ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Sunday, January 14, 2018

Mahabharata Tatparya Nirnaya Kannada 2.103-2.129

 

ಸರ್ವಭೂತೇಷು ಯೇನೈಕಂ ಭಾವಮವ್ಯಯಮೀಕ್ಷತೇ ।

ಅವಿಭಕ್ತಂ ವಿಭಕ್ತೇಷು ತಜ್ಜ್ಞಾನಂ ವಿದ್ಧಿ ಸಾತ್ವಿಕಮ್ ॥೨.೧೦೩

 

ಸರ್ವಗುಹ್ಯತಮಂ ಭೂಯಃ ಶೃಣು ಮೇ ಪರಮಂ ವಚಃ ।

ಇಷ್ಟೋsಸಿ ಮೇ ದೃಢಮಿತಿ ತತೋ ವಕ್ಷ್ಯಾಮಿ ತೇ ಹಿತಮ್ ॥೨.೧೦೪

 

ಮನ್ಮನಾ ಭವ ಮದ್ಭಕ್ತೋ ಮದ್ಯಾಜೀ ಮಾಂ ನಮಸ್ಕುರು ।

ಮಾಮೇವೈಷ್ಯಸಿ ಸತ್ಯಂ ತೇ ಪ್ರತಿಜಾನೇ ಪ್ರಿಯೋsಸಿ ಮೇ ॥೨.೧೦೫           

 

“ಎಲ್ಲಾ ಪ್ರಾಣಿಗಳಲ್ಲಿ ಗುಣಪೂರ್ಣನಾದ ಒಬ್ಬನೇ ಅಂತರ್ಯಾಮಿಯನ್ನು, ಬೇರೆಬೇರೆ ಗುಣಧರ್ಮವನ್ನು ಹೊಂದಿರುವವರಲ್ಲೂ ಅಭಿನ್ನನಾಗಿರುವ ಒಬ್ಬನನ್ನು ತಿಳಿದುಕೊಳ್ಳುವುದನ್ನು ಸಾತ್ತ್ವಿಕ ಜ್ಞಾನ ಎಂದು ಕರೆಯುತ್ತಾರೆ” [ಭಗವದ್ಗೀತಾ ೧೮.೨೦]. 

“ಎಲ್ಲಕ್ಕಿಂತ ಹೆಚ್ಚು ಗುಹ್ಯವಾದ  ನನ್ನೀ ಹಿರಿಯ ಮಾತನ್ನು ಇನ್ನೊಮ್ಮೆ ಆಲಿಸು. ನೀನು ನನಗೆ ತುಂಬಾ ಮೆಚ್ಚಿನವನೆಂದು, ಅದಕ್ಕಾಗಿ ನಿನಗೆ ಹಿತವನ್ನು ಹೇಳುತ್ತಿದ್ದೇನೆ”[ಭಗವದ್ಗೀತಾ ೧೮.೬೪]:

ನನ್ನಲ್ಲೇ ಮನಸ್ಸನ್ನಿಡು. ನನ್ನಲ್ಲೇ ಭಕ್ತಿಯಿಡು. ನನ್ನನ್ನೇ ಪೂಜಿಸು. ನನಗೇ  ಪೊಡಮಡು(ನಮಸ್ಕರಿಸು). ಆಗ ನನ್ನನ್ನೇ ಸೇರುವೆ.  ನೀನು ನನಗೆ ಮೆಚ್ಚಿನವ.  ನಿನ್ನಾಣೆಗೂ ಇದು ನಿಜ. [ಭಗವದ್ಗೀತಾ ೧೮.೬೫]:

ಇದೆಲ್ಲವೂ ಮಹಾಭಾರತದಲ್ಲಿ ಬರುವ ಭಗವದ್ಗೀತೆಯಲ್ಲಿ   ಸ್ಫುಟವಾಗಿ ಹೇಳಿರುವ ಭಗವಂತನ ಸರ್ವೋತ್ತಮತ್ವದ ಕುರಿತಾದ ಮಾತುಗಳು.

[ಶಾಸ್ತ್ರ ಪ್ರಮಾಣದಲ್ಲಿ ಪ್ರಮುಖವಾದ  ಪಂಚರಾತ್ರವನ್ನು ನೋಡಿದರೆ ಅಲ್ಲಿ  ಪೂಜಾ ವಿಧಾನವನ್ನು ಹೇಳಿದ್ದಾರೆ. ಯಾಗದ ವಿಧಾನವನ್ನೂ   ಹೇಳಿದ್ದಾರೆ. ಮನುಷ್ಯನ ಪೂಜಾಕ್ರಮದ ಇತಿಹಾಸವನ್ನು ಅಲ್ಲಿ ಹೇಳಲಾಗಿದೆ. ಆದರೆ ಇಂತಹ ಪಂಚರಾತ್ರವನ್ನು ನಾನಾ ಕಾರಣ ನೀಡಿ ಕೆಲವರು ದೂರವಿಡುತ್ತಾರೆ! ಅದಕ್ಕಾಗಿ  ಪಂಚರಾತ್ರದ ಕುರಿತಾಗಿ ಮಹಾಭಾರತವೇ ಹೇಳುವ ಮಾತನ್ನು ಇಲ್ಲಿ ಆಚಾರ್ಯರು ಉಲ್ಲೇಖಿಸಿದ್ದಾರೆ:]

[ಇಂದು ಸಿಗುವುದು ಕೇವಲ ೪ರಿಂದ ೫ ಪ್ರಾಚೀನ ಪಂಚರಾತ್ರ ಸಂಹಿತೆಗಳಷ್ಟೇ. ಇತರ  ಸಂಹಿತೆಗಳು ಪ್ರಾಚೀನ ಸಂಹಿತೆಗಳಲ್ಲ.  ಅವೆಲ್ಲವೂ ಪೂಜಾ ಪದ್ಧತಿಗಾಗಿ ಸೇರಿಸಿರುವ ಅರ್ವಾಚೀನ ಸಂಹಿತೆಗಳು].  

