ಶ್ರೀಮಹಾಭಾರತತಾತ್ಪರ್ಯನಿರ್ಣಯ

ಆಚಾರ್ಯ ಮಧ್ವರು ಮಹಾಭಾರತವನ್ನು ಮುಂದಿಟ್ಟುಕೊಂಡು ಸಮಗ್ರ ಇತಿಹಾಸ ಪುರಾಣ ವಾಙ್ಮಯದ ನಿರ್ಣಯಕ್ಕಾಗಿ ರಚಿಸಿದ ಅಪೂರ್ವ ಗ್ರಂಥ 'ಶ್ರೀಮಹಾಭಾರತತಾತ್ಪರ್ಯನಿರ್ಣಯ'.
ಇದು ಮೇಲುನೋಟಕ್ಕೆ ರಾಮಾಯಣದ ಕಥೆ, ಮಹಾಭಾರತದ ಕಥೆ, ಜತೆಗೆ ಕೃಷ್ಣಾವತಾರದ ಕಥೆ. ಆಳಕ್ಕೆ ಹೋದರೆ ಸಮಸ್ತ ಇತಿಹಾಸ ಪುರಾಣಗಳ ನಿರ್ಣಯ. ಇಂಥಹ ಅಪೂರ್ವ ಗ್ರಂಥದ ಭಾವಾನುವಾದವನ್ನು ಓದುಗರ ಮುಂದಿಡುವ ಒಂದು ಪ್ರಯತ್ನ. ಶ್ರೀಯುತ ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ಆಪ್ತ ಶಿಷ್ಯರಲ್ಲಿ ಒಬ್ಬರಾದ ವಿದ್ವಾನ್ ವಿಜಯಸಿಂಹ ಆಚಾರ್ಯರ ಪಾಠವನ್ನಾಧರಿಸಿ ಬರೆದುಕೊಂಡಿರುವುದು:

Tuesday, November 5, 2019

Mahabharata Tatparya Nirnaya Kannada 1437_1442


ಶ್ರುತ್ವಾsಥ ಶಙ್ಖರವಮಮ್ಬುಜಲೋಚನಸ್ಯ ವಿದ್ರಾವಿತಾನಪಿ ನೃಪಾನಭಿವೀಕ್ಷ್ಯ ರಾಮಃ
ಯುದ್ಧ್ಯನ್ತಮೀಕ್ಷ್ಯ ಚ ರಿಪುಂ ವವೃಧೇ ಬಲೇನ ತ್ಯಕ್ತ್ವಾ ರಿಪುಂ ಮುಸಲಮಾದದ ಆಶ್ವಮೋಘಮ್೧೪.೩೭

ತದನಂತರ, ತಾವರೆ ಕಣ್ಣಿನ ಪರಮಾತ್ಮನ ಶಂಖನಾದವನ್ನು ಕೇಳಿದ ಬಲರಾಮ, ಓಡುತ್ತಿರುವ ಎಲ್ಲಾ ರಾಜರುಗಳನ್ನು ಕಂಡು, ತನ್ನೊಂದಿಗೆ ಯುದ್ಧ ಮಾಡುತ್ತಿರುವ ಶತ್ರುವನ್ನು ಕಂಡು ಉತ್ಸಾಹಿತನಾಗಿ ಬಲದಿಂದ ಬೆಳೆದು ನಿಂತ. ತಕ್ಷಣ ಶತ್ರುವನ್ನು ತಿರಸ್ಕರಿಸಿ, ಎಂದೂ ವ್ಯರ್ಥವಾಗದ ತನ್ನ ಮುಸಲಾಯುಧವನ್ನು ಬಲರಾಮ ಕೈಗೆತ್ತಿಗೊಂಡ.

ತೇನಾsಹತಃ ಶಿರಸಿ ಸಮ್ಮುಮುಹೇsತಿವೇಲಂ ಬಾರ್ಹದ್ರಥೋ ಜಗೃಹ ಏನಮಥೋ ಹಲೀ ಸಃ
ತತ್ರೈಕಲವ್ಯ ಉತ ಕೃಷ್ಣಶರೈಃ ಫಲಾಯನ್ನಸ್ತ್ರಾಣಿ ರಾಮಶಿರಸಿ ಪ್ರಮುಮೋಚ ಶೀಘ್ರಮ್ ೧೪.೩೮

ಆ ಒನಕೆಯಿಂದ ತಲೆಯಲ್ಲಿ ಹೊಡೆಯಲ್ಪಟ್ಟ ಜರಾಸಂಧನು ಬಹಳ ವೇಗವಾಗಿ ಮೂರ್ಛೆಗೊಂಡನು. ಹೀಗೆ ಮೂರ್ಛೆಹೊಂದಿದ ಜರಾಸಂಧನನ್ನು ಬಲರಾಮ ಹಿಡಿದುಕೊಂಡನು. ಆಗ ಕೃಷ್ಣನ ಬಾಣಗಳಿಂದ ನೊಂದು ಓಡುತ್ತಿದ್ದ ಏಕಲವ್ಯನು ಜರಾಸಂಧನನ್ನು ಹಿಡಿದಿರುವ ಬಲರಾಮನನ್ನು ನೋಡಿ, ರಾಮನ ತಲೆಯಮೇಲೆ ವೇಗವಾಗಿ ಅಸ್ತ್ರಗಳನ್ನು ಪ್ರಯೋಗಿಸಿದನು.

