‘ಜ್ಞಾನಾದಯೋ ಗುಣಾ
ಯಸ್ಮಾಜ್ಜ್ಞಾಯನ್ತೇ ಸೂಕ್ಷ್ಮದೃಷ್ಟಿಭಿಃ ।
‘ತಸ್ಮಾದ್ ಯತ್ರ
ಬಲಂ ತತ್ರ ವಿಜ್ಞಾತವ್ಯಾ ಗುಣಾಃ ಪರೇ ॥೨.೨೧॥
ಜ್ಞಾನ ಮತ್ತು ಪರಮಾತ್ಮನ ಭಕ್ತಿ ಇವುಗಳನ್ನು ಸೂಕ್ಷ್ಮದೃಷ್ಟಿ
ಉಳ್ಳವರು ಮಾತ್ರ ತಿಳಿಯಬಲ್ಲರು. ಮಹಾಭಾರತದ
ಪ್ರಸಂಗದಲ್ಲಿ ಯಾರಿಗೆ ನೈಸರ್ಗಿಕವಾದ ಅಧಿಕ ಬಲ ಇದೆಯೋ, ಅವರಲ್ಲಿ ಅಧಿಕ ಗುಣವಿದೆ ಎಂದರ್ಥ.
[ಸ್ಥೂಲದೃಷ್ಟಿ ಉಳ್ಳವರಿಗೆ ಈ ಸೂಕ್ಷ್ಮ ತಿಳಿಯುವುದಿಲ್ಲ.
ಉದಾಹರಣೆಗೆ ಅನೇಕರು ಭೀಮಸೇನ ಉತ್ಕೃಷ್ಟ ಜ್ಞಾನವುಳ್ಳವನಾಗಿದ್ದ ಎನ್ನುವ ಸತ್ಯವನ್ನು ತಿಳಿದೇ ಇಲ್ಲ. ಈ ಸೂಕ್ಷ್ಮ ದೃಷ್ಟಿ
ಇಲ್ಲದೇ ಇರುವವರು ಗೀತೆಯನ್ನು ಕೃಷ್ಣ
ಅರ್ಜುನನಿಗೇ ಏಕೆ ಹೇಳಿದ, ಆತನ ಅಣ್ಣ ಭೀಮನಿಗೆ
ಏಕೆ ಉಪದೇಶಿಸಿಲ್ಲ ಎಂಬಿತ್ಯಾದಿ ವ್ಯತಿರೇಕ ಪ್ರಶ್ನೆಗಳನ್ನು ಹಾಕುತ್ತಾರೆ. ಈ ಪ್ರಶ್ನೆಗೆ ಉತ್ತರ ಅತಿ ಸುಲಭ. ರೋಗ ಬಂದವನಿಗೆ
ಮದ್ದೇ ಹೊರತು ಇತರರಿಗಲ್ಲ. ಅಲ್ಲಿ ಮಾನಸಿಕವಾಗಿ ಆಂತರಿಕ ತುಮುಲದಲ್ಲಿದ್ದವನು ಅರ್ಜುನ ಮಾತ್ರ. ಅದಕ್ಕಾಗಿ ಶ್ರೀಕೃಷ್ಣ ಅರ್ಜುನನಿಗೆ(ಆತನ ಮುಖೇನ ನಮಗೆ) ಗೀತೋಪದೇಶ
ಮಾಡಿದ. ಭೀಮಸೇನ ಜ್ಞಾನಿ ಆಗಿದ್ದುರಿಂದ ಆತನಿಗೆ ಯುದ್ಧರಂಗದಲ್ಲಿ
ಯಾವುದೇ ಸಂಶಯ ಹುಟ್ಟಿರಲಿಲ್ಲ. ಆದ್ದರಿಂದ ಅಲ್ಲಿ ಅವನಿಗೆ ಯಾವುದೇ ಉಪದೇಶದ ಅಗತ್ಯವಿರಲಿಲ್ಲ.
ಕೀಚಕ, ಜರಾಸಂಧ, ದುರ್ಯೋಧನ ಇತ್ಯಾದಿ ಅಸುರರನ್ನು ತನ್ನಲ್ಲಿದ್ದ ಬಾಹು ಬಲದಿಂದಲೇ ಮಣಿಸಿದ ಭೀಮ ಕೇವಲ ಬಲಶಾಲಿ
ಮಾತ್ರವಾಗಿರಲಿಲ್ಲ, ಅಷ್ಟೇ ಹಿರಿಯ ಜ್ಞಾನಿಯೂ ಆಗಿದ್ದ].
