ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Sunday, January 21, 2018

Mahabharata Tatparya Nirnaya Kannada 2.130-2.163

 ಚರಿತಂ ವೈಷ್ಣವಾನಾಂ ತದ್ ವಿಷ್ಣೂದ್ರೇಕಾಯ ಕತ್ಥ್ಯತೇ’

ತಥಾ ಭಾಗವತೇsಪ್ಯುಕ್ತಂ ಹನೂಮದ್ವಚನಂ ಪರಮ್ ॥೨.೧೩೦

 

ಭಗವದ್ಭಕ್ತರ  ಚರಿತ್ರೆಯು ಪರಮಾತ್ಮನಲ್ಲಿ ಭಕ್ತಿಯ ಉದ್ರೇಕಕ್ಕಾಗಿ ಹೇಳಲ್ಪಡುತ್ತದೆ.

ಭಾಗವತದ ಐದನೇ ಸ್ಕಂಧದ ಹತ್ತೊಂಬತ್ತನೆಯ ಅಧ್ಯಾಯದಲ್ಲಿ ಹನುಮಂತನ ಮಾತು ಈ ರೀತಿಯಾಗಿದೆ:

 

ಮರ್ತ್ತ್ಯಾವತಾರಸ್ತ್ವಿಹ ಮರ್ತ್ತ್ಯಶಿಕ್ಷಣಂ ರಕ್ಷೋವಧಾಯೈವ ನ ಕೇವಲಂ ವಿಭೋಃ ।

ಕುತೋsಸ್ಯ ಹಿ ಸ್ಯೂ ರಮತಃ ಸ್ವ ಆತ್ಮನ್ ಸೀತಾಕೃತಾನಿ ವ್ಯಸನಾನೀಶ್ವರಸ್ಯ ॥೨.೧೩೧

 

ವೈ ಸ ಆತ್ಮಾssತ್ಮವತಾಮಧೀಶ್ವರೋ ಭುಙ್ಕ್ತೇ ಹಿ ದುಃಖಂ ಭಗವಾನ್ ವಾಸುದೇವಃ ।

ನ ಸ್ತ್ರೀಕೃತಂ ಕಶ್ಮಲಮಶ್ನುವೀತ ನ ಲಕ್ಷ್ಮಣಂ ಚಾಪಿ ಜಹಾತಿ ಕರ್ಹಿಚಿತ್ ॥೨.೧೩೨

 

ಯತ್ಪಾದಪಙ್ಕಜಪರಾಗನಿಷೇವಕಾಣಾಂ ದುಃಖಾನಿ ಸರ್ವಾಣಿ ಲಯಂ ಪ್ರಯಾನ್ತಿ ।

ಸ ಬ್ರಹ್ಮವನ್ದ್ಯಚರಣೋ ಜನಮೋಹನಾಯ ಸ್ತ್ರೀಸಙ್ಗಿನಾಮಿತಿ ರತಿಂ ಪ್ರಥಯಂಶ್ಚಚಾರ೨.೧೩೩

 

ಈ ಭೂಮಿಯಲ್ಲಿ ಕೇವಲ ರಾಕ್ಷಸರನ್ನು ಕೊಲ್ಲುವುದಕ್ಕಾಗಿ ಪರಮಾತ್ಮನ ಅವತಾರ ಆಗುವುದಲ್ಲ. ಮನುಷ್ಯರನ್ನು ಶಿಕ್ಷಣ ಮಾಡುವುದಕ್ಕಾಗಿ ಅವತಾರ ಲೀಲೆ. [ತನ್ನಿಂದಲೇ ಹುಟ್ಟಿದ ರಾವಣನನ್ನು ಕೊಲ್ಲಲಿಕ್ಕೆ ರಾಮ ಅಷ್ಟೆಲ್ಲಾ ಪ್ರಯಾಸ ಪಡಬೇಕೆ? ಇತ್ಯಾದಿ ಪ್ರಶ್ನೆ ಹಾಕುವವರಿಗೆ ಇದು ಉತ್ತರ. ಕೇವಲ ರಾಕ್ಷಸರನ್ನು ಕೊಲ್ಲಲು ಭಗವಂತ ಅವತಾರ ಎತ್ತಿ ಬರಬೇಕಾಗಿಲ್ಲ.  ಕೇವಲ ಸಂಕಲ್ಪದಿಂದ ಎಲ್ಲವನ್ನೂ ಭಗವಂತ ಮಾಡಬಲ್ಲ.  ಅವತಾರದ ಮುಖ್ಯ ಉದ್ದೇಶ ಮರ್ತ್ಯಶಿಕ್ಷಣ.  ನಮ್ಮ ಮೇಲಿನ ಕಾರುಣ್ಯದಿಂದ ನಮಗೆ ಶಿಕ್ಷಣ ನೀಡುವ ಸಲುವಾಗಿ ಭಗವಂತ ಅವತಾರ ಲೀಲೆಯನ್ನು ತೋರುತ್ತಾನೆ] 

ತನ್ನಲ್ಲಿಯೇ ಆನಂದಪಡುವ ನಾರಾಯಣನಿಗೆ ಸೀತೆಯಿಂದ ಉಂಟಾದ ದುಃಖಗಳು ಎಲ್ಲಿಂದ?

ಆತ್ಮಾನಂದವುಳ್ಳ ಮುಕ್ತರಿಗೆ ಒಡೆಯನಾದ ಅಂತರ್ಯಾಮಿಯಾದ ಷಡ್ಗುಣೈಶ್ವರ್ಯ ಸಂಪನ್ನನಾದ, ವಸುದೇವನ ಮಗನಾದ ಶ್ರೀಕೃಷ್ಣನು ದುಃಖವನ್ನು ಉಣ್ಣುವುದಿಲ್ಲ;  ಹೆಣ್ಣಿನಿಂದ ಉಂಟಾದ ಸಂಕಟವನ್ನು ಅನುಭವಿಸುವುದಿಲ್ಲ; ಲಕ್ಷ್ಮಣನನ್ನು ಸಂಕಟಕ್ಕೆ ಒಳಗಾಗಲು ಬಿಡುವುದಿಲ್ಲ.  

ಯಾರ ಅಡಿದಾವರೆಗಳ ದೂಳನ್ನು ಸೇವೆ ಮಾಡುವುದರಿಂದ ಎಲ್ಲಾ ದುಃಖಗಳೂ ಲಯವನ್ನು ಹೊಂದುತ್ತವೋ, ಅಂತಹ,  ಬ್ರಹ್ಮನಿಂದಲೂ ನಮಸ್ಕರಿಸಲ್ಪಟ್ಟ ಪಾದಗಳಿರುವ  ಪರಮಾತ್ಮನು, ಜನರ ಮೋಹಕ್ಕಾಗಿಯೂ ಹೆಣ್ಣಿನಲ್ಲಿ ವಿಪರೀತ ವ್ಯಾಮೋಹ ಉಳ್ಳವರ ಒಂದು ಅವಸ್ಥೆಯನ್ನು ಜಗತ್ತಿಗೆ ತೋರಿಸುತ್ತಾ ತಿರುಗಾಡಿದನು.

