ಆಜೀವಿನಾಂ ವೇತನದಸ್ತದಾssಸೀನ್ಮಾದ್ರೀಸುತಃ
ಪ್ರಥಮೋsಥ ದ್ವಿತೀಯಃ ।
ಸನ್ಧಾನಭೇದಾದಿಷು
ಧರ್ಮರಾಜಪಶ್ಚಾಚ್ಚ ಖಡ್ಗೀ ಸ ಬಭೂವ ರಕ್ಷನ್ ॥೨೦.೦೫॥
ಮಾದ್ರಿಯ ಮೊದಲ ಮಗ(ನಕುಲ) ಕೆಲಸ ಮಾಡುವವರಿಗೆ ಸಂಬಳ, ಭತ್ಯೆ
ಇತ್ಯಾದಿಗಳನ್ನು ಕೊಡುವ ಉಸ್ತುವಾರಿ ಹೊಂದಿದ್ದನು. ಎರಡನೆಯ ಮಗನಾದ ಸಹದೇವ ಸನ್ಧಾನಭೇದದಲ್ಲಿ ಧರ್ಮರಾಜನ ಹಿಂದೆ ಬಿಚ್ಚುಗತ್ತಿ ಹಿಡಿದು ಅವನನ್ನು ಕಾಯುವವನಾಗಿದ್ದನು.
[ಇಲ್ಲಿ ‘ಸನ್ಧಾನಭೇದಾ’ ಎಂದು ಹೇಳಿದ್ದಾರೆ. ಇದು ಅಂದಿನ ರಾಜನೀತಿ ಹೇಗಿತ್ತು ಎನ್ನುವುದನ್ನು ತಿಳಿಸುತ್ತದೆ. ‘ಸಂಧೀ, ವಿಗ್ರಹ, ಆಸನ, ಯಾನ, ಸಂಶ್ರಯ, ದ್ವೈಧೀಭಾವಃ ಇವುಗಳನ್ನು ಷಾಡ್ಗುಣ್ಯ ಎಂದು ಕರೆಯುತ್ತಾರೆ. ‘ಪಣಬನ್ಧಃ ಸನ್ಧಿಃ । (ಒಂದು ರಾಷ್ಟ್ರದೊಡನೆ ದುಡ್ಡು ವಿನಿಮಯದಮೂಲಕ ಅಥವಾ ಅಪರಾಧಿಗಳ ವಿನಿಮಯ ಇತ್ಯಾದಿಗಳ ಮೂಲಕ ರಾಜಿ ಮಾಡಿಕೊಳ್ಳುವುದನ್ನು ಸಂಧಿ ಎಂದು ಕರೆಯುತ್ತಾರೆ. ಅಪಕಾರೋ ವಿಗ್ರಹಃ । ಅಪಕಾರ, ದ್ರೋಹ, ಯುದ್ಧ ಇತ್ಯಾದಿಗಳನ್ನು ‘ವಿಗ್ರಹ’ ಎನ್ನುತ್ತಾರೆ, ಉಪೇಕ್ಷಣಮಾಸನಮ್ । ಒಂದು ರಾಷ್ಟ್ರದ ಬಗ್ಗೆ ತಟಸ್ಥರಾಗಿರುವುದು ‘ಆಸನ’, ಅಭ್ಯುಚ್ಚಯೋ ಯಾನಮ್ । ಯಾವಾಗ ಹೊರಡಬೇಕು ಎನ್ನುವ ತಿಳುವಳಿಕೆ ‘ಯಾನ’, ಪರಾರ್ಪಣಂ ಸಂಶ್ರಯಃ । ಯಾವಾಗ ಇನ್ನೊಬ್ಬರೊಂದಿಗೆ ಬೆರೆಯಬೇಕು, ಇನ್ನೊಬ್ಬರನ್ನು ಯಾವಾಗ ಆಶ್ರಯಿಸಬೇಕು ಎನ್ನುವುದು ‘ಸಂಶ್ರಯ’, ಸನ್ಧಿವಿಗ್ರಹೋಪಾದಾನಂ ದ್ವೈಧೀಭಾವಃ । ಇಬ್ಬರ ನಡುವೆ ತಂದಿಡುವುದು , ಇಬ್ಬರನ್ನು ಬೇರೆ ಮಾಡುವುದು ಇದು ‘ದ್ವೈಧೀಭಾವ’. ಇವಿಷ್ಟನ್ನು ಷಾಡ್ಗುಣ್ಯ ಎಂದು ಕರೆಯುತ್ತಾರೆ. ಇವು ರಾಜನೀತಿಯಲ್ಲಿ ಬರುವಂತಹ ಅಂಶಗಳಾಗಿದ್ದು, ಇದರಲ್ಲಿ ಅನೇಕ ಪಕ್ಷಗಳಿವೆ. ಭೀಷ್ಮಾಚಾರ್ಯರು, ವಿದುರ, ಚಾಣಾಕ್ಯ, ಇತ್ಯಾದಿಯಾಗಿ ಅನೇಕರು ಇದನ್ನು ಅನೇಕ ರೀತಿಯಲ್ಲಿ ವರ್ಣಿಸಿರುವುದನ್ನು ನಾವು ಕಾಣಬಹುದು].
