ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Wednesday, October 24, 2018

Mahabharata Tatparya Nirnaya Kannada 11.01-11.04


೧೧. ಭಗವದವತಾರಪ್ರತಿಜ್ಞಾ

ಹಿಂದಿನ ಅಧ್ಯಾಯಗಳಲ್ಲಿ ಆಚಾರ್ಯರು ರಾಮಾಯಣದ ಕಥೆಯನ್ನು ಮತ್ತು ವೇದವ್ಯಾಸರ ಕಥೆಯನ್ನು ನಿರ್ಣಯ ಮಾಡಿ, ಈಗ ಹನ್ನೊಂದನೇ ಅಧ್ಯಾಯದಲ್ಲಿ ಕೃಷ್ಣ ಮತ್ತು ಪಾಂಡವರ ಕಥೆಯನ್ನು ಕಾಲಾನುಕ್ರಮಣಿಕೆಯಲ್ಲಿ(ಅಂದರೆ ಯಾವ ಕಾಲಘಟ್ಟದಲ್ಲಿ ಯಾವ ಘಟನೆ ನಡೆದಿದೆ ಆ ಘಟನಾಕ್ರಮದಲ್ಲಿ)  ನಿರೂಪಿಸಿರುವುದನ್ನು ನಾವಿಲ್ಲಿ ಕಾಣುತ್ತೇವೆ.

ಓಂ
ಶಶಾಙ್ಕಪುತ್ರಾದಭವತ್ ಪುರೂರವಾಸ್ತಸ್ಯಾSಯುರಾಯೋರ್ನ್ನಹುಷೋ ಯಯಾತಿಃ ।
ತಸ್ಯಾSಸ ಪತ್ನೀಯುಗಳಂ ಸುತಾಶ್ಚ ಪಞ್ಚಾಭವನ್ ವಿಷ್ಣುಪದೈಕಭಕ್ತಾಃ     ೧೧.೦೧


ಚಂದ್ರನ ಮಗನಾದ ಬುಧನಿಂದ ಪುರೂರವ ರಾಜನು ಹುಟ್ಟಿದನು. ಪುರೂರವನಿಗೆ ಆಯುವು, ಆಯುವಿಗೆ  ನಹುಷನು, ನಹುಷನಿಗೆ ಯಯಾತಿಯು  ಹುಟ್ಟಿದನು. ಯಯಾತಿಗೆ ಇಬ್ಬರು ಪತ್ನಿಯರಿದ್ದರು ಮತ್ತು ನಾರಾಯಣನ ಪಾದದಲ್ಲಿಯೇ ಭಕ್ತಿಯುಳ್ಳ ಐದು ಜನ ಮಕ್ಕಳಿದ್ದರು. 


[ಇಲ್ಲಿ ಆಚಾರ್ಯರು ಶಶಾಂಕಪುತ್ರಾತ್’  ಎಂದು ಪ್ರಾರಂಭಿಸಿರುವುದನ್ನು ಕಾಣುತ್ತೇವೆ.  ಶಶಾಙ್ಕ ಅಂದರೆ ಚಂದ್ರ. ಚಂದ್ರ ಅತ್ತ್ರಿಯ ಮಗ.  ನಮಗೆ ತಿಳಿದಂತೆ, ಎಲ್ಲಾ ವಂಶಕ್ಕೂ ಮೂಲ ಪ್ರವರ್ತಕ ನಾರಾಯಣ. ಚತುರ್ಮುಖ ನಾರಾಯಣನ ಮೊದಲ ಮಗ.  ಅತ್ತ್ರಿ ಮತ್ತು ಮರೀಚಿ ಚತುರ್ಮುಖನ ಇಬ್ಬರು ಮಕ್ಕಳು. ಅತ್ತ್ರಿ-ಅನಸೂಯೆಗೆ ದತ್ತಾತ್ರೇಯ, ದುರ್ವಾಸ ಮತ್ತು ಸೋಮ ಎನ್ನುವ ಮೂರು ಜನ ಮಕ್ಕಳು.  ಭೂಮಿಯಲ್ಲಿ ಅವತರಿಸಿದ ಈ ಸೋಮನಲ್ಲಿ ಚತುರ್ಮುಖನ ವಿಶೇಷ ಆವೇಶ ಇತ್ತು ಎನ್ನುವುದನ್ನು ಭಾಗವತ ವಿವರಿಸುತ್ತದೆ. ಈ ಸೋಮನೇ ಚಂದ್ರವಂಶದ ಮೂಲಪುರುಷ.
ಮರೀಚಿಗೆ ಕಶ್ಯಪ ಎನ್ನುವ ಮಗನಿದ್ದ. ಇವನನ್ನು ಮಾರೀಚ ಎಂದೂ ಕರೆಯುತ್ತಾರೆ. ಕಶ್ಯಪ ಮತ್ತು ಅದಿತಿಯಲ್ಲಿ ಸಮಸ್ತ  ದೇವತೆಗಳು ಮತ್ತೆ ಹುಟ್ಟಿ ಬರುತ್ತಾರೆ. ಈ ಕಾರಣದಿಂದ, ಅದಿತಿಯ ಮಕ್ಕಳಾದ ದೇವತೆಗಳನ್ನು ಆದಿತ್ಯರು ಎಂದೂ ಕರೆಯುತ್ತಾರೆ. ಈ ರೀತಿ ಹುಟ್ಟಿದ ದೇವತೆಗಳಲ್ಲಿ ಸೂರ್ಯನೂ ಒಬ್ಬ. ಈತ ವಿವಸ್ವಾನ್ ಎನ್ನುವ ಹೆಸರಿನಿಂದ ಭೂಮಿಯಲ್ಲಿ ಅವತರಿಸಿದ. ಈತನೇ ಸೂರ್ಯವಂಶದ ಮೂಲಪುರುಷ.
ಈ ಹಿಂದೆ ವಿಶ್ಲೇಷಿಸಿದಂತೆ ದೇವತೆಗಳಿಗೆ ಅನೇಕ ಹುಟ್ಟು. ಅವರು ಬೇರೆಬೇರೆ ಸ್ಥಾನದಿಂದ ಮತ್ತೆ ಹುಟ್ಟಿ ಬರುತ್ತಾರೆ. ಪುರುಷಸೂಕ್ತದಲ್ಲಿ  ಹೇಳುವಂತೆ:  ಮೂಲತಃ ಸೂರ್ಯ ಮತ್ತು ಚಂದ್ರ ಭಗವಂತನ ಕಣ್ಣು ಮತ್ತು ಮನಸ್ಸಿನಿಂದ ಒಂದು ಬಾರಿ ಹುಟ್ಟಿಯಾಗಿದೆ. ಈಗ  ಮತ್ತೆ ಜಗತ್ತಿನ ವಿಸ್ತಾರಕ್ಕಾಗಿ ಅವರು ಅತ್ತ್ರಿ ಮತ್ತು ಕಶ್ಯಪರಲ್ಲಿ ಹುಟ್ಟಿ ಬರುತ್ತಾರೆ. ಇವರಿಬ್ಬರಿಂದ  ಮುಂದುವರಿದ ವಂಶವೇ ಸೂರ್ಯವಂಶ ಮತ್ತು ಚಂದ್ರವಂಶ.

