‘ಮಾನುಷೇಷ್ವಧಮಾಃ
ಕಿಞ್ಚಿದ್ ದ್ವೇಷಯುಕ್ತಾಃ ಸದಾ ಹರೌ ।
‘ದುಃಖನಿಷ್ಠಾಸ್ತತಸ್ತೇsಪಿ ನಿತ್ಯಮೇವ ನ ಸಂಶಯಃ ॥೧.೧೧೮॥
ಮನುಷ್ಯರಲ್ಲಿ ಅಧಮರು ಪರಮಾತ್ಮನನ್ನು ಸದಾ ದ್ವೇಷ ಮಾಡುವವರಾಗಿರುತ್ತಾರೆ. ಆ ಕಾರಣದಿಂದ ಅವರು ಎಂದೆಂದೂ ದುಃಖದಲ್ಲಿರುತ್ತಾರೆ. ಇದರಲ್ಲಿ ಯಾವುದೇ
ಸಂಶಯವಿಲ್ಲ.
‘ಮದ್ಧ್ಯಮಾ ಮಿಶ್ರಭೂತತ್ವಾನ್ನಿತ್ಯಂ ಮಿಶ್ರಫಲಾಃ ಸ್ಮೃತಾಃ ।
‘ಕಿಞ್ಚಿದ್ಭಕ್ತಿಯುತಾ ನಿತ್ಯಮುತ್ತಮಾಸ್ತೇನ ಮೋಕ್ಷಿಣಃ ॥೧.೧೧೯॥
ಮಧ್ಯಮ ಮಾನವರಿಗೆ
ಒಮ್ಮೆ ಸ್ವಲ್ಪ ದೇವರ ಮೇಲೆ ಭಕ್ತಿ
ಇದ್ದರೆ, ಇನ್ನೊಮ್ಮೆ ಸ್ವಲ್ಪ ದ್ವೇಷವಿರುತ್ತದೆ.. ಅದರಿಂದಾಗಿ ಅವರು ಸುಖ-ದುಃಖವೆರಡನ್ನೂ
ಅನುಭವಿಸುತ್ತಾರೆ. ಆದರೆ ಉತ್ತಮ ಮಾನವರು ಕೇವಲ
ಭಕ್ತಿಯುತರಾಗಿರುತ್ತಾರೆ. ಅದರಿಂದಾಗಿ ಅವರು ಮುಕ್ತಿಯನ್ನು
ಹೊಂದುತ್ತಾರೆ.
‘ಬ್ರಹ್ಮಣಃ ಪರಮಾ
ಭಕ್ತಿಃ ಸರ್ವೇಭ್ಯಃ ಪರಮಸ್ತತಃ’ ।
ಇತ್ಯಾದೀನಿ ಚ ವಾಕ್ಯಾನಿ ಪುರಾಣೇಷು ಪೃಥಕ್ಪೃಥಕ್ ॥೧.೧೨೦॥
“ಚತುರ್ಮುಖನಿಗೆ
ಭಗವದ್ಭಕ್ತಿಯು ಎಲ್ಲರಿಗಿಂತ ಹೆಚ್ಚು. ಆ
ಕಾರಣದಿಂದ ಅವರು ಎಲ್ಲರಿಗಿಂತ ಉತ್ಕೃಷ್ಟರಾಗಿದ್ದಾರೆ”. ಇವೇ ಮೊದಲಾದ ವಾಕ್ಯಗಳು ಬೇರೆಬೇರೆ
ಪುರಾಣಗಳಲ್ಲಿ ಬೇರೆಬೇರೆ ರೀತಿಯಾಗಿ ಹೇಳಲ್ಪಟ್ಟಿದೆ.
‘ಷಣ್ಣವತ್ಯಙ್ಗುಲೋ
ಯಸ್ತು ನ್ಯಗ್ರೋಧಪರಿಮಣ್ಡಲಃ ।
‘ಸಪ್ತಪಾದಶ್ಚತುರ್ಹಸ್ತೋ
ದ್ವಾತ್ರಿಂಶಲ್ಲಕ್ಷಣೈರ್ಯ್ಯುತಃ ॥೧.೧೨೧॥
ದೇವತೆಗಳನ್ನು ಮತ್ತು ದೇವತೆಗಳ ಗುಣಗಳನ್ನು ನಮಗೆ ಪರಿಚಯಿಸುವುದು ಅವರ ದೇಹ ಲಕ್ಷಣ. (ರೂಪ ಬೇರೆ, ಲಕ್ಷಣ ಬೇರೆ).
ಅವರ ದೇಹ ಎನ್ನುವುದು ೩೨
ಲಕ್ಷಣಗಳಿಂದ ಕೂಡಿರುತ್ತದೆ. ಮುಖ್ಯವಾಗಿ ೯೬ ಅಂಗುಲ ಎತ್ತರ ಮತ್ತು
ಅಗಲ ಅಥವಾ ವಿಸ್ತಾರವಾದ ಸುತ್ತಳತೆ ಅವರಿಗಿರುತ್ತದೆ. ಇನ್ನೊಂದು ರೀತಿಯಲ್ಲಿ ಹೇಳಬೇಕೆಂದರೆ:
ಚತುರ ಹಸ್ತಃ , ಸಪ್ತಪಾದಃ. ಈ ರೀತಿಯಾದ ಲಕ್ಷಣಗಳಿರುವವರನ್ನು ದೇವತೆ ಎಂದೇ ತೀರ್ಮಾನ
ಮಾಡಬೇಕು.