 

[ಆಚಾರ್ಯರು ಉಲ್ಲೇಖಿಸಿರುವ ಈ ಮುಂದಿನ ಎರಡು ಶ್ಲೋಕಗಳು ಇಂದು ಉಪಲಬ್ಧವಿರುವ  ಪಾಠಗಳಲ್ಲಿ ಕಾಣಸಿಗುವುದಿಲ್ಲ].

 

ಕ್ವಚಿಚ್ಛಿವಂ ಕ್ವಚಿದೃಷೀನ್ ಕ್ವಚಿದ್ ದೇವಾನ್ ಕ್ವಚಿನ್ನರಾನ್ ।

ನಮತ್ಯರ್ಚ್ಚಯತಿ ಸ್ತೌತಿ ವರಾನರ್ತ್ಥಯತೇsಪಿಚ ॥೨.೧೩೪

 

ಲಿಙ್ಗಂ ಪ್ರತಿಷ್ಠಾಪಯತಿ ವೃಣೋತ್ಯಸುರತೋ ವರಾನ್ ।

ಸರ್ವೇಶ್ವರಃ ಸ್ವತನ್ತ್ರೋsಪಿ ಸರ್ವಶಕ್ತಿಶ್ಚ ಸರ್ವದಾ ॥೨.೧೩೫

 

ಅವತಾರದಲ್ಲಿ ಪರಮಾತ್ಮ ಕೆಲವೊಮ್ಮೆ ಸದಾಶಿವನನ್ನು, ಕೆಲವೊಮ್ಮೆ ಋಷಿಗಳನ್ನು, ಕೆಲವೊಮ್ಮೆ ದೇವತೆಗಳನ್ನು, ಕೆಲವೊಮ್ಮೆ ಮನುಷ್ಯರನ್ನೂ ಪೂಜಿಸುತ್ತಾನೆ . ಅವರಿಗೆ ನಮಸ್ಕರಿಸುತ್ತಾನೆ, ಸ್ತೋತ್ರ ಮಾಡುತ್ತಾನೆ,  ಲಿಂಗ ಪ್ರತಿಷ್ಠೆ ಮಾಡುತ್ತಾನೆ, ಅಸುರರಲ್ಲಿ [ಮಧುಕೈಟಭರಿಂದ] ವರವನ್ನು ಬೇಡುತ್ತಾನೆ!!  ಸರ್ವಶಕ್ತನಾದರೂ, ಸ್ವತಂತ್ರನಾದರೂ, ಎಲ್ಲಕ್ಕೂ ಒಡೆಯನಾದರೂ, ಸರ್ವಜ್ಞನಾದರೂ ಕೂಡಾ  ಜನರ ವಿಮೋಹಕ್ಕಾಗಿ ಭಗವಂತ ಈ ರೀತಿಯ ಲೀಲೆಗಳನ್ನು ತೋರುತ್ತಾನೆ.

 

ಸರ್ವಜ್ಞೋsಪಿ ವಿಮೋಹಾಯ ಜನಾನಾಂ ಪುರುಷೋತ್ತಮಃ

ತಸ್ಮಾದ್ ಯೋ ಮಹಿಮಾ ವಿಷ್ಣೋಃ ಸರ್ವಶಾಸ್ತ್ರೋದಿತಃ ಸ ಹಿ೨.೧೩೬

 

ನಾನ್ಯದಿತ್ಯೇಷ ಶಾಸ್ತ್ರಾಣಾಂ ನಿರ್ಣ್ಣಯಃ ಸಮುದಾಹೃತಃ ।

ಭಾರತಾರ್ತ್ಥಸ್ತ್ರಿಧಾ ಪ್ರೋಕ್ತಃ ಸ್ವಯಂ ಭಗವತೈವ ಹಿ ॥೨.೧೩೭

 

‘ಮನ್ವಾದಿ ಕೇಚಿದ್ ಬ್ರುವತೇ ಹ್ಯಾಸ್ತೀಕಾದಿ ತಥಾ ಪರೇ ।

‘ತಥೋಪರಿಚರಾದ್ಯನ್ಯೇ ಭಾರತಂ ಪರಿಚಕ್ಷತೇ’ ॥೨.೧೩೮

 

ಆ ಕಾರಣದಿಂದ ಎಲ್ಲಾ ಶಾಸ್ತ್ರಗಳಲ್ಲಿ ಹೇಳಿರುವುದು ನಾರಾಯಣನ ಮಹಿಮೆಯನ್ನು ಹೊರತು ಬೇರೆಯದನ್ನಲ್ಲ. ಇದು ಎಲ್ಲಾ ಶಾಸ್ತ್ರಗಳ ನಿರ್ಣಯವಾಗಿದೆ.  ವಿಶೇಷವಾಗಿ ಭಾರತದ ಅರ್ಥ ಮೂರು ರೀತಿಯಾಗಿ ಹೇಳಲ್ಪಟ್ಟಿದೆ. 

ಮಹಾಭಾರತದ ಆದಿಪರ್ವದ ಒಂದನೆಯ ಅಧ್ಯಾಯದಲ್ಲಿನ   ೬೬ ನೆಯ ಶ್ಲೋಕ ಇದಾಗಿದೆ.  [ಇಂದು ಲಭ್ಯವಿರುವ  ಪಾಠದಲ್ಲಿ ಸ್ವಲ್ಪ ವ್ಯತ್ಯಾಸವಿದೆ. ಆದರೆ ಅಭಿಪ್ರಾಯ ಒಂದೇ ಆಗಿದೆ. ಈಗಿನ ಪಾಠದಲ್ಲಿ : ಮನ್ವಾದಿ ಭಾರತಂ ಕೇಚಿದಾಸ್ತೀಕಾದಿ ತಥಾsಪರೇ। ತಥೋಪರಿಚರಾದ್ಯನ್ಯೇ ವಿಪ್ರಾಃ ಸಂಯಗಧೀಯಿರೇ॥  ಎಂದಿದೆ.  ಅದನ್ನು ಆಚಾರ್ಯರು ಸರಿಪಡಿಸಿ ಮೇಲಿನಂತೆ ಹೇಳಿದ್ದಾರೆ]. 

ಕೆಲವರು ಭಾರತವನ್ನು ಮನುವಿನ ಕಥೆಯಿಂದ ಆರಂಭವಾಗುತ್ತದೆ ಎಂದು ಹೇಳುತ್ತಾರೆ.  ಇನ್ನು ಕೆಲವರು ಆಸ್ತೀಕನ ಕಥೆಯಿಂದ ಎಂದು ಹೇಳುತ್ತಾರೆ.  ಉಳಿದವರು ಉಪರಿಚರ ವಸುವಿನ ಕಥೆಯಿಂದ  ಎಂದೂ ಹೇಳುತ್ತಾರೆ.

