು ಮೀರುತ್ತಾರೆ! ದೇವರು ಎನ್ನುವ ಒಂದು ಶಬ್ದ ಇರಬೇಕಾದರೆ ಅದಕ್ಕೊಂದು ಅರ್ಥ ಇರಲೇ
ಬೇಕಲ್ಲವೇ? ಜಗತ್ತಿನಲ್ಲಿ ಯಾವುದೇ
ಒಂದು ಪದಾರ್ಥ ಇರಲೀ, ಯಾವುದೇ ಒಂದು ಪದ ಇರಲೀ, ಆ ಪದಾರ್ಥ ಏನೋ ಒಂದಿರಬೇಕು. ಅದು ಯಾವುದು ಅಂತ
ಹುಡುಕಬೇಕು. ಹಾಗೆ ಅವರು ಮಾಡುವುದೇ ಇಲ್ಲ. ಶಬ್ದ
ಪ್ರಾಮಾಣ್ಯವನ್ನು ಸರಿಯಾಗಿ ಗಮನಿಸಿದರೆ, ಅದರಲ್ಲಿ
ದೇವರ ಅಸ್ತಿತ್ವ ಅಥವಾ ಅತೀಂದ್ರಿಯ ಪದಾರ್ಥಗಳ ಅಸ್ತಿತ್ವ ಗೋಚರವಾಗುತ್ತದೆ. ಶಬ್ದ ಪ್ರಾಮಾಣ್ಯವನ್ನು ಆಚಾರ್ಯರು ಗೀತಾ ಭಾಷ್ಯದಲ್ಲಿ
ಸಮರ್ಥನೆ ಮಾಡಿರುವುದನ್ನು ನಾವು ಕಾಣುತ್ತೇವೆ. ಅಣುವ್ಯಾಖ್ಯಾನದಲ್ಲೂ ಈ ಕುರಿತು ಹೇಳಿದ್ದಾರೆ. ಆಂತರಿಕವಾದ ಮನುಷ್ಯನ ಪ್ರವೃತ್ತಿಯನ್ನು ಚಿಂತನೆ
ಮಾಡಿದರೆ ಆಗ ಶಬ್ದ ಪ್ರಾಮಾಣ್ಯದ ಮೇಲೆ ಅತೀಂದ್ರಿಯ
ಪದಾರ್ಥಗಳ ಅಸ್ತಿತ್ವವನ್ನು
ಒಪ್ಪಿಕೊಳ್ಳುತ್ತೇವೆ. ಆದರೆ ವಿಚೇತಸರು ಈ ರೀತಿ ಯೋಚನೆ
ಮಾಡುವುದೇ ಇಲ್ಲ].
‘ಮಹಾತ್ಮಾನಸ್ತು
ಮಾಂ ಪಾರ್ತ್ಥ ದೈವೀಂ ಪ್ರಕೃತಿಮಾಶ್ರಿತಾಃ ।
‘ಭಜನ್ತ್ಯನನ್ಯಮನಸೋ ಜ್ಞಾತ್ವಾ ಭೂತಾದಿಮವ್ಯಯಮ್’ ॥೨.೯೦॥
“ಓ ಪಾರ್ಥ,
ಸತ್ತ್ವಗುಣಭರಿತರು, ಸೂಕ್ಷ್ಮವಾದ ಒಳ್ಳೆಯ ಮನಸ್ಸು ಉಳ್ಳವರು, ನನ್ನನ್ನು ಬಿಟ್ಟು ಬೇರೆಡೆ
ಮನಸ್ಸನ್ನು ಹರಿಸದವರು, ನನ್ನನ್ನು ನಾಶವಿಲ್ಲದವನೆಂದೂ, ಪ್ರಪಂಚದ ಸೃಷ್ಟಿಕರ್ತ ಎಂದೂ ತಿಳಿದು
ಪ್ರೀತಿಸುತ್ತಾರೆ” ಎಂದು ಶ್ರೀಕೃಷ್ಣ ಸ್ಪಷ್ಟವಾಗಿ ಹೇಳಿದ್ದಾನೆ.[ಭಗವದ್ಗೀತೆ ೯.೧೩]
