ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Sunday, October 20, 2019

Mahabharata Tatparya Nirnaya Kannada 1425_1430


ತಂ ವೈ ಚುಕೋಪಯಿಷುರಗ್ರತ ಉಗ್ರಸೇನಂ ಕೃಷ್ಣೋ ನಿಧಾಯ ಸಮಗಾತ್ ಸ್ವಯಮಸ್ಯ ಪಶ್ಚಾತ್
ದೃಷ್ಟ್ವಾsಗ್ರತೋ ಮಗಧರಾಟ್ ಸ್ಥಿತಮುಗ್ರಸೇನಂ ಕೋಪಾಚ್ಚಲತ್ತನುರಿದಂ ವಚನಂ ಬಭಾಷೇ೧೪.೨೫

ಜರಾಸಂಧನಿಗೆ ಸಿಟ್ಟು ತರಿಸಲೆಂದೇ ಶ್ರೀಕೃಷ್ಣನು ಉಗ್ರಸೇನನನ್ನು ಮುಂದೆ ಇಟ್ಟು, ತಾನು ಉಗ್ರಸೇನನ ಹಿಂದೆ ನಿಂತ. ಜರಾಸಂಧನು ಮುಂದೆ ಇರುವ ಉಗ್ರಸೇನನನ್ನು ಕಂಡು ಸಿಟ್ಟಿನಿಂದ ಕಂಪಿಸುವ ಮೈಯುಳ್ಳವನಾಗಿ ಉಗ್ರಸೇನನನ್ನು ಕುರಿತು ಹೀಗೆ ಹೇಳಿದ:

ಪಾಪಾಪಯಾಹಿ ಪುರತೋ ಮಮ ರಾಜ್ಯಕಾಮ ನಿರ್ಲಜ್ಜ ಪುತ್ರವಧಕಾರಣ ಶತ್ರುಪಕ್ಷ
ತ್ವಂ ಜೀರ್ಣ್ಣಬಸ್ತಸದೃಶೋ ನ ಮಯೇಹ ವದ್ಧ್ಯಃ ಸಿಂಹೋ ಹಿ ಸಿಂಹಮಭಿಯಾತಿ ನ ವೈ ಸೃಗಾಲಮ್ ೧೪.೨೬

‘ಎಲೈ ಪಾಪಿಷ್ಠನೇ, ರಾಜ್ಯವನ್ನು ಬಯಸುವವನೇ, ನನ್ನೆದುರಿನಿಂದ ಆಚೆ ಸರಿ. ಮಗನ ಸಂಹಾರಕ್ಕೆ ಕಾರಣನಾದವನೇ, ನಾಚಿಕೆಯಿಲ್ಲದವನೇ, ಶತ್ರುಗಳ ಪಕ್ಷದಲ್ಲಿರುವವನೇ, ಮುದಿ ಟಗರಿಗೆ ಸದೃಶನಾದ ನೀನು ಈ ಸಂಗ್ರಾಮದಲ್ಲಿ ನನ್ನಿಂದ ಕೊಲ್ಲಲ್ಪಡಲು ಯೋಗ್ಯನಲ್ಲ. ಸಿಂಹವು ಸಿಂಹವನ್ನು ಎದುರುಗೊಳ್ಳುವುದೇ ಹೊರತು ನರಿಯನ್ನಲ್ಲ’.

ಆಕ್ಷಿಪ್ತ ಇತ್ಥಮಮುನಾsಥ ಸ ಭೋಜರಾಜಸ್ತೂಣಾತ್ ಪ್ರಗೃಹ್ಯ ನಿಶಿತಂ ಶರಮಾಶು ತೇನ
ಛಿತ್ವಾ ಜರಾಸುತಧನುರ್ಬಲವನ್ನನಾದ ವಿವ್ಯಾಧ ಸಾಯಕಗಣೈಶ್ಚ ಪುನಸ್ತಮುಗ್ರೈಃ ೧೪.೨೭

ಈರೀತಿಯಾಗಿ ಜರಾಸಂಧನಿಂದ ನಿಂದಿಸಲ್ಪಟ್ಟ ಆ ಉಗ್ರಸೇನನು, ಬತ್ತಳಿಕೆಯಿಂದ ಚೂಪಾಗಿರುವ ಬಾಣವನ್ನು ವೇಗದಲ್ಲಿ ಹಿಡಿದುಕೊಂಡು, ಆ ಬಾಣದಿಂದ ಜರಾಸಂಧನ ಬಿಲ್ಲನ್ನು ಕತ್ತರಿಸಿ, ಬಲಿಷ್ಠವಾಗಿ ಘರ್ಜಿಸಿದನು. ಪುನಃ ಜರಾಸಂಧನನ್ನು ಉಗ್ರವಾಗಿರುವ ಬಾಣಗಳ ಸಮೂಹದಿಂದ ಹೊಡೆದನು ಕೂಡಾ.