 

ಸಕೃಷ್ಣಾನ್ ಪಾಣ್ಡವಾನ್ ಗೃಹ್ಯ ಯೋsಯಮರ್ತ್ಥಃ ಪ್ರವರ್ತ್ತತೇ  

ಪ್ರಾತಿಲೋಮ್ಯಾದಿವೈಚಿತ್ರ್ಯಾತ್ ತಮಾಸ್ತೀಕಂ ಪ್ರಚಕ್ಷತೇ ॥೨.೧೩೯

 

ಧರ್ಮ್ಮೋ ಭಕ್ತ್ಯಾದಿದಶಕಃ ಶ್ರುತಾದಿಃ ಶೀಲವೈನಯೌ ।

ಸಬ್ರಹ್ಮಕಾಸ್ತು ತೇ ಯತ್ರ ಮನ್ವಾದಿಂ ತಂ ವಿದುರ್ಬುಧಾಃ ॥೨.೧೪೦

 

ನಾರಾಯಣಸ್ಯ ನಾಮಾನಿ ಸರ್ವಾಣಿ ವಚನಾನಿ ತು ।

ತತ್ಸಾಮರ್ತ್ಥ್ಯಾಭಿಧಾಯೀನಿ ತಮೌಪರಿಚರಂ ವಿದುಃ ॥೨.೧೪೧

 

(೧) ಕೃಷ್ಣ ಮೊದಲಾದ ಪಾಂಡವರನ್ನು ಪ್ರಧಾನ ಭೂಮಿಕೆಯಾಗಿ  ಹಿಡಿದುಕೊಂಡು, ನಂತರದ ಘಟನೆಗಳನ್ನು ಮೊದಲೂ, ಮೊದಲನೇ ಘಟನೆಗಳನ್ನು ನಂತರವೂ, ಈ ರೀತಿಯಾದ ವಿಚಿತ್ರವಾದ ಶೈಲಿಯಲ್ಲಿ, ಐತಿಹಾಸಿಕ ಅರ್ಥ ಏನು ಹೊರಡುತ್ತದೋ, ಅದನ್ನು ‘ಆಸ್ತೀಕ’ರ ಕಥೆ ಎಂದು ಹೇಳುತ್ತಾರೆ.  ಇದು ಭಗವದ್ ಭಕ್ತರಾದ ಪಾಂಡವರ ಕಥೆ ಎಂದು ಕೆಲವರು ಅಧ್ಯಯನ ಮಾಡುತ್ತಾರೆ.

(೨)^ ಮಹಾಭಾರತ ಧರ್ಮ, ಭಕ್ತಿ, ಮೊದಲಾದ ಹತ್ತು ಗುಣಗಳನ್ನು, ಶ್ರವಣ, ಮನನ, ನಿಧಿಧ್ಯಾಸನ, ಶೀಲ ಮತ್ತು ವಿನಯ ಎನ್ನುವ ಈ ಎಲ್ಲಾ ಮೌಲ್ಯಗಳನ್ನು ಪ್ರತಿನಿಧಿಸುತ್ತದೆ ಎಂದು ಯಾರು ಆರಂಭಿಸುತ್ತಾರೋ, ಅವರು ‘ಮನ್ವಾದಿ’ಗಳು.  

(೩) ಇಲ್ಲಿ ಎಲ್ಲವೂ ನಾರಾಯಣನ ನಾಮಗಳು. ಆದ್ದರಿಂದ  ಎಲ್ಲಾ ಶಬ್ದಗಳೂ ನಾರಾಯಣನ ಗುಣವನ್ನು ಹೇಳುತ್ತವೆ ಎಂದು  ಮಹಾಭಾರತವನ್ನು ನೋಡುವವರು ಅದನ್ನು ‘ಉಪರಿಚರಾದಿ’ ಎಂದು ನೋಡುತ್ತಾರೆ.

 

 [^ಮಹಾಭಾರತವು ಏಳುಪಾತ್ರಗಳ ಮೂಲಕ ಹದಿನೆಂಟು ಜೀವನ್ಮೌಲ್ಯಗಳ ವಿಶ್ಲೇಷಣೆಯನ್ನು ನಮ್ಮ ಮುಂದಿಡುತ್ತದೆ. ಅವುಗಳೆಂದರೆ:

(೧) ಧರ್ಮರಾಜ - ಧರ್ಮ(೧)

(೨) ಭೀಮಸೇನ - ಭಕ್ತಿ, ಜ್ಞಾನ, ವೈರಾಗ್ಯ, ಪ್ರಜ್ಞಾ, ಮೇಧಾ, ಧೃತಿ, ಸ್ಥಿತಿ, ಯೋಗ, ಪ್ರಾಣ ಮತ್ತು ಬಲ(೧೧)

(೩) ಅರ್ಜುನ - ಶ್ರವಣ, ಮನನ ಮತ್ತು ನಿಧಿಧ್ಯಾಸನ(೧೪)

(೪,೫) ನಕುಲ-ಸಹದೇವ - ಶೀಲ ಮತ್ತು ವಿನಯ(೧೬)

(೬) ದ್ರೌಪದಿ - ವೇದವಿದ್ಯೆ(೧೭)

(೭) ಶ್ರೀಕೃಷ್ಣ ವೇದವೇದ್ಯ(೧೮)

ನಾವು ಧರ್ಮದ ಚೌಕಟ್ಟಿನ ಮೇಲೆ ಭಕ್ತಿ, ಜ್ಞಾನ, ವೈರಾಗ್ಯ, ಪ್ರಜ್ಞಾ, ಮೇಧಾ, ಧೃತಿ, ಸ್ಥಿತಿ, ಯೋಗ, ಪ್ರಾಣ ಮತ್ತು ಬಲವೆಂಬ ಹತ್ತು ಗುಣಗಳನ್ನು ಮೈಗೂಡಿಸಿಕೊಳ್ಳಬೇಕು. ಶಾಸ್ತ್ರದ ಶ್ರವಣ, ಮನನ ಮತ್ತು ನಿಧಿಧ್ಯಾಸನದೊಂದಿಗೆ  ಶೀಲ ಮತ್ತು ವಿನಯಗಳು ನಮ್ಮ ನಿತ್ಯ ಸಂಗಾತಿಗಳಾಗಿರಬೇಕು.   ಈ ಹದಿನಾರು ಜೀವನ್ಮೌಲ್ಯಗಳಿಂದ ಹದಿನೇಳನೇ ವೇದವಿದ್ಯೆಯನ್ನು ಒಲಿಸಿಕೊಂಡು, ಹದಿನೆಂಟನೇ ವೇದವೇದ್ಯ ಭಗವಂತನನ್ನು ತಲುಪಬೇಕು. ಆ ಹದಿನೆಂಟನೇ ಭಗವಂತನನ್ನು ತಲುಪಲು ನಾವು ಈ ಹದಿನೇಳು ಮೆಟ್ಟಿಲುಗಳನ್ನು ಬಳಸಬೇಕು].