 

ಪಂಚರಾತ್ರಸ್ಯ ಕೃತ್ಸ್ನಸ್ಯ ವಕ್ತಾ ನಾರಾಯಣಃ ಸ್ವಯಮ್ ।

ಸರ್ವೇಷ್ವೇತೇಷು ರಾಜೇಂದ್ರ ಜ್ಞಾನೇಷ್ವೇತದ್ ವಿಶಿಷ್ಯತೇ ॥೨.೧೦೬

 

ಜ್ಞಾನೇಷ್ವೇತೇಷು ರಾಜೇಂದ್ರ ಸಾಙ್ಖ್ಯಪಾಶುಪತಾದಿಷು

ಯಥಾಯೋಗಂ ಯಥಾನ್ಯಾಯಂ ನಿಷ್ಠಾ ನಾರಾಯಣಃ ಪರಃ ॥೧.೧೦೭

 

ಮಹಾಭಾರತದ ಶಾಂತಿಪರ್ವದಲ್ಲಿ[೩೫೯.೬೮-೬೯; ೭೨; ೩೬೦.೧-೩, ೩೫೯.೧] ಜನಮೇಜಯನ ಪ್ರಶ್ನೆಗೆ ಉತ್ತರರೂಪವಾಗಿ  ಈ ಮಾತು ಬರುತ್ತದೆ.  ಇಲ್ಲಿ ಪಂಚರಾತ್ರ ಎನ್ನುವುದು ನಾರಾಯಣನಿಂದಲೇ ರಚಿಸಲ್ಪಟ್ಟಿರುವುದು ಎಂದು ಸ್ಫುಟವಾಗಿ ಹೇಳಿದ್ದಾರೆ. ಯೋಗ, ಸಂಖ್ಯಾ, ಪಾಶುಪತ, ಎಲ್ಲವನ್ನು ನೋಡಿದಾಗ  ಪಂಚರಾತ್ರವೇ ಪ್ರಮುಖ ಎನ್ನುವುದು ತಿಳಿಯುತ್ತದೆ.

ಸಾಂಖ್ಯದಲ್ಲಾಗಲೀ, ಪಾಶುಪತದಲ್ಲಾಗಲೀ ಎಲ್ಲಾ ಕಡೆ ನಾರಾಯಣನೇ ಮಿಗಿಲು ಎನ್ನುವುದನ್ನೇ ಹೇಳಲಾಗಿದೆ. ಅದರಿಂದಾಗಿ ಎಲ್ಲೆಡೆ ನಾರಾಯಣನ ಸರ್ವೋತ್ತಮತ್ವವನ್ನು ಒಪ್ಪಿದ್ದಾರೆ.

 

ಪಞ್ಚರಾತ್ರವಿದೋ ಮುಖ್ಯಾ ಯಥಾಕ್ರಮಪರಾ ನೃಪ ।

ಏಕಾನ್ತಭಾವೋಪಗತಾ ವಾಸುದೇವಂ ವಿಶನ್ತಿ ತೇ ॥೨.೧೦೮

 

“ಓ ಜನಮೇಜಯನೇ, ಪಂಚರಾತ್ರವನ್ನು ಬಲ್ಲವರು, ತಾರತಮ್ಯದಲ್ಲಿ ನಿಷ್ಟರಾದವರು, ‘ಪರಮಾತ್ಮನನ್ನು ಬಿಟ್ಟರೆ ಬೇರೊಬ್ಬರನ್ನು ಆರಾಧಿಸಲಾರೆವು’ ಎನ್ನುವ ನಿರ್ಣಯವನ್ನು ಮಾಡಿದ ಭಕ್ತರು ವಾಸುದೇವನನ್ನು ಪ್ರವೇಶಿಸುತ್ತಾರೆ”. ಭಾರತದ ಈ  ಮಾತೂ ಕೂಡಾ  ಮೇಲಿನ ಮಾತನ್ನೇ ಹೇಳುತ್ತದೆ. ಇದು ಮಹಾಭಾರತದ ಪ್ರಮೇಯ ಏನು ಎನ್ನುವುದನ್ನು ಸಮರ್ಥನೆ ಮಾಡುವ ಶ್ಲೋಕವಾಗಿದೆ.

ವೈಶಂಪಾಯನರು ಮತ್ತು ಜನಮೇಜಯ ರಾಜನ ನಡುವೆ ನಡೆದ ಒಂದು ಸಂವಾದವನ್ನು ಆಚಾರ್ಯರು ಇಲ್ಲಿ  ಉಲ್ಲೇಖಿಸುತ್ತಿದ್ದಾರೆ:

 

ಬಹವಃ ಪುರುಷಾ ಬ್ರಹ್ಮನ್ನುತಾಹೋ ಏಕ ಏವ ತು ।

ಕೋ ಹ್ಯತ್ರ ಪುರುಷಶ್ರೇಷ್ಠಸ್ತಂ ಭವಾನ್ ವಕ್ತುಮರ್ಹತಿ ॥೨.೧೦೯

 

ವೈಶಂಪಾಯನ ಉವಾಚ:

