ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Tuesday, April 25, 2023

Mahabharata Tatparya Nirnaya Kannada 27-60-66

 

ಅಪೋಹುರ್ದ್ದೂರಮೇತಸ್ಮಾತ್ ಸೋSಪಿ ಸಂಸ್ಥಾಪ್ಯ ತಾನ್ ಪುನಃ ।

ಚಿನ್ತಯಾಮಾಸ ನೈತಸ್ಮಾದಧಿಕಂ ಶಕ್ಯತೇSರ್ಜ್ಜುನೇ ॥೨೭.೬೦ ॥

 

ದೂರ ಓಡಿದ ಕುದುರೆಗಳನ್ನು ಪುನಃ ಸ್ಥಾಪಿಸಿದ ಅಶ್ವತ್ಥಾಮ, ‘ಅರ್ಜುನನ ವಿಷಯದಲ್ಲಿ ಇದಕ್ಕಿಂತ ಮಿಗಿಲಾಗಿ ಏನನ್ನೂ ಮಾಡಲು ಶಕ್ಯವಾಗುವುದಿಲ್ಲ’ ಎಂದು ಚಿಂತಿಸಿದ.

 

ಸಾರಥಿತ್ವಾತ್ ಕೇಶವಸ್ಯ ಧ್ವಜಸ್ಥತ್ವಾದ್ಧನೂಮತಃ ।

ಗಾಣ್ಡಿವತ್ವಾತ್ ಕಾರ್ಮ್ಮುಕಸ್ಯ ಚೇಷುದ್ಧ್ಯೋರಕ್ಷಯತ್ವತಃ ॥೨೭.೬೧ ॥

 

ಅವದ್ಧ್ಯತ್ವಾತ್ ತಥಾSಶ್ವಾನಾಮಭೇದ್ಯತ್ವಾದ್ ರಥಸ್ಯ ಚ ।

ಅತೋ ಯೋದ್ಧುಂ ಸಮರ್ತ್ಥೋSಪಿ ನಾದ್ಯ ಯಾಮಿ ಧನಞ್ಜಯಮ್ ॥೨೭.೬೨ ॥

 

ಏವಂ ಸ ಮತ್ವಾ ಪ್ರವಿವೇಶ ಸೇನಾಂ ಪಾಣ್ಡೋಃ ಸುತಾನಾಮಥ ತಂ ಸಮಭ್ಯಯಾತ್ ।

ಪಾಣ್ಡ್ಯಸ್ತಯೋರಾಸ ಸುಯುದ್ಧಮದ್ಭುತಂ ಪ್ರವರ್ಷತೋಃ  ಸಾಯಕಪೂಗಮುಗ್ರಮ್ ॥೨೭.೬೩ ॥

 

ಶ್ರೀಕೃಷ್ಣನೇ ಸಾರಥಿ, ಧ್ವಜದಲ್ಲಿ ಹನುಮಂತ. ಗಾಣ್ಡಿವ ಧನುಸ್ಸು, ಎಂದೂ ಮುಗಿಯದ ಬಾಣಗಳಿರುವ ಬತ್ತಳಿಕೆ, ಅವಧ್ಯತ್ವ ಹೊಂದಿರುವ ಕುದುರೆಗಳು, ನಾಶವಾಗದ ರಥ.  ಈ ಕಾರಣದಿಂದ ನನಗೆ ಯುದ್ಧಮಾಡುವ ತಾಕತ್ತಿದ್ದರೂ ಕೂಡಾ ನಾನು ಅರ್ಜುನನನ್ನು ಕುರಿತು ಈಗ ಹೋಗಲಾರೆ ಎಂದು ಚಿಂತಿಸಿದ ಅಶ್ವತ್ಥಾಮ, ಪಾಂಡವರ ಸೇನೆಯನ್ನು ಬೇರೆಡೆಯಿಂದ ಪ್ರವೇಶ ಮಾಡಿದನು. ಆಗ ಅವನನ್ನು  ಪಾಂಡ್ಯದೇಶದ ರಾಜನು ಎದುರುಗೊಂಡ. ತೀಕ್ಷ್ಣವಾದ ಬಾಣಗಳನ್ನು ವರ್ಷಿಸತಕ್ಕ ಆ ಪಾಂಡ್ಯರಾಜ ಮತ್ತು ಅಶ್ವತ್ಥಾಮರ ನಡುವೆ ಅದ್ಭುತವಾದ ಉಗ್ರ ಹೋರಾಟ ನಡೆಯಿತು.

