ವಿದುರಸ್ತು ತತೋ ಗತ್ವಾ
ಧರ್ಮ್ಮರಾಜಮಥಾSಹ್ವಯತ್ ।
ಭ್ರಾತೃಭಿರ್ವಾರ್ಯ್ಯಮಾಣೋsಪಿ ಕೃಷ್ಣಯಾ ಚ ಸ ಧರ್ಮ್ಮರಾಟ್ ।
ಸಾರ್ದ್ಧಂ ಮಾತ್ರಾ
ಭ್ರಾತೃಭಿಶ್ಚ ಕೃಷ್ಣಯಾ ಚ ಯಯೌ ದ್ರುತಮ್ ॥೨೧.೩೧೫॥
ಈರೀತಿ ಧೂತನಾಗಿ ಬಂದ ವಿದುರ ಧರ್ಮರಾಜನನ್ನು ಕುರಿತು ಆಹ್ವಾನ ಮಾಡಿದನು. ತದನಂತರ
ಸಹೋದರರಿಂದಲೂ, ತಾಯಿಯಿಂದಲೂ ತಡೆಯಲ್ಪಟ್ಟರೂ ಕೂಡಾ ಧರ್ಮರಾಜ, ತಾಯಿ,
ತಮ್ಮಂದಿರು ಮತ್ತು ದ್ರೌಪದಿಯೊಂದಿಗೆ ದ್ಯೂತಕ್ಕಾಗಿ ಹಸ್ತಿನಪುರಕ್ಕೆ ಹೊರಟನು.
ಜ್ಯೇಷ್ಠಾಜ್ಞಯೈವ
ವಿದುರ ಆಹ್ವಯನ್ನಪಿ ಧರ್ಮ್ಮಜಮ್ ।
ನಾSಗನ್ತವ್ಯಮಿತಿ ಪ್ರಾಹ ದೋಷಾನುಕ್ತ್ವಾSಕ್ಷಜಾನ್ ಬಹೂನ್ ॥೨೧.೩೧೬॥
ವಿದುರನು ಧೃತರಾಷ್ಟ್ರನ ಆಜ್ಞೆಯಂತೇ ಧರ್ಮರಾಜನನ್ನು ಕುರಿತು
ಆಹ್ವಾನ ಮಾಡಿದ್ದರೂ ಕೂಡಾ, ದ್ಯೂತದಿಂದಾಗುವ ಅನರ್ಥಗಳನ್ನು ಧರ್ಮರಾಜನಿಗೆ ವಿವರಿಸಿ, ‘ಬರಬೇಡ’ ಎಂದು ಹೇಳಿದ.
[ಮೊದಲು ವಿದುರ ಧರ್ಮರಾಜನಲ್ಲಿಗೆ ಬಂದು- ‘ಅಣ್ಣ ನಿನ್ನನ್ನು
ಜೂಜಿಗಾಗಿ ಕರೆದಿದ್ದಾನೆ, ಎಲ್ಲರೂ ಸೇರುವುದಕ್ಕಾಗಿ ಈ ಆಮಂತ್ರಣ. ಇಲ್ಲಿ ಯಾವುದೇ ದುರುದ್ದೇಶವಿಲ್ಲ’
ಎಂದು ರಾಜಧೂತನಾಗಿ ಧೃತರಾಷ್ಟ್ರನ ಮಾತನ್ನು ಹೇಳಿದ. ನಂತರ ಧರ್ಮರಾಜನ ಹಿತೈಷಿಯಾಗಿ, ಎಲ್ಲಾ ರೀತಿಯ ಜೂಜೂ
ಕೂಡಾ ಕೆಟ್ಟದ್ದೇ. ಹಾಗಾಗಿ ‘ನೀನು ಬರಬಾರದು’ ಎಂದು ತನ್ನ ವೈಯಕ್ತಿಕ ಅಭಿಪ್ರಾಯವನ್ನೂ ಹೇಳಿದ].
ಇತೀಹ ದೋಷಸಞ್ಚಯಸ್ತಥಾ ಚ
ತೇ ಪಿತುರ್ವಚಃ ।
ಸಮೀಕ್ಷ್ಯ ತದ್ ದ್ವಯಂ
ಸ್ವಯಂ ಕುರುಷ್ವ ಕಾರ್ಯ್ಯಮಾತ್ಮನಃ ॥೨೧.೩೧೭॥
ಹಿಂದೆ ಹೇಳಿದಂತೆ ಜೂಜು ದೋಷಗಳ ಗಣಿ
ಇದ್ದಂತೆ. ಆದರೂ ಇದು ನಿನ್ನ ದೊಡ್ಡಪ್ಪನ ಮಾತು. ಇವೆರಡನ್ನೂ ಪರಾಮರ್ಶಿಸಿ ಯೋಗ್ಯವಾದ ಕರ್ಮವನ್ನು
ಮಾಡು ಎನ್ನುತ್ತಾನೆ ವಿದುರ.
