ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Monday, December 4, 2017

Mahabharata Tatparya Nirnaya Kannada 1.101 - 1.117

ಪರಾ ಪೂರ್ವೇಷಾಂ ಸಖ್ಯಾ ವೃಣಕ್ತಿ ವಿತರ್ತ್ತುರಾಣೋ ಅಪರೇಭಿರೇತಿ ।

ಅನಾನುಭೂತೀರವಧೂನ್ವಾನಃ ಪೂರ್ವೀರಿನ್ದ್ರಃ ಶರದಸ್ತರ್ತ್ತರೀತಿ೧.೧೦೧

 

ಅಸುರರ  ಗೆಳೆತನವನ್ನು ಭಗವಂತ ಎಂದೆಂದಿಗೂ ನಿರಾಕರಿಸುತ್ತಾನೆ.  ಆದರೆ ಆತ ತನ್ನ  ಭಕ್ತರೊಡನೆ ಗೆಳೆತನವನ್ನು ಹೊಂದುತ್ತಾನೆ. ಈ ಎರಡರ ಅನುಭವ ಇಲ್ಲದವರನ್ನು  ಪಕ್ಕಕ್ಕೆ ಇಡುವ ಶ್ರೀಹರಿ,  ಅವರಿಗೆ  ಸುಖ ಹಾಗೂ ದುಃಖಗಳನ್ನು ಹೊಂದಿಸುತ್ತಾ  ಹಳೆಯ ಕಾಲಗಳನ್ನು ಕಳೆಯುತ್ತಾನೆ*.

[ *ಹಳೆಯ ಕಾಲಗಳನ್ನು ಕಳೆಯುತ್ತಾನೆ: ಇದೊಂದು ವಿಶಿಷ್ಟವಾದ ಪ್ರಯೋಗ. ನಾಳೆಯನ್ನು ಮುಂದೆ ಕಳೆಯುತ್ತಾನೆ ಎನ್ನುವುದು ಭೂತಕಾಲವನ್ನು  ಭವಿಷ್ಯತ್ತಿನಲ್ಲಿ ಪ್ರಯೋಗಿಸಿ  ಹೇಳಿರುವ ಮಾತು.  ವೇದದಲ್ಲಿ  ಈ ರೀತಿಯ ಪ್ರಯೋಗವನ್ನು ನಾವು ಕಾಣುತ್ತೇವೆ.  “ಅನಾದಿ-ಅನಂತ  ಕಾಲದಿಂದ  ನಡೆದುಕೊಂಡು ಬಂದಿರುವ ಪ್ರಕ್ರಿಯೆ” ಎಂದು ಹೇಳಲು  ಈ ರೀತಿಯಾದ ವ್ಯವಸ್ಥೆಯನ್ನು ವೇದ ಹೊಂದಿದೆ].  

[ಮುಕ್ತಿಪ್ರಾಪ್ತಿಯಾಗಲು   ದೇವರು ಬೇಡ, ದೇವರ ಅನುಗ್ರಹ ಬೇಡ.   ದೇವರು ಅನ್ನುವುದು ಧ್ಯಾನಕ್ಕೆ ಒಂದು ಒಳ್ಳೆಯ ನೆಪ, ಇತ್ಯಾದಿಯಾಗಿ ಹಲವರ ಅಭಿಪ್ರಾಯವಿದೆ.  ಈ ಮಾತನ್ನು ವೇದ ಪ್ರಮಾಣದೊಂದಿಗೆ ಆಚಾರ್ಯರು ನಿರಾಕರಣೆ ಮಾಡುವುದನ್ನು ನಾವು ಮುಂದೆ ನೋಡುತ್ತೇವೆ].

 

ತಮೇವಂ ವಿದ್ವಾನಮೃತ ಇಹ ಭವತಿ ನಾನ್ಯಃ ಪನ್ಥಾ ಅಯನಾಯ ವಿದ್ಯತೇ

ತಮೇವ ವಿದಿತ್ವಾsತಿ ಮೃತ್ಯುಮೇತಿ ನಾನ್ಯಃ ಪನ್ಥಾ ವಿದ್ಯತೇsಯನಾಯ೧.೧೦೨

 

ತಮೇವಂ ವಿದ್ವಾನ... ಇದು ಪುರುಷಸೂಕ್ತ . ತೈತ್ತಿರೀಯಾರಣ್ಯಕದಲ್ಲಿ  ಬಂದಿರುವ ಶ್ಲೋಕವಿದು(೩.೧೨.೭). ಇಲ್ಲಿ ಹೇಳುವಂತೆ:  “ನಾರಾಯಣನನ್ನು ಸರ್ವೋತ್ತಮನೆಂದೂ, ಸರ್ವೋತ್ಕೃಷ್ಟನೆಂದೂ ತಿಳಿದವನು ಅವನ ಅನುಗ್ರಹದಿಂದ ಮುಕ್ತನಾಗುತ್ತಾನೆ.  ಮೋಕ್ಷವನ್ನು ಹೊಂದಲು ಬೇರೆ ದಾರಿ ಇಲ್ಲ”.

ತಮೇವ ವಿದಿತ್ವಾsತಿ ಮೃತ್ಯುಮೇತಿ .... ಇದು ಶ್ವೇತಾಶ್ವತರ ಉಪನಿಷತ್ತಿನಲ್ಲಿಬಂದಿರುವ ಶ್ಲೋಕ(೩.೮). ಇಲ್ಲಿ ಹೇಳುತ್ತಾರೆ:  “ಭಗವಂತನನ್ನು ಅರಿತವನು ಮಾತ್ರ  ಮೃತ್ಯುವನ್ನು ದಾಟುತ್ತಾನೆ,  ಮುಕ್ತಿಯನ್ನು ಹೊಂದುವುದಕ್ಕೆ ಬೇರೆ ದಾರಿಯೇ ಇಲ್ಲ”.

