ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Tuesday, September 17, 2019

Mahabharata Tatparya Nirnaya Kannada 1411_1415


ಕ್ಷುಬ್ಧೋsತಿಕೋಪವಶತಃ ಸ್ವಗದಾಮಮೋಘಾಂ ದತ್ತಾಂ ಶಿವೇನ ಜಗೃಹೇ ಶಿವಭಕ್ತವನ್ದ್ಯಃ
ಶೈವಾಗಮಾಖಿಲವಿದತ್ರ ಚ ಸುಸ್ಥಿರೋsಸೌ ಚಿಕ್ಷೇಪ ಯೋಜನಶತಂ ಸ ತು ತಾಂ ಪರಸ್ಮೈ ೧೪.೧೧

ಅತ್ಯಂತ ಸಿಟ್ಟಿನಿಂದ ಕೂಡಿದ, ಸಮಸ್ತ ಶಿವಭಕ್ತರಿಂದ ವನ್ದ್ಯನಾದ, ಎಲ್ಲಾ ಶೈವಾಗಮವನ್ನು ಬಲ್ಲ ಜರಾಸಂಧನು, ಶಿವನಿಂದ ತನಗೆ ಕೊಡಲ್ಪಟ್ಟ ಎಂದೂ ವ್ಯರ್ಥವಾಗದ ಗದೆಯನ್ನು ಹಿಡಿದುಕೊಂಡ. ಅವನು ತಾನಿರುವ ಮಗಧದಲ್ಲಿಯೇ ಗಟ್ಟಿಯಾಗಿ ನಿಂತು, ನೂರು ಯೋಜನ ದೂರ ಎಂದು ತಿಳಿದು, ಕೃಷ್ಣನಿಗಾಗಿ ಆ ಗದೆಯನ್ನು ಎಸೆದ.

ಅರ್ವಾಕ್ ಪಪಾತ ಚ ಗದಾ ಮಧುರಾಪ್ರದೇಶಾತ್ ಸಾ ಯೋಜನೇನ ಯದಿಮಂ ಪ್ರಜಗಾದ ಪೃಷ್ಟಃ
ಏಕೋತ್ತರಾಮಪಿ ಶತಾಚ್ಛತಯೋಜನೇತಿ ದೇವರ್ಷಿರತ್ರ ಮಧುರಾಂ ಭಗವತ್ಪ್ರಿಯಾರ್ತ್ಥೇ ೧೪.೧೨

ಜರಾಸಂಧನಿಂದ ಕೃಷ್ಣನಿಗಾಗಿ ಎಸೆದ ಆ ಗದೆಯು ಮಧುರೆಗಿಂತ ಒಂದು ಯೋಜನ ಹಿಂದೆ ಬಿದ್ದಿತು. [ಇದಕ್ಕೆ ಕಾರಣವೇನೆಂದರೆ:] ಜರಾಸಂಧನಿಂದ ಕೇಳಲ್ಪಟ್ಟ ದೇವಋಷಿ ನಾರದರು, ಪರಮಾತ್ಮನ ಪ್ರೀತಿಗಾಗಿ, ಮಧುರೆ ನೂರಕ್ಕಿಂತ ಒಂದು ಯೋಜನ ಹೆಚ್ಚಿಗೆ(೧೦೧ ಯೋಜನ) ದೂರದಲ್ಲಿದ್ದರೂ ಕೂಡಾ, ನೂರು ಯೋಜನಾ ಎಂದು ಜರಾಸಂಧನಿಗೆ ಹೇಳಿದ್ದರು.
[ಈಕುರಿತಾದ ವಿವರ ಮಹಾಭಾರತದ ಸಭಾಪರ್ವದಲ್ಲಿ(೧೯.೨೩-೨೪) ಕಾಣಸಿಗುತ್ತದೆ.  ‘ಭ್ರಾಮಯಿತ್ವಾ ಶತಗುಣಮೇಕೋನಂ ಏನ ಭಾರತ ಗದಾ ಕ್ಷಿಪ್ತಾ ಬಲವತಾ  ಮಾಗಧೇನ ಗಿರಿವ್ರಜಾತ್ ... ಏಕೋನಯೋಜನಶತೇ ಸ ಪಪಾತ ಗದಾ ಶುಭಾ’ ಗದೆಯನ್ನು ಗರಗರನೆ ತಿರುಗಿಸಿ ಎಸೆದ. ಅದು ಮಧುರೆಗಿಂತ ಒಂದು ಯೋಜನ ಹಿಂದೆಯೇ ಬಿತ್ತು.]

[ಹಾಗಿದ್ದರೆ ಕೃಷ್ಣನಿಗೆ ಆ ಗದೆಯನ್ನು ತಡೆಯುವ ಶಕ್ತಿ ಇಲ್ಲದೇ ಇದ್ದುದಕ್ಕಾಗಿ ನಾರದರು ಹಾಗೆ ಹೇಳಿದರೇ ಎಂದರೆ... ] 

ಶಕ್ತಸ್ಯ ಚಾಪಿ ಹಿ ಗದಾಪ್ರವಿಘಾತನೇ ತು ಶುಶ್ರೂಷಣಂ ಮದುಚಿತಂ ತ್ವಿತಿ ಚಿನ್ತಯಾನಃ
ವಿಷ್ಣೋರ್ಮ್ಮುನಿಃ ಸ ನಿಜಗಾದ ಹ ಯೋಜನೋನಂ ಮಾರ್ಗ್ಗಂ ಪುರೋ ಭಗವತೋ ಮಗಧೇಶಪೃಷ್ಟಃ ೧೪.೧೩

ಜರಾಸಂಧ ಎಸೆದ ಗದೆಯನ್ನು ಎದುರಿಸುವುದರಲ್ಲಿ ಶ್ರೀಕೃಷ್ಣ ಶಕ್ತ ಎಂದು ತಿಳಿದಿದ್ದರೂ ಕೂಡಾ, ಕೃಷ್ಣನಲ್ಲಿ  ನನಗೆ ಇದೊಂದು ಯೋಗ್ಯವಾದ ಸೇವೆ ಎಂದು ಚಿಂತಿಸಿದ ನಾರದರು, ಜರಾಸಂಧನಿಂದ ಕೇಳಲ್ಪಟ್ಟಾಗ, ಮಧುರಾ ಪಟ್ಟಣಕ್ಕೆ ಒಂದು ಯೋಜನ ಕಡಿಮೆಯಿರುವ ಮಾರ್ಗವನ್ನು ಹೇಳಿರುವರು.