‘ಪಿತಾsಸಿ ಲೋಕಸ್ಯ ಚರಾಚರಸ್ಯ ತ್ವಮಸ್ಯ ಪೂಜ್ಯಶ್ಚ ಗುರುರ್ಗ್ಗರೀಯಾನ್ ।
‘ನ ತ್ವತ್ಸಮೋsಸ್ತ್ಯಭ್ಯಧಿಕಃ ಕುತೋsನ್ಯೋ ಲೋಕತ್ರಯೇsಪ್ಯಪ್ರತಿಮಪ್ರಭಾವ’॥೨.೯೧॥
ವಿಶ್ವರೂಪ ದರ್ಶನ
ಸಮಯದಲ್ಲಿ ಅರ್ಜುನ ಹೇಳುತ್ತಾನೆ: ಈ
ಚರಾಚರ ಜಗದ ತಂದೆ ನೀನು, ಈ ಲೋಕಕ್ಕೆ ನೀನೇ ಪೂಜನೀಯ. ಗುರುವಿಗೂ ಹಿರಿಯ ಗುರು ನೀನು. ಮೂರು
ಲೋಕದಲ್ಲೂ ನಿನಗೆ ಸಮನಾದವನು ಇಲ್ಲದಿರುವಾಗ
ಮಿಗಿಲಾದವನು ಎಲ್ಲಿಂದ? [ಭಗವದ್ಗೀತೆ
೧೧.೪೩]
‘ಪರಂ ಭೂಯಃ
ಪ್ರವಕ್ಷ್ಯಾಮಿ ಜ್ಞಾನಾನಾಂ ಜ್ಞಾನಮುತ್ತಮಮ್ ।
‘ಯಜ್ಜ್ಞಾತ್ವಾ
ಮುನಯಃ ಸರ್ವೇ ಪರಾಂ ಸಿದ್ಧಿಮಿತೋ ಗತಾಃ’ ॥೨.೯೨॥
‘ಮಮ ಯೋನಿರ್ಮ್ಮಹದ್
ಬ್ರಹ್ಮ ತಸ್ಮಿನ್ ಗರ್ಭಂ ದಧಾಮ್ಯಮ್ ।
‘ಸಂಭವಃ
ಸರ್ವಭೂತಾನಾಂ ತತೋ ಭವತಿ ಭಾರತ’ ॥೨.೯೩॥
ಅರ್ಜುನ ಉತ್ಪ್ರೇಕ್ಷೆಯಾಗಿ ಮಾತನಾಡಿದನೇ ಅಂದರೆ ಶ್ರೀಕೃಷ್ಣನೇ ಈ ಮಾತನ್ನು ಸಮರ್ಥನೆ ಮಾಡಿರುವುದನ್ನು
ಗೀತೆಯಲ್ಲೇ ನಾವು ಕಾಣುತ್ತೇವೆ:
ಉತ್ಕೃಷ್ಟವಾದುದ್ದನ್ನು ಮತ್ತೆ ಹೇಳುತ್ತೇನೆ. ಜ್ಞಾನಗಳಲ್ಲಿಯೂ ಉತ್ತಮವಾದ ಜ್ಞಾನವನ್ನು, ಯಾವುದನ್ನು ತಿಳಿದು ಎಲ್ಲಾ
ಮುನಿಗಳೂ ಕೂಡಾ ಉತ್ಕೃಷ್ಟವಾದ ಮೋಕ್ಷವನ್ನು ಹೊಂದಿದರೋ, ಅಂತಹ ಜ್ಞಾನವನ್ನು ಕುರಿತು
ಹೇಳುತ್ತೇನೆ[ಭಗವದ್ಗೀತೆ ೧೪.೦೧] ಎನ್ನುತ್ತಾ ಕೃಷ್ಣ ಹೇಳುತ್ತಾನೆ: “ಲಕ್ಷ್ಮೀದೇವಿಯು ನನ್ನ
ಹೆಂಡತಿಯಾಗಿದ್ದಾಳೆ. ಅವಳಲ್ಲಿ ಸೃಷ್ಟಿಯ ಬೀಜವನ್ನು ಬಿತ್ತುತ್ತೇನೆ. ಸಮಸ್ತ ಸ್ಥಾವರ-ಜಂಗಮ ಪ್ರಪಂಚದ ಹುಟ್ಟು ಅದರಿಂದ ಆಗುತ್ತದೆ”
[ಭಗವದ್ಗೀತೆ ೧೪.೦೩] ಎಂದು.