‘ದೇವೇಷ್ವೇವ
ನಚಾನ್ಯೇಷು ವಾಸುದೇವಪ್ರತೀಪತಃ ।
‘ಕ್ಷತ್ರಾದನ್ಯೇಷ್ವಪಿ
ಬಲಂ ಪ್ರಮಾಣಂ ಯತ್ರ ಕೇಶವಃ ॥೨.೨೨॥
‘ಪ್ರವೃತ್ತೋ
ದುಷ್ಟನಿಧನೇ ಜ್ಞಾನಕಾರ್ಯ್ಯೇ ತದೇವ ಚ ।
‘ಅನ್ಯತ್ರ
ಬ್ರಾಹ್ಮಣಾನಾಂ ತು ಪ್ರಮಾಣಂ ಜ್ಞಾನಮೇವ ಹಿ ॥೨.೨೩॥
“ಎಲ್ಲೆಲ್ಲಿ ಬಲವಿದೆಯೋ ಅಲ್ಲಲ್ಲಿ ಮಿಗಿಲಾಗಿರುವ ಜ್ಞಾನವಿದೆ,
ಮಿಗಿಲಾಗಿರುವ ಭಗವದ್ಭಕ್ತಿ ಇದೆ” ಎನ್ನುವ
ಈ ಮಾನದಂಡ
ಕೇವಲ ದೇವತೆಗಳಿಗೆ(ದೇವತೆಗಳ
ಅವತಾರಭೂತರಾದ ಕ್ಷತ್ರಿಯರಲ್ಲಿ) ಮಾತ್ರ ಅನ್ವಯವಾಗುತ್ತದೆ. ಇದು ಮನುಷ್ಯರಿಗಾಗಲೀ, ಅಸುರರಿಗಾಗಲೀ
ಅನ್ವಯವಾಗುವುದಿಲ್ಲ. ಕ್ಷತ್ರಿಯರಲ್ಲದೇ ಇರುವವರ(ಉದಾಹರಣೆಗೆ ಅಶ್ವತ್ಥಾಮ ಮೊದಲಾದ ಬ್ರಾಹ್ಮಣ
ರೂಪಿ ದೇವತೆಗಳ) ಬಲಚಿಂತನೆ ಮಾಡಬಹುದು. ಪರಮಾತ್ಮನೇ ಅವರ ಕಾರ್ಯದಲ್ಲಿ ತೊಡಗಿರುವುದರಿಂದ
ಅವರೆಲ್ಲರೂ ಕೂಡಾ ಗುಣದಲ್ಲಿ ಮಿಗಿಲು ಎಂದು ಚಿಂತನೆ ಮಾಡಬೇಕು.
[ಉಪನಿಷತ್ತು ಮೊದಲಾದವುಗಳನ್ನು ನೋಡಿದಾಗ ಮುಖ್ಯಪ್ರಾಣನಲ್ಲಿ ಆ
ಮಟ್ಟದ ಬಲ, ಆ ಮಟ್ಟದ ಜ್ಞಾನ ಕಾಣುತ್ತದೆ. ಅದರಿಂದಾಗಿ ಅಲ್ಲಿ ಗುಣ ಮೊದಲಾದವುಗಳಿವೆ
ಎಂದು ತಿಳಿಯತಕ್ಕದ್ದು]
ಪರಮಾತ್ಮ ದುಷ್ಟ ಸಂಹಾರದಲ್ಲಿಯೂ ಕೂಡಾ ಜ್ಞಾನವನ್ನು ಬಳಸಿ
ಕಾರ್ಯ ಪ್ರವೃತ್ತನಾಗಿರುವುದರಿಂದ, ದುಷ್ಟರ
ಸಂಹಾರಕ್ಕಾಗಿ ಪ್ರವೃತ್ತನಾಗಿರುವ ಅವನಿಗೆ ಸಹಾಯಕರಾಗಿದ್ದ ಬ್ರಾಹ್ಮಣರಲ್ಲಿಯೂ ಕೂಡಾ ಬಲವನ್ನೇ
ಮಿಗಿಲು ಎಂದು ಚಿಂತನೆ ಮಾಡಬೇಕು. ಇದನ್ನು ಬಿಟ್ಟು ಬೇರೆ ಸಂದರ್ಭದಲ್ಲಿ
ಜ್ಞಾನವಿರುವ ಬ್ರಾಹ್ಮಣನು ಮಿಗಿಲು ಎಂದು ಚಿಂತನೆ ಮಾಡತಕ್ಕದ್ದು.
