ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Friday, October 26, 2018

Mahabharata Tatparya Nirnaya Kannada 11.10-11.15


ಪ್ರತೀಪಪುತ್ರತಾಮಾಪ್ಯ [1]ಬಾಹೀಕೇಷ್ವಭವತ್ ಪತಿಃ ।
ರುದ್ರೇಷು ಪತ್ರತಾಪಾಖ್ಯಃ ಸೋಮದತ್ತೋsಸ್ಯ ಚಾsತ್ಮಜಃ      ॥೧೧.೧೦

ಪ್ರತೀಪನ ಮಗನಾಗಿ ಹುಟ್ಟಿಬಂದ ಪ್ರಹ್ಲಾದ, ಪುತ್ರಿಕಾಪುತ್ರತ್ವ ನಿಯಮದಂತೆ  ಬಾಹ್ಲೀಕ[2] ದೇಶದ ರಾಜನಾದ. ಬಾಹ್ಲೀಕನ ಮಗ ಸೋಮದತ್ತ. ಈತ ಮೂಲತಃ ಏಕಾದಶ ರುದ್ರರಲ್ಲಿ ‘ಪತ್ರತಾಪ’  ಎನ್ನುವ ಹೆಸರಿನ ರುದ್ರ. (ಪತ್ರತಾಪನನ್ನು ಮೃಗವ್ಯಾಧ, ವಾಮದೇವ ಇತ್ಯಾದಿ ಹೆಸರಿನಿಂದ ಪುರಾಣಗಳು ಸಂಬೋಧಿಸುತ್ತವೆ).

ಅಜೈಕಪಾದಹಿರ್ಬುಧ್ನಿರ್ವಿರೂಪಾಕ್ಷ ಇತಿ ತ್ರಯಃ ।
ರುದ್ರಾಣಾಂ ಸೋಮದತ್ತಸ್ಯ ಬಭೂವುಃ ಪ್ರಥಿತಾಃ ಸುತಾಃ ॥೧೧.೧೧

ವಿಷ್ಣೋರೇವಾಙ್ಗತಾಮಾಪ್ತುಂಭೂರಿರ್ಭೂರಿಶ್ರವಾಃ ಶಲಃ
ಶಿವಾದಿಸರ್ವರುದ್ರಾಣಾಮಾವೇಶಾದ್ ವರತಸ್ತಥಾ         ॥ ೧೧.೧೨

ಭೂರಿಶ್ರವಾ ಅತಿಬಲಸ್ತತ್ರಾsಸೀತ್ ಪರಮಾಸ್ತ್ರವಿತ್ ।
ತದರ್ಥಂ ಹಿ ತಪಶ್ಚೀರ್ಣ್ಣಂ ಸೋಮದತ್ತೇನ ಶಮ್ಭವೇ   ॥೧೧.೧೩
ಏಕಾದಶ ರುದ್ರರಲ್ಲಿ ಮೂವರಾದ  ಅಜೈಕಪಾತ್, ಅಹಿರ್ಬುಧ್ನಿ ಮತ್ತು ವಿರೂಪಾಕ್ಷ ಎನ್ನುವ ರುದ್ರರು  ಸೋಮದತ್ತನ ಮಕ್ಕಳಾಗಿ ಹುಟ್ಟಿ ಅತ್ಯಂತ ಪ್ರಖ್ಯಾತಿಯನ್ನು ಹೊಂದಿದರು.  ಈ ಮೂವರು ನಾರಾಯಣನ ಸೇವೆಯನ್ನು ಮಾಡಲು(ಸಹಾಯ ಮಾಡಲು) ಭೂರಿ, ಭೂರಿಶ್ರವಸ್ಸು  ಮತ್ತು ಶಲಃ ಎನ್ನುವ ಹೆಸರಿನಲ್ಲಿ ಭೂಮಿಯಲ್ಲಿ ಅವತರಿಸಿದರು. ಈ ಮೂವರಲ್ಲಿ ಭೂರಿಶ್ರವಸ್ಸು ಬಹಳ ಶ್ರೇಷ್ಠನಾಗಿದ್ದನು.
ಶಿವನೂ ಸೇರಿದಂತೆ ಸಮಸ್ತ ರುದ್ರರ ಆವೇಶ ಹಾಗು ವರದಿಂದಲೂ, ಭೂರೀಶ್ರವಸ್ಸು ಅತ್ಯಂತ ಸಾಮರ್ಥ್ಯವುಳ್ಳವನೂ, ಉತ್ಕೃಷ್ಟವಾದ ಅಸ್ತ್ರವಿದ್ಯೆಯನ್ನು ಬಲ್ಲವನೂ ಆಗಿದ್ದನು. ಭೂರೀಶ್ರವನಂತಹ ಮಗನನ್ನು ಪಡೆಯಬೇಕೆಂದೇ ಸೋಮದತ್ತನು ಹಿಂದೆ ರುದ್ರನನ್ನು ಕುರಿತು ತಪಸ್ಸು ಮಾಡಿದ್ದನು.
[ಏಕಾದಶ ರುದ್ರರ ವಿವರ ಈ ಕೆಳಗಿನಂತಿದೆ. ಇವರಲ್ಲಿ ಒಬ್ಬೊಬ್ಬರಿಗೂ ಅನೇಕ ಹೆಸರುಗಳುಂಟು. ಬೇರೆಬೇರೆ ಕಡೆ ಬೇರೆಬೇರೆ ಹೆಸರುಗಳ ಉಲ್ಲೇಖವನ್ನು ನಾವು ಕಾಣುತ್ತೇವೆ].