ಈ ಎರಡು ವೇದವಾಣಿಗಳು ಪರಮಾತ್ಮ ಮುಕ್ತಿಗೆ ಅನಿವಾರ್ಯ,  ಅವನು ಕೇವಲ ಧ್ಯಾನಕ್ಕೆ ನೆಪವಾಗಿರುವ ವಸ್ತುವಲ್ಲ ಎನ್ನುವ ಮಾತನ್ನು ಸ್ಪಷ್ಟಪಡಿಸುತ್ತದೆ.  

 

[ಮಹಾಭಾರತವನ್ನು ಮೇಲ್ನೋಟದಲ್ಲಿ ನೋಡಿದರೆ  ಅಲ್ಲಿ ನಮಗೆ ಕಾಣುವುದು ಕೌರವ-ಪಾಂಡವರ ಇತಿಹಾಸದ ಕಥೆ. ಕೃಷ್ಣ ಇದ್ದಾನೆ, ಆತ ಪಾಂಡವರ ಸಹೋದರ ಮಾವನ ಮಗ.  ಅವನು ತನ್ನ ತಂತ್ರಗಾರಿಕೆಯಿಂದ ಪಾಂಡವರಿಗೆ ಜಯ ದೊರಕಿಸಿ ಕೊಟ್ಟ. ಪಾಂಡವರು ಬೇರೆಬೇರೆ ಕ್ರಮಗಳನ್ನು ಅನುಸರಿಸಿ, ಕೌರವರನ್ನು ಗೆದ್ದು ರಾಜ್ಯಭಾರ ಮಾಡಿದರು. ಇವಿಷ್ಟು ಎಲ್ಲರಿಗೂ ತಿಳಿಯುವ ವಿಷಯ .  ಆದರೆ ವೇದಕ್ಕೆ ಪೂರಕವಾಗಿ ಅಲ್ಲಿ ಅಡಕವಾಗಿರುವ ಇತರ ಯಾವ ವಿಷಯಯವೂ ಸುಲಭವಾಗಿ ಅರ್ಥ ಆಗುವುದಿಲ್ಲ.  ಇವೆಲ್ಲವೂ ತಿಳಿಯಬೇಕಾದರೆ  ಗುರುಗಳ ಉಪಸತ್ತಿಬೇಕು ಎನ್ನುತ್ತಾರೆ ಆಚಾರ್ಯರು ತಮ್ಮ ಮುಂದಿನ ಶ್ಲೋಕದಲ್ಲಿ].

 

ಯಸ್ಯ ದೇವೇ ಪರಾ ಭಕ್ತಿರ್ಯ್ಯಥಾ ದೇವೇ ತಥಾ ಗುರೌ ।

ತಸ್ಯೈತೇ[S]ಕಥಿತಾ ಹ್ಯರ್ತ್ಥಾಃ ಪ್ರಕಾಶನ್ತೇ ಮಹಾತ್ಮನಃ೧.೧೦೩

 

ಯಾರಿಗೆ ಪರಮಾತ್ಮನಲ್ಲಿ ಉತ್ಕೃಷ್ಟವಾದ ಭಕ್ತಿ ಇರುತ್ತದೋ, ಹಾಗೆಯೇ, ಗುರುಗಳಲ್ಲಿ ಅವರ ಯೋಗ್ಯತೆಗೆ ಅನುಗುಣವಾಗಿ ಗೌರವ ಇರುತ್ತದೋ, ಅಂತವರಿಗೆ ಮಹಾಭಾರತದಲ್ಲಿ ನೇರವಾಗಿ ಹೇಳದ ಅರ್ಥಗಳೂ ಕೂಡಾ ಹೊಳೆಯುತ್ತವೆ.  ಮಹಾಭಾರತದ ಪ್ರತಿಯೊಂದು ಅರ್ಥವನ್ನು ಒಬ್ಬರಿಂದ ವಿವರಿಸಲು ಸಾಧ್ಯವಿಲ್ಲ. ಅರ್ಥದ ಮಾರ್ಗದರ್ಶನವನ್ನಷ್ಟೇ ಕೊಡಲು ಸಾಧ್ಯ.

[ಆಚಾರ್ಯರ ಕಾಲದಲ್ಲಿ ಭಕ್ತಿ ಎನ್ನುವುದಕ್ಕೆ  ಸರಿಯಾದ ವಿವರಣೆ, ವ್ಯಾಖ್ಯಾನ ಇರಲಿಲ್ಲ.  ಏಕೆಂದರೆ ಆ ಕಾಲದಲ್ಲಿ   ಭಕ್ತಿಮಾರ್ಗ  ಮೂಢರಿಗೆ ಮತ್ತು ಜ್ಞಾನಮಾರ್ಗ ಬುದ್ಧಿವಂತರಿಗೆ ಎನ್ನುವ ತಪ್ಪು ತಿಳುವಳಿಕೆ  ಪ್ರಚಲಿತವಾಗಿತ್ತು.  ‘ಅರ್ಜುನ ದಡ್ಡನಾಗಿದ್ದ, ಅದಕ್ಕಾಗಿ ಕೃಷ್ಣ ‘ನನ್ನನ್ನು ಭಕ್ತಿ ಮಾಡು’ ಎಂದು ಹೇಳಿದ’,  ಇತ್ಯಾದಿ ಅಸಂಬದ್ಧ ತಿಳುವಳಿಕೆ ಆಗ ಚಾಲ್ತಿಯಲ್ಲಿತ್ತು.  ಇನ್ನು ಜ್ಞಾನಮಾರ್ಗ ಎಂದರೆ - ದೇವರು ಮತ್ತು ನಾನು ಒಂದೇ ಎಂದು ತಿಳಿದುಕೊಳ್ಳುವುದು! ಈ ರೀತಿ ತಿಳುವಳಿಕೆ ಹೊಂದಿದವನು ಮೋಕ್ಷವನ್ನು ಪಡೆಯುತ್ತಾನೆ..., ಇತ್ಯಾದಿಯಾದ ಮೋಹಕ ಚಿಂತನೆ ಜನರಲ್ಲಿತ್ತು. ಇಷ್ಟೇ ಅಲ್ಲದೇ  ಭಕ್ತಿ ಮಾಡಿ ಎಂದು ಹೇಳಿದವರೂ  ಕೂಡಾ ಭಕ್ತಿಯ ಉತ್ಕೃಷ್ಟ ಸ್ವರೂಪವನ್ನು ನಿಷ್ಕರ್ಷೆ ಮಾಡುತ್ತಿರಲಿಲ್ಲ. ಏಕೆಂದರೆ ಅವರಿಗೆ  ಭಕ್ತಿ ಎನ್ನುವುದು ಎಲ್ಲಿಯ ತನಕ ಎನ್ನುವ ಕಲ್ಪನೆ ಇರಲಿಲ್ಲ.  ಈ ಎಲ್ಲಾ ಕೊರತೆಗಳನ್ನು ಆಚಾರ್ಯರು ನೀಗಿಸುವುದನ್ನು ಮುಂದಿನ ಶ್ಲೋಕಗಳಲ್ಲಿ ಕಾಣುತ್ತೇವೆ].

