ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Sunday, September 15, 2019

Mahabharata Tatparya Nirnaya Kannada 1406_1410


ಸರ್ವೇsಪಿ ತೇ ಪತಿಮವಾಪ್ಯ ಹರಿಂ ಪುರಾsಭಿತಪ್ತಾ ಹಿ ಭೋಜಪತಿನಾ ಮುಮುದುರ್ನ್ನಿತಾನ್ತಮ್
ಕಿಂ ವಾಚ್ಯಮತ್ರ ಸುತಮಾಪ್ಯ ಹರಿಂ ಸ್ವಪಿತ್ರೋರ್ಯ್ಯತ್ರಾಖಿಲಸ್ಯ ಸುಜನಸ್ಯ ಬಭೂವ ಮೋದಃ ೧೪.೦೬

ಹಿಂದೆ ಕಂಸನಿಂದ ಸಂಕಟಕ್ಕೆ ಒಳಗಾದವರಾಗಿದ್ದ ಆ ಎಲ್ಲಾ ಯಾದವರೂ ಕೂಡಾ, ಈಗ  ನಾರಾಯಣನನ್ನು ಹೊಂದಿ ಆತ್ಯಂತಿಕವಾಗಿ ಸಂತೋಷಪಟ್ಟರು. ಹೀಗಿರಲು ಪರಮಾತ್ಮನನ್ನು ಮಗನಾಗಿ ಪಡೆದ ತಂದೆತಾಯಿಗಳು ಸಂತೋಷವನ್ನು ಹೊಂದಿದರು  ಎಂಬ ವಿಷಯದಲ್ಲಿ ಏನು ಹೇಳಬೇಕು? (ಉಳಿದ ಯಾದವರೇ ಆತ್ಯಂತಿಕವಾಗಿ ಸಂತೋಷಪಟ್ಟರು ಎಂದಮೇಲೆ ಇನ್ನು ತಂದೆ-ತಾಯಿಗಳು ಸಂತೋಷವನ್ನು ಹೊಂದಿದರು ಎಂದು ಬೇರೆ ಹೇಳಬೇಕೇ) ಹೀಗೆ  ಎಲ್ಲಾ ಸಜ್ಜನರಿಗೂ ಆನಂದವುಂಟಾಯಿತು.
[ಕಂಸ ರಾಜನಾಗಿದ್ದಾಗ ಯಾದವರನ್ನು ವಿಶ್ವಾಸಕ್ಕೆ ತೆಗೆದುಕೊಂಡಿರಲಿಲ್ಲ. ಅದರಲ್ಲೂ ತಾನು ಯಾದವ ಅಲ್ಲಾ ಎನ್ನುವ ರಹಸ್ಯ ತಿಳಿದನಂತರ ಆತ ಎಲ್ಲರಿಗೂ ವಿಪರೀತ ಕಾಟ ಕೊದಲಾರಮ್ಭಿಸಿದ್ದ. ಯಾದವರೆಲ್ಲರೂ  ತನ್ನ ವಿರುದ್ಧ ಮಸಲತ್ತು ಮಾಡುತ್ತಿದ್ದಾರೆ ಎನ್ನುವ ಅನುಮಾನ ಅವನದಾಗಿತ್ತು. ಕಂಸನ ಸಂಹಾರದ ನಂತರ ಹಿಂದೆ ಮಧುರಾಪಟ್ಟಣ ಬಿಟ್ಟುಹೋಗಿದ್ದ ಯಾದವರೆಲ್ಲರೂ ಮರಳಿ ಬಂದರು.]