ಭೀತೇನ ತೇನ ಸಮರಂ ಭಗವಾನನಿಚ್ಛನ್ ಪ್ರದ್ಯುಮ್ನಮಾಶ್ವಸೃಜದಾತ್ಮಸುತಂ ಮನೋಜಮ್
ಪ್ರದ್ಯುಮ್ನ ಏನಮಭಿಯಾಯ ಮಹಾಸ್ತ್ರಜಾಲೈ ರಾಮಾಸ್ತು ಮಾಗಧಮಥಾsತ್ಮರತಂ ನಿನಾಯ ೧೪.೩೯

ಈಗಾಗಲೇ ಭಯಗೊಂಡಿರುವ ಏಕಲವ್ಯನೊಂದಿಗೆ ಯುದ್ಧವನ್ನು ಬಯಸದ ಶ್ರೀಕೃಷ್ಣನು, ಕೂಡಲೇ ತನ್ನ ಮಗನಾದ ಪ್ರದ್ಯುಮ್ನನನ್ನು ಮನಸ್ಸಿನಿಂದಲೇ ಸೃಷ್ಟಿಮಾಡಿದ. ಹೀಗೆ ಸೃಷ್ಟಿಗೊಂಡ ಪ್ರದ್ಯುಮ್ನನು ಏಕಲವ್ಯನನ್ನು  ಮಹತ್ತರವಾದ ಅಸ್ತ್ರಗಳ ಸಮೂಹಗಳೊಂದಿಗೆ ಎದುರುಗೊಂಡ. ಇತ್ತ ಬಲರಾಮನು ಜರಾಸಂಧನನ್ನು ತನ್ನ ರಥದೆಡೆಗೆ ದರದರನೆ ಎಳೆದುಕೊಂಡು ಹೋದ.

ಯುಧ್ವಾ ಚಿರಂ ರಣಮುಖೇ ಭಗವತ್ಸುತೋsಸೌ ಚಕ್ರೇ ನಿರಾಯುಧಮಮುಂ ಸ್ಥಿರಮೇಕಲವ್ಯಮ್
ಅಂಶೇನ ಯೋ ಭುವಮಗಾನ್ಮಣಿಮಾನಿತಿ ಸ್ಮ ಸ ಕ್ರೋಧತನ್ತ್ರಗಣೇಷ್ವಧಿಪೋ ನಿಷಾದಃ ೧೪.೪೦

ಯುದ್ಧದಲ್ಲಿ ಪರಮಾತ್ಮನ ಮಗನಾದ ಪ್ರದ್ಯುಮ್ನನು ಬಹಳಕಾಲದ ತನಕ ಯುದ್ಧಮಾಡಿ, ಗಟ್ಟಿಯಾಗಿ ನಿಂತು ಯುದ್ಧಮಾಡುತ್ತಿದ್ದ ಏಕಲವ್ಯನನ್ನು  ಆಯುಧಹೀನನನ್ನಾಗಿ ಮಾಡಿದನು.
ಮೂಲತಃ ಏಕಲವ್ಯ ಯಾರು ಎನ್ನುವುದನ್ನು ಇಲ್ಲಿ ವಿವರಿಸಿದ್ದಾರೆ: ಯಾರು ಕ್ರೋಧವಶರೆಂಬ ರಾಕ್ಷಸರ ಒಡೆಯನಾಗಿದ್ದ ಮಣಿಮಂತನೋ, ಅವನೇ ಒಂದು ಅಂಶದಿಂದ ಬೇಡನಾಗಿ ಭೂಮಿಯಲ್ಲಿ ಏಕಲವ್ಯನೆಂಬ ಹೆಸರಿನಿಂದ ಹುಟ್ಟಿದ್ದನು.