 

ಭಕ್ತ್ಯರ್ತ್ಥಾನ್ಯಖಿಲಾನ್ಯೇವ ಭಕ್ತಿರ್ಮ್ಮೋಕ್ಷಾಯ ಕೇವಲಾ ।

ಮುಕ್ತಾನಾಮಪಿ ಭಕ್ತಿರ್ಹಿ ನಿತ್ಯಾನನ್ದಸ್ವರೂಪಿಣೀ ॥೧.೧೦೪

 

ಈ ಹಿಂದೆ ಹೇಳಿದಂತೆ ದಾನ, ಯಜ್ಞ, ತಪಸ್ಸು, ತೀರ್ಥಸ್ನಾನ, ಯಾತ್ರೆ, ಇವುಗಳೆಲ್ಲವೂ ಕೂಡಾ ಭಕ್ತಿ ಮಾಡಲಿಕ್ಕಾಗಿ ಇರುವಂತಹದ್ದು. [ಉದಾಹರಣೆಗೆ: ಭಗವದ್ಭಕ್ತಿಗೆ  ಯಾತ್ರೆ ಪೂರಕ. ನಾವು ಬೇರೆ ಊರಿಗೆ ಯಾತ್ರೆ ಹೋದಾಗ ಅಲ್ಲಿರುವ ವೈಚಿತ್ರ್ಯ, ಅಲ್ಲಿರುವ ಜನ, ಅಲ್ಲಿರುವ ಭೌಗೋಳಿಕ ಪರಿಸರ, ಅಲ್ಲಿ ಆಗುವ ಅಚ್ಚರಿ, ಇವುಗಳನ್ನೆಲ್ಲಾ ನೋಡಿ,  “ಇದನ್ನು ಸೃಷ್ಟಿ ಮಾಡಿದ ದೇವರು ಎಷ್ಟು ದೊಡ್ಡವನು,  ಇಂತಹ ಪರಮಾತ್ಮನ ಬಗ್ಗೆ ತಿಳಿಯಬೇಕು”  ಎನ್ನುವ  ಅಭಿಲಾಷೆ ಬೆಳೆದು ಭಗವದ್ಭಕ್ತಿ ಹುಟ್ಟುವಂತಾಗುತ್ತದೆ.].  ಅದರಿಂದಾಗಿ ಸದಾಚಾರ-ಸತ್ಕರ್ಮ ಅಂತ ಏನೆಲ್ಲಾ ಹೇಳಿದ್ದಾರೆ, ಅವುಗಳೆಲ್ಲವೂ  ಭಕ್ತಿಗಾಗಿಯೇ ಇರುವಂತಹದ್ದು.  ಭಕ್ತಿ ಇರುವುದು ಮೋಕ್ಷಕ್ಕಾಗಿ.  ಮುಕ್ತರಾದವರ  ಭಕ್ತಿ ಆನಂದ ಸ್ವರೂಪವಾಗಿರುತ್ತದೆ.

 

ಜ್ಞಾನಪೂರ್ವಃ ಪರಃ ಸ್ನೇಹೋ ನಿತ್ಯೋ ಭಕ್ತಿರಿತೀರ್ಯ್ಯತೇ

ಇತ್ಯಾದಿ ವೇದವಚನಂ ಸಾಧನಪ್ರವಿಧಾಯಕಮ್ ॥೧.೧೦೫

 

“ಜ್ಞಾನಪೂರ್ವಕವಾಗಿ  ‘ಪರಮಾತ್ಮ ಉತ್ಕೃಷ್ಟ’ ಎನ್ನುವ ಸ್ನೇಹ ಏನಿದೆ, ಅದು ಭಕ್ತಿ ಎನಿಸುತ್ತದೆ” ಎನ್ನುತ್ತದೆ ವೇದ. ಇವೇ ಮೊದಲಾದ ವೇದ ವಚನಗಳು ಸಾಧನೆ ಅನ್ನುವುದು ಯಾವ ರೀತಿಯಲ್ಲಿ ಇರುತ್ತದೆ ಎನ್ನುವುದನ್ನು ವಿವರಿಸುತ್ತವೆ. ಮುಕ್ತಿಯಲ್ಲೂ ಕೂಡಾ ಭಕ್ತಿ ಇರುತ್ತದೆ.  ಅದರಿಂದಾಗಿಯೇ ಗಾಯತ್ರಂ ತ್ವೋ ಗಾಯತಿ ಶಕ್ವರೀಷು(ಋಗ್ವೇದ, ೧೦.೭೧.೧೧) ಎನ್ನುವ ವೇದದ ಮಾತು ಸಂಗತ ಆಗುತ್ತದೆ.  ಇನ್ನು ತೈತ್ತಿರೀಯ ಉಪನಿಷತ್ತಿನಲ್ಲಿ ಬ್ರಹ್ಮದೇವರು ಹೇಳಿಕೊಂಡಿರುವಂತೆ  ಹಾವು ಹಾವು ಹಾವು ಅಹಮನ್ನಮಹಮನ್ನಮಹಾಮನ್ನಮ್ ಅಹಮನ್ನಾದಃ...(ಭೃಗುವಲ್ಲಿ, ಹತ್ತನೇ ಅನುವಾಕ).  “ನಾನು ಅನ್ನನಾಗಿದ್ದೇನೆ, ಅನ್ನಾದನಾಗಿದ್ದೇನೆ, ಪರಮಾತ್ಮನ ಅನುಗ್ರಹದಿಂದ ಆನಂದಪೂರ್ಣನಾಗಿದ್ದೇನೆ” ಎಂದು  ಬ್ರಹ್ಮದೇವರು ಹೇಳುವುದನ್ನು ಉಪನಿಷತ್ತು ಉಲ್ಲೇಖಿಸಿದೆ. ಈ ಎಲ್ಲಾ ಸಂಗತಿಗಳೂ ಕೂಡಾ ಜೀವರು ಹಾಗೂ ಪರಮಾತ್ಮ ಬೇರೆ, ಭಕ್ತಿ ಎನ್ನುವುದು ಜೀವರ ಸ್ವರೂಪ, ಮುಕ್ತಿ ಎನ್ನುವುದು ಆ  ಸ್ವರೂಪದ ಅನಾವರಣ ಎನ್ನುವುದನ್ನು ತಿಳಿಸುತ್ತದೆ.  ಧರ್ಮದ ಜೊತೆಗೆ  ಇಡೀ ಮಹಾಭಾರತ ಇದನ್ನೇ ಹೇಳುತ್ತದೆ.