ನೈತದಿಚ್ಚನ್ತಿ ಪುರುಷಮೇಕಂ ಕುರುಕುಲೋದ್ವಹ

ಬಹೂನಾಂ ಪುರುಷಾಣಾಂ ಹಿ ಯಥೈಕಾ ಯೋನಿರುಚ್ಯತೇ ।

ತಥಾ ತಂ ಪುರುಷಂ ವಿಶ್ವಮಾಖ್ಯಾಸ್ಯಾಮಿ ಗುಣಾಧಿಕಮ್ ॥೨.೧೧೦

 

ಜನಮೇಜಯ ಕೇಳುತ್ತಾನೆ:  “ಜ್ಞಾನಿಗಳಾದ ವೈಶಂಪಾಯನರೇ, ಭಿನ್ನಭಿನ್ನ ಜೀವರಿದ್ದಾರೋ ಅಥವಾ ಒಬ್ಬನೇ ಇದ್ದಾನೋ? ಈ ಜೀವ ಪ್ರಪಂಚದಲ್ಲಿ ಪುರುಷಶ್ರೇಷ್ಠನು ಯಾರು? ಅವನ ಕುರಿತು  ಹೇಳಲು ನೀವೇ ಯೋಗ್ಯರು” ಎಂದು.

ಜನಮೇಜಯನ ಪ್ರಶ್ನೆಗೆ ಉತ್ತರಿಸುತ್ತಾ ವೈಶಂಪಾಯನರು ಹೇಳುತ್ತಾರೆ:  “ಕುರುಕುಲದಲ್ಲಿ ಅಗ್ರಗಣ್ಯನಾದ ಜನಮೇಜಯನೇ, ಒಬ್ಬನೇ ಪುರುಷ ಎನ್ನುವ ಮಾತನ್ನು ಜ್ಞಾನಿಗಳು ಅಂಗೀಕರಿಸುವುದಿಲ್ಲ.  ವಿಧವಿಧವಾದ ಜೀವರಿಗೆ ಒಬ್ಬನೇ ಜನಕನಿರುವಂತೆ,  ಎಲ್ಲವನ್ನೂ ವ್ಯಾಪಿಸಿದ, ಗುಣದಿಂದ ಅಧಿಕನಾದ ಪರಮ ಪುರುಷನ ಕುರಿತು  ಹೇಳುತ್ತೇನೆ” ಎಂದು.  ಶಾಂತಿ ಪರ್ವದ ೩೬೦ನೆಯ ಅಧ್ಯಾಯದಲ್ಲಿ ಬಂದಿರುವ ಈ  ಮಾತು  ಸ್ಪಷ್ಟವಾಗಿ  ಅಭೇದ ವನ್ನು ನಿರಾಕರಣೆ ಮಾಡಿರುವುದನ್ನು ನಾವು ಕಾಣುತ್ತೇವೆ.

 

ಆಹ ಬ್ರಹ್ಮೈತಮೇವಾರ್ತ್ಥಂ ಮಹಾದೇವಾಯ ಪೃಚ್ಛತೇ ।

ತಸ್ಯೈಕಸ್ಯ ಮಮತ್ವಂ ಹಿ ಸ ಚೈಕಃ ಪುರುಷೋ ವಿರಾಟ್ ॥೨.೧೧೧

 

ಅಹಂ ಬ್ರಹ್ಮಾ ಚಾsದ್ಯ ಈಶಃ ಪ್ರಜಾನಾಂ ತಸ್ಮಾಜ್ಜಾತಸ್ತ್ವಂ ಚ ಮತ್ತಃ ಪ್ರಸೂತಃ।

ಮತ್ತೋ ಜಗತ್ ಸ್ಥಾವರಂ ಜಙ್ಗಮಂ ಚ ಸರ್ವೇ ವೇದಾಃ ಸರಹಸ್ಯಾಶ್ಚ ಪುತ್ರ ೨.೧೧೨

 

ಬ್ರಹ್ಮದೇವರು ತನ್ನನ್ನು ಪ್ರಶ್ನೆ ಮಾಡಿದ ರುದ್ರದೇವರಿಗೆ ಹೇಳಿರುವ, ನಾರಾಯಣನ ಸರ್ವೋತ್ತಮತ್ವವನ್ನು ಹೇಳುವ  ಮಾತನ್ನು ಆಚಾರ್ಯರು ಇಲ್ಲಿ  ಉಲ್ಲೇಖಿಸಿದ್ದಾರೆ: ಇದು  ಶಾಂತಿಪರ್ವದಲ್ಲಿ ಬರುವ ಶ್ಲೋಕ(೩೬೧.೯, ೨೧).  “ಅವನೊಬ್ಬನಿಗೆ ಮಾತ್ರ ‘ಇದು ನನ್ನದು’ ಎನ್ನುವ ಹಕ್ಕು. ಸ್ವತಂತ್ರನಾದ ಪುರುಷ ಅವನೊಬ್ಬನೇ” ಎನ್ನುವುದು  ಬ್ರಹ್ಮದೇವರು ರುದ್ರದೇವರಿಗೆ ಮಾಡಿದ ಉಪದೇಶವಾಗಿದೆ.    