ಕ್ಷಿಪ್ತಾ ತು ಸಾ ಭಗವತೋsಥ ಗದಾ ಜರಾಖ್ಯಾಂ ತತ್ಸನ್ಧಿನೀಮಸುಭಿರಾಶು ವಿಯೋಜ್ಯ ಪಾಪಾಮ್
ಮರ್ತ್ತ್ಯಾಶಿನೀಂ ಭಗವತಃ ಪುನರಾಜ್ಞಯೈವ ಯಾತಾ ಗಿರೀಶಸದನಂ ಮಗಧಂ ವಿಸೃಜ್ಯ ೧೪.೧೪

ಕೃಷ್ಣನಿಗಾಗಿ ಎಸೆಯಲ್ಪಟ್ಟ ಆ ಗದೆಯು ಜರಾಸಂಧನ ಶರೀರವನ್ನು  ಜೋಡಿಸಿದ್ದ, ಮನುಷ್ಯರನ್ನು ತಿನ್ನುವ ‘ಜರೆ’ ಎನ್ನುವ ಜರಾಸಂಧನ ತಾಯಿಯ ಶರೀರವನ್ನು ಪ್ರಾಣದಿಂದ ಬೇರ್ಪಡಿಸಿ, ಪರಮಾತ್ಮನ ಆಜ್ಞೆಯಿಂದಲೇ ಜರಾಸಂಧನನ್ನು ಬಿಟ್ಟು, ಕೈಲಾಸವನ್ನು ಕುರಿತು ತೆರಳಿತು.
[ಈ ವಿವರವನ್ನು ಮಹಾಭಾರತದ ದ್ರೋಣಪರ್ವದಲ್ಲಿ(೧೮೨.೮) ಕಾಣುತ್ತೇವೆ: ಅಸ್ಮದ್ವದಾರ್ಥಂ ಚಿಕ್ಷೇಪ ಗದಾಂ ವೈ ಸರ್ವಘಾತಿನೀಮ್’ ಎಂದು ಶ್ರೀಕೃಷ್ಣ ಈ ಘಟನೆಯನ್ನು ಅಲ್ಲಿ ನೆನಪಿಸಿಕೊಳ್ಳುವುದನ್ನು ಕಾಣುತ್ತೇವೆ.  ‘ಸಾ ತು ಭೂಮಿಂ ಗತಾ ಪಾರ್ಥ ಹತಾ ಸಸುತಬಾನ್ಧವಾ’ (೧೪) ಆ ಗದೆ ಭೂಮಿಯಮೇಲೆ ಬೀಳಬೇಕಾದರೆ ಜರೆಯ ಮೇಲೆ ಬಿದ್ದು ಜರೆ ಸತ್ತಳು ಎನ್ನುವ ಮಾತನ್ನು ಅಲ್ಲಿ ಕೃಷ್ಣ ನೆನಪಿಸಿಕೊಂಡಿದ್ದಾನೆ. ಆ ಮಾತನ್ನು  ಈ ಹಂತದಲ್ಲಿ ನಾವು ಅನುಸಂಧಾನ ಮಾಡಿಕೊಳ್ಳಬೇಕು ಎನ್ನುವುದನ್ನು ಆಚಾರ್ಯರು ತಮ್ಮ ನಿರ್ಣಯದಲ್ಲಿ ತೋರಿಸಿಕೊಟ್ಟಿದ್ದಾರೆ] 

ರಾಜಾ ಸ್ವಮಾತೃತ ಉತೋ ಗದಯಾ ಚ ಹೀನಃ ಕ್ರೋದಾತ್ ಸಮಸ್ತನೃಪತೀನಭಿಸನ್ನಿಪಾತ್ಯ
ಅಕ್ಷೋಹಿಣೀತ್ರ್ಯಧಿಕವಿಂಶಯುತೋsತಿವೇಲದರ್ಪ್ಪೋದ್ಧತಃ ಸಪದಿ ಕೃಷ್ಣಪುರೀಂ ಜಗಾಮ ೧೪.೧೫

ಜರಾಸಂಧನು ಗದೆಯಿಂದಲೂ, ಅಷ್ಟೇ ಅಲ್ಲದೇ ತನ್ನ ತಾಯಿಯಿಂದಲೂ ಹೀನನಾಗಿ, ಸಿಟ್ಟಿನಿಂದ ಎಲ್ಲಾ ರಾಜರನ್ನು ಕಲೆಹಾಕಿಕೊಂಡು ಇಪ್ಪತ್ಮೂರು ಅಕ್ಷೋಹಿಣಿಯಿಂದ ಕೂಡಿಕೊಂಡು, ಮಿತಿಮೀರಿದ ದರ್ಪದಿಂದ ಕೂಡಲೇ ಕೃಷ್ಣನ ಪಟ್ಟಣವಾದ ಮಧುರೆಯನ್ನು ಕುರಿತು ತೆರಳಿದನು.

No comments:

Post a Comment