 

ನಿಶ್ಶೇಷಧರ್ಮ್ಮಕರ್ತ್ತಾsಪ್ಯಭಕ್ತಸ್ತೇ ನರಕೇ ಹರೇ ।

ಸದಾ ತಿಷ್ಠತಿ ಭಕ್ತಶ್ಚೇದ್ ಬ್ರಹ್ಮಹಾsಪಿ ವಿಮುಚ್ಯತೇ೧.೧೦೬

 

“ಓ ಭಗವಂತನೇ,  ಎಲ್ಲಾ ಧರ್ಮವನ್ನು ಮಾಡಿದವನೂ ಕೂಡಾ,  ನಿನ್ನ ಭಕ್ತನಲ್ಲದೇ ಹೋದರೆ ನರಕದಲ್ಲಿ ಹೋಗಿ ಇರುತ್ತಾನೆ.   ನಿನ್ನ ಭಕ್ತ ಬ್ರಹ್ಮಹತ್ಯೆ* ಪಾಪ ಮಾಡಿದರೂ ಕೂಡಾ ಮುಕ್ತಿಯನ್ನು ಹೊಂದುತ್ತಾನೆ”.

[*ಇದು ಬ್ರಹ್ಮಹತ್ಯೆಗೆ ಕೊಟ್ಟ ಪರವಾನಿಗೆ ಅಲ್ಲ. ಇದು ಭಕ್ತಿಯ ಮಹತ್ತ್ವದ  ತೀವ್ರತೆಯನ್ನು ಹೇಳುವ ಮಾತು. ಪರಮಾತ್ಮನ ಭಕ್ತ ಒಂದು ವೇಳೆ ಬ್ರಹ್ಮಹತ್ಯಾ ಪಾಪಕ್ಕೆ ಗುರಿಯಾದರೂ ಅವನು ಅದಕ್ಕೆ ಬದ್ಧನಾಗುವುದಿಲ್ಲ].

 

ಧರ್ಮ್ಮೋ ಭವತ್ಯಧರ್ಮ್ಮೋsಪಿ ಕೃತೋ ಭಕ್ತೈಸ್ತವಾಚ್ಯುತ ।

ಪಾಪಂ ಭವತಿ ಧರ್ಮ್ಮೋsಪಿ ಯೋ ನ ಭಕ್ತೈಃ ಕೃತೋ ಹರೇ೧.೧೦೭

 

“ಶ್ರೀಹರಿಯೇ, ಭಕ್ತರು ಮಾಡಿದ ಅಧರ್ಮವೂ ಧರ್ಮವಾಗುತ್ತದೆ.  ಯಾರು ಭಕ್ತರಲ್ಲವೋ, ಅವರು ಮಾಡಿದ ಧರ್ಮವೂ ಅಧರ್ಮವಾಗುತ್ತದೆ”. [ಹೀಗಾಗಿ ಧರ್ಮದ ಕೇಂದ್ರಬಿಂದು ಭಗವಂತ. ದೇವರಿಗೆ ವಿರುದ್ಧವಾದ ನಡೆಯೆಲ್ಲವೂ ಅಧರ್ಮವೆನಿಸುತ್ತದೆ].

 

ಭಕ್ತ್ಯಾ ತ್ವನನ್ಯಯಾ ಶಕ್ಯ ಅಹಮೇವಂವಿಧೋsರ್ಜ್ಜುನ ।

ಜ್ಞಾತುಂ ದ್ರಷ್ಟುಂ ಚ ತತ್ವೇನ ಪ್ರವೇಷ್ಟುಂ ಚ ಪರನ್ತಪ೧.೧೦೮

 

ವಿಶ್ವರೂಪ ದರ್ಶನ  ಕಾಲದಲ್ಲಿ ಶ್ರೀಕೃಷ್ಣ ಅರ್ಜುನನಿಗೆ ಹೇಳಿರುವ  ಗೀತೆಯ  ಮಾತಿದು(೧೧.೫೪). “ಅರ್ಜುನಾ, ನನ್ನನ್ನು ಈ ಪರಿ ಸರಿಯಾಗಿ ಅರಿಯಲು, ಅರಿತು ಕಾಣಲು, ಕಂಡು ಸೇರಲು, ನನ್ನಲ್ಲೇ ನೆಲೆಗೊಂಡ ಭಕ್ತಿಯಿಂದ ಮಾತ್ರವೇ ಸಾಧ್ಯ”.

