ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Sunday, September 15, 2019

Mahabharata Tatparya Nirnaya Kannada 1401_1405


೧೪. ಉದ್ಧವಪ್ರತಿಯಾನಮ್


ಓಂ ॥
ಕೃಷ್ಣೋ ವಿಮೋಚ್ಯ ಪಿತರಾವಭಿವನ್ದ್ಯ ಸರ್ವವನ್ದ್ಯೋsಪಿ ರಾಮಸಹಿತಃ ಪ್ರತಿಪಾಲನಾಯ
ಧರ್ಮ್ಮಸ್ಯ ರಾಜ್ಯಪದವೀಂ ಪ್ರಣಿಧಾಯ ಚೋಗ್ರಸೇನೇ ದ್ವಿಜತ್ವಮುಪಗಮ್ಯ ಮುಮೋಚ ನನ್ದಮ್ ೧೪.೦೧

ತಂದೆತಾಯಿಗಳನ್ನು ಕಂಸನ ಬಂಧನದಿಂದ ಬಿಡಿಸಿದ ಕೃಷ್ಣಪರಮಾತ್ಮನು, ತಾನು  ಎಲ್ಲರಿಂದ ವನ್ದ್ಯನಾದರೂ ಕೂಡಾ,  ರಾಮನಿಂದ ಕೂಡಿಕೊಂಡು ತಂದೆತಾಯಿಗೆ ನಮಸ್ಕರಿಸಿದ. ಧರ್ಮದ ಪಾಲನೆಗಾಗಿ ರಾಜ್ಯದ ಪದವಿಯನ್ನು ಉಗ್ರಸೇನನಲ್ಲಿ ಇಟ್ಟ ಶ್ರೀಕೃಷ್ಣ, ಉಪನಯನ ಮಾಡಿಕೊಂಡು ನಂದನನ್ನು ಬೀಳ್ಕೊಟ್ಟ.
[ಇಲ್ಲಿ ‘ಧರ್ಮಸ್ಯ ಪ್ರತಿಪಾಲನಾಯ’ ಎಂದು ಹೇಳಿರುವುದನ್ನು ಗಮನಿಸಬೇಕು. ಒಂದುವೇಳೆ  ‘ಸತ್ತವನ ರಾಜ್ಯ ಸಾಯಿಸಿದವನ ಹಕ್ಕು’ ಎಂದು ಕೃಷ್ಣ ಪರಿಗಣಿಸಿದ್ದರೆ ಆತನಿಗೆ ಆ ರಾಜ್ಯವನ್ನು ಬಿಟ್ಟು ಇತರೆಡೆ ಓಡಾಡಲು ಸಾಧ್ಯವಾಗುತ್ತಿರಲಿಲ್ಲ. ಓಡಾಡದೇ, ಎಲ್ಲೆಡೆ ಧರ್ಮಸಂಸ್ಥಾಪನಾ ಕಾರ್ಯ  ಸಾಧ್ಯವಾಗುತ್ತಿರಲಿಲ್ಲ. ಹೀಗಾಗಿ ಕೃಷ್ಣ ರಾಜ್ಯಾಧಿಕಾರವನ್ನು ಉಗ್ರಸೇನನಿಗೊಪ್ಪಿಸಿದ.
ಭಾಗವತದಲ್ಲಿ(೧೦.೪೩.೨೯)  ಗರ್ಗಾದ್ ಯದುಕುಲಾಚಾರ್ಯಾದ್ ಗಾಯತ್ರಂ ವ್ರತಮಾಸ್ಥಿತೌ’ ಎಂದು ಹೇಳಿರುವುದನ್ನೇ ಆಚಾರ್ಯರು ಇಲ್ಲಿ ‘ದ್ವಿಜತ್ವಮುಪಗಮ್ಯ’ ಎಂದು ಹೇಳಿದ್ದಾರೆ.  ಶ್ರೀಕೃಷ್ಣ ಕುಲಪುರೋಹಿತರ ಮುಖೇನ ಉಪನಯನ ಮಾಡಿಕೊಂಡ] 

ನನ್ದೋsಪಿ ಸಾನ್ತ್ವವಚನೈರನುನೀಯ ಮುಕ್ತಃ ಕೃಷ್ಣೇನ ತಚ್ಚರಣಪಙ್ಕಜಮಾತ್ಮಸಂಸ್ಥಮ್
ಕೃತ್ವಾ ಜಗಾಮ ಸಹ ಗೋಪಗಣೇನ ಕೃಚ್ಛ್ರಾದ್ ದ್ಧ್ಯಾಯನ್ ಜನಾರ್ದ್ದನಮುವಾಸ ವನೇ ಸಭಾರ್ಯ್ಯಃ ೧೪.೦೨

ಶ್ರೀಕೃಷ್ಣನಿಂದ ನಂದನೂ ಕೂಡಾ  ಬಹಳ ಸಮಾಧಾನದ ಮಾತುಗಳಿಂದ ಸಮಾಧಾನಪಡಿಸಿ ಕಳುಹಿಸಲ್ಪಟ್ಟನು. ಪರಮಾತ್ಮನ ಚರಣಕಮಲವನ್ನು ತನ್ನ ಹೃದಯದೊಳಗೆ ಇಟ್ಟುಕೊಂಡ ನಂದನು, ಬಹಳ ಕಷ್ಟದಿಂದ, ಗೋಪಾಲಕರ ಗಣದಿಂದ ಕೂಡಿಕೊಂಡು, ನಾರಾಯಣನನ್ನೇ ಧ್ಯಾನಮಾಡುತ್ತಾ, ಕಾಡಿನಲ್ಲಿ(ವೃಂದಾವನದಲ್ಲಿ) ಹೆಂಡತಿ ಯಶೋದೆಯೊಂದೊಡಗೂಡಿ ವಾಸ ಮಾಡಿದನು.