“ಎಲ್ಲರಿಗೂ ಮೊದಲಾಗಿರುವ,  ಬ್ರಹ್ಮಶಬ್ದವಾಚ್ಯನಾದ  ನಾನು, ಆ ಪರಮಪುರುಷನಿಂದ ಹುಟ್ಟಿದವನು. ನನ್ನಿಂದ ನೀನು(ರುದ್ರ ದೇವರು) ಮತ್ತು ಸಮಸ್ತ  ಸ್ಥಾವರ-ಜಂಗಮ ಪ್ರಪಂಚ ಹುಟ್ಟಿರುತ್ತದೆ. ವೇದಾದಿ ಸಮಸ್ತ ರಹಸ್ಯ ಶಾಸ್ತ್ರಗಳೂ ಹುಟ್ಟಿದವು”  ಎಂದಿದ್ದಾರೆ ಬ್ರಹ್ಮದೇವರು.

 

ತಥೈವ ಭೀಮವಚನಂ ಧರ್ಮ್ಮಜಂ ಪ್ರತ್ಯುದೀರಿತಮ್ ।

ಬ್ರಹ್ಮೇಶಾನಾದಿಭಿಃ ಸರ್ವೈಃ ಸಮೇತೈರ್ಯ್ಯದ್ಗುಣಾಂಶಕಃ ॥೨.೧೧೩

 

ನಾವಸಾಯಯಿತುಂ ಶಕ್ಯೋ ವ್ಯಾಚಕ್ಷಾಣೈಶ್ಚ ಸರ್ವದಾ ।

ಸ ಏಷ ಭಗವಾನ್ ಕೃಷ್ಣೋ ನೈವ ಕೇವಲಮಾನುಷಃ ॥೨.೧೧೪

 

ಹಾಗೆಯೇ,  ಭೀಮಸೇನ  ಧರ್ಮರಾಜನನ್ನು ಕುರಿತು ಹೇಳಿದ ಮಾತು ಇದಾಗಿದೆ. [ಈಗಿನ ಪ್ರಚಲಿತ ಮಹಾಭಾರತ ಪಾಠದಲ್ಲಿ ಆಚಾರ್ಯರು ಹೇಳಿರುವ ಈ ಶ್ಲೋಕ ಕಾಣಸಿಗುವುದಿಲ್ಲ]. ಎಲ್ಲರೂ ಒಟ್ಟುಗೂಡಿ, ಬ್ರಹ್ಮ-ರುದ್ರ ಮೊದಲಾದ ಎಲ್ಲರಿಂದ ನಿರಂತರವಾಗಿ ವ್ಯಾಖ್ಯಾನ ಮಾಡುತ್ತಾ ಇದ್ದರೂ ಕೂಡಾ, ಯಾರ ಗುಣದ ಒಂದು ಭಾಗವೂ ಪೂರ್ಣವಾಗಿ ತಿಳಿಯಲು ಸಾಧ್ಯವಿಲ್ಲವೋ, ಅಂತಹ ಭಾಗವನ್ ನಾರಾಯಣನೇ  ಶ್ರೀಕೃಷ್ಣನಾಗಿದ್ದಾನೆ.  ಶ್ರೀಕೃಷ್ಣ  ಕೇವಲ ಒಬ್ಬ ಮನುಷ್ಯನಲ್ಲ.  [ಯಸ್ಯ ಪ್ರಸಾದಜೋ ..... ಶಾಂತಿಪರ್ವ (೩೫೦.೧೨), ಭಾಗವತ (೧೨.೪.೪೪)]

 

ಯಸ್ಯ ಪ್ರಸಾದಜೋ ಬ್ರಹ್ಮಾ ರುದ್ರಶ್ಚ ಕ್ರೋಧಸಂಭವಃ

ವಚನಂ ಚೈವ ಕೃಷ್ಣಸ್ಯ ಜ್ಯೇಷ್ಠಂ ಕುನ್ತೀಸುತಂ ಪ್ರತಿ  ॥೨.೧೧೫

 

ರುದ್ರಂ ಸಮಾಶ್ರಿತಾ ದೇವಾ ರುದ್ರೋ ಬ್ರಹ್ಮಾಣಮಾಶ್ರಿತಃ ।

ಬ್ರಹ್ಮಾ ಮಾಮಾಶ್ರಿತೋ ನಿತ್ಯಂ ನಾಹಂ ಕಿಞ್ಚಿದುಪಾಶ್ರಿತಃ’ ॥೨.೧೧೬

 

ಆ ಭಗವಂತನ  ಅನುಗ್ರಹದಿಂದ ಬ್ರಹ್ಮನು ಹುಟ್ಟಿದವನು.  ಸದಾಶಿವನು  ಕ್ರೋಧದಿಂದ ಹುಟ್ಟಿದವನು.[ಶ್ರೀಕೃಷ್ಣನೇ ಆ ಪರಮಾತ್ಮ]

ಇನ್ನು ಈ ಕುರಿತಾಗಿ ಶ್ರೀಕೃಷ್ಣನ ಮಾತೇ ಇದೆ.  ಧರ್ಮರಾಯನನ್ನು ಕುರಿತು ಶ್ರೀಕೃಷ್ಣ ಹೇಳುತ್ತಾನೆ: “ದೇವತೆಗಳು ರುದ್ರನನ್ನು ಆಶ್ರಯಿಸಿದ್ದಾರೆ. ರುದ್ರನು ಬ್ರಹ್ಮನನ್ನು ಆಶ್ರಯಿಸಿದ್ದಾನೆ. ಬ್ರಹ್ಮನು ಯಾವಾಗಲೂ ನನ್ನನ್ನು ಆಶ್ರಯಿಸಿದ್ದಾನೆ.  ನಾನು ಯಾವುದನ್ನೂ ಆಶ್ರಯಿಸಿಲ್ಲ” ಎಂದು. [ಆಶ್ವಮೇದಿಕ ಪರ್ವ (೧೧೮.೩೭)]