ಚಂದ್ರನಿಗೆ ಬೃಹಸ್ಪತಿಪತ್ನಿ ತಾರೆಯಲ್ಲಿ  ಬುಧ ಹುಟ್ಟಿದರೆ, ವಿವಸ್ವಾನ್(ಸೂರ್ಯ) ಪುತ್ರನಾಗಿ  ವೈವಸ್ವತನ ಜನನವಾಗುತ್ತದೆ. ಈ ವೈವಸ್ವತ  ಮನ್ವಂತರಕ್ಕೆ ಅಧಿಪತಿ ದೇವತೆ ಕೂಡಾ ಹೌದು. ಆದ್ದರಿಂದ ಅವನನ್ನು ವೈವಸ್ವತಮನು ಎಂದೂ ಕರೆಯುತ್ತಾರೆ.

ವೈವಸ್ವತಮನುವಿಗೆ ಮಕ್ಕಳಿರಲಿಲ್ಲ.  ಹೀಗಾಗಿ ಅವನು ಪುತ್ರಜನನಾರ್ಥವಾಗಿ ಮಿತ್ರಾ-ವರುಣ ದೇವತಾಕವಾದ ಒಂದು ಇಷ್ಟಿಯನ್ನು ತನ್ನ ಕುಲಗುರುವಾದ ವಸಿಷ್ಠರ ಮುಖೇನ  ಮಾಡಿಸುತ್ತಾನೆ. ಹೀಗೆ ಮಾಡಿಸುವಾಗ, ಸಂಕಲ್ಪದ ಕಾಲದಲ್ಲಿ, ವೈವಸ್ವತಮನುವಿನ ಪತ್ನಿ ಶ್ರದ್ಧಾ ‘ತನಗೆ ಹೆಣ್ಣು ಮಗುವಾಗಬೇಕು’ ಎಂದು ಬೇಡಿಕೊಳ್ಳುತ್ತಾಳೆ. ಆದ್ದರಿಂದ ಅವರಿಗೆ ಹೆಣ್ಣುಮಗುವಾಗುತ್ತದೆ. ಆ ಮಗುವಿಗೆ ‘ಇಳಾ’ ಎಂದು ನಾಮಕರಣ ಮಾಡುತ್ತಾರೆ. ಆದರೆ ವೈವಸ್ವತಮನುವಿಗೆ ಗಂಡುಮಗು ಬೇಕಾಗಿರುತ್ತದೆ. ಅದಕ್ಕಾಗಿ ಆತ  ವಸಿಷ್ಠರಲ್ಲಿ ಪ್ರಾರ್ಥನೆ ಮಾಡಿ, ತನ್ನ ಮಗಳ  ಲಿಂಗವನ್ನು ಬದಲಿಸುತ್ತಾನೆ. ಮೊದಲು ಹುಟ್ಟಿದ ಹೆಣ್ಣುಮಗುವೇ(ಇಳಾ) ಗಂಡಾಗುತ್ತದೆ. ಅವನಿಗೆ ‘ಸುದ್ಯುಮ್ನ’ ಎಂದು ನಾಮಕರಣ ಮಾಡುತ್ತಾರೆ.
ಈ ಸುದ್ಯುಮ್ನ ಒಮ್ಮೆ ಶಿವ-ಪಾರ್ವತಿಯರ ಏಕಾಂತ ತಾಣವಾದ ‘ಕುಮಾರವನ’ ಎನ್ನುವ, ಬೇರೆ ಯಾರೂ ಪ್ರವೇಶಿಸಲು ಅವಕಾಶವಿಲ್ಲದ, ಯಾರೇ ಪ್ರವೇಶಿಸಿದರೂ ಕೂಡಾ, ಅವರು ಹೆಣ್ಣಾಗುವಂತೆ ಬಂಧನ ಮಾಡಿರುವ ವನವನ್ನು ತಿಳಿಯದೇ ಪ್ರವೇಶಿಸುತ್ತಾನೆ. ಇದರಿಂದಾಗಿ ಆತ ಮೊದಲಿನಂತೇ ಹೆಣ್ಣಾಗುತ್ತಾನೆ. (ಇಳೆಯಾಗುತ್ತಾನೆ).