[ಭಗವಂತನನ್ನು ಕಾಣಲು ಇರುವ ಮೂಲ ಮಂತ್ರ ಭಕ್ತಿ’.  ಏಕನಿಷ್ಠೆಯಿಂದ ಭಗವಂತನನ್ನು ಅನನ್ಯವಾಗಿ ಭಕ್ತಿ ಮಾಡುವುದರಿಂದ ಆತನನ್ನು ಸೇರಲು ಸಾಧ್ಯ].

 

ಅನಾದಿದ್ವೇಷಿಣೋ ದೈತ್ಯಾ ವಿಷ್ಣೌ ದ್ವೇಷೋ ವಿವರ್ದ್ಧಿತಃ ।

ತಮಸ್ಯನ್ಧೇ ಪಾತಯತಿ ದೈತ್ಯಾನನ್ತೇ ವಿನಿಶ್ಚಯಾತ್ ॥೧.೧೦೯

 

ದೈತ್ಯರು ಅನಾದಿಕಾಲದಿಂದ ದ್ವೇಷಿಗಳಾಗಿಯೇ ಇರುತ್ತಾರೆ. [ಉದಾಹರಣೆಗೆ: ದುರ್ಯೋಧನ, ದುಶ್ಯಾಸನ, ಮೊದಲಾದವರೆಲ್ಲರು].  ವಿಷ್ಣುವಿನಲ್ಲಿ ಎಂದೆಂದಿಗೂ ದ್ವೇಷ ಮಾಡುವ ಅವರನ್ನು ಆ ದ್ವೇಷವೇ  ಅಂಧಂತಮಸ್ಸಿನಲ್ಲಿ ಬೀಳಿಸುತ್ತದೆ. 

 

ಪೂರ್ಣ್ಣದುಃಖಾತ್ಮಕೋ ದ್ವೇಷಃ ಸೋsನನ್ತೋ ಹ್ಯವತಿಷ್ಠತೇ ।

ಪತಿತಾನಾಂ ತಮಸ್ಯನ್ಧೇ ನಿಃಶೇಷಸುಖವರ್ಜ್ಜಿತೇ ॥೧.೧೧೦

 

ದ್ವೇಷ ಎನ್ನುವುದು ಸಂಪೂರ್ಣ ದುಃಖಾತ್ಮಕ.   ಅಂಧಂತಮಸ್ಸಿನಲ್ಲಿ  ಬಿದ್ದವರಿಗೆ ದುಃಖ ಅನಂತವಾಗಿರುತ್ತದೆ.

 

 

ಜೀವಾಭೇದೋ ನಿರ್ಗ್ಗುಣತ್ವಮಪೂರ್ಣ್ಣಗುಣತಾ ತಥಾ ।

ಸಾಮ್ಯಾಧಿಕ್ಯೇ ತದನ್ಯೇಷಾಂ ಭೇದಸ್ತದ್ಗತ ಏವ ಚ ॥೧.೧೧೧

 

ಪ್ರಾದುರ್ಭಾವವಿಪರ್ಯ್ಯಾಸಸ್ತದ್ಭಕ್ತದ್ವೇಷ ಏವ ಚ ।

ತತ್ಪ್ರಮಾಣಸ್ಯ ನಿನ್ದಾ ಚ ದ್ವೇಷಾ ಏತೇsಖಿಲಾ ಮತಾಃ ॥೧.೧೧೨

 

ಭಗವಂತ ನಮ್ಮ ಕಣ್ಣಿಗೆ ಕಾಣುವುದಿಲ್ಲ.  ಹೀಗಿರುವಾಗ ಆತನಲ್ಲಿ ದ್ವೇಷ ಅಂದರೆ ಏನು? ಈ ಪ್ರಶ್ನೆಗೆ ಉತ್ತರಿಸುತ್ತಾ ಆಚಾರ್ಯರು ಇಲ್ಲಿ ಕೆಲವು ದ್ವೇಷಗಳ ಪಟ್ಟಿಯನ್ನು ನೀಡಿದ್ದಾರೆ:

 

 (೧). ಜೀವನಿಂದ ಪರಮಾತ್ಮನಿಗೆ ಅಭೇದವನ್ನು ಹೇಳುವುದು. [ಪರಮಾತ್ಮನಲ್ಲಿ ಅಲ್ಪಗುಣ ಇಲ್ಲ. ಆದರೆ ಅಲ್ಪ ಗುಣವುಳ್ಳ ಜೀವರಲ್ಲಿ ಭಗವಂತ ಐಕ್ಯ ಎಂದು ಹೇಳಿದರೆ ಆಗ ಪರಮಾತ್ಮನನ್ನು ಅಲ್ಪಗುಣ ಎಂದು ಹೇಳಿದ ಹಾಗೆ ಆಗುತ್ತದೆ.  ಇದು ದ್ವೇಷದ ಒಂದು ರೂಪ]

(೨). ದೇವರಿಗೆ ಯಾವುದೇ ಗುಣವಿಲ್ಲ ಎನ್ನುವುದು ಪರಮಾತ್ಮನನ್ನು ದ್ವೇಷಿಸುವ ಒಂದು ರೂಪ.

(೩). ದೇವರ ಗುಣದಲ್ಲಿ ಅಪೂರ್ಣತೆಯನ್ನು ಹೇಳುವುದು.

(೪).  ಪರಮಾತ್ಮನಿಗೆ ಸಮನಾಗಿರುವುದನ್ನು ಹೇಳುವುದು  ಅಥವಾ ಪರಮಾತ್ಮನಿಗಿಂತ  ಇನ್ನ್ಯಾರೋ ದೊಡ್ಡವನು ಎಂದು ಹೇಳುವುದು, ಇತ್ಯಾದಿ.

(೭). ದೇವರಿಗೂ ದೇವರ ದೇಹಕ್ಕೂ ಭೇದವಿದೆ ಎನ್ನುವುದು.

