ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Wednesday, October 23, 2019

Mahabharata Tatparya Nirnaya Kannada 1431_1436


ನೈನಂ ಜಘಾನ ಭಗವಾನ್ ಸುಶಕಂ ಚ ಭೀಮೇ ಭಕ್ತಿಂ ನಿಜಾಂ ಪ್ರಥಯಿತುಂ ಯಶ ಉಚ್ಚಧರ್ಮ್ಮಮ್
ಚೇದೀಶಪೌಣ್ಡ್ರಕಸಕೀಚಕಮದ್ರರಾಜಸಾಲ್ವೈಕಲವ್ಯಕಮುಖಾನ್ ವಿರಥಾಂಶ್ಚಕಾರ        ೧೪.೩೧

ಪರಮಾತ್ಮನು ತನ್ನಿಂದ ಸುಲಭವಾಗಿ ಕೊಲ್ಲಲು ಸಾಧ್ಯವಾಗಿದ್ದ  ಜರಾಸಂಧನನ್ನು ಕೊಲ್ಲಲಿಲ್ಲ. (ಕಾರಣವೇನೆಂದರೆ: ) ಭೀಮನಲ್ಲಿರತಕ್ಕಂತಹ ಭಕ್ತಿ, ಉತ್ಕೃಷ್ಟವಾದ ಧರ್ಮವನ್ನು ಪ್ರಪಂಚದಲ್ಲಿ ಪ್ರಖ್ಯಾತಪಡಿಸುವುದಕ್ಕೋಸ್ಕರ (ಮುಂದೆ ‘ಜರಾಸಂಧನನ್ನು ಕೊಂದವ’ ಎನ್ನುವ ಕೀರ್ತಿ ಭೀಮನಿಗೆ ಬರುವಂತೆ ಮಾಡುವುದಕ್ಕಾಗಿ) ಶ್ರೀಕೃಷ್ಣ ಜರಾಸಂಧನನ್ನು ಈ ಯುದ್ಧದಲ್ಲಿ ಕೊಲ್ಲಲಿಲ್ಲ. ಶಿಶುಪಾಲ,  ಪೌಣ್ಡ್ರಕವಾಸುದೇವ, ಕೀಚಕ, ಶಲ್ಯ, ಏಕಲವ್ಯ ಮೊದಲಾದ ಮಹಾರಥರನ್ನು ಕೃಷ್ಣ ರಥಹೀನನ್ನಾಗಿ ಮಾಡಿದ.

ಯೇ ಚಾಪಿ ಹಂಸಡಿಭಕದ್ರುಮರುಗ್ಮಿಮುಖ್ಯಾ ಬಾಹ್ಲೀಕಭೌಮಸುತಮೈನ್ದಪುರಸ್ಸರಾಶ್ಚ
ಸರ್ವೇ ಪ್ರದುದ್ರು ವುರಜಸ್ಯ ಶರೈರ್ವಿಭಿನ್ನಾ ಅನ್ಯೇ ಚ ಭೂಮಿಪತಯೋ ಯ ಇಹಾsಸುರುರ್ವ್ಯಾಮ್ ೧೪.೩೨

ಇನ್ನು ಉಳಿದವರು: ಹಂಸ, ಡಿಭಕ, ದ್ರುಮ, ರುಗ್ಮಿ, ಬಾಹ್ಲೀಕ,  ಭೌಮಸುತ(ನರಕಾಸುರನ ಮಗ ಭಗದತ್ತ), ಮೈನ್ದ(ರಾಮಾಯಣಕಾಲದಲ್ಲಿ ಕಪಿಯಾಗಿದ್ದ ಅಶ್ವಿದೇವತೆಗಳಲ್ಲಿ ಒಬ್ಬ), ಇವರೇ ಮೊದಲಾಗಿರತಕ್ಕಂತಹ, ಭೂಮಿಯಲ್ಲಿ   ಆ ಕಾಲದಲ್ಲಿ ಯಾರು-ಯಾರು ಶ್ರೇಷ್ಠರೆನಿಸಿದ ರಾಜರುಗಳಿದ್ದರೋ, ಅವರೆಲ್ಲರೂ  ಪರಮಾತ್ಮನ ಬಾಣಗಳಿಂದ ಭೇದಿಸಲ್ಪಟ್ಟವರಾಗಿ ಓಡಿಹೋದರು. 

ಛಿನ್ನಾಯುಧಧ್ವಜಪತಾಕರಥಾಶ್ವಸೂತವರ್ಮ್ಮಾಣ ಉಗ್ರಶರತಾಡಿತಭಿನ್ನಗಾತ್ರಾಃ
ಸ್ರಸ್ತಾಮ್ಬರಾಭರಣಮೂರ್ದ್ಧಜಮಾಲ್ಯದೀನಾ ರಕ್ತಂ ವಮನ್ತ ಉರು ದುದ್ರುವುರಾಶು ಭೀತಾಃ ೧೪.೩೩

ಆಯುಧ, ಧ್ವಜ, ಪತಾಕ, ರಥ, ಕುದುರೆ, ಸಾರಥಿ, ಕವಚ, ಎಲ್ಲವನ್ನೂ ಕೂಡಾ ಕತ್ತರಿಸಿಕೊಂಡು, ಉಗ್ರವಾಗಿರುವ ಬಾಣದಿಂದ ತಾಡಿತರಾಗಿ, ಮೈಯನ್ನು ಮುರಿದುಕೊಂಡು, ಜಾರಿಹೋದ ಬಟ್ಟೆಯೊಂದಿಗೆ, ಆಭರಣ, ಕೂದಲು, ಮಾಲೆ, ಎಲ್ಲವನ್ನೂ ಕಳೆದುಕೊಂಡು, ದೀನರಾಗಿ, ಬಹಳ ರಕ್ತವನ್ನು ಕಾರುತ್ತಾ, ಭಯಗೊಂಡು ಅವರೆಲ್ಲರೂ ಬೇಗನೆ ಓಡಿಹೋದರು.

