ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Monday, November 30, 2020

Mahabharata Tatparya Nirnaya Kannada 2020_2028

 

ಪೂರ್ವಂ ಹಿ ಗಙ್ಗಾ ಮಮ ವಿಷ್ಣುಪೂಜಾವಿಘ್ನಾರ್ತ್ಥಮಾಯಾದ್ ವಾಮಕರೇಣ ಸಾ ಮೇ ।

ನುನ್ನಾ ಪರಸ್ತಾದ್ ಬಹುಯೋಜನಂ ಗತಾ ಪುರೇ ಕುರೂಣಾಂ ಶಿವ ಆಗತಸ್ತದಾ ॥೨೦.೨೦॥

 

ಹಿಂದೆ ಕೌರವರ ಪಟ್ಟಣವಾದ ಹಸ್ತಿನಾವತಿಯಲ್ಲಿ ಗಂಗೆಯು ನನ್ನ ವಿಷ್ಣುಪೂಜೆಯನ್ನು ಅಡ್ಡಿ ಮಾಡುವುದಕ್ಕಾಗಿ ಬಂದಳು. ಅವಳು ನನ್ನ ಎಡಗೈಯಿಂದ ತಳ್ಳಲ್ಪಟ್ಟವಳಾಗಿ, ಬಹಳ ಯೋಜನಾ ಆಚೆ ಸರಿದಳು. ಆಗ ಸದಾಶಿವನು ಬಂದನು.

 

ಸ ವ್ಯಾಘ್ರರೂಪೀ ಕಪಿಲಾತ್ಮಕಾಮುಮಾಂ ಪರೀಕ್ಷಯನ್ ಮಾಂ ಹನ್ತುಮಿವಾsದ್ರವದ್ ದ್ರುತಮ್ ।

ಸ ಮೇ ಯುದ್ಧೇ ವಿಜಿತೋ ಮೂರ್ಚ್ಛಿತಶ್ಚ ಗದಾಪ್ರಹಾರಾದಾಸ ಲಿಙ್ಗಾನ್ತರಸ್ಥಃ ॥೨0.೨೧॥

 

ನನ್ನನ್ನು ಪರೀಕ್ಷೆ ಮಾಡಲೋಸುಗ ಆ ಸದಾಶಿವನು ಹುಲಿರೂಪವನ್ನು ಧರಿಸಿ, ಗೋವಿನ ವೇಷವನ್ನು ಧರಿಸಿದ ಉಮೆಯನ್ನು ಕೊಲ್ಲಲೋ ಎಂಬಂತೆ ಓಡಿ ಬಂದನು. ಆಗ ಅವನು ನನ್ನ ಗದಾಪ್ರಹಾರದಿಂದ ಯುದ್ಧದಲ್ಲಿ ಸೋತು, ಮೂರ್ಛಿತನಾಗಿ ಇನ್ನೊಂದು ಲಿಂಗದಲ್ಲಿ ಇರತಕ್ಕವನಾದನು.

 

ವ್ಯಾಘ್ರೇಶ್ವರಂ ನಾಮ ಲಿಙ್ಗಂ ಪೃಥಿವ್ಯಾಂ ಖ್ಯಾತಂ ತದಾಸ್ತೇ ತದ್ವದನ್ಯತ್ರ ಯುದ್ಧೇ ।

ತೀರೇ ಗೋಮತ್ಯಾ ಹೈಮವತೇ ಗಿರೌ ಹಿ ಜಿತಸ್ತತ್ರಾಪ್ಯಾಸ ಶಾರ್ದ್ದೂಲಲಿಙ್ಗಮ್ ॥೨೦.೨೨॥

 

ಅದು ಇಂದು ವ್ಯಾಘ್ರೇಶ್ವರ ಎಂಬ ಹೆಸರಿನ ಲಿಂಗವಾಗಿ ಖ್ಯಾತವಾಗಿದೆ. ಅದೇ ರೀತಿ ಹಿಮಾಲಯ ಪರ್ವತದ ಗೋಮತೀ ನದಿ ತೀರದಲ್ಲಿ ನಡೆದ ಇನ್ನೊಂದು ಯುದ್ಧದಲ್ಲಿ ಶಿವ ನನ್ನಿಂದ ಸೋತ. ಅಲ್ಲಿಯೂ ಕೂಡಾ ಶಾರ್ದೂಲಲಿಙ್ಗ ಎನ್ನುವ ಹೆಸರು ಬಂತು.

 

ಏವಂ ಪ್ರತ್ಯಕ್ಷೇ ವಿಷ್ಣುಪದಾಶ್ರಯಸ್ಯ ಬಲಾಧಿಕ್ಯೇ ಕಿಮು ವಕ್ತವ್ಯಮತ್ರ ।

ವಿಷ್ಣೋರಾಧಿಕ್ಯೇ ಕ್ಷತ್ರಿಯಾಣಾಂ ಪ್ರಮಾಣಂ ಬಲಂ ವಿಪ್ರೇ ಜ್ಞಾನಮೇವೇತಿ ಚಾsಹುಃ ॥೨೦.೨೩ ॥

 

ಈರೀತಿಯಾಗಿ ನಾರಾಯಣನನ್ನು ಆಶ್ರಯಿಸಿದವನಾದ ನನ್ನ ಬಲದ ಆಧಿಕ್ಯವು ಸ್ಫುಟವಾಗಿ ತೋರುತ್ತಿರಲು ಈ ವಿಚಾರದಲ್ಲಿ ಇನ್ನೇನು ಹೇಳಬೇಕಾದದ್ದಿದೆ ? ವಿಷ್ಣು ಸರ್ವೋತ್ತಮ ಎನ್ನುವುದರಲ್ಲಿ ಕ್ಷತ್ರಿಯರಿಗೆ ‘ಬಲವು ಪ್ರಮಾಣ’. ವೈಷ್ಣವನಾಗಿರುವ ವಿಪ್ರನಲ್ಲಿ ‘ಜ್ಞಾನವೇ ಪ್ರಮಾಣ’ ಎಂದು ಹೇಳುತ್ತಾರೆ. 

 

 

ಮಯಾ ಕೇದಾರೇ ವಿಪ್ರರೂಪೀ ಜಿತಶ್ಚ  ರುದ್ರೋsವಿಶಲ್ಲಿಙ್ಗಮೇವಾsಶು ಭೀತಃ ।

ತತಃ ಪರಂ ವೇದವಿದಾಮಗಮ್ಯತಾಶಾಪಂ ಪ್ರಾದಾಚ್ಛಙ್ಕರೋ ಬ್ರೀಳಿತೋsತ್ರ ॥೨೦.೨೪ ॥

 

ನನ್ನಿಂದ ಕೇದಾರ ಕ್ಷೇತ್ರದಲ್ಲಿ ಬ್ರಾಹ್ಮಣನ ವೇಷ ಧರಿಸಿದ ಬಂದ ರುದ್ರ(ವಾಗ್ಯುದ್ಧದಲ್ಲಿ) ಸೋತ ಮತ್ತು ಕೂಡಲೇ ನನ್ನಿಂದ ಅಳುಕಿ ಲಿಂಗವನ್ನು ಪ್ರವೇಶಿಸಿದ. ಅದಾದಮೇಲೆ ವೇದವನ್ನು ಬಲ್ಲವರಿಗೆ ‘ಕೇದಾರಕ್ಕೆ ಬರಬಾರದು’ ಎನ್ನುವ ಶಾಪವನ್ನು ನಾಚಿದ ಶಂಕರ ಕೊಟ್ಟ.

 

ಏವಂ ಪ್ರತ್ಯಕ್ಷೇ ವಿಷ್ಣು ಬಲೇ ಪ್ರತೀಪಂ ಮನೋ ಯಸ್ಯ ಹ್ಯುತ್ತರಂ ಸ ಬ್ರವೀತು ।

ಕ್ರೋಧೋsಧಿಕಶ್ಚೇತ್ ಕ್ಷಿಪ್ರಮಾಯಾತು ಯೋದ್ಧುಮಿತ್ಯುಕ್ತಾಸ್ತೇsಭ್ಯಾಯಯುರಾತ್ತಶಸ್ತ್ರಾಃ ॥೨೦.೨೫॥

 

ಈ ರೀತಿಯಾಗಿ ನಾರಾಯಣನ ಬಲವು ಪ್ರತ್ಯಕ್ಷವಾಗಿ ಸಿದ್ಧವಾಗುತ್ತಿರಲು,  ಯಾರ ಮನಸ್ಸು ಇದಕ್ಕೆ ವಿರುದ್ಧವಾಗಿದೆಯೋ ಅವನು ಉತ್ತರವನ್ನು ಹೇಳಲಿ. ಒಂದು ವೇಳೆ ಬಹಳ ಕೋಪಗೊಂಡವರಾದರೆ ಕೂಡಲೇ ನನ್ನೊಂದಿಗೆ ಯುದ್ಧಕ್ಕೆ ಬನ್ನಿರಿ’. ಈ ರೀತಿಯಾಗಿ ಭೀಮಸೇನನಿಂದ ಹೇಳಲ್ಪಟ್ಟ ಜರಾಸಂಧಾದಿಗಳು ಶಸ್ತ್ರವನ್ನು ಹಿಡಿದು ನುಗ್ಗಿ ಬಂದರು.