‘ಕ್ಷತ್ರಿಯಾಣಾಂ
ಬಲಂ ಚೈವ ಸರ್ವೇಷಾಂ ವಿಷ್ಣುಕಾರ್ಯ್ಯತಾ ।
‘ಕೃಷ್ಣರಾಮಾದಿರೂಪೇಷು
ಬಲಕಾರ್ಯ್ಯೋ ಜನಾರ್ದ್ದನಃ ॥೨.೨೪॥
‘ದತ್ತವ್ಯಾಸಾದಿರೂಪೇಷು
ಜ್ಞಾನಕಾರ್ಯ್ಯಸ್ತಥಾ ಪ್ರಭುಃ ।
‘ಮತ್ಸ್ಯಕೂರ್ಮ್ಮವರಾಹಾಶ್ಚ
ಸಿಂಹವಾಮನಭಾರ್ಗ್ಗವಾಃ ॥೨.೨೫॥
‘ರಾಘವಃ
ಕೃಷ್ಣಬುದ್ಧೌ ಚ ಕೃಷ್ಣದ್ವೈಪಾಯನಸ್ತಥಾ ।
‘ಕಪಿಲೋ ದತ್ತವೃಷಭೌ
ಶಿಂಶುಮಾರೋ ರುಚೇಃ ಸುತಃ ॥೨.೨೬॥
‘ನಾರಾಯಣೋ ಹರಿಃ
ಕೃಷ್ಣಸ್ತಾಪಸೋ ಮನುರೇವ ಚ ।
‘ಮಹಿದಾಸಸ್ತಥಾ
ಹಂಸಃ ಸ್ತ್ರೀರೋಪೋ ಹಯಶೀರ್ಷವಾನ್ ॥೨.೨೭॥
‘ತಥೈವ
ಬಡಬಾವಕ್ತ್ರಃ ಕಲ್ಕೀ ಧನ್ವನ್ತರಿಃ ಪ್ರಭುಃ ।
‘ಇತ್ಯಾದ್ಯಾಃ
ಕೇವಲೋ ವಿಷ್ಣುರ್ನ್ನೈಷಾಂ ಭೇದಃ ಕಥಞ್ಚನ ॥೨.೨೮॥
ಕ್ಷತ್ರಿಯರ ಬಲವನ್ನು ಗಣನೆಗೆ ತೆಗೆದುಕೊಳ್ಳಬೇಕಾದರೆ
ಪರಮಾತ್ಮನ ಕಾರ್ಯವನ್ನು ಆತ ಮಾಡುತ್ತಿದ್ದಾನೋ ಇಲ್ಲವೋ,
ಪರಮಾತ್ಮನ ಸಹಾಯಕ ಆಗಿದ್ದಾನೋ ಇಲ್ಲವೋ ಎನ್ನುವುದನ್ನು ನೋಡಬೇಕು. ಅದಕ್ಕೆ ಅನುಗುಣವಾಗಿ ಅವರ ತಾರತಮ್ಯವನ್ನ ತೀರ್ಮಾನ ಮಾಡಬೇಕು.
ಪರಮಾತ್ಮನ ಅವತಾರಗಳಲ್ಲಿ ಮುಖ್ಯವಾಗಿ ಎರಡು ವಿಧ. (೧). ದುಷ್ಟ
ನಿಗ್ರಹಕ್ಕಾಗಿ ಬಲ ಪ್ರಧಾನವಾಗಿರುವ ರಾಮ-ಕೃಷ್ಣಾದಿ ರೂಪಗಳು (೨). ಜ್ಞಾನವೇ ಪ್ರಧಾನವಾಗಿರುವ
ದತ್ತ-ವ್ಯಾಸಾದಿ ರೂಪಗಳು.
ಈ ಹಿಂದೆ ಹೇಳಿರುವಂತೆ ನಾವು ಭಗವಂತನ ಅವತಾರ ಯಾವುದು
ಎನ್ನುವುದನ್ನು ಸ್ಪಷ್ಟವಾಗಿ ತಿಳಿದಿರಬೇಕು. ಇಲ್ಲಿ ಆಚಾರ್ಯರು ಭಗವಂತನ ಕೆಲವು ಅವತಾರಗಳ ಪಟ್ಟಿಯನ್ನು
ನೀಡಿದ್ದಾರೆ:
ಮತ್ಸ್ಯ, ಕೂರ್ಮ, ವರಾಹ, ನರಸಿಂಹ, ವಾಮನ, ಪರಶುರಾಮ,
ರಾಘವ(ಶ್ರೀರಾಮ), ಶ್ರೀಕೃಷ್ಣ, ಬುದ್ಧ, ವೇದವ್ಯಾಸ, ಕಪಿಲನಾಮಕ ಪರಮಾತ್ಮ, ಅತ್ತ್ರಿ ಹಾಗೂ ಅನಸೂಯೆರಲ್ಲಿ ಹುಟ್ಟಿದ ದತ್ತ ,
ಮೇರುದೇವಿ ಹಾಗೂ ನಾಭಿಯಲ್ಲಿ ಹುಟ್ಟಿದ ಋಷಭ, ಶಿಂಶುಮಾರ, ರುಚಿ-ಪ್ರಜಾಪತಿಯಲ್ಲಿ ಹುಟ್ಟಿದ ಯಜ್ಞ
ನಾಮಕ ಪರಮಾತ್ಮ, ನಾರಾಯಣ-ಹರಿ-ಕೃಷ್ಣ ಎನ್ನುವ ರೂಪದಲ್ಲಿ ಯಮಧರ್ಮರಾಯ ಮತ್ತು ಮೂರ್ತಿಯಲ್ಲಿ
ಹುಟ್ಟಿದ ರೂಪಗಳು, ತಾಪಸ ವಾಸುದೇವ(ಗಜೇಂದ್ರನನ್ನು ಕಾಪಾಡಿದ ರೂಪ), ಮಹಿದಾಸ, ಹಂಸ, ಸ್ತ್ರೀ
ರೂಪವನ್ನು ಧರಿಸಿದ ಹಯಗ್ರೀವ, ವಡವಾವಕ್ತ್ರ
ಎನ್ನುವ ಸಮುದ್ರದ ಮಧ್ಯದಲ್ಲಿರುವ ಬೆಂಕಿಯನ್ನು ಅವಲಂಬಿಸಿಕೊಂಡಿರುವ ರೂಪ, ಕಲ್ಕೀ, ಧನ್ವಂತರೀ, ಇವೆಲ್ಲವೂ ಕೇವಲ ವಿಷ್ಣುವಿನ
ಅವತಾರ ರೂಪಗಳು. ನಾರಾಯಣನಿಗೂ ಹಾಗೂ ಈ
ಅವತಾರರೂಪಗಳಿಗೂ ಯಾವುದೇ ಭೇದವಿಲ್ಲ.