‘ದ್ವಾವಿಮೌ ಪುರುಷೌ
ಲೋಕೇ ಕ್ಷರಶ್ಚಾಕ್ಷರ ಏವ ಚ ।
‘ಕ್ಷರಃ
ಸರ್ವಾಣಿ ಭೂತಾನಿ ಕೂಟಸ್ಥೋsಕ್ಷರ ಉಚ್ಯತೇ ॥೨.೯೪॥
‘ಉತ್ತಮಃ
ಪುರುಷಸ್ತ್ವನ್ಯಃ ಪರಮಾತ್ಮೇತ್ಯುದಾಹೃತಃ ।
‘ಯೋ
ಲೋಕತ್ರಯಮಾವಿಶ್ಯ ಭಿಭರ್ತ್ತ್ಯವ್ಯಯ ಈಶ್ವರಃ ॥೨.೯೫॥
‘ಯಸ್ಮಾತ್
ಕ್ಷರಮತೀತೋsಹಮಕ್ಷರಾದಪಿ ಚೋತ್ತಮಃ ।
‘ಅತೋsಸ್ಮಿ ಲೋಕೇ ವೇದೇ ಚ ಪ್ರಥಿತಃ ಪುರುಷೋತ್ತಮಃ ॥೨.೯೬॥
‘ಯೋ
ಮಾಮೇವಮಸಮ್ಮೂಢೋ ಜಾನಾತಿ ಪುರುಷೋತ್ತಮಮ್ ।
‘ಸ ಸರ್ವವಿದ್ ಭಜತಿ
ಮಾಂ ಸರ್ವಭಾವೇನ ಭಾರತ ॥೨.೯೭॥
‘ಇತಿ ಗುಹ್ಯತಮಂ
ಶಾಸ್ತ್ರಮಿದಮುಕ್ತಂ ಮಯಾsನಘ ।
‘ಏತದ್ ಬುದ್ಧ್ವಾ ಬುದ್ಧಿಮಾನ್
ಸ್ಯಾತ್ ಕೃತಕೃತ್ಯಶ್ಚ ಭಾರತ’ ॥೨.೯೮॥
ಶ್ರೀಕೃಷ್ಣ ಹೇಳುತ್ತಾನೆ: ಈ ಲೋಕದಲ್ಲಿ ಈ ಎರಡು ಬಗೆಯ
ಪುರುಷರಿದ್ದಾರೆ. ಒಬ್ಬ ಕ್ಷರಪುರುಷ ಮತ್ತು ಇನ್ನೊಬ್ಬ ಅಕ್ಷರಪುರುಷ.
ಬ್ರಹ್ಮಾದಿ ಸಮಸ್ತ ಜೀವರೂ ಕ್ಷರಪುರುಷರು. ಇವರು ನಾಶವಾಗುವ ದೇಹವನ್ನು ಹೊಂದಿದ್ದಾರೆ. ಈ ಚರಾಚರದ ಕೂಟವನ್ನು ಕೂಡಿಸಿಟ್ಟ ಚಿತ್ ಪ್ರಕೃತಿಯೇ ಅಕ್ಷರ
ಪುರುಷಳೆನ್ನಿಸಿದ್ದಾಳೆ [ಭಗವದ್ಗೀತೆ ೧೫.೧೬].