 

ಯಥಾssಶ್ರಿತಾನಿ ಜ್ಯೋತೀಂಷಿ ಜ್ಯೋತಿಃಶ್ರೇಷ್ಠಂ ದಿವಾಕರಮ್ ।

ಏವಂ ಮುಕ್ತಗಣಾಃ ಸರ್ವೇ ವಾಸುದೇವಮುಪಾಶ್ರಿತಾಃ ॥೨.೧೧೭

 

ಭವಿಷ್ಯತ್ಪರ್ವಗಂ ಚಾಪಿ ವಚೋ ವ್ಯಾಸಸ್ಯ ಸಾದರಮ್ ।

ವಾಸುದೇವಸ್ಯ ಮಹಿಮಾ ಭಾರತೇ ನಿರ್ಣ್ಣಯೋದಿತಃ ॥೨.೧೧೮ ॥

 

ತದರ್ತ್ಥಾಸ್ತು ಕಥಾಃ ಸರ್ವಾ ನಾನ್ಯಾರ್ತ್ಥಂ ವೈಷ್ಣವಂ ಯಶಃ ।

ತತ್ಪ್ರತೀಪಂ ತು ಯದ್ ದೃಶ್ಯೇನ್ನ ತನ್ಮಮ ಮನೀಷಿತಮ್ ॥೨.೧೧೯

 

ಯಾವ ರೀತಿ ಸಮಸ್ತ ಬೆಳಕಿನ ಕಾಯಗಳೂ ಕೂಡಾ ಬೆಳಕುಗಳಲ್ಲಿಯೇ ಶ್ರೇಷ್ಠನಾಗಿರುವ ಸೂರ್ಯನನ್ನು ಆಶ್ರೈಯಿಸಿವೆಯೋ, ಹಾಗೆಯೇ , ಎಲ್ಲಾ ಮುಕ್ತರೂ ಕೂಡಾ ವಾಸುದೇವನನ್ನು ಆಶ್ರಯಿಸಿದ್ದಾರೆ. [ಈ ಶ್ಲೋಕವೂ ಕೂಡಾ ಇಂದಿನ ಪ್ರಚಲಿತ ಪಾಠಗಳಲ್ಲಿ ಕಾಣಸಿಗುವುದಿಲ್ಲ].  ಇದು ಭವಿಷ್ಯತ್ ಪರ್ವದ ಮಾತಾಗಿದೆ.  ಭವಿಷ್ಯತ್ ಪರ್ವ ಹರಿವಂಶಪರ್ವದಲ್ಲಿದೆ.  [ಇಂದು ಹರಿವಂಶಪರ್ವದ ಎಲ್ಲಾ ಭಾಗಗಳು ಸಿಗುತ್ತಿಲ್ಲ].

ವಾಸುದೇವನ ಮಹಾತ್ಮ್ಯವು ಭಾರತದಲ್ಲಿ ನಿರ್ಣಯ ಎಂದು ಹೇಳಲ್ಪಟ್ಟಿದೆ.  ಭಾರತದ ಸಾರ ಪರಮಾತ್ಮನ ಮಹಿಮೆ. ಅದಕ್ಕಾಗಿಯೇ ಅಲ್ಲಿ ಎಲ್ಲಾ ಕಥೆಗಳೂ ಕೂಡಾ ಇವೆ.  ಪರಮಾತ್ಮನ ಕುರಿತಾಗಿ ಹೇಳಿರುವುದು ಕೇವಲ ಪರಮಾತ್ಮನ ಮಹಾತ್ಮ್ಯವನ್ನು ತಿಳಿಸುವುದಕ್ಕಾಗಿಯೇ  ಹೊರತು ಬೇರೆ ಉದ್ದೇಶಕ್ಕಾಗಿ ಅಲ್ಲ. ಅದಕ್ಕೆ ವಿರುದ್ಧವಾದುದು ಯಾವುದು ಕಾಣಿಸುತ್ತದೋ ಅದು ನನ್ನ ಅಭಿಪ್ರಾಯದ್ದಲ್ಲ. [ಉದಾಹರಣೆಗೆ: ‘ಇವರು ಹೀಗೆ ಹೇಳಿದ್ದರು’ ಎನ್ನುವ ಇತ್ಯಾದಿ ಪರಮಾತ್ಮನ ವಿರುದ್ಧವಾದ ಉಲ್ಲೇಖ ನನ್ನ ಅಭಿಪ್ರಾಯವನ್ನು ಹೇಳುವಂತದ್ದಲ್ಲ ಎಂದಿದ್ದಾರೆ ವೇದವ್ಯಾಸರು]

 

ಭಾಷಾಸ್ತು ತ್ರಿವಿಧಾಸ್ತತ್ರ ಮಯಾ ವೈ ಸಮ್ಪ್ರದರ್ಶಿತಾಃ ।

ಉಕ್ತೋ ಯೋ ಮಹಿಮಾ ವಿಷ್ಣೋಃ ಸ ತೂಕ್ತೋ ಹಿ ಸಮಾಧಿನಾ ॥೨.೧೨೦

 

ಶೈವದರ್ಶನಮಾಲಮ್ಬ್ಯ ಕ್ವಚಿಚ್ಛೈವೀ ಕಥೋದಿತಾ ।

ಸಮಾಧಿಭಾಷಯೋಕ್ತಂ ಯತ್ ತತ್ ಸರ್ವಂ ಗ್ರಾಹ್ಯಮೇವ ಹಿ ॥೨.೧೨೧

 

ನನ್ನಿಂದ ಮೂರು ರೀತಿಯಾದ ಭಾಷೆಗಳು ಪುರಾಣದಲ್ಲಿ ಪ್ರಯೋಗಿಸಲ್ಪಟ್ಟಿವೆ.  ಎಲ್ಲಿ ವಿಷ್ಣುವಿನ ಮಹಿಮೆಯು ನೇರವಾಗಿ ಹೇಳಲ್ಪಟ್ಟಿವೆಯೋ ಅದು ಸಮಾಧಿ ಭಾಷೆಯಲ್ಲಿದೆ.