‘ನ ವಿಶೇಷೋ ಗುಣೈಃ ಸರ್ವೈರ್ಬಲಜ್ಞಾನಾದಿಭಿಃ ಕ್ವಚಿತ್ ।
‘ಶ್ರೀರ್ಬ್ರಹ್ಮರುದ್ರೌ ಶೇಷಶ್ಚ
ವೀನ್ದ್ರೇನ್ದ್ರೌ ಕಾಮ ಏವ ಚ ॥೨.೨೯॥
‘ಕಾಮಪುತ್ರೋsನಿರುದ್ಧಶ್ಚ
ಸೂರ್ಯ್ಯಶ್ಚನ್ದ್ರೋ ಬೃಹಸ್ಪತಿಃ ।
‘ಧರ್ಮ್ಮ ಏಷಾಂ ತಥಾ
ಭಾರ್ಯ್ಯಾ ದಕ್ಷಾದ್ಯಾ ಮನವಸ್ತಥಾ ॥೨.೩೦॥
‘ಮನುಪುತ್ರಾಶ್ಚ
ಋಷಯೋ ನಾರದಃ ಪರ್ವತಸ್ತಥಾ ।
‘ಕಶ್ಯಪಃ
ಸನಕಾದ್ಯಾಶ್ಚ ವಹ್ನ್ಯಾದ್ಯಾಶ್ಚೈವ ದೇವತಾಃ ॥೨.೩೧॥
‘ಭರತಃ
ಕಾರ್ತ್ತವೀರ್ಯ್ಯಶ್ಚ ವೈನ್ಯಾದ್ಯಾಶ್ಚಕ್ರವರ್ತ್ತಿನಃ ।
‘ಗಯಶ್ಚ
ಲಕ್ಷ್ಮಣಾದ್ಯಾಶ್ಚ ತ್ರಯೋ ರೋಹಿಣಿನನ್ದನಃ ॥೨.೩೨॥
‘ಪ್ರದ್ಯುಮ್ನೋ
ರೌಗ್ಮಿಣೇಯಶ್ಚ ತತ್ಪುತ್ರಶ್ಚಾನಿರುದ್ಧಕಃ ।
‘ನರಃ ಫಲ್ಗುನ
ಇತ್ಯಾದ್ಯಾ ವಿಶೇಷಾವೇಶಿನೋ ಹರೇಃ ॥೨.೩೩॥
ಈ ಎಲ್ಲಾ ಅವತಾರಗಳಲ್ಲಿರುವ ಗುಣದಲ್ಲಿ,
ಬಲದಲ್ಲಿ , ಜ್ಞಾನದಲ್ಲಿಯಾಗಲೀ ಯಾವುದೂ ಹೆಚ್ಚಾಗಲೀ ಅಥವಾ ಕಡಿಮೆಯಾಗಲೀ ಇಲ್ಲ. ಎಲ್ಲವೂ ಸಮಾನವೇ. ಸಾಧಕನಾದವನು ಇವುಗಳಲ್ಲಿ ಅಭೇದವಿದೆ ಎನ್ನುವ ಸತ್ಯವನ್ನು
ತಿಳಿದಿರಬೇಕು. (ವ್ಯಾಸ ನಾಮಕ ಭಗವಂತನಿಗೆ ಬಲ
ಕಡಿಮೆ, ಕೃಷ್ಣ ನಾಮಕ ಭಗವಂತನಿಗೆ ಬಲ ಹೆಚ್ಚು ಎಂದೆಲ್ಲಾ ತಿಳಿಯಬಾರದು. ರಾಮನ ಲೆಕ್ಕ, ಕೃಷ್ಣನ ಲೆಕ್ಕ ಎಂಬಿತ್ಯಾದಿ ಭ್ರಮೆಗೆ ಬೀಳದೇ ಎಲ್ಲಾ
ಅವತಾರವನ್ನೂ ಸಮವಾಗಿ ಕಾಣತಕ್ಕದ್ದು).