ಲಕ್ಷಣವನ್ನು ಬಲ್ಲವರು ಲಕ್ಷಣದ ವರ್ಣನೆಯನ್ನು ಈ ರೀತಿ
ಹೇಳಿದ್ದಾರೆ: ಪಞ್ಚದೀರ್ಘಃ ಪಞ್ಚಸೂಕ್ಷ್ಮಃ ಸಪ್ತರಕ್ತಃ ಷಡುನ್ನತಃ । ತ್ರಿಪೃಥುಲಘುಗಮ್ಭೀರೋ ದ್ವಾತ್ರಿಂಶಲ್ಲಕ್ಷಣಸ್ತ್ವಿತಿ ॥ ೩೨ ಲಕ್ಷಣ ಅಂದರೆ: ತೋಳು, ಮೂಗು, ಕೆನ್ನೆ, ಕಣ್ಣು
ಮತ್ತು ಎದೆ - ಈ ಐದು ಉಬ್ಬಿದ್ದು ಧೀರ್ಘವಾಗಿರಬೇಕು. ಬೆರಳುಗಳ ನಡುವಣ ಜಾಗ, ಬೆರಳುಗಳು, ಚರ್ಮ, ಕೂದಲು ಮತ್ತು
ದಂತ - ಈ ಐದು ಸೂಕ್ಷ್ಮವಾಗಿರಬೇಕು. ಕೈಯ ಕೆಳಗಿನ ಭಾಗ, ಕಾಲ ಕೆಳಗಿನ ಭಾಗ, ಕಣ್ಣಿನ ತುದಿ, ನಾಲಿಗೆ,
ತುಟಿ, ಉಗುರು ಮತ್ತು ಅಂಗುಳು - ಈ ಏಳು ಕೆಂಪಾಗಿರಬೇಕು. ಕತ್ತು, ತೊಡೆ ಮತ್ತು ಪೃಷ್ಟಭಾಗ - ಈ ಮೂರು ಲಘುವಾಗಿ ದೇಹಕ್ಕೆ
ತಕ್ಕನಾಗಿರಬೇಕು. ಮನಸ್ಸು, ನಾದ ಮತ್ತು ಹೊಕ್ಕಳು - ಈ
ಮೂರು ಗಂಭೀರ ಅಥವಾ ಆಳವಾಗಿರಬೇಕು.
‘ಅಸಂಶಯಃ
ಸಂಶಯಚ್ಛಿದ್ ಗುರುರುಕ್ತೋ ಮನೀಷಿಭಿಃ’ ।
‘ತಸ್ಮಾದ್ ಬ್ರಹ್ಮಾ
ಗುರುರ್ಮ್ಮುಖ್ಯಃ ಸರ್ವೇಷಾಮೇವ ಸರ್ವದಾ ॥೧.೧೨೨॥
‘ಅನ್ಯೇsಪಿ ಸ್ವಾತ್ಮನೋ ಮುಖ್ಯಾಃ ಕ್ರಮಾದ್ ಗುರವ ಈರಿತಾಃ ।
‘ಕ್ರಮಾಲ್ಲಕ್ಷಣಹೀನಾಶ್ಚ
ಲಕ್ಷಣಾಲಕ್ಷಣೈಃ ಸಮಾಃ ॥೧.೧೨೩॥
‘ಮಾನುಷಾ ಮದ್ಧ್ಯಮಾಃ ಸಮ್ಯಗ್ ದುರ್ಲ್ಲಕ್ಷಣಯುತಃ ಕಲಿಃ ।
‘ಸಮ್ಯಗ್
ಲಕ್ಷಣಸಮ್ಪನ್ನೋ ಯದ್ ದದ್ಯಾತ್ ಸುಪ್ರಸನ್ನಧೀಃ ॥೧.೧೨೪॥
‘ಶಿಷ್ಯಾಯ ಸತ್ಯಂ
ಭವತಿ ತತ್ ಸರ್ವಂ ನಾತ್ರ ಸಂಶಯಃ ।
‘ಅಗಮ್ಯತ್ವಾದ್ಧರಿಸ್ತಸ್ಮಿನ್ನಾವಿಷ್ಟೋ
ಮುಕ್ತಿದೋ ಭವೇತ್’ ॥೧.೧೨೫॥
‘ನಾತಿಪ್ರಸನ್ನಹೃದಯೋ
ಯದ್ ದದ್ಯಾದ್ ಗುರುರಪ್ಯಸೌ ।
‘ನ ತತ್ ಸತ್ಯಂ
ಭವೇತ್ ತಸ್ಮಾದರ್ಚ್ಚನೀಯೋ ಗುರುಃ ಸದಾ ॥೧.೧೨೬॥
ಈ ಲಕ್ಷಣಗಳಿಂದ ಕೂಡಿಕೊಂಡಿರುವವನಿಗೆ ಸಂಶಯ ಇರಬಾರದು. ಆತ ಬೇರೊಬ್ಬರ ಸಂಶಯವನ್ನು ನಾಶ ಮಾಡುವವನಾಗಿರಬೇಕು. ಅಂತವರನ್ನು ‘ಗುರು’ ಎಂದು ಕರೆಯುತ್ತಾರೆ.
