ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Wednesday, October 23, 2019

Mahabharata Tatparya Nirnaya Kannada 1431_1436


ನೈನಂ ಜಘಾನ ಭಗವಾನ್ ಸುಶಕಂ ಚ ಭೀಮೇ ಭಕ್ತಿಂ ನಿಜಾಂ ಪ್ರಥಯಿತುಂ ಯಶ ಉಚ್ಚಧರ್ಮ್ಮಮ್
ಚೇದೀಶಪೌಣ್ಡ್ರಕಸಕೀಚಕಮದ್ರರಾಜಸಾಲ್ವೈಕಲವ್ಯಕಮುಖಾನ್ ವಿರಥಾಂಶ್ಚಕಾರ        ೧೪.೩೧

ಪರಮಾತ್ಮನು ತನ್ನಿಂದ ಸುಲಭವಾಗಿ ಕೊಲ್ಲಲು ಸಾಧ್ಯವಾಗಿದ್ದ  ಜರಾಸಂಧನನ್ನು ಕೊಲ್ಲಲಿಲ್ಲ. (ಕಾರಣವೇನೆಂದರೆ: ) ಭೀಮನಲ್ಲಿರತಕ್ಕಂತಹ ಭಕ್ತಿ, ಉತ್ಕೃಷ್ಟವಾದ ಧರ್ಮವನ್ನು ಪ್ರಪಂಚದಲ್ಲಿ ಪ್ರಖ್ಯಾತಪಡಿಸುವುದಕ್ಕೋಸ್ಕರ (ಮುಂದೆ ‘ಜರಾಸಂಧನನ್ನು ಕೊಂದವ’ ಎನ್ನುವ ಕೀರ್ತಿ ಭೀಮನಿಗೆ ಬರುವಂತೆ ಮಾಡುವುದಕ್ಕಾಗಿ) ಶ್ರೀಕೃಷ್ಣ ಜರಾಸಂಧನನ್ನು ಈ ಯುದ್ಧದಲ್ಲಿ ಕೊಲ್ಲಲಿಲ್ಲ. ಶಿಶುಪಾಲ,  ಪೌಣ್ಡ್ರಕವಾಸುದೇವ, ಕೀಚಕ, ಶಲ್ಯ, ಏಕಲವ್ಯ ಮೊದಲಾದ ಮಹಾರಥರನ್ನು ಕೃಷ್ಣ ರಥಹೀನನ್ನಾಗಿ ಮಾಡಿದ.

ಯೇ ಚಾಪಿ ಹಂಸಡಿಭಕದ್ರುಮರುಗ್ಮಿಮುಖ್ಯಾ ಬಾಹ್ಲೀಕಭೌಮಸುತಮೈನ್ದಪುರಸ್ಸರಾಶ್ಚ
ಸರ್ವೇ ಪ್ರದುದ್ರು ವುರಜಸ್ಯ ಶರೈರ್ವಿಭಿನ್ನಾ ಅನ್ಯೇ ಚ ಭೂಮಿಪತಯೋ ಯ ಇಹಾsಸುರುರ್ವ್ಯಾಮ್ ೧೪.೩೨

ಇನ್ನು ಉಳಿದವರು: ಹಂಸ, ಡಿಭಕ, ದ್ರುಮ, ರುಗ್ಮಿ, ಬಾಹ್ಲೀಕ,  ಭೌಮಸುತ(ನರಕಾಸುರನ ಮಗ ಭಗದತ್ತ), ಮೈನ್ದ(ರಾಮಾಯಣಕಾಲದಲ್ಲಿ ಕಪಿಯಾಗಿದ್ದ ಅಶ್ವಿದೇವತೆಗಳಲ್ಲಿ ಒಬ್ಬ), ಇವರೇ ಮೊದಲಾಗಿರತಕ್ಕಂತಹ, ಭೂಮಿಯಲ್ಲಿ   ಆ ಕಾಲದಲ್ಲಿ ಯಾರು-ಯಾರು ಶ್ರೇಷ್ಠರೆನಿಸಿದ ರಾಜರುಗಳಿದ್ದರೋ, ಅವರೆಲ್ಲರೂ  ಪರಮಾತ್ಮನ ಬಾಣಗಳಿಂದ ಭೇದಿಸಲ್ಪಟ್ಟವರಾಗಿ ಓಡಿಹೋದರು. 

