ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Thursday, March 12, 2020

Mahabharata Tatparya Nirnaya Kannada 1711_1715


ಅಥಾsಹ ಚೇದಿಭೂಪತಿಃ ಸದನ್ತವಕ್ರಕೋ ವಚಃ ।
ಪುರಾ ಹರೇರ್ಹಿ ಪಾರ್ಷದಃ ಪ್ರಸನ್ನಬುದ್ಧಿರೇಕದಾ ॥೧೭.೧೧॥

ತದನಂತರ, ದಂತವಕ್ರನೊಂದಿಗೆ ಕೂಡಿಕೊಂಡ ಚೇದಿಭೂಪತಿಯಾದ ಶಿಶುಪಾಲನು ಮಾತನಾಡುತ್ತಾನೆ. ಹಿಂದೆ ಪರಮಾತ್ಮನ ದ್ವಾರಪಾಲಕನಾಗಿದ್ದ ಕಾರಣ  ಕೆಲವೊಮ್ಮೆ ಪರಮಾತ್ಮನಲ್ಲಿ ಭಕ್ತಿಯ ಬುದ್ಧಿಯೂ ಇದ್ದಂತಹ ಶಿಶುಪಾಲ ಮಾತನ್ನು ನುಡಿಯುತ್ತಾನೆ.

[ಹರಿವಂಶದಲ್ಲಿ ಇದೇ ಪ್ರಸಂಗವನ್ನು ವಿವರಿಸುವಾಗ ಅಲ್ಲಿ ಒಂದು ಮಾತು ಬರುತ್ತದೆ: ಏವಂ ವಿಬ್ರುವಮಾಣೇ ತು ಮಗಧಾನಾಂ ಜನೇಶ್ವರೇ । ಸುನೀಥೋsಥ ಮಹಾಪ್ರಾಜ್ಞೋ ವಚನಂ ಚೇದಮಬ್ರವೀತ್’(ವಿಷ್ಣುಪರ್ವಣಿ : ೪೮.೩೮) ‘ಈ ರೀತಿ ಹೇಳುತ್ತಿರಲು ಸುನೀತನು ಹೇಳುತ್ತಾನೆ: ‘ಇತ್ಯೆವಮುಕ್ತೆ ವಚನೇ ಸುನೀಥೇನ  ಮಹಾತ್ಮನಾ । ಕರೂಶಾಧಿಪತಿರ್ವೀರೋ ದಂತವಕ್ರೋsಭ್ಯಭಾಷಾತ(೪೯.೧). ಇಲ್ಲಿ ‘ಸುನೀತ’ ಎಂದರೆ ಶಿಶುಪಾಲ ಎನ್ನುವುದು ಆಚಾರ್ಯರ ನಿರ್ಣಯದಿಂದ ನಮಗೆ ಸ್ಪಷ್ಟವಾಗುತ್ತದೆ].

ಶೃಣುಷ್ವ ರಾಜಸತ್ತಮ ಪ್ರಭುಂ ಶಿವಸ್ವಯುಮ್ಭುವೋಃ ।
ಹರಿಂ ವದನ್ತಿ ಕೇಚಿದಪ್ಯದೋ ಭವೇನ್ನ ವೈ ಮೃಷಾ ॥೧೭.೧೨॥

‘ರಾಜರಲ್ಲೇ ಅಗ್ರಗಣ್ಯನಾದ ಓ ಜರಾಸಂಧನೇ, ಕೇಳು: ಕೆಲವರು ಬ್ರಹ್ಮ-ಶಿವರಿಗೆ ನಾರಾಯಣನನ್ನು ರಾಜನನ್ನಾಗಿ ಹೇಳುತ್ತಾರೆ. ಇದು ಸುಳ್ಳಲ್ಲಾ ಎನ್ನುವುದು ನನ್ನ ಅನಿಸಿಕೆ.