(೮). ಪ್ರಾದುರ್ಭಾವ ವಿಪರ್ಯಾಸ.  ಅಂದರೆ ಅವತಾರವನ್ನು ತಪ್ಪಾಗಿ ತಿಳಿದುಕೊಳ್ಳುವುದು. [ಉದಾಹರಣೆಗೆ: ಭಗವಂತನ ಆವೇಶಾವತಾರಗಳನ್ನು ಅವನ ಅವತಾರ ಎಂದು ಚಿಂತನೆ ಮಾಡುವುದು; ಭಗವಂತನ ಅವತಾರವನ್ನು ಅವತಾರ ಅಲ್ಲ ಎಂದು ಚಿಂತನೆ ಮಾಡುವುದು, ಇತ್ಯಾದಿ].

(೯). ಪರಮಾತ್ಮನ ಭಕ್ತರನ್ನು ದ್ವೇಷಿಸುವುದು.

(೧೦). ದೇವರನ್ನು ನಮಗೆ ತಿಳಿಸಿಕೊಡುವ ಗ್ರಂಥಗಳ ನಿಂದನೆ. [ಉದಾಹರಣೆಗೆ: ವೇದದಲ್ಲಿ ಸರಿ ಹೇಳುವ ಭಾಗ ಒಂದಿದೆ, ತಪ್ಪಾಗಿ ಹೇಳುವ ಭಾಗ ಒಂದಿದೆ ಎನ್ನುವುದು; ಮಹಾಭಾರತ ಎನ್ನುವುದು ಕೇವಲ ರಸಾsಸ್ವಾಧನೆಗೆ ಮಾತ್ರ ಇರುವ ರಮ್ಯವಾದ ಕಥೆ ಎನ್ನುವುದು; ಭಗವಂತನೇ ವೇದವ್ಯಾಸ ರೂಪದಲ್ಲಿ ರಚಿಸಿಕೊಟ್ಟ ಗ್ರಂಥಗಳನ್ನು ಶಾಸ್ತ್ರವಲ್ಲ ಎಂದು ಚಿಂತನೆ ಮಾಡುವುದು; ಇಡೀ ಬ್ರಹ್ಮಸೂತ್ರ ಅಪರಮೋಕ್ಷವನ್ನೇ ಹೇಳುತ್ತದೆ ಮತ್ತು ಅದು  ಪರಮೋಕ್ಷವನ್ನು ಹೇಳುವುದಿಲ್ಲ ಎನ್ನುವುದು, ಇತ್ಯಾದಿ]. 

 

ಏತೈರ್ವಿಹೀನಾ ಯಾ ಭಕ್ತಿಃ ಸಾ ಭಕ್ತಿರಿತಿ ನಿಶ್ಚಿತಾ ।

ಅನಾದಿಭಕ್ತಿರ್ದ್ದೇವಾನಾಂ ಕ್ರಮಾದ್ ವೃದ್ಧಿಂ ಗತೈವ ಸಾ ॥೧.೧೧೩

 

ಯಾವ ಭಕ್ತಿಯಲ್ಲಿ ಈ ಅಂಶಗಳಿಲ್ಲವೋ, ಅದು ನಿಜವಾದ ಭಕ್ತಿ.  ಇಂತಹ ಭಕ್ತಿ ದೇವತೆಗಳಿಗೆ ಅನಾದಿಕಾಲದಿಂದಲೇ ಇರುತ್ತದೆ.   ಕ್ರಮೇಣ ಅದು ಬೆಳೆದುಕೊಂಡು ಹೋಗುತ್ತದೆ.

 

ಅಪರೋಕ್ಷದೃಶೇರ್ಹೇತುರ್ಮ್ಮುಕ್ತಿಹೇತುಶ್ಚ ಸಾ ಪುನಃ ।

ಸೈವಾsನನ್ದಸ್ವರೂಪೇಣ ನಿತ್ಯಾ ಮುಕ್ತೇಷು ತಿಷ್ಠತಿ ॥೧.೧೧೪

 

ಯಥಾ ಶೌಕ್ಲ್ಯಾದಿಕಂ ರೂಪಂ ಗೋರ್ಭವತ್ಯೇವ ಸರ್ವದಾ ।

ಸುಖಜ್ಞಾನಾದಿಕಂ ರೂಪಮೇವಂ ಭಕ್ತೇರ್ನ್ನಚಾನ್ಯಥಾ ॥೧.೧೧೫

 

ಪರಮಾತ್ಮನನ್ನು ಪ್ರತ್ಯಕ್ಷವಾಗಿ ಕಾಣಲು ಭಕ್ತಿ  ಸಾಧನವಾಗುತ್ತದೆ.  ಭಕ್ತಿ ಇಲ್ಲದವನಿಗೆ  ಮುಕ್ತಿ ಎಂದೆಂದಿಗೂ ಸಿಗುವುದಿಲ್ಲ.  ಮುಕ್ತಿಯ ಮೂಲ ಸಾಧನವೇ ಭಕ್ತಿ.  ಆನಂದ ಸ್ವರೂಪದಿಂದ ಭಕ್ತಿ ಮುಕ್ತರಲ್ಲೂ ಕೂಡಾ ಇರುತ್ತದೆ. ಅದರಿಂದಾಗಿ ಮುಕ್ತಿ ಸಿಕ್ಕಿದ ಮೇಲೆ  ದೇವರಲ್ಲಿ ಭಕ್ತಿ ಇರುತ್ತದೋ ಇಲ್ಲವೋ ಅನ್ನುವ ಸಂಶಯವೇ ಬೇಕಾಗಿಲ್ಲ. ಮುಕ್ತಿಯಲ್ಲಿ ಜೀವರ  ಸ್ವರೂಪವೇ ಭಕ್ತಿ.  ಅದೇ ಆನಂದರೂಪವೂ ಆಗಿರುತ್ತದೆ.