ಪ್ರದ್ಯುಮ್ನಮಾತ್ಮನಿ ನಿಧಾಯ ಪುನಃ ಸ ಕೃಷ್ಣಃ ಸಂಹೃತ್ಯ ಮಾಗಧಬಲಂ ನಿಖಿಲಂ ಶರೌಘೈಃ
ಭೂಯಶ್ಚಮೂಮಭಿವಿನೇತುಮುದಾರಕರ್ಮ್ಮಾ ಬಾರ್ಹದ್ರಥಂ ತ್ವಮುಚದಕ್ಷಯಪೌರುಷೋsಜಃ೧೪.೪೧

ಎಂದೂ ಹುಟ್ಟದ ಉತ್ಕೃಷ್ಟಕ್ರಿಯೆಯುಳ್ಳ ಪರಮಾತ್ಮನು ಪ್ರದ್ಯುಮ್ನನನ್ನು ಮರಳಿ ತನ್ನಲ್ಲಿ ಇಟ್ಟುಕೊಂಡು, ಜರಾಸಂಧನ ಸಮಸ್ತ ಸೈನ್ಯವನ್ನು ತನ್ನ ಬಾಣಗಳ ಸಮೂಹದಿಂದ ನಾಶಮಾಡಿದ. ಬೃಹದೃತನ ಮಗನಾದ ಜರಾಸಂಧ ಮತ್ತೊಮ್ಮೆ ಸೇನೆಯನ್ನು ಕಟ್ಟಿಕೊಂಡು ಬರಲಿ ಎಂದು ಶ್ರೀಕೃಷ್ಣ ಆತನನ್ನು ಬಿಟ್ಟನಷ್ಟೇ.
[ಇದು ಭಗವಂತನ ಭೂಭಾರ ಹರಣದ ಒಂದು ನಡೆ. ಜರಾಸಂಧನನ್ನು ಕೊಲ್ಲದೇ ಬಿಡುವುದರಿಂದ ಆತ ಮತ್ತೆ ಸೈನ್ಯವನ್ನು ಕಟ್ಟಿಕೊಂಡು ಬರಲು ಅವಕಾಶವಾಗುತ್ತದೆ. ಆತ ತರುವ ಸೈನ್ಯ ತಾಮಸ ಸೈನ್ಯವೇ ಆಗಿರುತ್ತದೆ. ಹೀಗೆ, ಜರಾಸಂಧ ಪುನಃ ಸೈನ್ಯದೊಂದಿಗೆ ಯುದ್ಧಕ್ಕೆ ಬರಲಿ ಎಂದೇ ಶ್ರೀಕೃಷ್ಣನು ಅವನನ್ನು ಈ ಯುದ್ಧದಲ್ಲಿ ಕೊಲ್ಲಲಿಲ್ಲ].

ವ್ರೀಳಾನತಾಚ್ಛವಿಮುಖಃ ಸಹಿತೋ ನೃಪೈಸ್ತೈರ್ಬಾರ್ಹದ್ರಥಃ ಪ್ರತಿಯಯೌ ಸ್ವಪುರೀಂ ಸ ಪಾಪಃ
ಆತ್ಮಾಭಿಷಿಕ್ತಮಪಿ ಭೋಜವರಾಧಿಪತ್ಯೇ ದೌಹಿತ್ರಮಗ್ರತ ಉತ ಪ್ರಣಿಧಾಯ ಮನ್ದಃ ೧೪.೪೨

ನಾಚಿಕೆಯಿಂದ ಬಗ್ಗಿ, ಕಳೆಗುಂದಿದ ಮೋರೆಯವನಾಗಿ, ಇತರ ಎಲ್ಲಾ ರಾಜರಿಂದ ಕೂಡಿದ ಪಾಪಿಷ್ಠನಾದ ಜರಾಸಂಧನು ತನ್ನ ಪಟ್ಟಣಕ್ಕೆ ಹಿಂತಿರುಗಿದ. ಹೀಗೆ ಹೋಗುವಾಗ, ಹಿಂದೆ ಮಧುರಾ ರಾಜ್ಯದಲ್ಲಿ ತನ್ನಿಂದ ಅಭಿಷಿಕ್ತನಾದ ಕಂಸನ ಮಗನನ್ನು ಮುಂದೆ ಇಟ್ಟುಕೊಂಡು ಹೋದ.
[ಹೇಗೆ ಶ್ರೀರಾಮ ಯುದ್ಧಕ್ಕೂ ಮೊದಲು ವಿಭೀಷಣನಿಗೆ ಅಭಿಷೇಕ ಮಾಡಿಸಿದ್ದನೋ ಹಾಗೇ  ಜರಾಸಂಧನೂ ಕೂಡಾ  ಯುದ್ಧಕ್ಕೂ ಮೊದಲೇ ಕಂಸನ ಮಗನಿಗೆ ಅಭಿಷೇಕ ಮಾಡಿಸಿ ಯುದ್ಧ ಮಾಡಲು ಬಂದಿದ್ದ. ಆದರೆ ಹೀನಾಯ ಸೋಲಿನೊಂದಿಗೆ ಈ ರೀತಿ ಹಿಂತಿರುಗಿದ].

No comments:

Post a Comment