 

ಭಕ್ತಿರ್ಜ್ಞಾನಂ ಸ ವೈರಾಗ್ಯಂ ಪ್ರಜ್ಞಾ ಮೇಧಾ ಧೃತಿಃ ಸ್ಥಿತಿಃ ।

ಯೋಗಃ ಪ್ರಾಣೋ ಬಲಂ ಚೈವ ವೃಕೋದರ ಇತಿ ಸ್ಮೃತಃ ॥೨.೧೪೨

 

ಏತದ್ದಶಾತ್ಮಕೋ ವಾಯುಸ್ತಸ್ಮಾದ್ ಭಿಮಸ್ತದಾತ್ಮಕಃ ।

ಸರ್ವವಿದ್ಯಾ ದ್ರೌಪದೀ ತು ಯಸ್ಮಾತ್ ಸೈವ ಸರಸ್ವತೀ ॥೨.೧೪೩

 

ಭಕ್ತಿ, ಜ್ಞಾನ, ವೈರಾಗ್ಯ, ಪ್ರಜ್ಞಾ, ಮೇಧಾ, ಧೃತಿ(ಧೈರ್ಯ), ಸ್ಥಿತಿ, ಯೋಗ, ಪ್ರಾಣ ಮತ್ತು ಬಲ ಇಷ್ಟನ್ನೂ ಭೀಮಸೇನನು ಪ್ರತಿನಿಧಿಸುತ್ತಾನೆ ಎಂದು ಪಂಚರಾತ್ರದಲ್ಲಿ ಹೇಳಿದ್ದಾರೆ.  ಅದರಿಂದ ಭೀಮನೂ ಕೂಡಾ ಆ ಎಲ್ಲಾ ಗುಣಗಳನ್ನೂ ಹೊಂದಿದ್ದಾನೆ ಎಂದು ಚಿಂತನೆ ಮಾಡಬೇಕು.  ಎಲ್ಲಾ ವಿದ್ಯೆಗೆ ಅಭಿಮಾನಿಯಾದ ದ್ರೌಪದಿ ವೇದವಿದ್ಯೆಯ ಪ್ರತಿನಿಧಿ.

 

ಅಜ್ಞಾನಾದಿಸ್ವರೂಪಸ್ತು ಕಲಿರ್ದ್ದುರ್ಯ್ಯೋಧನಃ ಸ್ಮೃತಃ ।

ವಿಪರೀತಂ ತು ಯಜ್ಜ್ಞಾನಂ ದುಃಶಾಸನ ಇತೀರಿತಃ ॥೨.೧೪೪

 

ನಾಸ್ತಿಕ್ಯಂ ಶಕುನಿರ್ನ್ನಾಮ ಸರ್ವದೋಷಾತ್ಮಕಾಃ ಪರೇ ।

ಧಾರ್ತ್ತರಾಷ್ಟ್ರಾಸ್ತ್ವಹಙ್ಕಾರೋ ದ್ರೌಣೀ ರುದ್ರಾತ್ಮಕೋ ಯತಃ ॥೨.೧೪೫

 

ದ್ರೋಣಾದ್ಯಾ ಇನ್ದ್ರಿಯಾಣ್ಯೇವ ಪಾಪಾನ್ಯನ್ಯೇ ತು ಸೈನಿಕಾಃ ।

ಪಾಣ್ಡವೇಯಾಶ್ಚ ಪುಣ್ಯಾನಿ ತೇಷಾಂ ವಿಷ್ಣುರ್ನ್ನಿಯೋಜಕಃ ॥೨.೧೪೬

 

ಅಜ್ಞಾನ ಸ್ವರೂಪ ಸಾಕ್ಷಾತ್ ಕಲಿಯಾದರೆ,  ವಿಪರೀತ ಜ್ಞಾನ ಏನಿದೆ, ಅದನ್ನು ದುಃಶ್ಯಾಸನ ಪ್ರತಿನಿಧಿಸುತ್ತಾನೆ. 

ಶಕುನಿ ಇನ್ನ್ಯಾರೂ ಅಲ್ಲ, ನಾಸ್ತಿಕ್ಯದ ಅಭಿಮಾನಿ ರಕ್ಕಸ ಆತ. [ನಾಸ್ತಿಕ್ಯವೇ ಜೂಜು ಮುಂತಾದುವುಗಳ ಪ್ರವೃತ್ತಿಗೆ ಮೂಲ ಕಾರಣ.  ‘ದೇವರು ನಮಗೆ ಏನು ಕೊಡಬೇಕೋ ಅದನ್ನು ಕೊಡುತ್ತಾನೆ’ ಎನ್ನುವ ವಿಶ್ವಾಸ  ಆಸ್ತಿಕರಿಗಿರುತ್ತದೆ. ಹಾಗಾಗಿ  ಅವರು ಜೂಜು ಮೊದಲಾದವುಗಳಲ್ಲಿ ಪ್ರವೃತ್ತರಾಗುವುದಿಲ್ಲ. ಆದರೆ ದೇವರಲ್ಲಿ ವಿಶ್ವಾಸವಿಲ್ಲದ ನಾಸ್ತಿಕರು  ದಿಢೀರ್ ಶ್ರೀಮಂತರಾಗಲು ವಾಮಮಾರ್ಗವಿದೆ  ಎಂದು ನಂಬಿ ಜೂಜು ಮುಂತಾದವುಗಳಲ್ಲಿ  ಪ್ರವೃತ್ತರಾಗುತ್ತಾರೆ].  ಧೃತರಾಷ್ಟ್ರನ ಮಕ್ಕಳಲ್ಲಿ ಒಬ್ಬೊಬ್ಬರೂ ಒಂದೊಂದು ದೋಷಕ್ಕೆ ಪ್ರತಿನಿಧಿಗಳಾದರೆ,  ‘ನಾನು ದೇಹ’  ಎಂದೆನ್ನುವ ಪ್ರಜ್ಞೆ ಏನಿದೆ, ಅದನ್ನು ಅಶ್ವತ್ಥಾಮ ಪ್ರತಿನಿಧಿಸುತ್ತಾನೆ. 

ದ್ರೋಣಾದಿಗಳೆಲ್ಲಾ ಇಂದ್ರಿಯಕ್ಕೆ ಸಂಕೇತ.  [ಇಂದ್ರಿಯಗಳು ಪಾಪ ಮತ್ತು ಪುಣ್ಯ ಎರಡರ ಕಡೆಗೂ  ವಾಲುತ್ತವೆ.  ಹಾಗೇ  ದ್ರೋಣಾಚಾರ್ಯ ಮೊದಲಾದವರು ].  ದುರ್ಯೋಧನನ ಪರ ಯುದ್ಧದಲ್ಲಿ ಹೋರಾಡಿದ ಎಲ್ಲಾ ಸೈನಿಕರೂ ಕೂಡಾ  ಪಾಪಕ್ಕೆ ಪ್ರತಿನಿಧಿಗಳು.  ಪಾಂಡವರ ಸೇನೆಯಲ್ಲಿ ಇದ್ದವರೆಲ್ಲಾ ಪುಣ್ಯಕ್ಕೆ ಪ್ರತಿನಿಧಿಗಳು.