ಲಕ್ಷ್ಮೀ ದೇವಿ ನಂತರ
ಬ್ರಹ್ಮ, ರುದ್ರ, ಶೇಷ, ಗರುಡ, ಇಂದ್ರ,
ಕಾಮ, ಕಾಮನ ಮಗನಾಗಿರುವ ಅನಿರುದ್ಧ(ಮೂಲರೂಪ), ಸೂರ್ಯ, ಚಂದ್ರ, ಬೃಹಸ್ಪತಿ, ಯಮಧರ್ಮರಾಜ ಹಾಗೂ
ಇವರ ಪತ್ನಿಯರು. ದಕ್ಷ ಮೊದಲಾದ ಪ್ರಜಾಪತಿಗಳು, ಸ್ವಾಯಮ್ಭುವ ಮೊದಲಾದ ಮನುಗಳು,
ಪ್ರಿಯವ್ರತ-ಉತ್ಥಾನಪಾದ ಮೊದಲಾದ ಮನುವಿನ ಮಕ್ಕಳು, ವಸಿಷ್ಠ, ವಿಶ್ವಾಮಿತ್ರರೇ ಮೊದಲಾದ ಋಷಿಗಳು,
ನಾರದ, ಪರ್ವತ, ಮೊದಲಾದ ದೇವಋಷಿಗಳು, ಕಾಶ್ಯಪ, ಸನಕ ಮೊದಲಾದ ಗ್ರಹಸ್ಥರು ಮತ್ತು ಸನ್ಯಾಸಿಗಳು,
ಅಗ್ನಿ ಮೊದಲಾದ ದೇವತೆಗಳು, ಭರತ, ಕೃತವೀರ್ಯನ ಮಗ ಅರ್ಜುನ, ಪೃಥು ಮೊದಲಾದ ಚಕ್ರವರ್ತಿಗಳು,
ಲಕ್ಷ್ಮಣ, ಭರತ, ಶತ್ರುಘ್ನ, ಬಲರಾಮ, ರುಗ್ಮಿಣಿಯ ಮಗ ಪ್ರದ್ಯುಮ್ನ, ಪ್ರದ್ಯುಮ್ನನ ಮಗನಾದ ಅನಿರುದ್ಧ, ಯಮಧರ್ಮರಾಜನ ನಾಕನೆಯ ಮಗ ನರ,
ಅರ್ಜುನ, ಇತ್ಯಾದಿಯಾಗಿರುವ ಇವರೆಲ್ಲರೂ ಪರಮಾತ್ಮನ ವಿಶೇಷವಾದ ಆವೇಶವನ್ನು ಹೊಂದಿರುವವರು.
ಅದರಿಂದಾಗಿ ಅವರೆಲ್ಲರೂ ಪೂಜ್ಯರು.
‘ವಾಲಿಸಾಮ್ಬಾದಯಶ್ಚೈವ ಕಿಞ್ಚಿದಾವೇಶಿನೋ ಹರೇ ।
‘ತಸ್ಮಾದ್ ಬಲಪ್ರವೃತ್ತಸ್ಯ
ರಾಮಕೃಷ್ಣಾತ್ಮನೋ ಹರೇಃ ॥೨.೩೪॥
‘ಅನ್ತರಙ್ಗಂ
ಹನೂಮಾಂಶ್ಚ ಭೀಮಸ್ತತ್ಕಾರ್ಯ್ಯಸಾಧಕೌ ।
‘ಬ್ರಹ್ಮಾತ್ಮಕೋ
ಯತೋ ವಾಯುಃ ಪದಂ ಬ್ರಾಹ್ಮಮಗಾತ್ ಪುರಾ ॥೨.೩೫॥
‘ವಾಯೋರನ್ಯಸ್ಯ ನ
ಬ್ರಾಹ್ಮಂ ಪದಂ ತಸ್ಮಾತ್ ಸ ಏವ ಸಃ ।
‘ಯತ್ರ ರೂಪಂ ತತ್ರ ಗುಣಾ ಭಕ್ತ್ಯಾದ್ಯಾಃ ಸ್ತ್ರೀಷು ನಿತ್ಯಶಃ ॥೨.೩೬॥
‘ರೂಪಂ ಹಿ ಸ್ಥೂಲದೃಷ್ಟೀನಾಂ
ದೃಶ್ಯಂ ವ್ಯಕ್ತಂ ತತೋ ಹಿ ತತ್ ।
‘ಪ್ರಾಯೋ ವೇತ್ತುಂ
ನ ಶಕ್ಯನ್ತೇ ಭಕ್ತ್ಯಾದ್ಯಾಃ ಸ್ತ್ರೀಷು ಯತ್ ತತಃ ॥೨.೩೭॥
‘ಯಾಸಾಂ ರೂಪಂ ಗುಣಾಸ್ತಾಸಾಂ ಭಕ್ತ್ಯಾದ್ಯಾ ಇತಿ
ನಿಶ್ಚಯಃ ।
‘ತಚ್ಚ
ನೈಸರ್ಗ್ಗಿಕಂ ರೂಪಂ ದ್ವಾತ್ರಿಂಶಲ್ಲಕ್ಷಣೈರ್ಯ್ಯುತಮ್
॥೨.೩೮॥
ಇನ್ನು ವಾಲಿ, ಸಾಮ್ಭಾ ಮೊದಲಾದವರೂ ಕೂಡಾ ಪರಮಾತ್ಮನ ಸ್ವಲ್ಪ
ಆವೇಶವನ್ನು ಹೊಂದಿದವರಾಗಿದ್ದರು. ಅದರಿಂದಾಗಿ ಅಷ್ಟು ದೊಡ್ಡದೊಡ್ಡ ಕೆಲಸಗಳನ್ನು ಅವರು ಮಾಡಲು
ಸಾಧ್ಯವಾಯಿತು.
