ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Saturday, December 9, 2017

Mahabharata Tatparya Nirnaya Kannada 2.01- 2.20

೨. ವಾಕ್ಯೋದ್ಧಾರಃ

 

̐  

 ಜಯತಿ ಹರಿರಚಿನ್ತ್ಯಃ ಸರ್ವದೇವೈಕವನ್ದ್ಯಃ ಪರಮಗುರುರಭೀಷ್ಟಾವಾಪ್ತಿದಃ ಸಜ್ಜನಾನಾಮ್            

 ನಿಖಿಲಗುಣಗಣಾರ್ಣ್ಣೋ ನಿತ್ಯನಿರ್ಮ್ಮುಕ್ತದೋಷಃ ಸರಸಿಜನಯನೋsಸೌ ಶ್ರೀಪತಿರ್ಮ್ಮಾನದೋ ನಃ ॥೨.೦೧

 

ನಮ್ಮೆಲ್ಲರ  ಪ್ರಜ್ಞೆಯಿಂದ ಆಚೆ ಇರುವ, ಎಲ್ಲಾ ದೇವತೆಗಳಿಂದ ನಮಸ್ಕರಿಸಲು ಯೋಗ್ಯನಾಗಿರುವ, ಎಲ್ಲರ ಗುರುಗಳ ಗುರುವಾಗಿರುವ,  ಸಮಸ್ತ  ಸಜ್ಜನರಿಗೆ ಅಭೀಷ್ಟವನ್ನು ಕೊಡುವ, ಎಲ್ಲಾ ಗುಣಗಳಿಗೆ ಕಡಲಿನಂತಿರುವ, ಯಾವುದೇ ಕೊರತೆಯನ್ನು ಹೊಂದಿರದ, ತಾವರೆಯಂತೆ ಅರಳು ಕಣ್ಗಳುಳ್ಳ ನಾರಾಯಣನು ನಮಗೆ ಜ್ಞಾನವನ್ನು ಕೊಡುತ್ತಾನೆ.

 

ಉಕ್ತಃ ಪೂರ್ವೇsದ್ಧ್ಯಾಯೇ ಶಾಸ್ತ್ರಾಣಾಂ ನಿರ್ಣ್ಣಯಃ ಪರೋ ದಿವ್ಯಃ ।

ಶ್ರೀಮದ್ಭಾರತವಾಕ್ಯಾನ್ಯೇತೈರೇವಾದ್ಧ್ಯವಸ್ಯನ್ತೇ ॥೨.೦೨

 

ಹಿಂದಿನ ಅಧ್ಯಾಯದಲ್ಲಿ ಎಲ್ಲಾ ಶಾಸ್ತ್ರಗಳ ನಿರ್ಣಯ ಏನು ಎನ್ನುವುದನ್ನು ನಾನು ಹೇಳಿದ್ದೇನೆ.  ಮಹಾಭಾರತದ ವಾಕ್ಯಗಳೂ ಕೂಡಾ ಈ ಅರ್ಥದಲ್ಲಿಯೇ ಇದೆ ಎಂದು ನಾನು ಹೇಳುತ್ತಿದ್ದೇನೆ. ಅದಕ್ಕಾಗಿ ಮಹಾಭಾರತದ ಮಾತುಗಳನ್ನು ಇಲ್ಲಿ ನಿಮ್ಮ ಮುಂದಿಡುತ್ತಿದ್ದೇನೆ.

[ಈ ಅಧ್ಯಾಯದ ಹೆಸರೇ ಭಾರತ ವಾಕ್ಯೋದ್ಧಾರಃ ಎಂಬುದಾಗಿದೆ. ಮಹಾಭಾರತದ ವಾಕ್ಯಗಳನ್ನು ಉಲ್ಲೇಖಿಸಿ  ಅವು  ವೇದಾದಿಗಳಿಗೆ ವಿರುದ್ಧವಾಗಿ ಇಲ್ಲ, ಬೇರೆ ಶಾಸ್ತ್ರಗಳು ಏನನ್ನು ಹೇಳುತ್ತವೋ ಅದನ್ನೇ ಮಹಾಭಾರತವೂ ಹೇಳುತ್ತದೆ ಎನ್ನುವುದನ್ನು ಈ ಅಧ್ಯಾಯದಲ್ಲಿ ವಿವರಿಸಲಾಗಿದೆ.  ಇಷ್ಟೇ ಅಲ್ಲದೆ  ಮಹಾಭಾರತ ಏಕೆ ಮಿಗಿಲು? ಏಕೆ ಇದರ ರಚನೆ ಮಾಡಬೇಕಾಯಿತು? ಇತ್ಯಾದಿ ಅಂಶಗಳ ವಿವರಣೆಯನ್ನೂ  ನಾವು ಮುಂದೆ ನೋಡಲಿದ್ದೇವೆ].