 

ಏವಮಧ್ಯಾತ್ಮನಿಷ್ಠಂ ಹಿ ಭಾರತಂ ಸರ್ವಮುಚ್ಯತೇ ।

ದುರ್ವಿಜ್ಞೇಯಮತಃ ಸರ್ವೈರ್ಭಾರತಂ ತು ಸುರೈರಪಿ ॥೨.೧೪೭

 

ಸ್ವಯಂ ವ್ಯಾಸೋ ಹಿ ತದ್ ವೇದ ಬ್ರಹ್ಮಾ ವಾ ತತ್ಪ್ರಸಾದತಃ  

ತಥಾsಪಿ ವಿಷ್ಣುಪರತಾ ಭಾರತೇ ಸಾರಸಙ್ಗ್ರಹಃ೨.೧೪೮

 

ಇತ್ಯಾದಿವ್ಯಾಸವಾಕ್ಯೈಸ್ತು ವಿಷ್ಣೂತ್ಕರ್ಷೋsವಗಮ್ಯತೇ

ವಾಯ್ವಾದೀನಾಂ ಕ್ರಮಶ್ಚೈವ  ತದ್ವಾಕ್ಯೈರೇವ ಚಿನ್ತ್ಯತೇ ॥೨.೧೪೯

 

ಇಡೀ ಮಹಾಭಾರತವು ಅಧ್ಯಾತ್ಮನಿಷ್ಠವಾಗಿದೆ.  ತಥಾಚ : ಯಾರಿಗೆ ಧರ್ಮ, ಭಕ್ತಿ ಮೊದಲಾದ ಹತ್ತು ಗುಣಗಳು, ಶ್ರವಣ-ಮನನ-ನಿಧಿಧ್ಯಾಸನ,  ಶೀಲ ಮತ್ತುವಿನಯ ಇದೆಯೋ, ಅವರಿಗೆ ವೇದವಿದ್ಯೆ ಒಲಿಯುತ್ತಾಳೆ.  ಎಲ್ಲಿ ನಾಸ್ತಿಕ್ಯ ಇರುತ್ತದೋ, ಎಲ್ಲಿ ಅಜ್ಞಾನ ಇರುತ್ತದೋ, ಎಲ್ಲಿ ವಿಪರೀತ ಜ್ಞಾನ ಇರುತ್ತದೋ ಅವರಿಗೆ ವೇದವಿದ್ಯೆ ಎಂದೆಂದಿಗೂ  ಒಲಿಯುವುದಿಲ್ಲ.  ಈ ಎಲ್ಲಾ ಹಿನ್ನೆಲೆಯಿಂದ ಮಹಾಭಾರತ ಹೇಗೆ ಅಧ್ಯಾತ್ಮನಿಷ್ಟವಾಗಿದೆ ಎನ್ನುವುದು ತಿಳಿಯುತ್ತದೆ.

ದೇವತೆಗಳೂ ಸೇರಿ, ಯಾರಿಗೂ ಕೂಡಾ ಭಾರತವನ್ನು ಸಂಪೂರ್ಣವಾಗಿ ತಿಳಿಯಲು ಸಾಧ್ಯವಿಲ್ಲ. ಇದನ್ನು ಸ್ವಯಂ ವೇದವ್ಯಾಸರೇ ಬಲ್ಲವರು. ವ್ಯಾಸರ(ಪರಮಾತ್ಮನ) ಅನುಗ್ರಹದಿಂದ ಬ್ರಹ್ಮದೇವರು ತಿಳಿದಿರಬಹುದು.  ಒಟ್ಟಿನಲ್ಲಿ ಮಹಾಭಾರತದ ತಿರುಳು ಪರಮಾತ್ಮನ ಸರ್ವೋತ್ಕೃಷ್ಟವನ್ನು ಪ್ರತಿಪಾದನೆ ಮಾಡುವುದೇ ಆಗಿದೆ ಎಂಬಿತ್ಯಾದಿ  ವೇದವ್ಯಾಸರ ಮಾತುಗಳಿಂದ ಪರಮಾತ್ಮನ ಶ್ರೇಷ್ಠತೆಯು ತಿಳಿಯಲ್ಪಡುತ್ತದೆ.  ಹಾಗೆಯೇ, ಮುಖ್ಯಪ್ರಾಣ ಮೊದಲಾದವರ ತಾರತಮ್ಯವೂ ಕೂಡಾ ವೇದದ ವಾಕ್ಯದಿಂದಲೇ ಚಿಂತಿಸಲ್ಪಡುತ್ತದೆ.

 

ವಾಯುರ್ಹಿ ಬ್ರಹ್ಮತಾಮೇತಿ ತಸ್ಮಾದ್ ಬ್ರಹ್ಮೈವ ಸ ಸ್ಮೃತಃ ।

ನ ಬ್ರಹ್ಮಸದೃಶಃ ಕಶ್ಚಿಚ್ಛಿವಾದಿಷು ಕಥಞ್ಚನ೨.೧೫೦

 

ಜ್ಞಾನೇ ವಿರಾಗೇ ಹರಿಭಕ್ತಿಭಾವೇ ಧೃತಿಸ್ಥಿತಿಪ್ರಾಣಬಲೇಷು ಯೋಗೇ 

ಬುದ್ಧೌ ಚ ನಾನ್ಯೋ ಹನುಮತ್ಸಮಾನಃ ಪುಮಾನ್ ಕದಾಚಿತ್ ಕ್ವಚ ಕಶ್ಚನೈವ ೨.೧೫೧

 

ಮುಖ್ಯಪ್ರಾಣನೇ ಮುಂದಿನ  ಕಲ್ಪದಲ್ಲಿ ಬ್ರಹ್ಮನಾಗುತ್ತಾನೆ.  ಆ ಕಾರಣದಿಂದ ಮುಖ್ಯಪ್ರಾಣನನ್ನು ‘ಬ್ರಹ್ಮ’ ಎಂದೂ ಕರೆಯುತ್ತಾರೆ.  ಶಿವ ಮೊದಲಾದವರಲ್ಲಿ ಬ್ರಹ್ಮನಿಗೆ ಸದೃಶನಾದವರು ಇಲ್ಲವೇ ಇಲ್ಲ. 

ಜ್ಞಾನದಲ್ಲಿ, ವೈರಾಗ್ಯದಲ್ಲಿ, ಪರಮಾತ್ಮನ ಭಕ್ತಿಯಲ್ಲಿ, ಇಂದ್ರಿಯ ನಿಗ್ರಹದಲ್ಲಿ, ಸಜ್ಜನರನ್ನು ಪಾಲನೆ ಮಾಡುವುದರಲ್ಲಿ, ಕ್ರಿಯೆಯಲ್ಲಿ, ಬಲದಲ್ಲಿ, ಧ್ಯಾನದಲ್ಲಿ, ಸರಿತಪ್ಪುಗಳ ನಿರ್ಣಯ ಮಾಡುವ ಶಕ್ತಿಯಲ್ಲಿ ಹನುಮಂತನಿಗೆ ಎಣೆಯಾದ ಇನ್ನೊಬ್ಬ ಪುರುಷನು ಎಲ್ಲಿಯೂ ಇಲ್ಲ.  ಯಾರೂ ಇಲ್ಲ.