ಧೃಷ್ಟದ್ಯುಮ್ನಸ್ತತ್ರ
ಸೇನಾಪ್ರಣೇತಾ ಶಕ್ರಪ್ರಸ್ಥೇ ನಿತ್ಯಮಾಸ್ತೇsತಿಹಾರ್ದ್ದಾತ್ ।
ವಿಶೇಷತೋ ಭೀಮಸಖಾ ಸ
ಆಸೀದ್ ರಾಷ್ಟ್ರಂ ಚೈಷಾಂ ಸರ್ವಕಾಮೈಃ ಸುಪೂರ್ಣ್ಣಮ್ ॥೨೦.೦೬॥
ಅಲ್ಲಿ ಧೃಷ್ಟದ್ಯುಮ್ನನು ಪಾಂಡವರೊಂದಿಗೆ ಅತ್ಯಂತ ಸ್ನೇಹವಿದ್ದುದರಿಂದ,
ಸೇನಾನಾಯಕನಾಗಿ ಇಂದ್ರಪ್ರಸ್ಥದಲ್ಲೇ ಇದ್ದ. ವಿಶೇಷತಃ ಅವನು ಭೀಮನ ಗೆಳೆಯನಾಗಿದ್ದ. ಒಟ್ಟಾರೆ
ಇವರೆಲ್ಲರಿಂದ ಕೂಡಿರುವ ರಾಷ್ಟ್ರವು ಎಲ್ಲಾ ಕಾಮನೆಗಳಿಂದ ಪೂರ್ಣವಾಗಿತ್ತು.
ನಾವೈಷ್ಣವೋ ನ ದರಿದ್ರೋ
ಬಭೂವ ನ ಧರ್ಮ್ಮಾಹಾನಿಶ್ಚ ಬಭೂವ ಕಸ್ಯಚಿತ್ ।
ತೇಷಾಂ ರಾಷ್ಟ್ರೇ
ಶಾಸತಿ ಭೀಮಸೇನೇ ನ ವ್ಯಾಧಿತೋ ನಾಪಿ ವಿಪರ್ಯ್ಯಯಾನ್ಮೃತಿಃ ॥೨೦.೦೭॥
ಆ ದೇಶದಲ್ಲಿ ಒಬ್ಬ ಅವೈಷ್ಣವನಿರಲಿಲ್ಲ. ಅಲ್ಲಿ ದರಿದ್ರವಿರಲಿಲ್ಲ. ಯಾರಿಗೂ ಕೂಡಾ ಧರ್ಮಹಾನಿ
ಆಗಿರಲಿಲ್ಲ. ಭೀಮಸೇನನು ರಾಷ್ಟ್ರಪಾಲನೆ ಮಾಡುತ್ತಿರಲು ಯಾರೂ ಕೂಡಾ ರೋಗದಿಂದ ಸಾಯುವುದಾಗಲೀ,
ವಿಪರ್ಯಯದ ಸಾವಾಗಲೀ (ಚಿಕ್ಕವರು ಮೊದಲು ಸಾಯುವುದು) ಅಲ್ಲಿ ನಡೆಯುತ್ತಿರಲಿಲ್ಲ.
ಯುಧಿಷ್ಠಿರಂ ಯಾನ್ತಿ
ಹಿ ದರ್ಶನೋತ್ಸುಕಾಃ ಪ್ರತಿಗ್ರಹಾಯಾಪ್ಯಥ ಯಾಜನಾಯ ।
ಕಾರ್ಯ್ಯಾರ್ತ್ಥತೋ ನೈವ
ವೃಕೋದರೇಣ ಕಾರ್ಯ್ಯಾಣಿ ಸಿದ್ಧಾನಿ ಯತೋsಖಿಲಾನಿ ॥೨೦.೦೮॥
ಜನರು ರಾಜನನ್ನು ಕಾಣಬೇಕೆಂಬ ಬಯಕೆಯುಳ್ಳವರಾಗಿ, ದಾನ
ತೆಗೆದುಕೊಳ್ಳಲು ಮತ್ತು ಯಾಗಮಾಡಲೆಂದಷ್ಟೇ ಯುಧಿಷ್ಠಿರನಲ್ಲಿಗೆ ಬರುತ್ತಿದ್ದರೇ ವಿನಃ, ಯಾವುದೋ ಕೆಲಸವಾಗಬೇಕೆಂದು
ಯಾರೂ ಬರುತ್ತಿರಲಿಲ್ಲ. ಏಕೆಂದರೆ ಭೀಮಸೇನನಿಂದ ಪ್ರಜೆಗಳ ಎಲ್ಲಾ ಕಾರ್ಯಗಳೂ ಸಿದ್ಧವಾಗುತ್ತಿದ್ದವು.