[ಈ ಎಲ್ಲಾ
ಲಕ್ಷಣಗಳನ್ನು ಮಹಾಭಾರತಾದಿ ಗ್ರಂಥಗಳಲ್ಲಿ ಬರುವ
ದೇವತೆಗಳಲ್ಲಿ ಎಷ್ಟೆಷ್ಟು ಕಾಣುತ್ತೇವೋ, ಅದಕ್ಕನುಗುಣವಾಗಿ ಅವರಲ್ಲಿ ಶ್ರೇಷ್ಠತೆ ಇದೆ
ಎನ್ನುವುದನ್ನು ತಿಳಿದುಕೊಳ್ಳಬೇಕು. ಮಹಾಭಾರತದಲ್ಲಿ ಬರುವ
ಒಂದೊಂದು ವಿಶೇಷಣಗಳಲ್ಲೂ ಈ ೩೨ ಲಕ್ಷಣ ಏನಿದೆ, ಅದನ್ನು ಹುಡುಕಬೇಕು ಮತ್ತು ಅದರಿಂದ
ತಾರತಮ್ಯ ಚಿಂತನೆ ಮಾಡಬೇಕು. ಶಿಲ್ಪಿ ಕಲೆಯಲ್ಲೂ ಕೂಡಾ ಈ ಅಂಶಗಳನ್ನು ತಿಳಿದಿರಬೇಕು. ತಂತ್ರಸಾರ ಸಂಗ್ರಹದಲ್ಲಿ
ಒಂದು ದೇವತಾ ಮೂರ್ತಿಯನ್ನು ಮಾಡಬೇಕೆಂದಾದರೆ ಈ ೩೨ ಲಕ್ಷಣಗಳನ್ನಿಟ್ಟುಕೊಂಡು ಯಾವ ರೀತಿ ಮಾಡಬೇಕು
ಎನ್ನುವ ವಿವರಣೆಯನ್ನು ಆಚಾರ್ಯರು ನೀಡುವುದನ್ನು ನಾವು ಕಾಣಬಹುದು].
ಸಂಸಾರದಲ್ಲಿ
ಬ್ರಹ್ಮ ಮತ್ತು ಮುಖ್ಯಪ್ರಾಣನಿಗೆ ಈ ಎಲ್ಲಾ ೩೨ ಲಕ್ಷಣಗಳು ಇರುತ್ತವೆ. ಹೀಗಾಗಿ ಜೀವರಾಶಿಯಲ್ಲಿ ಇವರೇ ಮುಖ್ಯವಾದ ಗುರುಗಳು. ಇವರ ನಂತರ ಬರುವವರಿಗೆ
ಕೆಲವು ಲಕ್ಷಣಗಳು ಇರುವುದಿಲ್ಲ. ಅಥವಾ ಕೆಲವು ದುರ್ಲಕ್ಷಣಗಳಿರುತ್ತವೆ. ಒಟ್ಟಿನಲ್ಲಿ ಹೇಳಬೇಕೆಂದರೆ: ಅಂಗಾಂಗ ಎನ್ನುವುದು
ಪ್ರಮಾಣಾನುಗತವಾಗಿರಬೇಕು. ಇದರರ್ಥ ೭ ಅಡಿ ಎತ್ತರ ಇರಬೇಕು ಎಂದಲ್ಲ. ಪ್ರಮಾಣಾನುಗತವಾಗಿರುವ
ಅವಯವಗಳಿದ್ದರೆ ಅದು ಲಕ್ಷಣ ಮತ್ತು ಅಲ್ಲಿ ಗುಣವಿದೆ ಎಂದು ಚಿಂತನೆ ಮಾಡಬೇಕು.
ಇದನ್ನು ವಿಸ್ತಾರವಾಗಿ ಚಿಂತನೆ ಮಾಡುವುದಾದರೆ: ಬ್ರಹ್ಮದೇವರು
ಮತ್ತು ಸರಸ್ವತಿ ೩೨ ಲಕ್ಷಣ ಉಳ್ಳವರಾಗಿರುತ್ತಾರೆ. ಸದಾಶಿವ ೨೮ ಲಕ್ಷಣ ಉಳ್ಳವನಾಗಿರುತ್ತಾನೆ.
ಅಂದರೆ ನಾಲ್ಕು ಲಕ್ಷಣ ಅವನಲ್ಲಿ ಕಾಣುವುದಿಲ್ಲ.
ಇನ್ನು ಇಂದ್ರ ೨೪ ಲಕ್ಷಣವುಳ್ಳವನಾಗಿದ್ದಾನೆ. ಅಂದರೆ
ಶಿವನಿಗಿಂತ ೪ ಲಕ್ಷಣ ಕಡಿಮೆ. ಅದೇ ರೀತಿ ೧೬ ಲಕ್ಷಣದ ವರೆಗೆ
ದೇವತೆಗಳಿರುತ್ತಾರೆ. ಮೊದಲು ವೇದವನ್ನು ಕಂಡ ಋಷಿಗಳಿಗೆ ಕನಿಷ್ಠಪಕ್ಷ ೮ ಲಕ್ಷಣಗಳು ಇದ್ದೇ
ಇರುತ್ತವೆ. ಕೆಲವೊಮ್ಮೆ ದೇವತೆಗಳಲ್ಲಿಯೂ ಲಕ್ಷಣಾಭಾವ ಅಥವಾ ನ್ಯೂನ ಲಕ್ಷಣ ಇರುತ್ತವೆ.
ಮಹಾಭಾರತದಲ್ಲಿ ಅರ್ಜುನನ ದೋಷವನ್ನು
... ದೀರ್ಘ ಪಿನ್ಡಿಕಃ ವೃಷಣಸ್ಯ
ಕಿಂಚಿದಾದಿಕ್ಯಮ್...ಇತ್ಯಾದಿಯಾಗಿ ಹೇಳಿದ್ದೇ ಈ ಉದ್ದೇಶಕ್ಕಾಗಿ.
ಪರಮಾತ್ಮನಿಗೂ ೩೨ ಲಕ್ಷಣಗಳಿವೆ , ಶ್ರೀಲಕ್ಷ್ಮಿಗೂ ೩೨
ಲಕ್ಷಣಗಳಿವೆ , ಮುಖ್ಯಪ್ರಾಣನಿಗೂ ಕೂಡಾ ೩೨ ಲಕ್ಷಣಗಳಿವೆ. ಆದರೆ ಇವೆಲ್ಲವೂ ಸಮ ಅಲ್ಲ. ಸ್ಫುಟತ್ವದಲ್ಲಿ ಅಲ್ಲಿಯೂ ತಾರತಮ್ಯ ಇದ್ದೇ ಇದೆ.
