ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Saturday, October 27, 2018

Mahabharata Tatparya Nirnaya Kannada 11.16-11.21


   ಪೂರ್ವೋದಧೇಸ್ತೀರಗತೇsಬ್ಜಸಮ್ಭವೇ ಗಙ್ಗಾಯುತಃ ಪರ್ವಣಿ ಘೂರ್ಣ್ಣಿತೋsಬ್ಧಿಃ        
   ಅವಾಕ್ಷಿಪತ್ ತಸ್ಯ ತನೌ ನಿಜೋದಬಿನ್ದುಂ ಶಶಾಪೈನಮಥಾಬ್ಜಯೋನಿಃ ॥೧೧.೧೬  

ಒಮ್ಮೆ ಬ್ರಹ್ಮದೇವರು ಪೂರ್ವದಿಕ್ಕಿನ ಸಮುದ್ರ ತೀರದಲ್ಲಿ ಇರುತ್ತಿರಲು, ಹುಣ್ಣಿಮೆಯ ಕಾಲದಲ್ಲಿ ವರುಣನು ಗಂಗೆಯಿಂದ ಕೂಡಿದವನಾಗಿ ಮೇಲೆ ಉಕ್ಕಿ ಬರುತ್ತಾನೆ. ಹೀಗೆ ಉಕ್ಕಿದ ಆತ  ಬ್ರಹ್ಮದೇವರ ಶರೀರದ ಮೇಲೆ ತನ್ನ ನೀರಿನ ಹನಿಗಳನ್ನು ಸಿಡಿಸುತ್ತಾನೆ. ನಿರ್ಲಕ್ಷದಿಂದೆಸಗಿದ ಈ ಕಾರ್ಯಕ್ಕಾಗಿ  ಬ್ರಹ್ಮದೇವರು ಆತನನ್ನು ಶಪಿಸುತ್ತಾರೆ. 

ಮಹಾಭಿಷಙ್   ನಾಮ ನರೇಶ್ವರಸ್ತ್ವಂ ಭೂತ್ವಾ ಪುನಃ ಶನ್ತನುನಾಮಧೇಯಃ
ಜನಿಷ್ಯಸೇ ವಿಷ್ಣುಪದೀ ತಥೈಷಾ ತತ್ರಾಪಿ ಭಾರ್ಯ್ಯಾ ಭವತೋ ಭವಿಷ್ಯತಿ       ॥೧೧.೧೭

“ನೀನು ‘ಮಹಾಭಿಷಕ್’ ಎನ್ನುವ ರಾಜನಾಗಿ ಹುಟ್ಟುವೆ. ನಂತರ (ಮಹಾಭಿಷಕ್ ರಾಜನ ದೇಹವೀಯೋಗವಾದ ನಂತರ)  ಶಂತನು ಎಂಬ ನಾಮಧೇಯವನ್ನು ಧರಿಸಿ ಹುಟ್ಟುತ್ತೀಯ. ಹಾಗೆಯೇ, ಈ ಗಂಗೆಯೂ ಕೂಡಾ ‘ಅಲ್ಲಿಯೂ’ ನಿನ್ನ ಪತ್ನಿಯಾಗುತ್ತಾಳೆ” ಎನ್ನುವ ಶಾಪವನ್ನು ಬ್ರಹ್ಮದೇವರು ವರುಣನಿಗೆ ನೀಡುತ್ತಾರೆ.
 (ಈ ಶ್ಲೋಕದಲ್ಲಿ ಬಳಕೆಯಾದ ‘ತತ್ರಾಪಿ’ ಎನ್ನುವ ಪದ ‘ಅಲ್ಲಿಯೂ’ ಎನ್ನುವ ಅರ್ಥವನ್ನು ನೀಡುತ್ತದೆ. ಅಂದರೆ: ಅವತಾರರೂಪದಲ್ಲಿ ವರುಣ ಶನ್ತನುವಾಗಿ ಹುಟ್ಟಿದರೆ,  ಗಂಗೆ ಮೂಲರೂಪದಲ್ಲಿ ಅಲ್ಲಿಯೂ ಆತನ ಪತ್ನಿಯಾಗುತ್ತಾಳೆ ಎಂದರ್ಥ. ಜಲವನ್ನು ಸೇಚಿಸಿರುವುದರಿಂದ ಮಹಾಭಿಷಕ್ ಎನ್ನುವ ನಾಮ ಅವನಿಗಾಯಿತು).

ಶಾನ್ತೋ ಭವೇತ್ಯೇವ ಮಯೋದಿತಸ್ತ್ವಂ ತನುತ್ವಮಾಪ್ತೋsಸಿ ತತಶ್ಚ ಶನ್ತನುಃ       
ಇತೀರಿತಃ ಸೋsಥ ನೃಪೋ ಬಭೂವ ಮಹಾಭಿಷಙ್ ನಾಮ ಹರೇಃ ಪದಾಶ್ರಯಃ        ॥೧೧.೧೮

 “ ‘ಶಾಂತನಾಗು’ ಎಂದು ನನ್ನಿಂದ ಹೇಳಿಸಿಕೊಳ್ಳಲ್ಪಟ್ಟ ನೀನು, ನಿನ್ನ ಪ್ರವಾಹದ ವಿಸ್ತಾರವನ್ನು ಕಡಿಮೆ ಮಾಡಿಕೊಂಡಿರುವ ಕಾರಣದಿಂದ ‘ಶನ್ತನು’ ಎನ್ನುವ ನಾಮಧೇಯನಾಗಿ ಹುಟ್ಟುತ್ತೀಯ” ಎನ್ನುತ್ತಾರೆ ಬ್ರಹ್ಮದೇವರು. ಈ ರೀತಿಯಾಗಿ ಶಪಿಸಲ್ಪಟ್ಟ ವರುಣನು  ನಾರಾಯಣನ  ಪಾದ ಭಕ್ತನಾದ ‘ಮಹಾಭಿಷಕ್’ ಎನ್ನುವ ರಾಜನಾಗಿ ಹುಟ್ಟುತ್ತಾನೆ.