ಕೃಷ್ಣಾಶ್ರಯೋ ವಸತಿ ಯತ್ರ ಜನೋsಪಿ ತತ್ರ ವೃದ್ಧಿರ್ಭವೇತ್ ಕಿಮು ರಮಾಧಿಪತೇರ್ನ್ನಿವಾಸೇ
ವೃನ್ದಾವನಂ ಯದಧಿವಾಸತ ಆಸ ಸಧ್ರ್ಯಙ್ ಮಾಹೇನ್ದ್ರಸದ್ಮಸದೃಶಂ ಕಿಮು ತತ್ರ ಪುರ್ಯ್ಯಾಃ ೧೪.೦೭

ಎಲ್ಲಿ ಕೃಷ್ಣನ ಆಶ್ರಯವನ್ನು ಪಡೆದ ಭಕ್ತನು ವಾಸಮಾಡುತ್ತಾನೋ ಅಲ್ಲೇ ಸರ್ವಸಂಪತ್ತುಗಳ ವೃದ್ಧಿಯಾಗುತ್ತದೆ. ಇನ್ನು ಸ್ವಯಂ ಪರಮಾತ್ಮನೇ ವಾಸ ಮಾಡಿದಲ್ಲಿ ವೃದ್ಧಿಯಾಗುತ್ತದೆ ಎಂದು ಏನು ಹೇಳತಕ್ಕದ್ದು. ಶ್ರೀಕೃಷ್ಣನ ನೆಲೆಸುವಿಕೆಯಿಂದ ವೃಂದಾವನವೇ ಅಮರಾವತಿಯಂತಾಗಿರುವಾಗ ಇನ್ನು ಮಧುರಾ ಪಟ್ಟಣದಲ್ಲಿ ಸರ್ವಸಂಪತ್ತು ವೃದ್ಧಿಯಾಯಿತು ಎಂದು  ಏನು ಹೇಳಬೇಕು. (ತೀರಾ ಕಾಡಿನ ಒಳಗಿರುವ ಗೋವಳರ ಹಟ್ಟಿಯೇ ಹಾಗೆ ಮೆರೆಯಿತು ಎಂದಮೇಲೆ ಇನ್ನು ಮಧುರಾ ಪಟ್ಟಣದ ಕುರಿತೇನು ಹೇಳಬೇಕು)

ಯೇನಾಧಿವಾಸಮೃಷಭೋ ಜಗತಾಂ ವಿಧತ್ತೇ ವಿಷ್ಣುಸ್ತತೋ ಹಿ ವರತಾ ಸದನೇsಪಿ ಧಾತುಃ
ತಸ್ಮಾತ್ ಪ್ರಭೋರ್ನ್ನಿವಸನಾನ್ಮಧುರಾ ಪುರೀ ಸಾ ಶಶ್ವತ್ ಸಮೃದ್ಧಜನಸಙ್ಕುಲಿತಾ ಬಭೂವ ೧೪.೦೮

ಯಾವ ಕಾರಣದಿಂದ ಜಗತ್ತಿಗೇ ಒಡೆಯನಾಗಿರುವ ನಾರಾಯಣನು ಬ್ರಹ್ಮನ ಲೋಕವಾದ ಸತ್ಯಲೋಕದಲ್ಲಿ ಮುಖ್ಯವಾಗಿ ನೆಲೆಸುವಿಕೆಯನ್ನು ಮಾಡುತ್ತಾನೋ, ಆ ಕಾರಣದಿಂದಲೇ ಸತ್ಯಲೋಕ ಎಲ್ಲಾ ಲೋಕಗಳಿಗಿಂತ ಶ್ರೇಷ್ಠವೆನಿಸಿದೆ. ಅಂತಹ ನಾರಾಯಣನ ಆವಾಸದಿಂದ ಮಧುರಾಪುರಿಯು ಒಳ್ಳೆಯ ಸಾತ್ವಿಕರಾದ(ಅತ್ಯಂತ ಸಂಪನ್ನರಾದ) ಜನರಿಂದ ಕೂಡಿದುದಾಯಿತು.