 

ವಿದ್ರಾಪ್ಯ ತಾನ್ ಬಾಣಸಙ್ಘೈಃ ಸಮಸ್ತಾನ್ ಜರಾಸುತಂ ಗದಯಾ ಯೋಧಯಿತ್ವಾ ।

ಬಾಹುಭ್ಯಾಂ ಚೈನಂ ಪರಿಗೃಹ್ಯಾsಶು ವಿಷ್ಣೋಃ ಪಾದೋತ್ಥಾಯಾಂ ಪ್ರಾಕ್ಷಿಪದ್ ದೇವನದ್ಯಾಮ್ ॥೨೦.೨೬॥

 

ಎಲ್ಲಾ ಅರಸರನ್ನು ಬಾಣಗಳ ಸುರಿಮಳೆಯಿಂದ ಓಡಿಸಿದ ಭೀಮಸೇನ, ಜರಾಸಂಧನೊಂದಿಗೆ  ಗದೆಯಿಂದ ಯುದ್ಧಮಾಡಿ, ತನ್ನೆರಡು ಕೈಗಳಿಂದ ಅವನನ್ನು ಹಿಡಿದುಕೊಂಡು, ನಾರಾಯಣನ ಪಾದದಿಂದ ಹುಟ್ಟಿದ ಗಂಗೆಯಲ್ಲಿ ಅವನನ್ನು ಎಸೆದ.

[ಜರಾಸಂಧ ಗಂಗೆ ವಿಷ್ಣುಪಾದದಿಂದ ಹುಟ್ಟಿರುವ ನದಿಯಾದ್ದರಿಂದ ಗಂಗೆಯಲ್ಲಿ ಸ್ನಾನ ಮಾಡುತ್ತಿರಲಿಲ್ಲ. ಹಾಗಾಗಿ ಅಲ್ಲೇ ಅವನನ್ನು ಮುಳುಗಿಸಿದ]

 

ಸ ಬ್ರೀಳಿತಃ ಪ್ರಯಯೌ ಮಾಗಧಾಂಶ್ಚ ಭೂಪೈಃ ಸಮೇತೋ ಭೀಮಸೇನೋ ರಥಂ ಸ್ವಮ್ ।

ಆರುಹ್ಯ ಕಾಶೀಶ್ವರಪೂಜಿತಶ್ಚ ಯಯೌ ಕಾಳ್ಯಾ ಶಕ್ರಸನಾಮಕಂ ಪುರಮ್ ॥೨೦.೨೭॥

 

ಜರಾಸಂಧನು ಬಹಳ ನಾಚಿಕೊಂಡು ಮಾಗಧದೇಶಕ್ಕೆ ತನ್ನ ಅನುಯಾಯಿ ರಾಜರಿಂದ ಕೂಡಿಕೊಂಡು ಹಿಂತಿರುಗಿದ. ಭೀಮಸೇನನು ಕಾಶೀ ರಾಜನಿಂದ ಪೂಜಿತನಾಗಿ, ತನ್ನ ರಥವನ್ನು ಏರಿ,  ಕಾಳಿಯಿಂದ ಕೂಡಿಕೊಂಡು ಇಂದ್ರಪ್ರಸ್ಥ ಎನ್ನುವ ಹೆಸರಿನ ಪಟ್ಟಣದತ್ತ ತೆರಳಿದ. 

 

ತಸ್ಯಾಂ ತ್ರಿಲೋಕಾಧಿಕರೂಪಸದ್ಗುಣೈರಾ ಸಮ್ಮತಾಯಾಂ ರಮಮಾಣಃ ಸುತಂ ಚ ।

ಶರ್ವತ್ರಾತಂ ನಾಮಾಜನಯತ್ ಪುರಾ ಯಃ ಸಮಾನವಾಯುರ್ಬಲವೀರ್ಯ್ಯಯುಕ್ತಃ ॥೨೦.೨೮॥

 

ಮೂರುಲೋಕಕ್ಕೂ ಮಿಗಿಲೆನಿಸಿರುವ ರೂಪ ಹಾಗೂ ಗುಣಗಳಿಂದ ಅತ್ಯಂತ ಸಮ್ಮತಳಾದ ಕಾಳಿಯೊಂದಿಗೆ ಭೀಮಸೇನ ರಮಿಸುತ್ತಾ,  ಶರ್ವತ್ರಾತ ಎಂಬ ಹೆಸರಿನ ಮಗನನ್ನು ಹುಟ್ಟಿಸಿದ. ಹಿಂದೆ ಯಾರು ಬಲ ಹಾಗೂ ವೀರ್ಯದಿಂದ ಕೂಡಿರುವ ‘ಸಮಾನ’ ವಾಯುವೋ ಅವನನ್ನೇ ಇಲ್ಲಿ ಹುಟ್ಟಿಸಿದ.

[ಕಾಳಿ ಶರ್ವತ್ರಾತ ಎನ್ನುವ ಮಗನನ್ನು ಪಡೆದಳು ಎನ್ನುವುದನ್ನು ಪುರಾಣಗಳಲ್ಲಿ ಹೇಳಿರುವುದನ್ನು ಕಾಣಬಹುದು:  ಕಾಳೀ ಚ ಭೀಮಸೇನಾದೇವ ಶರ್ವತ್ರಾತಂ ಪುತ್ರಮವಾಪ’ ಎಂದು ವಿಷ್ಣುಪುರಾಣ (೪.೨೦.೧೧),   ಕಾಳೀ ಶರ್ವಗತಂ ತತಃ’ ಎಂದು ಭಾಗವತ (೯.೧೯.೩೧),  ]

Sunday, November 29, 2020

Mahabharata Tatparya Nirnaya Kannada 2016_2019

 

ವೇದಾಧಿಕ್ಯಂ ಶೈವಶಾಸ್ತ್ರಾಣಿ ಚಾsಹುರ್ವೇದೋಜ್ಝಿತಾನಾಂ ಬಹುಲಾಂ ಚ ನಿನ್ದಾಮ್ ।

ತಥಾ ಶಾಕ್ತೇಯಸ್ಕಾನ್ದಸೌರಾದಿಕಾನಾಂ ತತ್ರೈವೋಕ್ತಂ ಛನ್ದಸಾಂ ವೈಷ್ಣವತ್ವಮ್ ॥೨೦.೧೬॥

 

‘ಶೈವ ಶಾಸ್ತ್ರಗಳೂ ಕೂಡಾ ವೇದ ಶ್ರೇಷ್ಠ ಎಂದು ಹೇಳಿವೆ. ಅಲ್ಲದೆ, ಯಾರು ವೇದ ವರ್ಜಿತರೋ ಅವರ ಬಹಳ ನಿಂದೆಯನ್ನು ಮಾಡಿದ್ದಾರೆ ಕೂಡಾ. ಹಾಗೇ ಶಾಕ್ತ ಮತ, ಸ್ಕಾಂದ ಮತ, ಸೂರ್ಯನೇ ಸರ್ವಾಧಿಕ ಎಂದು ಹೇಳುವ ಮತ, ಇತ್ಯಾದಿಯಾಗಿ ಆಯಾ ಮತಗಳಲ್ಲಿಯೇ ವೇದವು ವಿಷ್ಣುಪರವಾಗಿದೆ ಎಂದು ಹೇಳಿವೆ.

 

ವಿಷ್ಣೋರಾಧಿಕ್ಯಂ ತಾನಿ ಶಾಸ್ತ್ರಾಣಿ ಚಾsಹುಃ ಶಿವಾದಿಭ್ಯಃ ಕುತ್ರಚಿನ್ನೈವ ವೇದೇ ।

ವಿಷ್ಣೂತ್ಕೃಷ್ಟಃ ಕಥಿತೋ ಬೌದ್ಧಪೂರ್ವಾಶ್ಚಾsಹುರ್ವಿಷ್ಣುಂ ಪರಮಂ ಸರ್ವತೋsಪಿ ॥೨೦.೧೭॥

 

ಆ ಶಾಸ್ತ್ರಗಳು ಶಿವಾದಿಗಳಿಗಿಂತ ವಿಷ್ಣುವೇ ಶ್ರೇಷ್ಠ ಎಂದು ಹೇಳುತ್ತಿವೆ. ವೇದದಲ್ಲಿ  ವಿಷ್ಣುವಿಗಿಂತ ಉತ್ಕೃಷ್ಟನಾದ ಇನ್ನೊಬ್ಬ ದೇವತೆಯನ್ನು ಹೇಳಿಯೇ ಇಲ್ಲ. ಬೌದ್ಧರು, ಮೊದಲಾದವರೂ ಕೂಡಾ ವಿಷ್ಣುವನ್ನು ಎಲ್ಲರಿಗಿಂತ ಮಿಗಿಲು ಎಂದು ಹೇಳುತ್ತಾರೆ.