ತಥಾssವಯೋಶ್ಚ ದರ್ಶನೇ ಭವೇತ್ ಕದಾಚಿದೂರ್ಜ್ಜಿತಾ ।
ಅಮುಷ್ಯ ಭಕ್ತಿರನ್ಯಥಾ ಪುನಶ್ಚ ಜಾಯತೇ ಕ್ರುಧಾ ॥೧೭.೧೩॥

ಹಾಗೆಯೇ, ನನಗೂ ಹಾಗೂ ದಂತವಕ್ರನಿಗೂ ಕೂಡಾ ಕೃಷ್ಣನನ್ನು ನೋಡಿದರೆ ಒಮ್ಮೊಮ್ಮೆ ಶ್ರೇಷ್ಠವಾದ ಭಕ್ತಿ ಹುಟ್ಟುತ್ತದೆ. ಇನ್ನು  ಕೆಲವೊಮ್ಮೆ  ಕೃಷ್ಣನನ್ನು ನೋಡಿದರೆ ಉತ್ಕಟವಾದ ಕೋಪವೂ(ದ್ವೇಷವೂ)  ಬರುತ್ತದೆ.


ನ ಕಾರಣಂ ಚ ವಿದ್ಮಹೇ ನ ಸಂಶಯಃ ಪರೋ ಹರಿಃ ।
ವ್ರಜಾಮ ತಂ ಸುಖಾರ್ತ್ಥಿನೋ ವಯಂ ವಿಹಾಯ ಶತ್ರುತಾಮ್ ॥೧೭.೧೪॥

ಏಕೆ ಹೀಗೆ ಎನ್ನುವ ಕಾರಣ ನಮಗೆ ತಿಳಿದಿಲ್ಲ. ಆದರೆ ಹರಿ ಉತ್ಕೃಷ್ಟನೇ. ಇದರಲ್ಲಿ ಸಂಶಯವಿಲ್ಲ. ಹಾಗಾಗಿ  ನಾವು ಅವನೊಂದಿಗೆ ಶತ್ರುತ್ವವನ್ನು ಬಿಟ್ಟು, ಸುಖಕ್ಕಾಗಿ ಅವನಲ್ಲೇ ಶರಣಾಗಿ ಅವನನ್ನು  ಹೊಂದೋಣ.

ಇದಂ ಹಿ ನಃ ಶುಭಪ್ರದಂ ನಚಾನ್ಯಥಾ ಶುಭಂ ಕ್ವಚಿತ್ ।
ಇತೀರಿತೋ ಜರಾಸುತೋ ದದರ್ಶ ತೌ ದಹನ್ನಿವ ॥೧೭.೧೫॥

ಇದಲ್ಲವೇ ನಮಗೆ ಒಳಿತು? ಇಲ್ಲದಿದ್ದರೆ ನಮಗೆಂದೂ ಒಳಿತಾಗುವುದಿಲ್ಲ’. ಈರೀತಿಯಾಗಿ ಹೇಳಿಸಿಕೊಂಡ  ಜರಾಸಂಧನು ಅವರಿಬ್ಬರನ್ನು ಸುಡುತ್ತಾನೋ ಎಂಬಂತೆ ದಿಟ್ಟಿಸಿ ನೋಡಿದ.

Friday, March 6, 2020

Mahabharata Tatparya Nirnaya Kannada 1706_1710


ಕಿಮತ್ರ ನಃ ಕೃತಂ ಭವೇತ್ ಸುಖಾಯ ಹೀತಿ ತೇsಭ್ರುವನ್ ।
ಅಥಾಬ್ರವೀಜ್ಜರಾಸುತೋ ಜಯೀ ಪಯೋಬ್ಧಿಮನ್ದಿರಃ ।
ಕಿಲೈಷ ಪಕ್ಷಿವಾಹನೋ ಯತಶ್ಚ ನಾನ್ಯಥಾ ಭವೇತ್ ॥೧೭.೦೬॥

ಶ್ರೀಕೃಷ್ಣ ಗರುಡವಾಹನನಾಗಿ ಬಂದ ವಿಷಯ ತಿಳಿದ ಸಮಸ್ತ ರಾಜರುಗಳು ಸ್ವಯಮ್ಬರದಲ್ಲಿ ಏನು ಮಾಡಿದರೆ ಅದು ತಮಗೆ ಸುಖವಾದೀತು ಎಂದು ಜರಾಸಂಧನನ್ನು ಕೇಳಿದರು. ಆಗ ಜರಾಸಂಧ ಹೇಳುತ್ತಾನೆ: ‘ಕ್ಷೀರಸಾಗರಶಾಯಿಯು ಯಾವಾಗಲೂ ಉತ್ಕೃಷ್ಟನಾಗಿದ್ದಾನೆ’ ಎಂದು. (ಶ್ರೀಕೃಷ್ಣನೇ ಕ್ಷೀರಶಾಯಿಯಾದ ಶ್ರೀವಿಷ್ಣು ಎಂದು ಜರಾಸಂಧನಿಗೆ ಹೇಗೆ ತಿಳಿಯಿತು ಎಂದರೆ) ‘ಇವನು ಪಕ್ಷಿಯನ್ನೇ ವಾಹನವಾಗಿ ಉಳ್ಳವನಷ್ಟೇ. ಅದರಿಂದ ಇವನು ನಾರಾಯಣನೇ. ಇವನು ನಾರಾಯಣ ಅಲ್ಲದಿದ್ದರೆ ಪಕ್ಷಿ ಇವನ ವಾಹನವಾಗಿರುತ್ತಿರಲಿಲ್ಲ’ ಎನ್ನುತ್ತಾನೆ ಜರಾಸಂಧ.