ಈ ಎರಡಕ್ಕೂ ಮಿಗಿಲಾದವನು ಪುರುಷೋತ್ತಮ. ಅವನನ್ನೇ ಪರಮಾತ್ಮ ಎನ್ನುತ್ತಾರೆ. ಅಳಿವಿರದ ಆ ಪರಮೇಶ್ವರನೇ ಮೂರು ಲೋಕದೊಳಗಿದ್ದು ಸಲಹುತ್ತಾನೆ.
[ಭಗವದ್ಗೀತೆ ೧೫.೧೭].
ನಾನು ಕ್ಷರವನ್ನು ಮೀರಿನಿಂತವನು. ಅಕ್ಷರಕ್ಕಿಂತಲೂ ಹಿರಿಯನು.
ಅದಕೆಂದೇ ಲೋಕದಲ್ಲೂ (ಲೌಕಿಕ ಗ್ರಂಥದಲ್ಲೂ), ವೇದದಲ್ಲೂ (ವೈದಿಕ ವಾಙ್ಮಯದಲ್ಲೂ ) ‘ಪುರುಷೋತ್ತಮ’
ಎಂದೇ ಹೆಸರಾಗಿದ್ದೇನೆ [ಭಗವದ್ಗೀತೆ ೧೫.೧೮]..
ಯಾರು ನನ್ನನ್ನು ಈ ರೀತಿಯಾಗಿ ತಪ್ಪು ತಿಳುವಳಿಕೆ ಇಲ್ಲದೇ
ಪುರುಷೋತ್ತಮ ಎಂದು ತಿಳಿಯುತ್ತಾನೋ, ಅವನು ಎಲ್ಲವನ್ನೂ ತಿಳಿದವನಾಗುತ್ತಾನೆ, ಎಲ್ಲವನ್ನೂ
ಪಡೆದವನಾಗುತ್ತಾನೆ. ಎಲ್ಲಾ ರೀತಿಯಿಂದ ನನ್ನನ್ನು
ಹೊಂದುವವ ಅವನಾಗುತ್ತಾನೆ[ಭಗವದ್ಗೀತೆ ೧೫.೧೯].
ಈ ರೀತಿಯಾಗಿ ಗೋಪ್ಯವಾದ ಶಾಸ್ತ್ರವನ್ನು ನಾನು ಹೇಳಿದ್ದೇನೆ.
ಇದನ್ನು ತಿಳಿದವನು ಅಪರೋಕ್ಷ ಜ್ಞಾನಿಯಾಗುತ್ತಾನೆ(ಭಗವಂತನನ್ನು ಬಲ್ಲವನಾಗುತ್ತಾನೆ) ಅವನು ಮತ್ತೆ
ಮಾಡಬೇಕಾದ್ದೇನೂ ಉಳಿಯುವುದಿಲ್ಲ [ಭಗವದ್ಗೀತೆ ೧೫.೨೦].