ಬಲಕಾರ್ಯದಲ್ಲಿ ಪ್ರವೃತ್ತರಾಗಿದ್ದ ಶ್ರೀರಾಮ ಮತ್ತು
ಶ್ರೀಕೃಷ್ಣನಿಗೆ ಹನುಮಂತ ಮತ್ತು ಭೀಮಸೇನರು
ಆತ್ಮೀಯ ಸೇವಕರು, ಆತ್ಮೀಯ ಸಹಚರರು ಮತ್ತು
ಆತ್ಮೀಯ ಭಕ್ತರಾಗಿದ್ದರು. ಅವರು ಭಗವಂತನ ಕಾರ್ಯದಲ್ಲಿ ಹೆಗಲೆಣೆಯಾಗಿ ನಿಂತಿದ್ದರು.
ವೇದಾದಿಗಳಲ್ಲಿ, ಮಹಾಭಾರತದಲ್ಲಿ, ಬೇರೆ ಯಾವುದೇ
ಪುರಾಣಗಳಲ್ಲಿ, ಪಂಚರಾತ್ರ ಇತ್ಯಾದಿ ಗ್ರಂಥಗಳಲ್ಲಿ
ಮುಖ್ಯಪ್ರಾಣನ ಗುಣವನ್ನು ತೀರ್ಮಾನ ಮಾಡಬೇಕಾದರೆ ಬ್ರಹ್ಮನ ಗುಣವನ್ನೂ
ತಿಳಿದಿರಬೇಕಾಗುತ್ತದೆ. ಏಕೆಂದರೆ ಇಬ್ಬರೂ ಸಮಾನರಾಗಿರುವುದರಿಂದ. ಬ್ರಹ್ಮನಿಗೆ ಯಾವ ಗುಣ ಇದೆ ಎಂದು ಹೇಳುತ್ತಾರೋ ಅದು ಮುಖ್ಯಪ್ರಾಣನಿಗೂ
ಇದೆ ಎನ್ನುವುದನ್ನು ತಿಳಿದುಕೊಳ್ಳಬೇಕು. ಮುಖ್ಯಪ್ರಾಣನಿಗೆ ಯಾವ ಗುಣ ಇದೆ ಎನ್ನುತ್ತಾರೋ ಅದೇ
ಗುಣ ಬ್ರಹ್ಮನಿಗೂ ಇದೆ ಎಂದು ತಿಳಿದುಕೊಳ್ಳಬೇಕು.
ಮುಖ್ಯಪ್ರಾಣನನ್ನು ಬಿಟ್ಟು ಬ್ರಹ್ಮಪದವಿಯನ್ನು ಹೊಂದುವ ಯೋಗ್ಯತೆ ಇನ್ನ್ಯಾರಿಗೂ ಇಲ್ಲಾ.
[ಇವಿಷ್ಟು ಮಹಾಭಾರತದ ಪುರುಷ ಪಾತ್ರಗಳನ್ನು ನಾವು ಹೇಗೆ ನೋಡಬೇಕು ಎನ್ನುವ ಸಂಕ್ಷಿಪ್ತ ಚಿತ್ರಣ. ಮುಂದೆ ಸ್ತ್ರೀ ಪಾತ್ರವನ್ನು ಹೇಗೆ ನೋಡಬೇಕು ಎನ್ನುವ
ವಿವರಣೆಯನ್ನು ಆಚಾರ್ಯರು ನೀಡಿದ್ದಾರೆ].
ಎಲ್ಲಿ ರೂಪವಿದೆಯೋ ಅಲ್ಲಿ ಹೆಚ್ಚು ಗುಣಗಳಿವೆ
ಎಂದುಕೊಳ್ಳಬೇಕು. ವೇದವ್ಯಾಸರು ರೂಪವನ್ನು ವರ್ಣನೆ ಮಾಡುವುದು ಸುಮ್ಮನೆ ಅಲ್ಲ. ಗುಣಗಳನ್ನು
ಹೇಳಲಿಕ್ಕಾಗಿಯೇ ಆ ರೂಪದ ವರ್ಣನೆ ಮಾಡಲಾಗಿದೆ. ಸ್ಥೂಲ ದೃಷ್ಟಿ ಉಳ್ಳವರಿಗೂ ಮಹಾಭಾರತದಲ್ಲಿರುವ ದ್ರೌಪದಿಯ ರೂಪ
ಕಾಣುತ್ತದಷ್ಟೇ?
