ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Monday, November 30, 2020

Mahabharata Tatparya Nirnaya Kannada 2020_2028

 

ಪೂರ್ವಂ ಹಿ ಗಙ್ಗಾ ಮಮ ವಿಷ್ಣುಪೂಜಾವಿಘ್ನಾರ್ತ್ಥಮಾಯಾದ್ ವಾಮಕರೇಣ ಸಾ ಮೇ ।

ನುನ್ನಾ ಪರಸ್ತಾದ್ ಬಹುಯೋಜನಂ ಗತಾ ಪುರೇ ಕುರೂಣಾಂ ಶಿವ ಆಗತಸ್ತದಾ ॥೨೦.೨೦॥

 

ಹಿಂದೆ ಕೌರವರ ಪಟ್ಟಣವಾದ ಹಸ್ತಿನಾವತಿಯಲ್ಲಿ ಗಂಗೆಯು ನನ್ನ ವಿಷ್ಣುಪೂಜೆಯನ್ನು ಅಡ್ಡಿ ಮಾಡುವುದಕ್ಕಾಗಿ ಬಂದಳು. ಅವಳು ನನ್ನ ಎಡಗೈಯಿಂದ ತಳ್ಳಲ್ಪಟ್ಟವಳಾಗಿ, ಬಹಳ ಯೋಜನಾ ಆಚೆ ಸರಿದಳು. ಆಗ ಸದಾಶಿವನು ಬಂದನು.

 

ಸ ವ್ಯಾಘ್ರರೂಪೀ ಕಪಿಲಾತ್ಮಕಾಮುಮಾಂ ಪರೀಕ್ಷಯನ್ ಮಾಂ ಹನ್ತುಮಿವಾsದ್ರವದ್ ದ್ರುತಮ್ ।

ಸ ಮೇ ಯುದ್ಧೇ ವಿಜಿತೋ ಮೂರ್ಚ್ಛಿತಶ್ಚ ಗದಾಪ್ರಹಾರಾದಾಸ ಲಿಙ್ಗಾನ್ತರಸ್ಥಃ ॥೨0.೨೧॥

 

ನನ್ನನ್ನು ಪರೀಕ್ಷೆ ಮಾಡಲೋಸುಗ ಆ ಸದಾಶಿವನು ಹುಲಿರೂಪವನ್ನು ಧರಿಸಿ, ಗೋವಿನ ವೇಷವನ್ನು ಧರಿಸಿದ ಉಮೆಯನ್ನು ಕೊಲ್ಲಲೋ ಎಂಬಂತೆ ಓಡಿ ಬಂದನು. ಆಗ ಅವನು ನನ್ನ ಗದಾಪ್ರಹಾರದಿಂದ ಯುದ್ಧದಲ್ಲಿ ಸೋತು, ಮೂರ್ಛಿತನಾಗಿ ಇನ್ನೊಂದು ಲಿಂಗದಲ್ಲಿ ಇರತಕ್ಕವನಾದನು.

 

ವ್ಯಾಘ್ರೇಶ್ವರಂ ನಾಮ ಲಿಙ್ಗಂ ಪೃಥಿವ್ಯಾಂ ಖ್ಯಾತಂ ತದಾಸ್ತೇ ತದ್ವದನ್ಯತ್ರ ಯುದ್ಧೇ ।

ತೀರೇ ಗೋಮತ್ಯಾ ಹೈಮವತೇ ಗಿರೌ ಹಿ ಜಿತಸ್ತತ್ರಾಪ್ಯಾಸ ಶಾರ್ದ್ದೂಲಲಿಙ್ಗಮ್ ॥೨೦.೨೨॥

 

ಅದು ಇಂದು ವ್ಯಾಘ್ರೇಶ್ವರ ಎಂಬ ಹೆಸರಿನ ಲಿಂಗವಾಗಿ ಖ್ಯಾತವಾಗಿದೆ. ಅದೇ ರೀತಿ ಹಿಮಾಲಯ ಪರ್ವತದ ಗೋಮತೀ ನದಿ ತೀರದಲ್ಲಿ ನಡೆದ ಇನ್ನೊಂದು ಯುದ್ಧದಲ್ಲಿ ಶಿವ ನನ್ನಿಂದ ಸೋತ. ಅಲ್ಲಿಯೂ ಕೂಡಾ ಶಾರ್ದೂಲಲಿಙ್ಗ ಎನ್ನುವ ಹೆಸರು ಬಂತು.