 

ಲೋಕಾಯತಾಶ್ಚ ಕ್ವಚಿದಾಹುರಗ್ರ್ಯಂ ವಿಷ್ಣುಂ ಗುರುಂ ಸರ್ವವರಂ ಬೃಹಸ್ಪತೇಃ ।

ಸರ್ವಾಗಮೇಷು ಪ್ರಥಿತೋsತ ಏವ ವಿಷ್ಣುಃ ಸಮಸ್ತಾಧಿಕ ಏವ ಮುಕ್ತಿತದಃ ॥೨೦.೧೮॥

 

ಲೋಕಾಯತರೂ ಕೂಡಾ ಕೆಲವೊಮ್ಮೆ ನಾರಾಯಣನನ್ನು ಬೃಹಸ್ಪತಿಯ ಗುರುವನ್ನಾಗಿ, ಎಲ್ಲಕ್ಕೂ ಮಿಗಿಲು ಎಂದೂ ಹೇಳುತ್ತಾರೆ. ಆಕಾರಣದಿಂದ ನಾರಾಯಣನೇ ಎಲ್ಲಕ್ಕಿಂತ ಮಿಗಿಲು ಮತ್ತು ಅವನೇ ಮುಕ್ತಿಯನ್ನು ಕೊಡುವವನು ಎಂದು ಎಲ್ಲಾ ಆಗಮಗಳೂ ಒಪ್ಪಿಕೊಂಡಿವೆ.

 

[ಈ ಮೇಲಿನ ಮಾತಿಗೆ ಪ್ರಮಾಣ ನಮಗೆ ಪುರಾಣದಲ್ಲಿ ಕಾಣಸಿಗುತ್ತದೆ. ಶುಕ್ರರೂಪದಲ್ಲಿರುವ ಬ್ರಹಸ್ಪತಿ  ವಿಶೇಷತಃ ದೈತ್ಯರನ್ನು ಮೋಸ ಮಾಡಿ (ನಾಸ್ತಿಕರನ್ನಾಗಿ ಮಾಡಿ) ಅವರಿಗೆ ಸದ್ಗತಿ ಸಿಗದಂತೆ ಮಾಡಬೇಕು ಎಂದು ಪಥಕ(ಸಂಚು) ಮಾಡುತ್ತಾರೆ. ಪಾದ್ಮಪುರಾಣದಲ್ಲಿ ಈ ಕುರಿತಾದ ವಿವರಣೆ ಕಾಣಸಿಗುತ್ತದೆ. ಅಲ್ಲಿ ಅವರು ದೈತ್ಯರನ್ನು ಕುರಿತು ಹೇಳುವ ಮಾತು ಹೀಗಿದೆ:  ಯೇ ತ್ವಮೀ ವೈಷ್ಣವಾ ಧರ್ಮಾ ಯೇ ಚ ರುದ್ರಕೃತಾಸ್ತಥಾ ।  ಕುಧರ್ಮಾ  ದಾರಸಹಿತೈರ್ಹಿಂಸಾಪ್ರಾಯಾಃ ಕೃತಾ ಹಿ ತೈಃ ।  ಅರ್ಧನಾರೀಶ್ವರೋ ರುದ್ರಃ ಕಥಂ ಮೋಕ್ಷಂ ಗಮಿಷ್ಯತಿ । ವೃತೋ ಭೂತಗಣೈರ್ಭೂರಿ ಭೂಷಿತಶ್ಚಾಸ್ತಿಭಿಸ್ತಥಾ । ನ  ಸ್ವರ್ಗೋ ನೈವ ಮೋಕ್ಷೋsತ್ರ ಲೋಕಾಃ ಕ್ಲಿಶ್ಯಂತಿ ವೈ ವೃಥಾ ।  ಹಿಂಸಾಯಾಮಾಸ್ಥಿತೋ ವಿಷ್ಣುಃ ಕಥಂ ಮೋಕ್ಷಂ ಗಮಿಷ್ಯತಿ । ರಜೋಗುಣಾತ್ಮಕೋ ಬ್ರಹ್ಮಾ ಸ್ವಾಮ್ ಸೃಷ್ಟಿಮುಪಜೀವತಿ । ದೇವರ್ಷಯೋsಥ ಯೇ ಚಾನ್ಯೇ ವೈದಿಕಂ ಪಕ್ಷಮಾಶ್ರಿತಾಃ । ಹಿಂಸಾಪ್ರಾಯಾಃ  ಸದಾ ಕ್ರೂರಾ ಮಾಂಸಾಧಾಃ ಪಾಪಕಾರಿಣಃ । ಸುರಾಸ್ತು ಮಧ್ಯಪಾನೇನ ಮಾಂಸಾದಾ ಬ್ರಾಹ್ಮಣಾಸ್ತ್ವಮೀ ।  ಧರ್ಮೇಣಾನೇನ ಕಃ ಸ್ವರ್ಗಂ ಕಥಂ ಮೋಕ್ಷಂ ಗಮಿಷ್ಯತಿ । ಯಚ್ಚ ಯಜ್ಞಾದಿಕಂ ಕರ್ಮ ಸ್ಮಾರ್ತಂ ಶ್ರಾದ್ಧಾದಿಕಂ ತಥಾ । ತತ್ರ ನೈವಾಪವರ್ಗೋsಸ್ತಿ ಯತ್ರೈಷಾ ಶ್ರೂಯತೇ ಶ್ರುತಿಃ ।  ಯಜ್ಞಂ ಕೃತ್ವಾ ಪಶುಂ ಹತ್ವಾ ಕೃತ್ವಾ ರುಧಿರಕರ್ದಮಮ್   । ಯದ್ಯೇವಂ ಗಮ್ಯತೇ ಸ್ವರ್ಗೋ ನರಕಃ ಕೇನ ಗಮ್ಯತೇ । ಯದಿ  ಭುಕ್ತಮಿಹಾನ್ಯೇನ ತೃಪ್ತಿರನ್ಯಸ್ಯ ಜಾಯತೇ । ದದ್ಯಾತ್ ಪ್ರವಸತಃ ಶ್ರಾದ್ಧಂ ನ ಸ ಭೋಜನಮಾಹರೇತ್ । ಆಕಾಶಗಾಮಿನೋ ವಿಪ್ರಾಃ ಪತಿತಾ ಮಾಂಸಭಕ್ಷಣಾತ್ । ತೇಷಾಂ ನ ವಿದ್ಯತೇ ಸ್ವರ್ಗೋ ಮೋಕ್ಷೇ ನೈವೇಹ ದಾನವಾಃ । ಜಾತಸ್ಯ ಜೀವಿತಂ ಜನ್ತೋರಿಷ್ಟಂ ಸರ್ವಸ್ಯ ಜಾಯತೇ । ಆತ್ಮಮಾಂಸೋಪಮಂ ಮಾಂಸಂ ಕಥಂ ಖಾದೇತ ಪಣ್ಡಿತಃ    ಯೋನಿಜಾಸ್ತು ಕಥಂ ಯೋನಿಂ ಸೇವನ್ತೇ ಜಂತವಸ್ತ್ವಮೀ । ಮೈಥುನೇನ  ಕಥಂ ಸ್ವರ್ಗಂ ಯಾಸ್ಯಂತೇ ದಾನವೇಶ್ವರ ।  ಮೃದ್ಭಸ್ಮನಾ ಯತ್ರ ಶುದ್ಧಿಸ್ತತ್ರ  ಶುದ್ಧಿಸ್ತು ಕಾ ಭವೇತ್     ವಿಪರೀತತಮಂ ಲೋಕಂ ಪಶ್ಯ ದಾನವ ಯಾದೃಶಮ್’.  ‘ ತಾರಾಂ ಬೃಹಸ್ಪತೇರ್ಭಾರ್ಯಾಂ ಹೃತ್ವಾ ಸೋಮಃ ಪುರಾ ಗತಃ । ತಸ್ಯಾಂ ಜಾತೋ ಬುಧಃ ಪುತ್ರೋ  ಗುರುರ್ಜಗ್ರಾಹ ತಾಂ ಪುನಃ । ಗೌತಮಸ್ಯ ಮುನೇಃ ಪತ್ನೀಮಹಲ್ಯಾಂ  ನಾಮ ನಾಮತಃ । ಅಗೃಹ್ಣಾತ್ ತಾಂ ಸ್ವಯಂ ಶಕ್ರಃ ಪಶ್ಯ ಧರ್ಮೋ ಯಥಾವಿಧಃ’ (ಸೃಷ್ಟಿಖಂಡ ೧೩.೨೩೧-೩೨) ಇತ್ಯಾದಿಯಾಗಿ,