ಹೆಣ್ಣುಮಕ್ಕಳಲ್ಲಿ ಇರುವ ಭಕ್ತಿ ಮೊದಲಾದ ಗುಣಗಳನ್ನು ತಿಳಿಯಲು
ಸಾಧ್ಯವಿಲ್ಲವಷ್ಟೇ? ಹಾಗಾಗಿ ಯಾರಿಗೆ ರೂಪವಿದೆಯೋ ಅವರಿಗೆ ಭಕ್ತಿ ಮೊದಲಾದ ಗುಣಗಳಿವೆ
ಎಂದು ತಿಳಿದುಕೊಳ್ಳಬೇಕು. ರೂಪವೆನ್ನುವುದು ಸ್ವಾಭಾವಿಕವಾಗಿರಬೇಕು. ಅದು ೩೨ ಲಕ್ಷಣಗಳಿಂದ
ಕೂಡಿರಬೇಕು. [ಅಂದರೆ: ಸಾತ್ತ್ವಿಕ
ಸೌಂದರ್ಯಶಾಸ್ತ್ರದಲ್ಲಿ ಹೇಳಿದ ಲಕ್ಷಣಗಳಿಂದ ಕೂಡಿರಬೇಕು].
‘ನಾಲಕ್ಷಣಂ
ವಪುರ್ಮ್ಮಾತ್ರಂ ಗುಣಹೇತುಃ ಕಥಞ್ಚನ ।
‘ಆಸುರೀಣಾಂ
ವರಾದೇಸ್ತು ವಪುರ್ಮ್ಮಾತ್ರಂ ಭವಿಷ್ಯತಿ ॥೨.೩೯॥
ಕೇವಲ ಸೌಂದರ್ಯ
ಬೇರೆ, ಲಕ್ಷಣಭರಿತ ರೂಪ ಬೇರೆ. ಲಕ್ಷಣಭರಿತವಾದ ರೂಪ ಸೀತಾದೇವಿ, ದ್ರೌಪದೀದೇವಿ ಇಂಥವರಲ್ಲಿ
ಮಾತ್ರ ಕಾಣಬಹುದು. ಕೇವಲ ರೂಪವೆನ್ನುವುದು ಅಸುರ
ಸ್ತ್ರೀಯರಿಗೂ ಇರುತ್ತದೆ. ಅದು
ಶ್ರೇಷ್ಠವೆನಿಸುವುದಿಲ್ಲ. ನೈಸರ್ಗಿಕವಾದ ರೂಪ ೩೨ ಲಕ್ಷಣಗಳಿಂದ ಒಡಗೂಡಿಕೊಂಡಿರಬೇಕು.
[ಉದಾಹರಣೆಗೆ ಮಂಥರೆ. ಅವಳು ಬ್ರಹ್ಮದೇವರ ವರದ ಬಲದಿಂದ ಒಳ್ಳೆಯ
ಅಪ್ಸರೆಯಾಗಿದ್ದಳು. ನೋಡಲು ಚಂದವೇನೋ ಇದ್ದಳು.
ಆದರೆ ಲಕ್ಷಣ/ಗುಣ ಅಲ್ಲಿರಲಿಲ್ಲ. ಲಕ್ಷಣ ಮತ್ತು ಸೌಂದರ್ಯ ಎರಡೂ ಕೂಡಾ
ಒಟ್ಟಿಗೆ ಇರುವ ಯೋಗ ಏನಿದೆ, ಅದು ಒಳ್ಳೆಯ ಜೀವರಲ್ಲಿ ಮಾತ್ರ ಇರುತ್ತದೆ. ಇದು ಆಚಾರ್ಯರು
ಕೊಟ್ಟಿರುವ, ವೇದಾದಿಗಳಲ್ಲಿ ಹೇಳಿರುವ ಸೌಂದರ್ಯ
ಶಾಸ್ತ್ರ.
ಈ ಹಿನ್ನೆಲೆ ತಿಳಿದಾಗ ಮಹಾಭಾರತದಲ್ಲಿ ಏಕೆ ವೇದವ್ಯಾಸರು
ದ್ರೌಪದಿಯ ಸೌಂದರ್ಯವನ್ನು ಅಷ್ಟೊಂದು ವರ್ಣನೆ ಮಾಡಿದ್ದಾರೆ ಎನ್ನುವುದು ತಿಳಿಯುತ್ತದೆ. ಅದೇ ರೀತಿ ರಾಮಾಯಣದಲ್ಲಿ ವಾಲ್ಮೀಕಿ ಸೀತೆಯ
ಸೌಂದರ್ಯದ ವರ್ಣನೆ ಮಾಡಿದ್ದಾರೆ.
ಇವೆಲ್ಲವೂ
ಇತಿಹಾಸ ಪುರಾಣಗಳಲ್ಲಿ ಬರುವ ಸ್ತ್ರೀ ಲಕ್ಷಣ ವರ್ಣನೆಯ ಹಿಂದಿನ ಮಹತ್ವ. ಹೀಗಾಗಿ
ಮಹಾಭಾರತ, ರಾಮಾಯಣ ಇತ್ಯಾದಿ ಗ್ರಂಥಗಳು ಕೇವಲ ಕಾವ್ಯವಲ್ಲ. ಅದರಲ್ಲಿ ಕಾವ್ಯಕ್ಕಿಂತ ಮಿಗಿಲಾದ ಶಾಸ್ತ್ರ ಅಡಗಿದೆ.
