ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Tuesday, March 3, 2020

Mahabharata Tatparya Nirnaya Kannada 1701_1705


. ಹಂಸಡಿಭಿಕವಧಃ

ಓಂ
ಗತೇsಥ ಚೇದಿಪೇ ಸ್ವಕಂ ಪುರಂ ಜಾನಾರ್ದ್ದನೋsಶೃಣೋತ್ ।
ರಮೈವ ರುಗ್ಮಿಣೀತಿ ಯೋದ್ಯತಾಂ ಸ್ವಯಮ್ಬರಾಯ ತಾಮ್ ॥೧೭.೦೧॥

ಚೇದಿರಾಜನಾದ ದಮಘೋಷನು ತನ್ನ ಪಟ್ಟಣಕ್ಕೆ ತೆರಳುತ್ತಿರಲು, ಜನಾರ್ದನನು ಯಾರು ರುಗ್ಮಿಣಿ ಎಂಬ ಹೆಸರಿನವಳಾಗಿದ್ದಾಳೋ, ಯಾವ ರುಗ್ಮಿಣಿಯು ಸಾಕ್ಷಾತ್ ಲಕ್ಷ್ಮಿಯೇ ಆಗಿದ್ದಾಳೋ, ಅಂತಹ ರುಗ್ಮಿಣಿಯು ಸ್ವಯಂಬರಕ್ಕಾಗಿ ಸಿದ್ಧಳಾಗಿದ್ದಾಳೆನ್ನುವುದನ್ನು  ಕೇಳಿದನು.   


ಸ ರುಗ್ಮಿನಾಮಕೋsಗ್ರಜಃ ಶ್ರಿಯೋ ದ್ವಿಷನ್ ರಮಾಪತಿಮ್ ।
ಹರೇಃ ಪ್ರದಾತುಮುದ್ಯತಾಂ ನ್ಯವಾರಯದ್ಧರಿಪ್ರಿಯಾಮ್ ॥೧೭.೦೨॥

ರುಗ್ಮಿ ಎಂಬ ಹೆಸರುಳ್ಳ ರುಗ್ಮಿಣಿಯ ಅಣ್ಣನು, ಪರಮಾತ್ಮನನ್ನು ದ್ವೇಷಮಾಡುತ್ತಾ, ರುಗ್ಮಿಣಿಯನ್ನು ಪರಮಾತ್ಮನಿಗೆ ನೀಡಬೇಕೆಂದು ಸಿದ್ಧರಾಗಿದ್ದ ಬಂಧುಗಳನ್ನು ತಡೆದನು. 
[ರುಗ್ಮಿಣಿಯ ಸಂಬಂಧಿಕರಿಗೆ ಅವಳನ್ನು ಶ್ರೀಕೃಷ್ಣನಿಗೇ ನೀಡಬೇಕು ಎಂದಿತ್ತು. ಏಕೆಂದರೆ ಆಕೆಗೆ ಸರಿಹೊಂದುವ  ರೂಪವಿರುವುದು ಕೃಷ್ಣನಲ್ಲಿಯೇ. ಕೃಷ್ಣನಿಗೆ ಸರಿಹೊಂದುವ ರೂಪವಿರುವುದು ರುಗ್ಮಿಣಿಯಲ್ಲಿ. ಅದರಿಂದಾಗಿ ಅವರಿಬ್ಬರೂ ಒಳ್ಳೆಯ ಜೋಡಿಯಾಗುತ್ತಾರೆ ಎನ್ನುವುದು ಬಂಧುಗಳ ಬಯಕೆಯಾಗಿತ್ತು. ಆದರೆ ಭಗವಂತನನ್ನು ದ್ವೇಷಿಸುತ್ತಿದ್ದ ರುಗ್ಮಿ ಅದನ್ನು ತಡೆದ]

ಪ್ರಘೋಷಿತೇ ಸ್ವಯಮ್ಬರೇsಥ ತೇನ ಮಾಗಧಾದಯಃ 
ಸಮೀಯುರುಗ್ರಪೌರುಷಾಃ ಸಸಾಲ್ವಪೌಣ್ಡ್ರಚೇದಿಪಾಃ ॥೧೭.೦೩॥

ಹೀಗೆ ರುಗ್ಮಿಣಿಯ ಸ್ವಯಂಬರವು ಪ್ರಘೋಷಿಸಲ್ಪಡಲು, ಆ ಸ್ವಯಂಬರದ ನಿಮಿತ್ತವಾಗಿ ಜರಾಸಂಧನನ್ನೇ ಮೊದಲು ಮಾಡಿಕೊಂಡು ಸಾಲ್ವ, ಪೌಣ್ಡ್ರ, ಶಿಶುಪಾಲರು ಒಂದೆಡೆ ಸೇರಿದರು.

ತದಾ ಜಗಾಮ ಕೇಶವೋ ಜವೇನ ಕುಣ್ಡಿನಂ ಪುರಮ್ ।
ಸ್ಮೃತೋsಥ ತೇನ ಪಕ್ಷಿರಾಟ್ ಸಮಾಜಗಾಮ ಕೇಶವಮ್ ॥೧೭.೦೪॥

ಶ್ರೀಕೃಷ್ಣನಿಂದ ಸ್ಮರಿಸಲ್ಪಟ್ಟವನಾದ ಗರುಡನು ಕೇಶವನ ಬಳಿ ಬಂದ. ಶ್ರೀಕೃಷ್ಣನು ಗರುಡನನ್ನೇರಿ ವೇಗದಿಂದ ಕುಣ್ಡಿನದೇಶಕ್ಕೆ ತೆರಳಿದನು.

ಪತತ್ರವಾಯುನಾsಸ್ಯ ತೇ ನರೇಶ್ವರಾಃ ಪ್ರಪಾತಿತಾಃ ।
ಯದೇದೃಶಂ ಪತತ್ರಿಣೋ ಬಲಂ ಹರೇಃ ಕಿಮುಚ್ಯತೇ ॥೧೭.೦೫॥

ಈ ಗರುಡನ ರೆಕ್ಕೆಯ ಗಾಳಿಯಿಂದ ಜರಾಸಂಧಾದಿಗಳು ಬಿದ್ದರು. ಪಕ್ಷಿಯ ಬಲವೇ ಹೀಗಿರಬೇಕಾದರೆ ಇನ್ನು ಹರಿಯ ಬಲ ಎಂತದ್ದಿರಬೇಕು?

No comments:

Post a Comment