 

ಏವಂ ಪ್ರತ್ಯಕ್ಷೇ ವಿಷ್ಣುಪದಾಶ್ರಯಸ್ಯ ಬಲಾಧಿಕ್ಯೇ ಕಿಮು ವಕ್ತವ್ಯಮತ್ರ ।

ವಿಷ್ಣೋರಾಧಿಕ್ಯೇ ಕ್ಷತ್ರಿಯಾಣಾಂ ಪ್ರಮಾಣಂ ಬಲಂ ವಿಪ್ರೇ ಜ್ಞಾನಮೇವೇತಿ ಚಾsಹುಃ ॥೨೦.೨೩ ॥

 

ಈರೀತಿಯಾಗಿ ನಾರಾಯಣನನ್ನು ಆಶ್ರಯಿಸಿದವನಾದ ನನ್ನ ಬಲದ ಆಧಿಕ್ಯವು ಸ್ಫುಟವಾಗಿ ತೋರುತ್ತಿರಲು ಈ ವಿಚಾರದಲ್ಲಿ ಇನ್ನೇನು ಹೇಳಬೇಕಾದದ್ದಿದೆ ? ವಿಷ್ಣು ಸರ್ವೋತ್ತಮ ಎನ್ನುವುದರಲ್ಲಿ ಕ್ಷತ್ರಿಯರಿಗೆ ‘ಬಲವು ಪ್ರಮಾಣ’. ವೈಷ್ಣವನಾಗಿರುವ ವಿಪ್ರನಲ್ಲಿ ‘ಜ್ಞಾನವೇ ಪ್ರಮಾಣ’ ಎಂದು ಹೇಳುತ್ತಾರೆ. 

 

 

ಮಯಾ ಕೇದಾರೇ ವಿಪ್ರರೂಪೀ ಜಿತಶ್ಚ  ರುದ್ರೋsವಿಶಲ್ಲಿಙ್ಗಮೇವಾsಶು ಭೀತಃ ।

ತತಃ ಪರಂ ವೇದವಿದಾಮಗಮ್ಯತಾಶಾಪಂ ಪ್ರಾದಾಚ್ಛಙ್ಕರೋ ಬ್ರೀಳಿತೋsತ್ರ ॥೨೦.೨೪ ॥

 

ನನ್ನಿಂದ ಕೇದಾರ ಕ್ಷೇತ್ರದಲ್ಲಿ ಬ್ರಾಹ್ಮಣನ ವೇಷ ಧರಿಸಿದ ಬಂದ ರುದ್ರ(ವಾಗ್ಯುದ್ಧದಲ್ಲಿ) ಸೋತ ಮತ್ತು ಕೂಡಲೇ ನನ್ನಿಂದ ಅಳುಕಿ ಲಿಂಗವನ್ನು ಪ್ರವೇಶಿಸಿದ. ಅದಾದಮೇಲೆ ವೇದವನ್ನು ಬಲ್ಲವರಿಗೆ ‘ಕೇದಾರಕ್ಕೆ ಬರಬಾರದು’ ಎನ್ನುವ ಶಾಪವನ್ನು ನಾಚಿದ ಶಂಕರ ಕೊಟ್ಟ.

 

ಏವಂ ಪ್ರತ್ಯಕ್ಷೇ ವಿಷ್ಣು ಬಲೇ ಪ್ರತೀಪಂ ಮನೋ ಯಸ್ಯ ಹ್ಯುತ್ತರಂ ಸ ಬ್ರವೀತು ।

ಕ್ರೋಧೋsಧಿಕಶ್ಚೇತ್ ಕ್ಷಿಪ್ರಮಾಯಾತು ಯೋದ್ಧುಮಿತ್ಯುಕ್ತಾಸ್ತೇsಭ್ಯಾಯಯುರಾತ್ತಶಸ್ತ್ರಾಃ ॥೨೦.೨೫॥

 

ಈ ರೀತಿಯಾಗಿ ನಾರಾಯಣನ ಬಲವು ಪ್ರತ್ಯಕ್ಷವಾಗಿ ಸಿದ್ಧವಾಗುತ್ತಿರಲು,  ಯಾರ ಮನಸ್ಸು ಇದಕ್ಕೆ ವಿರುದ್ಧವಾಗಿದೆಯೋ ಅವನು ಉತ್ತರವನ್ನು ಹೇಳಲಿ. ಒಂದು ವೇಳೆ ಬಹಳ ಕೋಪಗೊಂಡವರಾದರೆ ಕೂಡಲೇ ನನ್ನೊಂದಿಗೆ ಯುದ್ಧಕ್ಕೆ ಬನ್ನಿರಿ’. ಈ ರೀತಿಯಾಗಿ ಭೀಮಸೇನನಿಂದ ಹೇಳಲ್ಪಟ್ಟ ಜರಾಸಂಧಾದಿಗಳು ಶಸ್ತ್ರವನ್ನು ಹಿಡಿದು ನುಗ್ಗಿ ಬಂದರು.