   ಸ ತತ್ರ ಭುಕ್ತ್ವಾ ಚಿರಕಾಲಮುರ್ವೀಂ ತನುಂ ವಿಹಾಯಾsಪ ಸದೋ ವಿಧಾತುಃ        
   ತತ್ರಾಪಿ ತಿಷ್ಠನ್ ಸುರವೃನ್ದಸನ್ನಿಧೌ ದದರ್ಶ ಗಙ್ಗಾಂ ಶ್ಲಥಿತಾಮ್ಬರಾಂ ಸ್ವಕಾಮ್         ॥೧೧.೧೯

ಮಹಾಭಿಷಕ್ ಎನ್ನುವ ರಾಜನು ಬಹಳಕಾಲ ಭೂಮಿಯನ್ನು ಆಳಿ, ತನ್ನ ಶರೀರವನ್ನು ಬಿಟ್ಟು ಬ್ರಹ್ಮಲೋಕವನ್ನು ಹೊಂದುತ್ತಾನೆ. ಆ ಬ್ರಹ್ಮಲೋಕದಲ್ಲಿಯೂ,  ದೇವತೆಗಳ ಸನ್ನಿಧಿಯಲ್ಲಿ ಇರುತ್ತಾ, ತನ್ನವಳೇ ಆಗಿರುವ ಗಂಗೆಯನ್ನು ಅಸ್ತವ್ಯಸ್ತವಾದ ಬಟ್ಟೆಯುಳ್ಳವಳಾಗಿದ್ದಾಗ ಕಾಣುತ್ತಾನೆ.

ಅವಾಙ್ಮುಖೇಷು ಧ್ಯುಸದಸ್ಸು ರಾಗಾನ್ನಿರೀಕ್ಷಮಾಣಂ ಪುನರಾತ್ಮಸಮ್ಭವಃ ।
ಉವಾಚ ಭೂಮೌ ನೃಪತಿರ್ಭವಾsಶು ಶಪ್ತೋ ಯಥಾ ತ್ವಂ ಹಿ ಪುರಾ ಮಯೈವ ॥೧೧.೨೦

ಗಂಗೆಯ ಬಟ್ಟೆ ಅಸ್ತವ್ಯಸ್ತವಾದಾಗ, ಉಳಿದ ಎಲ್ಲಾ ದೇವತೆಗಳು ತಮ್ಮ ತಲೆಯನ್ನು ತಗ್ಗಿಸುತ್ತಾರೆ. ಆದರೆ ಮಹಾಭಿಷಕ್ ಮಾತ್ರ ಆಕೆಯನ್ನು ಅತ್ಯಂತ ಬಯಕೆಯಿಂದ ನೋಡುತ್ತಿರುತ್ತಾನೆ. ಇದರಿಂದಾಗಿ ಆತನನ್ನು ಕುರಿತು ನಾರಾಯಣ ಸೂನುವಾದ ಬ್ರಹ್ಮದೇವರು  ಮತ್ತೆ ಹೇಳುತ್ತಾರೆ: “ಹಿಂದೆ ನನ್ನಿಂದಲೇ ಪಡೆದ ಶಾಪದಂತೆ ನೀನು ಮತ್ತೆ ಭೂಮಿಯಲ್ಲಿ ರಾಜನಾಗಿ ಹುಟ್ಟು” ಎಂದು.

  ಇತೀರಿತಸ್ತತ್ಕ್ಷಣತಃ ಪ್ರತೀಪಾದ್ ಬಭೂವ ನಾಮ್ನಾ ನೃಪತಿಃ ಸ ಶನ್ತನುಃ    
  ಅವಾಪ್ಯ ಗಙ್ಗಾಂ ದಯಿತಾಂ ಸ್ವಕೀಯಾಂ ತಯಾ ಮುಮೋದಾಬ್ದಗಣಾನ್ ಬಹೂಂಶ್ಚ       ॥೧೧.೨೧

ಈರೀತಿಯಾಗಿ ಹೇಳಲ್ಪಟ್ಟ ಆ ಮಹಾಭಿಷಕ್, ಆ ಕ್ಷಣದಲ್ಲಿಯೇ,  ಪ್ರತೀಪನೆನ್ನುವ ರಾಜನಲ್ಲಿ ಶನ್ತನು ಎನ್ನುವ ಹೆಸರುಳ್ಳವನಾಗಿ ಭೂಮಿಯಲ್ಲಿ ಹುಟ್ಟಿದನು. ಅಲ್ಲಿ ತನ್ನವಳೇ ಆಗಿರುವ ಗಂಗೆಯನ್ನು ಪತ್ನಿಯಾಗಿ ಹೊಂದಿ, ಅವಳ ಜೊತೆಗೂಡಿ ಭೂಮಿಯಲ್ಲಿ ಬಹಳ ವರ್ಷಗಳ ಕಾಲ ಕ್ರೀಡಿಸಿದನು.











ಪದ್ಯ ರೂಪ:  https://go-kula.blogspot.com/

No comments:

Post a Comment