ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Thursday, March 12, 2020

Mahabharata Tatparya Nirnaya Kannada 1711_1715


ಅಥಾsಹ ಚೇದಿಭೂಪತಿಃ ಸದನ್ತವಕ್ರಕೋ ವಚಃ ।
ಪುರಾ ಹರೇರ್ಹಿ ಪಾರ್ಷದಃ ಪ್ರಸನ್ನಬುದ್ಧಿರೇಕದಾ ॥೧೭.೧೧॥

ತದನಂತರ, ದಂತವಕ್ರನೊಂದಿಗೆ ಕೂಡಿಕೊಂಡ ಚೇದಿಭೂಪತಿಯಾದ ಶಿಶುಪಾಲನು ಮಾತನಾಡುತ್ತಾನೆ. ಹಿಂದೆ ಪರಮಾತ್ಮನ ದ್ವಾರಪಾಲಕನಾಗಿದ್ದ ಕಾರಣ  ಕೆಲವೊಮ್ಮೆ ಪರಮಾತ್ಮನಲ್ಲಿ ಭಕ್ತಿಯ ಬುದ್ಧಿಯೂ ಇದ್ದಂತಹ ಶಿಶುಪಾಲ ಮಾತನ್ನು ನುಡಿಯುತ್ತಾನೆ.

[ಹರಿವಂಶದಲ್ಲಿ ಇದೇ ಪ್ರಸಂಗವನ್ನು ವಿವರಿಸುವಾಗ ಅಲ್ಲಿ ಒಂದು ಮಾತು ಬರುತ್ತದೆ: ಏವಂ ವಿಬ್ರುವಮಾಣೇ ತು ಮಗಧಾನಾಂ ಜನೇಶ್ವರೇ । ಸುನೀಥೋsಥ ಮಹಾಪ್ರಾಜ್ಞೋ ವಚನಂ ಚೇದಮಬ್ರವೀತ್’(ವಿಷ್ಣುಪರ್ವಣಿ : ೪೮.೩೮) ‘ಈ ರೀತಿ ಹೇಳುತ್ತಿರಲು ಸುನೀತನು ಹೇಳುತ್ತಾನೆ: ‘ಇತ್ಯೆವಮುಕ್ತೆ ವಚನೇ ಸುನೀಥೇನ  ಮಹಾತ್ಮನಾ । ಕರೂಶಾಧಿಪತಿರ್ವೀರೋ ದಂತವಕ್ರೋsಭ್ಯಭಾಷಾತ(೪೯.೧). ಇಲ್ಲಿ ‘ಸುನೀತ’ ಎಂದರೆ ಶಿಶುಪಾಲ ಎನ್ನುವುದು ಆಚಾರ್ಯರ ನಿರ್ಣಯದಿಂದ ನಮಗೆ ಸ್ಪಷ್ಟವಾಗುತ್ತದೆ].

ಶೃಣುಷ್ವ ರಾಜಸತ್ತಮ ಪ್ರಭುಂ ಶಿವಸ್ವಯುಮ್ಭುವೋಃ ।
ಹರಿಂ ವದನ್ತಿ ಕೇಚಿದಪ್ಯದೋ ಭವೇನ್ನ ವೈ ಮೃಷಾ ॥೧೭.೧೨॥

‘ರಾಜರಲ್ಲೇ ಅಗ್ರಗಣ್ಯನಾದ ಓ ಜರಾಸಂಧನೇ, ಕೇಳು: ಕೆಲವರು ಬ್ರಹ್ಮ-ಶಿವರಿಗೆ ನಾರಾಯಣನನ್ನು ರಾಜನನ್ನಾಗಿ ಹೇಳುತ್ತಾರೆ. ಇದು ಸುಳ್ಳಲ್ಲಾ ಎನ್ನುವುದು ನನ್ನ ಅನಿಸಿಕೆ.

ತಥಾssವಯೋಶ್ಚ ದರ್ಶನೇ ಭವೇತ್ ಕದಾಚಿದೂರ್ಜ್ಜಿತಾ ।
ಅಮುಷ್ಯ ಭಕ್ತಿರನ್ಯಥಾ ಪುನಶ್ಚ ಜಾಯತೇ ಕ್ರುಧಾ ॥೧೭.೧೩॥

ಹಾಗೆಯೇ, ನನಗೂ ಹಾಗೂ ದಂತವಕ್ರನಿಗೂ ಕೂಡಾ ಕೃಷ್ಣನನ್ನು ನೋಡಿದರೆ ಒಮ್ಮೊಮ್ಮೆ ಶ್ರೇಷ್ಠವಾದ ಭಕ್ತಿ ಹುಟ್ಟುತ್ತದೆ. ಇನ್ನು  ಕೆಲವೊಮ್ಮೆ  ಕೃಷ್ಣನನ್ನು ನೋಡಿದರೆ ಉತ್ಕಟವಾದ ಕೋಪವೂ(ದ್ವೇಷವೂ)  ಬರುತ್ತದೆ.


ನ ಕಾರಣಂ ಚ ವಿದ್ಮಹೇ ನ ಸಂಶಯಃ ಪರೋ ಹರಿಃ ।
ವ್ರಜಾಮ ತಂ ಸುಖಾರ್ತ್ಥಿನೋ ವಯಂ ವಿಹಾಯ ಶತ್ರುತಾಮ್ ॥೧೭.೧೪॥

ಏಕೆ ಹೀಗೆ ಎನ್ನುವ ಕಾರಣ ನಮಗೆ ತಿಳಿದಿಲ್ಲ. ಆದರೆ ಹರಿ ಉತ್ಕೃಷ್ಟನೇ. ಇದರಲ್ಲಿ ಸಂಶಯವಿಲ್ಲ. ಹಾಗಾಗಿ  ನಾವು ಅವನೊಂದಿಗೆ ಶತ್ರುತ್ವವನ್ನು ಬಿಟ್ಟು, ಸುಖಕ್ಕಾಗಿ ಅವನಲ್ಲೇ ಶರಣಾಗಿ ಅವನನ್ನು  ಹೊಂದೋಣ.

ಇದಂ ಹಿ ನಃ ಶುಭಪ್ರದಂ ನಚಾನ್ಯಥಾ ಶುಭಂ ಕ್ವಚಿತ್ ।
ಇತೀರಿತೋ ಜರಾಸುತೋ ದದರ್ಶ ತೌ ದಹನ್ನಿವ ॥೧೭.೧೫॥

ಇದಲ್ಲವೇ ನಮಗೆ ಒಳಿತು? ಇಲ್ಲದಿದ್ದರೆ ನಮಗೆಂದೂ ಒಳಿತಾಗುವುದಿಲ್ಲ’. ಈರೀತಿಯಾಗಿ ಹೇಳಿಸಿಕೊಂಡ  ಜರಾಸಂಧನು ಅವರಿಬ್ಬರನ್ನು ಸುಡುತ್ತಾನೋ ಎಂಬಂತೆ ದಿಟ್ಟಿಸಿ ನೋಡಿದ.

No comments:

Post a Comment