ಶಿವನನ್ನು ಪ್ರತಿಪಾದನೆ ಮಾಡುವ ಪಾಶುಪತ ಶಾಸ್ತ್ರವನ್ನು ಅವಲಂಭಿಸಿ ಕೆಲವೊಮ್ಮೆ ಶಿವನಿಗೆ ಸಂಬಂಧಪಟ್ಟ ಕಥೆಯು ಹೇಳಲ್ಪಟ್ಟಿದೆ. [ಮಹಾಭಾರತದಲ್ಲಿ ಶಿವಸಹಸ್ರನಾಮ ಎರಡು ಬಾರಿ ಬರುತ್ತದೆ.  ದ್ರೋಣ ಪರ್ವದಲ್ಲಿ ಶತರುದ್ರೀಯ ಸಂಹಿತೆ ಇದೆ. ಇದೆಲ್ಲವೂ ದರ್ಶನ ಭಾಷೆಯಿಂದಾಗಿದೆ]. ದರ್ಶನ ಭಾಷೆಯಲ್ಲಿದ್ದದ್ದನ್ನು ಇನ್ನೊಂದರ ಅನುವಾದ ಎಂದು ತಿಳಿದು ತೆಗೆದುಕೊಳ್ಳುವ ಅವಶ್ಯಕತೆ ಇಲ್ಲ. ಆದರೆ ಸಮಾಧಿ ಭಾಷೆಯಿಂದ ಯಾವುದನ್ನು ಹೇಳಿದ್ದೇವೆಯೋ ಅದನ್ನು ತೆಗೆದುಕೊಳ್ಳಲೇಬೇಕು ಎಂದಿದ್ದಾರೆ ವೇದವ್ಯಾಸರು.

 

ಅವಿರುದ್ಧಂ ಸಮಾಧೇಸ್ತು ದರ್ಶನೋಕ್ತಂ ಚ ಗೃಹ್ಯತೇ ।

ಆದ್ಯನ್ತಯೋರ್ವಿರುದ್ಧಂ ಯದ್ ದರ್ಶನಂ ತದುದಾಹೃತಮ್ ॥೨.೧೨೨

 

ಸಮಾಧಿ ಭಾಷೆಗೆ ವಿರುದ್ಧವಾಗದ, ಆದರೆ  ದರ್ಶನದಲ್ಲಿ ಹೇಳಿರುವ ಮಾತನ್ನೂ ಕೂಡಾ  ನಾವು  ತೆಗೆದುಕೊಳ್ಳಬೇಕು ಎನ್ನುತ್ತಾರೆ ವೇದವ್ಯಾಸರು. [ಉದಾಹರಣೆಗೆ:  ಮಹಾಭಾರತದ ಆದಿ ಮತ್ತು ಅಂತ್ಯ.  ಎರಡೂ ಕೂಡಾ ನಾರಾಯಣನ ಸರ್ವೋತ್ಕರ್ಷದೊಂದಿಗೆ ಉಪಸಂಹಾರವನ್ನು ಹೊಂದಿವೆ. ಮಧ್ಯದಲ್ಲಿ ‘ನಾರಾಯಣ ಸರ್ವೋತ್ತಮ’ ಎಂದು ಇನ್ಯಾರೋ ಹೇಳಿದರು ಎನ್ನುವ ಅನುವಾದ ಬಂದರೆ ಅದನ್ನೂ ತೆಗೆದುಕೊಳ್ಳಬೇಕು. ಏಕೆಂದರೆ ಅದು ಸಮಾಧಿಗೆ ಅನುಗುಣವಾಗಿರುವುದರಿಂದ] 

 

ದರ್ಶನಾನ್ತರಸಿದ್ಧಂ ಚ ಗುಹ್ಯಭಾಷಾsನ್ಯಥಾ ಭವೇತ್ ।

ತಸ್ಮಾದ್ ವಿಷ್ಣೋರ್ಹಿ ಮಹಿಮಾ ಭಾರತೋಕ್ತೋ ಯಥಾರ್ತ್ಥತಃ ॥೨.೧೨೩

 

