ಅಥೋಪಯೇಮೇ
ಶಿಶುಪಾಲಪುತ್ರೀಂ ಯುಧಿಷ್ಠಿರೋ ದೇವಕೀಂ ನಾಮ ಪೂರ್ವಮ್ ।
ಸ್ವೀಯಾಂ ಭಾರ್ಯ್ಯಾಂ
ಯತ್ಸಹಜೋ ಧೃಷ್ಟಕೇತುರನುಹ್ಲಾದಃ ಸವಿತುಶ್ಚಾಂಶಯುಕ್ತಃ ॥೨೦.೧೧॥
ತದನಂತರ ಯುಧಿಷ್ಠಿರನು ಹಿಂದೆ ತನ್ನವಳೇ ಆಗಿರುವ(ಶ್ಯಾಮಲಾದೇವಿ),
ಈಗ ಶಿಶುಪಾಲನ ಮಗಳಾಗಿ ಅವತರಿಸಿರುವ, ದೇವಕೀ ಎನ್ನುವ ಹೆಸರಿನವಳನ್ನು ಮದುವೆಯಾದ. ಈ ದೇವಕಿಯ ಅಣ್ಣನೇ
ಧೃಷ್ಟಕೇತು. ಇವನು ಪೂರ್ವಜನ್ಮದಲ್ಲಿ ಪ್ರಹ್ಲಾದನ ತಮ್ಮನಾದ ಅನುಹ್ಲಾದಃ. ಇವನಲ್ಲಿ ‘ಸವಿತು’ ಎನ್ನುವ ಆದಿತ್ಯನ ಅಂಶವಿತ್ತು.
[ಗೀತೆಯಲ್ಲಿ ‘ಧೃಷ್ಟಕೇತುಶ್ಚೇಕಿತಾನಃ’ ಎಂದು ಉಲ್ಲೇಖಿಸಲ್ಪಟ್ಟ, ಪಾಂಡವರ ಪರ ನಿಂತಿದ್ದಾನೆ
ಎಂದು ಹೇಳಿರುವ ವ್ಯಕ್ತಿ ಈ ಶಿಶುಪಾಲ ಪುತ್ರನಾದ ಧೃಷ್ಟಕೇತು.
ಪ್ರಹ್ಲಾದನಿಗೆ ಸಹ್ಲಾದ, ಅನುಹ್ಲಾದ ಮತ್ತು ಹಲಾದ ಎನ್ನುವ ಮೂರು ಮಂದಿ ತಮ್ಮಂದಿರರಿದ್ದರು. ಸಹ್ಲಾದ
-ಶಲ್ಯ , ಪ್ರಹ್ಲಾದ-ಬಾಹ್ಲೀಕ, ಅನುಹ್ಲಾದ - ಧೃಷ್ಟಕೇತು. ಹಲಾದನ ಕುರಿತಾದ ವಿವರ ಲಭ್ಯವಿಲ್ಲ.
ಈಗಿನ ಮಹಾಭಾರತದಲ್ಲಿ ಈ ರೀತಿ ಪಾಠವಿದೆ: ‘ಶೈಭ್ಯಸ್ಯ ಕನ್ಯಾಂ ದೇವಕೀಂ ನಾಮೋಪಯೇಮೇ
ಯುಧಿಷ್ಠಿರಃ । ತಸ್ಯಾಂ ಪುತ್ರಂ ಜನಯಾಮಾಸ
ಯೌಧೇಯಂ ನಾಮ’ (ಆದಿಪರ್ವ ೬೩.೭೫), ಇದು
ಲಿಪಿಕಾರರ ಪ್ರಮಾದವಿರಬಹುದು. ಆಚಾರ್ಯರ ಪ್ರಕಾರ ಪಾಠ ಹೀಗಿರಬೇಕು: ಚೈದ್ಯಸ್ಯ ಕನ್ಯಾಂ
ದೇವಕೀಂ ನಾಮೋಪಯೇಮೇ ಯುಧಿಷ್ಠಿರಃ । ತಸ್ಯಾಂ ಪುತ್ರಂ ಜನಯಾಮಾಸ ಸುಹೋತ್ರಂ ನಾಮ’ ಎಂದು.
ಭಾಗವತದಲ್ಲಿ ‘ ಯುಧಿಷ್ಠಿರಾತ್ತು ಪೌರವ್ಯಾಂ ದೇವಕಃ- (೯.೧೯.೩೦) ಎಂದಿದೆ. ‘ಪೌರವೀ’ ಎನ್ನುವುದು ಪ್ರಾಯಃ ದೇವಕಿಯ ಇನ್ನೊಂದು ಹೆಸರಿರಬೇಕು,
ದೇವಕಃ ಎನ್ನುವುದು ಇವರ ಮಗನಾದ ಸುಹೋತ್ರನ ಇನ್ನೊಂದು ಹೆಸರಿರಬೇಕು ಎಂದು ನಾವು ನಿರ್ಣಾಯಕ
ಗ್ರಂಥದ ಪ್ರಾಬಲ್ಯದ ಪ್ರಮಾಣದಿಂದ ಜೋಡಿಸಿ ಚಿಂತನೆ
ಮಾಡಬೇಕಾಗುತ್ತದೆ].