ದ್ರೌಪದಿಯ ಸೌಂದರ್ಯ, ಸೀತೆಯ ಸೌಂದರ್ಯ ಇತ್ಯಾದಿ ವರ್ಣನೆಯ
ಹಿಂದೆ ಗುಣದ ಹೇಳಿಕೆ ಅಡಗಿದೆ. ದೇವತಾ ತಾರತಮ್ಯದ ಪ್ರಜ್ಞೆ ಎನ್ನುವುದು ಇದರಿಂದ ತಿಳಿಯುತ್ತದೆ.
ಒಬ್ಬ ಸಾಧಕ ಮಹಾಭಾರತವನ್ನ ಅಧ್ಯಯನ ಮಾಡಬೇಕಾದರೆ ಇವೆಲ್ಲವನ್ನೂ ಕೂಡಾ
ಗಮನದಲ್ಲಿಟ್ಟುಕೊಂಡಿರಬೇಕು].
‘ನ ಲಕ್ಷಣಾನ್ಯತಸ್ತಾಸಾಂ ನೈವ ಭಕ್ತಿಃ ಕಥಞ್ಚನ ।
‘ತಸ್ಮಾದ್
ರೂಪಗುಣೋದಾರಾ ಜಾನಕೀ ರುಗ್ಮಿಣೀ ತಥಾ ॥೨.೪೦॥
‘ಸತ್ಯಭಾಮೇತ್ಯಾದಿರೂಪಾ
ಶ್ರೀಃ ಸರ್ವಪರಮಾ ಮತಾ ।
‘ತತಃ ಪಶ್ಚಾದ್ ದ್ರೌಪದೀ
ಚ ಸರ್ವಾಭ್ಯೋ ರೂಪತೋ ವರಾ ॥೨.೪೧॥
ಲಕ್ಷಣವಿರದ ಕೇವಲ ರೂಪವಿರುವಲ್ಲಿ ಭಕ್ತಿ/ಗುಣ ಇರುವುದಿಲ್ಲ.
ರೂಪ ಹಾಗೂ ಗುಣದಲ್ಲಿ ಮಿಗಿಲಾದವರು ಸೀತೆ,
ರುಗ್ಮಿಣಿ , ಸತ್ಯಭಾಮೆ
ಮೊದಲಾದವರು. ಇವರೆಲ್ಲರೂ ಕೂಡಾ ಒಬ್ಬಳೇ ಆಗಿರುವ ಶ್ರೀಲಕ್ಷ್ಮಿಯ ರೂಪ. ಅದರಿಂದ ಸ್ತ್ರೀ ಪ್ರಪಂಚದಲ್ಲಿ ಅತ್ಯಂತ
ಮಿಗಿಲಾಗಿರುವವರು ಲಕ್ಷ್ಮೀದೇವಿ ಎನ್ನುವುದು ಮಹಾಭಾರತದಿಂದ ಸಿದ್ಧವಾಗುತ್ತದೆ.
ತದನಂತರ ಗುಣ/ರೂಪದಲ್ಲಿ ಮಿಗಿಲಾಗಿರುವುದು ದ್ರೌಪದೀದೇವಿ. ಇಷ್ಟೇ ಅಲ್ಲ,
ಪರಮಾತ್ಮನ ಕಾರ್ಯದಲ್ಲಿ ಭೀಮನ ನಂತರ ಬರುವವರು ದ್ರೌಪದೀ ದೇವಿಯೇ.
[ಹೀಗಾಗಿ ಮಹಾಭಾರತದಲ್ಲಿ
ಬರುವ ಈ ಎಲ್ಲಾ ತಾಯಂದಿರ (ದ್ರೌಪದಿಯಾಗಿರಬಹುದು, ರುಗ್ಮಿಣಿಯಾಗಿರಬಹುದು, ಇವರೆಲ್ಲರ) ವರ್ಣನೆ
ಏನಿದೆಯೋ, ಅದು ಅವರೆಲ್ಲರ ಗುಣಗಳನ್ನು ಚಿಂತನೆ
ಮಾಡಲಿಕ್ಕಾಗಿಯೇ ವೇದವ್ಯಾಸರು ಪ್ರಸ್ತುತಪಡಿಸಿದ ರೂಪ ವರ್ಣನೆ. ಹೀಗಾಗಿ ಅಲ್ಲಿ ನಾವು
ತಿಳಿದುಕೊಳ್ಳಬೇಕಾದ ವಿಷಯ ಅವರೆಲ್ಲರೂ ಅತ್ಯಂತ ಸುಂದರವಾಗಿದ್ದರು ಎಂದಷ್ಟೇ ಅಲ್ಲ. ಅವರು ಹಿರಿದಾದ ಗುಣಗಳಿಂದ ಎತ್ತರದ ಸ್ಥಾನದಲ್ಲಿದ್ದರು ಎಂದು. ಹೀಗೆ
ರೂಪದಿಂದ ಗುಣಗಳನ್ನೂ ಚಿಂತನೆ ಮಾಡಿ ನಾವು ಉಪಾಸನೆ ಮಾಡಬೇಕು].
No comments:
Post a Comment