ಈ ಇಳೆಯನ್ನು ಚಂದ್ರನ ಮಗ ಬುಧ ಇಷ್ಟಪಡುತ್ತಾನೆ. ಆ ಬುಧ ಮತ್ತು ಇಳೆ ಇವರಿಗೆ ಹುಟ್ಟಿದ ಮಗುವೇ ಪುರೂರವ(ಶಶಾಙ್ಕಪುತ್ರಾದಭವತ್ ಪುರೂರವಾ). ಚಂದ್ರವಂಶ ಮತ್ತು ಸೂರ್ಯವಂಶ ಎರಡೂ ಇಲ್ಲಿ ಸೇರುತ್ತವೆ.   ಮುಂದೆ ವೈವಸ್ವತಮನುವಿಗೂ ಬೇರೆ ಮಕ್ಕಳಾಗುತ್ತಾರೆ ಮತ್ತು ಇಕ್ಷ್ವಾಕುವಿನಿಂದ ಆ ವಂಶ ಬೇರೆ ಶಾಖೆಯಾಗಿ ಬೆಳೆಯುತ್ತದೆ. ಅದೇ ರೀತಿ ಬುಧ ಮತ್ತು ಇಳೆಯ ಪುತ್ರನಾದ ಪುರೂರವನಿಂದ   ಚಂದ್ರವಂಶ ಪರಂಪರೆ ಮುಂದುವರಿಯುತ್ತದೆ. ಬ್ರಹ್ಮಪುರಾಣದಲ್ಲಿ(೩೮.೭೮.೯) ಹೇಳುವಂತೆ: ‘ಜಾತಮಾತ್ರಃ ಸುತೋ ರಾವಮಕರೊತ್ ಸ ಪೃಥುಸ್ವನಂ ಯಸ್ಮಾತ್ ಪುರು ರವೋSಸ್ಯೇತಿ ತಸ್ಮಾದೇಶ ಪುರೂರವಾಃ’ ಹುಟ್ಟಿದ ತಕ್ಷಣ ಬೆಳೆದವರ ಧ್ವನಿಯನ್ನೂ ಮೀರಿಸಿ ಕಿರುಚಿದ್ದರಿಂದ ಈತನಿಗೆ ಪುರೂರವ’ ಎನ್ನುವ ಹೆಸರು ಬಂತು.

ಈ ಪುರೂರವನಿಗೆ ಪತ್ನಿ ಊರ್ವಶಿಯಲ್ಲಿ ಆಯುಃ , ಶ್ರುತಾಯುಃ,  ಸತ್ಯಾಯುಃ, ರಯಃ , ವಿಜಯಃ ಮತ್ತು  ಜಯಃ ಎನ್ನುವ ಆರು ಜನ ಮಕ್ಕಳಾಗುತ್ತಾರೆ. ಇವರಲ್ಲಿ ಜೇಷ್ಠನಾದ ಆಯುಃ ವಂಶಧಾರಕನಾಗುತ್ತಾನೆ.  

ಪುರೂರವನ ಐದನೇ ಮಗನಾದ ‘ವಿಜಯ’ನ ವಂಶದಲ್ಲೇ ಜಹ್ನುಃ, ಗಾದಿ, ವಿಶ್ವಾಮಿತ್ರ  ಮೊದಲಾದವರು ಬಂದಿರುವುದು. ಗಾದಿಯ ಮಗಳನ್ನು (ವಿಶ್ವಾಮಿತ್ರನ ಅಕ್ಕನಾದ ಸತ್ಯವತಿಯನ್ನು) ರುಚೀಕ ಎನ್ನುವ ಋಷಿ ಮದುವೆಯಾಗುತ್ತಾನೆ. ಅವರ ದಾಂಪತ್ಯದಲ್ಲಿ  ಹುಟ್ಟಿದವನೇ ಜಮದಗ್ನಿ. ಈ ಜಮದಗ್ನಿ ಮತ್ತು ರೇಣುಕೆಯ ಮಗನೇ ಸಾಕ್ಷಾತ್ ಭಗವಂತನ ಅವತಾರವಾದ ಪರಶುರಾಮ. 