೧. ಮೃಗವ್ಯಾಧಃ, ವಾಮದೇವಃ, [ಪತ್ರತಾಪಃ]
೬. ಪಿನಾಕಿ, ಅಪರಾಜಿತಃ , ಭೀಮಃ
೨. ಸರ್ಪಃ[ಸರ್ವಃ], ಶರ್ವಃ, ಓಜಃ[ಅಜಃ]
೭. ದಹನಃ, ಬಹುರೂಪಃ, ಉಗ್ರಃ  
೩. ನಿಋತಿಃ, ತ್ರ್ಯಮ್ಬಕಃ, ವಿರೂಪಾಕ್ಷ
೮. ಕಪಾಲಿ, ಭವಃ [ವಿಷ್ಕಂಭಃ]
೪. ಅಜೈಕಪಾತ್, ಕಪರ್ದೀ
೯. ಸ್ಥಾಣುಃ, ವೃಷಾಕಪಿಃ
೫. ಅಹಿರ್ಬುಧ್ನಿಃ, ಶಂಭುಃ
೧೦. ಭಗಃ, ರೈವತಃ

೧೧. ಈಶ್ವರಃ, ಹರಃ, ಮಹಾದೇವಃ


ದತ್ತೋ ವರಶ್ಚ ತೇನಾಸ್ಯ ತ್ವತ್ ಪ್ರತೀಪಾಭಿಭೂತಿಕೃತ್ ।
ಬಲವೀರ್ಯ್ಯಗುಣೋಪೇತೋ ನಾಮ್ನಾ ಭೂರಿಶ್ರವಾಃ ಸುತಃ     ॥೧೧.೧೪

ತಪಸ್ಸಿಗೆ ಮೆಚ್ಚಿದ ರುದ್ರನಿಂದ ಸೋಮದತ್ತನಿಗೆ ‘ಶತ್ರುಗಳಿಗೆ ಪರಾಜಯವನ್ನು ಉಂಟುಮಾಡುವ, ಬಲ-ವೀರ್ಯ-ಗುಣದಿಂದ ಕೂಡಿದ, ಉದ್ದೇಶವನ್ನು ಈಡೇರಿಸುವ, ಖ್ಯಾತಿಯನ್ನು ಹೆಚ್ಚಿಸುವ   ‘ಭೂರಿಶ್ರವಾಃ’ ಎನ್ನುವ ಮಗನು ಹುಟ್ಟುತ್ತಾನೆ’ ಎನ್ನುವ ವರವು ಕೊಡಲ್ಪಟ್ಟಿತು.

ಭವಿಷ್ಯತಿ ಮಯಾssವಿಷ್ಟೋ ಯಜ್ಞಶೀಲ ಇತಿ ಸ್ಮ ಹ ।
          ತೇನ ಭೂರಿಶ್ರವಾ ಜಾತಃ ಸೋಮದತ್ತಸುತೋ ಬಲೀ ॥೧೧.೧೫

‘ನನ್ನ ಆವೇಶವುಳ್ಳವನಾಗಿ ನಿರಂತರವಾದ ಯಜ್ಞವನ್ನು ನಿನ್ನ ಮಗ  ಮಾಡುತ್ತಿರುತ್ತಾನೆ’ ಎನ್ನುವ ರುದ್ರದೇವರ  ವರದಂತೆ  ಸೋಮದತ್ತನಿಗೆ ಬಲಿಷ್ಠನಾದ   ‘ಭೂರಿಶ್ರವಸ್’ ಎನ್ನುವ ಹೆಸರುಳ್ಳ ಮಗನು ಹುಟ್ಟುತ್ತಾನೆ .



[1] ಬಾಹ್ಲೀಕೇ
[2] ಇಂದು ಭಾರತಕ್ಕೆ ಸೇರಿರುವ ಪಂಜಾಬ್ ಪ್ರಾಂತ್ಯ

No comments:

Post a Comment