ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Saturday, November 30, 2019

Mahabharata Tatparya Nirnaya Kannada 1448_1454


ಮಾದ್ರೀ ಪತಿಂ ಮೃತಮವೇಕ್ಷ್ಯ ರುರಾವ ದೂರಾತ್
ತಚ್ಛುಶ್ರುವುಶ್ಚ ಪೃಥಯಾ ಸಹ ಪಾಣ್ಡುಪುತ್ರಾಃ
ತೇಷ್ವಾಗತೇಷು ವಚನಾದಪಿ ಮಾದ್ರವತ್ಯಾಃ
ಪುತ್ರಾನ್ ನಿವಾರ್ಯ ತು ಪೃಥಾ ಸ್ವಯಮತ್ರ ಚಾsಗಾತ್ ೧೪.೪೮

ಮಾದ್ರಿಯು ಸತ್ತ ತನ್ನ ಗಂಡನನ್ನು ಕಂಡು ಅಳುತ್ತಿರಲು, ಕುಂತಿಯಿಂದ ಕೂಡಿಕೊಂಡ ಪಾಂಡವರಿಗೂ  ಅವಳ ರೋದನ ಕೇಳಿಸಿತು. ಅವರೆಲ್ಲರೂ ಆಕೆಯತ್ತ ಬರುತ್ತಿರಲು, ಮಾದ್ರಿಯ ಮಾತಿನಂತೆ(ಪುತ್ರರೊಂದಿಗೆ ಬರಬೇಡ, ನೀನು ಮಾತ್ರ ಬಾ ಎನ್ನುವ ಮಾದ್ರಿಯ ಮಾತಿನಂತೆ)  ಮಕ್ಕಳನ್ನು ದೂರದಲ್ಲೇ ಬಿಟ್ಟು, ಕುಂತಿಯು ತಾನೇ ಮಾದ್ರಿಯ ಸಮೀಪಕ್ಕೆ ಬಂದಳು.

ಪತ್ಯುಃ ಕಳೇಬರಮವೇಕ್ಷ್ಯ ನಿಶಮ್ಯ ಮಾದ್ರ್ಯಾ
ಕುನ್ತೀ ಭೃಶಂ ವ್ಯಥಿತಹೃತ್ಕಮಳೈವ ಮಾದ್ರೀಮ್
ಧಿಕ್ಕೃತ್ಯ ಚಾನುಮರಣಾಯ ಮತಿಂ ಚಕಾರ
ತಸ್ಯಾಃ ಸ್ವನೋ ರುದಿತಜಃ ಶ್ರುತ ಆಶು ಪಾರ್ಥೈಃ ೧೪.೪೯

ಗಂಡನ ಶವವನ್ನು ನೋಡಿದ ಕುಂತಿಯು, ಮಾದ್ರಿಯಿಂದ ಎಲ್ಲಾ ವೃತ್ತಾಂತವನ್ನು ಕೇಳಿ ತಿಳಿದು, ಅತ್ಯಂತ ನೋವಿನಿಂದ ಮಾದ್ರಿಯನ್ನು ಬೈದು, ಸಹಗಮನಕ್ಕೆಂದು ಬುದ್ಧಿಯನ್ನು ಮಾಡಿದಳು. ಅವಳ ಅಳುವಿನಿಂದ ಉಂಟಾದ ಧ್ವನಿಯು ಪಾಂಡವರಿಂದ ಕೇಳಲ್ಪಟ್ಟಿತು. 

ತೇಷ್ವಾಗತೇಷ್ವಧಿಕ ಆಸ ವಿರಾವ ಏತಂ ಸರ್ವೇsಪಿ ಶುಶ್ರುವು ಋಷಿಪ್ರವರಾ ಅಥಾತ್ರ
ಆಜಗ್ಮುರುತ್ತಮಕೃಪಾ ಋಷಿಲೋಕಮದ್ಧ್ಯೇ ಪತ್ನೀ ನೃಪಾನುಗಮನಾಯ ಚ ಪಸ್ಪೃಧಾತೇ ೧೪.೫೦