ಮೇಲೆ ಹೇಳಿದಂತೆ, ಪುರೂರವನ ಮೊದಲ ಮಗನಾದ ಆಯುವಿನಿಂದ ಚಂದ್ರವಂಶ ಮುಂದುವರಿಯುತ್ತದೆ. ಆಯುವಿಗೆ  ನಹುಷಃ, ಕ್ಷತ್ರವೃದ್ಧ, ರಜಿ, ಸ್ತಮ್ಭಃ ಮತ್ತು ಅನೇನ ಎನ್ನುವ ಐದುಜನ ಮಕ್ಕಳು. ಇವರಲ್ಲಿ ಜ್ಯೇಷ್ಠ ಪುತ್ರ ನಹುಷ.  ನಹುಷಃ ಎಂದರೆ ಎಂದೂ ಧರ್ಮವನ್ನು ಬಿಟ್ಟು ಹೋಗದವನು ಅಥವಾ ಸದಾ  ಧರ್ಮಕ್ಕೆ ಬದ್ಧನಾಗಿ ನಡೆಯುವವನು ಎಂದರ್ಥ. ಈತನಿಂದ ಚಂದ್ರವಂಶ ಪರಂಪರೆ ಮುಂದುವರಿಯುತ್ತದೆ.

ನಹುಷನಿಗೆ ಪತ್ನಿ ಅಶೋಕ ಸುಂದರಿಯಲ್ಲಿ ಯತಿಃ, ಯಯಾತಿಃ, ಸಂಯಾತಿಃ, ಆಯತಿಃ, ವಿಯತಿಃ, ಕೃತಿಃ ಎನ್ನುವ ಆರು ಜನ ಮಕ್ಕಳಾಗುತ್ತಾರೆ. ಇವರಲ್ಲಿ ಹಿರಿಯ ಮಗನಾದ ಯತಿ ತನ್ನ ಹೆಸರಿಗೆ ತಕ್ಕಂತೆ ಭಗವಂತನನ್ನು ಸೇರುವ ಯತ್ನಕ್ಕಾಗಿ ರಾಜ್ಯಾಧಿಕಾರವನ್ನು ತೊರೆದು  ಕಾಡಿಗೆ ಹೊರಟುಹೋಗುತ್ತಾನೆ. ಹೀಗಾಗಿ ಎರಡನೇ ಮಗ ಯಯಾತಿ ವಂಶಧಾರಕನಾಗುತ್ತಾನೆ. ಕಾರ ವಾಚ್ಯನಾದ ಭಗವಂತನಲ್ಲಿ ಸದಾ ಮನಸ್ಸಿಟ್ಟಿರುವನಾಗಿರುವುದರಿಂದ (ಭಗವದ್ ಭಕ್ತನಾದ್ದರಿಂದ) ಈತನಿಗೆ ಯಯಾತಿ ಎಂದು ಹೆಸರು. ಯಯಾತಿಗೆ ಇಬ್ಬರು ಹೆಂಡತಿಯರು. ಮೊದಲನೆಯವಳು ದೈತ್ಯಗುರು ಶುಕ್ರಾಚಾರ್ಯರ ಪುತ್ರಿಯಾದ  ದೇವಯಾನಿ, ಎರಡನೆಯವಳು ಅಂದಿನ ದೈತ್ಯರಾಜನಾಗಿದ್ದ ವೃಷಪರ್ವನ ಮಗಳಾದ ಶರ್ಮಿಷ್ಠೆ.

ಹೀಗೆ ಚಂದ್ರನಿಂದ ಪ್ರಾರಂಭಗೊಂಡು ನಹುಷನ ತನಕದ ವಂಶವೃಕ್ಷದ ಚಿತ್ರಣವನ್ನು ಇಲ್ಲಿ ನೀಡಲಾಗಿದೆ:
* ವಿಜಯನ ವಂಶದಲ್ಲೇ ಜಹ್ನುಃ, ಗಾದಿ, ವಿಶ್ವಾಮಿತ್ರ ಮೊದಲಾದವರು ಬಂದಿರುವುದು. ಗಾದಿಯ ಮಗಳು ಸತ್ಯವತಿಯನ್ನು (ವಿಶ್ವಾಮಿತ್ರನ ಅಕ್ಕನನ್ನು)  ರುಚೀಕ ಎನ್ನುವ ಋಷಿ ಮದುವೆಯಾಗುತ್ತಾನೆ. ರುಚೀಕ-ಸತ್ಯವತಿ ದಾಂಪತ್ಯದಲಿ  ಹುಟ್ಟಿದವನೇ ಜಮದಗ್ನಿ.  ಈ ಜಮದಗ್ನಿ ಮತ್ತು ರೇಣುಕೆಯ ಮಗನೇ ಸಾಕ್ಷಾತ್ ಭಗವಂತನ ಅವತಾರವಾದ ಪರಶುರಾಮ.

^ ಯಯಾತಿಯಿಂದ ಮುಂದುವರಿದ ಚಂದ್ರವಂಶದ ವಿವರವನ್ನು ಮುಂದಿನ ಶ್ಲೋಕದಲ್ಲಿ ವಿವರಿಸಲಾಗಿದೆ.


