ತಸ್ಯೇಚ್ಛಯೈವ ಪೃಥಿವೀಮವತೇರುರಾಶು
ತಸ್ಯಾsಯುಧಾನಿ ಸಬಲಸ್ಯ ಸುಭಾಸ್ವರಾಣಿ ।
ಶಾರ್ಙ್ಗಾಸಿಚಕ್ರದರತೂಣಗದಾಃ
ಸ್ವಕೀಯಾ ಜಗ್ರಾಹ ದಾರುಕಗೃಹೀತರಥೇ ಸ್ಥಿತಃ ಸಃ ॥೧೪.೨೧॥
ಬಲರಾಮನಿಂದ ಕೂಡಿರುವ ಶ್ರೀಕೃಷ್ಣನ ಇಚ್ಛೆಯಂತೇ, ಅವನ ಚನ್ನಾಗಿ
ಹೊಳೆಯುತ್ತಿರುವ ಆಯುಧಗಳು ಭೂಮಿಗೆ ಇಳಿದವು. ಸಾರಥಿ ದಾರುಕನಿಂದ ಕೂಡಿ ಇಳಿದುಬಂದ ರಥದಲ್ಲಿದ್ದು ಶ್ರೀಕೃಷ್ಣ, ತನ್ನದಾದ ಶಾರ್ಙ್ಗ, ಖಡ್ಗ,
ಚಕ್ರ, ಬತ್ತಳಿಕೆ, ಗದೆಗಳನ್ನು ಸ್ವೀಕರಿಸಿದ.
ಆರುಹ್ಯ ಭೂಮಯರಥಂ ಪ್ರತಿ ಯುಕ್ತಮಶ್ವೈರ್ವೇದಾತ್ಮಕೈರ್ದ್ಧನುರಧಿಜ್ಯಮಥ ಪ್ರಗೃಹ್ಯ ।
ಶಾರ್ಙ್ಗಂ ಶರಾಂಶ್ಚ
ನಿಶಿತಾನ್ ಮಗಧಾಧಿರಾಜಮುಗ್ರಂ ನೃಪೇನ್ದ್ರಸಹಿತಂ ಪ್ರಯಯೌ ಜವೇನ॥೧೪.೨೨॥
ವೇದದ
ಪ್ರತಿನಿಧಿಯಾಗಿರತಕ್ಕಂತಹ ಕುದುರೆಗಳಿಂದ ಕೂಡಿರುವ, ಭೂಮಿಯ ಪ್ರತಿನಿಧಿಯಾಗಿರುವ ರಥವನ್ನು ಏರಿ, ಹೆದೆಯೇರಿಸಿದ ಶಾರ್ಙ್ಗದೊಂದಿಗೆ ಚೂಪಾಗಿರುವ ಬಾಣವನ್ನು
ಹಿಡಿದುಕೊಂಡು, ಬೇರೆಬೇರೆ ದೇಶದ ರಾಜರಿಂದ
ಕೂಡಿಕೊಂಡು ಬಂದಿರುವ ಭೀಕರನಾದ ಜರಾಸಂಧನನ್ನು ಕುರಿತು ವೇಗದಿಂದ ಶ್ರೀಕೃಷ್ಣ ತೆರಳಿದನು.
[ಕೃಷ್ಣ-ಜರಾಸಂಧರ
ಸಂಗ್ರಾಮವನ್ನು ಅಧ್ಯಾತ್ಮದಲ್ಲಿ ಯಾವ ರೀತಿ ಅನುಸಂಧಾನ ಮಾಡಬೇಕು ಎನ್ನುವುದನ್ನು ಈ ಶ್ಲೋಕ ಸೂಚಿಸುತ್ತದೆ. ‘ಭೂಮಯರಥ’ ಎಂದರೆ ಭೂಮಿಯ ಪರಿಣಾಮವನ್ನು ಹೊಂದಿರುವ ಅಥವಾ ಭೂಮಿಯ ಪ್ರತಿನಿಧಿಯಾದ ರಥ
ಎಂದರ್ಥ. ಇದು ನಮ್ಮ ದೇಹವನ್ನು
ಸೂಚಿಸುತ್ತದೆ. ದೇಹ ಎನ್ನುವುದು ಭೂಮಿಯ
ಪರಿಣಾಮ. ಅಂತಹ ದೇಹವೆಂಬ ರಥವನ್ನು ಸರಿಯಾಗಿ ಕೊಂಡೊಯ್ಯುವುದು ವೇದಗಳು. ಅಂತಹ ಈ ರಥವನ್ನು ನಿಯಂತ್ರಿಸುವ ಒಬ್ಬ ರಥಿ ಎಂದರೆ ಅದು ‘ಭಗವಂತ’].
