ಪಾಣ್ಡೋಃ ಸುತಾಶ್ಚ ಪೃಥಯಾ
ಸಹಿತಾ ಮುನೀನ್ದ್ರೈರ್ನ್ನಾರಾಯಣಾಶ್ರಮತ ಆಶು ಪುರಂ
ಸ್ವಕೀಯಮ್ ।
ಜಗ್ಮುಸ್ತಥೈವ
ಧೃತರಾಷ್ಟ್ರಪುರೋ ಮುನೀನ್ದ್ರಾಃ ವೃತ್ತಂ
ಸಮಸ್ತಮವದನ್ನನುಜಂ ಮೃತಂ ಚ ॥೧೪.೫೫॥
ಪಾಂಡುರಾಜನ ಮಕ್ಕಳು ಕುಂತಿ ಹಾಗೂ ಮುನಿಗಳಿಂದಲೂ
ಕೂಡಿಕೊಂಡವರಾಗಿ, ಬದರೀನಾರಾಯಣ ಆಶ್ರಮದಿಂದ ತಮ್ಮ ಪಟ್ಟಣವಾದ ಹಸ್ತಿನವತಿಗೆ ಬಂದರು. ದೃತರಾಷ್ಟ್ರನ
ಮುಂದೆ ನಡೆದ ಎಲ್ಲಾ ಘಟನೆಗಳನ್ನು ವಿವರಿಸಿದ ಮುನಿಗಳು,
ನಿನ್ನ ತಮ್ಮ ಸತ್ತಿದ್ದಾನೆ ಎಂದೂ ಹೇಳಿದರು.
ತೂಷ್ಣೀಂ ಸ್ಥಿತೇ ತು
ನೃಪತೌ ತನುಜೇ ಚ ನದ್ಯಾಃ ಕ್ಷತ್ತರ್ಯ್ಯುತಾsಪ್ತ ಉರುಮೋದಮತೀವ ಪಾಪಾಃ ।
ಊಚುಃ ಸುಯೋಧನಮುಖಾಃ ಸಹ
ಸೌಬಲೇನ ಪಾಣ್ಡೋರ್ಮ್ಮೃತಿಃ ಕಿಲ ಪುರಾ ತನಯಾಃ ಕ್ವ
ತಸ್ಯ ॥೧೪.೫೬॥
ನ ಕ್ಷೇತ್ರಜಾ ಅಪಿ ಮೃತೇ
ಪಿತರಿ ಸ್ವಕೀಯೈಃ ಸಮ್ಯಙ್ ನಿಯೋಗಮನವಾಪ್ಯ ಭವಾಯ ಯೋಗ್ಯಾಃ ।
ತೇಷಾಮಿತೀರಿತವಚೋsನು ಜಗಾದ ವಾಯುರಾಭಾಷ್ಯ
ಕೌರವಗಣಾನ್ ಗಗನಸ್ಥ ಏವ ॥೧೪.೫೭॥
ಇದೆಲ್ಲವನ್ನೂ ಕೇಳಿಯೂ ದೃತರಾಷ್ಟ್ರನು ಸುಮ್ಮನೆ ನಿಂತಿರಲು,
ನದಿಯ ಮಗನಾದ(ಗಂಗಾಪುತ್ರ) ಭೀಷ್ಮನೂ ಸುಮ್ಮನಿರಲು, ವಿದುರನು ಅತ್ಯಂತ ಉತ್ಕೃಷ್ಟವಾದ
ಸಂತೋಷವನ್ನು ಹೊಂದುತ್ತಿರಲು, ಪಾಪಿಷ್ಠರಾಗಿರುವ ದುರ್ಯೋಧನಾದಿಗಳು ಶಕುನಿಯಿಂದ
ಕೂಡಿಕೊಂಡು ಮುನಿಗಳನ್ನು ಪ್ರಶ್ನಿಸಲಾರಂಭಿಸಿದರು:
‘ಮೊದಲೇ ಅಲ್ಲವೇ ಪಾಂಡುವಿನ ಮರಣವಾಗಿದ್ದು? ಅವನಿಗೆ ಮಕ್ಕಳು ಎಲ್ಲಿಂದ? ತಂದೆ ಸತ್ತಾದ ಮೇಲೆ ಕುಂತಿಯಲ್ಲಿ ಹುಟ್ಟಿದ್ದರೆ