 ‘ಇತ್ಯುಕ್ತ್ವಾ ಧಿಷಣೋ ರಾಜಂಶ್ಚಿನ್ತಯಾಮಾಸ ಕೇಶವಮ್ । ತಸ್ಯ  ತಚ್ಚಿನ್ತಿತಂ ಜ್ಞಾತ್ವಾ ಮಾಯಾಮೋಹಂ  ಜನಾರ್ದನಃ ।    ಸಮುತ್ಪಾದ್ಯ  ದದೌ ತಸ್ಯ ಪ್ರಾಹ ಚೇದಂ ಬೃಹಸ್ಪತಿಮ್ । ಮಾಯಾಮೊಹೋsಯಮಖಿಲಾಂಸ್ತಾನ್ ದೈತ್ಯಾನ್ ಮೋಹಯಿಷ್ಯತಿ । ಭವತಾ ಸಹಿತಃ ಸರ್ವಾನ್ ವೇದಮಾರ್ಗಬಹಿಷ್ಕೃತಾನ್ ।  ಎವಮಾದಿಶ್ಯ  ಭಗವಾನನ್ತರ್ಧಾನಂ ಜಗಾಮ ಹ । ತಪಸ್ಯಭಿರತಾನ್ ಸೋsಥ ಮಾಯಾಮೋಹೋ ಗತೋsಸುರಾನ್ । ತೇಷಾಂ ಸಮೀಪಮಾಗತ್ಯ ಬೃಹಸ್ಪತಿರುವಾಚ ಹ । ಅನುಗ್ರಹಾರ್ಥಂ ಯುಷ್ಮಾಕಂ ಭಕ್ತ್ಯಾ ಪ್ರೀತಸ್ತ್ವಿಹಾsಗತಃ । ಯೋಗೀ ದಿಗಮ್ಬರೋ ಮುಣ್ಡೋ ಬರ್ಹಿಪತ್ರಧರೋ ಹ್ಯಯಮ್ । ಇತ್ಯುಕ್ತೇ ಗುರುಣಾ ಪಶ್ಚಾನ್ಮಾಯಾಮೋಹೋsಬ್ರವೀದ್ ವಚಃ’  (೩೪೨-೪೭). ‘ ಕುರುಧ್ವಂ ಮಮ ವಾಕ್ಯಾನಿ ಯದಿ ಮುಕ್ತಿಮಭೀಪ್ಸಥ । ಆರ್ಹಥಂ ಸರ್ವಮೇತಚ್ಚ ಮುಕ್ತಿದ್ವಾರಮಸಂವೃತಮ್ । ಧರ್ಮಾದ್ ವಿಮುಕ್ತೇರರ್ಹೋsಯಂ ನೈತಸ್ಮಾದಪರಃ ಪರಃ । ಅತ್ರೈವಾವಸ್ಥಿತಾಃ ಸ್ವರ್ಗಂ ಮುಕ್ತಿಂ ವಾsಪಿ ಗಮಿಷ್ಯಥ’ (೩೪೯-೩೫೦).  ‘ಪುನಶ್ಚ ರಕ್ತಾಮ್ಬರಧೃನ್ಮಾಯಾಮೋಹೋ ಜಿತೇಕ್ಷಣಃ । ಸೋsನ್ಯಾನಪ್ಯಸುರಾನ್ ಗತ್ವಾ ಊಚೇsನ್ಯನ್ಮಧುರಾಕ್ಷರಮ್।    ಸ್ವರ್ಗಾರ್ಥಂ ಯದಿ ವಾ ವಾಞ್ಛಾ ನಿರ್ವಾಣಾರ್ಥಾಯ ವಾ ಪುನಃ । ತದಲಂ ಪಶುಘಾತಾದಿದುಷ್ಟಧರ್ಮೈರ್ನಿಬೋಧತ । ವಿಜ್ಞಾನಮಯಮೇತದ್ವೈ  ತ್ವಶೇಷಮಧಿಗಚ್ಛತ । ಬುಧ್ಯಧ್ವಂ ಮೇ ವಚಃ ಸಮ್ಯಗ್ ಬುದೈರೇವಮಿಹೋದಿತಮ್’ ( ೩೫೯-೩೬೨), ‘ ನೈತದ್ ಯುಕ್ತಿಸಹಂ ವಾಕ್ಯಂ ಹಿಂಸಾ ಧರ್ಮಾಯ ಜಾಯತೇ । ಹವೀಂಷ್ಯನಲದಗ್ಧಾನಿ ಫಲಾನ್ಯರ್ಹನ್ತಿ ಕೋವಿದಾಃ । ನಿಹತಸ್ಯ ಪಶೋರ್ಯಜ್ಞೇ ಸ್ವರ್ಗಪ್ರಾಪ್ತಿರ್ಯದಿಷ್ಯತೇ । ಸ್ವಪಿತಾ ಯಜಮಾನೇನ ಕಿಂವಾ ತತ್ರ ನ ಹನ್ಯತೇ । ತೃಪ್ತಯೇ ಜಾಯತೇ ಪುಂಸೋ ಭುಕ್ತಮನ್ಯೇನ ಚೇದ್ ಯದಿ । ದದ್ಯಾಚ್ಛ್ರಾದ್ಧಂ ಪ್ರವಸತೋ ನ ವಹೇಯುಃ ಪ್ರವಾಸಿನಃ । ಯಜ್ಞೈರನೇಕೈರ್ದೇವತ್ವಮವಾಪ್ಯೇನ್ದ್ರೇಣ ಭುಜ್ಯತೇ । ಶಮ್ಯಾದಿ ಯದಿ ಚೇತ್ ಕಾಷ್ಠಂ ತದ್ವರಂ  ಪತ್ರಭುಕ್ ಪಶುಃ । ಜನಾಶ್ರದ್ಧೇಯಮಿತ್ಯೇತದವಗಮ್ಯ ತು ತದ್ವಚಃ । ಉಪೇಕ್ಷ್ಯ ಶ್ರೇಯಸೇ ವಾಕ್ಯಂ ರೋಚತಾಂ ಯನ್ಮಯೇರಿತಮ್ । ನಹ್ಯಾಪ್ತವಾದಾ ನಭಸೋ ನಿಪತನ್ತಿ ಮಹಾಸುರಾಃ । ಯುಕ್ತಿಮದ್ವಚನಂ ಗ್ರಾಹ್ಯಂ ಮಯಾsನ್ಯೆಶ್ಚ ಭವದ್ವಿಧೈಃ’ (೩೬೫.೭)