ರಾಮಃ ಪ್ರಗೃಹ್ಯ ಮುಸಲಂ ಸ ಹಲಂ ಚ
ಯಾನಮಾಸ್ಥಾಯ ಸಾಯಕಶರಾನಸತೂಣಯುಕ್ತಃ ।
ಸೈನ್ಯಂ
ಜರಾಸುತಸುರಕ್ಷಿತಮಭ್ಯಧಾವದ್ಧರ್ಷಾನ್ನದನ್ನುರುಬಲೋsರಿಬಲೈರಧೃಷ್ಯಃ ॥ ೧೪.೨೩ ॥
ಬಲರಾಮನೂ ಕೂಡಾ, ಒನಕೆಯನ್ನೂ, ನೇಗಿಲನ್ನೂ ಹಿಡಿದು,
ಬಿಲ್ಲು-ಬಾಣ ಸಹಿತನಾಗಿ, ರಥವನ್ನು ಏರಿ, ಉತ್ಕೃಷ್ಟವಾದ ಬಲವುಳ್ಳವನಾಗಿ, ಶತ್ರುಗಳ
ಬಲದಿಂದ ಕಂಗೆಡದೇ, ‘ಬಹಳ ಕಾಲದ ನಂತರ ಯುದ್ಧಕ್ಕೆ
ಸಿಕ್ಕರಲ್ಲಾ’ ಎನ್ನುವ ಸಂತೋಷದಿಂದ ಗಟ್ಟಿಯಾಗಿ ಘರ್ಜಿಸುತ್ತಾ, ಜರಾಸಂಧನಿಂದ ರಕ್ಷಿತವಾದ
ಸೈನ್ಯವನ್ನು ಕುರಿತು ಧಾವಿಸಿದನು.
ಉದ್ವೀಕ್ಷ್ಯ ಕೃಷ್ಣಮಭಿಯಾನ್ತಮನನ್ತಶಕ್ತಿಂ
ರಾಜೇನ್ದ್ರವೃನ್ದಸಹಿತೋ ಮಗಧಾಧಿರಾಜಃ ।
ಉದ್ವೇಲಸಾಗರವದಾಶ್ವಭಿಯಾಯ
ಕೋಪಾನ್ನಾನಾವಿಧಾಯುಧವರೈರಭಿವರ್ಷಮಾಣಃ ॥೧೪.೨೪॥
ಸಮಸ್ತ ರಾಜರ ಸೇನೆಯಿಂದ ಕೂಡಿರುವ ಮಗಧದ ಒಡೆಯನಾಗಿರುವ ಜರಾಸಂಧನು,
ತನ್ನೆದುರಿಂದ ಧಾವಿಸಿ ಬರುತ್ತಿರುವ, ಎಣೆಯಿರದ ಕಸುವಿನ
ಕೃಷ್ಣನನ್ನು ನೋಡಿ, ಕೋಪದಿಂದ, ತರತರನಾದ ಆಯುಧಗಳನ್ನು ಹಿಡಿದು, ಬಾಣಗಳ ಮಳೆಗರೆಯುತ್ತಾ, ಉಕ್ಕಿಬರುವ ಸಮುದ್ರದಂತೆ ಕೃಷ್ಣನನ್ನು ಎದುರುಗೊಂಡ.
No comments:
Post a Comment