ಗನ್ಧರ್ವವಿದ್ಯಾಧರಚಾರಣಾಶ್ಚ
ಸೇವನ್ತ ಏತಾನ್ತ್ಸತತಂ ಸಮಸ್ತಾಃ ।
ಯಥಾ ಸುರೇನ್ದ್ರಮ್
ಮುನಯಶ್ಚ ಸರ್ವ ಆಯಾನ್ತಿ ದೇವಾ ಅಪಿ ಕೃಷ್ಣಮರ್ಚ್ಚಿತುಮ್ ॥೧೦.೦೯॥
ಗನ್ಧರ್ವರು, ವಿದ್ಯಾಧರರು, ಚಾರಣರು,
ಮೊದಲಾದವರು ಇಂದ್ರನ ಬಳಿ ಹೇಗೆ ಹೋಗುತ್ತಿದ್ದರೋ ಹಾಗೇ ಪಾಂಡವರನ್ನು ಬಂದು ಸೇವಿಸುತ್ತಿದ್ದರು. ಮುನಿಗಳು,
ದೇವತೆಗಳೂ ಕೂಡಾ ಕೃಷ್ಣನನ್ನು ಪೂಜಿಸಲೆಂದು ಅಲ್ಲಿಗೆ ಬರುತ್ತಿದ್ದರು.
[ಈ ಮೇಲಿನ ಮಾತಿಗೆ ಪ್ರಮಾಣವನ್ನು ನಾವು ಮಹಾಭಾರತದಲ್ಲೇ
ಕಾಣಬಹುದು. ‘ಮುನಯೋ ಧರ್ಮ- ವಿದ್ವಾಂಸೋ ಧೃತಾತ್ಮಾನೋ ಜಿತೇಂದ್ರಿಯಾಃ । ಉಪಾಸತೇ
ಮಹಾತ್ಮಾನಂ ಸಭಾಯಾಮೃಷಿಸತ್ತಮಾಃ । (ಸಭಾಪರ್ವ ೪.೨೫) ‘ಚಿತ್ರಸೇನಃ
ಸಹಾಮಾತ್ಯೋ ಗನ್ಧರ್ವಾಪ್ಸರಸಸ್ತಥಾ’ (೪೩),
‘ಪಾಣ್ಡುಪುತ್ರಾನೃಷೀಂಶ್ಚೈವ ರಮಯನ್ತ ಉಪಾಸತೇ । ತಸ್ಯಾಂ ಸಭಾಯಾಮಾಸೀನಾಃ ಸುವ್ರತಾಃ
ಸತ್ಯಸಙ್ಗರಾಃ । ದಿವೀವ ದೇವಾ
ಬ್ರಹ್ಮಾಣಂ ಯುಧಿಷ್ಠಿರಮುಪಾಸತೇ(೪೬-೪೭)
ತೇಷಾಂ ರಾಷ್ಟ್ರೇ ಕಾರ್ತ್ತಯುಗಾ
ಹಿ ಧರ್ಮ್ಮಾಃ ಪ್ರವರ್ತ್ತಿತಾ ಏವ ತತೋsಧಿಕಾಶ್ಚ ।
ಋದ್ಧಿಶ್ಚ ತಸ್ಮಾದಧಿಕಾ
ಸುವರ್ಣ್ಣರತ್ನಾಮ್ಬರಾದೇರಪಿ ಸಸ್ಯಸಮ್ಪದಾಮ್ ॥೨೦.೧೦॥
ಪಾಂಡವರ ರಾಷ್ಟ್ರದಲ್ಲಿ ಕೃತಯುಗದಲ್ಲಿ ನಡೆಯುವಂತಹ ಧರ್ಮಗಳು
ನಡೆದವು. ಅದರಿಂದಾಗಿ ಅದು ಕೃತಯುಗದ ಧರ್ಮಕ್ಕಿಂತ
ಮಿಗಿಲಾಯಿತು. (ಕಲಿಯುಗ ಹತ್ತಿರ ಬರುತ್ತಿರುವ ಸಂದರ್ಭದಲ್ಲಿ ಹೆಚ್ಚು ಅಧರ್ಮ ಇರಬೇಕಿತ್ತು. ಆದರೆ
ಅಲ್ಲಿ ಕೃತಯುಗದಲ್ಲಿ ನಡೆಯುವ ಧರ್ಮಕಾರ್ಯ ನಡೆಯಿತು. ಹೀಗಾಗಿ ಕೃತಯುಗಕ್ಕಿಂತ ಹೆಚ್ಚಿನ ಧರ್ಮ
ನಡೆಯಿತು ಎಂದು ಹೇಳಬೇಕು). ಆ ಕಾರಣದಿಂದಲೇ ಬಂಗಾರ, ರತ್ನ, ಪೀತಾಂಬರ ಮೊದಲಾದವುಗಳು, ಸಸ್ಯ ಸಂಪತ್ತುಗಳ ಸಮೃದ್ಧಿಯೂ ಕೂಡಾ
ಹೆಚ್ಚಾಗಿಯೇ ಇತ್ತು.
No comments:
Post a Comment