[ಈ ಮೇಲಿನ ವಿಷಯದ ಕುರಿತಾದ ವಿವರವನ್ನು ನಾವು ಹರಿವಂಶದಲ್ಲಿ ಕಾಣಬಹುದು. ‘ತಸ್ಯ ಪಕ್ಷನಿಪಾತೇನ ಪತನೋದ್ಭ್ರಾಂತಕಾರಿಣಾ । ಕಮ್ಪಿತಾ ಮನುಜಾಃ ಸರ್ವೇ ನ್ಯುಬ್ಜಾಶ್ಚ ಪತಿತಾ ಭುವಿ’ (ವಿಷ್ಣುಪರ್ವಣಿ ೪೭.೨೯) ವಿದಿತಂ ವಃ ಸುಪರ್ಣಸ್ಯ  ಹ್ಯಾಗತಸ್ಯ ನೃಪೋತ್ತಮಾಃ । ಪಕ್ಷವೇಗಾನಿಲೋದ್ಧೂತಾ ಬಭೂವುರ್ಗಗನೇಚರಾಃ’ (೪೮.೪೪) ಗರುಡನ ರೆಕ್ಕೆಯ ಗಾಳಿಯಿಂದ ಎಲ್ಲರೂ ಕೂಡಾ ಬಿದ್ದರು ಎನ್ನುವ ವಿವರಣೆ ಇಲ್ಲಿ ಕಾಣಸಿಗುತ್ತದೆ. ‘ಕಥಮನ್ಯಸ್ಯ ಮರ್ತ್ಯಸ್ಯ ಗರುಡೋ ವಾಹನಂ ಭವೇತ್’(ವಿಷ್ಣುಪರ್ವ ೪೮.೩೫)]

ಜಿತಾ ವಯಂ ಚ ಸರ್ವಶೋsಮುನೈಕಲೇನ ಸಂಯುಗೇ ।
ಅನೇಕಶೋ ನ ಸಙ್ಗತೈರ್ಜ್ಜಿತಃ ಕದಾಚಿದೇಷಹಿ ॥೧೭.೦೭॥

ಅಮುಷ್ಯ ಚಾಗ್ರಜಃ ಪುರಾ ನಿಹನ್ತುಮುದ್ಯತೋ ಹಿ ಮಾಮ್ ।
ಅದೃಶ್ಯವಾಕ್ಯತೋsತ್ಯಜತ್ ಪ್ರತಾಡನಾತ್ ಸುಪೀಡಿತಮ್ ॥೧೭.೦೮॥


ಇವನು ಏಕಾಂಗಿಯಾಗಿದ್ದಾಗಲೂ ಕೂಡಾ ನಾವು ಯುದ್ಧದಲ್ಲಿ ಇವನಿಂದ ಎಲ್ಲಾ ಬಾರಿಯೂ ಸೋತಿದ್ದೇವೆ. ಬಹಳ ಬಾರಿ ನಾವೆಲ್ಲರೂ ಒಟ್ಟುಗೂಡಿ ಹೋರಾಡಿದರೂ ಕೂಡಾ, ಇವನೆಂದೂ ಸೋತಿಲ್ಲ.
ಹಿಂದೆ ಯುದ್ಧದಲ್ಲಿ ಇವನ ಅಣ್ಣನು(ಬಲರಾಮನು) ಆಗಲೇ ಬಹಳ ಕ್ಷತಿಗೊಂಡಿದ್ದ ನನ್ನನ್ನು ಕೊಲ್ಲಲು ಸಿದ್ಧನಾಗಿ, ಯಾವುದೋ ಒಂದು ವಾಖ್ಯದಿಂದ(ಅಶರೀರವಾಣಿಯಿಂದಾಗಿ) ನನ್ನನ್ನು ಕೊಲ್ಲದೇ ಬಿಟ್ಟಿದ್ದ. 

