ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Sunday, October 13, 2019

Mahabharata Tatparya Nirnaya Kannada 1416_1420


ಸರ್ವಾಂ ಪುರೀಂ ಪ್ರತಿನಿರುದ್ಧ್ಯ ದಿದೇಶ ವಿನ್ದವಿನ್ದಾನುಜೌ ಭಗವತಃ ಕುಮತಿಃ ಸ ದೂತೌ
ತಾವೂಚತುರ್ಭಗವತೇsಸ್ಯ ವಚೋsತಿದರ್ಪ್ಪಪೂರ್ಣ್ಣಂ ತಥಾ ಭಗವತೋsಪ್ಯಪಹಾಸಯುಕ್ತಮ್ ೧೪.೧೬

ಪಟ್ಟಣವನ್ನು ಎಲ್ಲೆಡೆಯಿಂದ ಮುತ್ತಿಗೆ ಹಾಕಿದ ಜರಾಸಂಧ ವಿನ್ದ ಮತ್ತು ಅನುವಿನ್ದಾ ಎನ್ನುವ ತನ್ನ ದೂತರನ್ನು ಕೃಷ್ಣನಲ್ಲಿಗೆ ಕಳುಹಿಸಿದನು. ಅವರಿಬ್ಬರೂ  ಆತ್ಯಂತಿಕವಾದ ಅಪಹಾಸ್ಯದ ಮಾತನ್ನು ಅತ್ಯಂತ ದರ್ಪದಿಂದ ಕೂಡಿದವರಾಗಿ ಶ್ರೀಕೃಷ್ಣನಿಗೆ ಹೇಳಿದರು.

ಲೋಕೇ(s)ಪ್ರತೀತಬಲಪೌರುಷಸಾರರೂಪಸ್ತ್ವಂ ಹ್ಯೇಕ ಏಷ್ಯಭವತೋ ಬಲವೀರ್ಯ್ಯಸಾರಮ್
ಜ್ಞಾತ್ವಾ ಸುತೇ ನತು ಮಯಾ ಪ್ರತಿಪಾದಿತೇ ಹಿ ಕಂಸಸ್ಯ ವೀರ್ಯ್ಯರಹಿತೇನ ಹತಸ್ತ್ವಯಾ ಸಃ ೧೪.೧೭

ಸೋsಹಂ ಹಿ ದುರ್ಬಲತಮೋ ಬಲಿನಾಂ ವರಿಷ್ಠಂ ಕೃತ್ವೈವ ದೃಷ್ಟಿವಿಷಯಂ ವಿಗತಪ್ರತಾಪಃ
ಯಾಸ್ಯೇ ತಪೋವನಮಥೋ ಸಹಿತಃ ಸುತಾಭ್ಯಾಂ ಕ್ಷಿಪ್ರಂ ಮಮಾದ್ಯ ವಿಷಯೇ ಭವ ಚಕ್ಷುಷೋsತಃ ೧೪.೧೮

ಜರಾಸಂಧ ಶ್ರೀಕೃಷ್ಣನನ್ನು ಕುರಿತು ಹೇಳಿ ಕಳುಹಿಸಿದ ವ್ಯಂಗ್ಯದ ಮಾತು ಇದಾಗಿದೆ. ‘ನಾನು ಏನೂ ಕೈಲಾಗದ ಕಂಸನಿಗೆ ನನ್ನ ಮಕ್ಕಳನ್ನು ಕೊಟ್ಟೆ. ನೀನೇನೋ ಲೋಕದಲ್ಲಿ ಬಹಳ ಪರಾಕ್ರಮಿ ಎನಿಸಿಕೊಂಡಿದ್ದೀಯ. ನಿನ್ನ ಬಲವೀರ್ಯವನ್ನು ತಿಳಿಯದೇ ನಾನು ನನ್ನ ಮಕ್ಕಳನ್ನು ಕಂಸನಿಗೆ ಕೊಟ್ಟೆ. ಇದೀಗ ನಿನ್ನಿಂದ ಆ ಕಂಸ ಸಂಹರಿಸಲ್ಪಟ್ಟನು.(ಮೋಸದಿಂದ, ಆಕಸ್ಮಿಕವಾಗಿ ನಿನ್ನಿಂದ ಕಂಸ ಸತ್ತ ಎನ್ನುವ ಧ್ವನಿ).
ಇದೀಗ ಅತ್ಯಂತ ದುರ್ಬಲನಾದ ನಾನು ಬಲಿಷ್ಠರ ನಡುವೆ ಶ್ರೇಷ್ಠನಾಗಿರುವ ನಿನ್ನನ್ನು ಒಮ್ಮೆ ಕಂಡು, ನನ್ನ ಇಬ್ಬರು ಮಕ್ಕಳಿಂದ ಕೂಡಿಕೊಂಡು ಕಾಡಿಗೆ ಹೊರಟುಹೋಗುತ್ತೇನೆ. ಆದ್ದರಿಂದ ಬೇಗದಲ್ಲಿಯೇ ನನ್ನ  ಚಕ್ಷುಷುಗೆ ವಿಷಯನಾಗು[1]’. (‘ರಾಜನಲ್ಲದವನೊಂದಿಗೆ ನಾನು ಯುದ್ಧ ಮಾಡುವುದಿಲ್ಲ. ನೀನು ನನ್ನೊಂದಿಗೆ ಯುದ್ಧ ಮಾಡುವುದಕ್ಕಾಗಲೀ, ನನ್ನ ಕೈಯಿಂದ ಸಾಯುವುದಕ್ಕಾಗಲೀ ಯೋಗ್ಯನಲ್ಲ’ ಎನ್ನುವ ವ್ಯಂಗ್ಯದ ಮಾತು ಇದಾಗಿದೆ).