ರಕ್ಷತ್ಯಜೇ ತ್ರಿಜಗತಾಂ ಪರಿರಕ್ಷಕೇsಸ್ಮಿನ್ ಸರ್ವಾನ್ ಯದೂನ್ ಮಗಧರಾಜಸುತೇ ಸ್ವಭರ್ತ್ತುಃ
ಕೃಷ್ಣಾನ್ಮೃತಿಂ ಪಿತುರವಾಪ್ಯ ಸಮೀಪಮಸ್ತಿಪ್ರಾಸ್ತೀ ಶಶಂಸತುರತೀವ ಚ ದುಃಖಿತೇsಸ್ಮೈ ೧೪.೦೯

ಹೀಗೆ, ಎಂದೂ ಹುಟ್ಟದಂತಹ ಮೂರು ಲೋಕಗಳ ರಕ್ಷಕನಾಗಿರುವ ನಾರಾಯಣನು ಎಲ್ಲಾ ಯದುಗಳನ್ನು ರಕ್ಷಿಸುತ್ತಿರಲು, ಮಗಧರಾಜನಾದ ಜರಾಸಂಧನ ಮಕ್ಕಳಾಗಿರುವ(ಕಂಸನ ಪತ್ನಿಯರಾಗಿದ್ದ) ಆಸ್ತಿ ಮತ್ತು ಪ್ರಾಸ್ತೀ ಎಂಬ ಹೆಣ್ಣುಮಕ್ಕಳು, ಕೃಷ್ಣನಿಂದ  ತನ್ನ ಗಂಡನಿಗಾದ ಸಾವನ್ನು ಜರಾಸಂಧನಲ್ಲಿಗೆ ತೆರಳಿ ಅತ್ಯಂತ ದುಃಖಿತರಾಗಿ  ಅವನಿಗೆ ತಿಳಿಸಿದರು.    

ಶ್ರುತ್ವೈವ ತನ್ಮಗಧರಾಜ ಉರುಪ್ರರೂಢಬಾಹ್ವೋರ್ಬಲೇನ ತಜಿತೋ ಯುಧಿ ಸರ್ವಲೋಕೈಃ
ಬ್ರಹ್ಮೇಶಚಣ್ಡಮುನಿದತ್ತವರೈರಜೇಯೋ ಮೃತ್ಯೂಜ್ಝಿತಶ್ಚ ವಿಜಯೀ ಜಗತಶ್ಚುಕೋಪ ೧೪.೧೦

ತನ್ನ ಮಕ್ಕಳ ದೂರನ್ನು ಕೇಳಿಯೇ, ಉತ್ಕೃಷ್ಟ ಹಾಗು ಪ್ರಸಿದ್ಧವಾಗಿರುವ ಮೈಗಳ ಕಸುವಿನಿಂದ ಕೂಡಿರುವ, ಎಲ್ಲರೂ ಕೂಡಿ ಬಂದರೂ ಯುದ್ಧದಲ್ಲಿ ಸೋಲದವನಾಗಿರುವ,  ಬ್ರಹ್ಮ-ರುದ್ರ-ಚಣ್ಡಕೌಶಿಕಮುನಿ[1]  ಈ ಮೂವರ ವರಬಲದಿಂದ ಸೋಲಿಸಲ್ಪಡದ ಶಕ್ತಿಯುಳ್ಳವನಾಗಿರುವ, ಸಾವನ್ನು ಮೆಟ್ಟಿನಿಂತವನಾಗಿರುವ, ಎಲ್ಲಾ ಜಗತ್ತನ್ನು ತನ್ನ ವಶದಲ್ಲಿಟ್ಟುಕೊಂಡಿದ್ದ ಜರಾಸಂಧನು ಕೋಪಗೊಂಡ.




[1] ಚಣ್ಡಕೌಶಿಕಮುನಿಯ ವರ ಹಾಗು ಇತರ ವಿವರವನ್ನು ಮಹಾಭಾರತದ ಸಭಾಪರ್ವದಲ್ಲಿ(ಅಧ್ಯಾಯ ೧೭-೧೯) ಕಾಣಬಹುದು

No comments:

Post a Comment