[ಇದೇ ರೀತಿಯಾದ ಅನೇಕ ಮಾತುಗಳನ್ನು ನಾವು  ವಾಲ್ಮೀಕಿ ರಾಮಾಯಣದಲ್ಲಿ ಕಾಣುತ್ತೇವೆ. ವೇದದಲ್ಲಿಯೇ ಈ ಮಾತನ್ನು ಹೇಳಿರುವುದನ್ನು ಆಚಾರ್ಯರು ಇಲ್ಲಿ ಉಲ್ಲೇಖಿಸುತ್ತಾರೆ.  ಋಗ್ವೇದ ಸಂಹಿತೆಯ ಒಂದನೆಯ ಮಂಡಲದ ೧೪೧ನೆಯ ಸೂಕ್ತದಲ್ಲಿ ಹೀಗೆ ಹೇಳಿದ್ದಾರೆ:]

 

ಬಳಿತ್ಥಾ ತದ್ ವಪುಷೇ ಧಾಯಿ ದರ್ಶತಂ ದೇವಸ್ಯ ಭರ್ಗ್ಗಃ ಸಹಸೋ ಯತೋ ಜನಿ ।

ಯದೀಮುಪ ಹ್ವರತೇ ಸಾಧತೇ ಮತಿರೃತಸ್ಯ ಧೇನ ಅನಯನ್ತ ಸಸ್ರುತಃ ॥೨.೧೫೨

 

ಪೃಕ್ಷೋ ವಪುಃ ಪಿತುಮಾನ್ ನಿತ್ಯ ಆ ಶಯೇ  ದ್ವಿತೀಯಮಾ ಸಪ್ತಶಿವಾಸು ಮಾತೃಷು ।

ತೃತೀಯಮಸ್ಯ ವೃಷಭಸ್ಯ ದೋಹಸೇ ದಶಪ್ರಮತಿಂ ಜನಯನ್ತ ಯೋಷಣಃ ॥೨.೧೫೩

 

“ಬಲರೂಪನಾಗಿರುವ, ಸರ್ವಜ್ಞನಾಗಿರುವ ಪರಮಾತ್ಮನನ್ನು ಮುಖ್ಯಪ್ರಾಣನು  ಹೊರುತ್ತಾನೆ. ನಾರಾಯಣನಿಂದ ಹುಟ್ಟಿದ, ಬುದ್ಧಿಸ್ವರೂಪನಾದ  ಮುಖ್ಯಪ್ರಾಣನು ಪರಮಾತ್ಮನ ಸಮೀಪದಲ್ಲಿ ಸದಾ  ಬಾಗಿ ನಿಂತಿರುತ್ತಾನೆ.  ಪ್ರೇಮ ತುಂಬಿದ ಭಗವಂತನ ಮಾತುಗಳನ್ನು ಲಕ್ಷ್ಮೀದೇವಿಯಾದ ಸೀತೆಗಾಗಿ ಆತ ಒಯ್ಯುತ್ತಾನೆ”.   ಇದು ವೇದದಲ್ಲಿ ಹೇಳಿರುವ ಪ್ರಾಣದೇವರ ಮೊದಲರೂಪವಾದ ಹನುಮಂತನ ಕುರಿತಾದ ಮಾತು.  

ಇವನ ಎರಡನೇ ರೂಪ: ಸೈನ್ಯವನ್ನು ನಾಶಮಾಡುವ, ಅನ್ನವನ್ನು ಚೆನ್ನಾಗಿ ಉಣ್ಣುವ, ಯಾವಾಗಲೂ ಏಳು ಜನ ಮಂಗಳವನ್ನು ಉಂಟುಮಾಡುವ ತಾಯಂದಿರಲ್ಲಿ^ ಮಲಗಿಯೇ ಇರುವ ರೂಪವಾಗಿದೆ.  [ಸೇನೆಯನು ಕೊಂದವನು; ಬಂಡಿಯನ್ನವನುಂಡವನು ಮತ್ತು  ಏಳು ಜನ ತಾಯಂದಿರಲ್ಲಿ ಸದಾ ಕೂಸಾಗಿ ಇರುವವನು ಭೀಮಸೇನ. ಭಗವತ್ ಸಮೇತಸ್ತ್ವೇಸತಿ ವಿದ್ಯಾ ಸಂಪನ್ನತ್ವಂ ಭೀಮಸೇನ ಶಬ್ದಸ್ಯ ಅರ್ಥಃ.  ಅಂದರೆ ವಿದ್ಯಾಸಂಪನ್ನನಾದವನು ಮತ್ತು ಸದಾ ತನ್ನ  ಸ್ವಾಮಿಯಾದ  ನಾರಾಯಣನ ಜೊತೆಗಿರುವವನು-ಭೀಮಸೇನ ]

ವೇದಾಭಿಮಾನಿಗಳಾದ ತಾಯಂದಿರು ಪರಮಾತ್ಮನನ್ನು ವೇದಗಳ ರಹಸ್ಯ ಸಾರ ಎಂದು ತಿಳಿಸಿ ಕೊಡುವುದಕ್ಕಾಗಿ ಮಧ್ವನನ್ನಾಗಿ ಹುಟ್ಟಿಸಿದರು.  ಇದು ಮುಖ್ಯಪ್ರಾಣನ ಮೂರನೇ ರೂಪ.

[^ವೇದದಲ್ಲಿ ಬಲಸ್ವರೂಪನಾದ ಮುಖ್ಯಪ್ರಾಣನನ್ನು     ಸಪ್ತಶಿವಾಸು ಮಾತೃಶು  ಎಂದು ಕರೆಯುತ್ತಾರೆ.  ಅಂದರೆ  ಏಳು ಜನ ತಾಯಿಯಂದಿರಲ್ಲಿ ಸದಾ ಮಲಗಿರುವ ಕೂಸು ಎಂದರ್ಥ.   ಆ ಏಳು ಜನ ತಾಯಂದಿರು ಯಾರು ಅಂದರೆ  ಏಳು ಶಾಸ್ತ್ರಗಳು:- ನಾಲ್ಕುವೇದಗಳು,  ಇತಿಹಾಸ, ಪುರಾಣಗಳನ್ನೊಳಗೊಂಡ ಪಂಚರಾತ್ರ ಮತ್ತು ಮೂಲ ರಾಮಾಯಣ].

 

ನಿರ್ಯ್ಯದೀಂ ಬುಧ್ನಾನ್ಮಹಿಷಸ್ಯ ವರ್ಪ್ಪಸ ಈಶಾನಾಸಃ ಶವಸಾ ಕ್ರನ್ತ ಸೂರಯಃ ।

ಯದೀಮನು ಪ್ರದಿವೋ ಮಧ್ವ ಆಧವೇ ಗುಹಾ ಸನ್ತಂ ಮಾತರಿಶ್ವಾ ಮಥಾಯತಿ ॥೨.೧೫೪

 

ಪ್ರ ಯತ್ ಪಿತುಃ ಪರಮಾನ್ನೀಯತೇ ಪರ್ಯ್ಯಾ ಪೃಕ್ಷುಧೋ ವೀರುಧೋ ದಂಸು ರೋಹತಿ ।

ಉಭಾ ಯದಸ್ಯ ಜನುಷಂ ಯದಿನ್ವತ ಆದಿದ್ ಯವಿಷ್ಠೋ ಅಭವದ್ ಘೃಣಾ ಶುಚಿಃ೨.೧೫೫

 

ಜ್ಞಾನಿಗಳಲ್ಲಿ ಶ್ರೇಷ್ಠನಾದ ಮುಖ್ಯಪ್ರಾಣನ ಅನುಗ್ರಹದಿಂದ, ಶ್ರೇಷ್ಠನಾದ  ಪರಮಾತ್ಮನ ಗುಣಗಳನ್ನು ಜ್ಞಾನಿಗಳು ಸುಖವಾಗಿ ತಿಳಿಯುತ್ತಾರೆ.  ಯಾವ  ಪರಮಾತ್ಮನ ಚಿಂತನೆಯಿಂದ ಸಜ್ಜನರನ್ನು ಸರಿಯಾದ ದಾರಿಯಲ್ಲಿ ನಡೆಸಲು ಸಾದ್ಯವೋ,  ಅಂತಹ  ಪರಮಾತ್ಮನ ಗುಣಗಳನ್ನು ಸಾಧನೆ ಮಾಡಲು ಮುಖ್ಯಪ್ರಾಣನು ನಮ್ಮ ಹೃದಯ ಗುಹೆಯಲ್ಲೇ ಇರುವ ಅಂತರ್ಯಾಮಿಯಾದ ಪರಮಾತ್ಮನನ್ನು ಮಥನ ಮಾಡಿ ಕೊಡುತ್ತಾನೆ.