ಕುಂತಿಯ ಅಳುವನ್ನು ಕೇಳಿದ ಪಾಂಡವರೆಲ್ಲರೂ ಅಲ್ಲಿಗೆ ಬರುತ್ತಿರಲು, ಅಳುವಿನ ಶಬ್ದವು  ಅಧಿಕವಾಯಿತು. ಈ ಅಳುವಿನ ಧ್ವನಿಯನ್ನು ಕೇಳಿ ಅಲ್ಲಿದ್ದ ಉತ್ಕೃಷ್ಟವಾದ ಕೃಪೆಯುಳ್ಳ ಋಷಿಗಳೂ ಕೂಡಾ  ಅಲ್ಲಿಗೆ ಬಂದು ಸೇರಿದರು. ಋಷಿಗಳೆಲ್ಲರು ಸೇರುತ್ತಿದ್ದಂತೆ, ಆ ಇಬ್ಬರು ಪತ್ನಿಯರು ಸಹಗಮನಕ್ಕಾಗಿ ಸ್ಪರ್ಧೆಮಾಡತೊಡಗಿದರು. 

ತೇ ಸನ್ನಿವಾರ್ಯ್ಯ ತು ಪೃಥಾಮಥ ಮಾದ್ರವತ್ಯಾ ಭರ್ತ್ತುಃ ಸಹಾನುಗಮನಂ ಬಹು ಚಾರ್ತ್ಥಯನ್ತ್ಯಾಃ
ಸಂವಾದಮೇವ ನಿಜದೋಷಮವೇಕ್ಷ್ಯ ತಸ್ಯಾಶ್ಚಕ್ರುಃ ಸದಾsವಗತಭಾಗವತೋಚ್ಚಧರ್ಮ್ಮಾಃ ೧೪.೫೧

ಆಗ ಅಲ್ಲಿ ಸೇರಿದ್ದ ಋಷಿಶ್ರೇಷ್ಠರು, ಗಂಡನ ಜೊತೆಗೆ ಬೇರೆಲೋಕಕ್ಕೆ ಹೋಗಬೇಕು ಎಂದು ಬಯಸುತ್ತಿರುವ ಕುಂತಿಯನ್ನು ತಡೆದರು. ತನ್ನ ದೋಷ ಏನು ಎಂದು ತಿಳಿದೇ ಭರ್ತೃಗಳ ಜೊತೆಗೆ ಸಹಯೋಗವನ್ನು ಬಹಳವಾಗಿ ಬೇಡಿಕೊಳ್ಳುತ್ತಿರುವ ಮಾದ್ರಿಗೆ ಭಾಗವತ ಧರ್ಮವನ್ನು ಚೆನ್ನಾಗಿ ಬಲ್ಲ ಆ ಋಷಿಗಳು ತಮ್ಮ ಒಪ್ಪಿಗೆಯನ್ನು ನೀಡಿದರು.

ಭರ್ತ್ತುರ್ಗ್ಗುಣೈರನಧಿಕೌ ತನಯಾರ್ತ್ಥಮೇವ ಮಾದ್ರ್ಯಾssಕೃತೌ ಸುರವರಾವಧಿಕೌ ಸ್ವತೋsಪಿ
ತೇನೈವ ಭರ್ತ್ತೃಮೃತಿಹೇತುರಭೂತ್ ಸಮಸ್ತ ಲೋಕೈಶ್ಚ ನಾತಿಮಹಿತಾ ಸುಗುಣಾsಪಿ ಮಾದ್ರೀ೧೪.೫೨

ಹಿಂದೆ ಮಾದ್ರಿಯಿಂದ, ತನಗಿಂತ ಅಧಿಕರಾದರೂ ಕೂಡಾ, ಗಂಡನ ಯೋಗ್ಯತೆಗಿಂತ ಅಧಿಕರಲ್ಲದ ಅಶ್ವೀದೇವತೆಗಳು ಸಂತತಿಗಾಗಿ ಕರೆಯಲ್ಪಟ್ಟರು. (ತನಗಿಂತ ಉತ್ತಮರಾಗಿದ್ದರೂ ಕೂಡಾ ಪಾಂಡುವಿಗಿಂತ ಯೋಗ್ಯತೆಯಲ್ಲಿ ಹೆಚ್ಚಿನವರಲ್ಲದ ಅಶ್ವೀದೇವತೆಗಳನ್ನು ಆಕೆ ತನಗೆ ಇಬ್ಬರು ಪುತ್ರರು ಬೇಕು ಎನ್ನುವ ವ್ಯಾಮೋಹದಿಂದ ಕರೆದಿದ್ದಳು). ಆ ಕಾರಣದಿಂದಲೇ ಆಕೆ ಇಂದು ತನ್ನ ಗಂಡನ ಸಾವಿಗೆ ತಾನೇ ಕಾರಣಳಾದಳು.  ಅಷ್ಟೇ ಅಲ್ಲಾ, ಒಳ್ಳೆಯ ಗುಣವುಳ್ಳವಳಾದರೂ ಕೂಡಾ ಆಕೆ ಸಮಸ್ತ ಜನರಿಂದ ಪೂಜಿತಳಾಗಲಿಲ್ಲ.