ಯದುಂ ಚ ತುರ್ವಶುಂ ಚೈವ ದೇವಯಾನೀ ವ್ಯಜಾಯತ ।
ದ್ರುಹ್ಯುಂ ಚಾನುಂ ತಥಾ ಪೂರುಂ ಶರ್ಮ್ಮಿಷ್ಠಾ ವಾರ್ಷಪರ್ವಣಿ  ೧೧.೦೨

ದೇವಯಾನಿ ಮತ್ತು ಶರ್ಮಿಷ್ಠೆ ಯಯಾತಿಯ ಇಬ್ಬರು ಪತ್ನಿಯರು. ದೇವಯಾನಿಯಲ್ಲಿ ಯಯಾತಿಗೆ ‘ಯದು’ ಮತ್ತು  ‘ತುರ್ವಶು’ ಎನ್ನುವ ಇಬ್ಬರು ಮಕ್ಕಳಾದರೆ, ವೃಷಪರ್ವನ ಮಗಳಾದ ಶರ್ಮಿಷ್ಠೆಯಲ್ಲಿ  ದ್ರುಹ್ಯು, ಅನು  ಮತ್ತು ಪೂರು ಎನ್ನುವ ಮೂರು ಜನ ಮಕ್ಕಳು ಹುಟ್ಟಿದರು.


         



[ಯಯಾತಿಯ ಮಕ್ಕಳೆಲ್ಲರೂ ಕೂಡಾ  ಭಗವಂತನ ವಿಶಿಷ್ಟ ಭಕ್ತರಾಗಿದ್ದರು. ಭಗವಂತನನ್ನು ಸ್ತೋತ್ರಮಾಡುವಂತಹ ವೇದದಲ್ಲೂ ಕೂಡಾ ಇವರ ಹೆಸರುಗಳು ಬಂದಿರುವುದನ್ನು ನಾವು ಕಾಣುತ್ತೇವೆ. ಭಗವಂತನ ಪರಿವಾರದವರು ಎನ್ನುವ ಕಾರಣಕ್ಕೆ ಹಾಗು ಸಮಸ್ತ ದೇವತೆಗಳ ಪ್ರೀತಿಗೆ ಪಾತ್ರರಾದ ಕಾರಣಕ್ಕಾಗಿ  ಇವರನ್ನು ಆಚಾರ್ಯರು ಇಲ್ಲಿ  ವಿಷ್ಣುಪದೈಕಭಕ್ತಾಃ ಎಂದು  ವರ್ಣಿಸಿದ್ದಾರೆ. ವ್ಯುತ್ಪತ್ತಿಯಲ್ಲಿ ನೋಡಿದರೆ   ಯದುಎಂದರೆ: ಬಹಳ ದೊಡ್ಡ ಜ್ಞಾನಿ ಎಂದರ್ಥ. ಅದೇರೀತಿ  ತುರ್ವಶು ಎನ್ನುವಲ್ಲಿ ‘ತುರ’ ಎಂದರೆ ತ್ವರಿತಗತಿಯಲ್ಲಿ ಚಲಿಸುವವ. ಮುಖ್ಯಪ್ರಾಣನನ್ನು ವೇದದಲ್ಲಿ ‘ತುರ’ ಎಂದು ಋಷಿಗಳು ಕರೆದಿದ್ದಾರೆ. ಅವನನ್ನು ಭಕ್ತಿಯಿಂದ ವಶಮಾಡಿಕೊಂಡವ ಆದ್ದರಿಂದ ಈತ ತುರ್ವಶು. ದ್ರುಹ್ಯು ಎಂದರೆ ಶತ್ರುಗಳನ್ನು ಚನ್ನಾಗಿ ಜಯಿಸಿದವನು. ಅನುಃ: ಪ್ರಾಣಶಕ್ತಿ ಉಳ್ಳವನು. ಪೂರು: ಗುಣಗಳಿಂದ ಪೂರ್ಣನಾದವನು, ಗುಣಸಂಪನ್ನ.
ಆಚಾರ್ಯರು ಎರಡನೇ ಶ್ಲೋಕದಲ್ಲಿ ಪೂರು ವಂಶದ ಕುರಿತು ಹೇಳದೇ, ಯದುವಂಶವನ್ನೇ ಮೊದಲು ಹೇಳಿರುವುದನ್ನು ನಾವು ಗಮನಿಸಬೇಕು. ನಮಗೆ  ತಿಳಿದಂತೆ ಯಯಾತಿ ತನ್ನ ರಾಜ್ಯವನ್ನು ಯದುವಿಗೆ ನೀಡುವುದಿಲ್ಲ ಪೂರುವಿಗೆ ನೀಡುತ್ತಾನೆ.  ಯದು ರಾಜ್ಯಭ್ರಷ್ಟನಾಗುತ್ತಾನೆ. ಆದರೂ ಕೂಡಾ, ಯದುವಂಶವನ್ನೇ ಆಚಾರ್ಯರು ಮೊದಲು ಹೇಳಿದ್ದಾರೆ.  ಏಕೆಂದರೆ ಭಗವಂತ ಶ್ರೀಕೃಷ್ಣರೂಪದಿಂದ ಅವತರಿಸಿರುವುದು ಯದುವಂಶದ ಶಾಖೆಯಲ್ಲಿ.  ಭಾಗವತದಲ್ಲಿ(೯.೨೦.೧೯) ಹೇಳುವಂತೆ: ಯದೋರ್ವಂಶಂ ನರಃ ಶ್ರುತ್ವಾ ಸರ್ವಪಾಪೈಃ ಪ್ರಮುಚ್ಯತೇ  ಯತ್ರಾವತೀರ್ಣೋ ಭಗವಾನ್  ಪರಮಾತ್ಮ ನರಾಕೃತಿಃ’  ಪರಬ್ರಹ್ಮನಾದ ಭಗವಂತ ಅವತರಿಸಿದ ವಂಶವಾದ ಯದುವಂಶವನ್ನು ಕಿವಿಯಲ್ಲಿ ಕೇಳಿದರೂ ಸಾಕು, ಒಬ್ಬ ಮನುಷ್ಯ ತನ್ನೆಲ್ಲಾ ಪಾಪಗಳಿಂದ ಮುಕ್ತನಾಗಬಲ್ಲ.  ವಿಷ್ಣುಪುರಾಣದಲ್ಲಿ(೪.೧೧.೪) ಹೇಳುವಂತೆ: ಯದೋರ್ವಂಶಂ ನರಃ ಶ್ರುತ್ವಾ ಸರ್ವಪಾಪೈಃ ಪ್ರಮುಚ್ಯತೇ ಯತ್ರಾವತೀರ್ಣಂ ಕೃಷ್ಣಾಖ್ಯಂ ಪರಂ ಬ್ರಹ್ಮ ನರಾಕೃತಿಃ’
ಸರ್ವಾಂತರ್ಯಾಮಿಯಾದ ಭಗವಂತ ಎಲ್ಲರಂತೆ, ಎಲ್ಲರಿಗೂ ಕಾಣುವಂತೆ ಅವತಾರ ಮಾಡಿದ ವಂಶ ಯದುವಂಶ. ಇಂತಹ ಯದುವಂಶವನ್ನು,  ಆ ವಂಶದಲ್ಲಿ ಬಂದವರನ್ನು ನೆನೆಸಿಕೊಂಡರೂ  ಸಾಕು, ಪುಣ್ಯ ಬರುತ್ತದೆ. ಈ ಕಾರಣದಿಂದಲೇ ಆಚಾರ್ಯರು ಯದುವಂಶವನ್ನು ಮೊದಲು ಹೇಳಿರುವುದು.