ಛಿನ್ನಾಯುಧಧ್ವಜಪತಾಕರಥಾಶ್ವಸೂತವರ್ಮ್ಮಾಣ ಉಗ್ರಶರತಾಡಿತಭಿನ್ನಗಾತ್ರಾಃ
ಸ್ರಸ್ತಾಮ್ಬರಾಭರಣಮೂರ್ದ್ಧಜಮಾಲ್ಯದೀನಾ ರಕ್ತಂ ವಮನ್ತ ಉರು ದುದ್ರುವುರಾಶು ಭೀತಾಃ ೧೪.೩೩

ಆಯುಧ, ಧ್ವಜ, ಪತಾಕ, ರಥ, ಕುದುರೆ, ಸಾರಥಿ, ಕವಚ, ಎಲ್ಲವನ್ನೂ ಕೂಡಾ ಕತ್ತರಿಸಿಕೊಂಡು, ಉಗ್ರವಾಗಿರುವ ಬಾಣದಿಂದ ತಾಡಿತರಾಗಿ, ಮೈಯನ್ನು ಮುರಿದುಕೊಂಡು, ಜಾರಿಹೋದ ಬಟ್ಟೆಯೊಂದಿಗೆ, ಆಭರಣ, ಕೂದಲು, ಮಾಲೆ, ಎಲ್ಲವನ್ನೂ ಕಳೆದುಕೊಂಡು, ದೀನರಾಗಿ, ಬಹಳ ರಕ್ತವನ್ನು ಕಾರುತ್ತಾ, ಭಯಗೊಂಡು ಅವರೆಲ್ಲರೂ ಬೇಗನೆ ಓಡಿಹೋದರು.

ಶೋಚ್ಯಾಂ ದಶಾಮುಪಗತೇಷು ನೃಪೇಷು ಸರ್ವೇಷ್ವಸ್ತಾಯುಧೇಷು ಹರಿಣಾ ಯುಧಿ ವಿದ್ರವತ್ಸು
ನಾನಾಯುಧಾಢ್ಯಮಪರಂ ರಥಮುಗ್ರವೀರ್ಯ್ಯ ಆಸ್ಥಾಯ ಮಾಗಧಪತಿಃ ಪ್ರಸಸಾರ ರಾಮಮ್೧೪.೩೪

ಹೀಗೆ ಎಲ್ಲಾ ರಾಜರೂ ಕೂಡಾ, ಯುದ್ಧದಲ್ಲಿ ಪರಮಾತ್ಮನಿಂದ ತಮ್ಮ ಆಯುಧಗಳನ್ನು ಕಳೆದುಕೊಂಡು, ಶೋಚನೀಯವಾದ ಅವಸ್ಥೆಯನ್ನು ಹೊಂದಿ ಓಡುತ್ತಿರಲು, ಉಗ್ರವೀರ್ಯನಾದ ಜರಾಸಂಧನು ನಾನಾ ರೀತಿಯ ಆಯುಧಗಳಿಂದ ಕೂಡಿರುವ ಇನ್ನೊಂದು ರಥವನ್ನು ಏರಿ, ಬಲರಾಮನ ಬಳಿ ಬಂದ. 

ಆಧಾವತೋsಸ್ಯ ಮುಸಲೇನ ರಥಂ ಬಭಞ್ಜ ರಾಮೋ ಗದಾಮುರುತರೋರಸಿ ಸೋsಪಿ ತಸ್ಯ
ಚಿಕ್ಷೇಪ ತಂ ಚ ಮುಸಲೇನ ತತಾಡ ರಾಮಸ್ತಾವುತ್ತಮೌ ಬಲವತಾಂ ಯುಯುಧಾತ ಉಗ್ರಮ್೧೪.೩೫

ತನ್ನತ್ತ ನುಗ್ಗಿ ಬರುತ್ತಿರುವ ಜರಾಸಂಧನ ರಥವನ್ನು ಬಲರಾಮನು ತನ್ನ ಮುಸಲಾಯುಧದಿಂದ ಒಡೆದ. ಜರಾಸಂಧನಾದರೋ, ಬಲರಾಮನ ವಿಸ್ತೀರ್ಣವಾದ ಎದೆಯಮೇಲೆ ಗದಾಪ್ರಹಾರ ಮಾಡಿದ. ಆಗ ಬಲರಾಮನು ತನ್ನ ಮುಸಲಾಯುಧದಿಂದ(ಒನಕೆಯಿಂದ) ಜರಾಸಂಧನಿಗೆ ಹೊಡೆದ. ಹೀಗೆ ಬಲಿಷ್ಠರಲ್ಲೇ ಶ್ರೇಷ್ಠರಾದ ಅವರಿಬ್ಬರೂ ಭೀಕರವಾಗಿ ಹೋರಾಡಿದರು. 