ಈ ಮೇಲಿನ ಮಾತಿನ ಸಂಕ್ಷಿಪ್ತ ಅನುವಾದ ಹೀಗಿದೆ: ಶೈವಧರ್ಮವಿರಬಹುದು, ವೈಷ್ಣವಧರ್ಮವಿರಬಹುದು, ಅವೆಲ್ಲವೂ ಮೋಸಮಾಡಲೆಂದೇ ಇರುವ ಧರ್ಮಗಳು ಎಂದು ಹೇಳುತ್ತಾ ದೈತ್ಯರನ್ನು ದಾರಿತಪ್ಪಿಸುತ್ತಿದ್ದಾರೆ ಗುರುಗಳು. ಅರ್ಧನಾರೀಶ್ವರ ಹೇಗೆ ಮೋಕ್ಷಕ್ಕೆ ಹೋಗುತ್ತಾನೆ?  ಮೂಳೆಯನ್ನೇ ಮಾಲೆಯನ್ನಾಗಿ ಹಾಕಿಕೊಂಡವನವನು, ಸ್ವರ್ಗವೂ ಇಲ್ಲ, ಮೋಕ್ಷವೂ ಇಲ್ಲ. ಅದರ ಹೆಸರಲ್ಲಿ ಈ ಜನರು ಸುಮ್ಮನೆ ಒದ್ದಾಡುತ್ತಿದ್ದಾರೆ ಅಷ್ಟೇ. ಹಿಂಸೆಯಲ್ಲಿ ಸ್ಥಿತನಾದ ವಿಷ್ಣು ಎಲ್ಲಿ ಮೋಕ್ಷಕ್ಕೆ ಹೋಗುತ್ತಾನೆ? ಬ್ರಹ್ಮ ರಜೋಗುಣಾತ್ಮ,  ದೇವತೆಗಳು ಯಜ್ಞ ಎನ್ನುವ ನೆಪದಲ್ಲಿ ತಿನ್ನುವುದು ಮಾಂಸ! ಯಜ್ಞದ ಪ್ರಸಾದ ಎನ್ನುವ ನೆಪದಲ್ಲಿ ಮದ್ಯವನ್ನೂ ಕೂಡಾ ಬ್ರಾಹ್ಮಣರು ಸ್ವೀಕರಿಸುತ್ತಾರೆ! ಸ್ವರ್ಗ, ಮೋಕ್ಷಾ, ಅದಕ್ಕಾಗಿ ಈ ರೀತಿ ಯಜ್ಞ ಮೊದಲಾದವುಗಳನ್ನು ಮಾಡಬೇಕು ಎನ್ನುವುದೆಲ್ಲವೂ ಮೋಸ. ಯಾವುದೂ ಇಲ್ಲ! ಯಜ್ಞದಲ್ಲಿ ಪಶುಗಳನ್ನು ಕೊಂದು, ರಕ್ತದ ಕೋಡಿ ಹರಿಸಿ, ಎಲ್ಲರೂ ಸ್ವರ್ಗಕ್ಕೆ ಹೋಗುವುದಾದರೆ, ನರಕಕ್ಕೆ ಯಾರು ಹೋಗುತ್ತಾರೆ? ಹಾಗಾಗಿ ನರಕವೂ ಇಲ್ಲ. ಇಲ್ಲಿ ಕೊಟ್ಟಿದ್ದು ಅಲ್ಲಿ ತಿನ್ನುವುದಾದರೆ ಪ್ರವಾಸಕ್ಕೆ ಹೋಗುವಾಗ ಆಹಾರ ತೆಗೆದುಕೊಂಡು ಹೋಗುವ ಬದಲು ಮನೆಯಲ್ಲೇ ಪಿಂಡ ಇಡಲು ಹೇಳಬಹುದಲ್ಲ. ಇಲ್ಲೇ ಆಗುವುದಿಲ್ಲವೆಂದ ಮೇಲೆ ಪರಲೋಕದಲ್ಲಿ ಆಗುತ್ತದೆ ಎನ್ನುವುದನ್ನು ಹೇಗೆ ನಂಬುವುದು? ಅದರಿಂದಾಗಿ ಶ್ರಾದ್ಧ ಎನ್ನುವುದೂ  ಸುಳ್ಳು. ಹುಟ್ಟಿದವನು ತನ್ನ ಜೀವನದಲ್ಲಿ ಆನಂದಪಡಬೇಕು. ನನ್ನದೂ ಮಾಂಸವೇ, ಇನ್ನೊಂದು ಜೀವಿಯದೂ ಮಾಂಸವೇ. ನನ್ನ ಮಾಂಸದಂತೇ ಇರುವ ಇನ್ನೊಂದು ಪ್ರಾಣಿಯ ಮಾಂಸವನ್ನು ತಿನ್ನುವುದು ಒಳ್ಳೆಯದೇ? ಇನ್ನು ಯೋನಿಜರು ಆಯೋನಿಜರು ಎಂದು ಹೇಳುತ್ತಾರೆ. ಅದೆಲ್ಲಾ ಹೇಗೆ ಸಾಧ್ಯ? ಮೈಥುನದಿಂದ ಹೇಗೆ ಸ್ವರ್ಗವನ್ನು ಹೊಂದುತ್ತಾರೆ? ಮೈಯಲ್ಲಿರುವ ಮಣ್ಣು ಹೋಗಲಿ ಎಂದು ಸ್ನಾನ ಮಾಡುವುದು, ಅದೇ ಮಣ್ಣನ್ನು ಮೈಗೆ ಹಚ್ಚಿಕೊಳ್ಳುವುದೇ? ದೇವತೆಗಳು ಅದೆಷ್ಟು ಶ್ರೇಷ್ಠರು? ಬ್ರಹಸ್ಪತಿಯ ಹೆಂಡತಿ ತಾರೆಯನ್ನು ಚಂದ್ರ ಕರೆದುಕೊಂಡು ಹೋದ. ಚಂದ್ರನಿಗೆ ಹುಟ್ಟಿದ ಬುಧನನ್ನ ಗುರು ಸ್ವೀಕರಿಸಿದ!! ಗೌತಮನ ಪತ್ನಿ ಅಹಲ್ಯೆಯನ್ನು ಇಂದ್ರ ತೆಗೆದುಕೊಂಡ.......’ ಇತ್ಯಾದಿಯಾಗಿ ಹೇಳಿದ ಬೃಹಸ್ಪತಿ ನಾರಾಯಣನನ್ನು ಸ್ಮರಿಸಿದನಂತೆ. ಆಗ ದೈತ್ಯರನ್ನು ಮೋಹಗೊಳಿಸಬೇಕು ಎಂದು ಪರಮಾತ್ಮ ಅಲ್ಲಿ ಉತ್ಪನ್ನನಾದ. ‘ಇದೇ ರೀತಿಯ ಮಾತುಗಳಿಂದ ದೈತ್ಯರನ್ನು ವೇದಗಳಿಂದ ಬಹಿಷ್ಕೃತರನ್ನಾಗಿ ಮಾಡು’ ಎಂದು ಹೇಳಿದ ಶ್ರೀಹರಿ, ತಕ್ಷಣ ಮಾಯಾ-ಮೋಹದ ಅಭಿಮಾನಿ ದೇವತೆಯನ್ನು ಸೃಷ್ಟಿಸಿ, ಆ ದೇವತೆಯನ್ನು ಬೃಹಸ್ಪತಿಯ ಜೊತೆ ಕೊಟ್ಟ. ಅವನು ದಿಗಂಬರನಾಗಿ ತಲೆಯನ್ನು ಬೋಳಿಸಿಕೊಂಡು ಪಿನ್ಚವನ್ನು ಅಡ್ಡವಿಟ್ಟುಕೊಂಡು ಬಂದ. ಅವನನ್ನು ಬೃಹಸ್ಪತಿ ದೈತ್ಯರಿಗೆ ಪರಿಚಯಿಸಿದ.  ‘ಮಕ್ಕಳೇ, ನಿಮಗೆ ಮುಕ್ತಿ ಸಿಗಬೇಕು ಎನ್ನುವ ಆಸೆ ಇದ್ದರೆ ಜೈನ ಮತವನ್ನು ಅನುಸರಿಸಿ ಎಂದು ಅವನು ಹೇಳಿ ಮುಂದುವರಿದ. ಅಲ್ಲಿಂದ ದೈತ್ಯರ ಬೇರೆ ಗುಂಪಿಗೆ ಹೋದ ಅವನು ಕಾವಿಯನ್ನು ಉಟ್ಟು ‘ಏಕೆ ಹಿಂಸೆ ಮಾಡುವಿರಿ, ಎಲ್ಲವನ್ನೂ ಬಿಟ್ಟು ಬಿಡಿ, ಈ ಹಿಂಸೆಯಿಂದ ಮೋಕ್ಷ ಸಿಕ್ಕಿದರೂ ನಮಗೆ ಬೇಡ’ ಎಂದು ಉಪದೇಶ ಮಾಡಿದ. ‘ಯುಕ್ತಿ ಸರಿಯಾಗಿಲ್ಲ. ಪಶು ಹಿಂಸೆ ಪುಣ್ಯವಂತೆ, ಬೆಂಕಿಯಲ್ಲಿ ಬೆಂದುಹೋದ ಅನ್ನ ನಮಗೆ ಫಲವನ್ನು ಕೊಡುತ್ತದಂತೆ! ಎಲ್ಲವೂ ಬೆಂಕಿಯಲ್ಲಿ ಸುಟ್ಟು ಹೋಗುವುದನ್ನು ನಾವೇ ಕಾಣುತ್ತೇವೆ.  ಯಜಮಾನ ಯಜ್ಞದಲ್ಲಿ ಪಶು ಬಲಿ ಕೊಡಬೇಕು, ಅದು ಹಿಂಸೆ ಆಗುವುದಿಲ್ಲ, ಆ ಬಲಿಗೊಂಡ ಪಶು ಸ್ವರ್ಗಲೋಕಕ್ಕೆ ಹೋಗುತ್ತದಂತೆ.  ಅಂತಾದರೆ ನೇರವಾಗಿ ಯಜಮಾನನನ್ನೇ ಕತ್ತರಿಸಬಹುದಲ್ಲ!  ಶಮೀ ಮೊದಲಾದವುಗಳಿಂದ ಯಜ್ಞ ಮಾಡುವುದರಿಂದ ಮತ್ತು ಪ್ರಸಾದ ರೂಪವಾಗಿ ಅದನ್ನು ಸ್ವೀಕರಿಸುವುದರಿಂದ  ಮೋಕ್ಷವಾಗುವುದಾದರೆ, ಅದನ್ನೇ ತಿನ್ನುವ  ಪಶುಗಳೆಲ್ಲಾ ಯಾವತ್ತೋ ಮೊಕ್ಷದಲ್ಲಿರಬೇಕಿತ್ತಲ್ಲವೇ?  ನಾವೆಲ್ಲರೂ ಯುಕ್ತಿಪೂರ್ವಕವಾಗಿ ಚಿಂತನೆ ಮಾಡಬೇಕೇ ವಿನಃ ಬೇರೆ ರೀತಿ ಯಾರೋ ವೇದದಲ್ಲಿ ಹೇಳಿದ್ದಾರೆ ಎಂದು ನಂಬುವುದಲ್ಲ ಎಂದು ಅವನು ಹೇಳುತ್ತಾನೆ].