ನಾವು ಒಂದು   ಬಿಳಿ ಹಸುವನ್ನು ಉದಾಹರಣೆಯಾಗಿ  ತೆಗೆದುಕೊಂಡು ನೋಡಿದರೆ   ಅಲ್ಲಿ  ಬಿಳಿ ಬಣ್ಣ ಬೇರೆ, ಹಸು ಬೇರೆ ಆಗಿರುವುದಿಲ್ಲ. ಹಸುವೇ ಬಿಳಿ, ಬಿಳಿಯೇ ಹಸು. ಹಾಗೇ ಹಸುವಿನ ಬೇರೆ ಗುಣಗಳೂ ಕೂಡಾ  ಹಸುವೇ ಆಗಿರುತ್ತದೆ.  ಹೀಗೆ ಗುಣ ಹಾಗೂ ಗುಣಿ ಎರಡರ ನಡುವೆ ಅಭೇದ ಸಂಬಂಧ ಎನ್ನುವುದು ನಮ್ಮೆಲ್ಲರ ಅನುಭವ ಸಿದ್ಧ ವಿಷಯ.  ಇದೇ ರೀತಿ ಮುಕ್ತಿಯಲ್ಲಿ ಜೀವ ಎಂದರೆ ಸುಖ, ಜೀವ ಎಂದರೆ ಜ್ಞಾನ , ಜೀವ ಎಂದರೆ ಭಕ್ತಿಯೇ ಆಗಿರುತ್ತದೆ.

ಸಂಸಾರಾವಸ್ಥೆಯಲ್ಲಿ ನಮ್ಮ ಕ್ರಿಯೆ ಅನ್ನುವುದು ನಮ್ಮ ಗುಣ.  ಆ ಕ್ರಿಯೆ ನಿಂತರೆ ಸಾವು.  ಇಂತಹ ಪ್ರಕ್ರಿಯೆ  ಮುಕ್ತಿಯ ತನಕ ಮಾತ್ರ . ಮುಕ್ತಿಯನ್ನು ಹೊಂದಿದ ಮೇಲೆ ಈ ರೀತಿ ಒಂದು ಗುಣ ಹೊರಟುಹೋಗುವ  ಪ್ರಸಂಗವಿರುವುದಿಲ್ಲ.  ಮುಕ್ತಿಯನ್ನು ಹೊಂದಿದ ಮೇಲೆ  ಸಂಪೂರ್ಣ ಅವನೇ  ಜ್ಞಾನ ಹಾಗೂ ಅವನೇ ಆನಂದ.  ಆ ಜ್ಞಾನದಲ್ಲಿ ಭಕ್ತಿಯೂ ಕೂಡಾ ಸೇರಿಕೊಂಡಿರುತ್ತದೆ.  ಮುಕ್ತಿಯಲ್ಲಿ ಭಕ್ತಿ ಎನ್ನುವುದು ಜೀವಸ್ವರೂಪಭೂತವಾಗಿಯೇ ಇರುತ್ತದೆ. ಅದರಿಂದಾಗಿ ಸಂಸಾರಾವಸ್ಥೆಯಲ್ಲಿದ್ದಾಗ  ಮನಸ್ಸಿನಲ್ಲಿ ಭಕ್ತಿಯನ್ನು ಮಾಡಬೇಕು. ಇದರಿಂದಾಗಿ  ಕ್ರಮೇಣ ಆತ್ಮಿಕವಾದ ಸ್ವರೂಪಭೂತವಾದ ಭಕ್ತಿಯು ಅಭಿವ್ಯಕ್ತವಾಗುತ್ತದೆ.

ಮುಕ್ತಿಯಲ್ಲಿಯೂ ಕೂಡಾ ಪರಮಾತ್ಮನ ಬಗೆಗಿನ  ಜ್ಞಾನ , ಪರಮಾತ್ಮನ ಬಗೆಗಿನ ಪ್ರೀತಿ ಇದ್ದೇ ಇರುತ್ತದೆ.  ಹಾಗಾಗಿ ಮುಕ್ತಿಯಲ್ಲಿ ಭಕ್ತಿ ಎನ್ನುವುದು ಶಾಶ್ವತವಾಗಿ ಇದ್ದೇ ಇರುತ್ತದೆ. 

[ಸಂಸಾರಾವಸ್ಥೆಯಲ್ಲಿ ಗುಣ  ಗುಣಿಯನ್ನು ಬಂದು ಸೇರಿ ಬಿಟ್ಟು ಹೋಗಬಹುದು.  ಉದಾಹರಣೆಗೆ:  ಒಬ್ಬ ವ್ಯಕ್ತಿ ಬಾಲಕನಾಗಿದ್ದಾಗ ಇರುವ  ಬಾಲ್ಯ ಅನ್ನುವ ಗುಣ  ಯುವಕನಾದ ನಂತರ ಅವನಲ್ಲಿ ಇರುವುದಿಲ್ಲ.  ಒಬ್ಬ ವ್ಯಕ್ತಿ ಯುವಕನಾಗಿರುತ್ತಾನೆ.  ಆತನಲ್ಲಿ ಯೌವನವಿರುತ್ತದೆ.  ಅದೇ ವ್ಯಕ್ತಿ ಮುದುಕನಾದಾಗ ಆ  ಯೌವನ ಅನ್ನುವ ಗುಣ ಅವನಲ್ಲಿರುವುದಿಲ್ಲ. ಹೀಗೆ ಸಂಸಾರಾವಸ್ಥೆಯಲ್ಲಿ   ಗುಣ ಅನ್ನುವುದು ಬಂದು ಹೋಗುತ್ತಿರುತ್ತದೆ.  ಆದರೆ ವ್ಯಕ್ತಿ ಹಾಗೇ ಇರುತ್ತಾನೆ.  ಮುಕ್ತಿಯಲ್ಲಿ ಈ ರೀತಿ ಇರುವುದಿಲ್ಲ.  ಅಲ್ಲಿ  ಎಂದೆಂದಿಗೂ ಗುಣವೇ ವಸ್ತು.  ವಸ್ತುವೇ ಗುಣ. ವಸ್ತು ಬೇರೆ, ಗುಣ ಬೇರೆ ಅಲ್ಲ.  ಅಲ್ಲಿ ಗುಣ ಗುಣಿಯನ್ನು  ಬಿಟ್ಟು ಹೋಗುವ ಪ್ರಶ್ನೆಯೇ ಇರುವುದಿಲ್ಲ.