ತೌ ಚಕ್ರತುಃ ಪುರು ನಿಯುದ್ಧಮಪಿ ಸ್ಮ ತತ್ರ ಸಞ್ಚೂರ್ಣ್ಣ್ಯ  ಸರ್ವಗಿರಿವೃಕ್ಷಶಿಲಾಸಮೂಹಾನ್
ದೀರ್ಘಂ ನಿಯುದ್ಧಮಭವತ್ ಸಮಮೇತಯೋಸ್ತದ್ ವಜ್ರಾದ್ ದೃಢಾಙ್ಗತಮಯೋರ್ಬಲಿನೋರ್ನ್ನಿತಾನ್ತಮ್ ೧೪.೩೬

ವಜ್ರಕ್ಕಿಂತಲೂ ದೃಢವಾಗಿರುವ ಅಂಗವುಳ್ಳ, ಬಲಿಷ್ಠರಾಗಿದ್ದ ಅವರಿಬ್ಬರು,  ಉತ್ಕೃಷ್ಟವಾದ ಮಲ್ಲಯುದ್ಧವನ್ನು ಮಾಡುತ್ತಾ, ಸುತ್ತಮುತ್ತಲಿನ ಪ್ರದೇಶದಲ್ಲಿನ  ಬಂಡೆಗಳು, ವೃಕ್ಷ ಮೊದಲಾದವುಗಳೆಲ್ಲವನ್ನೂ ಕೂಡಾ ಪುಡಿಮಾಡಿ, ದೀರ್ಘವಾಗಿ ಯುದ್ಧಮಾಡಿದರು.

Sunday, October 20, 2019

Mahabharata Tatparya Nirnaya Kannada 1425_1430


ತಂ ವೈ ಚುಕೋಪಯಿಷುರಗ್ರತ ಉಗ್ರಸೇನಂ ಕೃಷ್ಣೋ ನಿಧಾಯ ಸಮಗಾತ್ ಸ್ವಯಮಸ್ಯ ಪಶ್ಚಾತ್
ದೃಷ್ಟ್ವಾsಗ್ರತೋ ಮಗಧರಾಟ್ ಸ್ಥಿತಮುಗ್ರಸೇನಂ ಕೋಪಾಚ್ಚಲತ್ತನುರಿದಂ ವಚನಂ ಬಭಾಷೇ೧೪.೨೫

ಜರಾಸಂಧನಿಗೆ ಸಿಟ್ಟು ತರಿಸಲೆಂದೇ ಶ್ರೀಕೃಷ್ಣನು ಉಗ್ರಸೇನನನ್ನು ಮುಂದೆ ಇಟ್ಟು, ತಾನು ಉಗ್ರಸೇನನ ಹಿಂದೆ ನಿಂತ. ಜರಾಸಂಧನು ಮುಂದೆ ಇರುವ ಉಗ್ರಸೇನನನ್ನು ಕಂಡು ಸಿಟ್ಟಿನಿಂದ ಕಂಪಿಸುವ ಮೈಯುಳ್ಳವನಾಗಿ ಉಗ್ರಸೇನನನ್ನು ಕುರಿತು ಹೀಗೆ ಹೇಳಿದ:

ಪಾಪಾಪಯಾಹಿ ಪುರತೋ ಮಮ ರಾಜ್ಯಕಾಮ ನಿರ್ಲಜ್ಜ ಪುತ್ರವಧಕಾರಣ ಶತ್ರುಪಕ್ಷ
ತ್ವಂ ಜೀರ್ಣ್ಣಬಸ್ತಸದೃಶೋ ನ ಮಯೇಹ ವದ್ಧ್ಯಃ ಸಿಂಹೋ ಹಿ ಸಿಂಹಮಭಿಯಾತಿ ನ ವೈ ಸೃಗಾಲಮ್ ೧೪.೨೬

‘ಎಲೈ ಪಾಪಿಷ್ಠನೇ, ರಾಜ್ಯವನ್ನು ಬಯಸುವವನೇ, ನನ್ನೆದುರಿನಿಂದ ಆಚೆ ಸರಿ. ಮಗನ ಸಂಹಾರಕ್ಕೆ ಕಾರಣನಾದವನೇ, ನಾಚಿಕೆಯಿಲ್ಲದವನೇ, ಶತ್ರುಗಳ ಪಕ್ಷದಲ್ಲಿರುವವನೇ, ಮುದಿ ಟಗರಿಗೆ ಸದೃಶನಾದ ನೀನು ಈ ಸಂಗ್ರಾಮದಲ್ಲಿ ನನ್ನಿಂದ ಕೊಲ್ಲಲ್ಪಡಲು ಯೋಗ್ಯನಲ್ಲ. ಸಿಂಹವು ಸಿಂಹವನ್ನು ಎದುರುಗೊಳ್ಳುವುದೇ ಹೊರತು ನರಿಯನ್ನಲ್ಲ’.

