ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Friday, April 21, 2023

Mahabharata Tatparya Nirnaya Kannada 27-44-50

 

ಜಿತ್ವಾ ಸೂರ್ಯ್ಯಸುತಂ ಭೀಮಃ ಕೌರವಾಣಾಮನೀಕಿನೀಮ್ ।

ಸರ್ವಾಂ ವಿದ್ರಾವಯಾಮಾಸ ದ್ರೌಣಿದುರ್ಯ್ಯೋಧನಾವೃತಾಮ್ ॥೨೭.೪೪॥

 

ಭೀಮಸೇನನು ಸೂರ್ಯನ ಮಗನಾಗಿರುವ ಕರ್ಣನನ್ನು ಗೆದ್ದು, ಅಶ್ವತ್ಥಾಮ, ದುರ್ಯೋಧನರಿಂದ ಕೂಡಿರುವ ಕೌರವರ ಸೇನೆಯನ್ನು ಓಡಿಸಿದ.

 

ಅಕ್ಷೋಹಿಣೀತ್ರಯಂ ತೇನ ತದಾ ವಿಲುಳಿತಂ ಕ್ಷಣಾತ್ ।

ತದೈವ ಗುರುಪುತ್ರೋSಯಾತ್ ಪಾಣ್ಡವಾನಾಮನೀಕಿನೀಮ್ ॥೨೭.೪೫॥

 

ವಿಮೃದ್ಯ ಸಕಲಾಂ ಸೇನಾಂ ಕೃತ್ವಾ ಚ ವಿರಥಂ ನೃಪಮ್ ।

ಧೃಷ್ಟದ್ಯುಮ್ನಂ ಯಮೌ ಚೈವ ಸಾತ್ಯಕಿಂ ದ್ರೌಪದೀಸುತಾನ್ ।

ಕ್ಷಣೇನ ವಿರಥೀಕೃತ್ಯ ಸರ್ವಾಂಶ್ಚಕ್ರೇ ನಿರಾಯುಧಾನ್ ॥೨೭.೪೬॥

 

ಸ್ವಲ್ಪ ಹೊತ್ತಿನಲ್ಲೇ ಭೀಮಸೇನನಿಂದ ಮೂರು ಅಕ್ಷೋಹಿಣಿ ನಾಶ ಮಾಡಲ್ಪಟ್ಟಿತು. ಇನ್ನೊಂದು ಕಡೆಯಿಂದ ಅಶ್ವತ್ಥಾಮನು ಪಾಂಡವರ ಸೇನೆಯನ್ನು ಕುರಿತು ಬಂದನು.

ಆ ಅಶ್ವತ್ಥಾಮನು ಎಲ್ಲಾ ಸೇನೆಯನ್ನು ಕಂಗೆಡಿಸಿ, ಧರ್ಮರಾಜನನ್ನು ರಥಹೀನನನ್ನಾಗಿ ಮಾಡಿ, ಧೃಷ್ಟದ್ಯುಮ್ನ, ನಕುಲ-ಸಹದೇವರು, ಸಾತ್ಯಕಿ, ದ್ರೌಪದಿಯ ಮಕ್ಕಳು, ಎಲ್ಲರನ್ನೂ ನಿರಾಯುಧರನ್ನಾಗಿ ಮಾಡಿ, ಅವರ ರಥವನ್ನು ನಾಶಮಾಡಿದನು.

 

ತಾನ್ ಭಗ್ನದರ್ಪ್ಪಾನ್ ರಣತೋSಪಯಾತಾನನ್ವೇವ ಬಾಣಾವೃತಮನ್ತರಿಕ್ಷಮ್ ।

ಕುರ್ವನ್ ಯಯೌ ಧರ್ಮ್ಮರಾಜಸ್ತಮಾಹ ಕಿಂ ನಃ ಸ್ವಧರ್ಮ್ಮೇ ನಿರತಾನ್ ವಿಹಂಸಿ ॥೨೭.೪೭॥

 

ಕ್ಷತ್ರಿಯಾನ್ ಪರಧರ್ಮ್ಮಸ್ಥೋ ಮಾ ಹಿಂಸೀರಿತಿ ಚೋದಿತಃ ।

ಪ್ರಹಸ್ಯ ತಾನ್ ವಿಹಾಯೈವ ಯಯೌ ಯತ್ರಾಚ್ಯುತಾರ್ಜ್ಜುನೌ ॥೨೭.೪೮॥

 