ಮಧ್ವಾಚಾರ್ಯರು ತಮ್ಮ ಬೇರೆಬೇರೆ ಗ್ರಂಥಗಳಲ್ಲಿ(ಗೀತಾ ತಾತ್ಪರ್ಯ, ಅಣುವ್ಯಾಖ್ಯಾನ, ಭಾಗವತ ತಾತ್ಪರ್ಯ, ಇತ್ಯಾದಿಗಳಲ್ಲೆಲ್ಲಾ) ಈ ಕುರಿತು ವಿವರಣೆ ನೀಡಿರುವುದನ್ನು ನಾವು ಕಾಣಬಹುದು.  ವಸ್ತು ಹಾಗೂ ಗುಣಗಳ ನಡುವೆ  ಸಂಸಾರಾವಸ್ಥೆಯಲ್ಲಿ  ಭೇದಾಭೇದವಿದ್ದರೆ, ವಸ್ತು  ಹಾಗೂ ಗುಣದ ನಡುವೆ ಮುಕ್ತಿಯಲ್ಲಿ ಅಭೇದವೇ ಇರುತ್ತದೆ. ಸಂಸಾರದಲ್ಲೂ ಕೂಡಾ   ಸಂಪೂರ್ಣ ಭೇದ ಇರುವುದಿಲ್ಲ. ಸಂಪೂರ್ಣ ಭೇದ ಅಂತಿದ್ದರೆ  ನಾವು ನಮ್ಮ ಯೌವನವನ್ನು ತೆಗೆದು ಪಕ್ಕದಲ್ಲಿಡುವ ಹಾಗಿರುತ್ತಿತ್ತು.   ಆದರೆ ಬಟ್ಟೆ ಕಳಚಿದಂತೆ ನಮ್ಮ ಗುಣಗಳನ್ನು ಕಳಚಿಡಲು ಸಾಧ್ಯವಿಲ್ಲ].

 

ಭಕ್ತ್ಯೈವ ತುಷ್ಟಿಮಭ್ಯೇತಿ ವಿಷ್ಣುರ್ನ್ನಾನ್ಯೇನ ಕೇನಚಿತ್ ।

ಸ ಏವ ಮುಕ್ತಿದಾತಾ ಚ ಭಕ್ತಿಸ್ತತ್ರೈಕಕಾರಣಮ್ ॥೧.೧೧೬

 

ನಾರಾಯಣನು ಭಕ್ತಿಯಿಂದಲೇ ಭಕ್ತರಿಗೆ ಅನುಗ್ರಹವನ್ನು ಮಾಡುತ್ತಾನೆ. ಬೇರೆ ಯಾವುದರಿಂದಲೂ ಪರಮಾತ್ಮ ಪ್ರೀತನಾಗುವುದಿಲ್ಲ.  ನಾರಾಯಣನೇ ಮುಕ್ತಿಯನ್ನು ಕೊಡುವವನು.  ಆ ಪರಮಾತ್ಮನ ಅನುಗ್ರಹಕ್ಕೆ ಭಕ್ತಿಯೇ ಮೂಲ ಕಾರಣ.

 

ಬ್ರಹ್ಮಾದೀನಾಂ ಚ ಮುಕ್ತಾನಾಂ ತಾರತಮ್ಯೇ ತು ಕಾರಣಮ್ ।

ತಾರತಮ್ಯಸ್ಥಿತಾsನಾದಿನಿತ್ಯಾ ಭಕ್ತಿರ್ನ್ನಚೇತರತ್ ॥೧.೧೧೭

 

ಬ್ರಹ್ಮ ಮೊದಲಾದ ಮುಕ್ತರ ತರತಮ ಭಾವಕ್ಕೂ ಕೂಡಾ ಆ ಭಕ್ತಿಯೇ ಕಾರಣ.  ಬ್ರಹ್ಮದೇವರು ಎಲ್ಲರಿಗಿಂತ ಹೆಚ್ಚಿನ ಆನಂದವನ್ನು ಮುಕ್ತಿಯಲ್ಲಿ ಅನುಭವಿಸುತ್ತಾರೆ.  ಏಕೆಂದರೆ  ಬ್ರಹ್ಮದೇವರು ಎಲ್ಲಾ ದೇವತೆಗಳಿಗಿಂತ ಯಾವಾಗಲೂ ಹೆಚ್ಚು  ಭಕ್ತಿಯನ್ನು ಹೊಂದಿರುತ್ತಾರೆ.  ಹೀಗೆ ಯಾರ ಭಕ್ತಿ ಹೆಚ್ಚೋ ಅವರು ತಾರತಮ್ಯದಲ್ಲಿ ಎತ್ತರದಲ್ಲಿರುತ್ತಾರೆ.

[ಇಡೀ ಜೀವಸ್ವಭಾವವನ್ನು ಆಕ್ರಮಿಸಿಕೊಂಡ ಭಗವದ್ ಭಕ್ತಿ ಮತ್ತು ಭಗವದ್ ದ್ವೇಷ ಇವುಗಳೇ ಸ್ವರೂಪ ನಿರ್ಣಾಯಕ.  ಒಬ್ಬನ ಸ್ವರೂಪ ಅನ್ನುವುದು ಗೊತ್ತಾಗುವುದು ದೇವರ ದ್ವೇಷದಲ್ಲಿ ಮತ್ತು ದೇವರ ಭಕ್ತಿಯಲ್ಲಿ. ಮಹಾಭಾರತವನ್ನು ಅರ್ಥ ಮಾಡಿಕೊಳ್ಳಲು ಇದೇ ಸೂತ್ರ.  ಪರಮಾತ್ಮನ ಭಕ್ತಿ ಉಳ್ಳವನು ಉತ್ತಮ, ಭಕ್ತಿ ಇಲ್ಲದೇ ದ್ವೇಷ ಉಳ್ಳವನು  ಅಧಮ.  ಈ ಹಿನ್ನೆಲೆಯಿಂದ  ಇತಿಹಾಸವನ್ನು ನೋಡಿದಾಗ ಅದು ನಮಗೆ ಅರ್ಥವಾಗುತ್ತದೆ].  

No comments:

Post a Comment