 

ವಿದ್ರಾಪ್ಯ ತಾನ್ ಬಾಣಸಙ್ಘೈಃ ಸಮಸ್ತಾನ್ ಜರಾಸುತಂ ಗದಯಾ ಯೋಧಯಿತ್ವಾ ।

ಬಾಹುಭ್ಯಾಂ ಚೈನಂ ಪರಿಗೃಹ್ಯಾsಶು ವಿಷ್ಣೋಃ ಪಾದೋತ್ಥಾಯಾಂ ಪ್ರಾಕ್ಷಿಪದ್ ದೇವನದ್ಯಾಮ್ ॥೨೦.೨೬॥

 

ಎಲ್ಲಾ ಅರಸರನ್ನು ಬಾಣಗಳ ಸುರಿಮಳೆಯಿಂದ ಓಡಿಸಿದ ಭೀಮಸೇನ, ಜರಾಸಂಧನೊಂದಿಗೆ  ಗದೆಯಿಂದ ಯುದ್ಧಮಾಡಿ, ತನ್ನೆರಡು ಕೈಗಳಿಂದ ಅವನನ್ನು ಹಿಡಿದುಕೊಂಡು, ನಾರಾಯಣನ ಪಾದದಿಂದ ಹುಟ್ಟಿದ ಗಂಗೆಯಲ್ಲಿ ಅವನನ್ನು ಎಸೆದ.

[ಜರಾಸಂಧ ಗಂಗೆ ವಿಷ್ಣುಪಾದದಿಂದ ಹುಟ್ಟಿರುವ ನದಿಯಾದ್ದರಿಂದ ಗಂಗೆಯಲ್ಲಿ ಸ್ನಾನ ಮಾಡುತ್ತಿರಲಿಲ್ಲ. ಹಾಗಾಗಿ ಅಲ್ಲೇ ಅವನನ್ನು ಮುಳುಗಿಸಿದ]

 

ಸ ಬ್ರೀಳಿತಃ ಪ್ರಯಯೌ ಮಾಗಧಾಂಶ್ಚ ಭೂಪೈಃ ಸಮೇತೋ ಭೀಮಸೇನೋ ರಥಂ ಸ್ವಮ್ ।

ಆರುಹ್ಯ ಕಾಶೀಶ್ವರಪೂಜಿತಶ್ಚ ಯಯೌ ಕಾಳ್ಯಾ ಶಕ್ರಸನಾಮಕಂ ಪುರಮ್ ॥೨೦.೨೭॥

 

ಜರಾಸಂಧನು ಬಹಳ ನಾಚಿಕೊಂಡು ಮಾಗಧದೇಶಕ್ಕೆ ತನ್ನ ಅನುಯಾಯಿ ರಾಜರಿಂದ ಕೂಡಿಕೊಂಡು ಹಿಂತಿರುಗಿದ. ಭೀಮಸೇನನು ಕಾಶೀ ರಾಜನಿಂದ ಪೂಜಿತನಾಗಿ, ತನ್ನ ರಥವನ್ನು ಏರಿ,  ಕಾಳಿಯಿಂದ ಕೂಡಿಕೊಂಡು ಇಂದ್ರಪ್ರಸ್ಥ ಎನ್ನುವ ಹೆಸರಿನ ಪಟ್ಟಣದತ್ತ ತೆರಳಿದ. 

 

ತಸ್ಯಾಂ ತ್ರಿಲೋಕಾಧಿಕರೂಪಸದ್ಗುಣೈರಾ ಸಮ್ಮತಾಯಾಂ ರಮಮಾಣಃ ಸುತಂ ಚ ।

ಶರ್ವತ್ರಾತಂ ನಾಮಾಜನಯತ್ ಪುರಾ ಯಃ ಸಮಾನವಾಯುರ್ಬಲವೀರ್ಯ್ಯಯುಕ್ತಃ ॥೨೦.೨೮॥

 

ಮೂರುಲೋಕಕ್ಕೂ ಮಿಗಿಲೆನಿಸಿರುವ ರೂಪ ಹಾಗೂ ಗುಣಗಳಿಂದ ಅತ್ಯಂತ ಸಮ್ಮತಳಾದ ಕಾಳಿಯೊಂದಿಗೆ ಭೀಮಸೇನ ರಮಿಸುತ್ತಾ,  ಶರ್ವತ್ರಾತ ಎಂಬ ಹೆಸರಿನ ಮಗನನ್ನು ಹುಟ್ಟಿಸಿದ. ಹಿಂದೆ ಯಾರು ಬಲ ಹಾಗೂ ವೀರ್ಯದಿಂದ ಕೂಡಿರುವ ‘ಸಮಾನ’ ವಾಯುವೋ ಅವನನ್ನೇ ಇಲ್ಲಿ ಹುಟ್ಟಿಸಿದ.

[ಕಾಳಿ ಶರ್ವತ್ರಾತ ಎನ್ನುವ ಮಗನನ್ನು ಪಡೆದಳು ಎನ್ನುವುದನ್ನು ಪುರಾಣಗಳಲ್ಲಿ ಹೇಳಿರುವುದನ್ನು ಕಾಣಬಹುದು:  ಕಾಳೀ ಚ ಭೀಮಸೇನಾದೇವ ಶರ್ವತ್ರಾತಂ ಪುತ್ರಮವಾಪ’ ಎಂದು ವಿಷ್ಣುಪುರಾಣ (೪.೨೦.೧೧),   ಕಾಳೀ ಶರ್ವಗತಂ ತತಃ’ ಎಂದು ಭಾಗವತ (೯.೧೯.೩೧),  ]

No comments:

Post a Comment