ಯಾವ ಈ ಮಧ್ವವೆಂಬ ರೂಪವು ಪರಮಪುರುಷನಾದ ನಾರಾಯಣನಿಂದ ಜಗತ್ತಿಗೆ ತರಲ್ಪಡುತ್ತದೋ, ಅಂತಹ ಈ ರೂಪವು, ದುರ್ವಾದಿಗಳ ಕ್ಷುದ್ರ ಪ್ರಶ್ನೆಯನ್ನು , ಒಂದು ಬಲಿಷ್ಠವಾದ  ಎತ್ತು ಹುಲ್ಲನ್ನು ಹಲ್ಲುಗಳಲ್ಲಿ ತುಂಡರಿಸಿದಂತೆ ತುಂಡರಿಸುತ್ತದೆ.  ಈ ಮುಖ್ಯಪ್ರಾಣನ ಮೂರನೆಯ ರೂಪವು ಲಕ್ಷ್ಮೀ ನಾರಾಯಣರನ್ನು ಜಗತ್ತಿಗೆ ಅವರ ಗುಣಗಳನ್ನು ತೋರಿಸುವ ಮುಖೇನ ಪ್ರಕಾಶಪಡಿಸುತ್ತದೆ. ಈ ರೂಪವು ಸಾಧುಜನರಲ್ಲಿ ದಯೆಯನ್ನು ಹೊಂದಿದ ರೂಪವಾಗಿದೆ.

'ಬಳಿತ್ಥಾ ಅಥವಾ ಪ್ರಾಣಾಗ್ನಿಸೂಕ್ತ  ವೆನ್ನುವ ಈ ಋಗ್ವೇದದ ಮಾತು  ಸ್ಫುಟವಾಗಿ ಮುಖ್ಯಪ್ರಾಣನ ಮೂರು ಅವತಾರಗಳನ್ನು ಹೇಳುತ್ತದೆ.

[ಹೀಗೆ ಋಗ್ವೇದ ದಲ್ಲಿಯೇ ಮೂರು ಅವತಾರಗಳ ವರ್ಣನೆ ಬಂದಿದೆ.  ತನ್ಮೂಲಕವಾಗಿ ರಾಮಾಯಣ ಮಹಾಭಾರತಗಳ ಚಿಂತನೆಯೂ ಬಂದಿದೆ. ವೇದದಿಂದ  ಇತಿಹಾಸ ಪುರಾಣಗಳನ್ನು ವಿಸ್ತಾರವಾಗಿ ಚಿಂತಿಸಬೇಕು ಎನ್ನುವ ಮಾತು ಮಹಾಭಾರತದಲ್ಲೇ ಬಂದಿದ್ದರೂ ಕೂಡಾ,  ಅದನ್ನು ಗ್ರಂಥದಲ್ಲಿ ತೋರಿಸಿಕೊಟ್ಟವರು ಮಧ್ವಾಚಾರ್ಯರು].  

 

ಅಶ್ವಮೇಧಃ ಕ್ರತುಶ್ರೇಷ್ಠೋ ಜ್ಯೋತಿಃಶ್ರೇಷ್ಠೋ ದಿವಾಕರಃ ।

ಬ್ರಾಹ್ಮಣೋ ದ್ವಿಪದಾಂ ಶ್ರೇಷ್ಠೋ ದೇವಶ್ರೇಷ್ಠಸ್ತು ಮಾರುತಃ ॥೨.೧೫೬

 

ಇದು ಪಾಂಡು ಹಾಗೂ ಕುಂತಿಯ ನಡುವಿನ ಸಂವಾದ.  ಧರ್ಮರಾಜ ಆಗಲೇ  ಹುಟ್ಟಿದ್ದಾನೆ,  ಕುಂತಿ ಮತ್ತು ಪಾಂಡು  ನಂತರ ಯಾವ  ದೇವತೆಯನ್ನು ಕರೆಯುವುದು ಎಂದು ಚರ್ಚೆ ಮಾಡುತ್ತಿರುತ್ತಾರೆ.  ಆಗ ಧರ್ಮರಾಜ ಈ ಮಾತನ್ನು ಹೇಳುತ್ತಾನೆ:  “ಯಾಗಗಳಲ್ಲಿಯೇ ಮಿಗಿಲಾದದ್ದು ಅಶ್ವಮೇಧ ಯಾಗ.  ಬೆಳಕುಗಳಲ್ಲಿಯೇ ಮಿಗಿಲಾದದ್ದು ಸೂರ್ಯನ ಬೆಳಕು. ಮನುಷ್ಯರಲ್ಲಿ ಶ್ರೇಷ್ಠನಾದವನು ಬ್ರಹ್ಮಜ್ಞಾನಿಯಾದ ಬ್ರಾಹ್ಮಣ.  ದೇವತೆಗಳಲ್ಲಿ ಮಿಗಿಲಾದವನು ಮುಖ್ಯಪ್ರಾಣನು”.  [ಇದು ಮಹಾಭಾರತದ ಆದಿಪರ್ವದ ಶ್ಲೋಕವಾಗಿದೆ (೧೨೯. ೪೬).  ಇಂದು ಲಭ್ಯವಿರುವ ಉತ್ತರದ ಪಾಠದಲ್ಲಿ ಇದು  ಕಾಣಸಿಗದಿದ್ದರೂ, ದಕ್ಷಿಣದ ಪಾಠದಲ್ಲಿ ಇಂದಿಗೂ ಈ ಶ್ಲೋಕ ಕಾಣಸಿಗುತ್ತದೆ].

 

ಬಲಮಿನ್ದ್ರಸ್ಯ ಗಿರಿಶೋ ಗಿರಿಶಸ್ಯ ಬಲಂ ಮರುತ್ ।

ಬಲಂ ತಸ್ಯ ಹರಿಃ ಸಾಕ್ಷಾನ್ನ ಹರೇರ್ಬಲಮನ್ಯತಃ  ॥೨.೧೫೭

 

ಆಚಾರ್ಯರು ಉಲ್ಲೇಖಿಸಿರುವ ಈ ಶ್ಲೋಕ ಇಂದು ಲಭ್ಯವಿರುವ ಪಾಠದಲ್ಲಿ ಕಾಣಸಿಗುವುದಿಲ್ಲ.  ಇಲ್ಲಿ ಹೀಗೆ ಹೇಳಿದ್ದಾರೆ:  “ಇಂದ್ರನಿಗಿಂತ ಬಲಪ್ರದನಾದವನು ಮುಖ್ಯಪ್ರಾಣನು. ಮುಖ್ಯಪ್ರಾಣನಿಗಿಂತ ಬಲಪ್ರದನಾದವನು ನಾರಾಯಣನು. ನಾರಾಯಣನಿಗಿಂತ ಬಲಪ್ರದನಾದ ಇನ್ನೊಬ್ಬ ಇಲ್ಲ” ಎಂದು.  ಈ ಮಾತಿನಿಂದ ಸ್ಪಷ್ಟವಾಗಿ ಪರಮಾತ್ಮನ ನಂತರದ ಸ್ಥಾನದಲ್ಲಿ ಮುಖ್ಯಪ್ರಾಣ ಇದ್ದಾನೆ ಎನ್ನುವುದು ನಮಗೆ ತಿಳಿಯುತ್ತದೆ.