ಇದರಿಂದಾಗಿ ಒಬ್ಬ ವ್ಯಕ್ತಿಯನ್ನು ಪುರಾಣದಲ್ಲಿ ನಾವು
ಹುಡುಕಬೇಕೆಂದಾದರೆ, ಯಾರಿಗೆ ೩೨ ಲಕ್ಷಣಗಳನ್ನು ಸ್ಫುಟವಾಗಿ ತೋರುವಂತೆ ಹೇಳಿರುತ್ತಾರೋ
ಅವರ ಗುಣಗಳನ್ನು ಚಿಂತನೆ ಮಾಡಬೇಕು. ವೇದವ್ಯಾಸರ ಸೌಂದರ್ಯ ಮೀಮಾಂಸೆಯನ್ನು ನೋಡಿದರೆ ಅಲ್ಲಿ ಗುಣದ ಪರಿಜ್ಞಾನ ಅಡಗಿರುವುದು ತಿಳಿಯುತ್ತದೆ. ಈ ಎಲ್ಲಾ
ಹಿನ್ನೆಲೆಯನ್ನರಿತು ಮಹಾಭಾರತ-ರಾಮಾಯಣಾದಿಗಳಲ್ಲಿ ನಾವು ಲಕ್ಷಣದ ವಿವರಣೆಯನ್ನು ಕಾಣಬೇಕು.
[ ಮಧ್ವ ವಿಜಯದಲ್ಲಿ ಮಧ್ವಾಚಾರ್ಯರ ದೈಹಿಕ ಲಕ್ಷಣ, ಸೌಂದರ್ಯ
ಇತ್ಯಾದಿಗಳನ್ನೂ ವರ್ಣನೆ ಮಾಡುತ್ತಾರೆ. ಕನಕಾತುಲ-ತಾಲ-ಸನ್ನಿಭಃ ಕಮಲಾಕ್ಷೋ
ವಿಮಲೇನ್ದು-ಸನ್ಮುಖಃ । ಗಜ-ರಾಜ ಗತಿರ್ಮಹಾ-ಭುಜಃ ಪ್ರತಿಯಾನ್ ಕೋsಯಮಪೂರ್ವ-ಪೂರುಷಃ ॥ ಇತ್ಯಾದಿಯಾಗಿ ಅಲ್ಲಿ ವರ್ಣನೆ
ಬರುತ್ತದೆ. ಸನ್ಯಾಸಿಯ ದೇಹಲಕ್ಷಣವನ್ನು ಹೇಳಿದ
ಉದ್ದೇಶ ಏನು ಎನ್ನುವುದು ನಮಗೆ ಮೇಲಿನ ಮಾತಿನಿಂದ ಅರ್ಥವಾಗುತ್ತದೆ].
ಲಕ್ಷಣ ಇಲ್ಲದವರು ಕೆಳಗಿದ್ದರೆ, ಲಕ್ಷಣ ಮತ್ತು ಅವಲಕ್ಷಣ ಎರಡೂ
ಕೂಡಾ ಇರುವವರು ಅವರಿಗಿಂತ ಮೇಲಿರುತ್ತಾರೆ. ಸಜ್ಜನರಾದ
ಮನುಷ್ಯರು ಮಧ್ಯಮರಾಗಿರುತ್ತಾರೆ. ದೈತ್ಯರೆಲ್ಲರೂ ದುರ್ಲಕ್ಷಣದಿಂದ ಕೂಡಿದ್ದರೆ, ಕಲಿ
ಏನಿದ್ದಾನೆ, ಅವನು ಅತ್ಯಂತ ದುರ್ಲಕ್ಷಣದಿಂದ ಕೂಡಿ ಕೆಳಗಿರುತ್ತಾನೆ.
ಒಳ್ಳೆಯ ಲಕ್ಷಣದಿಂದ ಕೂಡಿರುವ ಗುರು ಪ್ರಸನ್ನನಾಗಿ ಏನನ್ನು
ಕೊಡುತ್ತಾನೋ, ಅದು ಶಿಷ್ಯನಿಗೆ
ಫಲಪ್ರದವಾಗುತ್ತದೆ.
ದೇವರನ್ನು ಗುರುಗಳ ಮುಖೇನವೇ ತಿಳಿದು ಮೋಕ್ಷವನ್ನು ಪಡೆಯಬೇಕು.
ಗುರುಗಳಲ್ಲಿ ಈ ಲಕ್ಷಣ ಎನ್ನುವುದು ಒಂದೊಂದಾದರೂ ಇರುತ್ತದೆ.
ಪ್ರಸನ್ನ
ಹೃದಯನಾಗದೇ ಒತ್ತಾಯದಿಂದಲೋ, ಪರಿಸ್ಥಿತಿಯ
ಒತ್ತಡದಿಂದಲೋ ಗುರುಗಳೇ ವಿದ್ಯೆಯನ್ನು ಕೊಟ್ಟರೂ
ಕೂಡಾ, ಅದು ಫಲಪ್ರದವಾಗುತ್ತದೆ ಅನ್ನುವಂತಿಲ್ಲ. ಹಾಗಾಗಿ
ಗುರುಗಳನ್ನು ಅತ್ಯಾದರದಿಂದ ನೋಡುವುದು ಶಿಷ್ಯನ ಕರ್ತವ್ಯ.
