ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Sunday, April 23, 2023

Mahabharata Tatparya Nirnaya Kannada 27-51-59

 

ಉಭೌ ಚ ತಾವಸ್ತ್ರವಿದಾಂ ಪ್ರಧಾನೌ ಮಹಾಬಲೌ ಸಂಯತಿ ಜಾತದರ್ಪ್ಪೌ ।

ಶರೈಃ ಸಮಸ್ತಾಃ ಪ್ರದಿಶೋ ದಿಶಶ್ಚ ದ್ರೋಣೇನ್ದ್ರಸೂನೂ ತಿಮಿರಾಃ ಪ್ರಚಕ್ರತುಃ ॥೨೭.೫೧॥

 

ಅಸ್ತ್ರವೇತ್ತರಲ್ಲಿಯೇ ಪ್ರಧಾನರಾಗಿರುವ, ಮಹಾಬಲರಾಗಿರುವ ಅಶ್ವತ್ಥಾಮ-ಅರ್ಜುನರು, ಯುದ್ಧದಲ್ಲಿ ಆಸಕ್ತಿಯುಳ್ಳವರಾಗಿ, ಹೆಮ್ಮೆಯಿಂದ, ಬಾಣಗಳಿಂದ ದಿಕ್ಕು-ವಿದಿಕ್ಕುಗಳನ್ನೂ ಕತ್ತಲೆಯನ್ನಾಗಿ ಮಾಡಿದರು.  

 

ದ್ರೌಣಿಸ್ತದಾ ಸ್ಯನ್ದನವಾಜಿರೋಮಸ್ವರೋಮಕೂಪಧ್ವಜಕಾರ್ಮ್ಮುಕೇಭ್ಯಃ ।

ಶರಾನಮೋಘಾನ್ ಸತತಂ ಸೃಜಾನೋ ಬಬನ್ಧ ಪಾರ್ತ್ಥಂ ಶರಪಞ್ಜರೇಣ ॥೨೭.೫೨॥

 

ಆಗ ಅಶ್ವತ್ಥಾಮನು ರಥದಿಂದ, ಕುದುರೆಗಳ ರೋಮದಿಂದ, ತನ್ನ ರೋಮಕೂಪದಿಂದ, ಧ್ವಜದಿಂದ, ಬಿಲ್ಲಿನಿಂದಲೂ ಕೂಡಾ ಅಮೋಘವಾದ ಬಾಣಗಳನ್ನು ನಿರಂತರವಾಗಿ ಬಿಡುವವನಾಗಿ, ಶರ ಪಂಜರದಲ್ಲಿ ಅರ್ಜುನನನ್ನು ಕಟ್ಟಿಹಾಕಿದನು.  

 

ತಸ್ಮಿನ್ ನಿಬದ್ಧೇ ಹರಿರಪ್ರಮೇಯೋ ವಿಬೋಧಯಾಮಾಸ ಸುರೇನ್ದ್ರಸೂನುಮ್ ।

ಆಲಿಙ್ಗನೇನಾಸ್ಯ ದದೌ ಬಲಂ ಚ ಸ ಉತ್ಥಿತೋSಸ್ತ್ರಾಣ್ಯಮುಚನ್ಮಹಾನ್ತಿ ॥೨೭.೫೩॥

 

ಅರ್ಜುನನು ಹೀಗೆ ಕಟ್ಟಲ್ಪಡಲು, ಅಪ್ರಮೇಯನಾದ ಶ್ರೀಕೃಷ್ಣನು ಅವನನ್ನು ಎಚ್ಚರಿಸಿ, ಅಪ್ಪಿಕೊಳ್ಳುವ ಮೂಲಕ ಅವನಿಗೆ ಬಲವನ್ನು ಕೊಟ್ಟನು. ಅದರಿಂದ ಮತ್ತೆ ಎದ್ದು ನಿಂತ ಅರ್ಜುನನು  ಮಹಾಸ್ತ್ರಗಳನ್ನು ಅಶ್ವತ್ಥಾಮನ ಮೇಲೆ ಪ್ರಯೋಗಿಸಿದನು.

 

ನಿವಾರ್ಯ್ಯ ತಾನ್ಯಸ್ತ್ರವರೈರ್ಗ್ಗುರೋಃ ಸುತಶ್ಚಿಚ್ಛೇದ ಚ ಜ್ಯಾಂ ಯುಧಿ ಗಾಣ್ಡಿವಸ್ಯ ।

ವವರ್ಷ ಪಾರ್ತ್ಥಂ ಚ ಶರೈರಥಾSನ್ಯಾ ಜ್ಯಾSSಸೀತ್ ತಯಾ ಗಾಣ್ಡಿವಂ ಸೋSಪ್ಯಯುಙ್ಕ್ತ ॥೨೭.೫೪॥

 

ಅರ್ಜುನನ ಅಸ್ತ್ರಗಳನ್ನು ಅದಕ್ಕಿಂತ ಪ್ರಭಲವಾದ ಅಸ್ತ್ರಗಳಿಂದ ತಡೆದ ಅಶ್ವತ್ಥಾಮನು, ಅರ್ಜುನನ  ಗಾಣ್ಡಿವದ ನೇಣನ್ನು ಕತ್ತರಿಸಿದನು ಮತ್ತು ಅರ್ಜುನನನ್ನು ಬಾಣಗಳಿಂದ ಪೀಡಿಸಿದನು. ಅಷ್ಟರಲ್ಲಿ ಗಾಣ್ಡಿವದಲ್ಲಿ ಇನ್ನೊಂದು ನೇಣು ಬೆಳೆದು ಬಂತು. ಅದರಿಂದ ಅರ್ಜುನನು ಪುನಃ ನೇಣನ್ನೇರಿಸಿದನು.

