ಜಿತ್ವಾ ತಮೂರ್ಜ್ಜಿತಬಲಂ ಭಗವಾನಜೇಶಶಕ್ರಾದಿಭಿಃ ಕುಸುಮವರ್ಷಿಭಿರೀಡ್ಯಮಾನಃ ।
ರಾಮಾದಿಭಿಃ ಸಹಿತ ಆಶು
ಪುರೀಂ ಪ್ರವಿಶ್ಯ ರೇಮೇsಭಿವನ್ದಿತಪದೋ ಮಹತಾಂ ಸಮೂಹೈಃ ॥೧೪.೪೩॥
ಪುಷ್ಪವೃಷ್ಟಿ ಮಾಡತಕ್ಕಂತಹ ಬ್ರಹ್ಮ-ರುದ್ರ-ಇಂದ್ರ
ಮೊದಲಾದವರಿಂದ ಸ್ತುತ್ಯನಾದ ಭಗವಂತನು, ಉತ್ಕೃಷ್ಟವಾದ ಬಲವುಳ್ಳ ಜರಾಸಂಧನನ್ನು ಸೋಲಿಸಿ, ಬಲರಾಮ, ಸಾತ್ಯಕಿ, ಮೊದಲಾದವರಿಂದ
ಕೂಡಿಕೊಂಡು ಶೀಘ್ರದಲ್ಲಿಯೇ ಮಧುರಾ ಪಟ್ಟಣವನ್ನು ಪ್ರವೇಶಮಾಡಿ, ಅಲ್ಲಿರುವ ಶ್ರೇಷ್ಠರೆಲ್ಲರಿಂದ ನಮಸ್ಕೃತನಾಗಿ ಕ್ರೀಡಿಸಿದನು.
[ಯಾದವರು ಹಾಗು ಜರಾಸಂಧನ ನಡುವೆ ನಡೆದ ಈ ಮೊತ್ತಮೊದಲ ಯುದ್ಧಕಾಲದಲ್ಲಿ
ಪಾಂಡವರು ಎಲ್ಲಿ ಏನು ಮಾಡುತ್ತಿದ್ದರು ಎನ್ನುವ ವಿವರವನ್ನು ಮುಂದೆ ಕಾಣುತ್ತೇವೆ:]
ವರ್ದ್ಧತ್ಸು ಪಾಣ್ಡುತನಯೇಷು ಚತುರ್ದ್ದಶಂ ತು ಜನ್ಮರ್ಕ್ಷಮಾಸ ತನಯಸ್ಯ ಸಹಸ್ರದೃಷ್ಟೇಃ ।
ಪ್ರತ್ಯಾಬ್ದಿಕಂ
ಮುನಿಗಣಾನ್ ಪರಿವೇಷಯನ್ತೀ ಕುನ್ತೀ ತದಾssಸ ಬಹುಕಾರ್ಯ್ಯಪರಾ ನಯಜ್ಞಾ॥೧೪.೪೪॥
ಪಾಂಡುಪುತ್ರರು ಬೆಳೆಯುತ್ತಿರಲು, ಸಾವಿರ ಕಣ್ಗಳವನ(ಇಂದ್ರನ) ಪುತ್ರನಿಗೆ
ಅರ್ಜುನನಿಗೆ ಹದಿನಾಲ್ಕನೆಯ ಜನ್ಮನಕ್ಷತ್ರವಾಯಿತು. ಪ್ರತೀ ವರ್ಷವೂ ಕೂಡಾ ಮುನಿ ಸಮೂಹಕ್ಕೆ ಪರಿವೇಷಣ
ಮಾಡುತ್ತಾ ಬಂದಿರುವ ಕುಂತಿಯು, ಈ ಸಂದರ್ಭದಲ್ಲೂ
ಕೂಡಾ ಬಹಳ ಕೆಲಸದಲ್ಲಿ ನಿರತಳಾಗಿದ್ದಳು.
ತತ್ಕಾಲ ಏವ ನೃಪತಿಃ ಸಹ
ಮಾದ್ರವತ್ಯಾ ಪುಂಸ್ಕೋಕಿಲಾಕುಲಿತಪುಲ್ಲವನಂ ದದರ್ಶ।
ತಸ್ಮಿನ್ ವಸನ್ತಪವನಸ್ಪರ್ಶೇಧಿತಃ ಸ ಕನ್ದರ್ಪ್ಪಮಾರ್ಗ್ಗಣವಶಂ ಸಹಸಾ ಜಗಾಮ ॥೧೪.೪೫॥
ಇದೇ ಕಾಲದಲ್ಲಿ ಅತ್ತ ಪಾಂಡುರಾಜನು ಮಾದ್ರವತಿಯಿಂದ
ಕೂಡಿಕೊಂಡು, ಗಂಡು ಕೋಗಿಲೆಗಳ ನಾದದಿಂದ ಕೂಡಿರುವ, ಚನ್ನಾಗಿ ವಿಕಸಿತವಾದ ಕಾಡನ್ನು ಕಂಡ. ಆ
ಕಾಡಿನಲ್ಲಿ ವಸಂತಕಾಲದ ತಂಗಾಳಿಯ ಮುಟ್ಟುವಿಕೆಯಿಂದ ಕಾಮೋದ್ರಿಕ್ತನಾದ ಆತ, ಶೀಘ್ರದಲ್ಲೇ ಕಾಮನ ಬಾಣದ ವಶನಾಗಿ ಹೋದ.