 

ವಾಯುರ್ಭೀಮೋ ಭೀಮನಾದೋ ಮಹೌಜಾಃ ಸರ್ವೇಷಾಂ ಚ ಪ್ರಾಣಿನಾಂ ಪ್ರಾಣಭೂತಃ ।

ಅನಾವೃತ್ತಿರ್ದ್ದೇಹಿನಾಂ ದೇಹಪಾತೇ ತಸ್ಮಾದ್ ವಾಯುರ್ದ್ದೇವದೇವೋ ವಿಶಿಷ್ಟಃ ॥೨.೧೫೮

 

‘ಮುಖ್ಯಪ್ರಾಣನು ದುರ್ಜನರಿಗೆ ಭಯಂಕರನು.  ಭಯಂಕರವಾಗಿರುವ ಗರ್ಜನೆಯನ್ನು ಉಳ್ಳವನು. ಮಹಾಪರಾಕ್ರಮಿಯು. ಎಲ್ಲಾ ಜೀವಿಗಳಿಗೆ ಉಸಿರನ್ನು ಈಯುವವನು ಇವನು. ಮುಖ್ಯಪ್ರಾಣ ದೇಹದಿಂದ ಹೊರನಡೆದಾಗ ದೇಹಿಗಳ ದೇಹಪಾತವಾಗುತ್ತದೆ.  ಆ ಕಾರಣದಿಂದ ಮುಖ್ಯಪ್ರಾಣನು ದೇವತೆಗಳ ದೇವನು’. [ಇದು ಶಾಂತಿಪರ್ವದಲ್ಲಿ(೨೩೪.೪೧) ಬಂದಿರುವ ಶ್ಲೋಕವಾಗಿದೆ]. 

 

ತತ್ವಜ್ಞಾನೇ ವಿಷ್ಣುಭಕ್ತೌ ಧೈರ್ಯ್ಯೇ ಸ್ಥೈರ್ಯ್ಯೇ ಪರಾಕ್ರಮೇ ।

ವೇಗೇ ಚ ಲಾಘವೇ ಚೈವ ಪ್ರಲಾಪಸ್ಯ ಚ ವರ್ಜ್ಜನೇ ॥೨.೧೫೯

 

ಭೀಮಸೇನಸಮೋ ನಾಸ್ತಿ ಸೇನಯೋರುಭಯೋರಪಿ ।

ಪಾಣ್ಡಿತ್ಯೇ ಚ ಪಟುತ್ವೇ ಚ ಶೂರತ್ವೇ ಚ ಬಲೇsಪಿ ಚ ॥೨.೧೬೦

 

ತತ್ತ್ವಜ್ಞಾನದಲ್ಲಿ, ವಿಷ್ಣು  ಭಕ್ತಿಯಲ್ಲಿ, ಧೈರ್ಯದಲ್ಲಿ, ಸ್ಥೈರ್ಯದಲ್ಲಿ, ಪರಾಕ್ರಮದಲ್ಲಿ,  ವೇದದಲ್ಲಿ, ಬೇಗ ಕಾರ್ಯವನ್ನು ಸಾಧನೆ ಮಾಡುವುದರಲ್ಲಿ,  ಪ್ರಲಾಪ  ಇಲ್ಲದಿರುವವರಲ್ಲಿ, ಎರಡೂ ಸೇನೆಗಳಲ್ಲಿ ಭೀಮಸೇನನಿಗೆ ಸಮನಾದವನು  ಇನ್ನೊಬ್ಬನಿಲ್ಲ.  ಪಾಂಡಿತ್ಯದಲ್ಲಿ, ಸಾಮರ್ಥ್ಯದಲ್ಲಿ, ಶೂರತನದಲ್ಲಿ, ಬಲದಲ್ಲಿ ಈತನಿಗೆ ಸಮನಾದ ಇನ್ನೊಂದು ಜೀವನಿಲ್ಲ  ಎನ್ನುವ ಮಹಾಭಾರತದ ಮಾತಿದೆ. [ಇಂದು ಇದೇ ರೀತಿಯಾದ ಪಾಠ  ಕಾಣಸಿಗುವುದಿಲ್ಲ.  ಸ್ಕಂದಪುರಾಣ ಮತ್ತು ವನಪರ್ವದಲ್ಲಿ ಸ್ವಲ್ಪ ಪಾಠ ವ್ಯತ್ಯಾಸದೊಂದಿಗೆ ಈ ಮಾತು ಬರುತ್ತದೆ]. 

 

ತಥಾ ಯುದಿಷ್ಠಿರೇಣಾಪಿ ಭೀಮಂ ಪ್ರತಿ ಸಮೀರಿತಮ್ ।

ಧರ್ಮ್ಮಶ್ಚಾರ್ತ್ಥಶ್ಚ ಕಾಮಶ್ಚ ಮೋಕ್ಷಶ್ಚೈವ ಯಶೋ ಧ್ರುವಮ್ ॥೨.೧೬೧

 

ತ್ವಯ್ಯಾಯತ್ತಮಿದಂ ಸರ್ವಂ ಸರ್ವಲೋಕಸ್ಯ ಭಾರತ

ವಿರಾಟಪರ್ವಗಂ ಚಾಪಿ ವಚೋ ದುರ್ಯ್ಯೋಧನಸ್ಯ ಹಿ ॥೨.೧೬೨

 

ವೀರಾಣಾಂ ಶಾಸ್ತ್ರವಿದುಷಾಂ ಕೃತಿನಾಂ ತತ್ವನಿರ್ಣ್ಣಯೇ  

ಸತ್ವೇ ಬಾಹುಬಲೇ ಧೈರ್ಯ್ಯೇ ಪ್ರಾಣೇ ಶಾರೀರಸಮ್ಭವೇ ॥೨.೧೬೩

 

ಹಾಗೆಯೇ, ಯುದಿಷ್ಠಿರನಿಂದ ಭೀಮಸೇನನನ್ನು ಕುರಿತು ಹೇಳಿದ ಮಾತು ಹೀಗಿದೆ:  “ಧರ್ಮ-ಅರ್ಥ-ಕಾಮ-ಮೋಕ್ಷ-ಕೀರ್ತಿ ಎಲ್ಲವೂ  ನಿನ್ನಲ್ಲಿದೆ.  ನಿನ್ನ ಅನುಗ್ರಹದಿಂದ ಲೋಕದಲ್ಲಿ ಇತರರು ಅದನ್ನು ಪಡೆಯುತ್ತಾರೆ”. 

 

No comments:

Post a Comment