ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Tuesday, February 1, 2022

Mahabharata Tatparya Nirnaya Kannada 21: 309-314

 

[ಏಕೆ ಈ ಸಮಯದಲ್ಲೇ ಶ್ರೀಕೃಷ್ಣ ಇಂದ್ರಪ್ರಸ್ಥದಿಂದ ದ್ವಾರಕೆಗೆ ಮರಳಿದ್ದ ಎಂದರೆ: ದುರ್ಯೋಧನಾದಿಗಳು ಇಂದ್ರಪ್ರಸ್ಥದಿಂದ ಹಸ್ತಿನಪುರಕ್ಕೆ ತೆರಳುತ್ತಿದ್ದಂತೆ ಒಂದು ಘಟನೆ ನಡೆಯಿತು. ಆ ಘಟನೆಯನ್ನು ವಿವರಿಸುತ್ತಾರೆ:]

 

ಗತೇ ಹಿ ಪಾರ್ತ್ಥಸನ್ನಿಧೇಃ ಸುಯೋಧನೇ ತು ನಾರದಃ ।

ಶಶಂಸ ಧರ್ಮ್ಮಸೂನುನಾ ಪ್ರಚೋದಿತೋSರಿಮಾಗತಮ್   ॥೨೧.೩೦೯॥

 

ಕ ಉದ್ಯಮೀ ನೃಪೇಷ್ವತಿ ಪ್ರಪೃಷ್ಟ ಆಹ ನಾರದಃ ।

ಸ ಸೌಭರಾಡ್ ವರಂ ಶಿವಾದವಾಪ ವೃಷ್ಣಿನಿರ್ಜ್ಜಯಮ್             ॥೨೧.೩೧೦॥

 

ಪಾಂಸುಮುಷ್ಟಿಂ ಸಕೃದ್ಗ್ರಾಸೀ ಬಹೂನಬ್ದಾಂಸ್ತಪಶ್ಚರನ್ ।

ಆಜಗಾಮ ಹರಾದಾಪ್ಯ ವರಂ ಕೃಷ್ಣಜಯೇ ಪುನಃ                      ॥೨೧.೩೧೧॥

 

ಪಾಂಡವರ ಸನ್ನಿಧಿಯಿಂದ ದುರ್ಯೋಧನನು ತೆರಳಿದ ನಂತರ ಆ ಸಭೆಗೆ ಬಂದ ನಾರದರಲ್ಲಿ ಧರ್ಮರಾಜ  ‘ರಾಜಸೂಯಯಾಗವಾದಮೇಲೆ ಪ್ರಬಲವಾದ ಶತ್ರುಗಳಿಲ್ಲ.  ಹೀಗಿರುವಾಗ ರಾಜರಲ್ಲಿ ಯಾರು ಯಾರನ್ನು ಕುರಿತು ದಾಳಿ ಮಾಡಲು ಸಿದ್ದತೆ ಮಾಡುತ್ತಿದ್ದಾರೆ ಎಂದು ಕೇಳಿದನು. ಆಗ ನಾರದರು ಹೇಳುತ್ತಾರೆ: ‘ಸೌಭದೇಶಕ್ಕೆ ಒಡೆಯನಾದ ಸಾಲ್ವನು ಶಿವನಿಂದ ಯಾದವರನ್ನು ಗೆಲ್ಲಬಲ್ಲ ವರವನ್ನು ಪಡೆದಿದ್ದಾನೆ.

ದಿನಕ್ಕೆ ಒಂದು ಬಾರಿಯಂತೆ ಒಂದು ಹಿಡಿ ಮಣ್ಣನ್ನು ತಿನ್ನುತ್ತಾ, ಬಹಳ ವರ್ಷಗಳ ಕಾಲ ತಪಸ್ಸು ಮಾಡುತ್ತಾ, ರುದ್ರನಿಂದ ಕೃಷ್ಣನನ್ನು ಗೆಲ್ಲಬೇಕೆಂದು ವರವನ್ನು ಹೊಂದಿ ಬಂದಿದ್ದಾನೆ.

 

ಸ ಶ್ರುತ್ವಾ ಮಾಗಧವಧಂ ದಿಶಾಂ ವಿಜಯಮೇವ ಚ

ರಾಜಸೂಯಂ ಕ್ರತುಂ ಚೈವ ಶಿಶುಪಾಲವಧಂ ತಥಾ                             ॥೨೧.೩೧೨॥

 

ಯದೂನ್ ಪ್ರತ್ಯುದ್ಯಮಂ ತೂರ್ಣ್ಣಂ ಕರೋತೀತಿ ನಿಶಮ್ಯ ತತ್ ।

ಸಮೈಕ್ಷದ್ ಧರ್ಮ್ಮಜಃ ಕೃಷ್ಣಮುಖಶೀತಾಂಶುಮಣ್ಡಲಮ್                       ॥೨೧.೩೧೩॥

 