[ಧೃತರಾಷ್ಟ್ರನ ಆಹ್ವಾನ ಹಾಗೂ ಜೂಜಿನ ಹಿಂದಿರುವ ದೋಷ ಎರಡನ್ನೂ ವಿದುರ ತಟಸ್ಥವಾಗಿ ಧರ್ಮರಾಜನ
ಮುಂದೆ ಹೇಳಿ, ‘ನೀನು ಯಾವುದನ್ನು ನಿಶ್ಚಯಿಸುತ್ತೀಯೋ ಅದನ್ನು ಮಾಡು’ ಎನ್ನುತ್ತಾನೆ].
ಇತೀರಿತೋsಪಿ ಪಾಣ್ಡವೋ ಯಯೌ ಕಲಿಪ್ರವೇಶಿತಃ ।
ವಿಚಿತ್ರವೀರ್ಯ್ಯಜಂ ಚ ತಂ ಸಮಾಸದತ್
ಸಸೈನಿಕಃ ॥೨೧.೩೧೮॥
ಈರೀತಿಯಾಗಿ ಎಲ್ಲವೂ ಹೇಳಲ್ಪಟ್ಟರೂ ಕೂಡಾ ಕಲಿ ಪ್ರವೇಶಕ್ಕೊಳಗಾಗಿದ್ದ
ಧರ್ಮರಾಜನು, ಸೈನಿಕರಿಂದ ಕೂಡಿಕೊಂಡು ವಿಚಿತ್ರವೀರ್ಯ ಪುತ್ರನಾದ ದೊಡ್ಡಪ್ಪನ ಬಳಿಗೆ ತೆರಳಿದನು.
[ಧರ್ಮರಾಜನು ಯಾರ ಮಾತನ್ನೂ ಕೇಳದೇ, ಯಾರೊಂದಿಗೂ ಪರಾಮರ್ಶಿಸದೇ ಹೊರಡಲು ಕಾರಣವಾದ
ಹಿನ್ನೆಲೆಯನ್ನು ಹೇಳುತ್ತಾರೆ:]
ಕಲ್ಯಾವೇಶಾನ್ನೃಪತಿಃ
ಪ್ರತಿಜಜ್ಞೇ ಪೂರ್ವಮೇವ ಧರ್ಮ್ಮಾತ್ಮಾ ।
ಆಹೂತೋ ದ್ಯೂತರಣಾನ್ನಿವರ್ತ್ತೇಯಂ
ನೈವ ವಾರಿತೋSಪೀತಿ ॥೨೧.೩೧೯॥
ಧರ್ಮಾತ್ಮನಾದ ಯುಧಿಷ್ಠಿರನು ಕಲಿಯ ಆವೇಶದಿಂದ ಹಿಂದೆ (ವಿದ್ಯಾಭ್ಯಾಸ ಮುಗಿದ ಒಡನೆಯೇ)
‘ಆಹ್ವಾನ ಮಾಡಿದರೆ ದ್ಯೂತವೆಂಬ ಯುದ್ಧದಿಂದ ಹಿಂದಿರುಗಲಾರೆ, ತಡೆದರೂ ಕೂಡಾ’ ಎಂದು ಪ್ರತಿಜ್ಞೆ
ಮಾಡಿದ್ದನು.
ತೇನಾSಯಾತ್
ಸ್ವಸುಹೃದ್ಭಿರ್ನ್ನಿವಾರ್ಯ್ಯಮಾಣೋSಪಿ ನಾಗಪುರಮಾಶು ।
ನಹಿ ಧರ್ಮ್ಮೋ
ದ್ಯೂತಕೃತೋ ವಿಶೇಷತಃ ಕ್ಷತ್ರಿಯಸ್ಯ ಲೋಕಗುರೋಃ ॥೨೧.೩೨೦॥
ಆ ಕಾರಣದಿಂದ ಭೀಮಸೇನ ಮೊದಲಾದವರಿಂದ ತಡೆಯಲ್ಪಟ್ಟರೂ ಕೂಡಾ, ಕೇಳಿದ
ಒಡನೆಯೇ ಶೀಘ್ರದಲ್ಲಿ ಧರ್ಮರಾಜ ಹಸ್ತಿನಪುರಕ್ಕೆ ಬಂದ. ವಿಶೇಷವಾಗಿ ಲೋಕವನ್ನಾಳುವ, ಲೋಕಕ್ಕೆ ಮಾರ್ಗದರ್ಶನ ಮಾಡುವ ಕ್ಷತ್ರಿಯನಿಗೆ ದ್ಯೂತ
ಸಲ್ಲದು.
[ಧರ್ಮರಾಜ ನೇರವಾಗಿ ಆಹ್ವಾನವನ್ನು ತಿರಸ್ಕರಿಸಬಹುದಿತ್ತು.
ಆದರೆ ಕಲಿ ಪ್ರವೇಶದಿಂದಾಗಿ ಆ ರೀತಿ ಮಾಡಲಿಲ್ಲ].
No comments:
Post a Comment