‘ದ್ವೌ ಭೂತಸರ್ಗ್ಗೌ
ಲೋಕೇsಸ್ಮಿನ್ ದೈವ ಆಸುರ ಏವ ಚ ।
‘ದೈವೋ ವಿಸ್ತರಶಃ
ಪ್ರೋಕ್ತ ಆಸುರಂ ಪಾರ್ತ್ಥ ಮೇ ಶ್ರುಣು’ ॥೨.೯೯॥
‘ಅಸತ್ಯಮಪ್ರತಿಷ್ಠಂ
ತೇ ಜಗದಾಹುರನೀಶ್ವರಮ್’ ।
‘ಈಶ್ವರೋsಹಮಹಂ ಭೋಗೀ ಸಿದ್ಧೋsಹಂ ಬಲವಾನ್ ಸುಖೀ’ ॥೨.೧೦೦॥
‘ಮಾಮಾತ್ಮಪರದೇಹೇಷು
ಪ್ರದ್ವಿಷನ್ತೋsಭ್ಯಸೂಯಕಾಃ ।
‘ತಾನಹಂ ದ್ವಿಷತಃ
ಕ್ರೂರಾನ್ ಸಂಸಾರೇಷು ನರಾಧಮಾನ್ ।
‘ಕ್ಷಿಪಾಮ್ಯಜಸ್ರಮಶುಭಾನಾಸುರೀಷ್ವೇವ
ಯೋನಿಷು ॥೨.೧೦೧॥
‘ಆಸುರೀಂ
ಯೋನಿಮಾಪನ್ನಾ ಮೂಢಾ ಜನ್ಮನಿಜನ್ಮನಿ ।
‘ಮಾಮಪ್ರಾಪ್ಯೈವ
ಕೌಂತೇಯ ತತೋ ಯಾನ್ತ್ಯಧಮಾಂ ಗತಿಮ್’ ॥೨.೧೦೨॥
“ಈ ಲೋಕದಲ್ಲಿ ಎರಡು ರೀತಿಯ ಪ್ರವೃತ್ತಿಗಳಿವೆ. ಒಂದು ದೈವಿಕ (ಒಳ್ನಡೆಯದು) ಮತ್ತು
ಇನ್ನೊಂದು ಆಸುರ (ಕೆಡುನಡೆಯದು). ಇಲ್ಲಿಯ ತನಕ ದೈವಿಕ ನಡೆಯನ್ನು ವಿಸ್ತಾರವಾಗಿ ಹೇಳಿದ್ದೇನೆ.
ಇನ್ನು ಅಸುರ ನಡೆಯ ಬಿತ್ತರವನ್ನು ನನ್ನಿಂದ ಕೇಳು”[ಭಗವದ್ಗೀತಾ ೧೬.೬] ಎಂದು ಹೇಳಿ ಶ್ರೀಕೃಷ್ಣ,
ಅಸುರ ಪ್ರವೃತ್ತಿಯನ್ನು ಅರ್ಜುನನಿಗೆ ಈ ರೀತಿ ವಿವರಿಸುತ್ತಾನೆ:
“ಅವರು ಜಗತ್ತನ್ನು ಅಸತ್ಯವೆಂದೂ[ಈ ಜಗತ್ತು ಕಾರ್ಯಕಾರಿ
ಅಲ್ಲಾ(ಮಿಥ್ಯಾ) ಎಂದೂ], ಜಗತ್ತಿಗೆ ಒಂದು ನೆಲೆ ಇಲ್ಲವೆಂದೂ ಹೇಳುತ್ತಾರೆ. ಅವರು ಈ ಜಗತ್ತಿಗೆ
ಆಧಾರನಾಗಿ ಒಬ್ಬ ದೇವರಿಲ್ಲ, ಆದ್ದರಿಂದ ಈ ಜಗತ್ತನ್ನು ನಿಯಂತ್ರಿಸುವ
ಸ್ವಾಮಿ ಇಲ್ಲ, ಎಲ್ಲವೂ ಭ್ರಮೆ ಎಂದು ವಾದ ಮಾಡುತ್ತಾರೆ. ಕೆಲವರು
‘ನಾನೇ ಈಶ್ವರ’ ಎಂದೂ ಹೇಳುತ್ತಾರೆ. ಭೋಗಕ್ಕಾಗಿಯೇ ಈ ಪ್ರಪಂಚವಿರುವುದು ಎಂದು ಹೇಳಿ ಈ ಪ್ರಪಂಚದ