 

ತೇಷ್ವಾಗಮೇಷ್ವೇವ ಪರಸ್ಪರಂ ಚ ವಿರುದ್ಧತಾ ಹ್ಯನ್ಯಪಕ್ಷೇಷು ಭೂಪಾಃ ।

ಪ್ರತ್ಯಕ್ಷತಶ್ಚಾತ್ರ ಪಶ್ಯಧ್ವಮಾಶು ಬಲಂ ಬಾಹ್ವೋರ್ಮ್ಮೇ ವಿಷ್ಣುಪದಾಶ್ರಯಸ್ಯ ॥೨೦.೧೯॥

 

ಆ ಆಗಮಗಳಲ್ಲೇ ಪರಸ್ಪರ ವಿರೋಧವಿದೆ, ತಿಕ್ಕಾಟವಿದೆ. ಅದರಿಂದಾಗಿ ವಿರೋಧವೆನ್ನುವುದು ಇದ್ದೇ ಇದೆ. ಅಷ್ಟೇ ಏಕೆ, ಈ ವಿಚಾರದಲ್ಲಿ ಪ್ರತ್ಯಕ್ಷವಾಗಿ, ವಿಷ್ಣುವಿನ ಭೃತ್ಯನಾಗಿರುವ ನನ್ನ ಬಾಹುಬಲವನ್ನು ನೋಡಿ’ (ಎನ್ನುತ್ತಾ ಆ ಕುರಿತು ಮಾತನಾಡುತ್ತಾನೆ ಭೀಮಸೇನ:)

[ಪಾದ್ಮಪುರಾಣದಲ್ಲಿ ಹೇಳುವಂತೆ:  ಧಿಣೇನ ತಥಾ ಪ್ರೋಕ್ತಂ ಚಾರ್ವಾಕಮತಿಗರ್ಹಿತಮ್  । ದೈತ್ಯಾನಾಂ ನಾಶನಾರ್ಥಾಯ ವಿಷ್ಣುನಾ ಬುದ್ಧರೂಪಿಣಾ । ಬೌದ್ಧಶಾಸ್ತ್ರಮಸತ್  ಪ್ರೋಕ್ತಂ ನಗ್ನನೀಲಪಟಾದಿಕಮ್’ (ಉತ್ತರಖಂಡ ೨೩೫.೫-೬). ಇವೆಲ್ಲಾ ಪರಸ್ಪರ ಆಯಾ ಆಗಮದಲ್ಲಿ ವಿರೋಧವನ್ನು ಹೇಳುತ್ತಿದೆ. ಅದರಿಂದ ನಾರಾಯಣನೇ ಪ್ರತಿಪಾದಿತನಾಗಿರುವ ವೈದಿಕಮತವೇ ಶ್ರೇಷ್ಠ ಎನ್ನುವುದು ನಿರ್ಣಯ ಎಂದು ಭೀಮಸೇನ ಹೇಳುತ್ತಾನೆ]

Wednesday, November 25, 2020

Mahabharata Tatparya Nirnaya Kannada 2011_2015

 

ಅಥೋಪಯೇಮೇ ಶಿಶುಪಾಲಪುತ್ರೀಂ ಯುಧಿಷ್ಠಿರೋ ದೇವಕೀಂ ನಾಮ ಪೂರ್ವಮ್ ।

ಸ್ವೀಯಾಂ ಭಾರ್ಯ್ಯಾಂ ಯತ್ಸಹಜೋ ಧೃಷ್ಟಕೇತುರನುಹ್ಲಾದಃ ಸವಿತುಶ್ಚಾಂಶಯುಕ್ತಃ ॥೨೦.೧೧॥

 

ತದನಂತರ ಯುಧಿಷ್ಠಿರನು ಹಿಂದೆ ತನ್ನವಳೇ ಆಗಿರುವ(ಶ್ಯಾಮಲಾದೇವಿ), ಈಗ ಶಿಶುಪಾಲನ ಮಗಳಾಗಿ ಅವತರಿಸಿರುವ,   ದೇವಕೀ ಎನ್ನುವ ಹೆಸರಿನವಳನ್ನು ಮದುವೆಯಾದ. ಈ ದೇವಕಿಯ ಅಣ್ಣನೇ ಧೃಷ್ಟಕೇತು. ಇವನು ಪೂರ್ವಜನ್ಮದಲ್ಲಿ ಪ್ರಹ್ಲಾದನ ತಮ್ಮನಾದ ನುಹ್ಲಾದಃ. ಇವನಲ್ಲಿ ‘ಸವಿತು’ ಎನ್ನುವ ಆದಿತ್ಯನ ಅಂಶವಿತ್ತು.

[ಗೀತೆಯಲ್ಲಿ ‘ಧೃಷ್ಟಕೇತುಶ್ಚೇಕಿತಾನಃ ಎಂದು ಉಲ್ಲೇಖಿಸಲ್ಪಟ್ಟ, ಪಾಂಡವರ ಪರ ನಿಂತಿದ್ದಾನೆ ಎಂದು ಹೇಳಿರುವ ವ್ಯಕ್ತಿ ಈ ಶಿಶುಪಾಲ ಪುತ್ರನಾದ ಧೃಷ್ಟಕೇತು. 

ಪ್ರಹ್ಲಾದನಿಗೆ ಸಹ್ಲಾದ, ಅನುಹ್ಲಾದ ಮತ್ತು ಹಲಾದ ಎನ್ನುವ ಮೂರು ಮಂದಿ ತಮ್ಮಂದಿರರಿದ್ದರು. ಸಹ್ಲಾದ -ಶಲ್ಯ , ಪ್ರಹ್ಲಾದ-ಬಾಹ್ಲೀಕ, ಅನುಹ್ಲಾದ - ಧೃಷ್ಟಕೇತು. ಹಲಾದನ ಕುರಿತಾದ ವಿವರ ಲಭ್ಯವಿಲ್ಲ.  

ಈಗಿನ ಮಹಾಭಾರತದಲ್ಲಿ ಈ ರೀತಿ ಪಾಠವಿದೆ: ‘ಶೈಭ್ಯಸ್ಯ ಕನ್ಯಾಂ ದೇವಕೀಂ ನಾಮೋಪಯೇಮೇ ಯುಧಿಷ್ಠಿರಃ ।  ತಸ್ಯಾಂ ಪುತ್ರಂ ಜನಯಾಮಾಸ ಯೌಧೇಯಂ ನಾಮ’  (ಆದಿಪರ್ವ ೬೩.೭೫), ಇದು ಲಿಪಿಕಾರರ ಪ್ರಮಾದವಿರಬಹುದು. ಆಚಾರ್ಯರ ಪ್ರಕಾರ ಪಾಠ ಹೀಗಿರಬೇಕು: ಚೈದ್ಯಸ್ಯ ಕನ್ಯಾಂ ದೇವಕೀಂ ನಾಮೋಪಯೇಮೇ ಯುಧಿಷ್ಠಿರಃ ।   ತಸ್ಯಾಂ ಪುತ್ರಂ ಜನಯಾಮಾಸ ಸುಹೋತ್ರಂ ನಾಮ’ ಎಂದು. ಭಾಗವತದಲ್ಲಿ ‘ ಯುಧಿಷ್ಠಿರಾತ್ತು ಪೌರವ್ಯಾಂ ದೇವಕಃ- (೯.೧೯.೩೦) ಎಂದಿದೆ.  ‘ಪೌರವೀ’ ಎನ್ನುವುದು ಪ್ರಾಯಃ ದೇವಕಿಯ ಇನ್ನೊಂದು ಹೆಸರಿರಬೇಕು, ದೇವಕಃ ಎನ್ನುವುದು ಇವರ ಮಗನಾದ ಸುಹೋತ್ರನ ಇನ್ನೊಂದು ಹೆಸರಿರಬೇಕು ಎಂದು ನಾವು ನಿರ್ಣಾಯಕ ಗ್ರಂಥದ ಪ್ರಾಬಲ್ಯದ ಪ್ರಮಾಣದಿಂದ ಜೋಡಿಸಿ  ಚಿಂತನೆ ಮಾಡಬೇಕಾಗುತ್ತದೆ].  


ತಸ್ಯಾಂ ಸುಹೋತ್ರೋ ನಾಮತಃ ಪುತ್ರ ಆಸೀದ್  ಯಶ್ಚಿತ್ರಗುಪ್ತೋ ನಾಮ ಪೂರ್ವಂ ಸುಲೇಖಃ ।

ಕೃಷ್ಣಾ ಸೈವಾಪ್ಯನ್ಯರೂಪೇಣ ಜಾತಾ ಕಾಶೀಶಪುತ್ರೀ ಯಾಂ ಪ್ರವದನ್ತಿ ಕಾಳೀಮ್ ॥೨೦.೧೨॥

 

ಅವಳಲ್ಲಿ (ದೇವಕಿಯಲ್ಲಿ) ಹೆಸರಿನಿಂದ ಸುಹೋತ್ರ ಎನ್ನುವ ಮಗ ಹುಟ್ಟಿದನು. (ಸುಹೋತ್ರ ಎನ್ನುವ ಹೆಸರಿನ ಮಗ ಹುಟ್ಟಿದನು). ಯಾರು ಮೊದಲು ‘ಚಿತ್ರಗುಪ್ತ’ ಎನ್ನುವ ಒಳ್ಳೆಯ ಬರಹಗಾರನೋ ಅವನೇ ಈ ಸುಹೋತ್ರ.

ದ್ರೌಪದಿಯೇ ಇನ್ನೊಂದು ರೂಪದಿಂದ  ಕಾಶಿರಾಜನ ಮಗಳಾಗಿ ಹುಟ್ಟಿದಳು. ಯಾರನ್ನು ಕಾಳೀ ಎಂದು ಹೇಳುತ್ತಾರೆ ಅವಳು.

 

ಸಾ ಕೇವಲಾ ಭಾರತೀ ನಾನ್ಯದೇವ್ಯಸ್ತತ್ರಾsವಿಷ್ಟಾಸ್ತತ್ಕೃತೇ ಕಾಶಿರಾಜಃ ।

ಸ್ವಯಮ್ಬರಾರ್ತ್ಥಂ ನೃಪತೀನಾಜುಹಾವ ಸರ್ವಾಂಸ್ತೇSಪಿ ಹ್ಯತ್ರ ಹರ್ಷಾತ್ ಸಮೇತಾಃ ॥೨೦.೧೩॥

 

ಅವಳು ಕೇವಲ ಭಾರತೀದೇವಿ ಮಾತ್ರ ಆಗಿದ್ದಳು. ಬೇರೆ ದೇವಿಯರು ಅವಳಲ್ಲಿ ಆವಿಷ್ಠರಾಗಿರಲಿಲ್ಲ. ಕಾಶಿರಾಜನು ಅವಳ ಸ್ವಯಮ್ಬರಕ್ಕಾಗಿ ಎಲ್ಲಾ ರಾಜರುಗಳನ್ನು ಆಮಂತ್ರಿಸಿದ. ಅವರೆಲ್ಲರೂ ಇವಳ ವಿಚಾರದಲ್ಲಿ ಹರ್ಷದಿಂದ ಬಂದು ಸೇರಿದರು.