ಅವರನ್ನು ನಾವು ಅವನ ವಾರಸುದಾರರು ಎಂದು ಒಪ್ಪುವುದಿಲ್ಲ. ಅಷ್ಟೇ ಅಲ್ಲಾ, ನಿಯೋಗಪದ್ಧತಿಗೆ ಸ್ವಕೀಯರೊಬ್ಬರು ಸಾಕ್ಷಿಯಾಗಿರಬೇಕು.(ನಮ್ಮ ಅಪ್ಪ ಸತ್ತಾಗ ನಮ್ಮ ದೊಡ್ಡತಾತ
ನಮ್ಮ ಅಜ್ಜಿಯಲ್ಲಿ ನಮ್ಮ ಅಪ್ಪನನ್ನು ಹುಟ್ಟಿಸಿದ. ಅಲ್ಲಿ ಸಾಕ್ಷಿಯಾಗಿ ನಮ್ಮವರೇ ನಮ್ಮ ಜನನಕ್ಕೆ
ಕಾರಣರಾಗಿದ್ದರು. ಆದರೆ ಇಲ್ಲಿ ಮುಖ್ಯಪ್ರಾಣ, ಯಮ, ಅರ್ಜುನ, ಇವರೆಲ್ಲಾ ಸ್ವಕೀಯರೇ? ಅವರು ನಮ್ಮ ಕುಲಕ್ಕೆ ಸೇರಿದವರಲ್ಲ. ಆದರೆ
ವೇದವ್ಯಾಸರು ನಮ್ಮ ಮುತ್ತಜ್ಜಿಯ ಮಗ (ಸತ್ಯವತಿ ಸೂನು). ಈ ಪರಿಸ್ಥಿತಿ ಇಲ್ಲಿಲ್ಲ). ತಮ್ಮವರಿಂದ
ನಿಯೋಗವನ್ನು ಚನ್ನಾಗಿ ಹೊಂದದೇ ಇರುವುದರಿಂದ
ಇವರು ಇಲ್ಲಿ ಇರಲು ಯೋಗ್ಯರಲ್ಲಾ’ ಎಂದು ದುರ್ಯೋಧನಾದಿಗಳು ಹೇಳುತ್ತಿರುವಾಗಲೇ, ಗಗನದಲ್ಲಿರುವ ಮುಖ್ಯಪ್ರಾಣನು ಕೌರವರನ್ನು ಕುರಿತು ಹೀಗೆ
ಹೇಳಿದ: (ಅಶರೀರವಾಣಿಯಾಯಿತು).
ಏತೇ ಹಿ ಧರ್ಮ್ಮಮರುದಿನ್ದ್ರಭಿಷಗ್ವರೇಭ್ಯೋ
ಜಾತಾಃ ಪ್ರಜೀವತಿ ಪಿತರ್ಯ್ಯುರುಧಾಮಸಾರಾಃ ।
ಶಕ್ಯಾಶ್ಚ ನೈವ ಭವತಾಂ ಕ್ವಚಿದಗ್ರಹಾಯ
ನಾರಾಯಣೇನ ಸತತಂ ಪರಿರಕ್ಷಿತಾ ಯತ್ ॥೧೪.೫೮॥
‘ಧರ್ಮರಾಜ, ಮುಖ್ಯಪ್ರಾಣ, ಇಂದ್ರ, ಅಶ್ವೀದೇವತೆಗಳು, ಇವರಿಂದ ತಂದೆ(ಪಾಂಡು)
ಬದುಕಿರುವಾಗಲೇ ಹುಟ್ಟಿರುವ, ಪರಮಾತ್ಮನನ್ನೇ ತಮ್ಮ ಎದೆಯೊಳಗೆ ಇಟ್ಟ (ಪರಮಾತ್ಮನನ್ನೇ ಸಾರಭೂತವಾದ
ಶಕ್ತಿಯಾಗಿ ಉಳ್ಳ), ನಾರಾಯಣನಿಂದ ನಿರಂತರವಾಗಿ ರಕ್ಷಿಸಲ್ಪಟ್ಟ ಇವರು ನಿಮ್ಮ ತೆಗೆದುಕೊಳ್ಳದಿರುವಿಕೆಗೆ
ಶಕ್ಯರಲ್ಲಾ’.