ಆಕ್ಷಿಪ್ತ ಇತ್ಥಮಮುನಾsಥ ಸ ಭೋಜರಾಜಸ್ತೂಣಾತ್ ಪ್ರಗೃಹ್ಯ ನಿಶಿತಂ ಶರಮಾಶು ತೇನ
ಛಿತ್ವಾ ಜರಾಸುತಧನುರ್ಬಲವನ್ನನಾದ ವಿವ್ಯಾಧ ಸಾಯಕಗಣೈಶ್ಚ ಪುನಸ್ತಮುಗ್ರೈಃ ೧೪.೨೭

ಈರೀತಿಯಾಗಿ ಜರಾಸಂಧನಿಂದ ನಿಂದಿಸಲ್ಪಟ್ಟ ಆ ಉಗ್ರಸೇನನು, ಬತ್ತಳಿಕೆಯಿಂದ ಚೂಪಾಗಿರುವ ಬಾಣವನ್ನು ವೇಗದಲ್ಲಿ ಹಿಡಿದುಕೊಂಡು, ಆ ಬಾಣದಿಂದ ಜರಾಸಂಧನ ಬಿಲ್ಲನ್ನು ಕತ್ತರಿಸಿ, ಬಲಿಷ್ಠವಾಗಿ ಘರ್ಜಿಸಿದನು. ಪುನಃ ಜರಾಸಂಧನನ್ನು ಉಗ್ರವಾಗಿರುವ ಬಾಣಗಳ ಸಮೂಹದಿಂದ ಹೊಡೆದನು ಕೂಡಾ.

ಅನ್ಯಚ್ಛರಾಸನವರಂ ಪ್ರತಿಗೃಹ್ಯ ಕೋಪಸಂರಕ್ತನೇತ್ರಮಭಿಯಾನ್ತಮುದೀಕ್ಷ್ಯಕೃಷ್ಣಃ
ಭೋಜಾಧಿರಾಜವಧಕಾಙ್ಕ್ಷಿಣಮುಗ್ರವೇಗಂ ಬಾರ್ಹದ್ರಥಂ ಪ್ರತಿಯಯೌ ಪರಮೋ ರಥೇನ ೧೪.೨೮

ಶ್ರೀಕೃಷ್ಣನು ಕೋಪದಿಂದ, ಇನ್ನೊಂದು ಬಿಲ್ಲನ್ನು ಹಿಡಿದು, ಕೆಂಪಾದ ಕಣ್ಗಳುಳ್ಳ, ಭೋಜರಿಗೆ ರಾಜನಾಗಿರುವ, ಉಗ್ರಸೇನನನ್ನು ಕೊಲ್ಲುವುದರಲ್ಲಿ ಬಯಕೆಯುಳ್ಳ, ಉಗ್ರವಾದ ವೇಗವುಳ್ಳ ಜರಾಸಂಧನನ್ನು ತನ್ನ ರಥದಿಂದ ಎದುರುಗೊಂಡನು.

ಆಯಾನ್ತಮೀಕ್ಷ್ಯ ಭಗವನ್ತಮನನ್ತವೀರ್ಯಂ ಚೇದೀಶಪೌಣ್ಡ್ರಮುಖರಾಜಗಣೈಃ ಸಮೇತಃ
ನಾನಾವಿಧಾಸ್ತ್ರವರಶಸ್ತ್ರಗಣೈರ್ವವರ್ಷ ಮೇರುಂ ಯಥಾ ಘನ ಉದೀರ್ಣ್ಣರವೋ ಜಲೌಘೈಃ ೧೪.೨೯

ಬರುತ್ತಿರುವ ಎಣೆಯಿರದ ವೀರ್ಯವುಳ್ಳ ಪರಮಾತ್ಮನನ್ನು ಕಂಡ ಶಿಶುಪಾಲ, ಪೌಣ್ಡ್ರಕ ವಾಸುದೇವ, ಇವರೇ ಮೊದಲಾ ರಾಜರ ಗಣದಿಂದ ಕೂಡಿಕೊಂಡ ಜರಾಸಂಧ, ನಾನಾ ವಿಧವಾದ ಅಸ್ತ್ರ-ಶಸ್ತ್ರಗಳಿಂದ ಪರಮಾತ್ಮನನ್ನು ಪೀಡಿಸತೊಡಗಿದ. ನೀರಿನ ಸಮೂಹಗಳಿಂದ  ಗಟ್ಟಿಯಾಗಿ ಸದ್ದುಮಾಡುವ ಮೋಡವು ಮೇರುವಿನ ಮೇಲೆ ಹೇಗೆ ನೀರಿನ ಮಳೆಗರೆಯುತ್ತದೋ ಮತ್ತು ಅದರಿಂದ ಮೇರುವಿಗೆ ಯಾವ ತೊಂದರೆಯೂ ಆಗುವುದಿಲ್ಲವೋ,  ಹಾಗೇ, ಅವರೆಲ್ಲರ ಬಾಣಗಳಿಂದ ಭಗವಂತನಿಗೆ ಏನೂ ಆಗಲಿಲ್ಲ.  