 

ತೇಷಾಂ ಮದ್ಧ್ಯೇ ಭೀಮಸೇನಾಂಸ ಏಷಾ ಮಾಲಾಮಾಧಾತ್ ತತ್ರ ಜರಾಸುತಾದ್ಯಾಃ ।

ಕೃದ್ಧಾ ವಿಷ್ಣೋರಾಶ್ರಿತಾನಾಕ್ಷಿಪನ್ತ ಆಸೇದುರುಚ್ಚೈಃ ಶಿವಮಾಸ್ತುವನ್ತಃ ॥೨೦.೧೪॥

 

ಆ ಎಲ್ಲಾ ರಾಜರ ಮಧ್ಯದಲ್ಲಿ ಕಾಳಿಯು ಭೀಮಸೇನನ ಕೊರಳಿಗೆ ಮಾಲೆಯನ್ನು ಹಾಕಿದಳು. ಆಗ ಅಲ್ಲಿದ್ದ ಜರಾಸಂಧ ಮೊದಲಾದವರು ಕೋಪಗೊಂಡವರಾಗಿ, ವಿಷ್ಣು ಭಕ್ತರನ್ನು ನಿಂದಿಸುತ್ತಾ, ಗಟ್ಟಿಯಾಗಿ ಶಿವನನ್ನು ಸ್ತೋತ್ರಮಾಡುತ್ತಾ, ಮೇಲೇರಿ ಬಂದರು.  

 

ಪೂರ್ವಂ ವಾಕ್ಯೈರ್ವೈದಿಕೈಸ್ತಾನ್ತ್ಸ ಭೀಮೋ ಜಿಗ್ಯೇ ತರ್ಕ್ಕೈಃ ಸಾಧುಭಿಃ ಸಮ್ಪ್ರಯುಕ್ತೈಃ ।

ವೇದಾ ಹ್ಯದೋಷಾ ಇತಿ ಪೂರ್ವಮೇವ ಸಂಸಾಧಯಿತ್ವೈವ ಸದಾಗಮೈಶ್ಚ ॥೨೦.೧೫॥

 

ಭೀಮಸೇನನು ವೇದಗಳು ಎಲ್ಲಾ ದೋಷಗಳಿಂದ ಮುಕ್ತವಾಗಿವೆ ಎಂದು ಚನ್ನಾಗಿ ಸಾಧಿಸಿಯೇ, ಸದಾಗಮಗಳಿಂದಲೂ, ನಿರ್ದುಷ್ಟವಾಗಿರುವ ತರ್ಕಗಳಿಂದಲೂ, ವೈದಿಕ ವಾಕ್ಯಗಳಿಂದಲೂ ಕೂಡಾ ಅವರೆಲ್ಲರನ್ನು ವಾದದಲ್ಲೇ ಗೆದ್ದ.

Tuesday, November 24, 2020

Mahabharata Tatparya Nirnaya Kannada 2005_2010

 

ಆಜೀವಿನಾಂ ವೇತನದಸ್ತದಾssಸೀನ್ಮಾದ್ರೀಸುತಃ ಪ್ರಥಮೋsಥ ದ್ವಿತೀಯಃ ।

ಸನ್ಧಾನಭೇದಾದಿಷು ಧರ್ಮರಾಜಪಶ್ಚಾಚ್ಚ ಖಡ್ಗೀ ಸ ಬಭೂವ ರಕ್ಷನ್ ॥೨೦.೦೫॥

 

ಮಾದ್ರಿಯ ಮೊದಲ ಮಗ(ನಕುಲ) ಕೆಲಸ ಮಾಡುವವರಿಗೆ ಸಂಬಳ, ಭತ್ಯೆ ಇತ್ಯಾದಿಗಳನ್ನು ಕೊಡುವ ಉಸ್ತುವಾರಿ ಹೊಂದಿದ್ದನು. ಎರಡನೆಯ ಮಗನಾದ ಸಹದೇವ ಸನ್ಧಾನಭೇದದಲ್ಲಿ ಧರ್ಮರಾಜನ ಹಿಂದೆ ಬಿಚ್ಚುಗತ್ತಿ ಹಿಡಿದು ಅವನನ್ನು ಕಾಯುವವನಾಗಿದ್ದನು.

 

[ಇಲ್ಲಿ ‘ಸನ್ಧಾನಭೇದಾ’ ಎಂದು ಹೇಳಿದ್ದಾರೆ. ಇದು ಅಂದಿನ ರಾಜನೀತಿ ಹೇಗಿತ್ತು ಎನ್ನುವುದನ್ನು ತಿಳಿಸುತ್ತದೆ. ‘ಸಂಧೀ, ವಿಗ್ರಹ, ಆಸನ, ಯಾನ, ಸಂಶ್ರಯ, ದ್ವೈಧೀಭಾವಃ ಇವುಗಳನ್ನು ಷಾಡ್ಗುಣ್ಯ ಎಂದು ಕರೆಯುತ್ತಾರೆ. ‘ಪಣಬನ್ಧಃ ಸನ್ಧಿಃ । (ಒಂದು ರಾಷ್ಟ್ರದೊಡನೆ ದುಡ್ಡು ವಿನಿಮಯದಮೂಲಕ ಅಥವಾ ಅಪರಾಧಿಗಳ ವಿನಿಮಯ ಇತ್ಯಾದಿಗಳ ಮೂಲಕ ರಾಜಿ  ಮಾಡಿಕೊಳ್ಳುವುದನ್ನು ಸಂಧಿ ಎಂದು ಕರೆಯುತ್ತಾರೆ. ಅಪಕಾರೋ ವಿಗ್ರಹಃ  ಅಪಕಾರ, ದ್ರೋಹ, ಯುದ್ಧ ಇತ್ಯಾದಿಗಳನ್ನು ‘ವಿಗ್ರಹ’ ಎನ್ನುತ್ತಾರೆ,  ಉಪೇಕ್ಷಣಮಾಸನಮ್ । ಒಂದು ರಾಷ್ಟ್ರದ ಬಗ್ಗೆ ತಟಸ್ಥರಾಗಿರುವುದು ‘ಆಸನ,  ಅಭ್ಯುಚ್ಚಯೋ ಯಾನಮ್ । ಯಾವಾಗ ಹೊರಡಬೇಕು ಎನ್ನುವ ತಿಳುವಳಿಕೆ ‘ಯಾನ,  ಪರಾರ್ಪಣಂ ಸಂಶ್ರಯಃ    ಯಾವಾಗ ಇನ್ನೊಬ್ಬರೊಂದಿಗೆ ಬೆರೆಯಬೇಕು, ಇನ್ನೊಬ್ಬರನ್ನು ಯಾವಾಗ ಆಶ್ರಯಿಸಬೇಕು ಎನ್ನುವುದು ‘ಸಂಶ್ರಯ’,  ಸನ್ಧಿವಿಗ್ರಹೋಪಾದಾನಂ  ದ್ವೈಧೀಭಾವಃ  ಇಬ್ಬರ ನಡುವೆ ತಂದಿಡುವುದು , ಇಬ್ಬರನ್ನು ಬೇರೆ ಮಾಡುವುದು ಇದು ‘ದ್ವೈಧೀಭಾವ’. ಇವಿಷ್ಟನ್ನು ಷಾಡ್ಗುಣ್ಯ ಎಂದು ಕರೆಯುತ್ತಾರೆ. ಇವು ರಾಜನೀತಿಯಲ್ಲಿ ಬರುವಂತಹ ಅಂಶಗಳಾಗಿದ್ದು, ಇದರಲ್ಲಿ ಅನೇಕ ಪಕ್ಷಗಳಿವೆ. ಭೀಷ್ಮಾಚಾರ್ಯರು, ವಿದುರ, ಚಾಣಾಕ್ಯ, ಇತ್ಯಾದಿಯಾಗಿ ಅನೇಕರು ಇದನ್ನು ಅನೇಕ ರೀತಿಯಲ್ಲಿ ವರ್ಣಿಸಿರುವುದನ್ನು ನಾವು ಕಾಣಬಹುದು].  