‘ಸ್ವಾವರಾಣಾಂ
ಗುರುತ್ವಂ ತು ಭವೇತ್ ಕಾರಣತಃ ಕ್ವಚಿತ್ ।
‘ಮರ್ಯ್ಯಾದಾರ್ತ್ಥಂ ತೇsಪಿ ಪೂಜ್ಯಾ ನತು
ಯದ್ವತ್ ಪರೋ ಗುರುಃ’ ।
ಇತ್ಯೇತತ್ ಪಞ್ಚರಾತ್ರೋಕ್ತಂ ಪುರಾಣೇಷ್ವನುಮೋದಿತಮ್ ॥೧.೧೨೭॥
ಕೆಲವೊಮ್ಮೆ
ಶಿಷ್ಯನಿಗಿಂತ ಸ್ವಭಾವ ಯೋಗ್ಯತೆಯಲ್ಲಿ
ಚಿಕ್ಕವರಿರುವವರಿಗೆ ಯಾವುದೋ ಒಂದು ಕಾರಣದಿಂದ ಗುರುತ್ವ ಬಂದಿರುತ್ತದೆ. ಕಾಲಕ್ರಮೇಣ ತನ್ನ ಸ್ವರೂಪದ ಅರಿವಿನಿಂದ ಶಿಷ್ಯನಿಗೆ ಈ
ಸತ್ಯ ತಿಳಿದಾಗ, ಆತ ತನ್ನ ಗುರುವನ್ನು ಧಿಕ್ಕರಿಸಿ ಹೊರಡುವಂತಿಲ್ಲ. ಲೋಕದಲ್ಲಿನ ಮರ್ಯಾದೆಗಾಗಿ ಆತ ತನ್ನ ಗುರುವನ್ನು
ಪೂಜಿಸತಕ್ಕದ್ದು. ಇದು ಪಂಚರಾತ್ರ ಪುರಾಣಗಳಲ್ಲಿ
ಹೇಳಿರುವ ಮಾತು. ಈ ಎಲ್ಲಾ ಅಂಶಗಳನ್ನು
ನೆನಪಿನಲ್ಲಿಟ್ಟುಕೊಂಡು ನಾವು ಮಹಾಭಾರತವನ್ನು ಅಧ್ಯಯನ ಮಾಡಬೇಕು.
‘ಯದಾ
ಮುಕ್ತಿಪ್ರದಾನಸ್ಯ ಸ್ವಯೋಗ್ಯಂ ಪಶ್ಯತಿ ದ್ಧ್ರುವಮ್ ।
‘ರೂಪಂ ಹರೇಸ್ತದಾ
ತಸ್ಯ ಸರ್ವಪಾಪಾನಿ ಭಸ್ಮಸಾತ್ ॥೧.೧೨೮॥
‘ಯಾನ್ತಿ
ಪೂರ್ವಾಣ್ಯುತ್ತರಾಣಿ ನ ಶ್ಲೇಷಂ ಯಾನ್ತಿ ಕಾನಿಚಿತ್ ।
‘ಮೋಕ್ಷಶ್ಚ
ನಿಯತಸ್ತಸ್ಮಾತ್ ಸ್ವಯೋಗ್ಯಹರಿದರ್ಶನೇ’ ॥೧.೧೨೯॥
ಭವಿಷ್ಯತ್ಪರ್ವವಚನಮಿತ್ಯೇತತ್ ಸೂತ್ರಗಂ ತಥಾ ।
ಶ್ರುತಿಶ್ಚ ತತ್ಪರಾ ತದ್ವತ್ ತದ್ಯಥೇತ್ಯವದತ್
ಸ್ಫುಟಮ್ ಸ್ಪುಟಮ್ ॥೧.೧೩೦॥
ಯಾವಾಗ ನಾವು ನಮಗೆ
ಯೋಗ್ಯವಾದ, ನಮ್ಮ ಬಿಂಬವಾಗಿರುವ
ಪರಮಾತ್ಮನ ರೂಪವನ್ನು ನೋಡುತೇವೋ, ಆಗ ನಮ್ಮೆಲ್ಲಾ ಪಾಪಗಳು ಭಸ್ಮವಾಗುತ್ತವೆ.
ಹಳೆಯ ಪಾಪಗಳು ಸುಟ್ಟು ಹೋಗುತ್ತವೆ. ಆಗಾಮಿ ಪಾಪಗಳ ಲೇಪವೇ
ಆಗುವುದಿಲ್ಲ. (ಪ್ರಾರಬ್ಧಕರ್ಮ ಏನಿದೆ ಅದನ್ನು ಎಲ್ಲರೂ ಅನುಭವಿಸಲೇಬೇಕು). ಇದರಿಂದಾಗಿ
ಸಂಸಾರದಿಂದ ಬಿಡುಗಡೆಯು ಖಂಡಿತ ಆಗೇ ಆಗುತ್ತದೆ.
ಒಟ್ಟಿನಲ್ಲಿ ಹೇಳಬೇಕೆಂದರೆ: ಯಾವ ಜೀವನಿಗೆ
ಅವನಿಗೆ ಯೋಗ್ಯವಾಗಿರುವ ಬಿಂಬರೂಪ
ಸಾಕ್ಷಾತ್ಕಾರವಾಗುವುದೋ ಆಗ ಮೋಕ್ಷ ಪ್ರಾಪ್ತವಾಗುತ್ತದೆ.
ಈ ಮಾತನ್ನು ಭವಿಷ್ಯತ್ ಪರ್ವದಲ್ಲಿ ಹೇಳಲಾಗಿದೆ.
ಬ್ರಹ್ಮಸೂತ್ರದಲ್ಲೂ ಕೂಡಾ ‘ತದಧಿಗಮ
ಉತ್ತರಪೂರ್ವಾಘಯೋರಶ್ಲೇಷವಿನಾಶೌ ತದ್ವ್ಯಪದೇಶಾತ್’ ॥೪.೧.೧೩॥ ಎಂದು ಹೇಳಿದರೆ, ‘ತದ್ಯಥಾ ಪುಷ್ಕರಪಲಾಶ ಆಪೋ ನ ಶ್ಲಿಷ್ಯಂತೇ
ಏವಮೇವಂವಿದಿ ಪಾಪಂ ಕರ್ಮ ನ ಷ್ಯನ್ತೇ’ ಎಂದು ಛಾಂದೋಗ್ಯ
ಉಪನಿಷತ್ತು(೪.೭.೩)ಕೂಡಾ ಈ
ಮಾತನ್ನೇ ಹೇಳುತ್ತದೆ.