ಕಿಮಸ್ಯ ತೂಚ್ಯತೇ ಬಲಂ ವಯಂ ತೃಣೋಪಮಾಃ ಕೃತಾಃ ।
ಸಮಸ್ತಶೋ ಮೃಧೇಮೃಧೇ ಹಿ ಯೇನ ಚಾಕ್ಷತೇನ ಹಾ ॥೧೭.೦೯॥

ಇವನ ಬಲವು ಉತ್ತಮ ಎಂದು ಏನು ಹೇಳಲ್ಪಡುತ್ತದೋ, ಇವನ ಮುಂದೆ ನಾವೆಲ್ಲರೂ ಹುಲ್ಲಿಗಿಂತಲೂ ಕಡೆಯಾದೆವು. ಪ್ರತೀ ಬಾರಿಯೂ ಕೂಡಾ, ಯುದ್ಧ-ಯುದ್ಧಗಳಲ್ಲಿ, ಯಾವ ನಾಶವೂ ಇಲ್ಲದ, ಯಾವ ಘಾಸಿಯನ್ನೂ(ಗಾಯವನ್ನೂ) ಹೊಂದಿಲ್ಲದೆ ಇವನಿದ್ದಾನೆ.


ಕಿಮತ್ರ ಕುರ್ವತಾಂ ಸುಖಂ ಭವೇದುದೀರ್ಣ್ಣಸಙ್ಕಟೇ ।
ಇತಿ ಬ್ರುವನ್ನವಾಙ್ ಮುಖಂ ನೃಪಶ್ಚಕಾರ ವಿಚ್ಛವಿ ॥೧೭.೧೦॥

‘ಈ ಸಂಕಟದಲ್ಲಿ ಏನು ಮಾಡಿದರೆ ಸುಖವಾದೀತು’ ಎಂದು ಹೇಳುವವನಾದ ಜರಾಸಂಧ,  ಕಳೆಗುಂದಿದ ಮುಖವುಳ್ಳವನಾಗಿ ತಲೆತಗ್ಗಿಸಿದ.

Tuesday, March 3, 2020

Mahabharata Tatparya Nirnaya Kannada 1701_1705


. ಹಂಸಡಿಭಿಕವಧಃ

ಓಂ
ಗತೇsಥ ಚೇದಿಪೇ ಸ್ವಕಂ ಪುರಂ ಜಾನಾರ್ದ್ದನೋsಶೃಣೋತ್ ।
ರಮೈವ ರುಗ್ಮಿಣೀತಿ ಯೋದ್ಯತಾಂ ಸ್ವಯಮ್ಬರಾಯ ತಾಮ್ ॥೧೭.೦೧॥

ಚೇದಿರಾಜನಾದ ದಮಘೋಷನು ತನ್ನ ಪಟ್ಟಣಕ್ಕೆ ತೆರಳುತ್ತಿರಲು, ಜನಾರ್ದನನು ಯಾರು ರುಗ್ಮಿಣಿ ಎಂಬ ಹೆಸರಿನವಳಾಗಿದ್ದಾಳೋ, ಯಾವ ರುಗ್ಮಿಣಿಯು ಸಾಕ್ಷಾತ್ ಲಕ್ಷ್ಮಿಯೇ ಆಗಿದ್ದಾಳೋ, ಅಂತಹ ರುಗ್ಮಿಣಿಯು ಸ್ವಯಂಬರಕ್ಕಾಗಿ ಸಿದ್ಧಳಾಗಿದ್ದಾಳೆನ್ನುವುದನ್ನು  ಕೇಳಿದನು.   