 

ಧೃಷ್ಟದ್ಯುಮ್ನಸ್ತತ್ರ ಸೇನಾಪ್ರಣೇತಾ ಶಕ್ರಪ್ರಸ್ಥೇ ನಿತ್ಯಮಾಸ್ತೇsತಿಹಾರ್ದ್ದಾತ್ ।

ವಿಶೇಷತೋ ಭೀಮಸಖಾ ಸ ಆಸೀದ್ ರಾಷ್ಟ್ರಂ ಚೈಷಾಂ ಸರ್ವಕಾಮೈಃ ಸುಪೂರ್ಣ್ಣಮ್ ॥೨೦.೦೬॥

 

ಅಲ್ಲಿ ಧೃಷ್ಟದ್ಯುಮ್ನನು ಪಾಂಡವರೊಂದಿಗೆ ಅತ್ಯಂತ ಸ್ನೇಹವಿದ್ದುದರಿಂದ, ಸೇನಾನಾಯಕನಾಗಿ ಇಂದ್ರಪ್ರಸ್ಥದಲ್ಲೇ ಇದ್ದ. ವಿಶೇಷತಃ ಅವನು ಭೀಮನ ಗೆಳೆಯನಾಗಿದ್ದ. ಒಟ್ಟಾರೆ ಇವರೆಲ್ಲರಿಂದ ಕೂಡಿರುವ ರಾಷ್ಟ್ರವು ಎಲ್ಲಾ ಕಾಮನೆಗಳಿಂದ ಪೂರ್ಣವಾಗಿತ್ತು.

 

ನಾವೈಷ್ಣವೋ ನ ದರಿದ್ರೋ ಬಭೂವ ನ ಧರ್ಮ್ಮಾಹಾನಿಶ್ಚ ಬಭೂವ ಕಸ್ಯಚಿತ್ ।

ತೇಷಾಂ ರಾಷ್ಟ್ರೇ ಶಾಸತಿ ಭೀಮಸೇನೇ ನ ವ್ಯಾಧಿತೋ ನಾಪಿ ವಿಪರ್ಯ್ಯಯಾನ್ಮೃತಿಃ ॥೨೦.೦೭॥

 

ಆ ದೇಶದಲ್ಲಿ ಒಬ್ಬ ಅವೈಷ್ಣವನಿರಲಿಲ್ಲ. ಅಲ್ಲಿ ದರಿದ್ರವಿರಲಿಲ್ಲ. ಯಾರಿಗೂ ಕೂಡಾ ಧರ್ಮಹಾನಿ ಆಗಿರಲಿಲ್ಲ. ಭೀಮಸೇನನು ರಾಷ್ಟ್ರಪಾಲನೆ ಮಾಡುತ್ತಿರಲು ಯಾರೂ ಕೂಡಾ ರೋಗದಿಂದ ಸಾಯುವುದಾಗಲೀ, ವಿಪರ್ಯಯದ ಸಾವಾಗಲೀ (ಚಿಕ್ಕವರು ಮೊದಲು ಸಾಯುವುದು) ಅಲ್ಲಿ ನಡೆಯುತ್ತಿರಲಿಲ್ಲ.

 

ಯುಧಿಷ್ಠಿರಂ ಯಾನ್ತಿ ಹಿ ದರ್ಶನೋತ್ಸುಕಾಃ ಪ್ರತಿಗ್ರಹಾಯಾಪ್ಯಥ ಯಾಜನಾಯ ।

ಕಾರ್ಯ್ಯಾರ್ತ್ಥತೋ ನೈವ ವೃಕೋದರೇಣ ಕಾರ್ಯ್ಯಾಣಿ ಸಿದ್ಧಾನಿ ಯತೋsಖಿಲಾನಿ ॥೨೦.೦೮॥

 

ಜನರು ರಾಜನನ್ನು ಕಾಣಬೇಕೆಂಬ ಬಯಕೆಯುಳ್ಳವರಾಗಿ, ದಾನ ತೆಗೆದುಕೊಳ್ಳಲು ಮತ್ತು ಯಾಗಮಾಡಲೆಂದಷ್ಟೇ ಯುಧಿಷ್ಠಿರನಲ್ಲಿಗೆ ಬರುತ್ತಿದ್ದರೇ ವಿನಃ, ಯಾವುದೋ ಕೆಲಸವಾಗಬೇಕೆಂದು ಯಾರೂ ಬರುತ್ತಿರಲಿಲ್ಲ. ಏಕೆಂದರೆ ಭೀಮಸೇನನಿಂದ ಪ್ರಜೆಗಳ ಎಲ್ಲಾ ಕಾರ್ಯಗಳೂ ಸಿದ್ಧವಾಗುತ್ತಿದ್ದವು.

 

ಗನ್ಧರ್ವವಿದ್ಯಾಧರಚಾರಣಾಶ್ಚ ಸೇವನ್ತ ಏತಾನ್ತ್ಸತತಂ ಸಮಸ್ತಾಃ ।

ಯಥಾ ಸುರೇನ್ದ್ರಮ್ ಮುನಯಶ್ಚ ಸರ್ವ ಆಯಾನ್ತಿ ದೇವಾ ಅಪಿ ಕೃಷ್ಣಮರ್ಚ್ಚಿತುಮ್ ॥೧೦.೦೯॥

 

ಗನ್ಧರ್ವರು,  ವಿದ್ಯಾಧರರು, ಚಾರಣರು, ಮೊದಲಾದವರು ಇಂದ್ರನ ಬಳಿ ಹೇಗೆ ಹೋಗುತ್ತಿದ್ದರೋ ಹಾಗೇ ಪಾಂಡವರನ್ನು ಬಂದು ಸೇವಿಸುತ್ತಿದ್ದರು. ಮುನಿಗಳು, ದೇವತೆಗಳೂ ಕೂಡಾ ಕೃಷ್ಣನನ್ನು ಪೂಜಿಸಲೆಂದು ಅಲ್ಲಿಗೆ ಬರುತ್ತಿದ್ದರು.

[ಈ ಮೇಲಿನ ಮಾತಿಗೆ ಪ್ರಮಾಣವನ್ನು ನಾವು ಮಹಾಭಾರತದಲ್ಲೇ ಕಾಣಬಹುದು. ‘ಮುನಯೋ ಧರ್ಮ- ವಿದ್ವಾಂಸೋ ಧೃತಾತ್ಮಾನೋ ಜಿತೇಂದ್ರಿಯಾಃ । ಉಪಾಸತೇ ಮಹಾತ್ಮಾನಂ  ಸಭಾಯಾಮೃಷಿಸತ್ತಮಾಃ । (ಸಭಾಪರ್ವ ೪.೨೫) ‘ಚಿತ್ರಸೇನಃ ಸಹಾಮಾತ್ಯೋ ಗನ್ಧರ್ವಾಪ್ಸರಸಸ್ತಥಾ’ (೪೩),  ಪಾಣ್ಡುಪುತ್ರಾನೃಷೀಂಶ್ಚೈವ ರಮಯನ್ತ ಉಪಾಸತೇ । ತಸ್ಯಾಂ ಸಭಾಯಾಮಾಸೀನಾಃ  ಸುವ್ರತಾಃ  ಸತ್ಯಸಙ್ಗರಾಃ  । ದಿವೀವ ದೇವಾ ಬ್ರಹ್ಮಾಣಂ  ಯುಧಿಷ್ಠಿರಮುಪಾಸತೇ(೪೬-೪೭) 

 

ತೇಷಾಂ ರಾಷ್ಟ್ರೇ ಕಾರ್ತ್ತಯುಗಾ ಹಿ ಧರ್ಮ್ಮಾಃ ಪ್ರವರ್ತ್ತಿತಾ ಏವ ತತೋsಧಿಕಾಶ್ಚ ।

ಋದ್ಧಿಶ್ಚ ತಸ್ಮಾದಧಿಕಾ ಸುವರ್ಣ್ಣರತ್ನಾಮ್ಬರಾದೇರಪಿ ಸಸ್ಯಸಮ್ಪದಾಮ್ ॥೨೦.೧೦॥

 

ಪಾಂಡವರ ರಾಷ್ಟ್ರದಲ್ಲಿ ಕೃತಯುಗದಲ್ಲಿ ನಡೆಯುವಂತಹ ಧರ್ಮಗಳು ನಡೆದವು. ಅದರಿಂದಾಗಿ ಅದು  ಕೃತಯುಗದ ಧರ್ಮಕ್ಕಿಂತ ಮಿಗಿಲಾಯಿತು. (ಕಲಿಯುಗ ಹತ್ತಿರ ಬರುತ್ತಿರುವ ಸಂದರ್ಭದಲ್ಲಿ ಹೆಚ್ಚು ಅಧರ್ಮ ಇರಬೇಕಿತ್ತು. ಆದರೆ ಅಲ್ಲಿ ಕೃತಯುಗದಲ್ಲಿ ನಡೆಯುವ ಧರ್ಮಕಾರ್ಯ ನಡೆಯಿತು. ಹೀಗಾಗಿ ಕೃತಯುಗಕ್ಕಿಂತ ಹೆಚ್ಚಿನ ಧರ್ಮ ನಡೆಯಿತು ಎಂದು ಹೇಳಬೇಕು). ಆ ಕಾರಣದಿಂದಲೇ ಬಂಗಾರ, ರತ್ನ, ಪೀತಾಂಬರ ಮೊದಲಾದವುಗಳು, ಸಸ್ಯ ಸಂಪತ್ತುಗಳ ಸಮೃದ್ಧಿಯೂ ಕೂಡಾ ಹೆಚ್ಚಾಗಿಯೇ ಇತ್ತು.