ತಸ್ಯಾಂ ಸುಹೋತ್ರೋ
ನಾಮತಃ ಪುತ್ರ ಆಸೀದ್ ಯಶ್ಚಿತ್ರಗುಪ್ತೋ ನಾಮ
ಪೂರ್ವಂ ಸುಲೇಖಃ ।
ಕೃಷ್ಣಾ ಸೈವಾಪ್ಯನ್ಯರೂಪೇಣ
ಜಾತಾ ಕಾಶೀಶಪುತ್ರೀ ಯಾಂ ಪ್ರವದನ್ತಿ ಕಾಳೀಮ್ ॥೨೦.೧೨॥
ಅವಳಲ್ಲಿ (ದೇವಕಿಯಲ್ಲಿ) ಹೆಸರಿನಿಂದ ಸುಹೋತ್ರ ಎನ್ನುವ ಮಗ ಹುಟ್ಟಿದನು. (ಸುಹೋತ್ರ ಎನ್ನುವ
ಹೆಸರಿನ ಮಗ ಹುಟ್ಟಿದನು). ಯಾರು ಮೊದಲು ‘ಚಿತ್ರಗುಪ್ತ’ ಎನ್ನುವ ಒಳ್ಳೆಯ ಬರಹಗಾರನೋ ಅವನೇ ಈ ಸುಹೋತ್ರ.
ದ್ರೌಪದಿಯೇ ಇನ್ನೊಂದು ರೂಪದಿಂದ ಕಾಶಿರಾಜನ
ಮಗಳಾಗಿ ಹುಟ್ಟಿದಳು. ಯಾರನ್ನು ಕಾಳೀ ಎಂದು ಹೇಳುತ್ತಾರೆ ಅವಳು.
ಸಾ ಕೇವಲಾ ಭಾರತೀ
ನಾನ್ಯದೇವ್ಯಸ್ತತ್ರಾsವಿಷ್ಟಾಸ್ತತ್ಕೃತೇ ಕಾಶಿರಾಜಃ ।
ಸ್ವಯಮ್ಬರಾರ್ತ್ಥಂ
ನೃಪತೀನಾಜುಹಾವ ಸರ್ವಾಂಸ್ತೇSಪಿ ಹ್ಯತ್ರ ಹರ್ಷಾತ್ ಸಮೇತಾಃ ॥೨೦.೧೩॥
ಅವಳು ಕೇವಲ ಭಾರತೀದೇವಿ ಮಾತ್ರ ಆಗಿದ್ದಳು. ಬೇರೆ ದೇವಿಯರು
ಅವಳಲ್ಲಿ ಆವಿಷ್ಠರಾಗಿರಲಿಲ್ಲ. ಕಾಶಿರಾಜನು ಅವಳ ಸ್ವಯಮ್ಬರಕ್ಕಾಗಿ ಎಲ್ಲಾ ರಾಜರುಗಳನ್ನು
ಆಮಂತ್ರಿಸಿದ. ಅವರೆಲ್ಲರೂ ಇವಳ ವಿಚಾರದಲ್ಲಿ ಹರ್ಷದಿಂದ ಬಂದು ಸೇರಿದರು.
ತೇಷಾಂ ಮದ್ಧ್ಯೇ ಭೀಮಸೇನಾಂಸ ಏಷಾ ಮಾಲಾಮಾಧಾತ್ ತತ್ರ ಜರಾಸುತಾದ್ಯಾಃ ।
ಕೃದ್ಧಾ
ವಿಷ್ಣೋರಾಶ್ರಿತಾನಾಕ್ಷಿಪನ್ತ ಆಸೇದುರುಚ್ಚೈಃ ಶಿವಮಾಸ್ತುವನ್ತಃ ॥೨೦.೧೪॥
ಆ ಎಲ್ಲಾ ರಾಜರ ಮಧ್ಯದಲ್ಲಿ ಕಾಳಿಯು ಭೀಮಸೇನನ ಕೊರಳಿಗೆ ಮಾಲೆಯನ್ನು ಹಾಕಿದಳು. ಆಗ ಅಲ್ಲಿದ್ದ
ಜರಾಸಂಧ ಮೊದಲಾದವರು ಕೋಪಗೊಂಡವರಾಗಿ, ವಿಷ್ಣು ಭಕ್ತರನ್ನು ನಿಂದಿಸುತ್ತಾ,
ಗಟ್ಟಿಯಾಗಿ ಶಿವನನ್ನು ಸ್ತೋತ್ರಮಾಡುತ್ತಾ, ಮೇಲೇರಿ ಬಂದರು.
ಪೂರ್ವಂ ವಾಕ್ಯೈರ್ವೈದಿಕೈಸ್ತಾನ್ತ್ಸ ಭೀಮೋ ಜಿಗ್ಯೇ ತರ್ಕ್ಕೈಃ ಸಾಧುಭಿಃ ಸಮ್ಪ್ರಯುಕ್ತೈಃ ।
ವೇದಾ ಹ್ಯದೋಷಾ ಇತಿ
ಪೂರ್ವಮೇವ ಸಂಸಾಧಯಿತ್ವೈವ ಸದಾಗಮೈಶ್ಚ ॥೨೦.೧೫॥
ಭೀಮಸೇನನು ವೇದಗಳು ಎಲ್ಲಾ ದೋಷಗಳಿಂದ ಮುಕ್ತವಾಗಿವೆ ಎಂದು ಚನ್ನಾಗಿ
ಸಾಧಿಸಿಯೇ, ಸದಾಗಮಗಳಿಂದಲೂ, ನಿರ್ದುಷ್ಟವಾಗಿರುವ ತರ್ಕಗಳಿಂದಲೂ, ವೈದಿಕ ವಾಕ್ಯಗಳಿಂದಲೂ ಕೂಡಾ
ಅವರೆಲ್ಲರನ್ನು ವಾದದಲ್ಲೇ ಗೆದ್ದ.
No comments:
Post a Comment