 

ತತಃ ಶರೇಣ ಕುಪಿತಃ ಶಿತೇನ ದ್ರೌಣಿಸಾರಥೇಃ ।

ಶಿರೋ ಜಹಾರ ಕೌನ್ತೇಯಃ ಸಾರಥ್ಯಂ ಸೋSಕರೋತ್ ಸ್ವಯಮ್ ॥೨೭.೫೫॥

 

ತದನಂತರ ಕೋಪಗೊಂಡ ಅರ್ಜುನನು ತೀಕ್ಷ್ಣವಾದ ಬಾಣದಿಂದ ಅಶ್ವತ್ಥಾಮನ ಸಾರಥಿಯ ಕತ್ತನ್ನು ಕತ್ತರಿಸಿದನು. ಆಗ ಆ ಅಶ್ವತ್ಥಾಮನು ತಾನೇ ಸಾರಥ್ಯವನ್ನು ಮಾಡಿದನು.

 

ಶರಾನ್ ವಿಸೃಜತಾ ತೇನ ಸಾರಥ್ಯಮಪಿ ಕುರ್ವತಾ ।

ಶರಕೂಟೇನ ಪಾರ್ತ್ಥಃ ಸ ಪುನರ್ಬುದ್ಧೋ ದ್ವಿಜನ್ಮನಾ ॥೨೭.೫೬॥

 

ಬಾಣಗಳನ್ನು ಬಿಡುತ್ತಾ, ಸಾರಥ್ಯವನ್ನೂ ಮಾಡುತ್ತಿರುವ ಬ್ರಾಹ್ಮಣನಾದ ಅಶ್ವತ್ಥಾಮನಿಂದ ಅರ್ಜುನನು   ಬಾಣಗಳ ಸಮೂಹದಿಂದ ಮತ್ತೆ ಕಟ್ಟಲ್ಪಟ್ಟನು.

 

ಪುನರಾಲಿಙ್ಗ್ಯ ಕೃಷ್ಣಸ್ತಮಧಾಚ್ಛತ್ರುವಿಘಾತಕಮ್ ।

ಬಲಮಸ್ಮಿಂಸ್ತತಃ ಪಾರ್ತ್ಥ ಉತ್ತಸ್ಥೌ ಶರಚಾಪಭೃತ್ ॥೨೭.೫೭॥

 

ಆಗ ಪುನಃ ಆಲಿಂಗನವನ್ನು ಮಾಡಿದ ಶ್ರೀಕೃಷ್ಣನು, ಶತ್ರುಸಂಹಾರ ಬಲವನ್ನು ಅರ್ಜುನನಲ್ಲಿಟ್ಟನು. ಆಮೇಲೆ ಅರ್ಜುನನು ಬಿಲ್ಲು ಬಾಣಗಳನ್ನು ಹಿಡಿದು ಮತ್ತೆ ಸನ್ನದ್ಧನಾದನು.

 

ವವರ್ಷ ಚ ಶರಾನ್ ಭೂಯೋ ದ್ರೋಣಪುತ್ರೇSರಿಮರ್ದ್ದನಃ ।

ಪುನಸ್ತಸ್ಯ ನುನೋದ ಜ್ಯಾಂ ದ್ರೌಣಿಃ ಸನ್ಧಾಯ ತಾಂ ಪುನಃ ॥೨೭.೫೮ ॥

 

ಶತ್ರುಗಳನ್ನು ಗೆಲ್ಲಬಲ್ಲ ಆ ಅರ್ಜುನನು ಅಶ್ವತ್ಥಾಮನಲ್ಲಿ ಬಾಣಗಳನ್ನು ಬಿಟ್ಟನು. ಆಗ ಅಶ್ವತ್ಥಾಮನು ಅವನ ಬಿಲ್ಲಿನ ನೇಣನ್ನು ಮತ್ತೆ ಕತ್ತರಿಸಿದನು. ಅರ್ಜುನನು ನೇಣನ್ನು ಮತ್ತೆ ಕಟ್ಟಿ, ಅಶ್ವತ್ಥಾಮನ ಕುದುರೆಗಳ ಲಗಾಮನ್ನು ಕತ್ತರಿಸಿದನು.

 

ಪಾರ್ತ್ಥೋ ದ್ರೋಣಸುತಸ್ಯಾಶ್ವರಶ್ಮೀಂಶ್ಚಿಚ್ಛೇದ ಸಾಯಕೈಃ ।

ವಿರಶ್ಮಯೋ ಹಯಾ ದ್ರೌಣೇಃ ಪುನಃ ಪಾರ್ತ್ಥಶರಾಹತಾಃ ॥ ೨೭.೫೯॥

 

ಅಶ್ವತ್ಥಾಮನ ಕುದುರೆಗಳು ಲಗಾಮನ್ನು ಕಳೆದುಕೊಂಡು, ಅರ್ಜುನನ ಬಾಣಗಳಿಂದ ಘಾಸಿಗೊಂಡು, ದೂರ ಓಡಿ ಹೋದವು.

No comments:

Post a Comment