ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Monday, January 31, 2022

Mahabharata Tatparya Nirnaya Kannada 21: 304-308

 

[ಧೃತರಾಷ್ಟ್ರನಲ್ಲಿ ಕಲಿಯ ಆವೇಶ ಆಗಿರುವುದು ಯಾವಾಗ ಎನ್ನುವುದನ್ನು ವಿವರಿಸುತ್ತಾರೆ: ]

 

ಆವಿವೇಶ ಕಲಿಸ್ತಂ ಹಿ ಯದಾ ಪುತ್ರತ್ವಸಿದ್ಧಯೇ ।

ಅಂಶೇನ ತತ ಆರಭ್ಯ ನೈವಾಸ್ಮಾದಪಜಗ್ಮಿವಾನ್                    ॥೨೧.೩೦೪॥

 

ಯಾವತ್ ಪುರಂ ಪರಿತ್ಯಜ್ಯ ವನಮೇವ ವಿವೇಶ ಹ ।

ತದನ್ತರಾ ತತಸ್ತಸ್ಯ ಪಾಪಯುಕ್ತಂ ಮನೋsಭವತ್                  ॥೨೧.೩೦೫॥

 

(ಗಂಡು ಮತ್ತು ಹೆಣ್ಣು ಒಂದು ಮಗುವನ್ನು ಪಡೆಯಲು ಶಾಸ್ತ್ರದಲ್ಲಿ ಒಂದು ಪ್ರಕ್ರಿಯೆಯನ್ನು ಹೇಳುತ್ತಾರೆ. ಊಟ ಮಾಡುವ ಆಹಾರದಲ್ಲಿ ಜೀವ ಬಂದು ಸೇರಿಕೊಳ್ಳುತ್ತಾನೆ. ಹೀಗೆ ಸೇರಿದ ಜೀವ ಆಹಾರದೊಂದಿಗೆ ಗಂಡಿನ ದೇಹವನ್ನು ಪ್ರವೇಶಿಸಿ, ರೇತಸ್ಸಿನ ರೂಪವಾಗಿ ಬದಲಾಗುತ್ತಾನೆ. ಆ ರೇತಸ್ಸು ಹೆಣ್ಣಿನ ಗರ್ಭಾಶಯವನ್ನು ಸೇರಿ ಒಂದು ಮಗುವಾಗಿ ರೂಪುಗೊಳ್ಳುತ್ತದೆ.)

ಅಂಶದಿಂದ ಪುತ್ರತ್ವ ಸಿದ್ಧಿಗಾಗಿ ಯಾವಾಗ ಕಲಿಯೂ ಧೃತರಾಷ್ಟ್ರನ ದೇಹವನ್ನು ಪ್ರವೇಶ ಮಾಡಿದನೋ. ಅವತ್ತಿನಿಂದ ಒಂದು ಅಂಶದಿಂದ ಧೃತರಾಷ್ಟ್ರನಲ್ಲೇ ಉಳಿದ ಅವನು ಹೊರಹೋಗಲೇ ಇಲ್ಲ.

ಯಾವಾಗ ಮುಂದೆ ಧೃತರಾಷ್ಟ್ರ ಹಸ್ತಿನಾವತಿಯನ್ನು ಬಿಟ್ಟು ಕಾಡಿಗೆ ಪ್ರವೇಶ ಮಾಡುವನೋ, ಅಲ್ಲಿಯತನಕ ಕಲಿ ಅವನನ್ನು ಬಿಡಲೇ ಇಲ್ಲಾ. (ಅದರಿಂದಾಗಿ ದುರ್ಯೋಧನ ಹುಟ್ಟುವ ಒಂದು ವರ್ಷ ಮೊದಲು ಪ್ರವೇಶಿಸಿದ ಕಲಿ, ಧೃತರಾಷ್ಟ್ರ ಸಾಯುವುದಕ್ಕಿಂತ ಸುಮಾರು ೩ ವರ್ಷ ಮುಂಚೆಯ ತನಕ ಅವನಲ್ಲಿದ್ದ) ಹೀಗಾಗಿ ಧೃತರಾಷ್ಟ್ರನ  ಮನಸ್ಸು ಪಾಪಿಷ್ಠವಾಗಿತ್ತು.    