ಹೀಗೆ ಅವರೆಲ್ಲರ ದರ್ಪವನ್ನಿಳಿಸಿ, ಯುದ್ಧದಿಂದ ಓಡಿಹೋಗುವವರನ್ನಾಗಿ ಮಾಡಿದ ಅಶ್ವತ್ಥಾಮ, ಉಳಿದ ಸೇನೆಯನ್ನು ಬಾಣಗಳಿಂದ ತುಂಬಿ ಮುನ್ನುಗ್ಗಿದ. ಆಗ ಧರ್ಮರಾಜನು ನಿಸ್ಸಹಾಯಕತೆಯಿಂದ ಅವನನ್ನು ನಿಂದಿಸಿ ಮಾತನಾಡಿದ- ‘ಯುದ್ಧ ಮಾಡುವುದು ಕ್ಷತ್ರಿಯರಾದ ನಮ್ಮ ಧರ್ಮ. ಬ್ರಾಹ್ಮಣಧರ್ಮದಲ್ಲಿರುವ ನೀನು ಸ್ವಧರ್ಮ ಮಾಡುತ್ತಿರುವ ನಮ್ಮನ್ನು ಕುರಿತು ಏಕೆ ಹಿಂಸೆ ಮಾಡುತ್ತಿರುವೆ’. ಈರೀತಿ ಪ್ರಶ್ನೆ ಮಾಡಲ್ಪಟ್ಟವನಾದ ಅಶ್ವತ್ಥಾಮನು ನಕ್ಕು, ಅವರೆಲ್ಲರನ್ನೂ ಬಿಟ್ಟು, ಕೃಷ್ಣಾರ್ಜುನ ಎಲ್ಲಿದ್ದರೋ ಅಲ್ಲಿಗೆ ಹೊರಟುಹೋದ.

 

ಸಂಶಪ್ತಕೈಸ್ತತ್ರ ಸಂಯುದ್ಧ್ಯಮಾನಂ ಸಮಾಹ್ವಯಾಮಾಸ ಸುರೇಶಸೂನುಮ್ ।

ಸ ಬಾಣಯುಕ್ತಂ ಭುಜಗೇನ್ದ್ರಕಲ್ಪಮುನ್ನಮ್ಯ ಬಾಹುಂ ಯುಧಯೇ ಸುಶೂರಮ್ ॥೨೭.೪೯॥

 

ಅಲ್ಲಿ ಅತ್ಯಂತ ಶೂರನಾದ, ಸಂಶಪ್ತಕರೊಂದಿಗೆ ಯುದ್ಧಮಾಡುತ್ತಿರುವ,  ಸುರೇಶಸೂನು ಅರ್ಜುನನನ್ನು, ಅಶ್ವತ್ಥಾಮನು, ಬಾಣಗಳಿಂದ ಯುಕ್ತವಾದ, ಶೇಷ ಸದೃಶವಾದ ತನ್ನ ಗಟ್ಟಿಯಾದ ತೋಳನ್ನೆತ್ತಿ ಯುದ್ಧಕ್ಕಾಗಿ ಕರೆದನು.

 

ಪಾರ್ತ್ಥಃ ಸಂಶಕ್ತಕಗಣೈಃ ಸಂಸೃಷ್ಟಃ ಸಮರಾರ್ತ್ಥಿಭಿಃ ।

ಆಹೂತೋ ದ್ರೌಣಿನಾ ಚೈವ ಕಾರ್ಯ್ಯಂ ಕೃಷ್ಣಮಪೃಚ್ಛತ ।

ಚೋದಯಾಮಾಸ ಚ ಹಯಾನ್ ಕೃಷ್ಣೋ ದ್ರೌಣಿರಥಂ ಪ್ರತಿ ॥೨೭.೫೦॥

 

ಸಂಶಪ್ತಕ ಗಣದಿಂದ ತಡೆಯಲ್ಪಟ್ಟ, ಅಶ್ವತ್ಥಾಮನಿಂದಲೂ ಕರೆಯಲ್ಪಟ್ಟ ಪಾರ್ಥನು ಏನು ಮಾಡಬೇಕೆಂದು ತಿಳಿಯದೇ ಶ್ರೀಕೃಷ್ಣನನ್ನು ಕೇಳಿದ. ಆಗ ಕೃಷ್ಣನು ಅಶ್ವತ್ಥಾಮನ ರಥವನ್ನು ಕುರಿತು ಕುದುರೆಗಳನ್ನು ಪ್ರೇರಿಸಿದ.

No comments:

Post a Comment