[ಮಧ್ವಾಚಾರ್ಯರೇನೋ ಅನೇಕ ಗ್ರಂಥಗಳನ್ನು ಮತ್ತು  ಅಲ್ಲಿರುವ ಶ್ಲೋಕಗಳನ್ನು ಉಲ್ಲೇಖಿಸಿ ವಿವರಿಸಿದ್ದಾರೆ. ಆದರೆ ಇಂದು ನಮ್ಮಲ್ಲಿ ಲಭ್ಯವಿರುವ ಆ ಗ್ರಂಥಗಳಲ್ಲಿ ಅಂತಹ ಅನೇಕ ಶ್ಲೋಕಗಳು ಕಣ್ಮರೆಯಾಗಿವೆ! ಅದನ್ನೂ ಕೂಡಾ ಆಚಾರ್ಯರು ಇಲ್ಲಿ ಉಲ್ಲೇಖಿಸಿರುವುದನ್ನು ನಾವು ಕಾಣುತ್ತೇವೆ] 

 

ಕ್ವಚಿದ್ ಗ್ರನ್ಥಾನ್ ಪ್ರಕ್ಷಿಪನ್ತಿ ಕ್ವಚಿದನ್ತರಿತಾನಪಿ ।

ಕುರ್ಯ್ಯುಃ ಕ್ವಚಿಚ್ಚ ವ್ಯತ್ಯಾಸಂ ಪ್ರಮಾದಾತ್ ಕ್ವಚಿದನ್ಯಥಾ ॥೨.೦೩

 

ದ್ವೇಷದಿಂದ ಕೆಲವರು ಗ್ರಂಥಗಳನ್ನು ಪ್ರಕ್ಷೇಪಿಸುತ್ತಾರೆ.  ಅಂತವರು  ತಮಗೆ ಬೇಕಾದ ಅಂಶಗಳನ್ನು ಸೇರಿಸಿ, ಬೇಡದ ಅಂಶಗಳನ್ನು ಕಿತ್ತು ಹಾಕುತ್ತಾರೆ.

[ಒಂದು ಪ್ರಸಂಗವನ್ನು ತಮಗೆ ಅನುಕೂಲವಾಗಿ ಬರೆದುಕೊಳ್ಳಬೇಕು ಎಂದು ತಮ್ಮ ತಿಳುವಳಿಕೆಯನ್ನು ಸೇರಿಸುವುದು,  ತಮ್ಮ ಊರು, ತಮ್ಮ ಊರಿನ ದೇವಸ್ಥಾನದ ಹೆಸರು ಬರಬೇಕು ಎಂದು ಅದನ್ನು ಸೇರಿಸುವುದು.,  ಹೀಗೆ ಅನೇಕ ರೀತಿಯ ಬದಲಾವಣೆಯನ್ನು ಮೂಲಗ್ರಂಥದಲ್ಲಿ ಮಾಡಲಾಗಿದೆ.  ಹೀಗಾಗಿ ನಮಗೆ ಮೂಲ ಪುರಾಣದ  ಸ್ಫೂರ್ತಿಯೇ ತಿಳಿಯದಂತಾಗಿದೆ.  ಈ ರೀತಿ ಅನೇಕ ವರ್ಷಗಳಿಂದ ನಡೆಯುತ್ತಾ ಬಂದಿದೆ].

ಕೆಲವೊಮ್ಮೆ  ಹಲವರು ತಮಗೆ ತಿಳಿದಿರುವ ವ್ಯಾಕರಣದ ಮಿತಿಯಲ್ಲಿ ಮೂಲವನ್ನೇ ಬದಲಾಯಿಸಿ ಬಿಡುತ್ತಾರೆ.  ಕೆಲವೊಮ್ಮೆ ಅಜ್ಞಾನದಿಂದ, ಪ್ರಮಾದದಿಂದ,  ಬುದ್ಧಿ ಸಾಲದೇ ಇರುವುದರಿಂದ ಬೇರೆಯೇ ರೀತಿ ನಿರೂಪಣೆ ಮಾಡಿ ಬಿಡುತ್ತಾರೆ.  ಇದರಿಂದ ಗ್ರಂಥದ ಮೂಲ ಅರ್ಥವೇ ನಾಶವಾಗಿ ಬೇರೆಯೇ ರೀತಿಯಾದ ನಿರೂಪಣೆ ಪ್ರಚಲಿತಕ್ಕೆ ಬರುತ್ತದೆ. 

[ಹೀಗೆ ಅದೆಷ್ಟು ಮೂಲ ಗ್ರಂಥಗಳು ವ್ಯತ್ಯಾಸ ಹೊಂದಿವೆಯೋ ತಿಳಿಯದು. ಅದರಿಂದಾಗಿ ಈ ಹಳೆಯ ಗ್ರಂಥಗಳನ್ನೆಲ್ಲ ನೋಡಬೇಕು ಎಂದರೆ ಅನಿವಾರ್ಯವಾಗಿ ಈ ವಿಧಾನವನ್ನು ತಿಳಿದುಕೊಂಡೇ ಓದಬೇಕಾಗುತ್ತದೆ.  ಇಲ್ಲವೆಂದರೆ ಅದು ಅರ್ಥವಾಗುವುದಿಲ್ಲ  ಅಥವಾ ವ್ಯತಿರಿಕ್ತವಾದ ಅರ್ಥವೇ ಆಗುತ್ತದೆ.].

 

ಅನುತ್ಸನ್ನಾ ಅಪಿ ಗ್ರನ್ಥಾ ವ್ಯಾಕುಲಾ ಇತಿ ಸರ್ವಶಃ ।

ಉತ್ಸನ್ನಾಃ ಪ್ರಾಯಶಃ ಸರ್ವೇ ಕೋಟ್ಯಂಶೋsಪಿ ನ ವರ್ತ್ತತೇ ॥೨.೦೪

 

ಎಷ್ಟೋ ಗ್ರಂಥಗಳು ನಾಶವಾಗಿ ಹೋಗಿವೆ. ಹಾಗಾಗಿ ಪ್ರಾಚೀನ ಭಾರತದಲ್ಲಿ ಎಷ್ಟು ಗ್ರಂಥಗಳು ಇದ್ದವೋ, ಅದರ ಒಂದಂಶವೂ ಇಂದು ಸಿಗುವುದಿಲ್ಲ.! ಸಿಗುವ ಗ್ರಂಥಗಳಲ್ಲಿ ಲಿಪಿಕಾರರ ಪ್ರಮಾದ, ಅವ್ಯವಸ್ಥೆ, ಇತ್ಯಾದಿಗಳು ಸೇರಿಕೊಂಡಿವೆ.