ಶಸ್ತ್ರಾಸ್ತ್ರವೃಷ್ಟಿಮಭಿತೋ ಭಗವಾನ್ ವಿವೃಶ್ಚ್ಯ ಶಾರ್ಙ್ಗೋತ್ಥಸಾಯಕಗಣೈರ್ವಿರಥಾಶ್ವಸೂತಮ್
ಚಕ್ರೇ ನಿರಾಯುಧಮಸೌ ಮಗಧೇನ್ದ್ರಮಾಶು ಚ್ಛಿನ್ನಾತಪತ್ರವರಕೇತುಮಚಿನ್ತ್ಯಶಕ್ತಿಃ ೧೪.೩೦

ಪರಮಾತ್ಮನು ತನ್ನ ಸುತ್ತಲೂ ಇರುವ ಬಾಣ, ಗದೆ ಮೊದಲಾದವುಗಳ ಮಳೆಯನ್ನು ತನ್ನ ಶಾರ್ಙ್ಗದಿಂದ ಬಿಡಲ್ಪಟ್ಟ ಬಾಣಗಳ ಸಮೂಹದಿಂದ ಕತ್ತರಿಸಿ,  ಜರಾಸಂಧನನ್ನು ರಥ-ಕುದುರೆ-ಸೂತನನ್ನು ಕಳೆದುಕೊಂಡವನನ್ನಾಗಿ ಮಾಡಿ,  ರಾಜತ್ವದ ಸಂಕೇತವಾದ ಕೊಡೆ ಹಾಗೂ ಧ್ವಜವನ್ನೂ ಕೂಡಾ ಕತ್ತರಿಸಿ, ನಿರಾಯುಧನನ್ನಾಗಿ ಮಾಡಿದನು

Mahabharata Tatparya Nirnaya Kannada 1421_1424


ತಸ್ಯೇಚ್ಛಯೈವ ಪೃಥಿವೀಮವತೇರುರಾಶು ತಸ್ಯಾsಯುಧಾನಿ ಸಬಲಸ್ಯ ಸುಭಾಸ್ವರಾಣಿ
ಶಾರ್ಙ್ಗಾಸಿಚಕ್ರದರತೂಣಗದಾಃ ಸ್ವಕೀಯಾ ಜಗ್ರಾಹ ದಾರುಕಗೃಹೀತರಥೇ ಸ್ಥಿತಃ ಸಃ ೧೪.೨೧

ಬಲರಾಮನಿಂದ ಕೂಡಿರುವ ಶ್ರೀಕೃಷ್ಣನ ಇಚ್ಛೆಯಂತೇ, ಅವನ ಚನ್ನಾಗಿ ಹೊಳೆಯುತ್ತಿರುವ ಆಯುಧಗಳು ಭೂಮಿಗೆ ಇಳಿದವು. ಸಾರಥಿ ದಾರುಕನಿಂದ ಕೂಡಿ ಇಳಿದುಬಂದ ರಥದಲ್ಲಿದ್ದು ಶ್ರೀಕೃಷ್ಣ, ತನ್ನದಾದ ಶಾರ್ಙ್ಗ, ಖಡ್ಗ, ಚಕ್ರ,  ಬತ್ತಳಿಕೆ, ಗದೆಗಳನ್ನು ಸ್ವೀಕರಿಸಿದ.

ಆರುಹ್ಯ ಭೂಮಯರಥಂ ಪ್ರತಿ ಯುಕ್ತಮಶ್ವೈರ್ವೇದಾತ್ಮಕೈರ್ದ್ಧನುರಧಿಜ್ಯಮಥ ಪ್ರಗೃಹ್ಯ
ಶಾರ್ಙ್ಗಂ ಶರಾಂಶ್ಚ ನಿಶಿತಾನ್ ಮಗಧಾಧಿರಾಜಮುಗ್ರಂ ನೃಪೇನ್ದ್ರಸಹಿತಂ ಪ್ರಯಯೌ ಜವೇನ೧೪.೨೨

ವೇದದ ಪ್ರತಿನಿಧಿಯಾಗಿರತಕ್ಕಂತಹ ಕುದುರೆಗಳಿಂದ ಕೂಡಿರುವ, ಭೂಮಿಯ ಪ್ರತಿನಿಧಿಯಾಗಿರುವ ರಥವನ್ನು ಏರಿ,  ಹೆದೆಯೇರಿಸಿದ ಶಾರ್ಙ್ಗದೊಂದಿಗೆ ಚೂಪಾಗಿರುವ ಬಾಣವನ್ನು ಹಿಡಿದುಕೊಂಡು, ಬೇರೆಬೇರೆ  ದೇಶದ ರಾಜರಿಂದ ಕೂಡಿಕೊಂಡು ಬಂದಿರುವ ಭೀಕರನಾದ ಜರಾಸಂಧನನ್ನು ಕುರಿತು ವೇಗದಿಂದ ಶ್ರೀಕೃಷ್ಣ ತೆರಳಿದನು.