ಪಾಣ್ಡೋಃ ಸುತಾ ಮುನಿಗಣೈಃ ಪಿತೃಮೇಧಮತ್ರ ಚಕ್ರುರ್ಯ್ಯಾಥಾವದಥ ತೇನ ಸಹೈವ ಮಾದ್ರೀ
ಹುತ್ವಾSSತ್ಮದೇಹಮುರು ಪಾಪಮದಃ ಕೃತಂ ಚ  ಸಮ್ಮಾರ್ಜ್ಯ ಲೋಕಮಗಮನ್ನಿಜಭರ್ತ್ತುರೇವ೧೪.೫೩

ತದನಂತರ ಪಾಂಡುರಾಜನ ಮಕ್ಕಳು ತಾಯಿ ಕುಂತಿಯೊಂದಿಗೆ ಕೂಡಿಕೊಂಡು, ಮುನಿಗಣದ ಸಹಕಾರದೊಂದಿಗೆ, ಶಾಸ್ತ್ರದಲ್ಲಿ ಹೇಳಿದಂತೆ, ಪಾಂಡುವಿನ ಮೃತಶರೀರಕ್ಕೆ ಸಂಸ್ಕಾರಗಳನ್ನು ಮಾಡಿದರು. ಪಾಂಡುವಿನ ಜೊತೆಗೇ ಮಾದ್ರಿಯೂ ಕೂಡಾ ತನ್ನ ದೇಹವನ್ನು ಅರ್ಪಿಸಿ, ಇಲ್ಲಿ ಮಾಡಿದ ತನ್ನೆಲ್ಲಾ  ಪಾಪಗಳನ್ನು ತೊಳೆದುಕೊಂಡು ತನ್ನ ಗಂಡನ ಲೋಕವನ್ನೇ ಸೇರಿದಳು.

ಪಾಣ್ಡುಶ್ಚ ಪುತ್ರಕಗುಣೈಃ ಸ್ವಗುಣೈಶ್ಚ ಸಾಕ್ಷಾತ್ ಕೃಷ್ಣಾತ್ಮಜಃ ಸತತಮಸ್ಯ ಪದೈಕಭಕ್ತಃ
ಲೋಕಾನವಾಪ ವಿಮಲಾನ್ ಮಹಿತಾನ್ ಮಹದ್ಭಿಃ ಕಿಂ ಚಿತ್ರಮತ್ರ ಹರಿಪಾದವಿನಮ್ರ ಚಿತ್ತೇ ೧೪.೫೪

ನೇರವಾಗಿ ವೇದವ್ಯಾಸರ ಮಗನಾದವನಾಗಿ, ನಿರಂತರ ವೇದವ್ಯಾಸರ ಪದೈಕ ಭಕ್ತನಾಗಿರುವ ಪಾಂಡುವು, ತನ್ನ ಮಕ್ಕಳ ಗುಣದಿಂದಲೂ, ತನ್ನ ಗುಣದಿಂದಲೂ, ಸಜ್ಜನರಿಂದ ಪೂಜಿತವಾದ ನೀರ್ಮಲವಾದ ಲೋಕಗಳನ್ನು ಹೊಂದಿದನು. ಪರಮಾತ್ಮನ ಪಾದದಲ್ಲಿ ನಮ್ರವಾದ ಮನಸ್ಸುಳ್ಳ ಪಾಂಡುವು ಈರೀತಿ ಮೇಲಿನ ಲೋಕಗಳನ್ನು ಪಡೆದ ಎನ್ನುವುದರಲ್ಲೇನಾಶ್ಚರ್ಯ? (ಯಾವ ಆಶ್ಚರ್ಯವೂ ಇಲ್ಲಾ).

No comments:

Post a Comment