ಕಿಮತ್ರ ನಃ
ಕೃತಂ ಭವೇತ್ ಸುಖಾಯ ಹೀತಿ ತೇsಭ್ರುವನ್ ।
ಅಥಾಬ್ರವೀಜ್ಜರಾಸುತೋ
ಜಯೀ ಪಯೋಬ್ಧಿಮನ್ದಿರಃ ।
ಕಿಲೈಷ
ಪಕ್ಷಿವಾಹನೋ ಯತಶ್ಚ ನಾನ್ಯಥಾ ಭವೇತ್ ॥೧೭.೦೬॥
ಶ್ರೀಕೃಷ್ಣ ಗರುಡವಾಹನನಾಗಿ ಬಂದ ವಿಷಯ ತಿಳಿದ ಸಮಸ್ತ ರಾಜರುಗಳು ಸ್ವಯಮ್ಬರದಲ್ಲಿ ಏನು
ಮಾಡಿದರೆ ಅದು ತಮಗೆ ಸುಖವಾದೀತು ಎಂದು ಜರಾಸಂಧನನ್ನು ಕೇಳಿದರು. ಆಗ ಜರಾಸಂಧ
ಹೇಳುತ್ತಾನೆ: ‘ಕ್ಷೀರಸಾಗರಶಾಯಿಯು ಯಾವಾಗಲೂ ಉತ್ಕೃಷ್ಟನಾಗಿದ್ದಾನೆ’ ಎಂದು. (ಶ್ರೀಕೃಷ್ಣನೇ
ಕ್ಷೀರಶಾಯಿಯಾದ ಶ್ರೀವಿಷ್ಣು ಎಂದು ಜರಾಸಂಧನಿಗೆ ಹೇಗೆ ತಿಳಿಯಿತು ಎಂದರೆ) ‘ಇವನು ಪಕ್ಷಿಯನ್ನೇ
ವಾಹನವಾಗಿ ಉಳ್ಳವನಷ್ಟೇ. ಅದರಿಂದ ಇವನು ನಾರಾಯಣನೇ. ಇವನು ನಾರಾಯಣ ಅಲ್ಲದಿದ್ದರೆ ಪಕ್ಷಿ ಇವನ
ವಾಹನವಾಗಿರುತ್ತಿರಲಿಲ್ಲ’ ಎನ್ನುತ್ತಾನೆ ಜರಾಸಂಧ.
[ಈ ಮೇಲಿನ ವಿಷಯದ ಕುರಿತಾದ ವಿವರವನ್ನು ನಾವು ಹರಿವಂಶದಲ್ಲಿ ಕಾಣಬಹುದು. ‘ತಸ್ಯ
ಪಕ್ಷನಿಪಾತೇನ ಪತನೋದ್ಭ್ರಾಂತಕಾರಿಣಾ । ಕಮ್ಪಿತಾ ಮನುಜಾಃ ಸರ್ವೇ ನ್ಯುಬ್ಜಾಶ್ಚ ಪತಿತಾ ಭುವಿ’
(ವಿಷ್ಣುಪರ್ವಣಿ ೪೭.೨೯) ವಿದಿತಂ ವಃ ಸುಪರ್ಣಸ್ಯ
ಹ್ಯಾಗತಸ್ಯ ನೃಪೋತ್ತಮಾಃ । ಪಕ್ಷವೇಗಾನಿಲೋದ್ಧೂತಾ ಬಭೂವುರ್ಗಗನೇಚರಾಃ’ (೪೮.೪೪)
ಗರುಡನ ರೆಕ್ಕೆಯ ಗಾಳಿಯಿಂದ ಎಲ್ಲರೂ ಕೂಡಾ ಬಿದ್ದರು ಎನ್ನುವ ವಿವರಣೆ ಇಲ್ಲಿ ಕಾಣಸಿಗುತ್ತದೆ. ‘ಕಥಮನ್ಯಸ್ಯ
ಮರ್ತ್ಯಸ್ಯ ಗರುಡೋ ವಾಹನಂ ಭವೇತ್’(ವಿಷ್ಣುಪರ್ವ ೪೮.೩೫)]
ಜಿತಾ ವಯಂ ಚ
ಸರ್ವಶೋsಮುನೈಕಲೇನ ಸಂಯುಗೇ ।
ಅನೇಕಶೋ ನ
ಸಙ್ಗತೈರ್ಜ್ಜಿತಃ ಕದಾಚಿದೇಷಹಿ ॥೧೭.೦೭॥
ಅಮುಷ್ಯ
ಚಾಗ್ರಜಃ ಪುರಾ ನಿಹನ್ತುಮುದ್ಯತೋ ಹಿ ಮಾಮ್ ।
ಅದೃಶ್ಯವಾಕ್ಯತೋsತ್ಯಜತ್ ಪ್ರತಾಡನಾತ್ ಸುಪೀಡಿತಮ್ ॥೧೭.೦೮॥
ಇವನು ಏಕಾಂಗಿಯಾಗಿದ್ದಾಗಲೂ ಕೂಡಾ ನಾವು ಯುದ್ಧದಲ್ಲಿ ಇವನಿಂದ ಎಲ್ಲಾ ಬಾರಿಯೂ ಸೋತಿದ್ದೇವೆ.