ಶೋಚ್ಯಾಂ ದಶಾಮುಪಗತೇಷು ನೃಪೇಷು ಸರ್ವೇಷ್ವಸ್ತಾಯುಧೇಷು ಹರಿಣಾ ಯುಧಿ ವಿದ್ರವತ್ಸು
ನಾನಾಯುಧಾಢ್ಯಮಪರಂ ರಥಮುಗ್ರವೀರ್ಯ್ಯ ಆಸ್ಥಾಯ ಮಾಗಧಪತಿಃ ಪ್ರಸಸಾರ ರಾಮಮ್೧೪.೩೪

ಹೀಗೆ ಎಲ್ಲಾ ರಾಜರೂ ಕೂಡಾ, ಯುದ್ಧದಲ್ಲಿ ಪರಮಾತ್ಮನಿಂದ ತಮ್ಮ ಆಯುಧಗಳನ್ನು ಕಳೆದುಕೊಂಡು, ಶೋಚನೀಯವಾದ ಅವಸ್ಥೆಯನ್ನು ಹೊಂದಿ ಓಡುತ್ತಿರಲು, ಉಗ್ರವೀರ್ಯನಾದ ಜರಾಸಂಧನು ನಾನಾ ರೀತಿಯ ಆಯುಧಗಳಿಂದ ಕೂಡಿರುವ ಇನ್ನೊಂದು ರಥವನ್ನು ಏರಿ, ಬಲರಾಮನ ಬಳಿ ಬಂದ. 

ಆಧಾವತೋsಸ್ಯ ಮುಸಲೇನ ರಥಂ ಬಭಞ್ಜ ರಾಮೋ ಗದಾಮುರುತರೋರಸಿ ಸೋsಪಿ ತಸ್ಯ
ಚಿಕ್ಷೇಪ ತಂ ಚ ಮುಸಲೇನ ತತಾಡ ರಾಮಸ್ತಾವುತ್ತಮೌ ಬಲವತಾಂ ಯುಯುಧಾತ ಉಗ್ರಮ್೧೪.೩೫

ತನ್ನತ್ತ ನುಗ್ಗಿ ಬರುತ್ತಿರುವ ಜರಾಸಂಧನ ರಥವನ್ನು ಬಲರಾಮನು ತನ್ನ ಮುಸಲಾಯುಧದಿಂದ ಒಡೆದ. ಜರಾಸಂಧನಾದರೋ, ಬಲರಾಮನ ವಿಸ್ತೀರ್ಣವಾದ ಎದೆಯಮೇಲೆ ಗದಾಪ್ರಹಾರ ಮಾಡಿದ. ಆಗ ಬಲರಾಮನು ತನ್ನ ಮುಸಲಾಯುಧದಿಂದ(ಒನಕೆಯಿಂದ) ಜರಾಸಂಧನಿಗೆ ಹೊಡೆದ. ಹೀಗೆ ಬಲಿಷ್ಠರಲ್ಲೇ ಶ್ರೇಷ್ಠರಾದ ಅವರಿಬ್ಬರೂ ಭೀಕರವಾಗಿ ಹೋರಾಡಿದರು. 

ತೌ ಚಕ್ರತುಃ ಪುರು ನಿಯುದ್ಧಮಪಿ ಸ್ಮ ತತ್ರ ಸಞ್ಚೂರ್ಣ್ಣ್ಯ  ಸರ್ವಗಿರಿವೃಕ್ಷಶಿಲಾಸಮೂಹಾನ್
ದೀರ್ಘಂ ನಿಯುದ್ಧಮಭವತ್ ಸಮಮೇತಯೋಸ್ತದ್ ವಜ್ರಾದ್ ದೃಢಾಙ್ಗತಮಯೋರ್ಬಲಿನೋರ್ನ್ನಿತಾನ್ತಮ್ ೧೪.೩೬

ವಜ್ರಕ್ಕಿಂತಲೂ ದೃಢವಾಗಿರುವ ಅಂಗವುಳ್ಳ, ಬಲಿಷ್ಠರಾಗಿದ್ದ ಅವರಿಬ್ಬರು,  ಉತ್ಕೃಷ್ಟವಾದ ಮಲ್ಲಯುದ್ಧವನ್ನು ಮಾಡುತ್ತಾ, ಸುತ್ತಮುತ್ತಲಿನ ಪ್ರದೇಶದಲ್ಲಿನ  ಬಂಡೆಗಳು, ವೃಕ್ಷ ಮೊದಲಾದವುಗಳೆಲ್ಲವನ್ನೂ ಕೂಡಾ ಪುಡಿಮಾಡಿ, ದೀರ್ಘವಾಗಿ ಯುದ್ಧಮಾಡಿದರು.

No comments:

Post a Comment