ಅಸ್ತಿತ್ವವನ್ನು ನಿರಾಕರಿಸುವವರಿದ್ದಾರೆ. ತಮ್ಮನ್ನು ತಾವು ಸಿದ್ಧರು
ಎಂದುಕೊಳ್ಳುವವರಿದ್ದಾರೆ. ಕೆಲವರ ದೃಷ್ಟಿಯಲ್ಲಿ ಇದೊಂದು ಕಾಮದ ಕೂಸು,
ಮಾಯಾಸೃಷ್ಟಿ[ಭಗವದ್ಗೀತಾ ೧೬.೦೮]
ತನ್ನ ಮತ್ತು ಪರರ ದೇಹದೊಳಗಿರುವ ಅಂತರ್ಯಾಮಿಯಾದ ನನ್ನನ್ನು
ನಂಬದೇ ದ್ವೇಷಿಸುತ್ತಾರೆ. ಇನ್ನೊಬ್ಬರ ಏಳಿಗೆಗೆ ಕಿಚ್ಚುಪಡುತ್ತಾರೆ. (ಅಂತರ್ಯಾಮಿಯನ್ನು ಅವಮಾನ ಮಾಡುವುದು ಅಂದರೆ: ಅವನಲ್ಲಿ ಏನು
ದುರ್ಗುಣಗಳಿಲ್ಲವೋ ಆ ದುರ್ಗುಣಗಳನ್ನು ಹೇಳುವುದು. ಅವನಲ್ಲಿ ಏನು ಸುಗುಣಗಳಿವೆಯೋ ಅದನ್ನು ಹೇಳದೇ ಇರುವುದು) [ಭಗವದ್ಗೀತಾ
೧೬.೧೮]
ಪರತತ್ವವನ್ನು ದ್ವೇಷಿಸುವ, ಕನಿಕರವಿಲ್ಲದ, ಕೊಳಕಾದ ಅಂತಹ ನೀಚರನ್ನು ನಾನು ನಿರಂತರವಾಗಿ ಬಾಳ
ಬವಣೆಗಳಲ್ಲಿ, ಕೆಡುನಡೆಯ ಬಸಿರುಗಳಲ್ಲಿ ಕೆಡುಹುತ್ತೇನೆ. (ನರಾಧಮರಾದ
ಅವರನ್ನು ಅಸುರ ಯೋನಿಗೇ ಹಾಕುತ್ತೇನೆ). [ಭಗವದ್ಗೀತಾ ೧೬.೧೯].
ಕೌಂತೇಯಾ, ಅಸುರ ಯೋನಿಯನ್ನು
ಹೊಂದಿ, ಜನ್ಮಜನ್ಮದಲ್ಲಿಯೂ ಕೂಡಾ ತಿಳಿಗೇಡಿಗಳಾಗಿಯೇ ಇರುವವರು ನನ್ನನ್ನು ಹೊಂದುವುದೇ
ಇಲ್ಲ. ಹಾಗೇ ಅವರು ಅಲ್ಲಿಂದ ಮತ್ತೆ
ಅಧೋಗತಿಯನ್ನು ಹೊಂದುತ್ತಾರೆ”[ಭಗವದ್ಗೀತಾ ೧೬.೨೦].
ಇವೆಲ್ಲವೂ
ಆಸುರೀ ಪ್ರವೃತ್ತಿಯ ಕುರಿತಾಗಿ ಸ್ವಯಂ ಶ್ರೀಕೃಷ್ಣ ಗೀತೆಯಲ್ಲಿ ಹೇಳಿರುವ ಮಾತುಗಳ
ಉಲ್ಲೇಖ. ಇನ್ನು ಮುಂದೆ ಗೀತೆಯಲ್ಲಿ ಹೇಳಿರುವ ಜ್ಞಾನದ ಬಗೆಗಿನ ವ್ಯತ್ಯಾಸವನ್ನು ಆಚಾರ್ಯರು
ಉಲ್ಲೇಖಿಸುವುದನ್ನು ನಾವು ಮುಂದೆ ಕಾಣುತ್ತೇವೆ.
No comments:
Post a Comment