ಪಾದ್ಮಪುರಾಣದಲ್ಲಿ(ಭೂಮಿ-ಖಂಡ ೭೪.೧೮) ಹೇಳುವಂತೆ: ತಸ್ಮಿನ್ ಶಾಸತಿ ಧರ್ಮಜ್ಞೇ ಯಯಾತೌ ನೃಪತೌ ತದಾ ವೈಷ್ಣವ ಮಾನವಾಃ ಸರ್ವೇ ವಿಷ್ಣುರ್ವೃತಪರಾಯಣಾಃ’   ಯಯಾತಿಯೆಂಬ ಮಹಾರಾಜ ಜಗತ್ತನ್ನು ಆಳುತ್ತಿರುವಾಗ, ಪ್ರಜೆಗಳೆಲ್ಲರೂ ಕೂಡಾ  ವಿಷ್ಣುವೃತವನ್ನು ಹೊತ್ತ ವಿಷ್ಣುಭಕ್ತರಾಗಿದ್ದರಂತೆ. ಅಂತಹ ಆಳ್ವಿಕೆ ನಡೆಸಿದ ಮಹಾತ್ಮರಿವರು. ಇಂತವರ ಸ್ಮರಣೆ ಪ್ರತಿನಿತ್ಯ ಬೆಳಿಗ್ಗೆ ಎದ್ದಾಗ ಮಾಡುವುದೇ ದೊಡ್ಡ ಭಾಗ್ಯ].

ಯದೋರ್ವಂಶೇ ಚಕ್ರವರ್ತ್ತೀ ಕಾರ್ತ್ತವೀರ್ಯ್ಯಾರ್ಜ್ಜುನೋsಭವತ್ ।
ವಿಷ್ಣೋರ್ದ್ದತ್ತಾತ್ರೇಯನಾಮ್ನಃ ಪ್ರಸಾದಾದ್ ಯೋಗವೀರ್ಯ್ಯವಾನ್ ೧೧.೦೩

 ‘ಯದುವಿನ ವಂಶದಲ್ಲಿ ಯಾರೂ ಕೂಡಾ ಚಕ್ರವರ್ತಿಯಾಗಬಾರದು’ ಎಂದು ಯಯಾತಿ ಶಪಿಸಿದ್ದರೂ ಕೂಡಾ, ಆ ವಂಶದಲ್ಲೇ ಬಂದ  ಕೃತವೀರ್ಯನ ಮಗನಾದ ಅರ್ಜುನನು ದತ್ತಾತ್ರೇಯ ನಾಮಕ  ವಿಷ್ಣುವಿನ ಪ್ರಸಾದದಿಂದ  ಚಕ್ರವರ್ತಿಯಾದನು. ಆತ ಭಗವಂತನ ಅನುಗ್ರಹದಿಂದ  ಕರ್ಮಯೋಗ ಮತ್ತು ಪರಾಕ್ರಮ ಎರಡನ್ನೂ ಹೊಂದಿದ್ದನು. 