ಕೃಷ್ಣೋsಪ್ಯವನ್ತಿಪುರವಾಸಿನಮೇತ್ಯ ವಿಪ್ರಂ ಸಾನ್ದೀಪನಿಂ ಸಹ ಬಲೇನ ತತೋsದ್ಧ್ಯಗೀಷ್ಟ
ವೇದಾನ್ ಸಕೃನ್ನಿಗಾದಿತಾನ್ ನಿಖಿಲಾಶ್ಚ ವಿದ್ಯಾಃ ಸಮ್ಪೂರ್ಣ್ಣಸಂವಿದಪಿ ದೈವತಶಿಕ್ಷಣಾಯ ೧೪.೦೩

ಕೃಷ್ಣನಾದರೋ, ಬಲರಾಮನಿಂದ ಕೂಡಿಕೊಂಡು, ಅವಂತಿಪಟ್ಟಣದಲ್ಲಿ[1] ವಾಸಮಾಡಿಕೊಂಡಿದ್ದ ಸಾನ್ದೀಪನಿ ಎನ್ನುವ ಬ್ರಾಹ್ಮಣನನ್ನು  ಹೊಂದಿ ತನ್ನ ಅಧ್ಯಯನವನ್ನು ಮಾಡಿದ. ಒಮ್ಮೆನೆ(ಒಂದಾವರ್ತಿ)  ಹೇಳಿದ ವೇದಗಳನ್ನೂ, ಎಲ್ಲಾ ವಿದ್ಯೆಗಳನ್ನೂ, ಪೂರ್ಣಪ್ರಜ್ಞನಾದರೂ ಕೂಡಾ , ದೇವತೆಗಳ ಶಿಕ್ಷಣಕ್ಕಾಗಿ ಶ್ರೀಕೃಷ್ಣ ಅಧ್ಯಯನ ಮಾಡಿದ.

ಧರ್ಮ್ಮೋ ಹಿ ಸರ್ವವಿದುಷಾಮಪಿ ದೈವತಾನಾಂ ಪ್ರಾಪ್ತೇ ನರೇಷು ಜನನೇ ನರವತ್ ಪ್ರವೃತ್ತಿಃ
ಜ್ಞಾನಾದಿಗೂಹನಮುತಾದ್ಧ್ಯಯನಾದಿರತ್ರ ತಜ್ಜ್ಞಾಪನಾರ್ತ್ಥಮವಸದ್ ಭಗವಾನ್ ಗುರೌ ಚ ೧೪.೦೪

ಎಲ್ಲವನ್ನು ಬಲ್ಲವರಾದ ದೇವತೆಗಳಿಗೆ ಮನುಷ್ಯರಲ್ಲಿ ಹುಟ್ಟು ಇರಲು(ಅವತಾರ ಪ್ರಾಪ್ತಿಯಾದಾಗ) ಮನುಷ್ಯರಂತೇ ಪ್ರವೃತ್ತಿ,  ಜ್ಞಾನದ ಮುಚ್ಚಿಕೊಳ್ಳುವಿಕೆ, ಅಷ್ಟೇ ಅಲ್ಲದೆ ಅಧ್ಯಯನ ಮೊದಲಾದವುಗಳು ಧರ್ಮವಾಗುತ್ತದೆ. ಅದನ್ನು ದೇವತೆಗಳಿಗೆ  ನೆನಪಿಸಲೋಸುಗ  ಶ್ರೀಕೃಷ್ಣನು ಗುರುಗಳಲ್ಲಿಯೂ ವಾಸಮಾಡಿದ.

ಗುರ್ವರ್ತ್ಥಮೇಷ ಮೃತಪುತ್ರಮದಾತ್ ಪುನಶ್ಚ ರಾಮೇಣಾ ಸಾರ್ದ್ಧಮಗಮನ್ಮಧುರಾಂ ರಮೇಶಃ
ಪೌರೈಃ ಸಜಾನಪದಬನ್ಧುಜನೈರಜಸ್ರಮಭ್ಯರ್ಚ್ಚಿತೋ ನ್ಯವಸದಿಷ್ಟಕೃದಾತ್ಮಪಿತ್ರೋಃ ೧೪.೦೫

ಶ್ರೀಕೃಷ್ಣನು ಗುರುಗಳಿಗಾಗಿ ಹಿಂದೆ ಸತ್ತಿದ್ದ  ಅವರ ಮಗನನ್ನು (ಗುರುದಕ್ಷಿಣೆಯಾಗಿ) ಕೊಟ್ಟನು. ರಾಮನಿಂದ ಕೂಡಿಕೊಂಡು ರಮಾಪತಿ  ಶ್ರೀಕೃಷ್ಣನು ಮಧುರೆಗೆ ತೆರಳಿ,  ಹಳ್ಳಿಗರು, ಬಂಧುಜನರು, ಇವರಿಂದ ಕೂಡಿದ ನಾಗರಿಕರಿಂದ ನಿರಂತರವಾಗಿ ಪೂಜಿಸಲ್ಪಟ್ಟವನಾಗಿ, ತನ್ನ ತಂದೆ-ತಾಯಿಗಳ ಅಭೀಷ್ಟವನ್ನು ಪೂರೈಸುತ್ತಾ ಆವಾಸಮಾಡಿದನು.




[1] ಇಂದಿನ ಹರಿದ್ವಾರ

No comments:

Post a Comment