ಸಾಲ್ವನು ಜರಾಸಂಧನ ವಧೆಯನ್ನು ಕೇಳಿ, ಪಾಂಡವರ ದಿಗ್ವಿಜಯವನ್ನೂ, ರಾಜಸೂಯ ಯಾಗವನ್ನೂ, ಶಿಶುಪಾಲನ ವಧೆಯನ್ನೂ ಕೇಳಿ, ಯಾದವರನ್ನು ಕುರಿತು ಉದ್ಯಮವನ್ನು(ಶೀಘ್ರದಲ್ಲಿ ಯುದ್ಧವನ್ನು ಮಾಡಲು ಸಿದ್ಧತೆ) ಮಾಡುತ್ತಿದ್ದಾನೆ.’ ನಾರದರ ಈ ಮಾತನ್ನು ಕೇಳಿದ ಧರ್ಮರಾಜ ಶ್ರೀಕೃಷ್ಣನ ಮುಖವೆಂಬ ಚಂದ್ರಮಂಡಲವನ್ನು (ಸದಾ ಹಸನ್ಮುಖಿಯಾಗಿರುವ, ಈ ವಿಷಯವನ್ನು ಕೇಳಿದಾಗಲೂ ಕೋಪಿಸಿಕೊಳ್ಳದ ಕೃಷ್ಣನ ಮುಖವನ್ನು) ನೋಡಿದ.

[ಜರಾಸಂಧ ಹಾಗೂ ಶಿಶುಪಾಲ ಸತ್ತ ನಂತರ ಅವರ ಪಾಳೆಯದಲ್ಲಿ ಇರುವ ಸಾಲ್ವ ಕೃಷ್ಣನನ್ನು ಎದುರಿಸಲು ಬರುತ್ತಿದ್ದಾನೆ ಎನ್ನುವ ವಿಷಯವನ್ನು ನಾರದರು ಹೇಳಿದರು. ಸಾಲ್ವನ ಪ್ರಕಾರ ಪಾಂಡವರ ರಾಜಸೂಯಕ್ಕೆ ಕಾರಣ ಶ್ರೀಕೃಷ್ಣ. ಅದರಿಂದಾಗಿ ಕೃಷ್ಣನನ್ನು ಕೊಂದರೆ ಪಾಂಡವರನ್ನು ಸುಲಭದಲ್ಲಿ ಗೆಲ್ಲಬಹುದು ಎನ್ನುವುದು ಅವನ ಚಿಂತನೆ. ಅದರಿಂದಾಗಿ ದ್ವಾರಕಾಪಟ್ಟಣದಮೇಲೆ ಧಾಳಿಯಿಡಲು ಸಾಲ್ವ ಬರುತ್ತಿದ್ದ.]

 

ಅಸ್ತ್ವಿತ್ಯುಕ್ತ್ವಾ ಸ ಗೋವಿನ್ದಃ ಪ್ರೇಷಯಾಮಾಸ ಯಾದವಾನ್ ।

ಪ್ರದ್ಯುಮ್ನಾದೀನ್ ದಿನೈಃ ಕೈಶ್ಚಿತ್ ಸ್ವಯಂ ಚಾಗಾತ್ ಸಹಾಗ್ರಜಃ             ॥೨೧.೩೧೪॥

 

‘ಆಗಲೀ’(ಬರಲಿ ಯುದ್ಧಕ್ಕೆ),  ಎಂದು ಹೇಳಿದ ಶ್ರೀಕೃಷ್ಣನು, ತನ್ನ ಮಕ್ಕಳಾಗಿರುವ ಪ್ರದ್ಯುಮ್ನನೇ ಮೊದಲಾದ ಯಾದವರನ್ನು ದ್ವಾರಕೆಗೆ ಕಳುಹಿಸಿಕೊಟ್ಟನು. ಒಂದೆರಡು ದಿನಗಳ ಬಳಿಕ ಬಲರಾಮನಿಂದ ಕೂಡಿಕೊಂಡು ತಾನೂ ಕೂಡಾ ದ್ವಾರಕೆಗೆ ತೆರಳಿದನು.

[ಶ್ರೀಕೃಷ್ಣ ದ್ವಾರಕೆಗೆ ತೆರಳಿದ ನಂತರ ವಿದುರ ಇಂದ್ರಪ್ರಸ್ಥಕ್ಕೆ ಬಂದಿರುವುದು].

2 comments:

  1. THUMBA....DHANYAVADAGALU, E SLOKAGALU ESHTANEYA YAVA ADHYAYADA ESHTANE SAMPUTADA SLOKAGALU ENDU DAYAVITTU THILISI .MUNDINA THATHPARYA NIRNAYAKKAGI KAYUTHIDHDHNE

    ReplyDelete
  2. chapter and shloka details clearly seen in the post--> 21: 309-314
    i am unable to understand samputa. MAhabhaarata tatparya niranay has 32 chapters in total and this is 21st chapter

    ReplyDelete