ಸ ರುಗ್ಮಿನಾಮಕೋsಗ್ರಜಃ ಶ್ರಿಯೋ ದ್ವಿಷನ್ ರಮಾಪತಿಮ್ ।
ಹರೇಃ ಪ್ರದಾತುಮುದ್ಯತಾಂ ನ್ಯವಾರಯದ್ಧರಿಪ್ರಿಯಾಮ್ ॥೧೭.೦೨॥

ರುಗ್ಮಿ ಎಂಬ ಹೆಸರುಳ್ಳ ರುಗ್ಮಿಣಿಯ ಅಣ್ಣನು, ಪರಮಾತ್ಮನನ್ನು ದ್ವೇಷಮಾಡುತ್ತಾ, ರುಗ್ಮಿಣಿಯನ್ನು ಪರಮಾತ್ಮನಿಗೆ ನೀಡಬೇಕೆಂದು ಸಿದ್ಧರಾಗಿದ್ದ ಬಂಧುಗಳನ್ನು ತಡೆದನು. 
[ರುಗ್ಮಿಣಿಯ ಸಂಬಂಧಿಕರಿಗೆ ಅವಳನ್ನು ಶ್ರೀಕೃಷ್ಣನಿಗೇ ನೀಡಬೇಕು ಎಂದಿತ್ತು. ಏಕೆಂದರೆ ಆಕೆಗೆ ಸರಿಹೊಂದುವ  ರೂಪವಿರುವುದು ಕೃಷ್ಣನಲ್ಲಿಯೇ. ಕೃಷ್ಣನಿಗೆ ಸರಿಹೊಂದುವ ರೂಪವಿರುವುದು ರುಗ್ಮಿಣಿಯಲ್ಲಿ. ಅದರಿಂದಾಗಿ ಅವರಿಬ್ಬರೂ ಒಳ್ಳೆಯ ಜೋಡಿಯಾಗುತ್ತಾರೆ ಎನ್ನುವುದು ಬಂಧುಗಳ ಬಯಕೆಯಾಗಿತ್ತು. ಆದರೆ ಭಗವಂತನನ್ನು ದ್ವೇಷಿಸುತ್ತಿದ್ದ ರುಗ್ಮಿ ಅದನ್ನು ತಡೆದ]

ಪ್ರಘೋಷಿತೇ ಸ್ವಯಮ್ಬರೇsಥ ತೇನ ಮಾಗಧಾದಯಃ 
ಸಮೀಯುರುಗ್ರಪೌರುಷಾಃ ಸಸಾಲ್ವಪೌಣ್ಡ್ರಚೇದಿಪಾಃ ॥೧೭.೦೩॥

ಹೀಗೆ ರುಗ್ಮಿಣಿಯ ಸ್ವಯಂಬರವು ಪ್ರಘೋಷಿಸಲ್ಪಡಲು, ಆ ಸ್ವಯಂಬರದ ನಿಮಿತ್ತವಾಗಿ ಜರಾಸಂಧನನ್ನೇ ಮೊದಲು ಮಾಡಿಕೊಂಡು ಸಾಲ್ವ, ಪೌಣ್ಡ್ರ, ಶಿಶುಪಾಲರು ಒಂದೆಡೆ ಸೇರಿದರು.

ತದಾ ಜಗಾಮ ಕೇಶವೋ ಜವೇನ ಕುಣ್ಡಿನಂ ಪುರಮ್ ।
ಸ್ಮೃತೋsಥ ತೇನ ಪಕ್ಷಿರಾಟ್ ಸಮಾಜಗಾಮ ಕೇಶವಮ್ ॥೧೭.೦೪॥

ಶ್ರೀಕೃಷ್ಣನಿಂದ ಸ್ಮರಿಸಲ್ಪಟ್ಟವನಾದ ಗರುಡನು ಕೇಶವನ ಬಳಿ ಬಂದ. ಶ್ರೀಕೃಷ್ಣನು ಗರುಡನನ್ನೇರಿ ವೇಗದಿಂದ ಕುಣ್ಡಿನದೇಶಕ್ಕೆ ತೆರಳಿದನು.

ಪತತ್ರವಾಯುನಾsಸ್ಯ ತೇ ನರೇಶ್ವರಾಃ ಪ್ರಪಾತಿತಾಃ ।
ಯದೇದೃಶಂ ಪತತ್ರಿಣೋ ಬಲಂ ಹರೇಃ ಕಿಮುಚ್ಯತೇ ॥೧೭.೦೫॥

ಈ ಗರುಡನ ರೆಕ್ಕೆಯ ಗಾಳಿಯಿಂದ ಜರಾಸಂಧಾದಿಗಳು ಬಿದ್ದರು. ಪಕ್ಷಿಯ ಬಲವೇ ಹೀಗಿರಬೇಕಾದರೆ ಇನ್ನು ಹರಿಯ ಬಲ ಎಂತದ್ದಿರಬೇಕು?