 

ಗ್ರನ್ಥೋsಪ್ಯೇವಂ ವಿಲುಳಿತಃ ಕಿಮ್ವರ್ತ್ಥೋ ದೇವದುರ್ಗ್ಗಮಃ ।

ಕಲಾವೇವಂ ವ್ಯಾಕುಲಿತೇ ನಿರ್ಣ್ಣಯಾಯ ಪ್ರ ಚೋದಿತಃ                        ೨.೦೫

 

ಹರಿಣಾ ನಿರ್ಣ್ಣಯಾನ್ ವಚ್ಮಿ ವಿಜಾನಂಸ್ತತ್ಪ್ರಸಾದತಃ

ಶಾಸ್ತ್ರಾನ್ತರಾಣಿ ಸಞ್ಜಾನನ್ ವೇದಾಂಶ್ಚಾಸ್ಯ ಪ್ರಸಾದತಃ  ೨.೦೬

 

ಇಂದು ನಮಗೆ ಸಿಗುವ ಮಹಾಭಾರತಪಾಠವೂ ಕೂಡಾ ಅಂತರಿತ, ಪ್ರಕ್ಷೇಪ, ವ್ಯತ್ಯಾಸ,  ಪ್ರಮಾದ ಇತ್ಯಾದಿ ದೋಷಗಳಿಂದ ಕೂಡಿದೆ. ಪಾಠ ಶುದ್ಧಿ ಇದ್ದರೆ ಅರ್ಥ ಶುದ್ಧಿ ಸಾಧ್ಯ. ಆದರೆ ಪಾಠವೇ ಶುದ್ಧವಾಗಿಲ್ಲದಿದ್ದರೆ ಅರ್ಥದಲ್ಲಿ  ಎಂತಹ ಶುದ್ಧಿ?  “ಅದರಿಂದಾಗಿ ಈ ಕಲಿಯುಗದಲ್ಲಿ ಶುದ್ಧ ಜ್ಞಾನದ ಪರಂಪರೆ ಲುಪ್ತವಾಗಲು, ಸಜ್ಜನರು ಕನಿಷ್ಠ ಮಹಾಭಾರತದ ನಿರ್ಣಯವನ್ನಾದರೂ ತಿಳಿಯಲಿ ಎಂದು, ವೇದವ್ಯಾಸರಿಂದ ಪ್ರಚೋದಿತನಾಗಿ, ಆ ಪರಮಾತ್ಮನ ಅನುಗ್ರಹದಿಂದ  ನಾನು ನಿರ್ಣಯಗಳನ್ನು ಹೇಳುತ್ತಿದ್ದೇನೆ. ವೇದಗಳನ್ನು ತಿಳಿದು ಈ ನಿರ್ಣಯವನ್ನು ನಾನಿಲ್ಲಿ ಪ್ರಸ್ತುತಪಡಿಸಿದ್ದೇನೆ” ಎಂದಿದ್ದಾರೆ ಆಚಾರ್ಯರು.

 

ದೇಶೇದೇಶೇ ತಥಾ ಗ್ರನ್ಥಾನ್ ದೃಷ್ಟ್ವಾ ಚೈವ ಪೃಥಗ್ವಿಧಾನ್ ।

ಯಥಾ ಸ ಭಗವಾನ್ ವ್ಯಾಸಃ ಸಾಕ್ಷಾನ್ನಾರಾಯಣಃ ಪ್ರಭುಃ ॥೨.೦೭

 

ಜಗಾದ ಭಾರತಾದ್ಯೇಷು ತಥಾ ವಕ್ಷ್ಯೇ ತದೀಕ್ಷಯಾ ।

ಸಙ್ಕ್ಷೇಪಾತ್ ಸರ್ವಶಾಸ್ತ್ರಾರ್ತ್ಥಂ ಭಾರತಾರ್ತ್ಥನುಸಾರತಃ ೨.೦೮

 

ನಿರ್ಣ್ಣಯಃ ಸರ್ವಶಾಸ್ತ್ರಾಣಾಂ ಭಾರತಂ ಪರಿಕೀರ್ತ್ತಿತಮ್        

ಭಾರತಂ ಸರ್ವವೇದಾಶ್ಚ ತುಲಾಮಾರೋಪಿತಾಃ ಪುರಾ ೨.೦೯

 

ದೇವೈರ್ಬ್ರಹ್ಮಾದಿಭಿಃ ಸರ್ವೈರೃಷಿಭಿಶ್ಚ ಸಮನ್ವಿತೈಃ ।

ವ್ಯಾಸಸ್ಯೈವಾsಜ್ಞಯಾ ತತ್ರ ತ್ವತ್ಯರಿಚ್ಯತ ಭಾರತಮ್ ೨.೧೦

 

ನಾವು ಯಾವುದೇ ಗ್ರಂಥವನ್ನು ಸಂಕಲನ ಮಾಡುವಾಗ   ಬೇರೆಬೇರೆ ದೇಶಗಳಿಗೆ ಹೋಗಿ, ಬೇರೆಬೇರೆ ರೀತಿಯಾಗಿರುವ ವಿಷಯಗಳನ್ನು ಸಂಗ್ರಹಿಸಿ, ಆನಂತರ ವೇದವ್ಯಾಸರಿಗೆ ಅನುಗುಣವಾಗಿ (ಅಂದರೆ ಬ್ರಹ್ಮಸೂತ್ರ, ಇತ್ಯಾದಿಗಳಿಗೆ ಅನುಗುಣವಾಗಿ) ಅದರ ಅರ್ಥವನ್ನು ಗ್ರಹಿಸಬೇಕು.