[ಕೃಷ್ಣ-ಜರಾಸಂಧರ ಸಂಗ್ರಾಮವನ್ನು ಅಧ್ಯಾತ್ಮದಲ್ಲಿ ಯಾವ ರೀತಿ ಅನುಸಂಧಾನ ಮಾಡಬೇಕು ಎನ್ನುವುದನ್ನು ಈ ಶ್ಲೋಕ ಸೂಚಿಸುತ್ತದೆ. ‘ಭೂಮಯರಥ’ ಎಂದರೆ ಭೂಮಿಯ ಪರಿಣಾಮವನ್ನು ಹೊಂದಿರುವ ಅಥವಾ ಭೂಮಿಯ ಪ್ರತಿನಿಧಿಯಾದ ರಥ ಎಂದರ್ಥ. ಇದು ನಮ್ಮ ದೇಹವನ್ನು ಸೂಚಿಸುತ್ತದೆ. ದೇಹ ಎನ್ನುವುದು ಭೂಮಿಯ ಪರಿಣಾಮ. ಅಂತಹ ದೇಹವೆಂಬ ರಥವನ್ನು ಸರಿಯಾಗಿ ಕೊಂಡೊಯ್ಯುವುದು ವೇದಗಳು. ಅಂತಹ  ಈ ರಥವನ್ನು ನಿಯಂತ್ರಿಸುವ ಒಬ್ಬ ರಥಿ ಎಂದರೆ ಅದು ‘ಭಗವಂತ’].

ರಾಮಃ ಪ್ರಗೃಹ್ಯ ಮುಸಲಂ ಸ ಹಲಂ ಚ ಯಾನಮಾಸ್ಥಾಯ ಸಾಯಕಶರಾನಸತೂಣಯುಕ್ತಃ
ಸೈನ್ಯಂ ಜರಾಸುತಸುರಕ್ಷಿತಮಭ್ಯಧಾವದ್ಧರ್ಷಾನ್ನದನ್ನುರುಬಲೋsರಿಬಲೈರಧೃಷ್ಯಃ ೧೪.೨೩

ಬಲರಾಮನೂ ಕೂಡಾ, ನಕೆಯನ್ನೂ, ನೇಗಿಲನ್ನೂ ಹಿಡಿದು, ಬಿಲ್ಲು-ಬಾಣ ಸಹಿತನಾಗಿ,  ರಥವನ್ನು ಏರಿ, ಉತ್ಕೃಷ್ಟವಾದ ಬಲವುಳ್ಳವನಾಗಿ, ಶತ್ರುಗಳ ಬಲದಿಂದ ಕಂಗೆಡದೇ,  ‘ಬಹಳ ಕಾಲದ ನಂತರ ಯುದ್ಧಕ್ಕೆ ಸಿಕ್ಕರಲ್ಲಾ’ ಎನ್ನುವ ಸಂತೋಷದಿಂದ ಗಟ್ಟಿಯಾಗಿ ಘರ್ಜಿಸುತ್ತಾ, ಜರಾಸಂಧನಿಂದ ರಕ್ಷಿತವಾದ ಸೈನ್ಯವನ್ನು ಕುರಿತು ಧಾವಿಸಿದನು.

ಉದ್ವೀಕ್ಷ್ಯ ಕೃಷ್ಣಮಭಿಯಾನ್ತಮನನ್ತಶಕ್ತಿಂ ರಾಜೇನ್ದ್ರವೃನ್ದಸಹಿತೋ ಮಗಧಾಧಿರಾಜಃ
ಉದ್ವೇಲಸಾಗರವದಾಶ್ವಭಿಯಾಯ ಕೋಪಾನ್ನಾನಾವಿಧಾಯುಧವರೈರಭಿವರ್ಷಮಾಣಃ ೧೪.೨೪

ಸಮಸ್ತ ರಾಜರ ಸೇನೆಯಿಂದ ಕೂಡಿರುವ ಮಗಧದ ಒಡೆಯನಾಗಿರುವ ಜರಾಸಂಧನು, ತನ್ನೆದುರಿಂದ ಧಾವಿಸಿ ಬರುತ್ತಿರುವ, ಎಣೆಯಿರದ ಕಸುವಿನ ಕೃಷ್ಣನನ್ನು ನೋಡಿ, ಕೋಪದಿಂದ, ತರತರನಾದ ಆಯುಧಗಳನ್ನು ಹಿಡಿದು, ಬಾಣಗಳ ಮಳೆಗರೆಯುತ್ತಾ, ಉಕ್ಕಿಬರುವ ಸಮುದ್ರದಂತೆ ಕೃಷ್ಣನನ್ನು ಎದುರುಗೊಂಡ.