ಜಗ್ರಾಹ ತಾಮಥ ತಯಾ ರಮಮಾಣ ಏವ ಯಾತೋ
ಯಮಸ್ಯ ಸದನಂ ಹರಿಪಾದಸಙ್ಗೀ ।
ಪೂರ್ವಂ ಶಚೀರಮಣಮಿಚ್ಛತ ಏಷ ವಿಘ್ನಂ ಶಕ್ರಸ್ಯ
ತದ್ದರ್ಶನೋಪಗತೋ ಹಿ ಚಕ್ರೇ ॥೧೪.೪೬॥
ತೇನೈವ ಮಾನುಷಮವಾಪ್ಯ
ರತಿಸ್ಥ ಏವ ಪಞ್ಚತ್ವಮಾಪ ರತಿವಿಘ್ನಮಪುತ್ರತಾಂ ಚ ।
ಸ್ವಾತ್ಮೋತ್ತಮೇಷ್ವಥ
ಸುರೇಷು ವಿಶೇಷತಶ್ಚ ಸ್ವಲ್ಪೋsಪಿ ದೋಷ ಉರುತಾಮಭಿಯಾತಿ ಯಸ್ಮಾತ್ ॥೧೪.೪೭॥
ಪರಮಾತ್ಮನ ಪಾದದಲ್ಲೇ ಆಸಕ್ತಿಯುಳ್ಳ ಪಾಂಡುವು, ಕ್ರೀಡಿಸುವುದಕ್ಕೋಸ್ಕರ ಮಾದ್ರಿಯನ್ನು ಸ್ವೀಕರಿಸಿ, ಅವಳೊಂದಿಗೆ ಆನಂದಪಡುತ್ತಲೇ ಯಮನ ವಶನಾದ(ಸತ್ತ). ಪಾಂಡುವಿಗೆ ಏಕೆ
ಹೀಗಾಯಿತು ಎಂದರೆ: (ಋಷಿ ಶಾಪಕ್ಕಿಂತಲೂ ಪ್ರಬಲವಾದ ಇನ್ನೊಂದು ಕಾರಣವನ್ನು ಇಲ್ಲಿ
ವಿವರಿಸಿದ್ದಾರೆ: ) ಹಿಂದೆ(ಮೂಲ ರೂಪದಲ್ಲಿ ) ಇಂದ್ರನನ್ನು ಕಾಣಲೆಂದು ತೆರಳಿದ್ದಾಗ, ಶಚಿದೇವಿಯೊಂದಿಗೆ ಕ್ರೀಡಿಸಲೆಂದು ಬಯಸಿಕೊಂಡಿದ್ದ
ಇಂದ್ರನಿಗೆ, ಅವನ ಕಣ್ಣಿಗೆ ಕಾಣುವ ಮೂಲಕ ರತಿಬಂಧನವನ್ನುಂಟುಮಾಡಿದ್ದ.
ಆರೀತಿ ವಿಘ್ನಮಾಡಿದ್ದರಿಂದಲೇ ಆತ ಮನುಷ್ಯಜನ್ಮವನ್ನು ಹೊಂದಿ,
ತಾನು ಮೆಚ್ಚಿದ ಹೆಣ್ಣಿನೊಡನೆ ರತಿಯಲ್ಲಿರುವಾಗಲೇ ಪಞ್ಚತ್ವವನ್ನು(ಸಾವನ್ನು) ಹೊಂದಿದ.
ಹೀಗೆ ಪಾಂಡು ತನ್ನ ರತಿಗೆ ವಿಘ್ನವನ್ನೂ, ಮಕ್ಕಳಿಲ್ಲದಿರುವಿಕೆಯನ್ನೂ ಹೊಂದುವಂತಾಯಿತು.
ವಿಶೇಷವಾಗಿ
ದೇವತೆಗಳಲ್ಲಿ ಸ್ವಲ್ಪದೋಷವೂ ಕೂಡಾ ಬಹಳದೊಡ್ಡ ಫಲವನ್ನು ಕೊಡುತ್ತದೆ. ಅದರಲ್ಲೂ ತನಗಿಂತ
ಉತ್ತಮರಾಗಿರುವ ದೇವತೆಗಳ ವಿಷಯದಲ್ಲಿ ಅಲ್ಪದೋಷವೂ ಕೂಡಾ ಮಹತ್ವವನ್ನು ಹೊಂದುತ್ತದೆ.
No comments:
Post a Comment