ನೇರವಾಗಿ ವೇದವ್ಯಾಸರಿಂದಲೇ ಉಪದೇಶ ಪಡೆದಿರುವ ಆಚಾರ್ಯರು ಇಲ್ಲಿ  ಹೇಳುತ್ತಾರೆ: “ವೇದವ್ಯಾಸರ ದೃಷ್ಟಿಕೊನದಂತೆ, ವೇದವ್ಯಾಸರ ವಿವಿಕ್ಷೆಯಿಂದ ನಾನು ಮಹಾಭಾರತವನ್ನು ಹೇಳುತ್ತಿದ್ದೇನೆ.  ಕೇವಲ ಮಹಾಭಾರತವನ್ನಷ್ಟೇ ಅಲ್ಲ, ಎಲ್ಲಾ ಶಾಸ್ತ್ರದ ಅರ್ಥವನ್ನು ಮಹಾಭಾರತಕ್ಕೆ ಅನುಗುಣವಾಗಿ ಹೇಳುತ್ತಿದ್ದೇನೆ” ಎಂದು. ಸರ್ವ ಶಾಸ್ತ್ರಗಳ ನಿರ್ಣಯ ಮಹಾಭಾರತ ಏಕೆ ಎನ್ನುವುದನ್ನು ವಿವರಿಸುತ್ತಾ ಆಚಾರ್ಯರು ಹೇಳುತ್ತಾರೆ: ವೇದವ್ಯಾಸರ ಆಜ್ಞೆಯಂತೆ ಬ್ರಹ್ಮಾದಿ ಸಮಸ್ತ ದೇವತೆಗಳು ಎಲ್ಲಾ ಋಷಿಗಳೊಡಗೂಡಿ ಮಹಾಭಾರತ ಮತ್ತು ಸಮಸ್ತ ವೇದವನ್ನು ತುಲನೆ ಮಾಡಿದರಂತೆ.  ಆಗ ಅಲ್ಲಿ ಮಹಾಭಾರತವೇ ಎಲ್ಲಾ ಶಾಸ್ತ್ರಗಳಿಗಿಂತ ಮಿಗಿಲು ಎನ್ನುವ  ತೀರ್ಮಾನ ಬಂದಿತಂತೆ.

[ತುಲಾಮಾರೋಪಿತಾಃ ಅಂದರೆ ತಕ್ಕಡಿಯಲ್ಲಿಟ್ಟು ತೂಗುವುದು ಎಂದರ್ಥವಲ್ಲ, ತುಲನಾತ್ಮಕ ಅಧ್ಯಯನ ಎಂದರ್ಥ]

 

ಮಹತ್ತ್ವಾದ್ ಭಾರವತ್ತ್ವಾಚ್ಚ ಮಹಾಭಾರತಮುಚ್ಯತೇ ।

ನಿರುಕ್ತಮಸ್ಯ  ಯೋ ವೇದ ಸರ್ವಪಾಪೈಃ ಪ್ರಮುಚ್ಯತೇ ॥೨.೧೧

 

ಅತ್ಯಂತ ಮಹತ್ತಾದ  ಅರ್ಥದೊಂದಿಗೆ  ಭಗವಂತನನ್ನು ಪ್ರತಿಪಾದನೆ ಮಾಡುವ ಮತ್ತು ಅರ್ಥದ ಭಾರದಿಂದ ಕೂಡಿಕೊಂಡಿರುವ ಮಹಾಭಾರತದ  ಪ್ರತಿಯೊಂದು ಶ್ಲೋಕವೂ ಕೂಡಾ ಹತ್ತಕ್ಕೆ ಕಡಿಮೆ ಇಲ್ಲದ ಅರ್ಥವನ್ನು ಒಳಗೊಂಡಿದೆ.  ಈ ಎಲ್ಲಾ ಕಾರಣದಿಂದಾಗಿ ಈ ಗ್ರಂಥವನ್ನು ‘ಮಹಾ-ಭಾರತ’ ಎಂದು ಕರೆದಿದ್ದಾರೆ.

ಈ ಮಹಾಭಾರತದ ನಿರುಕ್ತಿಯನ್ನು ಯಾರು ತಿಳಿಯುತ್ತಾನೋ  ಅವನು ಎಲ್ಲಾ ಪಾಪಗಳಿಂದ ಬಿಡುಗಡೆಗೊಳ್ಳುತ್ತಾನೆ.