ತಸ್ಯಾನ್ವವಾಯೇ ಯದವೋ ಬಭೂವುರ್ವಿಷ್ಣುಸಂಶ್ರಯಾಃ ।
ಪುರೋರ್ವಂಶೇ ತು ಭರತಶ್ಚಕ್ರವರ್ತ್ತೀ ಹರಿಪ್ರಿಯಃ ೧೧.೦೪

ಯದುವಿನ ವಂಶದಲ್ಲಿ ವಿಷ್ಣುವಿನ ಭಕ್ತರಾದ ಯಾದವರು ಹುಟ್ಟಿದರು. ಪೂರುವಿನ ವಂಶದಲ್ಲಿ ನಾರಾಯಣನಿಗೆ ಪ್ರಿಯನಾದ, ಚಕ್ರವರ್ತಿಯಾದ ಭರತನು ಹುಟ್ಟಿದನು.

[ಯದುವಿನಿಂದ ಮುಂದುವರಿದ ವಂಶ ಪರಂಪರೆಯ ವಿವರ ನಮಗೆ  ಅನೇಕ ಗ್ರಂಥಗಳಲ್ಲಿ ಕಾಣಸಿಗುತ್ತದೆ. ಯದುವಿನಿಂದ ಪ್ರಾರಂಭವಾಗಿ ಎರಡು ಶಾಖೆಗಳಾಗಿ ಬೆಳೆದ ವಂಶವೃಕ್ಷದ ವಿವರ ಹೀಗಿದೆ:

೧. ಯದುಃ
೬. ನೇತ್ರಃ(ಧರ್ಮನೇತ್ರಃ)
೧೧. ದುರ್ದಮಃ
೨. ಸಹಸ್ರಜಿತ್ (ಸಹಸ್ರದಃ)
೭. ಕುಂತಿಃ
೧೨. ಧನಕಃ (ಕನಕಃ)
೩. ಶತಜಿತ್
೮. ಸೋಹಞ್ಜಿಃ(ಸಹಜಿತ್)
೧೩. ಕೃತವೀರ್ಯ
೪. ಹೇಹಯಃ
೯. ಮಹಿಷ್ಮಾನ್
೧೪. ಅರ್ಜುನಃ
೫. ಧರ್ಮಃ
೧೦. ಭದ್ರಸೇನಃ (ಭದ್ರಶ್ರೇಣ್ಯಃ)




೧. ಯದುಃ
೬. ಚಿತ್ರರಥಃ
೧೧. ಶಿತಗುಃ (ಶಿತಪುಃ)
೨. ಕ್ರೋಷ್ಟುಃ(ಕ್ರೋಷ್ಟಾ)
೭. ಶಶಬಿನ್ದುಃ
೧೨. ರುಗ್ಮಕವಚಃ(ರುಚಕಃ)
೩.ಧ್ವಜಿನೀವಾನ್ (ವ್ರಜಿನವಾನ್)
೮. ಪೃಥುಶ್ರವಾಃ
೧೩. ಪರಾವೃತ್
೪. ಸ್ವಾತಿಃ (ವಾಹಿಃ)
೯. ಪೃಥುತಮಃ (ಧರ್ಮಃ)
೧೪. ಜ್ಯಾಮಘಃ
೫. ಋಶಙ್ಕುಃ
೧೦. ಉಶನಾಃ
೧೫. ವಿದರ್ಭಃ

ವಿದರ್ಭ ವಂಶದಲ್ಲಿ ಹುಟ್ಟಿದವರು ವೈದರ್ಭಿಗಳು. ಇವರನ್ನು ವಿದರ್ಭ ಯಾದವರು ಎಂದೂ ಎನ್ನುತ್ತಾರೆ. ಈ ವಂಶದಲ್ಲಿ ಬಂದವಳೇ ವೈದರ್ಭಿಯಾದ ರುಗ್ಮಿಣೀದೇವಿ. ವಿದರ್ಭನಿಂದ ಮುಂದುವರಿದ ಈ ವಂಶದ ಎರಡು ಶಾಖೆಗಳ ವಿವರ ಹೀಗಿದೆ:

 ೧. ವಿದರ್ಭಃ
೩. ಬಭ್ರುಃ
೦೫. ಉಶಿಕಃ (ಕೈಶಿಕಃ)
೨. ರೋಮಪಾದಃ
೪. ಧೃತಿಃ(ಕೃತಿ)
೦೬. ಚೇದಿಃ

೧. ವಿದರ್ಭಃ
೯. ವಿಕೃತಿಃ
೧೭. ಮಧುಃ
೨. ಕ್ರಥಃ
೧೦. ಭೀಮರಥಃ
೧೮. ಕುರುವಶಃ(ಕುಮಾರವಂಶಃ)
೩. ಕುಂತಿಃ
೧೧. ನವರಥಃ
೧೯. ಅನುಃ
೪. ಧೃಷ್ಟಿಃ
೧೨. ದಶರಥಃ
೨೦. ಪುರುಮಿತ್ರಃ (ಪುರುಹೊತ್ರಃ)
೫. ನಿರ್ವೃತಿಃ (ನಿಧೃತಿಃ)
೧೩. ಶಕುನಿಃ
೨೧. ಅಂಶುಃ(ಆಯುಃ)
೬. ದಶಾರ್ಹಃ
೧೪. ಕರಮ್ಭಿಃ
೨೨. ಸತ್ವತಃ(ಸತ್ವಶ್ರುತಃ)
೭. ವ್ಯೋಮ(ವ್ಯೋಮಃ)
೧೫. ದೇವರಾಥಃ

೮. ಜೀಮೂತಃ
೧೬. ದೇವಕ್ಷತ್ರಃ



ಚೇದಿಯಿಂದ ಹುಟ್ಟಿದ ಯಾದವರೇ ಚೈಧ್ಯ ಯಾದವರಾದರು. ಈ ವಂಶದಲ್ಲೇ ಶಿಶುಪಾಲ ಬಂದ.