 

ಅಷ್ಟಾವಷ್ಟಶತಾನ್ಯೂಹುಃ ಶಕಟಾನಿ ಯದಾಯುಧಮ್ ।

ಅಹ್ನಸ್ತದಷ್ಟಭಾಗೇನ ದ್ರೌಣಿಶ್ಚಿಕ್ಷೇಪ ತತ್ರ ಹ ॥೨೭.೬೪ ॥

 

ಆದಿನದ ಯುದ್ಧದಲ್ಲಿ ಅಶ್ವತ್ಥಾಮ ಎಂಟು ಎತ್ತುಗಳು ಹೊರಬಹುದಾದ ಒಂದು ಗಾಡಿ, ಆ ಗಾಡಿಯಲ್ಲಿ ತುಂಬಿರುವ ಅಸ್ತ್ರಗಳು,  ಅಂತಹ  ಎಂಟು ಗಾಡಿಗಳಲ್ಲಿ ಎಷ್ಟು ತುಂಬಬಹುದೋ ಅಷ್ಟು ಆಯುಧವನ್ನು ದಿವಸದ ಎಂಟನೇ ಒಂದು ಭಾಗದಲ್ಲೇ ಖಾಲಿ ಮಾಡಿದ.

 

ಅಥ ತಂ ವಿರಥಂ ಕೃತ್ವಾ ಛಿತ್ವಾ ಕಾರ್ಮ್ಮುಕಮಾಹವೇ ।

ಸಕುಣ್ಡಲಂ ಶಿರೋ ದ್ರೌಣಿರ್ಜ್ಜಹಾರ ಮುಕುಟೋಜ್ಜ್ವಲಮ್ ॥೨೭.೬೫ ॥

 

ಪಾಂಡ್ಯರಾಜನನ್ನು ವಿರಥನನ್ನಾಗಿ ಮಾಡಿದ ಅಶ್ವತ್ಥಾಮ, ಬಿಲ್ಲನ್ನು ಕತ್ತರಿಸಿ, ಕುಂಡಲದಿಂದ ಸಹಿತವಾಗಿರುವ, ಕಿರೀಟದಿಂದ ಪ್ರಕಾಶಮಾನವಾದ  ಅವನ ತಲೆಯನ್ನು ಕತ್ತರಿಸಿದನು.

 

ಅಥ ವಿದ್ರಾವಯಾಮಾಸ ಪೃತನಾಂ ಪಾಣ್ಡವೀಂ ಶರೈಃ ।

ತದಾ ಜಘಾನ ಪಾರ್ತ್ಥೋSಪಿ ದಣ್ಡಧಾರಾಖ್ಯಮಾಗಧಮ್  ॥೨೭.೬೬ ॥

 

ಈರೀತಿಯಾಗಿ ಯುದ್ಧ ಮಾಡುತ್ತಾ ಅಶ್ವತ್ಥಾಮ ಪಾಂಡವರ ಸೇನೆಯನ್ನು ಬಾಣಗಳಿಂದ ಓಡಿಸಿದ. ಆಗಲೇ ಇನ್ನೊಂದು ಬದಿಯಿಂದ ಅರ್ಜುನನೂ ಕೂಡಾ ದಣ್ಡಧಾರಾ ಎನ್ನುವ ಮಗಧ ದೇಶದ ಒಬ್ಬ ದೈತ್ಯನನ್ನು ಕೊಂದು ಹಾಕಿದ.

No comments:

Post a Comment