 

ನಿರ್ಣ್ಣಯಃ ಸರ್ವಶಾಸ್ತ್ರಾಣಾಂ ಸದೃಷ್ಟಾನ್ತೋ ಹಿ ಭಾರತೇ ।

ಕೃತೋ ವಿಷ್ಣುವಶತ್ವಂ ಹಿ ಬ್ರಹ್ಮಾದೀನಾಂ ಪ್ರಕಾಶಿತಮ್ ॥೨.೧೨

 

ಸೈದ್ಧಾಂತಿಕ(theoretical) ರೂಪದಲ್ಲಿರುವ ಸಮಸ್ತ ಶಾಸ್ತ್ರಗಳ ನಿರ್ಣಯವನ್ನು ದೃಷ್ಟಾಂತಪೂರ್ವಕವಾಗಿ  ನಮಗೆ ನೀಡಿರುವುದು ಮಹಾಭಾರತ. “ಅದರಿಂದಾಗಿ ಮಹಾಭಾರತದ ಕಥೆಗೆ ಅನುಗುಣವಾಗಿ ಬೇರೆ ಶಾಸ್ತ್ರಗಳನ್ನು ನಾನು ನಿರ್ಣಯ ಮಾಡಿದ್ದೇನೆ”  ಎಂದಿದ್ದಾರೆ ಆಚಾರ್ಯರು.

ಮಹಾಭಾರತದಲ್ಲಿ ಜೀವನದ ಕಥೆ ಇದೆ.    ಕಥೆ ಎಲ್ಲಾ ಶಾಸ್ತ್ರಗಳಿಗೆ ಅನುಗುಣವಾಗಿದೆ. ಹೀಗಾಗಿ ಮಹಾಭಾರತ ಎನ್ನುವುದು  ಎಲ್ಲಕ್ಕಿಂತ  ಮಿಗಿಲು. 

‘ಬ್ರಹ್ಮಾದಿ ದೇವತೆಗಳೂ ಕೂಡಾ ನಾರಾಯಣನಿಗೆ ವಶ’ ಎನ್ನುವ ಶಾಸ್ತ್ರ ಸಾರವನ್ನು ಮಹಾಭಾರತ ಪ್ರತ್ಯಕ್ಷವಾಗಿ ತೋರಿಸಿಕೊಡುತ್ತದೆ.

 

ಯತಃ ಕೃಷ್ಣವಶೇ ಸರ್ವೇ ಭೀಮಾದ್ಯಾಃ ಸಮ್ಯಗೀರಿತಾಃ ।

ಸರ್ವೇಷಾಂ ಜ್ಞಾನದೋ ವಿಷ್ಣುರ್ಯ್ಯಶೋದಾತೇತಿ ಚೋದಿತಮ್ ॥೨.೧೩

 

ಯಾವ ಕಾರಣದಿಂದ ಅವತಾರಭೂತರಾದ ಭೀಮಸೇನ ಮೊದಲಾದ ಸಮಸ್ತ ದೇವತೆಗಳು  ಭಗವಂತನ ಅವತಾರವಾಗಿರುವ ಶ್ರೀಕೃಷ್ಣನ ವಶದಲ್ಲಿದ್ದಾರೆ ಎಂದು ಹೇಳಲ್ಪಟ್ಟಿದ್ದಾರೋ,  ಅದೇ ರೀತಿ ಭೀಮನ ಮೂಲರೂಪವಾದ ಮುಖ್ಯಪ್ರಾಣನು,  ದ್ರೌಪದಿಯ ಮೂಲರೂಪವಾಗಿರುವ ಭಾರತಿಯು, ದ್ರೌಪದಿಗೆ ಸಮಾನಳಾದ ಸರಸ್ವತಿ ಮತ್ತು ಇತರ   ಸಮಸ್ತ ದೇವತೆಗಳು  ಶ್ರೀಕೃಷ್ಣನ ಮೂಲರೂಪವಾಗಿರುವ ನಾರಾಯಣನ ವಶದಲ್ಲಿದ್ದಾರೆ ಎನ್ನುವುದು  ಮಹಾಭಾರತವನ್ನು ನೋಡಿದರೆ ತಿಳಿಯುತ್ತದೆ. ಇದೇ ರೀತಿ ಎಲ್ಲರಿಗೂ ಜ್ಞಾನವನ್ನೂ, ಯಶಸ್ಸನ್ನೂ ಕೊಡುವವನು ಆ ಭಗವಂತನೇ ಎನ್ನುವುದು ಮಹಾಭಾರತವನ್ನು ನೋಡಿದರೆ ತಿಳಿಯುತ್ತದೆ.

 

ಯಸ್ಮಾದ್ ವ್ಯಾಸಾತ್ಮನಾ ತೇಷಾಂ ಭಾರತೇ ಯಶ ಊಚಿವಾನ್ ।

ಜ್ಞಾನದಶ್ಚ ಶುಕಾದೀನಾಂ ಬ್ರಹ್ಮರುದ್ರಾದಿರೂಪಿಣಾಮ್ ॥೨.೧೪

 

ಇಂದು ಯಶಸ್ಸು ಅಂದರೆ ಸಾಫಲ್ಯ (Success) ಎಂದು ಅರ್ಥ ಮಾಡುತ್ತಾರೆ. ಆದರೆ ಯಶಸ್ಸು  ಅಂದರೆ ಕೀರ್ತಿ(Fame). ‘ಯಶಃ’ ಅಂದರೆ ಕೀರ್ತಿಯನ್ನು ಕೊಡುವವನು ಎಂದರ್ಥ. ವೇದವ್ಯಾಸರೂಪಿ ನಾರಾಯಣ  ಮಹಾಭಾರತದಲ್ಲಿ ಪ್ರತಿಯೊಬ್ಬರ  ಯಶಸ್ಸನ್ನು ಹೇಳಿದ್ದರಿಂದ ಇಂದೂ ಕೂಡಾ ಅವರ ಕೀರ್ತಿ ಶಾಶ್ವತವಾಗಿದೆ.