ಬಹಳ ಬಾರಿ ನಾವೆಲ್ಲರೂ ಒಟ್ಟುಗೂಡಿ ಹೋರಾಡಿದರೂ ಕೂಡಾ, ಇವನೆಂದೂ ಸೋತಿಲ್ಲ.
ಹಿಂದೆ ಯುದ್ಧದಲ್ಲಿ ಇವನ ಅಣ್ಣನು(ಬಲರಾಮನು) ಆಗಲೇ ಬಹಳ ಕ್ಷತಿಗೊಂಡಿದ್ದ ನನ್ನನ್ನು
ಕೊಲ್ಲಲು ಸಿದ್ಧನಾಗಿ, ಯಾವುದೋ ಒಂದು ವಾಖ್ಯದಿಂದ(ಅಶರೀರವಾಣಿಯಿಂದಾಗಿ) ನನ್ನನ್ನು ಕೊಲ್ಲದೇ
ಬಿಟ್ಟಿದ್ದ.
ಕಿಮಸ್ಯ
ತೂಚ್ಯತೇ ಬಲಂ ವಯಂ ತೃಣೋಪಮಾಃ ಕೃತಾಃ ।
ಸಮಸ್ತಶೋ
ಮೃಧೇಮೃಧೇ ಹಿ ಯೇನ ಚಾಕ್ಷತೇನ ಹಾ ॥೧೭.೦೯॥
ಇವನ ಬಲವು ಉತ್ತಮ ಎಂದು ಏನು ಹೇಳಲ್ಪಡುತ್ತದೋ, ಇವನ ಮುಂದೆ
ನಾವೆಲ್ಲರೂ ಹುಲ್ಲಿಗಿಂತಲೂ ಕಡೆಯಾದೆವು. ಪ್ರತೀ ಬಾರಿಯೂ ಕೂಡಾ, ಯುದ್ಧ-ಯುದ್ಧಗಳಲ್ಲಿ, ಯಾವ
ನಾಶವೂ ಇಲ್ಲದ, ಯಾವ ಘಾಸಿಯನ್ನೂ(ಗಾಯವನ್ನೂ) ಹೊಂದಿಲ್ಲದೆ
ಇವನಿದ್ದಾನೆ.
ಕಿಮತ್ರ
ಕುರ್ವತಾಂ ಸುಖಂ ಭವೇದುದೀರ್ಣ್ಣಸಙ್ಕಟೇ ।
ಇತಿ
ಬ್ರುವನ್ನವಾಙ್ ಮುಖಂ ನೃಪಶ್ಚಕಾರ ವಿಚ್ಛವಿ ॥೧೭.೧೦॥
‘ಈ ಸಂಕಟದಲ್ಲಿ ಏನು ಮಾಡಿದರೆ ಸುಖವಾದೀತು’ ಎಂದು ಹೇಳುವವನಾದ ಜರಾಸಂಧ, ಕಳೆಗುಂದಿದ ಮುಖವುಳ್ಳವನಾಗಿ ತಲೆತಗ್ಗಿಸಿದ.
No comments:
Post a Comment