ವಾಯೋರದೃಶ್ಯವಚನಂ
ಪರಿಶಙ್ಕಮಾನೇಷ್ವಾವಿರ್ಬಭೂವ ಭಗವಾನ್ ಸ್ವಯಮಬ್ಜನಾಭಃ ।
ವ್ಯಾಸಸ್ವರೂಪ
ಉರುಸರ್ವಗುಣೈಕದೇಹ ಆದಾಯ ತಾನಗಮದಾಶು ಚ ಪಾಣ್ಡುಗೇಹಮ್ ॥೧೪.೫೯॥
ಮುಖ್ಯಪ್ರಾಣನ ಯಾರಿಗೂ ಕಾಣದ ಮಾತನ್ನು ದುರ್ಯೋಧನಾದಿಗಳು ಶಂಕಿಸುತ್ತಿರಲು,
ಷಡ್ಗುಣೈಶ್ವರ್ಯಸಂಪನ್ನನಾದ, ಪದ್ಮನಾಭನಾದ ಭಗವಂತನು
ವೇದವ್ಯಾಸಸ್ವರೂಪನಾಗಿ ಕೂಡಲೇ ಅಲ್ಲಿಗೆ ಬಂದ. ಉತ್ಕೃಷ್ಟವಾದ ಎಲ್ಲಾ ಗುಣಗಳೇ ಮೂರ್ತಿವತ್ತಾಗಿ ಬಂದ ಅವನು, ಪಾಂಡವರನ್ನು ಕರೆದುಕೊಂಡು ಪಾಂಡುವಿನ
ಮನೆಗೆ ತೆರಳಿದ.
ತತ್ಸ್ವೀಕೃತೇಷು ಸಕಲಾ ಅಪಿ
ಭೀಷ್ಮಮುಖ್ಯಾ ವೈಚಿತ್ರವೀರ್ಯ್ಯಸಹಿತಾಃ ಪರಿಪೂಜ್ಯ
ಸರ್ವಾನ್ ।
ಕುನ್ತ್ಯಾ ಸಹೈವ ಜಗೃಹುಃ
ಸುಭೃಶಂ ತದಾsರ್ತ್ತಾ ವೈಚಿತ್ರವೀರ್ಯ್ಯತನಯಾಃ ಸಹ ಸೌಬಲೇನ॥೧೪.೬೦ ॥
ವೇದವ್ಯಾಸರೇ ಬಂದು ಪಾಂಡವರನ್ನು ಸ್ವೀಕರಿಸಿದಮೇಲೆ, ದೃತರಾಷ್ಟ್ರನಿಂದ ಕೂಡಿರುವ ಭೀಷ್ಮಾದಿಗಳು ಎಲ್ಲರನ್ನೂ
ಕೂಡಾ ಗೌರವಿಸಿ, ಕುಂತಿಯ ಜೊತೆಗೇ ಮಕ್ಕಳನ್ನೂ
ಸ್ವೀಕರಿಸಿದರು. ಆಗ ದೃತರಾಷ್ಟ್ರನ ಮಕ್ಕಳು ಶಕುನಿಯಿಂದ ಕೂಡಿಕೊಂಡು ಬಹಳವಾಗಿ ದುಃಖಕ್ಕೊಳಗಾದರು.
[ಇಲ್ಲೊಂದು ವಿಶೇಷತೆ ಇದೆ. ಋಷಿಕೇಶತೀರ್ಥರ ಮೂಲಪಾಠದಲ್ಲಿ ‘ವೈಚಿತ್ರವೀರ್ಯ್ಯಸಹಿತಾಃ’ ಎಂದಿದೆ. ಏಕೆ ಹೀಗೆ ಪ್ರಯೋಗ ಮಾಡಿದರು ? ಇದು ತಪ್ಪಿರಬಹುದೇ? ಅಥವಾ ಇಲ್ಲಿ ವೈಚಿತ್ರವೀರ್ಯ್ಯ ಎಂದರೆ ಚಂಚಲ ಮನಸ್ಸಿನವ ಎಂದು ಪರಿಹಾಸ ಮಾಡುವುದಕ್ಕಾಗಿ ಈ
ರೀತಿ ಪ್ರಯೋಗ ಇರಬಹುದೇ? ಚಿತ್ತ ವೈಚಿತ್ರ್ಯದಿಂದ ಪರೀಗ್ರಹೀತವಾದ ಸ್ವಭಾವವುಳ್ಳವ (ಯಾವಾಗಲೂ ಅದೋ, ಇದೋ ಎನ್ನುವ ಚಂಚಲ ಚಿತ್ತತೆಯಲ್ಲೇ ಇರುವವ) ಎನ್ನುವ ಪ್ರಯೋಗ ಇದಾಗಿರಲೂಬಹುದು].
No comments:
Post a Comment