‘ಮುಕ್ತಾಸ್ತು ಮಾನುಷಾ ದೇವಾನ್ ದೇವಾ ಇನ್ದ್ರಂ ಸ ಶಙ್ಕರಮ್ ।
‘ಸ ಬ್ರಹ್ಮಾಣಂ ಕ್ರಮೇಣೈವ ತೇನ ಯಾನ್ತ್ಯಖಿಲಾ ಹರಿಮ್ ॥೧.೧೩೧॥
ಕಲ್ಪಾಂತ್ಯದಲ್ಲಿ
ಮನುಷ್ಯ ಮುಕ್ತರು ದೇವತೆಗಳಲ್ಲಿ ಸೇರುತ್ತಾರೆ. ದೇವತೆಗಳು ಇಂದ್ರನನ್ನು ಸೇರುತ್ತಾರೆ. ಇಂದ್ರ
ಶಂಕರನನ್ನು ಸೇರುತ್ತಾನೆ. ಶಂಕರ ಬ್ರಹ್ಮನನ್ನು
ಸೇರುತ್ತಾನೆ. ಬ್ರಹ್ಮನೊಂದಿಗೆ ಎಲ್ಲರೂ ಮುಕ್ತಿಗೆ ತೆರಳುತ್ತಾರೆ.
‘ಉತ್ತರೋತ್ತರವಶ್ಯಾಶ್ಚ ಮುಕ್ತಾ ರುದ್ರಪುರಸ್ಸರಾಃ ।
‘ನಿರ್ದ್ದೋಷಾ ನಿತ್ಯಸುಖಿನಃ ಪುನರಾವೃತ್ತಿವರ್ಜ್ಜಿತಾಃ ॥೧.೧೩೨॥
‘ಸ್ವೇಚ್ಛಯೈವ ರಮನ್ತೇsತ್ರ ನಾನಿಷ್ಟಂ ತೇಷು ಕಿಞ್ಚನ ।
‘ಅಸುರಾಃ ಕಲಿಪರ್ಯ್ಯನ್ತಾ ಏವಂ ದುಃಖೋತ್ತರೋತ್ತರಾಃ । ॥೧.೧೩೩॥
‘ಕಲಿರ್ದ್ದುಃಖಾಧಿಕಸ್ತೇಷು ತೇsಪ್ಯೇವಂ ಬ್ರಹ್ಮವದ್ ಗಣಾಃ ।
‘ತಥಾsನ್ಯೇsಪ್ಯಸುರಾಃ ಸರ್ವೇ ಗಣಾ ಯೋಗ್ಯತಯಾ ಸದಾ ॥೧.೧೩೪॥
‘ಬ್ರಹ್ಮೈವಂ ಸರ್ವಜೀವೇಭ್ಯಃ ಸದಾ ಸರ್ವಗುಣಾಧಿಕಃ ।
‘ಮುಕ್ತೋsಪಿ
ಸರ್ವಮುಕ್ತಾನಾಮಾಧಿಪತ್ಯೇ ಸ್ಥಿತಃ ಸದಾ ।
‘ಆಶ್ರಯಸ್ತಸ್ಯ ಭಗವಾನ್ ಸದಾ ನಾರಾಯಣಃ ಪ್ರಭುಃ’ ॥೧.೧೩೫॥
ಮುಕ್ತಿಯನ್ನು ಸೇರಿದ ಜೀವರು ಮುಕ್ತಿಯಲ್ಲಿಯೂ ಕೂಡಾ ತಮಗಿಂತ
ಯಾರು ಉತ್ತಮರಿದ್ದಾರೆ, ಅವರಿಗೆ ವಶರಾಗಿಯೇ ಇರುತ್ತಾರೆ. ಮುಕ್ತಿಯಲ್ಲಿ ಯಾವ ದೋಷಗಳೂ
ಇರುವುದಿಲ್ಲ. ಅಲ್ಲಿ ಜೀವರು ನಿತ್ಯವೂ ಸುಖವಾಗಿರುತ್ತಾರೆ.
ಒಮ್ಮೆ ಮುಕ್ತಿಯನ್ನು ಸೇರಿದರೆ ಮತ್ತೆ ಮರಳಿ ಸಂಸಾರಕ್ಕೆ
ಬರುವುದಿಲ್ಲ. [ಭೂಲೋಕದಲ್ಲಿ ವಿಹರಿಸಬಹುದು ಆದರೆ ಮರಳಿ
ಸಂಸಾರಕ್ಕೆ ಪ್ರವೇಶವಿಲ್ಲ] ಮುಕ್ತರು
ಮೋಕ್ಷದಲ್ಲಿ ತಮ್ಮ ಸ್ವರೂಪ ಇಚ್ಛಾನುಸಾರ ಭೋಗಿಸುತ್ತಾರೆ,
ಕ್ರೀಡಿಸುತ್ತಾರೆ, ವಿಹರಿಸುತ್ತಾರೆ. ಅವರಲ್ಲಿ ಅನಿಷ್ಟದ ಲವಲೇಶವೂ ಇರುವುದಿಲ್ಲ.