ಅನ್ಯಚ್ಛರಾಸನವರಂ ಪ್ರತಿಗೃಹ್ಯ ಕೋಪಸಂರಕ್ತನೇತ್ರಮಭಿಯಾನ್ತಮುದೀಕ್ಷ್ಯಕೃಷ್ಣಃ
ಭೋಜಾಧಿರಾಜವಧಕಾಙ್ಕ್ಷಿಣಮುಗ್ರವೇಗಂ ಬಾರ್ಹದ್ರಥಂ ಪ್ರತಿಯಯೌ ಪರಮೋ ರಥೇನ ೧೪.೨೮

ಶ್ರೀಕೃಷ್ಣನು ಕೋಪದಿಂದ, ಇನ್ನೊಂದು ಬಿಲ್ಲನ್ನು ಹಿಡಿದು, ಕೆಂಪಾದ ಕಣ್ಗಳುಳ್ಳ, ಭೋಜರಿಗೆ ರಾಜನಾಗಿರುವ, ಉಗ್ರಸೇನನನ್ನು ಕೊಲ್ಲುವುದರಲ್ಲಿ ಬಯಕೆಯುಳ್ಳ, ಉಗ್ರವಾದ ವೇಗವುಳ್ಳ ಜರಾಸಂಧನನ್ನು ತನ್ನ ರಥದಿಂದ ಎದುರುಗೊಂಡನು.

ಆಯಾನ್ತಮೀಕ್ಷ್ಯ ಭಗವನ್ತಮನನ್ತವೀರ್ಯಂ ಚೇದೀಶಪೌಣ್ಡ್ರಮುಖರಾಜಗಣೈಃ ಸಮೇತಃ
ನಾನಾವಿಧಾಸ್ತ್ರವರಶಸ್ತ್ರಗಣೈರ್ವವರ್ಷ ಮೇರುಂ ಯಥಾ ಘನ ಉದೀರ್ಣ್ಣರವೋ ಜಲೌಘೈಃ ೧೪.೨೯

ಬರುತ್ತಿರುವ ಎಣೆಯಿರದ ವೀರ್ಯವುಳ್ಳ ಪರಮಾತ್ಮನನ್ನು ಕಂಡ ಶಿಶುಪಾಲ, ಪೌಣ್ಡ್ರಕ ವಾಸುದೇವ, ಇವರೇ ಮೊದಲಾ ರಾಜರ ಗಣದಿಂದ ಕೂಡಿಕೊಂಡ ಜರಾಸಂಧ, ನಾನಾ ವಿಧವಾದ ಅಸ್ತ್ರ-ಶಸ್ತ್ರಗಳಿಂದ ಪರಮಾತ್ಮನನ್ನು ಪೀಡಿಸತೊಡಗಿದ. ನೀರಿನ ಸಮೂಹಗಳಿಂದ  ಗಟ್ಟಿಯಾಗಿ ಸದ್ದುಮಾಡುವ ಮೋಡವು ಮೇರುವಿನ ಮೇಲೆ ಹೇಗೆ ನೀರಿನ ಮಳೆಗರೆಯುತ್ತದೋ ಮತ್ತು ಅದರಿಂದ ಮೇರುವಿಗೆ ಯಾವ ತೊಂದರೆಯೂ ಆಗುವುದಿಲ್ಲವೋ,  ಹಾಗೇ, ಅವರೆಲ್ಲರ ಬಾಣಗಳಿಂದ ಭಗವಂತನಿಗೆ ಏನೂ ಆಗಲಿಲ್ಲ.  

ಶಸ್ತ್ರಾಸ್ತ್ರವೃಷ್ಟಿಮಭಿತೋ ಭಗವಾನ್ ವಿವೃಶ್ಚ್ಯ ಶಾರ್ಙ್ಗೋತ್ಥಸಾಯಕಗಣೈರ್ವಿರಥಾಶ್ವಸೂತಮ್
ಚಕ್ರೇ ನಿರಾಯುಧಮಸೌ ಮಗಧೇನ್ದ್ರಮಾಶು ಚ್ಛಿನ್ನಾತಪತ್ರವರಕೇತುಮಚಿನ್ತ್ಯಶಕ್ತಿಃ ೧೪.೩೦

ಪರಮಾತ್ಮನು ತನ್ನ ಸುತ್ತಲೂ ಇರುವ ಬಾಣ, ಗದೆ ಮೊದಲಾದವುಗಳ ಮಳೆಯನ್ನು ತನ್ನ ಶಾರ್ಙ್ಗದಿಂದ ಬಿಡಲ್ಪಟ್ಟ ಬಾಣಗಳ ಸಮೂಹದಿಂದ ಕತ್ತರಿಸಿ,  ಜರಾಸಂಧನನ್ನು ರಥ-ಕುದುರೆ-ಸೂತನನ್ನು ಕಳೆದುಕೊಂಡವನನ್ನಾಗಿ ಮಾಡಿ,  ರಾಜತ್ವದ ಸಂಕೇತವಾದ ಕೊಡೆ ಹಾಗೂ ಧ್ವಜವನ್ನೂ ಕೂಡಾ ಕತ್ತರಿಸಿ, ನಿರಾಯುಧನನ್ನಾಗಿ ಮಾಡಿದನು

No comments:

Post a Comment