ಸತ್ವತನಿಂದ ಮುಂದುವರಿದ ಯದುವಂಶ  ಬಹು ಶಾಖೆಗಳಾಗಿ ಬೆಳೆಯಿತು. (ಈ ವಂಶವೃಕ್ಷದ  ಚಿತ್ರಣವನ್ನು ಈ ಕೆಳಗೆ ನೀಡಲಾಗಿದೆ:).  

ಹೀಗೆ ಯದುವಿಂದ ಪ್ರಾರಂಭವಾಗಿ, ನೂರಾರು ಮಂದಿ ರಾಜರುಗಳು, ಅನೇಕ ಶಾಖೆಗಳು , ಬೇರೆ ಬೇರೆ ಪ್ರಭೇದಗಳು ಬೆಳೆದು ಬಂದವು. ಈ ರೀತಿ  ಬೆಳೆದ ವಂಶಪರಂಪರೆಯಲ್ಲಿ ಬಂದ  ಅಂಧಕನ ನೇರವಾದ ವಂಶದಲ್ಲಿ  ಭಗವಂತ ಶ್ರಿಕೃಷ್ಣ ರೂಪದಲ್ಲಿ ಅವತರಿಸಿದ. 


 

ಯಯಾತಿ ಮತ್ತು ಶರ್ಮಿಷ್ಠೆಯರ ದಾಂಪತ್ಯದಲ್ಲಿ ಹುಟ್ಟಿದ ಪೂರುವಿನ ವಂಶದಲ್ಲಿ ದುಷ್ಷನ್ತನ ಮಗನಾಗಿ ಭರತ ಹುಟ್ಟಿದ. ಈತನಿಂದ ಮುಂದೆ ಈ ವಂಶಕ್ಕೆ ಭರತವಂಶ ಎನ್ನುವ ಹೆಸರು ಬಂತು. ಪೂರುವಿನಿಂದ ಭರತನ ತನಕದ ವಂಶವೃಕ್ಷದ ವಿವರ ವಿವರ ಇಂತಿದೆ:

೧. ಪೂರುಃ
೭. ಸುದ್ಯುಃ(ಸುಧನ್ವ)
೧೩. ಅನ್ತಿನಾರಃ(ಮತಿನಾರಃ)
೨. ಜನಮೇಜಯಃ
೮. ಬಹುಗವಃ
೧೪. ತಮ್ಸುಃ(ತ್ರಸ್ನುಃ, ಸುಮತಿಃ)
೩. ಪ್ರಾಚೀನ್ವಾನ್
೯. ಶ̐ಯ್ಯಾತಿಃ(ಸಂಯಾತಿಃ)
೧೫. ರೈಭ್ಯಃ (ಸುರೋಧಃ, ಐಲಿನಃ)
೪. ಪ್ರವೀರಃ
೧೦. ಅಹಮ್ಯಾತಿಃ
೧೬. ದುಷ್ಷನ್ತಃ
೫. ಮನಸ್ಯುಃ
೧೧. ರೌದ್ರಾಶ್ವಃ
೧೭. ಭರತಃ
೬. ಅಭಯದಃ(ಚಾರುಪದಃ)
೧೨. ಋತೇಯುಃ(ಋಚೇಯುಃ, ಋತೇಶುಃ)



 ಭರತನ ವಂಶದಲ್ಲೇ ಮುಂದೆ ‘ಕುರು’ವಿನ ಜನನವಾಯಿತು. ಭರತನಿಂದ ಕುರುವಿನ ತನಕದ ವಂಶವೃಕ್ಷದ ವಿವರ ಇಂತಿದೆ:

೧. ಭರತಃ
೬. ಹಸ್ತಿ(ಬೃಹನ್), ಹಸ್ತಿನಪುರದ ನಿರ್ಮಾತೃ
೨. ವಿತಥಃ(ಭರದ್ವಾಜಃ)
೭. ಅಜಮೀಢಃ (ಇಂದಿನ ಅಜಮೀರದ ನಾಮಕ್ಕೆ ಮೂಲನಾದವನು)
೩. ಮನ್ಯುಃ
೮. ಋಕ್ಷಃ
೪. ಬೃಹತ್ಕ್ಷತ್ರಃ
೯. ಸಂವರಣಃ
೫. ಸುಹೊತ್ರಃ
೧೦. ಕುರುಃ, (ಧರ್ಮಕ್ಷೇತ್ರ-ಕುರುಕ್ಷೇತ್ರದ ನಿರ್ಮಾತೃ)



[1] ಶುಕ್ರಾಚಾರ್ಯರ ಪುತ್ರಿ ದೇವಯಾನಿ

No comments:

Post a Comment