ಯಾವ ರೀತಿ ಮೋಕ್ಷಯೋಗ್ಯರು ಮೇಲಕ್ಕೇರಿ ಚತುರ್ಮುಖನೊಂದಿಗೆ
ಮುಕ್ತಿಯನ್ನು ಪಡೆಯುತ್ತಾರೋ, ಅದೇ ರೀತಿ ಕಲಿಯ
ತನಕ ಇರುವ ದೈತ್ಯರು ಅಧೋಗತಿಯನ್ನು ಹೊಂದಿ ದುಃಖವನ್ನು ಪಡೆಯುತ್ತಾರೆ(ಅಂಧಂತಮಸ್ಸನ್ನು
ಪಡೆಯುತ್ತಾರೆ). ಅಂಧಂತಮಸ್ಸನ್ನು
ಹೊಂದುವವರಲ್ಲಿ ಎಲ್ಲರಿಗಿಂತಲೂ ಹೆಚ್ಚು ದುಃಖವಿರುವುದು ಕಲಿಗೆ. ಬ್ರಹ್ಮ ಪದವಿಗೆ ಯೋಗ್ಯವಾದ ಜೀವಗಣಗಳು ಹೇಗಿರುತ್ತಾರೋ
, ಅದೇ ರೀತಿ ಕಲಿ ಪದವಿಗೆ ಯೋಗ್ಯವಾದ ಜೀವ ಗಣವೂ
ಇರುತ್ತದೆ.
ಯಾವ ರೀತಿ
ದೇವತೆಗಳ ವಿವಿಧ ಪದವಿಗೆ(ಶಿವ, ಇಂದ್ರ, ಇತ್ಯಾದಿ ಪದವಿಗೆ) ಯೋಗ್ಯತೆಯುಳ್ಳ ಜೀವಗಣಗಳು ಇರುತ್ತವೋ, ಹಾಗೇ ಅಸುರ
ಪದವಿಗೆ(ಕಾಲನೇಮಿ, ಜರಾಸಂಧ, ಮೊದಲಾದ ಅಸುರ ಪದವಿಗೆ) ಯೋಗ್ಯರಾದ ಜೀವಗಣಗಳಿರುತ್ತವೆ. ಅವರವರ ಸಾಧನೆಗೆ
ಅನುಕೂಲವಾಗಿ ಆಯಾ ಯೋಗ್ಯತೆಯ ಪದವಿಯನ್ನು ಅವರು ಹೊಂದುತ್ತಾರೆ.
ಹೇಗೆ ಕಲಿ
ದುಃಖದಿಂದ ಮಿಗಿಲಾಗಿ, ದೈತ್ಯರನ್ನೆಲ್ಲಾ ನಿಯಂತ್ರಣ ಮಾಡಿ, ಎಲ್ಲಾ ಸಜ್ಜನರ ಮನಸ್ಸನ್ನು ಕೆಡಿಸಿ,
ಆ ರೀತಿಯಾದ ಪಾಪವನ್ನು ಹೊಂದಿ, ದುಃಖದಿಂದ ಎಲ್ಲರಿಗಿಂತ ಮಿಗಿಲಾಗಿ ಇರುತ್ತಾನೋ, ಹಾಗೆಯೇ, ಬ್ರಹ್ಮದೇವರು ಗುಣಗಳಲ್ಲಿ ಎಲ್ಲಾ ಜೀವರಿಗಿಂತ ಮಿಗಿಲಾಗಿದ್ದು,
ಎಲ್ಲಾ ಸಜ್ಜೀವರ ಸಾಧನೆಗೆ ಅನುಕೂಲರಾಗಿರುತ್ತಾರೆ. ಸಜ್ಜೀವರ ಸಾಧನೆಯನ್ನು ಮಾಡಿಸಿದ ಪುಣ್ಯವನ್ನ ಬ್ರಹ್ಮದೇವರು
ಹೊಂದಿರುತ್ತಾರೆ. ಎಲ್ಲಾ ಸಜ್ಜೀವರ ಶಾಸ್ತ್ರ ಪ್ರವಚನ ಪರಂಪರೆಯಿಂದ ಬರತಕ್ಕಂತಹ ಸುಖ
ಅವರಿಗಾಗುತ್ತದೆ. ಬ್ರಹ್ಮದೇವರು ಮುಕ್ತರಾಗಿ ಎಲ್ಲಾ ಮುಕ್ತರಿಗೂ ಕೂಡಾ ಅಧಿಪತಿಯಾಗಿರುತ್ತಾರೆ.
ಇಂತಹ ಬ್ರಹ್ಮನಿಗೆ ಭಗವಾನ್ ನಾರಾಯಣನು ಯಾವಾಗಲೂ ಒಡೆಯ ಮತ್ತು ಆಶ್ರಯದಾತನಾಗಿರುತ್ತಾನೆ. (ಹೀಗಾಗಿ ವಿಷ್ಣು ಸಹಸ್ರನಾಮದಲ್ಲಿ
ಭಗವಂತನನ್ನು ಮುಕ್ತಾನಾಂ ಪರಮಾಗತಿಃ ಎನ್ನುವ ನಾಮದಿಂದ ಸಂಬೋಧಿಸಲಾಗಿದೆ).
[ಈ
ಜಗತ್ತು ಕಲಿ ಹಾಗೂ ಬ್ರಹ್ಮದೇವರ ಆಡುಂಬೊಲ. ಒಂದು
ತುದಿಯಲ್ಲಿ(ಮೋಕ್ಷದ ಕಡೆ) ಬ್ರಹ್ಮ ಮತ್ತು ಇನ್ನೊಂದು ತುದಿಯಲ್ಲಿ(ಅಂಧಂತಮಸ್ಸಿನ ಕಡೆ)
ಕಲಿ. ಆಯಾ ಸ್ಥಾನದಲ್ಲಿದ್ದು ಅವರು ತಮ್ಮ
ತಮ್ಮ ಸಾಧನೆಯನ್ನು ಮಾಡುತ್ತಿರುತ್ತಾರೆ.