ಉಪಕ್ರಮ ಮತ್ತು ಉಪಸಂಹಾರಕ್ಕೆ ಯಾವುದು ವಿರುದ್ಧವಾಗಿದೆಯೋ ಅದು ದರ್ಶನ.  ಯಾವುದು ಇನ್ನೊಂದು ಶಾಸ್ತ್ರದಿಂದ ಸಿದ್ಧವಾಗಿರತಕ್ಕಂತದ್ದು ಎಂದು ಹೇಳಿರುತ್ತದೋ ಅದು  ದರ್ಶನಾನ್ತರಸಿದ್ಧ. ಇದನ್ನು ಬಿಟ್ಟರೆ ಇರುವುದು ಗುಹ್ಯ ಭಾಷೆ. [ಉದಾಹರಣೆಗೆ: ಮಹಾಭಾರತದ ಆದಿ ಮತ್ತು ಅಂತ್ಯದಲ್ಲಿ ಇರುವುದು ಸಮಾಧಿ ಭಾಷೆ.  ಅಲ್ಲಿ ಪರಮಾತ್ಮನ ಮಹಿಮೆಯನ್ನು ನೇರವಾಗಿ  ಹೇಳಿದ್ದಾರೆ. ಮಧ್ಯದಲ್ಲಿ ಬರುವ ಶಿವ ಸಹಸ್ರನಾಮ, ಶತರುದ್ರೀಯ ಸಂಹಿತ, ಇತ್ಯಾದಿ ಆದಿ ಮತ್ತು ಅಂತ್ಯಕ್ಕೆ ವಿರುದ್ಧವಿರುವುದರಿಂದ ಅದು ದರ್ಶನ ಭಾಷೆ. ಇನ್ನು ಅನೇಕ ಕಡೆ ಸಾಮಾನ್ಯ ಜನರಿಗೆ ತಿಳಿಯದ  ಪ್ರಮೇಯಗಳಿವೆ.  ಅದು ಗುಹ್ಯ ಭಾಷೆ]. ಹೀಗೆ ದೇವರ ಮಹಿಮೆಯು ಮಹಾಭಾರತದಲ್ಲಿ ವಿಶೇಷವಾಗಿ ಹೇಳಲ್ಪಟ್ಟಿದೆ.

[ಸಮಾಧಿ, ದರ್ಶನ ಮತ್ತು ಗುಹ್ಯ, ಈ ಮೂರು ಭಾಷೆಗಳ ಪರಿವೃತ್ತಿ(permutation) ಒಂಬತ್ತು: ೧. ಸಮಾಧಿಸಮಾಧಿ ಭಾಷೆ  ೨. ಸಮಾಧಿದರ್ಶನ ಭಾಷೆ ೩. ಸಮಾಧಿಗುಹ್ಯ ಭಾಷೆ ೪. ದರ್ಶನಸಮಾಧಿ ಭಾಷೆ ೫. ದರ್ಶನದರ್ಶನ ಭಾಷೆ  ೬. ದರ್ಶನಗುಹ್ಯ ಭಾಷೆ  ೭.ಗುಹ್ಯಸಮಾಧಿ ಭಾಷೆ  ೮. ಗುಹ್ಯದರ್ಶನ ಭಾಷೆ ೯. ಗುಹ್ಯಗುಹ್ಯ ಭಾಷೆ. ಇದೇ ರೀತಿ ಈ ಮೂರರ ಸಂಯೋಜನೆ(combination) ೮೧ ಆಗುತ್ತದೆ(ಉದಾಹರಣೆಗೆ: ೧.ಸಮಾಧಿಸಮಾಧಿಸಮಾಧಿ ಭಾಷೆ ೨. ಸಮಾಧಿಸಮಾಧಿದರ್ಶನ ಭಾಷೆ ೩. ಸಮಾಧಿಸಮಾಧಿಗುಹ್ಯ ಭಾಷೆ............೮೦. ಗುಹ್ಯಗುಹ್ಯದರ್ಶನ ಭಾಷೆ ೮೧. ಗುಹ್ಯಗುಹ್ಯಗುಹ್ಯ ಭಾಷೆ) ಇದನ್ನು ಭಾಗವತ ತಾತ್ಪರ್ಯ ನಿರ್ಣಯದಲ್ಲಿ ಮಧ್ವಾಚಾರ್ಯರು ನಿರೂಪಣೆ ಮಾಡಿರುವುದನ್ನು ನಾವು ಕಾಣಬಹುದು].

 

ತಸ್ಯಾಙ್ಗಂ ಪ್ರಥಮಂ ವಾಯುಃ ಪ್ರಾದುರ್ಭಾವತ್ರಯಾನ್ವಿತಃ ।

ಪ್ರಥಮೋ ಹನುಮಾನ್ ನಾಮ ದ್ವಿತೀಯೋ ಭೀಮ ಏವ ಚ ॥೨.೧೨೪

 

ಪರಮಾತ್ಮನ ಪ್ರಧಾನ ಸಹಾಯಕನಾಗಿದ್ದು ಭಗವಂತನ ಕಾರ್ಯವನ್ನು ಸಾಧಿಸುವವನು ಮೂರು ಅವತಾರಗಳಿಂದ ಕೂಡಿರುವ   ಮುಖ್ಯಪ್ರಾಣನು.  ಆತನ ಮೊದಲನೆಯ ಅವತಾರ  ಹನುಮಂತ ಎಂಬ ಹೆಸರಿನದ್ದು.  ಎರಡನೆಯ ಅವತಾರ ಭೀಮ ಎನ್ನುವ ಹೆಸರನ್ನು ಹೊತ್ತಿರುವುದು.  