Sunday, October 13, 2019

Mahabharata Tatparya Nirnaya Kannada 1416_1420


ಸರ್ವಾಂ ಪುರೀಂ ಪ್ರತಿನಿರುದ್ಧ್ಯ ದಿದೇಶ ವಿನ್ದವಿನ್ದಾನುಜೌ ಭಗವತಃ ಕುಮತಿಃ ಸ ದೂತೌ
ತಾವೂಚತುರ್ಭಗವತೇsಸ್ಯ ವಚೋsತಿದರ್ಪ್ಪಪೂರ್ಣ್ಣಂ ತಥಾ ಭಗವತೋsಪ್ಯಪಹಾಸಯುಕ್ತಮ್ ೧೪.೧೬

ಪಟ್ಟಣವನ್ನು ಎಲ್ಲೆಡೆಯಿಂದ ಮುತ್ತಿಗೆ ಹಾಕಿದ ಜರಾಸಂಧ ವಿನ್ದ ಮತ್ತು ಅನುವಿನ್ದಾ ಎನ್ನುವ ತನ್ನ ದೂತರನ್ನು ಕೃಷ್ಣನಲ್ಲಿಗೆ ಕಳುಹಿಸಿದನು. ಅವರಿಬ್ಬರೂ  ಆತ್ಯಂತಿಕವಾದ ಅಪಹಾಸ್ಯದ ಮಾತನ್ನು ಅತ್ಯಂತ ದರ್ಪದಿಂದ ಕೂಡಿದವರಾಗಿ ಶ್ರೀಕೃಷ್ಣನಿಗೆ ಹೇಳಿದರು.

ಲೋಕೇ(s)ಪ್ರತೀತಬಲಪೌರುಷಸಾರರೂಪಸ್ತ್ವಂ ಹ್ಯೇಕ ಏಷ್ಯಭವತೋ ಬಲವೀರ್ಯ್ಯಸಾರಮ್
ಜ್ಞಾತ್ವಾ ಸುತೇ ನತು ಮಯಾ ಪ್ರತಿಪಾದಿತೇ ಹಿ ಕಂಸಸ್ಯ ವೀರ್ಯ್ಯರಹಿತೇನ ಹತಸ್ತ್ವಯಾ ಸಃ ೧೪.೧೭

ಸೋsಹಂ ಹಿ ದುರ್ಬಲತಮೋ ಬಲಿನಾಂ ವರಿಷ್ಠಂ ಕೃತ್ವೈವ ದೃಷ್ಟಿವಿಷಯಂ ವಿಗತಪ್ರತಾಪಃ
ಯಾಸ್ಯೇ ತಪೋವನಮಥೋ ಸಹಿತಃ ಸುತಾಭ್ಯಾಂ ಕ್ಷಿಪ್ರಂ ಮಮಾದ್ಯ ವಿಷಯೇ ಭವ ಚಕ್ಷುಷೋsತಃ ೧೪.೧೮

ಜರಾಸಂಧ ಶ್ರೀಕೃಷ್ಣನನ್ನು ಕುರಿತು ಹೇಳಿ ಕಳುಹಿಸಿದ ವ್ಯಂಗ್ಯದ ಮಾತು ಇದಾಗಿದೆ. ‘ನಾನು ಏನೂ ಕೈಲಾಗದ ಕಂಸನಿಗೆ ನನ್ನ ಮಕ್ಕಳನ್ನು ಕೊಟ್ಟೆ. ನೀನೇನೋ ಲೋಕದಲ್ಲಿ ಬಹಳ ಪರಾಕ್ರಮಿ ಎನಿಸಿಕೊಂಡಿದ್ದೀಯ. ನಿನ್ನ ಬಲವೀರ್ಯವನ್ನು ತಿಳಿಯದೇ ನಾನು ನನ್ನ ಮಕ್ಕಳನ್ನು ಕಂಸನಿಗೆ ಕೊಟ್ಟೆ. ಇದೀಗ ನಿನ್ನಿಂದ ಆ ಕಂಸ ಸಂಹರಿಸಲ್ಪಟ್ಟನು.(ಮೋಸದಿಂದ, ಆಕಸ್ಮಿಕವಾಗಿ ನಿನ್ನಿಂದ ಕಂಸ ಸತ್ತ ಎನ್ನುವ ಧ್ವನಿ).
ಇದೀಗ ಅತ್ಯಂತ ದುರ್ಬಲನಾದ ನಾನು ಬಲಿಷ್ಠರ ನಡುವೆ ಶ್ರೇಷ್ಠನಾಗಿರುವ ನಿನ್ನನ್ನು ಒಮ್ಮೆ ಕಂಡು, ನನ್ನ ಇಬ್ಬರು ಮಕ್ಕಳಿಂದ ಕೂಡಿಕೊಂಡು ಕಾಡಿಗೆ ಹೊರಟುಹೋಗುತ್ತೇನೆ. ಆದ್ದರಿಂದ ಬೇಗದಲ್ಲಿಯೇ ನನ್ನ  ಚಕ್ಷುಷುಗೆ ವಿಷಯನಾಗು[1]’. (‘ರಾಜನಲ್ಲದವನೊಂದಿಗೆ ನಾನು ಯುದ್ಧ ಮಾಡುವುದಿಲ್ಲ. ನೀನು ನನ್ನೊಂದಿಗೆ ಯುದ್ಧ ಮಾಡುವುದಕ್ಕಾಗಲೀ, ನನ್ನ ಕೈಯಿಂದ ಸಾಯುವುದಕ್ಕಾಗಲೀ ಯೋಗ್ಯನಲ್ಲ’ ಎನ್ನುವ ವ್ಯಂಗ್ಯದ ಮಾತು ಇದಾಗಿದೆ).