ಬ್ರಹ್ಮ, ರುದ್ರ, ಶುಕಾಚಾರ್ಯ  ಮೊದಲಾದವರಿಗೆ ಜ್ಞಾನವನ್ನು ಕೊಟ್ಟವನು ಆ ಭಗವಂತ.  ಮಹಾಭಾರತದಲ್ಲಿ ಅನೇಕ ಬಾರಿ ಅನೇಕರಿಗೆ ಭಗವಂತ  ಉಪದೇಶ ಮಾಡಿರುವುದನ್ನು ನಾವು ಕಾಣುತ್ತೇವೆ. ಇವೆಲ್ಲವೂ ಭಗವಂತ ಜ್ಞಾನಪ್ರದ ಎನ್ನುವುದನ್ನು ಸ್ಪಷ್ಟವಾಗಿ ತೋರಿಸುತ್ತದೆ.

 

ಬ್ರಹ್ಮಾsಧಿಕಶ್ಚ ದೇವೇಭ್ಯಃ ಶೇಷಾದ್ ರುದ್ರಾದಪೀರಿತಃ ।

ಪ್ರಿಯಶ್ಚ ವಿಷ್ಣೋಃ ಸರ್ವೇಭ್ಯ ಇತಿ ಭೀಮನಿದರ್ಶನಾತ್ ॥೨.೧೫

 

ಬ್ರಹ್ಮದೇವ ಎಲ್ಲಾ ದೇವತೆಗಳಿಗಿಂತಲೂ ಮಿಗಿಲು. ಶೇಷನಿಗಿಂತಲೂ, ರುದ್ರನಿಗಿಂತಲೂ, ಎಲ್ಲರಿಗಿಂತಲೂ ಬ್ರಹ್ಮದೇವರು ಭಗವಂತನಿಗೆ ಪ್ರಿಯ. ಇದು ಭೀಮಸೇನನ ನಿದರ್ಶನದಿಂದ ಮಹಾಭಾರತದಲ್ಲಿ ತಿಳಿಯುತ್ತದೆ.  ಭೀಮಸೇನ ಶ್ರೀಕೃಷ್ಣನಿಗೆ ಅತ್ಯಂತ ಪ್ರೀತಿಪಾತ್ರನಾಗಿದ್ದ. ಇದು ಅವತಾರ ರೂಪದಲ್ಲಿ ಹೇಗಿದೆಯೋ ಅದೇ ರೀತಿ ಮೂಲರೂಪದಲ್ಲಿಯೂ ಕೂಡಾ.  ಹೀಗೆ  ಮುಖ್ಯಪ್ರಾಣನೇ ಭಗವಂತನಿಗೆ ಅತ್ಯಂತ ಪ್ರೀತಿಪಾತ್ರ ಎಂದು ತಿಳಿಯುತ್ತದೆ.

 

ಭೂಭಾರಹಾರಿಣೋ ವಿಷ್ಣೋಃ ಪ್ರಧಾನಾಙ್ಗಮ್ ಹಿ ಮಾರುತಿಃ ।

ಮಾಗಧಾದಿವಧಾದೇವ ದುರ್ಯ್ಯೋಧನವಧಾದಪಿ       ೨.೧೬

 

ಭೂ ಭಾರ ನಾಶಮಾಡಬೇಕು ಎನ್ನುವ ಭಗವಂತನ ಸಂಕಲ್ಪಕ್ಕೆ ಭೀಮಸೇನನೇ ಪ್ರಧಾನ ಸಹಾಯಕ*.  ಇದು  ಜರಾಸಂಧ,  ದುರ್ಯೋಧನ ಮೊದಲಾದವರ ಸಂಹಾರದಲ್ಲಿ ತಿಳಿಯುತ್ತದೆ.

[*ಮೂಲತಃ ಭಗವಂತನಿಗೆ ಯಾರ ಸಹಾಯವೂ ಬೇಡ.  ಆದರೆ ಕರುಣಾಮಯಿಯಾದ ಭಗವಂತ ತನಗೆ ಪ್ರೀತಿಪಾತ್ರರಾದ ತನ್ನ ಭಕ್ತರನ್ನು ತನ್ನ ಕಾರ್ಯದಲ್ಲಿ ತೊಡಗಿಸಿ ಅವರ ಮುಖೇನ ತನ್ನ ಸಂಕಲ್ಪ ನೆರವೇರುವಂತೆ ಮಾಡಿ ಅವರ ಕೀರ್ತಿಯನ್ನು ಹೆಚ್ಚಿಸುತ್ತಾನೆ].

 

ಯೋಯ ಏವ ಬಲಜ್ಯೇಷ್ಠಃ ಕ್ಷತ್ರಿಯೇಷು ಸ ಉತ್ತಮಃ ।

ಅಙ್ಗಂ ಚೇದ್ ವಿಷ್ಣುಕಾರ್ಯ್ಯೇಷು ತದ್ಬಕ್ತ್ಯೈವ ನಚಾನ್ಯಥಾ ॥೨.೧೭

 