 

ಪೂರ್ಣ್ಣಪ್ರಜ್ಞಸ್ತೃತೀಯಸ್ತು ಭಗವತ್ಕಾರ್ಯ್ಯಸಾಧಕಃ ।

ತ್ರೇತಾದ್ಯೇಷು ಯುಗೇಷ್ವೇಷ ಸಮ್ಭೂತಃ ಕೇಶವಾಜ್ಞಯಾ ॥೨.೧೨೫

 

ಏಕೈಕಶಸ್ತ್ರಿಷು ಪೃಥಕ್ ದ್ವಿತೀಯಾಙ್ಗಂ ಸರಸ್ವತೀ ।

ಶಂರೂಪೇ ತು ರತೇರ್ವಾಯೌ ಶ್ರೀರಿತ್ಯೇವ ಚ ಕೀರ್ತ್ತ್ಯತೇ  ॥೨.೧೨೬

 

ಸೈವ ಚ ದ್ರೌಪದೀ ನಾಮ ಕಾಳೀ ಚನ್ದ್ರೇತಿ ಚೋಚ್ಯತೇ ।

ತೃತೀಯಾಙ್ಗಂ ಹರೇಃ ಶೇಷಃ ಪ್ರಾದುರ್ಭಾವಸಮನ್ವಿತಃ ॥೨.೧೨೭

 

ಪ್ರಾದುರ್ಭಾವಾ ನರಶ್ಚೈವ ಲಕ್ಷ್ಮಣೋ ಬಲ ಏವ ಚ

ರುದ್ರಾತ್ಮಕತ್ವಾಚ್ಛೇಷಸ್ಯ ಶುಕೋ ದ್ರೌಣಿಶ್ಚ ತತ್ತನೂ ॥೨.೧೨೮

 

ಇನ್ದ್ರೇ ನರಾಂಶಸಮ್ಪತ್ತ್ಯಾ ಪಾರ್ತ್ಥೋsಪೀಷತ್ ತದಾತ್ಮಕಃ

ಪ್ರದ್ಯುಮ್ನಾದ್ಯಾಸ್ತತೋ ವಿಷ್ಣೋರಙ್ಗಭೂತಾಃ ಕ್ರಮೇಣ ತು  ॥೨.೧೨೯

 

ಮೂರನೆಯದ್ದು ಪೂರ್ಣಪ್ರಜ್ಞ ಅಥವಾ ಮಧ್ವಾವತಾರ.  ತ್ರೇತಾಯುಗ,  ದ್ವಾಪರಯುಗ ಮತ್ತು ಕಲಿಯುಗದಲ್ಲಿ ಪರಮಾತ್ಮನ ಆಣತಿಯಂತೆ ಮುಖ್ಯಪ್ರಾಣ ಅವತರಿಸಿದ. ಈ ಮೂರು ಅವತಾರಗಳಲ್ಲಿ ಪರಮಾತ್ಮನ ಎರಡನೇ ಸಹಾಯಕಿ ಭಾರತೀದೇವಿಯು. ಮಹಾಭಾರತದಲ್ಲಿ ಭಾರತೀದೇವಿಯನ್ನು ಶ್ರೀಃ ಎಂದು ಹೇಳಿದ್ದಾರೆ. [ಶಂ ಎಂದರೆ ಆನಂದರೂಪನಾದ ಮುಖ್ಯಪ್ರಾಣ.  ಅವನಲ್ಲಿ ರತಳಾದ ಭಾರತೀ ದೇವಿಯು ಶ್ರೀಃ].  ಅವಳೇ ದ್ರೌಪದೀ ಎಂದೂ, ಕಾಳಿ ಎಂದೂ, ಚಂದ್ರಾ ಎಂದೂ ಹೇಳಲ್ಪಡುತ್ತಾಳೆ.

ಮೂರನೆಯ ಸಹಾಯಕ ಶೇಷನು. ಇವನೂ ಕೂಡಾ ಅವತಾರ ರೂಪವನ್ನು ಹೊಂದಿದ್ದಾನೆ. ಅವನ ಮೂರು ಅವತಾರಗಳು ಹೀಗಿವೆ: (೧). ಯಮಧರ್ಮನ ಮಗನಾಗಿ, ನರ ಎನ್ನುವ ಹೆಸರಿನಿಂದ ಹುಟ್ಟಿರುವುದು, (೨). ದಶರಥನ ಮಗನಾಗಿ ಲಕ್ಷ್ಮಣ ಎನ್ನುವ ಹೆಸರಿನವನಾದವನು, (೩). ವಾಸುದೇವನ ಮಗನಾಗಿ, ಬಲ ಎಂದೂ ಅವತಾರ ಮಾಡಿದ್ದಾನೆ.

ಶೇಷ ಹಿಂದೆ ರುದ್ರನಾಗಿದ್ದ.  ಈಗಲೂ ಆತ ರುದ್ರನಿಗೆ ಸಮಾನ.  ಅದರಿಂದಾಗಿ ಶುಕಾಚಾರ್ಯನಾಗಿ ಅಶ್ವತ್ಥಾಮನಾಗಿ  ಪರಮಾತ್ಮನ ಅವತಾರದಲ್ಲಿ ಸೇವೆಯನ್ನು ಸಲ್ಲಿಸಿದ್ದಾನೆ.  ಅವನೂ ಕೂಡಾ ಮೂರನೆಯ ಸಹಾಯಕ.

ಇಂದ್ರನಲ್ಲಿ ನರಾವೇಶವನ್ನು ಹೊಂದಿರುವುದರಿಂದ ಅರ್ಜುನನೂ ಕೂಡಾ ನರನ ಆವೇಶದಿಂದ ಮೂರನೇ ಸಹಾಯಕನಾಗಿಯೇ ನಿಲ್ಲುತ್ತಾನೆ.

ಅದಾದ ಮೇಲೆ ಪ್ರದ್ಯುಮ್ನ-ಅನಿರುದ್ಧ ಮೊದಲಾದವರೂ ಕೂಡಾ ಕ್ರಮವಾಗಿ ಪರಮಾತ್ಮನ ಸಹಾಯಕರೇ ಆಗಿದ್ದಾರೆ.

 

No comments:

Post a Comment