ಹೀಗಾಗಿ ಈ ಜಗತ್ತಿನಲ್ಲಿರುವ ನಮ್ಮ ಮೇಲೆ
ಇವರಿಬ್ಬರ ಪ್ರಭಾವ ಇದ್ದೇ ಇರುತ್ತದೆ. ಯಾವ ರೀತಿ
ಅವರು ಬ್ರಹ್ಮಾಂಡದಲ್ಲಿ ತಮ್ಮ
ಚಟುವಟಿಕೆಯನ್ನು ನಡೆಸುತ್ತಾರೋ, ಹಾಗೇ ಈ
ಪಿಂಡಾಂಡದಲ್ಲೂ ಕೂಡಾ ಅವರ ಕಾರುಬಾರು
ನಡೆಯುತ್ತಿರುತ್ತದೆ. ಅದರಿಂದಾಗಿ ಬ್ರಹ್ಮಾಂಡದಂತೆ
ಈ ಪಿಂಡಾಂಡವೂ ಕೂಡಾ ಅವರ ಆಡುಂಬೊಲವಾಗಿರುತ್ತದೆ. ಆದ್ದರಿಂದ ನಮ್ಮ
ದೇಹವೆನ್ನುವ ಕ್ರೀಡಾಂಗಣದಲ್ಲಿ ಬ್ರಹ್ಮ ಮತ್ತು
ಕಲಿ ಈ ಇಬ್ಬರೂ ಯಥಾಪ್ರಕಾರ ಆಟವಾಡುತ್ತಿರುತ್ತಾರೆ. ಇತಿಹಾಸ ಪುರಾಣದ ಕಥೆಗಳೆಲ್ಲ ಈ ದೇಹದಲ್ಲೂ
ನಡೆಯುತ್ತಿರುತ್ತದೆ].
ಇತ್ಯೃಗ್ಯಜುಃಸಾಮಾಥರ್ವಪಞ್ಚರಾತ್ರೇತಿಹಾಸತಃ ।
ಪುರಾಣೇಭ್ಯಸ್ತಥಾsನ್ಯೇಭ್ಯಃ ಶಾಸ್ತ್ರೇಭ್ಯೋ ನಿರ್ಣ್ಣಯಃ ಕೃತಃ ॥೧.೧೩೬ ॥
ವಿಷ್ಣ್ವಾಜ್ಞಯೈವ ವಿದುಷಾ ತತ್ಪ್ರಸಾದಬಲೋನ್ನತೇಃ ।
ಆನನ್ದತೀರ್ತ್ಥಮುನಿನಾ ಪೂರ್ಣ್ಣಪ್ರಜ್ಞಾಭಿದಾಯುಜಾ ॥೧.೧೩೭॥
ತಾತ್ಪರ್ಯ್ಯಂ ಶಾಸ್ತ್ರಾಣಾಂ ಸರ್ವೇಷಾಮುತ್ತಮಂ ಮಯಾ ಪ್ರೋಕ್ತಮ್ ।
ಪ್ರಾಪ್ಯಾನುಜ್ಞಾಂ ವಿಷ್ಣೋರೇತಜ್ಜ್ಞಾತ್ವೈವ ವಿಷ್ಣುರಾಪ್ಯೋsಸೌ ॥೧.೧೩೮॥
ಈ ರೀತಿಯಾಗಿ:
ಋಗ್ವೇದ, ಯಜುರ್ವೇದ, ಸಾಮವೇದ, ಅಥರ್ವವೇದ, ಪಂಚರಾತ್ರ, ಇತಿಹಾಸ, ಪುರಾಣ, ಹೀಗೆ
ಬೇರೆಬೇರೆ ಶಾಸ್ತ್ರಗಳಿಂದ ಏನೊಂದು ನಿರ್ಣಯ ಹೊಮ್ಮಿದೆಯೋ, ಅದನ್ನು ನಾನು ಒಂದೆಡೆ ಸೇರಿಸಿ,
ಸುಖವಾಗಿ ನೀವು ತಿಳಿದುಕೊಳ್ಳಿ ಎನ್ನುವ ದೃಷ್ಟಿಯಿಂದ ಕೊಟ್ಟಿದ್ದೇನೆ.
ದೇವರ ಆಜ್ಞೆಯಂತೆ ನಾನು ಈ ಕಾರ್ಯವನ್ನು ಮಾಡಿದ್ದೇನೆ.
ನಾರಾಯಣನ ಅನುಗ್ರಹದ ಬಲದಿಂದ ಪೂರ್ಣಪ್ರಜ್ಞಾ ಎಂಬ ಹೆಸರಿನ ಆನಂದತೀರ್ಥ ಮುನಿಯಾದ ನಾನು, ಎಲ್ಲಾ
ಶಾಸ್ತ್ರದ ನಿರ್ಣಯವನ್ನು ಪರಮಾತ್ಮನ ಅನುಜ್ಞೆಯನ್ನು ಪಡೆದು ನಿಮ್ಮ ಮುಂದೆ ಇಟ್ಟಿದ್ದೇನೆ. ಇದನ್ನು ತಿಳಿದೇ ನಾರಾಯಣನನ್ನು ಹೊಂದತಕ್ಕದ್ದು.
॥ ಇತಿ ಶ್ರೀಮದಾನನ್ದತೀರ್ತ್ಥಭಗವತ್ಪಾದಕೃತೇ ಶ್ರೀಮಹಾಭಾರತತಾತ್ಪರ್ಯ್ಯನಿರ್ಣ್ಣಯೇ ಸರ್ವಶಾಸ್ತ್ರತಾತ್ಪರ್ಯ್ಯನಿರ್ಣ್ಣಯೋ ನಾಮ ಪ್ರಥಮೋsದ್ಧ್ಯಾಯಃ ॥
*********
No comments:
Post a Comment