ಮಹಾಭಾರತದಲ್ಲಿ ದೇವತೆಗಳ ತಾರತಮ್ಯವನ್ನೂ(hierarchy)  ಕೂಡಾ ಚೆನ್ನಾಗಿ ತೀರ್ಮಾನ ಮಾಡಲು ಬರುತ್ತದೆ. ಇಯದಾಮನನಾತ್ ಎನ್ನುವ ಬ್ರಹ್ಮಸೂತ್ರದ ೩.೩.೩೫ಮಾತಿನಲ್ಲಿ , ಇಂದ್ರಿಯಾಣಿ ಪರಾಣ್ಯಾಹುರಿಂದ್ರಿಯೇಭ್ಯಃ ಪರಂ ಮನಃ ... ಎನ್ನುವ ಗೀತೆಯ(೩.೪೨)  ಶ್ಲೋಕದಲ್ಲಿ, ಇಂದ್ರಿಯೇಭ್ಯಃ ಪರಾ ಹ್ಯರ್ಥಾ ಅರ್ಥೇಭ್ಯಶ್ಚ ಪರಂ ಮನಃ... ಎನ್ನುವ  ಕಠೋಪನಿಷತ್ತಿನ(೧.೩.೧೦) ಮಾತಿನಲ್ಲಿ ತಾರತಮ್ಯವನ್ನು ಹೇಳಿರುವುದನ್ನು ನಾವು ಕಾಣುತ್ತೇವಾದರೂ  ಕೂಡಾ, ಅಲ್ಲಿ  ಅದು  ನಮಗೆ ಚೆನ್ನಾಗಿ ಅರಿವಿಗೆ ಬರುವುದಿಲ್ಲ. ಆದರೆ ಮಹಾಭಾರತವನ್ನು ನೋಡಿದಾಗ ತಾರತಮ್ಯ ಇರುವುದು ಸ್ಪಷ್ಟವಾಗಿ ತಿಳಿಯುತ್ತದೆ.

ಭಗವದ್ಭಕ್ತನಾಗಿದ್ದು ಪರಮಾತ್ಮನ ಕಾರ್ಯದಲ್ಲಿ ಅಂಗಭೂತನಾಗಿರುವ ಕ್ಷತ್ರಿಯನು ಬಲದಲ್ಲಿ ಜ್ಯೇಷ್ಠನಾಗಿದ್ದರೆ ಆತನು ಉತ್ತಮನೆನಿಸುತ್ತಾನೆ. ಉದಾಹರಣೆಗೆ ಭೀಮಸೇನ. ಈತ ಭಗವದ್ಭಕ್ತ ಮತ್ತು ಅತ್ಯಂತ ಬಲಶಾಲಿ. ಆತ ಭಗವಂತನ ಧರ್ಮಸಂಸ್ಥಾಪನ ಕಾರ್ಯದಲ್ಲಿ ಅಂಗಭೂತನಾಗಿ ಕಾರ್ಯನಿರ್ವಹಿಸಿ ಶ್ರೇಷ್ಠನೆನಿಸಿದ್ದಾನೆ.  ಆದರೆ ಜರಾಸಂಧ ಇದಕ್ಕೆ ತದ್ವಿರುದ್ಧ.  ಈತ ಬಲಶಾಲಿಯೇನೋ ಸರಿ. ಆದರೆ ಆತನ ಕಾರ್ಯ ಭಗವಂತನಿಗೆ ವಿರುದ್ಧವಾದುದು. ಹೀಗಾಗಿ ಆತ ಅರ್ಜುನ ಮೊದಲಾದವರಿಗಿಂತ ಬಲಶಾಲಿಯಾಗಿದ್ದರೂ ಸಹ ಅಧಮನೆನಿಸುತ್ತಾನೆ. ಅಂತವರಿಗೆ ಎಂದೆಂದಿಗೂ ಮೇಲಿನ ಸ್ಥಾನ ದೊರೆಯುವುದಿಲ್ಲ.

 

ಬಲಂ ನೈಸರ್ಗ್ಗಿಕಂ ತಚ್ಚೇದ್ ವರಾಸ್ತ್ರಾದೇಸ್ತದನ್ಯಥಾ ।

ಅನ್ಯಾವೇಶನಿಮಿತ್ತಂ ಚೇದ್ ಬಲಮನ್ಯಾತ್ಮಕಂ ಹಿ ತತ್ ॥೨.೧೮

 

ಕೇವಲ ಬಲದ ಮೇಲೆ ಶ್ರೇಷ್ಠತೆ ನಿರ್ಣಯ ಆಗುವುದಿಲ್ಲ. ಬಲವೂ ಕೂಡಾ ನೈಸರ್ಗಿಕವಾಗಿರಬೇಕು.  ನೈಸರ್ಗಿಕ ಎಂದರೆ ಸ್ವಾಭಾವಿಕ ಎಂದರ್ಥ. ಅಸ್ತ್ರಾದಿಗಳಿಂದ ಬಂದ ಬಲ, ಬೇರೆಯವರ ಆವೇಶದಿಂದ ಬಂದ ಬಲ ಸ್ವಾಭಾವಿಕ ಎನಿಸುವುದಿಲ್ಲ. ಆದ್ದರಿಂದ ನೈಸರ್ಗಿಕವಾದ ಬಲ ಯಾರಿಗಿದೆ ಎನ್ನುವುದನ್ನು ಮೊದಲು ಕಂಡುಕೊಳ್ಳಬೇಕು. ಉದಾಹರಣೆಗೆ: ಬಲರಾಮ ಜರಾಸಂಧನನ್ನು ಹೊಡೆದು ಬೀಳಿಸಿರುವ ಪ್ರಸಂಗ.  ಅದು ಸಾಧ್ಯವಾದದ್ದು ಆತನಲ್ಲಿದ್ದ  ಸಂಕರ್ಷಣರೂಪಿ ಪರಮಾತ್ಮನ ಆವೇಶದಿಂದ. ಆ  ಬಲ ಸಂಕರ್ಷಣ ರೂಪಿ  ಪರಮಾತ್ಮನದ್ದೇ ಹೊರತು ಬಲರಾಮನದ್ದಲ್ಲ.  ಇನ್ನು ಅರ್ಜುನನನಲ್ಲಿದ್ದದ್ದು ಅಸ್ತ್ರಗಳ ಬಲ ಹಾಗೂ ನರರೂಪಿ ಭಗವಂತನ ಆವೇಶ ಬಲ.  ಈ ರೀತಿಯ ಅನೇಕ ಉದಾಹರಣೆಗಳನ್ನು ನಾವು ಮಹಾಭಾರತದಲ್ಲಿ ಕಾಣುತ್ತೇವೆ.  ಹೀಗಾಗಿ ಮಹಾಭಾರತದಲ್ಲಿ ದೇವತಾ ತಾರತಮ್ಯವನ್ನು ಚಿಂತನೆ ಮಾಡುವಾಗ ‘ಪರಮಾತ್ಮನ ಕಾರ್ಯದಲ್ಲಿ ಅಂಗಭೂತವಾಗಿ ಬಳಸಿದ ಸಹಜವಾದ ಬಲ ಯಾರಿಗಿದೆಯೋ ಅವರು ಮೊದಲು’ ಎಂದು ಚಿಂತನೆ ಮಾಡಬೇಕು.  ಇದು ಮಹಾಭಾರತದ ಸೂತ್ರ.