 

ನ್ಯವಾರಯತ್ ತಂ ವಿದುರೋ ಮಹತ್ ತೇ ಪಾಪಂ ಕುಲಸ್ಯಾಪಿ ವಿನಾಶಕೋsಯಮ್ ।

ಸಮುದ್ಯಮೋ ನಾತ್ರ ವಿಚಾರ್ಯ್ಯಮಸ್ತಿ ಕೃಥಾ ನ ತಸ್ಮಾದಯಶಶ್ಚ ತೇ ಸ್ಯಾತ್             ॥೨೧.೩೦೬॥

 

ಶ್ರೇಷ್ಠವಾದ ಸದ್ಬುದ್ಧಿಯುಳ್ಳವನಾದ ವಿದುರನು ಧೃತರಾಷ್ಟ್ರನನ್ನು ತಡೆದು ಹೇಳುತ್ತಾನೆ: ‘ನಿನಗೆ ಪಾಪ ಬರುತ್ತದೆ. ಈರೀತಿಯ ತೊಡಗುವಿಕೆ ಇಡೀ ಕುಲವನ್ನೇ ನಾಶ ಮಾಡುತ್ತದೆ. ಈ ವಿಚಾರದಲ್ಲಿ ಯಾವ ಹೆಚ್ಚಿನ ವಿಚಾರವನ್ನೂ ಮಾಡಬೇಕಾಗಿಲ್ಲ. ಆದ್ದರಿಂದ ಹೀಗೆ ಮಾಡಬೇಡ. ಇದರಿಂದ ನಿನಗೆ ಶಾಶ್ವತವಾದ ಅಪಕೀರ್ತಿ ಬರುತ್ತದೆ’ ಎಂದು. 

 

ಇತಿ ಬ್ರುವಾಣಂ ಕಲಹೋSತ್ರ ನ ಸ್ಯಾನ್ನಿವಾರಯಾಮೋ ವಯಮೇವ ಯಸ್ಮಾತ್ ।

ದ್ರಷ್ಟುಂ ಸುತಾನ್ ಕ್ರೀಡತ ಏಕಸಂಸ್ಥಾನಿಚ್ಛಾಮಿ ಪಾರ್ತ್ಥಾಂಶ್ಚ ಸುಯೋಧನಾದೀನ್ ॥೨೧.೩೦೭॥

 

ಅತಃ ಕ್ಷಿಪ್ರಮುಪಾನೇಯಾಃ ಪಾರ್ತ್ಥಾ ಇತಿ ಬಲೋದಿತಃ ।

ಯಯೌ ಸ ವಿದುರಃ ಪಾರ್ತ್ಥಾನ್ ದ್ವಾರಕಾಂ ಕೇಶವೇ ಗತೇ                  ॥೨೧.೩೦೮॥

 

ಈರೀತಿಯಾಗಿ ಎಚ್ಚರಕೊಡುವ ವಿದುರನನ್ನು ಕುರಿತು ಧೃತರಾಷ್ಟ್ರ- ‘ಯಾವ ಕಾರಣದಿಂದ ನಾವೇ ತಡೆಯುತ್ತೇವೆ(ಈ ಜೂಜಿನಿಂದ ಜಗಳ ಆಗುವುದಿಲ್ಲ, ಒಂದು ವೇಳೆ ಆದರೆ ನಾವು ತಡೆಯುತ್ತೇವೆ. ನಾನು ಅವರನ್ನು ಕರೆಯುತ್ತಿರುವುದು ಏಕೆಂದರೆ:). ಪಾಂಡವರೂ ಮತ್ತು ದುರ್ಯೋಧನ ಮೊದಲಾದವರು  ಒಂದೆಡೆ ಇದ್ದು, ಆಟ ಆಡುವ ಅವರನ್ನು ನಾನು ನೋಡಲು  ಇಷ್ಟಪಡುತ್ತೇನೆ. (ಕೇವಲ ಕ್ರೀಡೆಗಾಗಿ ಕರೆಸುತ್ತಿರುವುದು). ಅದರಿಂದ ಬೇಗನೇ ಪಾಂಡವರು ಕರೆತರಲ್ಪಡಬೇಕಾದವರು.’ ಈರೀತಿಯಾಗಿ ಬಲಾತ್ಕಾರವಾಗಿ ಧೃತರಾಷ್ಟ್ರನಿಂದ ಒತ್ತಿಒತ್ತಿ ಹೇಳಲ್ಪಟ್ಟ ವಿದುರನು ಪಾಂಡವರನ್ನು ಕುರಿತು ತೆರಳಿದ. ಆ ಸಮಯದಲ್ಲಿ ಶ್ರೀಕೃಷ್ಣ ಇಂದ್ರಪ್ರಸ್ಥದಲ್ಲಿರಲಿಲ್ಲ. ಅವನು ದ್ವಾರಕಾಪಟ್ಟಣಕ್ಕೆ ಮರಳಿದ್ದ.

No comments:

Post a Comment