ಸಾಕ್ಷೇಪಮೀರಿತಮಿದಂ ಬಲದರ್ಪ್ಪಪೂರ್ಣ್ಣಮಾತ್ಮಾಪಹಾಸಸಹಿತಂ ಭಗವಾನ್ ನಿಶಮ್ಯ
ಸತ್ಯಂ ತದಿತ್ಯುರು ವಚೋsರ್ತ್ಥವದಭ್ಯುದೀರ್ಯ್ಯ ಮನ್ದಂ ಪ್ರಹಸ್ಯ ನಿರಗಾತ್ ಸಹಿತೋ ಬಲೇನ೧೪.೧೯

ಅತ್ಯಂತ ಬಲದ ದರ್ಪದಿಂದ ಕೂಡಿ ಹೇಳಿರುವ ತನ್ನ ಅಪಹಾಸ್ಯದ ಮಾತುಗಳನ್ನು ಕೇಳಿದ ಶ್ರೀಕೃಷ್ಣ,  ‘ನಿಜವಾಗಿಯೂ ಅದು ಹೌದು’ ಎಂಬಂತೆ ಉತ್ಕೃಷ್ಟವಾದ ಅರ್ಥವುಳ್ಳ ಮಾತನ್ನು ಹೇಳಿ, ಮೆಲ್ಲಗೆ ನಕ್ಕು, ಬಲರಾಮನಿಂದ ಕೂಡಿದವನಾಗಿ ಯುದ್ಧಕ್ಕೆಂದು ಹೊರಬಂದ.

ದ್ವಾರೇಷು ಸಾತ್ಯಕಿಪುರಸ್ಸರಮಾತ್ಮಸೈನ್ಯಂ ತ್ರಿಷ್ವಭ್ಯುದೀರ್ಯ್ಯ ಭಗವಾನ್ ಸ್ವಯಮುತ್ತರೇಣ
ರಾಮದ್ವಿತೀಯ ಉದಗಾನ್ಮಗಧಾಧಿರಾಜಂ ಯೋದ್ಧುಂ ನೃಪೇನ್ದ್ರಕಟಕೇನ ಯುತಂ ಪರೇಶಃ ೧೪.೨೦

ಮೂರು ದಿಕ್ಕುಗಳಲ್ಲಿ ಸಾತ್ಯಕಿಯನ್ನೇ ಮುಂದಾಳುವಾಗಿ ಉಳ್ಳ ತನ್ನ ಸೈನ್ಯವನ್ನು ಮೂರು ದ್ವಾರಗಳಲ್ಲಿ ಹೋಗುವಂತೆ ಹೇಳಿ ಪರಮಾತ್ಮನು, ಉತ್ತರದಿಕ್ಕಿನಿಂದ ಕೇವಲ ಬಲರಾಮನೊಂದಿಗೆ ಕೂಡಿಕೊಂಡು, ರಾಜಶ್ರೇಷ್ಠರ ಸಮೂಹದಿಂದ ಕೂಡಿಕೊಂಡು ಬಂದಿರುವ ಜರಾಸಂಧನನ್ನು ಕುರಿತು ಯುದ್ಧಮಾಡಲು ತೆರಳಿದ.
(ಕೋಟೆಯ ನಾಲ್ಕೂ ಭಾಗದಿಂದಲೂ ಅವರು ಮುತ್ತಿಗೆ ಹಾಕಿದ್ದರು. ಆಗ ಈರೀತಿ ಮೂರು ದಿಕ್ಕಿಗೆ ಇತರರನ್ನು ಕಳುಹಿಸಿ, ತಾನೊಬ್ಬನೇ ಜರಾಸಂಧನಿದ್ದ  ಉತ್ತರ ದಿಕ್ಕಿಗೆ ಶ್ರೀಕೃಷ್ಣ ತೆರಳಿದ.)




[1] ನನ್ನ ಕಣ್ಣೆದುರು ಬಾ