 

ದೇವೇಷು ಬಲಿನಾಮೇವ ಭಕ್ತಿಜ್ಞಾನೇ ನಚಾನ್ಯಥಾ ।

ಸ ಏವ ಚ ಪ್ರಿಯೋ ವಿಷ್ಣೋರ್ನ್ನಾನ್ಯಥಾ ತು ಕಥಞ್ಚನ ॥೨.೧೯

 

ತಸ್ಮಾದ್ ಯೋಯೋ ಬಲಜ್ಯೇಷ್ಠಃ  ಸ ಗುಣಜ್ಯೇಷ್ಠ ಏವ ಚ

ಬಲಂ ಹಿ ಕ್ಷತ್ರಿಯೇ ವ್ಯಕ್ತಂ ಜ್ಞಾಯತೇ ಸ್ಥೂಲದೃಷ್ಟಿಭಿಃ ॥೨.೨೦

 

ಲೋಕದಲ್ಲಿ ಬಲಿಷ್ಠರಾದವರಿಗೆಲ್ಲಾ ಜ್ಞಾನವಿರಬೇಕು ಎಂದಿಲ್ಲ. ಮನುಷ್ಯರಲ್ಲಿ ಬಲಿಷ್ಠರಾದವರಲ್ಲಿ ಬುದ್ಧಿ ಇಲ್ಲದೇ ಇರುವವರೇ ಹೆಚ್ಚಾಗಿರುತ್ತಾರೆ.  ಆದರೆ ದೇವತೆಗಳಲ್ಲಿ  ಹಾಗಲ್ಲ.  ಅಲ್ಲಿ  ಯಾರು ಬಲಿಷ್ಠರಿರುತ್ತಾರೋ ಅವರಿಗೇ ಭಕ್ತಿ ಹಾಗೂ ಜ್ಞಾನ ಅಧಿಕವಿದ್ದು, ಅವರು  ಶ್ರೇಷ್ಠರೆನಿಸುತ್ತಾರೆ.  ಅಲ್ಲಿ  ಬಲ ಹಾಗೂ ಜ್ಞಾನ  ಒಟ್ಟಿಗೇ ಇರುತ್ತದೆ.  ಈ ರೀತಿ ಬಲಿಷ್ಟರು ಮತ್ತು  ಜ್ಞಾನಿಗಳಾಗಿರುವವರೇ  ಪರಮಾತ್ಮನಿಗೆ ಹೆಚ್ಚು ಪ್ರಿಯರೆನಿಸುತ್ತಾರೆ.  ಇದು ಬೇರೆ ರೀತಿಯಾಗಿ ಅಲ್ಲ.

ಯಾರ್ಯಾರು ಬಲ ಜ್ಯೇಷ್ಠರೋ ಅವರು ಗುಣದಲ್ಲಿ ಜ್ಯೇಷ್ಠರು.  ಕ್ಷತ್ರಿಯರಲ್ಲಿ ಇರುವ ಬಲವನ್ನು ಸ್ಥೂಲ ದೃಷ್ಟಿ ಉಳ್ಳವರೂ ತಿಳಿಯಬಹುದು.

[ನಾವು ಈ ಹಿನ್ನೆಲೆಯನ್ನಿಟ್ಟುಕೊಂಡು ಮಹಾಭಾರತವನ್ನು ನೋಡಿದಾಗ ಅಲ್ಲಿ ಬಲ-ಜ್ಞಾನವಿರುವ ಭೀಮನ ಶ್ರೇಷ್ಠತೆ ಏನೆಂದು  ತಿಳಿಯುತ್ತದೆ.  ಈ ವಿಷಯದ ಅರಿವಿಲ್ಲದವರು ಲೋಕದ ದೃಷ್ಟಿಯಲ್ಲಿ  ಭಾರತವನ್ನು ನೋಡಿದರೆ ‘ಭೀಮನು ಬಲಿಷ್ಠನಾಗಿದ್ದ ಆದ್ದರಿಂದ ಅವನಲ್ಲಿ ಜ್ಞಾನವಿರಲಿಲ್ಲ’ ಎಂದು ತಪ್ಪಾಗಿ ಅರ್ಥಮಾಡಿಕೊಳ್ಳಬಹುದು].

No comments:

Post a Comment