ಸಾಕ್ಷೇಪಮೀರಿತಮಿದಂ ಬಲದರ್ಪ್ಪಪೂರ್ಣ್ಣಮಾತ್ಮಾಪಹಾಸಸಹಿತಂ ಭಗವಾನ್ ನಿಶಮ್ಯ
ಸತ್ಯಂ ತದಿತ್ಯುರು ವಚೋsರ್ತ್ಥವದಭ್ಯುದೀರ್ಯ್ಯ ಮನ್ದಂ ಪ್ರಹಸ್ಯ ನಿರಗಾತ್ ಸಹಿತೋ ಬಲೇನ೧೪.೧೯

ಅತ್ಯಂತ ಬಲದ ದರ್ಪದಿಂದ ಕೂಡಿ ಹೇಳಿರುವ ತನ್ನ ಅಪಹಾಸ್ಯದ ಮಾತುಗಳನ್ನು ಕೇಳಿದ ಶ್ರೀಕೃಷ್ಣ,  ‘ನಿಜವಾಗಿಯೂ ಅದು ಹೌದು’ ಎಂಬಂತೆ ಉತ್ಕೃಷ್ಟವಾದ ಅರ್ಥವುಳ್ಳ ಮಾತನ್ನು ಹೇಳಿ, ಮೆಲ್ಲಗೆ ನಕ್ಕು, ಬಲರಾಮನಿಂದ ಕೂಡಿದವನಾಗಿ ಯುದ್ಧಕ್ಕೆಂದು ಹೊರಬಂದ.

ದ್ವಾರೇಷು ಸಾತ್ಯಕಿಪುರಸ್ಸರಮಾತ್ಮಸೈನ್ಯಂ ತ್ರಿಷ್ವಭ್ಯುದೀರ್ಯ್ಯ ಭಗವಾನ್ ಸ್ವಯಮುತ್ತರೇಣ
ರಾಮದ್ವಿತೀಯ ಉದಗಾನ್ಮಗಧಾಧಿರಾಜಂ ಯೋದ್ಧುಂ ನೃಪೇನ್ದ್ರಕಟಕೇನ ಯುತಂ ಪರೇಶಃ ೧೪.೨೦

ಮೂರು ದಿಕ್ಕುಗಳಲ್ಲಿ ಸಾತ್ಯಕಿಯನ್ನೇ ಮುಂದಾಳುವಾಗಿ ಉಳ್ಳ ತನ್ನ ಸೈನ್ಯವನ್ನು ಮೂರು ದ್ವಾರಗಳಲ್ಲಿ ಹೋಗುವಂತೆ ಹೇಳಿ ಪರಮಾತ್ಮನು, ಉತ್ತರದಿಕ್ಕಿನಿಂದ ಕೇವಲ ಬಲರಾಮನೊಂದಿಗೆ ಕೂಡಿಕೊಂಡು, ರಾಜಶ್ರೇಷ್ಠರ ಸಮೂಹದಿಂದ ಕೂಡಿಕೊಂಡು ಬಂದಿರುವ ಜರಾಸಂಧನನ್ನು ಕುರಿತು ಯುದ್ಧಮಾಡಲು ತೆರಳಿದ.
(ಕೋಟೆಯ ನಾಲ್ಕೂ ಭಾಗದಿಂದಲೂ ಅವರು ಮುತ್ತಿಗೆ ಹಾಕಿದ್ದರು. ಆಗ ಈರೀತಿ ಮೂರು ದಿಕ್ಕಿಗೆ ಇತರರನ್ನು ಕಳುಹಿಸಿ, ತಾನೊಬ್ಬನೇ ಜರಾಸಂಧನಿದ್ದ  ಉತ್ತರ ದಿಕ್ಕಿಗೆ ಶ್ರೀಕೃಷ್ಣ ತೆರಳಿದ.)




[1] ನನ್ನ ಕಣ್ಣೆದುರು ಬಾ

No comments:

Post a Comment